ಸಾಕ್ಷಿಪ್ರಜ್ಞೆ ಎಂದರೇನು?
– ಎಂ .ಎ . ಶ್ರೀರಂಗ
ಬುದ್ಧಿಜೀವಿ ಎಂಬ ಪದದ ಜತೆಜತೆಯಲ್ಲೇ ಬರುವ ಈ ಸಾಕ್ಷಿಪ್ರಜ್ಞೆ ಎಂದರೇನು ಎಂದು ಯೋಚಿಸಲು ಪ್ರಾರಂಭಿಸಿದರೆ ವಿಸ್ಮಯವಾಗುತ್ತದೆ. ಎಲ್ಲರಿಗೂ ತಿಳಿದಂತೆ ಸಾಕ್ಷಿ ಎಂಬ ಮಾತು ಕೇಳಿಬರುವುದು ಕೋರ್ಟಿನ ಕಲಾಪಗಳಲ್ಲಿ. ಯಾವುದೇ ಕೇಸು ನಿಲ್ಲಬೇಕಾದರೆ ಅದಕ್ಕೆ ತಕ್ಕ ಸಾಕ್ಷಿ ಬೇಕು. ಸಾಕ್ಷಿಯ ಅರ್ಥ ರುಜುವಾತು, ಕಣ್ಣಿನಿಂದ ನೋಡಿದವನು. ಪ್ರಜ್ಞೆಯ ಅರ್ಥ ಎಚ್ಚರ, ತಿಳುವಳಿಕೆ,ಬುದ್ಧಿ. ಆದರೆ ಈ ಎರಡೂ ಪದಗಳು ಸೇರಿ ಉದ್ಭವಿಸಿರುವ ಈ ‘ಸಾಕ್ಷಿಪ್ರಜ್ಞೆ ‘ ಎಂದರೇನು ಎಂದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಕೇವಲ ತಿಳುವಳಿಕೆಯಿಂದ ಒಂದು ಘಟನೆಯನ್ನು ನೋಡಿದವನು ಸಾಕ್ಷಿಪ್ರಜ್ಞೆಯವನು ಎಂದು ಹೇಳಲು ಸಾಧ್ಯವಿಲ್ಲ. ಆ ಘಟನೆಯನ್ನು ಆಯಾ ಕಾಲಕ್ಕೆ ತಕ್ಕಂತೆ ತಮ್ಮ ಲಾಭವನ್ನು ಗಮನದಲ್ಲಿಟ್ಟುಕೊಂಡು ಅರ್ಥೈಸಿ ಹೇಳುವ ಚಮತ್ಕಾರಿಕ ಶಕ್ತಿಗೆ ಸಾಕ್ಷಿಪ್ರಜ್ಞೆ ಎಂದು ಹೇಳಬಹುದು.
ಈಗ ಬುದ್ಧಿಜೀವಿಗಳಿಗೆ ಇರುವ ಸಾಕ್ಷಿಪ್ರಜ್ಞೆ ಎಂಬ (ಬಹುಶಃ ಕನ್ನಡ ಸಾಂಸ್ಕೃತಿಕ ಲೋಕದಲ್ಲಷ್ಟೇ ಇರಬಹುದಾದ) ಸವಲತ್ತಿನ ಬಗ್ಗೆ ಹೇಳುವುದಾದರೆ ಅದಕ್ಕೆ ಕೊನೆಯಿಲ್ಲ ಮೊದಲಿಲ್ಲ. ಅದೊಂದು ತರಹ ಆಲ್ ಇಂಡಿಯಾ ಪರ್ಮಿಟ್ ಇರುವ ವಾಹನದಂತೆ. ಮತ್ತೆ ಕೆಲವೊಮ್ಮೆ ವಿದೇಶದ ಪಾಸ್ಪೋರ್ಟ್ ಮತ್ತು ವೀಸಾ ಸಹ ಅದಕ್ಕೆ ಸಿಗುವುದುಂಟು. ಭಾರತದ ಯಾವ ಮೂಲೆಯಲ್ಲಿ ಏನೇ ಅಚಾತುರ್ಯ ನಡೆಯಲಿ ಅದಕ್ಕೆ ಕಾರಣ ಏನು ಎಂದು ತನಿಖೆ ನಡೆಯುವ ಮೊದಲೇ ಈ ಸಾಕ್ಷಿಪ್ರಜ್ಞೆ ಎಂಬ ವಿಶಿಷ್ಟ ಕಣ್ಣು, ಕಿವಿ ಮತ್ತು ಮಿದುಳು ಇರುವ ಬುದ್ಧಿಜೀವಿಗಳ ಪ್ರತಿಕ್ರಿಯೆ ಸಿದ್ದವಾಗಿರುತ್ತದೆ. . ‘ ನಮ್ಮ ಸದ್ಯದ ರಾಜಕೀಯ ವ್ಯವಸ್ಥೆ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ ಇದು ಬದಲಾಗದ ಹೊರತು ಪ್ರಯೋಜನವಿಲ್ಲ. ನಾಳೆ ನಾವು ಧರಣಿ ಕೂರುತ್ತೇವೆ. ಹಕ್ಕೊತ್ತಾಯ ಮಾಡುತ್ತೇವೆ’. ( ಇಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಅಂದರೆ ಇವರಿಗೆ ಅಪ್ರಿಯವಾದ ಪಕ್ಷ ಅಧಿಕಾರದಲ್ಲಿರುವುದು ಎಂದು ಅರ್ಥ). ಯಾರಾದರೂ ಹಿಂದಿನ ಸರ್ಕಾರವಿದ್ದಾಗಲೂ ಇದೆ ರೀತಿ ನಡೆದಿತ್ತು. ಆದರೆ ಆಗ ನೀವು ಸುಮ್ಮನಿದ್ದಿರಲ್ಲ ಏಕೆ ಎಂದು ಕೇಳಿದರೆ ಏನಾದರೊಂದು ಹೇಳಿ ಆ ಪ್ರಶ್ನೆಗೆ ನೇರ ಉತ್ತರಕೊಡದೆ ಆಗಿನ ಸನ್ನಿವೇಶ ಮತ್ತು ಕಾಲವನ್ನು ಈಗಿನದಕ್ಕೆ ಹೋಲಿಸಬಾರದು ಎಂದು ನುಣುಚಿಕೊಳ್ಳುತ್ತಾರೆ. ( ಕಾರಣ ಆಗ ಇದ್ದ ಸರ್ಕಾರ ಇವರಿಗೆ ಪ್ರಿಯವಾಗಿತ್ತು. ಇವರನ್ನು ಓಲೈಸುತ್ತಿತ್ತು ಅಷ್ಟೇ ಗೂಡಾರ್ಥ). ವಿದೇಶದಲ್ಲಿ ಸರ್ಕಾರ ಬದಲಾದರೆ ಆ ದೇಶದ ಪ್ರಜೆಗಳಿಗಿಂತ ಹೆಚ್ಚಾಗಿ ಈ ಸಾಕ್ಷಿಪ್ರಜ್ಞೆಗಳಿಗೆ ಸಂತೋಷ ಅಥವಾ ವ್ಯಸನವಾಗುತ್ತದೆ . ಅದಕ್ಕೊಂದು ಪ್ರತಿಕ್ರಿಯೆ. ಹೀಗೆ ಬೆಳಗ್ಗೆ ಎದ್ದಾಗಿಲಿಂದ ರಾತ್ರಿ ಮಲಗುವ ತನಕ ದೇಶ ವಿದೇಶದ ವಿದ್ಯಮಾನಗಳ ಬಗ್ಗೆಯೇ ಇವರಿಗೆ ಚಿಂತೆ.
ಇನ್ನು ಇವರ ಪ್ರಕಾರ ಕನ್ನಡ ಸಾಹಿತ್ಯ ಒಂದು ಹಂತದ ನಂತರ ನಿಂತ ನೀರಾಗಿದೆ. ಯಾವುದೇ ಭಾಷಣವಿರಲಿ, ಚರ್ಚೆಯಿರಲಿ ಅಥವಾ ಲೇಖನ ಬರೆಯಲಿ ಇವರು ಪಟ್ಟಿ ಮಾಡಿರುವ ಒಂದಷ್ಟು ಜನ ಸಾಹಿತಿಗಳನ್ನು ಮತ್ತು ಅವರ ಅದದೇ ಕೃತಿಗಳನ್ನು ಉದಾಹರಿಸಲೇಬೇಕು. ಅವರಲ್ಲಿ ಹಲವರು ಈಗ ಇಲ್ಲ. ಉಳಿದರು ಬರೆಯುವುದನ್ನು ನಿಲ್ಲಿಸಿ ಬಹಳ ಕಾಲವಾಗಿದೆ. ಇವರುಗಳ ಓದು ಅಷ್ಟಕ್ಕೇ ನಿಂತುಹೋಗಿದೆಯೇ? ಇವರ ಪಟ್ಟಿಯಲ್ಲಿ ನಾನಾ ಕಾರಣಗಳಿಂದ ಸೇರದೇ ಹೋದ ಹಲವರು ಉತ್ತಮ ಕೃತಿಗಳನ್ನು ಬರೆದಿದ್ದಾರೆ. ಅವರ ಉಲ್ಲೇಖ ಮಾಡುವುದೇ ಇಲ್ಲ. ಹೊಸಬರು ಜೀವನದ ನಾನಾ ಮಗ್ಗಲುಗಳನ್ನು ಅನ್ವೇಷಿಸುತ್ತಿದ್ದಾರೆ. ಯಾರಾದರೂ ಅಂತಹವರ ಬಗ್ಗೆ ಮಾತಾಡಿದರೆ, ಬರೆದರೆ ಅದು ವ್ಯಕ್ತಿ ಪೂಜೆ ಮತ್ತು ಅಂಧಾಭಿಮಾನ. ಅವರು ಮಾಡಿದ್ದೂ ಅದೇ ಅಲ್ಲವೇ ಅಂದರೆ ಅಲ್ಲ. ಕಾರಣ ಅದು ಸಾಕ್ಷಿಪ್ರಜ್ಞೆಯ ಮಾತು ಬರಹ. ಅಂದರೆ ಈ ಬುದ್ಧಿಜೀವಿಗಳು ನಿರ್ಧರಿಸಿದ ಒಂದಷ್ಟು ಜನರಿಗೆ ಮಾತ್ರ ನಮ್ಮ ದೇಶ, ಭಾಷೆ, ಸಮಸ್ಯೆ, ಇತ್ಯಾದಿಗಳ ಬಗ್ಗೆ ಮಾತಾಡುವ ಅಧಿಕಾರ ಇದೆ. ಬೇರೆಯವರು ಅದು ಹಾಗಲ್ಲ ಹೀಗೆ ಎಂದು ಹೇಳಿದರೆ ಇವರಿಗೆ ಅದು ಪ್ರಭುತ್ವವಾದಿ, ವಸಾಹತುಶಾಹಿ ನಿಲುವಾಗಿ ಕಾಣುತ್ತದೆ.
ಸಾಕ್ಷಿಪ್ರಜ್ಞೆಯವರ ಇನ್ನೊಂದು ಗುಣ ಎಂದರೆ ಶಾಂತಿ, ಸಹನೆ ಮತ್ತು ಅಹಿಂಸೆಯ ಜತೆಜತೆಯಾಗೇ ಅಶಾಂತಿ, ಅಸಹನೆ ಮತ್ತು ಹಿಂಸೆಯನ್ನೂ ಕಾಲ ಕಾಲಕ್ಕೆ ತಕ್ಕಂತೆ ಬೆಂಬಲಿಸುವುದು. ನಕ್ಸಲಿಸಂ, ಮಾವೋವಾದಿಗಳನ್ನು ಸರಕಾರ ನಿಗ್ರಹಿಸಿದರೆ ಅದು ಇವರಿಗೆ ಮಾನವ ಹಕ್ಕುಗಳ ದಮನವಾಗಿ ಕಾಣುತ್ತದೆ. ಆದರೆ ನಕ್ಸಲರಿಂದ, ಮಾವೋವಾದಿಗಳಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಇವರು ಮಾತಾಡುವುದಿಲ್ಲ. ಸಾಕ್ಷಿಪ್ರಜ್ಞೆಯ ಮುಂದಾಳುಗಳ ಪ್ರಕಾರ ನಕ್ಸಲ್ ಮತ್ತು ಮಾವೋವಾದಿಗಳು ಗ್ರಾಮ ಸ್ವರಾಜ್ಯ ಸ್ಥಾಪಿಸುವ ಮತ್ತು ಆ ಮೂಲಕ ಜಾಗತೀಕರಣ ಮತ್ತು ವಸಾಹತುಶಾಹಿಗಳಿಂದ ನಮ್ಮ ಪ್ರಕೃತಿದತ್ತವಾದ ಅಮೂಲ್ಯ ಸಂಪನ್ಮೂಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಬೆಂಬಲ ಕೊಡಬೇಕು. ಹೀಗೆ ಹೊರಗಿದ್ದುಕೊಂಡೇ ನಾನಾ ರೀತಿಯಿಂದ ಬೆಂಬಲ ಕೊಟ್ಟ ಆರೋಪದ ಮೇಲೆ ಕೆಲವರನ್ನು ಸರ್ಕಾರ ಬಂಧಿಸಿದಾಗ ನಮ್ಮ ಕನ್ನಡದ ಕೆಲವು ಬುದ್ಧಿಜೀವಿಗಳು ಆ ಬಂಧಿತರಿಗೆ ಬೆಂಬಲ ಕೊಡಲು ಮತ್ತು ಸರ್ಕಾರದ ನಡೆಯನ್ನು ಟೀಕಿಸಲು ನಾನು ನಗರ ನಕ್ಸಲ(ಅರ್ಬನ್ ನಕ್ಸಲ್) ಎಂಬ ಬೋರ್ಡ್ ಅನ್ನು ಕೊರಳಿಗೆ ನೇತುಹಾಕಿಕೊಂಡು ನಗರದ ರಸ್ತೆ ಬದಿಯಲ್ಲಿ ನಿಂತುಕೊಂಡು ಜನರ ಮತ್ತು ಸುದ್ದಿ ಮಾಧ್ಯಮಗಳ ಗಮನ ಸೆಳೆದರು. ಅದು ಅವರ ಸಾಕ್ಷಿಪ್ರಜ್ಞೆಯ ಪ್ರತೀಕ. ಆ ಮೂಲಕ ಒಂದಷ್ಟು ದಿನ ಇವರುಗಳ ಬಗ್ಗೆಯೇ ಚರ್ಚೆ.
ಸಾಕ್ಷಿಪ್ರಜ್ಞೆಯ ಮುಂದಾಳುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಕಾರಣ ಅದು ಸಂತೆ, ಜಾತ್ರೆ ಮತ್ತು ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿಯಾಗಿ ಹೋಗಿದೆ ಎಂದು. ಅದಕ್ಕೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಸಹ ನಡೆಸಿದರು. ಅದಕ್ಕೊಂದು ಸೈದ್ಧಾಂತಿಕ ಕಾರಣ ಕೊಟ್ಟರು. ನಂತರದಲ್ಲಿ ಅವರೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರೂ. ಆಗ ಅವರ ಸಾಕ್ಷಿಪ್ರಜ್ಞೆ ಕಾಡಲಿಲ್ಲ. ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದು ಸಾಕ್ಷಿಪ್ರಜ್ಞೆಯ ಇನ್ನೊಂದು ಮುಖ. ಅದೇ ರೀತಿ ರಾಜಕೀಯವನ್ನು ಕಂಡರೆ ಉರಿದುಬೀಳುವ ಇವರು ವಿಧಾನ ಪರಿಷತ್ತಿನ ಸದಸ್ಯರೂ ಆದರು. ವ್ಯವಸ್ಥೆಯಿಂದ ದೂರವಿದ್ದಾಗ ಟೀಕಿಸುವುದು ನಂತರದಲ್ಲಿ ತಾವೇ ಅದರ ಭಾಗವಾದಾಗ ಸರ್ಕಾರಿ ಸವಲತ್ತುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನುಭವಿಸುವುದು ಸಾಕ್ಷಿಪ್ರಜ್ಞೆಯ ಮತ್ತೊಂದು ಮುಖ. ಸರ್ಕಾರ ಇಂತಹವರನ್ನು ಯಾವುದಾದರೂ ಅಕಾಡೆಮಿಗೆ ಅಥವಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದರೆ ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ‘ಇಂತಹ ಗೌರವ ಅವರಿಗೆ ಕೊಟ್ಟು ಸರ್ಕಾರ ತನ್ನನ್ನು ತಾನೇ ಗೌರವಿಸಿಕೊಂಡಿದೆ ಮತ್ತು ಅವರಿಂದ ಆ ಸ್ಥಾನದ ಘನತೆ ಹೆಚ್ಚಾಗುತ್ತದೆ’ ಎಂದು ಹೇಳಿಕೆ ಕೊಡುತ್ತಾರೆ. ತಮಗೆ ಆಗದವರು ಸ್ಥಾನ ಪಡೆದರೆ ಪಕ್ಷಪಾತ ಮಾಡಿದ ಸರ್ಕಾರದ ನಡತೆ ಇವರ ಗುಂಪಿನವರಿಗೆ ಸಿಕ್ಕಾಗ ನಿಷ್ಪಕ್ಷಪಾತವಾಗಿ ನಡೆದುಕೊಂಡು ಅರ್ಹರನ್ನು ಗೌರವಿಸುವ ಉತ್ತಮ ಪರಂಪರೆಯದ್ದಾಗಿ ಕಾಣುತ್ತದೆ.
ಆರು ವರ್ಷಗಳ ಹಿಂದೆ ‘ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿದೆ ಮತ್ತು ಅಸಹಿಷ್ಣುತೆ’ ಜಾಸ್ತಿಯಾಗಿದೆ ಎಂದು ‘ಪ್ರಶಸ್ತಿ ವಾಪಸ್’ ಎಂಬ ನಾಟಕ ನಡೆಯಿತು. ಕೆಲವು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಕೊಟ್ಟ ಪ್ರಶಸ್ತಿಯನ್ನು ಹಿಂತಿರುಗಿಸಿದರು ಮತ್ತೆ ಕೆಲವರು ಆ ಅಕಾಡೆಮಿಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ಅದೇ ರೀತಿ ಕೇಂದ್ರ ಸರ್ಕಾರಾದ ವಿವಿಧ ಸಂಸ್ಥೆಗಳಿಂದ ಕೆಲವರು ಹೊರಬಂದರು. ಈ ಹಿಂದೆಯೂ ಅವರು ಹೇಳಿದ ಅಸಹಿಷ್ಣುತೆ ಇತ್ತು. ಆದರೆ ಆಗ ಅವರ ಸಾಕ್ಷಿಪ್ರಜ್ಞೆ ರಜೆ ತೆಗೆದುಕೊಂಡಿತ್ತು. ಸುಮಾರು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದ ತಮ್ಮ ದರ್ಬಾರನ್ನು ಕೆಲವರು ಪ್ರಶ್ನಿಸಿದ್ದೇ ಇದಕ್ಕೆ ಕಾರಣ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರಾದ ಇವರಿಗೆ ಭಿನ್ನಾಭಿಪ್ರಾಯ ಕಂಡರೆ ಆಗದು.
ಕೊನೆಯದಾಗಿ ಈ ಸಾಕ್ಷಿಪ್ರಜ್ಞೆಯ ವಕ್ತಾರರಿಗೊಂದು ಮಾತು. ನಾವೇ ಇದೆಲ್ಲವನ್ನೂ ಮೊದಲ ಬಾರಿಗೆ ಮಾಡುತ್ತಿದ್ದೇವೆ ಎಂಬ ಒಣ ಜಂಭವನ್ನು ಬಿಡಿ. ನಮ್ಮಿಂದಲೇ ಪ್ರತಿದಿನ ಸೂರ್ಯ ಚಂದ್ರರು ಬೆಳಕು ನೀಡುತ್ತಿದ್ದಾರೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ನಿಮ್ಮ ಭ್ರಮೆಗಳಿಂದ ಹೊರಗೆ ಬನ್ನಿ. ನಿಮ್ಮ ಬಣ್ಣ ಬಯಲಾಗಿದೆ. ನಿಮ್ಮ ಸಾಕ್ಷಿಪ್ರಜ್ಞೆಯ ಹಂಗಿಲ್ಲದೆ ಈ ಪ್ರಪಂಚ ನಡೆದಿದೆ, ಈಗಲೂ ನಡೆಯುತ್ತಿದೆ ಮತ್ತು ಮುಂದೂ ನಡೆಯುತ್ತದೆ.