ಬಿಚ್ಚಿಟ್ಟ ದಲಿತ ಚರಿತ್ರೆ
– ಶಿವರಾಮ್ ಕಾನ್ಸೇನ್
ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪುಲೆ ಮುಂತಾದವರ ಸಾಲಿನಲ್ಲಿ ಸದಾ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ಸುಧಾರಣಾವಾದಿಯ ಹೆಸರು “ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್”. ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತ್ಯಂತರದಲ್ಲಿ ಮಹಾನ್ ವ್ಯಕ್ತಿಗಳ ಹೆಸರುಗಳು ಅನುಕೂಲಸಿಂಧು ಅನುಯಾಯಿ-ಅಭಿಮಾನಿಗಳಿಂದಾಗಿ ಹಾಗೂ ಮತರಾಜಕಾರಣದಿಂದಾಗಿ ಸದ್ಬಳಕೆಯಾದ್ದಕ್ಕಿಂತಲೂ ದುರ್ಬಳಕೆಯಾದದ್ದೇ ಹೆಚ್ಚು.!
ಬಹುಶಃ ಜೋಗೇಂದ್ರನಾಥ್ ಮಂಡಲ್ ಹೆಸರನ್ನು ಉಲ್ಲೇಖಿಸಿದರೆ ಅಥವಾ ಸ್ಮರಿಸಿದರೆ ಯಾವುದೇ ಸವಲತ್ತು-ಪದವಿ-ಪುರಸ್ಕಾರ-ಪ್ರಶಸ್ತಿಯೂ ಸಿಗದೆಂಬ ಖಾತರಿಯಿಂದಾಗಿ ಇವರನ್ನು ಇತಿಹಾಸಕಾರರು ಮರೆಮಾಚಿರಬಹುದು ! ಯಾರು ಮರೆತರೇನು? ನಿಲುಮೆಯ ರಾಕೇಶ್ ಶೆಟ್ಟಿಯವರು ಇತಿಹಾಸದ ಗರ್ಭದಿಂದ ಜೋಗೇಂದ್ರನಾಥ್ ಎಂಬ ಮಹಾಶಕ್ತಿಮಂಡಲವನ್ನು ಹೊರತೆಗೆದು ಪ್ರಾಣ ತುಂಬಿದ್ದಾರೆ. “ಮುಚ್ಚಿಟ್ಟ ದಲಿತ ಚರಿತ್ರೆಯನ್ನು ಬಿಚ್ಚಿಟ್ಟ” ಗೆಳೆಯ ರಾಕೇಶ್ ಶೆಟ್ಟಿಯವರಿಗೆ ಹಾಗೂ ನಿಲುಮೆ ಬಳಗಕ್ಕೆ ಅಭಿನಂದನೆಗಳು.
ಅಂಬೇಡ್ಕರ್ ರವರು ಜೋಗೇಂದ್ರನಾಥ್ ಮಂಡಲ್ ರಿಗೆ “ಭಾರತದ ದಲಿತರ ರಕ್ಷಣೆಗಾಗಿ ನಾನು ಇಲ್ಲಿ ಇದ್ದೇನೆ. ಪಾಕಿಸ್ತಾನದ ದಲಿತರ ರಕ್ಷಣೆಗಾಗಿ ನೀನು ಅಲ್ಲಿರುವುದು ಒಳ್ಳೆಯದು” ಎಂದಿದ್ದರಂತೆ. ವಿಪರ್ಯಾಸವೆಂದರೆ, ದಲಿತ-ಮುಸ್ಲಿಂ ಐಕ್ಯತೆ ಎಂಬ ಭ್ರಮೆಯಲ್ಲಿದ್ದ ಜೋಗೇಂದ್ರನಾಥರಿಗೆ ಹಿಂದೂಗಳ ವಿರುದ್ಧ ತಮ್ಮನ್ನು ದಾಳವಾಗಿ ಮುಸ್ಲಿಂ ಲೀಗ್ ಬಳಸಿಕೊಳ್ಳುತ್ತಿದೆ ಎಂಬುದು ಅರಿವಾಗುವಷ್ಟರಲ್ಲಿ ಇಸ್ಲಾಮಿಕ್ ರಾಷ್ಟ್ರ ಸೃಷ್ಟಿಯಾಗಿತ್ತು ! ಇಂದು ಪಾಕಿಸ್ತಾನ-ಬಾಂಗ್ಲಾಗಳಲ್ಲಿ ದಲಿತರ ಸ್ಥಿತಿ ಹೇಗಿದೆ, ದಲಿತರ ಜನಸಂಖ್ಯೆ ಎಷ್ಟಿದೆ ಎಂಬುದು ನಿಗೂಢವೇ !
ಅನುಭಾವಿಗಳ ಮಾತಿನಲ್ಲಿ ಹೇಳುವುದಾದರೆ ಪ್ರತಿಯೊಂದು ಸಮುದಾಯದ ಹಿನ್ನಡೆಗೂ ಅದೇ ಸಮುದಾಯದ ಕೆಲವರು ಕಾರಣರಾಗಿರುತ್ತಾರೆ. ನಿಜವಾದ ದಲಿತ ಚರಿತ್ರೆಯನ್ನು ಬಿಚ್ಚಿಟ್ಟಿದ್ದಕ್ಕಿಂತಲೂ ಇದುವರೆಗೂ ಮುಚ್ಚಿಟ್ಟಿದ್ದೇ ಹೆಚ್ಚು ಎಂಬುದನ್ನು ಈ ಪುಸ್ತಕ ಅಂಕಿ-ಅಂಶ-ದಾಖಲೆಸಹಿತ ಸಾಬೀತುಪಡಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಕೃತಿ ಕೇವಲ ದಲಿತರ ಬಗ್ಗೆ ಮಾತ್ರವೇ ಹೇಳುವುದಿಲ್ಲ. ದಲಿತ ನಾಯಕರು ಸೇರಿದಂತೆ ಪ್ರತಿ ಭಾರತೀಯನೂ ಸತ್ಯಾನ್ವೇಷಿಯಾಗಿ ಗ್ರಹಿಸಬೇಕಾದ ಕೃತಿ ಇದು.
ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ಸ್ಥಾಪನೆಯಿಂದ ಮೊದಲ್ಗೊಂಡು ಇಂದಿನವರೆಗೂ ದಲಿತರನ್ನು ಚದುರಂಗದಾಟದ “ಕಾಯಿ”ಗಳಂತೆ ಬಳಸಿಕೊಂಡ ಚಿತ್ರಣ ಬಿಚ್ಚಿಕೊಂಡಂತೆಯೇ, ಭಾರತದಲ್ಲಿ ರಾಜಕಾರಣಿಗಳು ಬಾಯಿಮಾತಿನಲ್ಲೇ ದಲಿತೋದ್ಧಾರ ಮಾಡಿದ ಕರಾಳ ಚರಿತ್ರೆಯನ್ನೂ ಇಲ್ಲಿ ಬಿಚ್ಚಿಡಲಾಗಿದೆ ! ಅದೇ ಕಾರಣಕ್ಕಾಗಿ ಈ ಪುಸ್ತಕಕ್ಕೆ ಮುನ್ನುಡಿಸಬೇಕಾದವರು “ನಾನು ಮುನ್ನುಡಿ ಬರೆಯಲು ಈಗ ಸಮಯ ಸರಿಯಿಲ್ಲ” ಅಂತಾ ನುಣುಚಿಕೊಂಡಿರಬಹುದು !
“ಮುಚ್ಚಿಟ್ಟ ದಲಿತ ಚರಿತ್ರೆ”ಗೆ ಮುನ್ನುಡಿ ಬರೆಯುವವರು ಕಾಯಾ-ವಾಚಾ-ಮನಸಾ ಸ್ಫಟಿಕಶುಭ್ರದಂತೆ ಪರಿಶುದ್ಧರಾಗಿರಬೇಕು. ಕಟುಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಧೈರ್ಯವಿರಬೇಕು. ಜಾಣ ಕುರುಡುತನ, ಜಾಣ ಕಿವುಡುತನ, ಜಾಣ ಮರೆಗುಳಿತನ, ಜಾಣ ಮೌನದ ಅವಕಾಶವಾದಿಗಳು ಇಂತಹ ಪುಸ್ತಕಕ್ಕೆ ಮುನ್ನುಡಿ ಬರೆಯಲು ಸಾಧ್ಯವಿಲ್ಲ. ಬಹುಶಃ ಅಂತಹ ಧೈರ್ಯದ ಕೊರತೆಯಿಂದಾಗಿಯೇ ಮುನ್ನುಡಿಸಬೇಕಾದವರು ಹಿಂದೇಟು ಹಾಕಿರಬಹುದು. ದೇಶದಾದ್ಯಂತ ದಲಿತರ ಮೇಲಿನ ದೌರ್ಜನ್ಯದ ಹಿಂದಿರುವ ನಿಜವಾದ “ಕೈ”ಗಳ ಅಂಕಿ-ಅಂಶ ಕೆದಕಿದರೆ ಸತ್ಯ ಗೋಚರವಾಗುತ್ತದೆ. ಈ ಕೃತಿಯನ್ನು ಮನನ ಮಾಡಿಕೊಂಡಲ್ಲಿ, ದಲಿತ ನಾಯಕರೂ ಸೇರಿದಂತೆ ಪ್ರತಿ ಪ್ರಜೆಯೂ ಸತ್ಯವನ್ನು ಬಹಿರಂಗವಾಗಿಯೂ ಒಪ್ಪಿಕೊಳ್ಳಬಹುದು.
ಭಾರತ ಮತ್ತು ಪಾಕಿಸ್ತಾನಗಳ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬೇಡ್ಕರ್ ಹಾಗೂ ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್ ರವರುಗಳು ಹಕ್ಕುಗಳನ್ನು ಮಾತ್ರ ಹೇಳಿಲ್ಲ, ಜೊತೆಜೊತೆಗೆ ಕರ್ತವ್ಯವನ್ನೂ ಹೇಳಿದ್ದಾರೆ ಎಂಬುದು ಪ್ರತಿಪ್ರಜೆಗೂ ಅರ್ಥವಾಗಬೇಕಾದರೆ ಈ ಕೃತಿಯನ್ನು ಓದಬೇಕು. ಈ ಕೃತಿಯಿಂದಲಾದರೂ ಅಂಬೇಡ್ಕರ್ ಮತ್ತು ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್ ರ ಹೆಸರುಗಳು ಸ್ವಾವಲಂಬನೆಗೆ, ಸ್ವಾಭಿಮಾನಕ್ಕೆ, ಸತ್ಯಾನ್ವೇಷಣೆಗೆ ಮತ್ತು ಆತ್ಮಸಾಕ್ಷಾತ್ಕಾರಕ್ಕೆ ಮಾದರಿಯಾಗಲಿ. ಹೆಚ್ಚು ಹೆಚ್ಚು ಜನರನ್ನು ತಲುಪಲಿ.
(ಈ ಕೃತಿಯನ್ನು on demand ಉಡುಗೊರೆಯಾಗಿ ಕೊಟ್ಟ ಪ್ರಶಾಂತ್ ಭಟ್ ರಿಗೆ ಧನ್ಯವಾದಗಳು)
ದಿನಾಂಕ: 2.10.2020(ಶಾಸ್ತ್ರಿ-ಗಾಂಧಿ ಜಯಂತಿ)