ಈಗ ರೈತನಿಗೂ ಅನಿಸುತ್ತಿದೆ, ಇದು ೨೦೨೦ರ ಭಾರತ ಎಂದು
– ಅಜಿತ್ ಶೆಟ್ಟಿ ಹೆರಂಜೆ
ಪ್ರಧಾನಿ ಮೋದಿಯವರು ೨೦೨೨ರ ಹೊತ್ತಿಗೆ ದೇಶದ ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಮಾತನಾಡಿದ್ದರು. ಇದೇ ನಿಟ್ಟಿನಲ್ಲಿ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದ ದೇಶದ ಬಡವರ ಮತ್ತು ಕೃಷಿಕರ ಶ್ರೇಯೋಭಿವೃದ್ಧಿಯತ್ತ ಕೆಲಸಮಾಡಿದೆ. ಆ ಕಾರಣಕ್ಕೆ ಮೋದಿಯವರು ಜಾರಿಗೆ ತಂದ ಯೋಜನೆಗಳಾದ ಯೂರಿಯಾಕ್ಕೆ ಬೇವಿನ ಲೇಪನ ಮಾಡಿದ್ದು, ಜನ್‌ಧನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ಸಿಂಚಾಯಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಯೋಜನೆ, ಫಸಲ್ ಭೀಮಾ ಯೋಜನೆ, ಸೋಯ್ಲ್ ಹೆಲ್ತ್ ಕಾರ್ಡ್ ಯೋಜನೆ, ಪಾರಂಪರಿಕ ಕೃಷಿ ಯೋಜನೆ ಅಥವಾ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆ ೨೦೨೦ ಇವೆಲ್ಲವೂ ಮೋದಿಯವರು ರೈತರಿಗೆ ಕೊಟ್ಟ ಮಾತಿಗೆ ಪೂರಕವಾಗಿ ಬಂದ ಯೋಜನೆಗಳು. ಚೀನಿಯರು ಭಾರತದ ಗಡಿಯಲ್ಲಿ ನಿಂತು ನಾವು ನಿಮ್ಮನ್ನು ೬೨ರಂತೆ ಹೊಸಕಿ ಹಾಕುತ್ತೇವೆ ಅಂದಾಗ ಅದಕ್ಕೆ ಅಂದಿನ ರಕ್ಷಣಾ ಮಂತ್ರಿಗಳಾದ ದಿವಂಗತ ಅರುಣ್ ಜೇಟ್ಲಿಯವರು ಮಾರ್ಮಿಕವಾಗಿ ಇದು ೬೨ರ ಭಾರತ ಅಲ್ಲ, ೨೦೨೦ರ ಭಾರತ ಅಂದಿದ್ದರು. ಅವರು ಹೇಳಿದ್ದು ದೇಶದ ಸೈನ್ಯ ಶಕ್ತಿಯ ಮಟ್ಟಿಗೆ ಸರಿಯಾಗೆ ಇತ್ತು. ಆದರೆ ಅಂದು ದೇಶದ ರೈತನಿಗೆ ಬಹುಶಃ ಇದು ೨೦೨೦ರ ಭಾರತ ಅನ್ನಿಸಿರಲಿಕ್ಕಿಲ್ಲ. ಕಾರಣ ಅವನು ಮೋದಿಯವರು ಕೃಷಿ ಸುಧಾರಣಾ ಕಾನೂನು ೨೦೨೦ ತರುವ ತನಕ ಬ್ರಿಟೀಷರ ಕಾಲೋನಿಯಲ್ ಕಾನೂನುಗಳ ಸಂತ್ರಸ್ತನಾಗಿಯೆ ಇದ್ದ. ರೈತ ತನಗೆ ಇಷ್ಟ ಬಂದ ಬೆಳೆಯನ್ನೇನೋ ಬೆಳೆಯುತ್ತಿದ್ದ. ಆದರೆ ಆತ ಅದನ್ನು ತನಗೆ ಇಷ್ಟ ಬಂದ ಜಾಗದಲ್ಲಿ ಇಷ್ಟ ಬಂದ ಬೆಲೆಗೆ, ತನಗೆ ಇಷ್ಟ ಬಂದ ವ್ಯಕ್ತಿಗೆ ಮಾರುವ ಅವಕಾಶದಿಂದ ವಂಚಿತನಾಗಿದ್ದ. ಇವನನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಿದ್ದು ಕೃಷಿ ಮಸೂದೆ-೨೦೨೦.
ಕೃಷಿ ಮಸೂದೆ ೨೦೨೦ ಒಟ್ಟು ಮೂರು ಮಸೂದೆಗಳ ಗುಚ್ಛ. ಮೊದಲನೆಯದ್ದು ಎ.ಪಿ.ಎಮ್.ಸಿಯ ಕಾನೂನಿಗೆ ತಿದ್ದುಪಡಿ, ಎರಡನೆಯದ್ದು ೧೯೫೫ ಕೃಷಿ ಮತ್ತು ಅಹಾರ ವಸ್ತುಗಳ ಶೇಖರಣಾ ಕಾಯ್ದೆಗೆ ತಿದ್ದುಪಡಿ. ಮೂರನೆಯದ್ದು ರೈತರು ಮತ್ತು ಕೃಷಿ ಆಧಾರಿತ ಕಾರ್ಖಾನೆಗಳನ್ನು ಒಟ್ಟಿಗೆ ಜೋಡಿಸುವ ಮಸೂದೆ (ಕಾಂಟ್ರಾಕ್ಟ್ ಫಾರ್ಮಿಂಗ್). ಈ ಮೂರು ಕಾನೂನುಗಳು ಒಟ್ಟಗೆ ಸೇರಿ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದೇಶದ ರೈತನ ಆದಾಯವನ್ನು ಈಗಿನದ್ದಕಿಂತ ದ್ವಿಗುಣಗೊಳಿಸಲಿವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ದೇಶದಲ್ಲಿ ಕೃಷಿ ಕ್ಷೇತ್ರವೊಂದನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಿಗೆ ಮುಕ್ತ ಮಾರುಕಟ್ಟೆಯ ನೀತಿಗಳು ೧೯೯೧ರಿಂದಲೇ ಜಾರಿಗೆ ಬಂದವು. ಇವುಗಳ ಕಾರಣದಿಂದ ದೇಶದಲ್ಲಿ ಔದ್ಯೋಗಿಕ ಕ್ರಾಂತಿಯಾಯಿತು. ಆದರೆ ದೇಶದ ಆರ್ಥಿಕ ಪ್ರಗತಿಗೆ ಶೇ.೧೫ ರಿಂದ ಶೇ.೧೭ರಷ್ಟು ಕಾಣಿಕೆ ಕೊಡುವ ಕೃಷಿ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವ ಸುಧಾರಣೆಗಳೇನೂ ಆಗಲಿಲ್ಲ. ೨೦೨೦ರವರೆಗೆ ನಮ್ಮಲ್ಲಿ ಇದ್ದ ಬಹುತೇಕ ಕಾನೂನುಗಳು ಸ್ವಾತಂತ್ರಪೂರ್ವದ ಕಾಲೋನಿಯಲ್ ಮಾನಸಿಕತೆಯ ಕಾನೂನುಗಳೇ. ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ರೈತನ ಬೆನ್ನೆಲುಬು ಮುರಿದ ಕಾಯೆಗಳಿವು. ಎ.ಪಿ.ಎಮ್.ಸಿ ಈ ದೇಶದಲ್ಲಿ ಮೊದಲಿಗೆ ಜಾರಿಗೆ ಬಂದಿದ್ದು ೧೮೮೬ರಲ್ಲಿ, ಬ್ರಿಟನ್ನಿನ ಮ್ಯಾಂಚಸ್ಟರಿನಲ್ಲಿ ಇದ್ದ ಮಗ್ಗದ ಕಾರ್ಖಾನೆಗಳಿಗೆ ಅಗ್ಗದ ದರದಲ್ಲಿ ಉತ್ಕೃಷ್ಟ ಮಟ್ಟದ ಹತ್ತಿ ಬೇಕಿತ್ತು. ಇವು ಭಾರತದಲ್ಲಿ ಸಿಗುತ್ತಿದ್ದವಾದರೂ ಇವುಗಳಿಗೆ ಅಧಿಕ ಬೆಲೆ ಕೊಡಬೇಕಿತ್ತು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆ ಇದ್ದ ಕಾರಣ ಎಲ್ಲಾ ಹತ್ತಿಗಳು ಇವರಿಗೆ ಸಿಗುತ್ತಿರಲಿಲ್ಲ. ಆ ಕಾರಣಕ್ಕೆ ಬ್ರಿಟೀಷ್ ಸರ್ಕಾರ ಮೊದಲ ಬಾರಿಗೆ ಈ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತರುತ್ತದೆ ಮತ್ತು ದೇಶದ ಹತ್ತಿ ಬೆಳೆ ಮಾರುಕಟ್ಟೆಯ ಮೇಲೆ ಸಂಪೂರ್ಣವಾಗಿ ಸರ್ಕಾರಿ ನಿಯಂತ್ರಣವನ್ನು ಸಾಧಿಸುತ್ತದೆ. ೧೯೨೮ರ ಹೊತ್ತಿಗೆ ಕೇವಲ ಹತ್ತಿಗೆ ಸೀಮಿತವಾಗಿದ್ದ ಈ ಎ.ಪಿ.ಎಮ್.ಸಿ ವ್ಯವಸ್ಥೆಯನ್ನು ಬ್ರಿಟೀಷರು ಉಳಿದ ಕೃಷಿ ಉತ್ಪನ್ನಗಳ ಮೇಲೂ ಹೇರಿದರು. ಇದರ ಮುಖ್ಯ ಉದ್ದೇಶ ಮಾರುಕಟ್ಟೆಯ ದರ ಸರ್ಕಾರಿ ನಿಯಂತ್ರಣದಲ್ಲಿ ಇಡುವುದು. ಜೊತೆಗೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಕೊಡಿಸುವುದು. ಬ್ರಿಟೀಷ್ ಸರ್ಕಾರದ ಈ ಕಾನೂನಿನಿಂದ ಬಡ ರೈತ ಇನ್ನಷ್ಟು ಬಡವನಾದ. ಈ ಮಧ್ಯೆ ಮೊದಲನೇ ಮಹಾಯುದ್ಧದ ಮತ್ತು ಭಾರತದಲ್ಲಿ ಇದ್ದ ಭೀಕರ ಕ್ಷಾಮದ ಕಾರಣ ಬ್ರಿಟೀಷ್ ಸೇನೆಗೆ ಆಹಾರದ ಅಭಾವ ಸೃಷ್ಟಿಯಾದಾಗ ಬ್ರಿಟೀಷ್ ಸರ್ಕಾರ ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್ ೧೯೧೫ ಅನ್ನು ಜಾರಿಗೆ ತಂದಿತು. ಈ ಕಾನೂನಿನ ಮುಖಾಂತರ ಸರ್ಕಾರ ಬಿಟ್ಟು ಇನ್ಯಾರಿಗೂ ದೇಶದಲ್ಲಿ ಅಹಾರ ಧಾನ್ಯಗಳನ್ನ ಶೇಖರಣೆ ಮತ್ತು ಸಂಸ್ಕರಣೆ ಮಾಡುವ ಅಧಿಕಾರ ಇರಲಿಲ್ಲ. ಬ್ರಿಟೀಷರು ದೇಶ ಬಿಟ್ಟು ತೊಲಗಿದರೂ ಈ ಎರಡೂ ಕಾಯೆಗಳು ತಮ್ಮ ಹೆಸರು ಬದಲಾಯಿಸಿಕೊಂಡು ಬಹುತೇಕ ತಮ್ಮ ಮೂಲ ಸ್ವರೂಪದಲ್ಲೆ ಉಳಿದುಕೊಂಡವು. ಬ್ರಿಟೀಷರ ಹಿಡಿತ ಹೋದಮೇಲೆ ಅದೇ ಮಾನಸಿಕತೆಯ ದಲ್ಲಾಳಿಗಳ ಕೈಯಲ್ಲಿ ಸಿಕ್ಕಿ ರೈತ ನಲುಗಿಹೋದ. ಅವನು ಕೇಳಿದ ದರಕ್ಕೆ ಬೆಳೆಯನ್ನು ಮಾರಬೇಕು, ಬೇರೆ ಕಡೆ ಮಾರುವಂತಿಲ್ಲ. ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದರೂ ದೇಶದಲ್ಲಿ ರೈತ ಬೆಳೆದ ಬೆಳೆಯನ್ನು ಪೂರ್ಣವಾಗಿ ಕೊಂಡು ಅದನ್ನೂ ಶೇಖರಣೆ ಮಾಡಲು ಮೂಲಭೂತ ಸೌಕರ್ಯಗಳಿಲ್ಲ. ಸರ್ಕಾರಕ್ಕೆ ಆಗದ ಕಾರಣ, ಅದೇ ಅಹಾರ ಸಾಮಗ್ರಿಗಳನ್ನು ಖಾಸಗೀ ವ್ಯಕ್ತಿಗಳು ಅಥವಾ ಸಂಸ್ಥೆಗಳು ಕೂಡ ದಾಸ್ತಾನು ಮಾಡುವಂತೆ ಇರಲಿಲ್ಲ. ಕಾರಣ ೧೯೫೫ ಅಗತ್ಯ ವಸ್ತುಗಳ ಕಾಯ್ದೆ ಅದಕ್ಕೆ ಅವಕಾಶ ಕೊಡುವುದಿಲ್ಲ. ಈ ಕಾರಣಕ್ಕಾಗಿಯೆ ರೈತರು, ತಮ್ಮ ಬೆಳೆಗೆ ಉತ್ತಮ ಬೆಲೆಯೂ ಸಿಗದೆ, ಶೇಖರಣೆಯೂ ಮಾಡಲಾಗದೆ ಅದನ್ನು ಬೀದಿಯಲ್ಲಿ ಬಿಸಾಕಿ ತಾವು ಕೃಷಿಗೆ ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಎ.ಪಿ.ಎಮ್.ಸಿ ಕಾನೂನಿನ ಸೆಕ್ಷನ್ ೮/೨ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಎ.ಪಿ.ಎಮ್.ಸಿ ಮಾರುಕಟ್ಟೆ ವ್ಯಾಪ್ತಿಯಲ್ಲೇ ನಡೆಸಬೇಕು ಎನ್ನುತ್ತದೆ. ಒಂದು ವೇಳೆ ರೈತ ಎ.ಪಿ.ಎಮ್.ಸಿ ವ್ಯಾಪ್ತಿಯಿಂದ ಹೊರಗಡೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಸೆಕ್ಷನ್ ೧೧೭ರ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಇದರ ಅನ್ವಯ ರೈತರಿಗೆ ೫೦೦೦ ರುಪಾಯಿಯಷ್ಟು ದಂಡದ ಜೊತೆಗೆ ಜೈಲು ಶಿಕ್ಷೆಗೂ ಆಸ್ಪದ ಇದೆ. ಈಗ ಹೇಳಿ, ಸ್ವತಂತ್ರ ಭಾರತದ ರೈತ ನಿಜವಾಗಿಯೂ ಸ್ವತಂತ್ರನಾಗಿದ್ದನೇ ?
ಎ.ಪಿ.ಎಂ.ಸಿ ಸುಧಾರಣಾ ಕಾಯ್ದೆ ೨೦೨೦.
ಇದು ರೈತರಿಗೆ ತಾನು ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರೂ ಮತ್ತು ದೇಶದಲ್ಲಿ ಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯ ಕೊಡುತ್ತದೆ. ಕಾಯ್ದೆಯ ಬಗ್ಗೆ ಕಾಂಗ್ರೆಸ್ ಮತ್ತು ಮಧ್ಯವರ್ತಿಗಳು ಹೊರಿಸಿರುವ ಅಪವಾದ ಏನಂದರೆ, ಸರ್ಕಾರ ಈಗಿನ ಎ.ಪಿ.ಎಂ.ಸಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮುಚ್ಚಲು ಹೊರಟಿದೆ ಎಂದು. ಇದು ನೂರಕ್ಕೆ ನೂರು ಸುಳ್ಳು. ಈ ಕಾಯ್ದೆಯ ಮುಖಾಂತರ ಸರ್ಕಾರ ರೈತರಿಗೆ ಎ.ಪಿ.ಎಂ.ಸಿ ಯ ಹೊರತಾದ ಒಂದು ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ. ಈ ಮೂಲಕ ಮಧ್ಯವರ್ತಿಗಳು ನಿಯಂತ್ರಣದಲ್ಲಿ ಇಟ್ಟಿದ್ದ ದರ ನಿಯಂತ್ರಣ ವ್ಯವಸ್ಥೆ ಅವರ ಕೈ ತಪ್ಪಲಿದೆ. ಜೊತೆಗೆ ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳು ಇನ್ನು ಮುಂದೆ ನೇರವಾಗಿ ರೈತನಿಂದ ಅಹಾರ ಸಾಮಗ್ರಿಗಳನ್ನು ಖರೀದಿ ಮಾಡಬಹುದು. ಮಾರುಕಟ್ಟೆಯಲ್ಲಿ ಖರೀದಿದಾರರು ಹೆಚ್ಚಾದಷ್ಟೂ ಸ್ಪರ್ಧೆ ಹೆಚ್ಚಲಿದೆ. ಈ ಮೂಲಕ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಹೌದು, ಈಗ ಎ.ಪಿ.ಎಂ.ಸಿ ಗಳು ತಾವು ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಯಬೇಕು ಅಂತಾದರೆ ಮಧ್ಯವರ್ತಿಗಳು ಖಾಸಗಿ ಖರೀದಿದಾರರೊಂದಿಗೆ ರೈತರ ಸಮ್ಮುಖದಲ್ಲಿ ದರಸಮರದಲ್ಲಿ ಪಾಲ್ಗೊಳ್ಳಲೇಬೇಕು. ತಾನು ಇದ್ದಲ್ಲಿಗೆ ರೈತ ಜಿಹುಜೂರಿ ಹಾಕಿಕೊಂಡು ತನ್ನ ಬೆಳೆಗಳನ್ನು ಮಾರಲು ಇನ್ನು ಮುಂದೆ ಬರುವುದಿಲ್ಲ ಎಂಬ ಸತ್ಯ ಅವರು ಅರಗಿಸಿಕೊಳ್ಳಬೇಕು. ಆಗ ಭಾರತದ ರೈತ ತಾನು ಯಾರಿಗೆ ತನ್ನ ಉತ್ಪನ್ನಗಳನ್ನು ಮಾರಬೇಕು ಎಂಬುದನ್ನು ನಿರ್ಧಾರ ಮಾಡುತ್ತಾನೆ. ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯಿಂದ ಸಮಸ್ಯೆ ಆಗುತ್ತಿರುವುದು ದಲ್ಲಾಳಿಗಳಿಗೆ.
ಅತ್ಯಾವಶ್ಯಕ ಅಗತ್ಯವಸ್ತು ಕಾಯ್ದೆ ತಿದ್ದುಪಡಿ
ಬ್ರಿಟೀಷರ ೧೯೧೫ರ ಡಿಫೆನ್ಸ್ ಇಂಡಿಯಾ ಆಕ್ಟ್‌ನ ಪಳೆಯುಳಿಕೆಯಾಗಿದ್ದ ಈ ಕಾಯ್ದೆಯನ್ನು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ದೇಶದಲ್ಲಿ ಅಹಾರ ವಸ್ತುಗಳ ಅಭಾವ ಇದ್ದ ಕಾರಣ ಜೀವಂತ ಇಡಲಾಗಿತ್ತು. ರೈತ ಬೆಳೆದ ಅಷ್ಟೂ ಬೆಳೆಯನ್ನು ಸರ್ಕಾರ ಕೊಂಡು ದಾಸ್ತಾನು ಮಾಡುತ್ತಿತ್ತು. ಕ್ರಮೇಣ ದೇಶದಲ್ಲಿ ಪರಿಸ್ಥಿತಿ ಸುಧಾರಿಸಿತು. ರೈತರು ಬೆಳೆದುದ್ದನ್ನು ಸಂಪೂರ್ಣವಾಗಿ ಖರೀದಿಸಿ ಅದನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಸರ್ಕಾರ ಕಳೆದುಕೊಂಡಿತು. ಹಾಗಂತ ಈ ಅಗತ್ಯ ವಸ್ತು ಕಾಯ್ದೆಯಿಂದಾಗಿ ರೈತರಿಗೆ ಇದನ್ನು ಬೇರೆಯವರಿಗೆ ಮಾರಲೂ ಆಗುತ್ತಿರಲಿಲ್ಲ. ಅಥವಾ ಖಾಸಗೀ ವ್ಯಕ್ತಿಗಳು ಅಥವಾ ಸಂಸ್ಥೆಗಳು ರೈತರಿಂದ ಉತ್ಪನ್ನಗಳನ್ನು ಕೊಂಡು ದಾಸ್ತಾನು ಮಾಡಿಡಲು ಕಾನೂನಿನ ತೊಡಕಿತ್ತು. ಈ ಕಾರಣದಿಂದ ರೈತನು ತಾನು ಬೆಳೆದ ಬೆಳೆಯನ್ನು ದಲ್ಲಾಳಿಗಳು ಕೇಳಿದ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೆಲವೊಮ್ಮೆ ದಲ್ಲಾಳಿಗಳೂ ಕೊಳ್ಳದೇ ಇದ್ದಾಗ ಅದನ್ನು ರಸ್ತೆಯಲ್ಲಿ ಚೆಲ್ಲಬೇಕಾದ ಪರಿಸ್ಥಿತಿ. ಇಲ್ಲವೇ ಸರ್ಕಾರ ಬೆಂಬಲ ಬೆಲೆ ಕೊಟ್ಟು ತನ್ನ ಉತ್ಪನ್ನಗಳನ್ನು ಖರೀದಿ ಮಾಡಿ ಎಂದು ರೈತರು ಸರ್ಕಾರದ ಮುಂದೆ ಧರಣಿ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಬರುತಿತ್ತು. ಇದೇ ಕಾರಣಕ್ಕೆ ಮೋದಿ ಸರ್ಕಾರ ಈ ಹಳೆಯ ಕಾಯ್ದೆಗೆ ತಿದ್ದುಪಡಿ ತಂದು ಇನ್ನು ಮುಂದೆ ಖಾಸಗೀ ವ್ಯಕ್ತಿಗಳು ಅಥವ ಸಂಸ್ಥೆಗಳು ನೇರವಾಗಿ ರೈತರಿಂದ ಖರೀದಿ ಮಾಡಬಹುದು, ಜೊತೆಗೆ ಶೇಖರಣೆ ಕೂಡ ಮಾಡಬಹುದು. ಇದಕ್ಕೆ ಯಾವುದೇ ಮಿತಿ ಇಲ್ಲ ಎಂದಿತು. ಇಲ್ಲಿ ಮತ್ತೆ ಅದೇ ದಲ್ಲಾಳಿಗಳು ಈ ಕಾಯ್ದೆಯ ಮೂಲಕ ಸರ್ಕಾರ ರೈತರಿಗೆ ಕೊಡುತ್ತಿದ್ದ ಬೆಂಬಲ ಬೆಲೆ ನಿಲ್ಲಿಸುತ್ತದೆ ಎಂದವು. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಎಲ್ಲಿಯೂ ಕನಿಷ್ಟ ಬೆಂಬಲ ಬೆಲೆಯನ್ನು ಹಿಂಪಡೆಯುತ್ತೇವೆ ಎಂದು ಹೇಳಲಿಲ್ಲ. ಒಂದು ವಿಷಯ ನೆನಪಿರಲಿ, ನಮ್ಮ ದೇಶದಲ್ಲಿ ಸರ್ಕಾರದ ಬೆಂಬಲ ಬೆಲೆಯ ಲಾಭವನ್ನು ಪಡೆಯುವುದು ಕೇವಲ ಶೇ.೩ ರೈತರು ಮಾತ್ರ. ಉಳಿದಂತೆ, ರೈತರಿಗೆ ಅದೂ ಲಭ್ಯವಿಲ್ಲ. ಕಾರಣ ಸರ್ಕಾರ ದೇಶದ ಎಲ್ಲಾ ರೈತರಿಂದ ಬೆಂಬಲ ಬೆಲೆಯ ಮುಖಾಂತರ ಖರೀದಿ ಮಾಡಿದರೆ ಅದನ್ನು ದಾಸ್ತಾನು ಮಾಡಲು ಸರ್ಕಾರದ ಬಳಿ ವ್ಯವಸ್ಥೆ ಇಲ್ಲ. ಆ ಕಾರಣಕ್ಕೆ ಖಾಸಗೀ ಸಂಸ್ಥೆಗಳು ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಯನ್ನೇ ಕೊಟ್ಟು ಖರೀದಿ ಮಾಡಿದರೆ ರೈತರಿಗೇ ಲಾಭ ತಾನೆ. ಈ ಕಾಯ್ದೆ ಸರಿಯಾಗಿ ಜಾರಿಗೆ ಬಂದರೆ ಅದು ಮಟ್ಟಹಾಕುವುದು ಮಧ್ಯವರ್ತಿಗಳ ವ್ಯೂಹವನ್ನು.
ಕಾಂಟ್ರಾಕ್ಟ್ ಫಾರ್ಮಿಂಗ್
ರೈತರ ಉತ್ಪನ್ನಗಳನ್ನು ಎ.ಪಿ.ಎಂ.ಸಿ ಮತ್ತು ಬೆಂಬಲ ಬೆಲೆ ಮೂಲಕ ಖರೀದಿ ಮಾಡುವ ವ್ಯವಸ್ಥೆಗೆ ಹೊರತಾದ ಇನ್ನೊಂದು ವ್ಯವಸ್ಥೆಯನ್ನು ಸರ್ಕಾರ ರೈತರಿಗೆ ಮಾಡಿಕೊಟ್ಟಿದೆ. ಇದರ ಲಾಭ ರೈತರ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳಿಗೂ ಉಪಯುಕ್ತವಾಗಲಿದೆ. ದೇಶದಲ್ಲಿ ಇರುವ ಬಹುತೇಕ ಕೈಗಾರಿಕೆಗಳು ತಮ್ಮ ಕೈಗಾರಿಕೆಗಳು ದಲ್ಲಾಳಿಗಳಿಂದಲೇ ಖರೀದಿಮಾಡಬೇಕಿತ್ತು. ಇಲ್ಲಿ ಕೈಗಾರಿಕೆಗಳಿಗೆ ಮತ್ತು ರೈತರಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿರಲಿಲ್ಲ. ಈ ಕಾಂಟ್ರಾಕ್ಟ್ ಫಾರ್ಮಿಂಗ್ ಮುಖಾಂತರ ಕೈಗಾರಿಕೆಗಳು ನೇರವಾಗಿ ತಮಗೆ ಬೇಕಿರುವ ಉತ್ಪನ್ನಗಳನ್ನು ಬೆಳೆಯುವ ರೈತನೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು, ರೈತನಿಗೆ ಕೊಡಬೇಕಾದ ದರವನ್ನೂ ಪೂರ್ವನಿಗದಿ ಮಾಡಿಕೊಳ್ಳಲಾಗುತ್ತದೆ. ಕಾರಣ ಕಟಾವಿನ ಸಮಯದಲ್ಲಿ ಉಂಟಾಗಬಹುದಾದ ದರ ವ್ಯತ್ಯಯಗಳಿಂದ ರೈತರಿಗೆ ತೊಂದರೆ ಆಗದಿರಲಿ ಎನ್ನುವುದಕ್ಕೆ. ಇಲ್ಲಿ ಕಂಪನಿಗಳು ಕೇವಲ ರೈತ ಬೆಳೆದ ಬೆಳೆಯನ್ನು ಖರೀದಿ ಮಾಡುವ ಒಪ್ಪಂದ ಮಾಡಿಕೊಳ್ಳುತ್ತಾನೆಯೇ ಹೊರತು ಆತನ ಕೃಷಿ ಭೂಮಿಯ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಇಲ್ಲಿ ಕಾಂಟ್ರಾಕ್ಟ್ ಮಾಡಿಕೊಳ್ಳಲು ಯಾರೂ ಯಾರ ಮೇಲೂ ಒತ್ತಡ ಹೇರುವಂತಿಲ್ಲ. ಇದು ಇಬ್ಬರ ಸಹಮತವಿದ್ದರಷ್ಟೇ ಸಾಧ್ಯವಾಗುವ ಸಂಗತಿ. ಒಂದು ವೇಳೆ ಈ ವ್ಯವಸ್ಥೆಯಲ್ಲಿ ರೈತ ಮತ್ತು ಕಂಪನಿಗಳ ನಡುವೆ ವ್ಯಾಜ್ಯಗಳು ನಡೆದರೆ ಅದನ್ನು ಸ್ಥಳೀಯ ಸರ್ಕಾರಿ ಆಧಿಕಾರಿಗಳು ಬಗೆಹರಿಸಬೇಕು ಎಂದು ಈ ಕಾನೂನು ಹೇಳುತ್ತದೆ.
ಒಟ್ಟಿನಲ್ಲಿ ಈ ಮೂರು ಕಾಯ್ದೆಗಳು ಕೃಷಿ ಕ್ಷೇತ್ರದಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರ ಎಂದರೆ ಅದು ಖಂಡಿತಾ ಅತಿಶಯೋಕ್ತಿಯಲ್ಲ. ಈ ಮೂರು ಮಸೂದೆಗಳು ಸರಿಯಾದ ರೀತಿಯಲ್ಲಿ ಅನುಷ್ಟಾನಗೊಂಡರೆ ದೇಶದ ರೈತ ಶತಮಾನಗಳ ಕಾಲದಿಂದ ಇದ್ದಿದ್ದ ಬ್ರಿಟೀಷರ ದಾಸ್ಯದಿಂದ ಮುಕ್ತನಾಗುತ್ತಾನೆ. ಅವನಿಗೂ ೨೦೨೦ರ ಭಾರತ ಬದಲಾದ ಭಾರತ ಅನ್ನಿಸುತ್ತದೆ. ಪಂಡಿತ್ ದೀನದಯಾಳರ ಅಂತ್ಯೋದಯದ ಕಲ್ಪನೆ ಒಂದು ಹಂತದಲ್ಲಿ ಸಾಕಾರವಾಯಿತೆಂದೇ ಹೇಳಬಹುದು. ಜೈ ಜವಾನ್, ಜೈ ಕಿಸಾನ್ ಎನ್ನುವ ಶಾಸ್ತ್ರಿಗಳ ಧ್ಯೇಯವಾಕ್ಯ ಸಾರ್ಥಕ್ಯವನ್ನು ಕಾಣುತ್ತದೆ.
ಚಿತ್ರ ಕೃಪೆ : https://karunadalive.in/