ರಾಷ್ಟ್ರೀಯತೆ ಮತ್ತು ಚುನಾವಣೆ
– ವರುಣ್ ಕುಮಾರ್
ಭಾರತದಲ್ಲಿ ಚುನಾವಣೆಗಳಿಗೇನೂ ಕಮ್ಮಿಯಿಲ್ಲ. ತಳಮಟ್ಟದ ಪಂಚಾಯತ್ ಗಳಿಂದ ಹಿಡಿದು ಲೋಕಸಭೆವರೆಗೂ ನಮ್ಮ ಚುನಾವಣೆಗಳ ಪಟ್ಟಿ ಇಡುತ್ತಾ ಹೋಗಬಹುದು.ಆಡಳಿತವು ಎಲ್ಲರಿಗೂ ಸಿಗಬೇಕೆನ್ನುವ ದೃಷ್ಟಿಯಲ್ಲಿ ಈ ರೀತಿಯ ವ್ಯವಸ್ಥೆಯು ಸೃಷ್ಟಿ ಮಾಡಿರುವುದು ಪ್ರಜಾಪ್ರಭುತ್ವದ ವೈಶಿಷ್ಟತೆಯೇ ಸರಿ. ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯ ವಿಷಯಗಳು ಅವರ ಬಳಿ ಇಟ್ಟು ಪಕ್ಷಗಳು ಮತಗಳನ್ನು ಯಾಚಿಸುತ್ತವೆ. ಮತದಾರ ಯಾರಿಗೆ ಒಲಿಯುತ್ತಾನೋ ಆ ಪಕ್ಷವು ಆಡಳಿತವನ್ನು ಪಡೆಯುವಲ್ಲಿ ಸಫಲವಾಗುತ್ತದೆ.ಇದರಲ್ಲಿ ಕೆಲ ವಿಷಯಗಳು ಚುನಾವಣೆಗಳ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳು ಇರುವುದು ವಿಶೇಷ. ೮ ತಿಂಗಳಗಳ ಹಿಂದೆಯಷ್ಟೇ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಿಜೆಪಿಯು ಇತ್ತೀಚಿಗೆ ನಡೆದ ವಿವಿಧ ಅಸೆಂಬ್ಲಿ ಚುನಾವಣೆಗಳಲ್ಲಿ ತನ್ನ ಬಲವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಒಂದಿಷ್ಟು ಮೆಲುಕು ಹಾಕೋಣ.
ರಾಷ್ಟ್ರೀಯತೆ ಎಂಬ ಅಂಜೆಡ:
ಇದರಲ್ಲಿ ಎರಡು ಮಾತಿಲ್ಲ. ರಾಷ್ಟ್ರೀಯತೆ ವಿಚಾರದಲ್ಲಿ ಬಿಜೆಪಿ ಬಿಟ್ಟರೆ ಬೇರೆ ಯಾವುದೇ ಪಕ್ಷವು ಇಷ್ಟೊಂದು ಪರಿಣಾಮಕಾರಿಯಾಗಿ ಮತದಾರರನ್ನು ಸೆಳೆಯುವ ಶಕ್ತಿ ಇಲ್ಲ. ಅಲ್ಲದೆ ಭಾರತದ ವಿರುದ್ಧ ಮಾತನಾಡುವ ಶಕ್ತಿಗಳನ್ನು ಹಿಗ್ಗಾಮುಗ್ಗಾವಾಗಿ ತರಾಟೆಗೆ ತೆಗೆದುಕೊಳ್ಳುವ ಬಿಜೆಪಿ ನಾಯಕರನ್ನು ನಾವು ನೋಡುತ್ತೇವೆ. ಅಲ್ಲದೆ ಕೇವಲ ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮನ್ನಣೆಯನ್ನು ನೀಡಿದ ಕಾಂಗ್ರೆಸ್ ಪಕ್ಷದ ಮುಖವಾಡವನ್ನು ಯಾವುದೇ ಮುಲಾಜಿಲ್ಲದೆ ಬಿಜೆಪಿ ನಾಯಕರು ಪ್ರಶ್ನಿಸಿ ತೆರೆಮರೆಗೆ ಸರಿದಿದ್ಧ ಹಲವು ಸ್ವಾತಂತ್ರ್ಯ ವೀರರನ್ನು ತನ್ನ ಅಧಿಕಾರವಧಿಯಲ್ಲಿ ಸ್ಮರಿಸಿದರು. ಪಾಕಿಸ್ತಾನದಿಂದ ಎಡೆಬಿಡದೆ ಕದನ ವಿರಾಮ ಉಲ್ಲಂಘನೆಯಾದಾಗ ಸೈನಿಕರಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಿ ಸರಿಯಾದ ಉತ್ತರವನ್ನು ನೀಡಲು ಬಿಜೆಪಿ ಸಚಿವರು ನೀಡಿದರು. ಪುಲ್ವಾಮ ಹಾಗೂ ಉರಿ ದಾಳಿಗೆ ಪ್ರತಿಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಹೀಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ತ್ವರಿತವಾಗಿ ಕ್ರಮಗಳನ್ನು ಕೈಗೊಂಡರು. ಸೈನಿಕರಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಅವರ ಗೌರವವನ್ನು ಹೆಚ್ಚಿಸುವಂತೆ ನೋಡಿದರ ಪರಿಣಾಮ ಸಹಜವಾಗಿ ಜನತೆಗೆ ಬಿಜೆಪಿಗೆ ರಾಷ್ಟ್ರೀಯತೆ ವಿಚಾರದಲ್ಲಿ ಬಿಜೆಪಿಗೆ ಸರಿಸಾಟಿ ಯಾರೂ ಇಲ್ಲ ಎಂಬ ತೀರ್ಮಾನಕ್ಕೆ ಈಗಾಗಲೇ ಬಂದುಬಿಟ್ಟಿದ್ದಾರೆ.
ಆದರೆ ರಾಷ್ಟ್ರೀಯತೆ ಎಂಬುವುದು ಎಲ್ಲಾ ಕಡೆಗಳಲ್ಲೂ ಉಪಯೋಗವಾಗುವ ವಿಷಯವಲ್ಲ. ಯಾಕೆಂದರೆ ಒಂದು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಮತದಾರನ ಬಳಿ ಮೋದೀಜಿಯವರ ಕೆಲಸ ನೋಡಿ ಮತ ಕೊಡಿ ಅಂದರೆ ಅದು ನಗೆಪಾಟಲಿಗೆ ಎಡೆಮಾಡುವ ಸಾಧ್ಯತೆ ಜಾಸ್ತಿ. ಯಾಕೆಂದರೆ ಪಂಚಾಯತ್ ಚುನಾವಣೆಗಳಲ್ಲಿ ವಿಷಯಗಳಿರುವುದೇ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಡೆಯುವ ಚುನಾವಣೆ. ಉದಾಹರಣೆಗೆ ನೀರಿನ ಸಮಸ್ಯೆ, ವಿದ್ಯುತ್, ಕಂದಾಯ ಇಲಾಖೆಗೆ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾರು ಚುನಾವಣಾ ಪ್ರಚಾರಕ್ಕೆ ಇಳಿಯುತ್ತಾರೋ ಆತನ ಪಕ್ಷಕ್ಕೇ ಗೆಲುವಿನ ಸಾಧ್ಯತೆ ಹೆಚ್ಚು ಎನ್ನುವುದು ವಾದ.
೨೦೧೮ ರ ಕರ್ನಾಟಕದ ಚುನಾವಣೆಗಳನ್ನು ಗಮನವಿಟ್ಟು ನೋಡುವುದಾದರೆ ಬಿಜೆಪಿಯು ಅತ್ಯಂತ ಪರಿಣಾಮಕಾರಿಯಾಗಿ ಸಿದ್ಧರಾಮಯ್ಯ ಸರ್ಕಾರದಲ್ಲಿ ನಡೆದ ಲೋಪಗಳನ್ನು ಎತ್ತಿ ಹಿಡಿದು ಮತದಾರನ ಬಳಿ ಹೋದಾಗ ಮತದಾರನು ಬಿಜೆಪಿಯನ್ನು ಅತ್ಯಂತ ದೊಡ್ಡ ಪಕ್ಷವಾಗಿ ಚುನಾಯಿಸಿತು. ಜೊತೆಗೆ ಸ್ಥಳೀಯ ವಿಚಾರಗಳನ್ನು ಕರ್ನಾಟಕದಲ್ಲಿ ಉತ್ತಮವಾಗಿ ಅರ್ಥೈಸಿಕೊಂಡು ಕಾರ್ಯಕರ್ತರು ಮತದಾರನ ಬಳಿ ಹೋದರು. ಕರಾವಳಿ ಕರ್ನಾಟಕದಲ್ಲಿ ಕಾರ್ಯಕರ್ತರ ಕೊಲೆಗಳನ್ನು ಚುನಾವಣಾ ವಿಚಾರವಾಗಿ ಕೈಗೆತ್ತಿಕೊಂಡರೆ ಬೆಳಗಾವಿ ಭಾಗದಲ್ಲಿ ಮಹದಾಯಿ ವಿಚಾರ ಹೀಗೆ ಸ್ಥಳೀಯ ವಿಚಾರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಆದರೆ ಇದನ್ನು ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿಯಾಗಿ ಕಾರ್ಯಕರ್ತರನ್ನು ಬಳಸಲು ಬಿಜೆಪಿಗೆ ಆಗದೆ ಇರುವುದು ಸೋಜಿಗದ ಸಂಗತಿ. ಪರಿಣಾಮವಾಗಿ ಮಹಾರಾಷ್ಟ್ರ, ಛತ್ತೀಸ್ ಗಢ ಹೀಗೆ ಹಲವು ರಾಜ್ಯಗಳಲ್ಲಿ ಬಿಜೆಪಿಯು ಅಧಿಕಾರ ಕಳೆದುಕೊಳ್ಳುತ್ತಾ ಹೋಯಿತು.
ದೆಹಲಿಯಲ್ಲಿ ನಡೆದ ಚುನಾವಣೆಯನ್ನು ಗಮನಿಸೋಣ. ಬಿಜೆಪಿಯು ಇದನ್ನು ಆಮ್ ಆದ್ಮಿ ಪಕ್ಷವು ಜನತೆಗೆ ಉಚಿತ ವಾಗ್ದಾನವನ್ನು ನೀಡಿದ ಪರಿಣಾಮ ಅವರಿಗೆ ಅಭೂತಪೂರ್ವ ಗೆಲುವು ಸಿಕ್ಕಿತು ಎಂದು ಆರೋಪಿಸುತ್ತಾರೆ. ಇಂತಹ ಆರೋಪಗಳು ಯಾವುದೇ ಪಕ್ಷಕ್ಕೆ ಕ್ಷೋಭೆ ತರುವುದಿಲ್ಲ. ಹಾಗೇ ಹೇಳುವುದಾದರೆ ಬಿಜೆಪಿಯು ಅದೆಷ್ಟೋ ಚುನಾವಣೆಗಳಲ್ಲಿ ಉಚಿತ ವಾಗ್ದಾನಗಳನ್ನು ಮಾಡುವುದು ನಮ್ಮ ಕಣ್ಣ ಮುಂದೆಯೇ ಇದೆ. ರೈತರ ಸಾಲಮನ್ನಾ, ಸೊನ್ನೆ ಶೇಕಡಾ ಬಡ್ಡಿದರದಲ್ಲಿ ಕೃಷಿಕರಿಗೆ ಸಾಲ ಹೀಗೆ ಆಕರ್ಷಣೀಯ ಭರವಸೆಗಳನ್ನು ಜನರಿಗೆ ನೀಡುತ್ತಾ ಬಂದಿದೆ. ಹೀಗಾಗಿ ಇಂತಹ ಆರೋಪಗಳನ್ನು ಮಾಡುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ. ಅಲ್ಲದೆ ಬಿಜೆಪಿ ದೆಹಲಿಯಲ್ಲಿ ಮಾಡಿರುವ ಅತಿ ದೊಡ್ಡ ಪ್ರಮಾದವೆಂದರೆ ಮತ್ತೊಮ್ಮೆ ರಾಷ್ಟ್ರೀಯತೆ ವಿಚಾರವನ್ನು ಮುಂದಿಟ್ಟು ಜನರ ಮುಂದೆ ತೆರಳಿದರು. ಪರಿಣಾಮ ಉತ್ತಮ ಆಡಳಿತ ನೀಡಿದ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತಂದಿತ್ತರು. ಮತದಾನೋತ್ತರ ಸಮೀಕ್ಷೆಯ ವಿಶ್ಲೇಷಣೆಯಲ್ಲಿ ಜೀ ನ್ಯೂಸ್ ನ ಸುಧೀರ್ ಚೌಧರಿಯವರು ರಾಷ್ಟ್ರೀಯತೆಯ ಪಾಠವನ್ನು ದೆಹಲಿಯ ಜನತೆಗೆ ಕೊಡಲು ಶುರಮಾಡಿ ದೆಹಲಿ ಜನತೆಗೆ ರಾಷ್ಟ್ರದ ಬಗ್ಗೆ ಚಿಂತೆಯೇ ಇಲ್ಲವೆಂದು ಜರೆದರು. ಈ ರೀತಿ ಮತದಾರರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಅಲ್ಲದೆ ದೆಹಲಿಯ ಜನತೆ ರಾಷ್ಟ್ರೀಯತೆ ವಿಚಾರವಾಗಿಯೇ ಏಳಕ್ಕೇ ಏಳು ಲೋಕಸಭಾ ಸೀಟುಗಳನ್ನು ಬಿಜೆಪಿಗೆ ಕೊಟ್ಟಿರುವುದು ಜನತೆಯ ಪಕ್ವತೆಗೆ ಸಾಕ್ಷಿ.
ಹೀಗಾಗಿ ಬಿಜೆಪಿಯು ಸೋಲಿನ ಆಘಾತದಿಂದ ಹೊರಬಂದು ಉತ್ತಮ ರೀತಿಯಲ್ಲಿ ಪಕ್ಷವನ್ನು ಕಟ್ಟಿ ಲೋಪಗಳನ್ನು ಸರಿಪಡಿಸಲು ಮುಂದಾಗಬೇಕು. ಯಾಕೆಂದರೆ ಮುಂದೆ ಪಶ್ಚಿಮಬಂಗಾಳ, ಕೇರಳದಲ್ಲಿ ಪಕ್ಷವನ್ನು ಸಂಘಟಿಸುವ ಕಾಲ ಸನ್ನಿಹಿತವಾಗಿದೆ.
ಕೊನೆ ಮಾತು: ಮೋದೀಜಿಯವರು ಲೋಕಸಭೆಯಲ್ಲಿ ಹೇಳಿದ ಮಾತು. ೨೦೨೪ ರಲ್ಲಿ ನನ್ನ ಹೆಸರಿನಲ್ಲಿ ಚುನಾವಣೆ ಗೆಲ್ಲದೆ ತಮ್ಮದೇ ವರ್ಚಸ್ಸಿನಲ್ಲಿ ಗೆಲ್ಲಿ ಎಂದು ತಾಕೀತು ಮಾಡಿರುವುದು ಬಿಜೆಪಿ ನಾಯಕರಿಗೆ ಮರೆತು ಹೋಗಿದೆ ಏನೋ.