ವಿಷಯದ ವಿವರಗಳಿಗೆ ದಾಟಿರಿ

ಜೂನ್ 23, 2021

1

ಶಿಕ್ಷಣ ತಜ್ಞ ಶ್ಯಾಮಪ್ರಸಾದ್ ಮುಖರ್ಜಿ

‍ರಾಕೇಶ್ ಶೆಟ್ಟಿ ಮೂಲಕ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರು ಹತ್ಯೆಯಾದ ದಿನ. 1953ರ ಈ ದಿನ, ನೆಹರೂ ಸರಕಾರದ ಆದೇಶದ ಮೇರೆಗೆ ಕಾಶ್ಮೀರ ರಾಜ್ಯ ಸರಕಾರ ಅವರನ್ನು ಒಂದು ಅಜ್ಞಾತ ಪ್ರದೇಶದಲ್ಲಿ  ಗೃಹ ಬಂಧನದಲ್ಲಿ ಇಟ್ಟಿತ್ತು. ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ರ ವಿರುದ್ಧ ಪ್ರತಿಭಟಿಸಲು ಹೋದಾಗ ನೆಹರೂ ಸರಕಾರ ಇವರ ಬಂಧನಕ್ಕೆ ಆದೇಶ ಹೊರಡಿಸಿತ್ತು. 40 ದಿನಗಳ ಗೃಹ ಬಂಧನದ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗುತ್ತದೆ. ಅವರಿಗೆ ಔಷಧೋಪಚಾರವನ್ನು ಸರಕಾರ ಒದಗಿಸಿತ್ತಾದರೂ ಅವರು ಮರಣ ಹೊಂದುತ್ತಾರೆ.

ಅವರ ಸಾವಿನ ನಂತರ ಅವರ ತಾಯಿ ಜೋಗಮಾಯಾ ದೇವಿಯವರು ತನ್ನ ಮಗನ ಸಾವಿನ ಬಗ್ಗೆ ತಮಗೆ ಅನೇಕ ಅನುಮಾನಗಳಿವೆ, ಅವನ ಬಂಧನದಲ್ಲಿದ್ದಾಗ ಅವನಿಗೆ ಚಿಕಿತ್ಸೆ ಕೊಟ್ಟವರು ಯಾರು? ಯಾವ ರೀತಿಯ ಚಿಕಿತ್ಸೆ ಕೊಡಲಾಯಿತು? ಯಾವ ಕಾಯಿಲೆಗೆ ಕೊಡಲಾಯಿತು? ಇದು ಸಹಜ ಸಾವೋ? ಅಥವಾ ನನ್ನ ಮಗನ ರಾಜಕೀಯ ಚಳುವಳಿಯ ಕಾರಣಕ್ಕೆ  ಸರಕಾರೀ ಪ್ರಾಯೋಜಕತ್ವದಲ್ಲಿ ನಡೆಸಿದ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು   ಪ್ರಧಾನಿ ನೆಹರುವಿಗೆ ಪತ್ರ ಬರೆಯುತ್ತಾರೆ. ಆದರೆ ಅದು ನೆಹರೂ ಕಛೇರಿಯ ಕಸದ ಬುಟ್ಟಿ ಸೇರುತ್ತದೆ.

ಶ್ಯಾಮಪ್ರಸಾದ್ ಮುಖರ್ಜಿಯವರು ಯಾವುದನ್ನು ವಿರೋಧಿಸಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದರೋ, ಅದನ್ನ ಮೋದಿ ಸರಕಾರ 2 ವರ್ಷದ ಹಿಂದೆ ತೆಗೆದುಹಾಕಿತು. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಯಿತು.
ಬಹುತೇಕ ಮಂದಿಗೆ ಶ್ಯಾಮಾ ಪ್ರಸಾದ್ ಮುಖರ್ಜಿಯವರ 30 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮೂರು ವರ್ಷಗಳ ಪರಿಚಯ ಮಾತ್ರ ಇರುವುದು. 1950ರಲ್ಲಿ ಅವರು ನೆಹರೂ  ಸರಕಾರಕ್ಕೆ ರಾಜಿನಾಮೆ ಕೊಡುತ್ತಾರೆ, 1951ರಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೆ, ‘ಜನಸಂಘ’ದ ಸ್ಥಾಪನೆ ಮಾಡುತ್ತಾರೆ. 1952 ರ ಚುನಾವಣೆಯಲ್ಲಿ ಜನಸಂಘ 3 ಸ್ಥಾನವನ್ನು ಗೆಲ್ಲುತ್ತದೆ. 1953ರಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಹೋರಾಡಿ ನಿಗೂಢವಾಗಿ ಸಾವನ್ನು ಕಾಣುತ್ತಾರೆ ಎನ್ನುವುದಷ್ಟೆ ತಿಳಿದಿರುವ ವಿಚಾರ.

ಶ್ಯಾಮಪ್ರಸಾದ ಮುಖರ್ಜಿ 1934 ರಿಂದ 1938ರ ತನಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಾರೆ. 1933ರಲ್ಲಿ ಉಪಕುಲಪತಿಯಾಗಿ ನೇಮಕವಾದಾಗ ಅವರ ವಯಸ್ಸು ಇನ್ನೂ 33. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವವಿದ್ಯಾನಿಲಯದ ಉಪಕುಲಪತಿಯಾದವರು. ಆ ವಯಸ್ಸಿಗಾಗಲೇ ಅವರು ಇಂಗ್ಲೀಷಿನಲ್ಲಿ ಬಿ ಎ, ಬಂಗಾಳಿ ಭಾಷೆಯಲ್ಲಿ ಎಂ ಎ, ಕಾನೂನು ಶಿಕ್ಷಣದಲ್ಲಿ  ಬ್ಯಾಚುಲರ್ ಪದವಿ ಹಾಗು ಇಂಗ್ಲೆಂಡ್ ಗೆ ತೆರಳಿ  ಭ್ಯಾರಿಷ್ಟರ್ ಪದವಿಯನ್ನೂ ಪಡೆದಿದ್ದರು. ಇವರ ತಂದೆ ಆಶುತೋಷ್ ಮುಖರ್ಜಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮೊದಲ ಭಾರತೀಯ  ಉಪಕುಲಪತಿಗಳಾಗಿದ್ದವರು. ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ವಿಶ್ವವಿದ್ಯಾನಿಲಯದ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿದ ಅನುಭವವನ್ನು ಹೊಂದಿದ್ದರು.
 
ಶ್ಯಾಮ ಪ್ರಸಾದ್ ಮುಖರ್ಜಿಯವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದಾಗ, ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಡೆಯದ ಹಲವು ಪ್ರಥಮಗಳಿಗೆ ಮುನ್ನುಡಿಯನ್ನು ಬರೆಯುತ್ತಾರೆ. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಮೂಲದ ಶಿಕ್ಷಣ ಪದ್ಧತಿಯ ನಲುಗಿ ಹೋಗಿತ್ತು. ಅದರ ಜೊತೆಗೆ ಬ್ರಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಹುಟ್ಟು ಹಾಕಿದ ಆಧುನಿಕ ಶಿಕ್ಷಣ ವ್ಯವಸ್ಥೆ, ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿತ್ತು. ಅಲ್ಲಿ ಭಾರತೀಯ ಭಾಷೆಗಳಿಗೆ ಯಾವುದೇ ಪ್ರಾಧಾನ್ಯತೆ ಇರಲಿಲ್ಲ. ಬಂಗಾಳದಲ್ಲಿ  ಬಂಗಾಳದ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಅತ್ಯಂತ ಪ್ರಯಾಸದ ವಿಷಯವಾಗಿತ್ತು ಹಾಗಾಗಿ ತಮ್ಮ ಕಾಲದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಂಗಾಳದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳಿಯ ಭಾಷೆಗಳಿಗೆ ಪ್ರಾತಿನಿದ್ಯತೆ ಕೊಡಿಸುವ ತೀರ್ಮಾನ ಮಾಡುತ್ತಾರೆ ಹಾಗು ಬಂಗಾಳಿ ಭಾಷೆಯಲ್ಲೇ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನು ಬಂಗಾಳಿ ವಿಧ್ಯಾರ್ಥಿಗಳಿಗೆ ಮಾಡಿಸಿಕೊಡುತ್ತಾರೆ. ಇದಕ್ಕೆ 1935ರ ‘ಯೂನಿವರ್ಸಿಟಿ ಕಾಯಿದೆ’ಯಲ್ಲಿ ಮಾನ್ಯತೆಯನ್ನೂ ಕೊಡಿಸುತ್ತಾರೆ. 

ವಿವಿಯಲ್ಲಿ ಬ್ರಿಟಿಷರ ಲಾಂಛನ
ಮುಖರ್ಜಿಯವರು ಬದಲಾಯಿಸಿದ ಲಾಂಛನ

ವಿಶ್ವವಿದ್ಯಾನಿಲಯ ಪ್ರಾರಂಭವಾದಾಗಿನಿಂದ ಅಲ್ಲಿಯ ತನಕ  ಬ್ರಿಟೀಷರ ದಾಸ್ಯದ ಚಿಹ್ನೆಯಾಗಿದ್ದ ‘ವಿಶ್ವವಿದ್ಯಾನಿಲಯದ ಚಿಹ್ನೆ’ಯನ್ನು ಬದಲಾಯಿಸಿ ಅದಕ್ಕೆ ಸಂಪೂರ್ಣವಾಗಿ ಭಾರತದ ಆದ್ಯಾತ್ಮ ಸ್ವರೂಪವನ್ನು ಕೊಡುತ್ತಾರೆ.  ಕುದುರೆ ಮತ್ತು ಇಂಗ್ಲೆಂಡಿನ ರಾಜ ಪ್ರಭುತ್ವದ ಸೂಚಕದ ಚಿಹ್ನೆಯನ್ನು ತೆಗೆದು ‘ಕಮಲದ ಹೂವುಗಳ ದಳ ಇರುವ ವ್ರತ್ತಾಕಾರದ ಚಿಹ್ನೆ’ಯನ್ನು ನೀಡುತ್ತಾರೆ. ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಗುರುದೇವ ರಬೀಂದ್ರನಾಥ ಠಾಗೋರ್ ಅವರನ್ನು ಕರೆಯಿಸಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲಬಾರಿಗೆ ಘಟಿಕೋತ್ಸವದ ಭಾಷಣ ಬಂಗಾಳಿ ಭಾಷೆಯಲ್ಲಿ ಮಾಡಿಸುತ್ತಾರೆ. ಇದು ಬ್ರಿಟಿಷರನ್ನ ಇನ್ನೂ ಕೆರಳಿಸುತ್ತದೆ. ರಬೀಂದ್ರನಾಥ ಠಾಗೋರರನ್ನು ವಿಶ್ವವಿದ್ಯಾನಿಲಯದಲ್ಲಿ  ಬಂಗಾಳಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೂಡ ನೇಮಿಸುತ್ತಾರೆ. ಬಂಗಾಳಿ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಸಿಗಲಿ ಎನ್ನುವ ಕಾರಣಕ್ಕೆ ವಿಶ್ವವಿದ್ಯಾನಿಲಯದಿಂದಲೇ ಅನೇಕ ಬಂಗಾಳಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಿ ಪ್ರಕಟಿಸುತ್ತಾರೆ,  ಇವರ ಕಾಲದಲ್ಲೇ, ಅಂದರೆ 1937 ರಲ್ಲಿ ಮೊದಲ ಬಾರಿಗೆ ಬಂಗಾಳಿ ಭಾಷೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಒಂದಕ್ಕೆ ಡಾಕ್ಟರೇಟ್ ಗೌರವ ಸಿಗುತ್ತದೆ.
 
ಶ್ಯಾಮ ಪ್ರಸಾದ್  ಮುಖರ್ಜಿಯವರು ವಿಶ್ವವಿದ್ಯಾನಿಲಯದಲ್ಲಿ, ಇತರ ಅನೇಕ ಆಧುನಿಕ ಮತ್ತು ಹೊಸತಲೆಮಾರಿಗೆ ಆವಶ್ಯಕವಾಗಿ ಬೇಕಾಗಿದ್ದ ವಿಷಯಗಳ ತರಗತಿಯನ್ನೂ ಪ್ರಾರಂಭಿಸುತ್ತಾರೆ. ಬಂಗಾಳಿ ಭಾಷೆಯ ಜೊತೆಗೆ ಉರ್ದು, ಹಿಂದಿ, ಅಸ್ಸಾಮಿ ಮುಂತಾದ ಸ್ಥಳೀಯ ಭಾರತೀಯ ಭಾಷೆಗಳಿಗೂ ಅವಕಾಶ ಕೊಡಿಸುತ್ತಾರೆ.  ಔದ್ಯೋಗಿಕ ಜಗತ್ತಿಗೆ ಅಗತ್ಯವಿದ್ದ  ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಾರೆ.  ಇವರು ‘ಅಪ್ಲೈಡ್ ಫಿಸಿಕ್ಸ್’ ವಿಭಾಗವನ್ನು ಆರಂಭಿಸಿ, ಅಲ್ಲಿ ಇವತ್ತಿನ  ಮಾಹಿತಿ ತಂತ್ರಜ್ನಾನದ ಇಂಜಿನೀಯರಿಂಗ್ ಗೆ ಸಮನಾಗಿದ್ದ  ‘ಕಮ್ಯುನಿಕೇಶನ್ ಇಂಜಿನೀಯರಿಂಗ್’ ಪ್ರಾರಂಭಿಸುತ್ತಾರೆ. 1934 ರಲ್ಲಿ ಡಿಸಿಎಸ್ ಪದವಿಯನ್ನು ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರಾರಂಭಿಸುತ್ತಾರೆ. ಸೈನ್ಯಕ್ಕೆ ಸೇರಬಯಸುವ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಾರೆ. ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆಯೊಂದಿಗೆ ಸೇರಿ  3 ತಿಂಗಳ ಇಂಟರ್ನಶಿಪ್  ಕೋರ್ಸ್‍ಗಳನ್ನು ಪ್ರಾರಂಭಿಸುತ್ತಾರೆ.  ಪ್ರಾಚ್ಯವಸ್ತು ಶಾಸ್ತ್ರ,ಆರೋನಾಟಿಕ್ಸ್ ವಿಭಾಗದಲ್ಲಿ ಬಿಎ, ಖಗೋಳ ಶಾಸ್ತ್ರದಲ್ಲಿ ಪದವಿ, ಗಣಿತದಲ್ಲಿ ಹಾನರರಿ ಕೋರ್ಸ್‍ಗಳನ್ನೂ ಪ್ರಾರಂಭಿಸುತ್ತಾರೆ. ವಿಧ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ತರೆಬೇತಿ ಕೊಡಿಸುವ ಕಲಿಕಾ ವ್ಯವಸ್ಥೆಯನ್ನೂ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುತ್ತಾರೆ. ಇವರ ಕಾರ್ಯಕಾಲದಲ್ಲಿ ಬಂಗಾಳದಲ್ಲಿ 2 ಪ್ರಮುಖ ಶಿಕ್ಷಕರ ತರಬೇತಿ ಕಾಲೇಜ್ ಗಳನ್ನು ಆರಂಭಿಸುತ್ತಾರೆ. ಮಹಿಳೆಯದ ಶಿಕ್ಷಣಕ್ಕೆ ಒತ್ತುಕೊಡಲು,  ಬಿಹಾರಿಲಾಲ್ ಮಿತ್ರರವರು  ಮಹಿಳೆಯರಿಗಾಗಿ ಹೊಮ್ ಸಯನ್ಸ್ ತರಗತಿಗಳನ್ನು ಪ್ರಾರಂಭಿಸಲು ನಿಶ್ಚಯಿಸಿದಾಗ ಅವರಿಗೆ ಆ ಕಾಲದಲ್ಲೇ 6500 ರೂಪಾಯಿಗಳ ದೇಣಿಗೆ ನೀಡುತ್ತಾರೆ.  ಮುಂದೆ ಅದೇ ಸಂಸ್ಥೆ ಬೆಳೆದು ‘ಬಿಹಾರಿಲಾಲ್ ಕಾಲೇಜ್’ಆಗುತ್ತದೆ. ಶ್ಯಾಮಾಪ್ರಸಾದ ಮುಖರ್ಜಿ ವಿಶ್ವವಿದ್ಯಾನಿಲಯದಲ್ಲಿ  ಏಷಿಯಾದ ಸಂಸ್ಕ್ರತಿಯನ್ನು ಕಲಿಕಾ ವಿಷಯವನ್ನಾಗಿಸುವ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಾರೆ.  ಅವರು  ಚೀನಾ ಮತ್ತು ಟಿಬೇಟಿನ ಭಾಷಾ ಅಧ್ಯಯನ ಕೇಂದ್ರವನ್ನ ಸ್ಥಾಪಿಸುತ್ತಾರೆ. 
 
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ, ಅವರ ಇತರ ಶಿಕ್ಷಣೇತರ ಹಿತಗಳನ್ನು ಕಾಪಾಡಲು ಅವರು ವಿಶ್ವವಿದ್ಯಾನಿಲಯದಲ್ಲಿ ಒಂದು ಸ್ಟೂಡೆಂಟ್ ವೆಲ್‍ಫೇರ್ ಅಸೋಸಿಯೇಶನ್ ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಭೋಧನೇತರ ಸಿಬ್ಬಂಧಿಗಳ ಒಳಿತಿಗಾಗಿ ಸುಮಾರು 30ಕ್ಕೂ ಹೆಚ್ಚು  ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ. ‘ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳ ಸಂಘಟನೆ’ಯ ಅಧ್ಯಕ್ಷರೂ ಆಗುತ್ತಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೆ ಮೊದಲ ಬಾರಿಗೆ  ಸಿಬ್ಬಂಧಿಗಳಿಗೆ ‘ಪ್ರಾವಿಡೆಂಟ್ ಫಂಡ್’ ಕೊಡಿಸುವ ಬಗ್ಗೆ ಸಿಂಡಿಕೇಟ್ ಬಳಿ ಪ್ರಸ್ಥಾಪವನ್ನು ಇಡುತ್ತಾರೆ.
 
ಶಿಕ್ಷಣ ಕ್ಷೇತ್ರದಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಅತ್ಯಂತ ಮಹತ್ವದ ಕೊಡುಗೆ ಅಂದರೆ, ಅವರು ಜಾರಿಗೆ ತಂದ ‘ಪಂಚ ಶೀಲ  ನೀತಿ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವ ವರ್ಗದ ಶಿಕ್ಷಣ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ, ದೇಶದ ಭವಿಷ್ಯವೂ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎನ್ನುವ  ವಿಷಯವನ್ನು ಪ್ರತಿಪಾದಿಸಿತ್ತಾ ಶ್ಯಾಮಪ್ರಸಾದ ಮುಖರ್ಜಿಯವರು ತನ್ನ 2ನೇ ಘಟಿಕೋತ್ಸವದ ಭಾಷಣದಲ್ಲಿ 5 ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.


1.           ಸಮಾಜದಲ್ಲಿ  ಯುವಕರ ಸರ್ವಾಂಗೀಣ ಅಭಿವೃದ್ದಿಗೆ  ಸಹಾಯವಾಗಲು, ಶಿಕ್ಷಣ ಸಮಾಜದ ಎಲ್ಲಾ ವರ್ಗಗಳಲ್ಲೂ ಸಿಗಬೇಕು.
2.           ಸಂಸ್ಕೃತಿ ಮತ್ತು ವಿಜ್ಞಾನದ  ಸರಿಯಾದ ಸಮನ್ವಯ ಶಿಕ್ಷಣ ವ್ಯವಸ್ಥೆಯೊಳಗಿರಬೇಕು.
3.           ದೇಶದ ಆಯಾಯ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಕರು ಶಿಕ್ಷಣವನ್ನು ಕೊಡಬೇಕು.
4.           ಶಿಕ್ಷಣ ವ್ಯವಸ್ಥೆ ಸಮಾಜದೊಳಗೆ ಸ್ವಸ್ಥ, ಸುಂದರ ಮತ್ತು ಭಯ ಮುಕ್ತ ವಾತಾವರಣದ ನಿರ್ಮಾಣಕ್ಕೆ ಪೂರಕವಾಗಿರಬೇಕು.
5.           ಶಿಕ್ಷಣ ಹೆಚ್ಚು ಹೆಚ್ಚು ಸರಕಾರಿ ಪ್ರಾಯೋಜಕತ್ವದಲ್ಲೇ ದೊರಕಬೇಕು.


ಶ್ಯಾಮಾ ಪ್ರಸಾದ್ ಮುಖರ್ಜಿಯರ ಈ ನೀತಿಯನ್ನು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವವರು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಿದರು. ಅವರು ವಿಶ್ವವಿಧ್ಯಾನಿಲಯದಲ್ಲಿ  ಪ್ರಾರಂಭಿಸದ ಅನೇಕ ವಿಷಯಗಳು ಮುಂದಿನ ದಿನಗಳಲ್ಲಿ ಪ್ರತ್ಯೇಕ ಶಿಕ್ಷಣ ಪ್ರಭೇದಗಳಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋದಿಸಲ್ಪಡುತ್ತದೆ.  ವರ್ತಮಾನದ ಕೇಂದ್ರ ಸರ್ಕಾರ ರೂಪಿಸಿರುವ ‘ಹೊಸ ಶಿಕ್ಷಣ ನೀತಿ’ಯು ಕೂಡ ಶ್ಯಾಮಾ ಪ್ರಸಾದ ಮುಖರ್ಜಿವರ ಶಿಕ್ಷಣ ನೀತಿಯಂದ ಪ್ರೇರಣೆ ಪಡೆದಿದೆ.
 
ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅವರ ಅನುಭವ, ಅವರು ಮುಂದೆ ದೇಶದ ಕೈಗಾರಿಕೆ ಮತ್ತು ಸರಬರಾಜು ಮಂತ್ರಿಗಳಾಗಿ ಕಾರ್ಯನಿರ್ವಹಿಸುವಾಗ ಸಹಾಯಕ್ಕೆ ಬರುತ್ತದೆ. ಅವರು ತಮ್ಮ ಕಾರ್ಯಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದ ಅನೇಕ ವೃತ್ತಿಪರ ಶಿಕ್ಷಣ ಮಾದರಿಯಲ್ಲಿ ಕಲಿತವರೇ ದೇಶದ ಪ್ರಖ್ಯಾತ ಉದ್ದಿಮೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ಕಾರಣಕ್ಕೆ ಅವರಿಗೆ ಕೈಗಾರಿಕೆ ಮತ್ತು ಅವುಗಳ ಸವಾಲುಗಳನ್ನು ಆಧರಿಸಿ ಉದ್ದಿಮೆ ಮತ್ತು ಕಾರ್ಮಿಕರಿಬ್ಬರ ಹಿತವನ್ನೂ ಕಾಯುವ, ಅವರ ನಡುವೆ ಸಂಭವಿಸುತ್ತಿದ್ದ ಸಂಘರ್ಷಗಳನ್ನ ತಡೆದು, ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಅವುಗಳ ಮೂಲವನ್ನು ಅರಿತು ಪರಹಾರ ಕಂಡುಕೊಳ್ಳುವುದು ಸುಲಭವಾಯಿತು. ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಮತ್ತು ಕೈಗಾರಿಕೆ ಬೇಕಿರುವ ವೃತ್ತಿ ಕೌಶಲ್ಯ ಹೊಂದಿರುವ, ನುರಿತ ತರಬೇತಿ ಪಡೆದಿರುವ ಕಾರ್ಮಿಕ ವರ್ಗದ ಪೂರೈಕೆಗೆ ಅಗತ್ಯವಿರುವ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಶ್ಯಾಮಾ ಪ್ರಸಾದ್
ಮುಖರ್ಜಿಯವರು ರಾಜಕಾರಣದ ಕಾರಣಕ್ಕೆ ಈ ದೇಶಕ್ಕೆ ಎಷ್ಟು ಪ್ರಸ್ತುತವೋ,  ಅವರು ಒಬ್ಬ ಶಿಕ್ಷಣ ತಜ್ಞನಾಗಿ, ಒಬ್ಬ ನುರಿತ ಆಡಳಿತಗಾರನಾಗಿ, ಒಬ್ಬ ಒಳ್ಳೆಯ ಸಮಾಜ ಚಿಂತಕನಾಗಿ, ಕೂಡ ನಮಗೆ ಇಂದಿಗೂ ಅಷ್ಟೇ ಪ್ರಸ್ತುತ.

1 ಟಿಪ್ಪಣಿ Post a comment
  1. sangameshsavadattimath
    ಜೂನ್ 25 2021

    Excellent article with good historical facts. Thank you.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments