ವಿಷಯದ ವಿವರಗಳಿಗೆ ದಾಟಿರಿ

ಮೇ 13, 2022

ಡಿಕೆ ಶಿವಕುಮಾರ್ ಅವರ ಗುರಿಯೇನು?

‍ರಾಕೇಶ್ ಶೆಟ್ಟಿ ಮೂಲಕ


– ಅಜಿತ್ ಶೆಟ್ಟಿ ಹೆರಂಜೆ

ಡಿಕೆಶಿಯವರು ಮೊದಲು ಯಾರೊಡೊನೆ ಜಗಳವಾಡಬೇಕು ಎಂದು ತೀರ್ಮಾನ ಮಾಡಬೇಕು.  ವರ್ತಮಾನದ ರಾಜಕಾರಣದಲ್ಲಿ ಅವರಿಗೆ ತಮ್ಮ ಸ್ವಪಕ್ಷೀಯರ ಜೊತೆಗೆ ಜಗಳವಾಡುವುದು ಮುಖ್ಯವೋ ಅಥವಾ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಮುಖ್ಯವೋ ಎಂಬ ತೀರ್ಮಾನಕ್ಕೆ ಅವರ ಮೊದಲು ಬರಬೇಕು. ಈ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅವರೊಬ್ಬರೇ ಇಡೀ ಕೆಪಿಸಿಯನ್ನು ತಲೆಯಲ್ಲಿ ಹೊತ್ತವರಂತೆ ಆಡುತ್ತಿರುವುದು ಇತ್ತೀಚೆಗೆ ಕಾಣುತ್ತಿದೆ. ತನ್ನನ್ನ ತಾನು   ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿದ ಪಾಪವನ್ನೆಲ್ಲಾ  ತೊಳೆಯಲು ಅವತಾರ ಎತ್ತಿ ಬಂದಿದ್ದಾರೋ ಎಂಬಂತೆ ವರ್ತಿಸಿಸುತ್ತಿದ್ದಾರೆ. ಡಿಕೆಶಿ, ಕರ್ನಾಟಕ ಕಾಂಗ್ರೆಸ್‌ ಪಕ್ಷದ ಮೊದಲ ಪ್ರದೇಶಾಧ್ಯಕ್ಷರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಸೋಜಿಗದ ಸಂಗತಿ ಅಂದರೆ ಇವರ ವರ್ತನೆ ಹಾಗಿದೆ. ಇಲ್ಲದೇ ಹೋದರೆ  ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಾಕ್ಷನೊಬ್ಬ ಹೀಗೆ ವರ್ತಿಸವುದು ಎಷ್ಟು ಸರಿ?

ಅವರ ಪಕ್ಷದೊಳಗೆ ಗುರುತರವಾದ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬ ಇನ್ನೊಂದು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾದರೆ, ಮತ್ತು ಅದು ಪಕ್ಷ ವಿರೋಧಿ ಚಟುವಟಿಕೆ ಅಂತ ಅನ್ನಿಸದರೆ ಅವರು ಆ ವ್ಯಕ್ತಿಯ ಬಳಿ ನೇರವಾಗಿ ಮಾತನಾಡಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಅಲ್ವೆ?  ಅವರ ಪಕ್ಷದ ನಾಯಕರೊಡನೆ ಮಾತನಾಡಲೂ ಡಿಕೆಶಿ ಅವರಿಗೆ ಮಾಧ್ಯಮದ ಅಗತ್ಯ ಬಂತು ಅಂದರೆ, ಅವರ ಪಕ್ಷದೊಳಗೆ ಸಂಬಂಧ ಬಹಳ ಹದಗೆಟ್ಟಿದೆ ಅಂತ ತಾನೆ ಅರ್ಥ. ಅಷ್ಟಕ್ಕೂ ಎಂ ಬಿ ಪಾಟೀಲರು  ಕಾಂಗ್ರೆಸ್‌ ಪಕ್ಷದಲ್ಲಿ ಅಂತಿಂತಾ ಕಾಂಜೀ ಪೀಂಜಿ ನಾಯಕರಲ್ಲ. ಅವರು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು. ಅರಮನೆ ಮೈದಾನದಲ್ಲಿ ಅವರ ಪದಗ್ರಹಣ ಸಮಾರಂಭ ನೋಡಿದವರಿಗೆ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಗಿಂತಲೂ ಅದು ಜೋರಾಗೆ ಇತ್ತು ಅನಿಸಿದರೆ ತಪ್ಪೇನಿಲ್ಲ. ಈ ಸಮಾರಂಭ ಕರ್ನಾಟಕ ಕಾಂಗ್ರೇಸಿನಲ್ಲಿ ಎಲ್ಲವೂ ಸರಿ ಇಲ್ಲ ಜೊತೆಗೆ ಪಕ್ಷದ ಹೈ ಕಮಾಂಡ್‌ ಕೂಡ ಎಲ್ಲವನ್ನೂ ಡಿಕೆಶಿ ಅವರ ಹಗಲ ಮೇಲೆ ಹಾಕಿ  ಸುಮ್ಮನೆ ಕೂರುವ ರಿಸ್ಕ್‌ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದು ಸ್ಪಷ್ಟವಾಗಿಸುತ್ತದೆ. ಆ ಕಾರಣಕ್ಕೆ power ಬ್ಯಾಲೆನ್ಸಿಗಾಗಿ ಡಿಕೆಶಿಯ ವಿರೋಧ ಬಣಕ್ಕೂ ಸ್ವಲ್ಪ ಅಧಿಕಾರದ ಹಂಚಿಕೆ ಆಗಬೇಕು ಎಂಬ ಕಾರಣಕ್ಕೇ ಎಂ.ಬಿ ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷರಿಗೆ  ಸಮಾನಾಂತರವಾದ ಅಧಿಕಾರ ಇರುವ ಇನ್ನೊಂದು ಹುದ್ದೆಯನ್ನ ಸೃಷ್ಟಿ ಮಾಡಿಕೊಟ್ಟಿದ್ದು.  ಅಲ್ಲಿಗೆ ರಾಜ್ಯ ಕಾಂಗ್ರೆಸ್‌ ಪಕ್ಷದ  ಚುಕ್ಕಾಣಿಯನ್ನ ಕೈ ಕಮಾಂಡ್‌ ಪೂರ್ಣ ಪ್ರಮಾಣದಲ್ಲಿ ಡಿಕೆಶಿ ಕೈಗೂ ಕೊಡದೇ ಸಿದ್ದರಾಮಯ್ಯನವರ ಬಣಕ್ಕೂ ಕೊಡದೆ ಆಟ ಆಡುತ್ತಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹಗ್ಗದ ಎರಡೂ ತುದಿಗೆ  ಬೆಂಕಿ ಹಾಕಿದೆ.  ಈ ಬೆಂಕಿಯಲ್ಲಿ ಯಾರು ಸುಡುತ್ತಾರೆ?  ಯಾರು ಪಾರಾಗುತ್ತಾರೆ ಎಂಬುದನ್ನ ಸಮಯವೇ ನಿರ್ಧರಿಸಬೇಕು.

ಇನ್ನು ಡಿಕೆಶಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದರೆ, ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಎಲ್ಲಿಲ್ಲದ ತುಡಿತ ಇದೆ. ಆದರೆ ಅವರ ಬಗ್ಗೆ ಮಾತನಾಡುವ, ಅವರ ಬಗ್ಗೆ ಲಾಭಿ ಮಾಡುವ ಪ್ರಭಾವಿ ನಾಯಕರ ಸಂಖ್ಯೆ ರಾಜ್ಯದಲ್ಲೂ ಕೇಂದ್ರದಲ್ಲೂ  ದಿನೇ ದಿನೇ  ಕಡಿಮೆ ಆಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯನವರು ತಾನೇ ಮುಂದಿನ ಮುಖ್ಯಮಂತ್ರಿ ಎಂದು  ಒಂದಷ್ಟು ಭಾರಿ ನೇರವಾಗಿ  ಹೇಳಿಕೊಂಡರೆ  ಒಂದಷ್ಟು ಸಾರಿ ಅವರ ಬೆಂಬಲಿಗರ ಮುಖಾಂತರ ಹೇಳಿಸುತ್ತಾರೆ. ಬೆಂಬಲಿಗರು ಅಂದ್ರೆ ಸಾಮಾನ್ಯ ನಾಯಕರಲ್ಲ. ಜಮೀರ್‌ ಅಹ್ಮದ್ ಮುಖಾಂತರವೇ  ಬಹಳಷ್ಟು ಸಾರಿ ಹೇಳಿಸಿದ್ದಾರೆ.  ಇನ್ನು ಈ ವಾದ ತೀರಾ ಅತಿರೇಕಕ್ಕೆ ಹೋದಾಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ವಿತಂಡ ವಾದನ್ನೂ ಅವರೇ ಅನೇಕ ಸಾರಿ ಮಾಡಿದ್ದಾರೆ. ಕೊನೆಗೆ ಅದೂ ತಾರಕಕ್ಕೆ ಹೋದಾಗ  ತಾನೂ ಕೂಡ ದಲಿತನೇ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಬಂದ ತೀರಾ ಇತ್ತಿಚೀಗಿನ ಹೇಳಿಕೆ ಎಂದರೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲರದ್ದು. ಅವರೂ ಕೂಡ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟರು. ಇದು ಹಿಂದಿನಿಂದಲೂ ತೆರೆಯ ಮರೆಯಲ್ಲಿ ಎಂ.ಬಿ ಪಾಟೀಲರು,  ಡಿಕೆಶಿ ನಡುವೆ ಇದ್ದ ರಾಜಕೀಯ ಕುಸ್ತಿ ತೆರೆಯ ಮುಂದೆ ಬರಲು ಪ್ರಮುಖ ಕಾರಣ ಆಯಿತು, ಒಂದಷ್ಟು ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಕಳೆದ ಭಾನುವಾರ ಸುವರ್ಣ ಸುದ್ದಿವಾಹಿನಿಯಲ್ಲಿ ಡಿಕೆಶಿಯವರನ್ನ  ನೇರವಾಗಿ ಪ್ರಶ್ನೆ ಮಾಡುವ ಅವಕಾಶ ನನಗೆ ಸಿಕ್ಕಿತು. ಸಮಯದ ಅಭಾವದ ಕಾರಣಕ್ಕೆ ಅಲ್ಲಿ  ಚರ್ಚೆಯ ಪೂರ್ಣ ಭಾಗವನ್ನು  ಪ್ರಸಾರ ಮಾಡಿಲ್ಲ. ಇಲ್ಲಿ ಕೂಡ ಅಜಿತ್‌ ಹನಮಕ್ಕನವರ್‌ ಅವರು ಡಿಕೆಶಿ ಅವರಿಗೆ ಒಂದಷ್ಟು ಮುಜುಗರ ತರುವ ಪ್ರಶ್ನೆಗಳನ್ನ ಕೇಳಿದರು, ಅದಕ್ಕೆ ಡಿಕೆಶಿ ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರು.  ಹಿಂದುತ್ವದ ವಿಚಾರ ಬಂದಾಗ ನೀವು ಯಾಕೆ ಡಬ್ಬಲ್ ಸ್ಟಾಂಡರ್ಡ್‌  ತಗೊಂತೀರಿ ಅನ್ನುವ ಪ್ರಶ್ನೆಗೆ  ಡಿಕೆಶಿ ಬಹಳಾ ವಿದ್ವಾಂಸನಂತೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಅಸಲಿಗೆ ವಿಷಯ ಅದಲ್ಲ. ಈ ವಿಚಾರದಲ್ಲಿ ಪಕ್ಷದೊಳಗೆಯೇ ಅವರ ನಿಲುವು ಮತ್ತು ಅವರ ಅವರ ವಿರೋಧಿ ಬಣದ ನಿಲುವು ಬೇರೆ ಬೇರೆ. ಸಿದ್ದರಾಮಯ್ಯ  ತಾನು ಮುಸಲ್ಮಾನರ ಪರ ಎಂದು ತಮ್ಮ ನಡೆ ನುಡಿಗಳ ಮೂಲಕ ನೇರವಾಗಿ ತೋರಿಸಿಕೊಂಡು ಬರುತ್ತಾರೆ. ಆದರೆ  ಡಿಕೆಶಿಯವರ ಅಭಿಪ್ರಾಯ ತಾವು ಕಳೆದ ಸಾರಿ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣವೆ ಸರ್ಕಾರದ ಹಿಂದೂ ವಿರೋಧಿ ನೀತಿ ಎಂಬುದು. ಈ ಭಾರಿಯೂ ಅಂತಹ ನಿಲುವನ್ನು ತೆಗೆದುಕೊಂಡರೆ ಮತ್ತೆ ಪಕ್ಷಕ್ಕೆ ಹಾನಿಯಾಗಾಲಿದೆ. ಈಗ ತಾನೇ ಅಧ್ಯಕ್ಷ ಬೇರೆ. ಪಕ್ಷ ಈ ಭಾರಿಯೂ ಸೋತರೆ ತಾವು ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯಲಿದೆ ಎಂಬದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸಂಪೂರ್ಣವಾಗಿ ಹಿಂದುಗಳನ್ನು  ವಿರೋಧಿಸುವ ಸಾಹಸಕ್ಕೆ  ಹೋಗಲಿಲ್ಲ, ಜೊತೆಗೆ ತಮ್ಮ ಪಕ್ಷದ ಎಲ್ಲರಿಗೂ ಹಾಗೆಯೇ ವ್ಯವಹರಿಸಲೂ ಆದೇಶ ಕೊಟ್ಟರು. ಆದರೆ ಅವರನ್ನ ವಿರೋಧಿಸಲೆಂದೇ ಇರುವ, ಅವರಿಗೆ ಮುಜಗರ ಉಂಟು ಮಾಡಲೇಬೇಕು ಎಂದು ಇರುವ ಇನ್ನೊಂದು ಬಣ ಇವರ ಮಾತನ್ನ ದಿಕ್ಕರಿಸಿ ಅಗೊಮ್ಮೆ ಈಗೊಮ್ಮೆ ಇವರು ಹಾಕಿದ ಬೇಲಿ ದಾಟಿ  ಡಿಕೆಶಿ ಅವರಿಗೆ ಮುಜುಗರ ಮಾಡುತ್ತಲೇ ಇದೆ. ಈ ಬೆಳವಣಿಗೆಯ ಕಾರಣಕ್ಕೆ ಒಂದು ಕಡೆ ಕಾಂಗ್ರೆಸ್‌ ಪಕ್ಷವನ್ನು ಹಿಂದೂಗಳೂ ನಂಬದ, ಇನ್ನೊಂದು ಕಡೆ ಅವರ ಪಾರಂಪರಿಕೆ ಮತದಾರರಾದ ಮುಸಲ್ಮಾನರೂ ನಂಬದ ಒಂದು ಇಕ್ಕಟ್ಟಿನ ಪರಿಸ್ಥಿತಿ ಡಿಕೆಶಿ  ನೇತೃತ್ವದಲ್ಲಿ ಕಾಂಗ್ರೆಸ್ ‌ ಪಕ್ಷಕ್ಕೆ ಎದುರಾಗಿದೆ ಎಂಬುದ ಕಾಂಗ್ರೆಸ್‌ ವಲಯದಲ್ಲಿ ಬಹಳಷ್ಟು ಜನರಿಗೆ ನೋವು ಕೂಡ ತಂದಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿ ಇಲ್ಲ, ಇದು ಮಾದ್ಯಮಗಳು ಕಟ್ಟಿದ ಕಟ್ಟು ಕಥೆ ಅಲ್ಲ, ಸತ್ಯ ವಿಚಾರ ಎಂಬುದು ನನಗೂ ಅನುಭವಕ್ಕೆ ಬಂತು.  ಅಜಿತ್‌ ಹನಮಕ್ಕನವರ್‌ ಕೇಳಿದ ಒಂದು ಪ್ರಶ್ನಯಲ್ಲಿ ನೀವು ಯಾಕೆ ಮುಸಲ್ಮಾನರ ಪರ ಮಾತನಾಡಲಿಲ್ಲ? ಸಿದ್ದರಾಮಯ್ಯ ಒಂದು ಸ್ಟ್ಯಾಂಡ್‌ ತೆಗೆದುಕೊಂಡ್ರು ಎಂದಾಗ, ಡಿಕೆಶಿ ಅದಕ್ಕೆ ಸಿದ್ದರಾಮಯ್ಯನವರು ಮಾತನಾಡಿದರೆ ಅದು ಕಾಂಗ್ರೆಸ್ ‌ ಪಕ್ಷ ಮಾತನಾಡಿದಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು. ಅವರು ಆ ಉತ್ತರಕ್ಕೆ ನಾನು  ಹಿಂದೆ ಸಿದ್ದರಾಮಯ್ಯ ತೆಗೆದುಕೊಂಡ ಹಿಂದೂ ವಿರೋಧಿ ನೀತಿಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅದೇ ಲಾಜಿಕ್ಕಿನಲ್ಲಿ ಉತ್ತರ ಕೊಡಲಾಗದ ಡಿಕೆಶಿ ನೀವು ಅದನ್ನ  ಸಿದ್ದರಾಮಯ್ಯನವರ ಬಳಿಯೇ ಕೇಳಿ ಎಂದು ಹೇಳುತ್ತಾರೆ. (ಚರ್ಚೆಯ ಆ ಭಾಗ ವಾಹಿನಿಯಲ್ಲಿ ಪ್ರಸಾರ ಆಗಲಿಲ್ಲ, ಬಹುಶಃ ಸಮಯದ ಅಭಾವದ ಕಾರಣಕ್ಕೆ ಇರಬೇಕು) ಹೀಗೆ ಸಾಗಿದ ಚರ್ಚೆಯ ಒಂದು ಭಾಗದಲ್ಲಿ, ಕಾಂಗ್ರೆಸ್‌ ಪಕ್ಷದ ಎನ್‌ ಎಸ್‌ ಯು ಐ ನ ಅದ್ಯಕ್ಷನೊಬ್ಬ ನೀವು ಮುಂದೆ ಮುಖ್ಯಮಂತ್ರಿ ಆದರೆ ಎಂತಹಾ ಯೊಜನೆಗಳನ್ನ ಜಾರಿಗೆ ತರುತ್ತೀರಿ ಎಂದು ಕೇಳಿದಾಗ ತಕ್ಷಣವೇ ಆತನನ್ನು ನಿಲ್ಲಿಸಿದ ಅಜಿತ್‌ ಹನಮಕ್ಕನವರ್  ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ  ಯಾರು ಎಂಬುದರ ಬಗ್ಗೆಯೇ ಗೊಂದಲ ಇದೆ. ನಿಮಗೆ ಯಾರು ಮುಖ್ಯಮಂತ್ರಿ ಆಗಬೇಕು ಅಂದಾಗ ಆತ ಸ್ವಲ್ಪ ಅಳುಕುತ್ತಲೇ ಡಿಕೆಶಿ ಅಂದ. ಹಿಂದೆ ನಮ್ಮದು ಸಾಮೂಹಿಕ ನಾಯಕತ್ವ, ಪಕ್ಷ ಮುಖ್ಯಮಂತ್ರಿಯ ತೀರ್ಮಾನ ಮಾಡಲಿದೆ ಎಂಬ ನೈತಿಕತೆಯ ಮಾತನಾಡಿದ್ದ ಡಿಕೆಶಿಗೆ ಹುಡುಗನ ಈ ಮಾತು ಖುಷಿಕೊಟ್ಟಿತು ಎಂಬುದು ಅವರ ಮುಖಭಾವದಿಂದ ನನಗೆ ಅರ್ಥವಾಯಿತು. ಆ ಕ್ಷಣದಲ್ಲಿ ಅವರಿಗೆ ಕೆಲವೇ ನಿಮಿಷಗಳ ಹಿಂದೆ ಅವರೇ ಹೇಳಿದ  ಪಕ್ಷದ ತೀರ್ಮಾನದ ಮಾತು ಅವರಿಗೆ ನೆನಪು ಇರಲಿಲ್ಲ. ಈ ಮದ್ಯೆ ನಾನು ಮಾತನಾಡಿ (ಹಾಗೆ ಮಾತನಾಡುವುದು ಚರ್ಚೆಯ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ತಡೆಯಲಾಗದೆ ಒಂದು ಪ್ರಶ್ನೆ ಕೇಳಿದೆ) ಎರಡು ದಿನದ ಹಿಂದೆ ಎಂ.ಬಿ ಪಾಟೀಲರೇ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಅಂದಿದ್ದಾರೆ  ಅಂದಾಗ ಅವರ ಮುಖದಲ್ಲೊಂದು ಅಹಸನೆ ಗೆರೆ ಮೂಡಿದ್ದನ್ನು ಗಮನಿಸಿದೆ. ಅಂದಹಾಗೆ ಈ ಪ್ರಶ್ನೆಯನ್ನು ನಾನು ಚರ್ಚೆಯ ನಿಯಮಕ್ಕೆ ವಿರುದ್ದವಾಗಿ ಕೇಳಿದ ಕಾರಣ ಅದೂ ಕೂಡ ಪ್ರಸಾರ ಆಗಿಲಿಲ್ಲ.

ಒಟ್ಟಿನಲ್ಲಿ ಡಿಕೆಶಿ ಅವರ ಜೊತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದ್ದ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾಗಿ ಕಾಣಿಸಿತು. ಅವರಲ್ಲಿ ಬೌದ್ಧಿಕ ಚರ್ಚೆ ಮಾಡುವ ಸಾಮರ್ಥ್ಯ ಮತ್ತು ವ್ಯವಧಾನ ಎರಡೂ ಇಲ್ಲ ಅವರದ್ದೇನಿದ್ದರೂ “ಸ್ಕೋರ್ ಸೆಟಲ್”‌ ಮಾಡುವ ರಾಜಕಾರಣ. ಜೊತೆಗೆ ಅವರು ಮುಖ ಭಾವದಲ್ಲಿ ಸಿದ್ದರಾಮಯ್ಯನವರ ಮುಸಲ್ಮಾನರ ತುಷ್ಟಿಕರಣದ ರಾಜಕಾರಣದಿಂದಾಗಿ ಹಿಂದುಗಳ ವಿರುದ್ಧ ಮಾಡಿರುವ ಅನ್ಯಾಯದ ಪಾಪದ ಮೂಟೆಯನ್ನ ಇಡೀ ಪಕ್ಷದಲ್ಲಿ ತಾನೊಬ್ಬನೇ ಹೊತ್ತು ನಡೆಯುತ್ತಿದ್ದೇನೆ ಎಂಬ ಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಜೊತೆಗೆ ಅವರು ಪಕ್ಷದೊಳಗೆ ಮತ್ತು ಪಕ್ಷದ ಹೊರಗೆ ಒಬ್ಬಂಟಿ ಎರಡೂ ಕಡೆ ಪ್ರವಾಹದ ವಿರುದ್ದ ಈಜಾಡುತ್ತಿದ್ದಾರೆ, ಅದರಲ್ಲಿ ಬಳಲಿ ಬೆಂಡಾಗಿರುವುದೂ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ “ಸ್ಕೋರ್‌ ಸೆಟಲ್‌” ಮಾಡುವ ರಾಜಕಾರಣದಿಂದ ಹೊರಗೆ ಬಂದು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಪಕ್ಷ ಕಟ್ಟುವ ರಾಜಕಾರಣ ಮಾಡಿದರಷ್ಟೆ  ಪಕ್ಷಕ್ಕೆ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷರಿಗೆ ಉಳಿಗಾಲ. ಇಲ್ಲದೇ ಹೋದರೆ ಇವರು ದಿನಂಪ್ರತಿ ವಿರೋಧ ಪಕ್ಷಗಳಿಗಿಂತ ಸ್ವ ಪಕ್ಷದವರ ಜೊತೆಗೆ ಹೆಚ್ಚು ಜಗಳವಾಡಬೇಕಾಗುತ್ತದೆ. ಅದರ ಪರಿಣಾಮವೇನು ಎಂಬುದಕ್ಕೆ ಮಹಾ ಭಾರತದ ಕರ್ಣನಿಗಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೆ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments