ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 2, 2021

1

ಏನಾಗಿದೆ ಕರ್ನಾಟಕದಲ್ಲಿ ಬಿಜೆಪಿಗೆ?

‍ರಾಕೇಶ್ ಶೆಟ್ಟಿ ಮೂಲಕ

– ಶಿವಾನಂದ ಹಿರೇಮಠ

ಬಿಜೆಪಿ ಕಾರ್ಯಕರ್ತನೊಬ್ಬನ ಮನದಾಳದ ಮಾತುಗಳು…

ವಿಶ್ವದ ಅತಿದೊಡ್ಡ ಪಕ್ಷ, ಕೋಟ್ಯಾಂತರ ಸದಸ್ಯರು, ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪೂರ್ಣಾವಧಿ ಕಾರ್ಯಕರ್ತರು, ನೂರಾರು ನೇತಾರರು…

ಶೂನ್ಯದಿಂದ ಮೇಲೆದ್ದು ರಾರಾಜಿಸುತ್ತಿರುವರು. ವಿಶ್ವಮಾನ್ಯತೆ ಪಡೆದ ರಾಜಕೀಯ ವಿಚಾರಧಾರೆ, ಧ್ಯೇಯ ಸಿದ್ಧಾಂತ… ಅಧಿಕಾರ ರಾಜಕೀಯದ ಆಸಕ್ತಿ ಇಲ್ಲ, ಆದರೂ ರಾಷ್ಟ್ರಹಿತ ರಾಜಕಾರಣಕ್ಕಾಗಿ ಬಿಜೆಪಿಯ ಬೆನ್ನಿಗೆ ಸದಾಕಾಲ ನಿಂತ ವಿಚಾರ ಪರಿವಾರದವರು.ಎಲ್ಲಕ್ಕಿಂತ ಮಿಗಿಲಾದ ಜನತಾ ಜನಾರ್ದನನ ಕೃಪೆ…

ಇಷ್ಟೆಲ್ಲ ಇದ್ದರೂ ನಾಶದ ಹಾದಿಯಲ್ಲಿ ಸಾಗುತ್ತಿರುವ ಉಳಿದ ರಾಜಕೀಯ ಪಕ್ಷದ ರೋಗಾಣುಗಳು ಬಿಜೆಪಿಯನ್ನು ಪ್ರವೇಶಿಸಿದ ಲಕ್ಷಣ ಗೋಚರವಾಗತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ಮನಸ್ಸಿಗೆ ಆತಂಕ ಮಾಡುವ ಲಕ್ಷಣಗಳಿವು.

Party with a difference…now party with Differences ಆಗುತ್ತಿದೆಯೇ? ಪ್ರಧಾನಿಯ ಪದವಿಯನ್ನು ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸದೇ ಶ್ರೇಷ್ಠತೆ ಮೆರೆದ ಪಕ್ಷ ಇತಿಹಾಸ ಮರೆಯಿತೇ?

ಯುವಕರಿಗೆ, ನೂತನ ಕರ್ತವ್ಯದ ನಾಯಕರಿಗೆ ಅವಕಾಶ ಮಾಡುವುದು ಕರ್ತವ್ಯ ಎಂದು ಭಾವಿಸಿದ ಆಡ್ವಾಣಿಯವರ ನಡೆ ನಮಗೆಲ್ಲ ಅವ್ಯವಾವಹಾರಿಕ ನಡೆಯಾಯ್ತಾ…? ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ನೀಡುವ ಕಾರ್ಯವನ್ನು ಸಂಭ್ರಮದಿಂದ ಆಚರಿಸುವ ಪಕ್ಷದಲ್ಲಿ.. ಮಂತ್ರಿಸ್ಥಾನ ಪಡೆಯಲು ನಡೆಯುತ್ತಿರುವ ಪೈಪೋಟಿ ಪಕ್ಷ್ಕಕೆ ಮುಜುಗರ ತರುವಷ್ಟು ಆಗುತ್ತಿರುವುದು ದುರ್ದೈವವಲ್ಲವೇ?
ಪಾರ್ಟಿಗಾಗಿ ಶಿಸ್ತು ಅಲ್ಲ, ಬದಲಾಗಿ ಅನುಶಾಸನ, ನಡವಳಿಕೆ ಬಗ್ಗೆ ಸ್ವಯಂ ನಿಯಂತ್ರಣದ ಬದಲಿಗೆ ಯಾರೂ ನಿಯಂತ್ರಣ ಮಾಡಲಾರದಷ್ಟು ಅಶಿಸ್ತು!? ಪಕ್ಷದಲ್ಲಿನ ಕಾರ್ಯಕರ್ತರು ಭ್ರಷ್ಟಾಚಾರ ಮಾಡಿದರೆ ಪಕ್ಷ ವಿಸರ್ಜನೆ ಮಾಡಿ ಹೊಸ ಪಕ್ಷ ಕಟ್ಟುವೆ ಎಂದು ಹೇಳಿದ್ದ ದೀನದಯಾಳರೆಲ್ಲಿ…? ಭ್ರಷ್ಟಾಚಾರ ಆರೋಪದಲ್ಲಿ ಮುಳಗೇಳುತ್ತ ಅಧಿಕಾರದಿಂದ ದೂರವಿಟ್ಟರೆ ಹೊಸ ಪಕ್ಷ ಮಾಡುತ್ತೇನೆ ಎನ್ನುವ ಇಂದಿನ ನಾಯಕರೆಲ್ಲಿ? ಅಜಗಜಾಂತರ ವ್ಯತ್ಯಾಸ…!

ಪಾರ್ಟಿಗಾಗಿ, ದೇಶಕ್ಕಾಗಿ ತಮ್ಮ ಸರ್ವಸ್ವ ಸಮರ್ಪಣೆ ಮಾಡಿದ ನಾಯಕರಿಗೂ.. ಪಾರ್ಟಿಯನ್ನು ತಮಗಾಗಿ, ತಮ್ಮ ಕುಟುಂಬಕ್ಕಾಗಿ ಉಪಯೋಗಿಸಿಕೊಂಡ ಇಂದಿನ ಕೆಲವು ನಾಯಕರ ನಡೆ ಪಾರ್ಟಿ ವರ್ಚಸ್ಸಿಗೆ ಧಕ್ಕೆ ತಂದಿದೆ.

“ರಾಷ್ಟ್ರಾಯ ಇದಂ… ನ ಮಮ””..ಎಂಬ ಮಾನಸಿಕತೆ ಬದಲಾಗಿ “ಇದಂ ರಾಷ್ಟ್ರಂ ಮಮ.. ಮಮ ಕುಟುಂಬಸ್ಯ” ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಹೋರಾಟದ ದಿನಗಳಲ್ಲಿ, ಅಧಿಕಾರವಿಲ್ಲದ ದಿನಗಳಲ್ಲಿ ಪಕ್ಷದ ಕಾರ್ಯಕರ್ತರೇ ನಮ್ಮ ಕುಟುಂಬದವರು, ಪರಿವಾರದವರು ಎಂದು ಭಾವಿಸಿದ್ದ ನಮ್ಮ ಅನೇಕ ನಾಯಕರು ಈಗ ತಮ್ಮ ಮಕ್ಕಳು, ಕುಟುಂಬದವರು, ಪರಿವಾರದವರೇ “ನಮ್ಮ ಪಕ್ಷದ ಕಾರ್ಯಕರ್ತರು” ಎಂದು ಭಾವಿಸಿರುವುದು ಅಚ್ಚರಿಯ ಬೆಳವಣಿಗೆ. ದೇವದುರ್ಲಭ ಕಾರ್ಯಕರ್ತ ಎಂದು ಹೊಗಳಿಕೆಯ ಮಾತನಾಡಿ ಕಿವಿಗೆ ದಾಸವಾಳ ಹೂ ಮುಡಿಸುತ್ತಾ ತಮ್ಮ ಅಧಿಕಾರದ ನಂತರ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಮಕ್ಕಳನ್ನು, ಕುಟುಂಬದವರನ್ನು ಮುನ್ನೆಲೆಗೆ ತರಲು ತಂತ್ರಗಾರಿಕೆ, ಬೇಹುಗಾರಿಕೆ, ಬ್ಲಾಕ್ ಮೇಲ್ ಮಾಡುತ್ತಾ ಇರುವುದು ವಾಸ್ತವ.


ಹೈಕಮಾಂಡ್ ಹೆಸರು ಹೇಳಿ, ಕಾರ್ಯಕರ್ತರ ಭಾವನೆಗಳನ್ನು ಶಿಸ್ತಿನ ಹೆಸರಿನಲ್ಲಿ ಅದುಮಿ ಇರಿಸುವುದು ಒಂದು ಕಡೆಯಾದರೆ, ತಮಗಿರುವ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ನಿರ್ಭಯವಾಗಿ ತಿಳಿಸುವ ಪ್ರಯತ್ನ ಮಾಡದೇ, ತಮಗೇನೋ ಸಿಗಬಹುದು ಎಂಬ ಆಸೆಯಿಂದ ಕರ್ತವ್ಯದ ಪಾಲನೆ ಮಾಡದಿರುವ ಸ್ವಾರ್ಥ ನಾಯಕರು ಇನ್ನೊಂದಡೆ.
ವ್ಯಕ್ತಿಗತ ಮಾತುಕತೆ ಅವಕಾಶ ಸಿಕ್ಕಾಗ ಜಾಣ ಮೌನ… ಪತ್ರಿಕೆಯ ಮೂಲಕ, ಮಾಧ್ಯಮದಲ್ಲಿ ತಮ್ಮ ಸ್ವಂತ ಹಿತಾಸಕ್ತಿಯ ದೃಷ್ಟಿಯಿಂದ ಬುದ್ಧಿವಂತಿಕೆ ಪ್ರದರ್ಶನ ಇಂದಿನ ಪರಿಸ್ಥಿತಿಯ ಕೈಗನ್ನಡಿ.

ಮಂತ್ರಿಸ್ಥಾನ ಸಿಗದವರನ್ನು ರಾಜ್ಯಪಾಲರನ್ನಾಗಿ ಕೆಲವು ಪಕ್ಷಗಳು ಮಾಡಿದ ಉದಾಹರಣೆ ಅಂದು. ಆದರೆ, ಇಂದು..ಮಂತ್ರಿಸ್ಥಾನ ಕೊಡದಿದ್ದರೆ ಸಂಘಟನೆ ಕೆಲಸ ಮಾಡುವ ಉದಾರತೆ ತೋರುತ್ತಿರುವುದು ಇಂದಿನ ಕೆಟ್ಟ ಚಾಳಿಗೊಂದು ಉದಾಹರಣೆ.ಸಂಘಟನೆ ಕಾರ್ಯವೆಂದರೆ ಏನೂ ಕೆಲಸವಿಲ್ಲದಾಗ ಮಾಡುವ ಕಾರ್ಯ ಎಂಬ ಕೆಟ್ಟ ಮನಸ್ಥಿತಿ.!!!???

ಇಂದು ನಾವು ಬದಲಾವಣೆ ಅಲ್ಲ.. ಪರಿವರ್ತನೆ ತರಬೇಕಾಗಿದೆ. ಭೂಮಿ ಗಂಟೆಗೆ 30 ಕಿಮೀ ವೇಗದಲ್ಲಿ ನಿರಂತರವಾಗಿ, ನಿಯಮಿತವಾಗಿ, ತನ್ನ ಕಕ್ಷೆಯನ್ನು ಬಿಡದೇ ಸುತ್ತುತ್ತಿದೆ. ಈ ಕಾರಣಕ್ಕೆ ಹಗಲು-ರಾತ್ರಿ, ಬೆಳಕು-ಕತ್ತಲು ಆಗುತ್ತಿದೆ. 12 ಗಂಟೆ ಪ್ರಯಾಣದ ಅವಧಿಯಲ್ಲಿ ಕ್ರಮಿಸುವ ದೂರ ಕಲ್ಪನೆಗೆ ನಿಲುಕದ್ದು.. ಹಾಗಾಗಿ ಪರಿವರ್ತನೆ. ನಾವು ಮಾಡಬೇಕಾದ ಪರಿವರ್ತನೆ ಇದು.


ವಿವಿಧ ಹಂತದ ಕಾರ್ಯಕರ್ತರ, ತ್ಯಾಗ, ಸಮರ್ಪಣೆ, ನಾಯಕತ್ವ, ಕರ್ತೃತ್ವ, ನೇತೃತ್ವದ ಕಾರಣ ಸುವರ್ಣ ಕ್ಷಣಗಳಲ್ಲಿ ಇತಿಹಾಸ ನಿರ್ಮಾಣ ಸ್ಥಿತಿಯಲ್ಲಿ ನಾವಿಂದು ಇದ್ದೇವೆ…

ಶಿವಾಜಿ ತನ್ನ ಹೋರಾಟದಿಂದ, ಸ್ನೇಹಪೂರ್ವ ನಡೆಗಳಿಂದ, ದೂರಗಾಮಿ ರಾಷ್ಟ್ರಹಿತ ದೃಷ್ಟಿಯಿಂದ, ಜಾತಿ, ಮತ, ಅಂತಸ್ತು ಮೀರಿ ಯೋಗ್ಯತೆ, ಅರ್ಹತೆ, ಶೀಲದ, ಆಧಾರದ ಮೇಲೆ ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡಿದ ಪರಿಣಾಮ ಆತ “ಹಿಂದವಿ ಸ್ವರಾಜ್ಯದ ಸಂಸ್ಥಾಪಕ” ನಾಗಿದ್ದು, “ಛತ್ರಪತಿ ಶಿವಾಜಿ” ಆಗಿ ಜನರ ಮನದಲ್ಲಿ ಇಂದಿಗೂ ಉಳಿದಿರುವುದು.


ಸ್ವತಂತ್ರದ ಸುವರ್ಣ ಆಚರಣೆ ಸಂದರ್ಭ ಬರುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಮರರಾದವರ ನೆನಪು ನಮ್ಮನ್ನು ಕಾಡಬೇಕಾಗಿದೆ.ಹೃದಯ ತುಂಬಿ ಮಿಡಿಯಬೇಕಾಗಿದೆ. ಯಾವುದೇ ಅಧಿಕಾರ ಸ್ಥಾನ ಸಿಗದ, ಕೇವಲ ಸಂಘಟನೆ ಕಾರ್ಯ, ಜೀವನ ಧ್ಯೇಯ ಎಂದು ಕಾರ್ಯ ಮಾಡುತ್ತಿರುವವರ ನೆನಪಾಗಲಿ.ಜಾರುವ ಜಾಗ ಗುರುತಿಸುವ ಕಾರ್ಯ ನಮ್ಮಿಂದ ಆರಂಭವಾಗಲಿ.

“ಜಾನಾಮಿ ಧರ್ಮಮ್..ನ ಚ ಮೇ ಪ್ರವೃತ್ತಿ: ..ಜಾನಾಮ್ಯಧರ್ಮಮ್ .. ನ ಚ ಮೇ ನಿವೃತ್ತಿ:” ಇದು ದುರ್ಯೋಧನನ ಪ್ರಸಿದ್ಧ ವಾಕ್ಯ.ರಾಜನಾಗಿ ಮೆರೆದಿದ್ದ ದುರ್ಯೋಧನ.

ನಾವೂ ರಾಜಕಾರಣದಲ್ಲಿ ಇರುವರು. ಇನ್ನೂ ಬಹಳ ದೂರ, ದೀರ್ಘಕಾಲ ಸಾಗಬೇಕಾಗಿದೆ. ರೋಗಾಣುಗಳನ್ನು ಗುರುತಿಸೋಣ. ಚಿಕಿತ್ಸೆ ಪಡೆಯೋಣ ಮತ್ತು ಮದ್ದು ಅರೆಯೋಣ.
ನಮ್ಮ ಪಾರ್ಟಿಯ ವಿಶಿಷ್ಟತೆ ನಮ್ಮನ್ನ ಉಳಿಸಲಿ, ಬೆಳೆಸಲು, ಕಾಪಾಡಲಿ. ಗುರಿ ತಲುಪಿಸುವ ದಾರಿಯ ಬುತ್ತಿಯಾಗಲಿ, ದಾರಿದೀಪವಾಗಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments