ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 25, 2022

ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?

‍ನಿಲುಮೆ ಮೂಲಕ

– ಅನೇಕಲೇಖ

ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.

ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.

ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.

ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ?  ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.

ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments