ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ನೈಜದನಿ ವೀರ್ ಸಾವರ್ಕರ್
ಲೇಖಕರು : ಬಿ ಎಸ್ ಜಯಪ್ರಕಾಶ ನಾರಾಯಣ
ಪತ್ರಕರ್ತರು, ಖ್ಯಾತ ಅನುವಾದಕರು
ವೈಭವ್ ಪುರಂದರೆಯವರ ವೀರ್ ಸಾವರ್ಕರ್ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
ಸಾವರ್ಕರ್ ಜನ್ಮದಿನ (ಮೇ 28)
ವಿನಾಯಕ ದಾಮೋದರ ಸಾವರ್ಕರ್ ಎನ್ನುವ ಹೆಸರೇ ಮೈಮನಗಳಲ್ಲಿ ದೇಶಹಿತದ ಸಂಕಲ್ಪವನ್ನು ತಾಳುವಂತೆ ಮಾಡುವಂಥದ್ದು! ಇಂದು ಅವರಿದ್ದಿದ್ದರೆ 140ನೇ ವಸಂತಕ್ಕೆ ಕಾಲಿಡುತ್ತಿದ್ದರು. ವ್ಯವಸ್ಥಿತ ಅಪಪ್ರಚಾರ ಮತ್ತು ಕ್ಷುಲ್ಲಕ ಶಕ್ತಿಗಳು ಸೃಷ್ಟಿಸಿರುವ ವಿಸ್ಮೃತಿಯಲ್ಲಿ ಸಾವರ್ಕರ್ ಅವರ ಕ್ಷಾತ್ರತೇಜಸ್ಸಿಗೆ ಅನ್ಯಾಯವೆಸಗಲಾಗಿದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಇಲ್ಲಿ ಅನಾವರಣಗೊಂಡಿದೆ, ಸಾವರ್ಕರ್ ಅವರ ಸಾಚಾ ಕಥನ!
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಂಬಾ ವ್ಯವಸ್ಥಿತವಾಗಿ ಹಲವು ವಿಸ್ಮೃತಿಗಳನ್ನೂ ಹೇವರಿಕೆಗಳನ್ನೂ ಸೃಷ್ಟಿಸಲಾಗಿದೆ. ಇದಕ್ಕಾಗಿ, ನಮ್ಮನ್ನು ಬಹುಕಾಲ ಆಳಿದ ಸರಕಾರಗಳು ಸೆಕ್ಯುಲರಿಸಂ, ಧರ್ಮನಿರಪೇಕ್ಷತೆ, ಮೈನಾರಿಟಿಯಿಸಂ ಇತ್ಯಾದಿ ವಿಭ್ರಮೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿವೆ; ತಮ್ಮ ಹಿಡನ್ ಅಜೆಂಡಾ ಸಾಧಿಸಲು ಅವು ರಾಜಕೀಯ ಅಧಿಕಾರ, ಅಕಾಡೆಮಿಕ್ ಸೌಖ್ಯ, ತಾವೇ ಹುಟ್ಟುಹಾಕಿದ ನೂರಾರು ಸಂಘ ಸಂಸ್ಥೆಗಳು/ವಿಶ್ವವಿದ್ಯಾಲಯಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಂಡಿವೆ. ಇಷ್ಟೇ ಅಲ್ಲ, ಈ ಕುತಂತ್ರಗಳ ಮೂಲಕ ಸ್ವಧರ್ಮ ಮತ್ತು ಸ್ವದೇಶಗಳ ಬಗ್ಗೆ ಅಸಹ್ಯದ/ಕೀಳರಿಮೆಯ ಭಾವನೆ ಬರುವಂತೆ ಮಾಡುವಲ್ಲಿ ಈ ಶಕ್ತಿಗಳು ನಿರತವಾಗಿದ್ದವು. ಜತೆಯಲ್ಲೇ, ಭಾರತದ ಚರಿತ್ರೆಯ ಕ್ಷಾತ್ರ ತೇಜಸ್ಸಿನ ಉಜ್ಜ್ವಲ ಅಧ್ಯಾಯಗಳನ್ನು ಮರೆಮಾಚುವ ವಿಕೃತಿಯನ್ನು ಇವು ಮೈಗೂಡಿಸಿಕೊಂಡಿದ್ದವು. ದುರಂತವೆಂದರೆ, ನಾಲ್ಕೈದು ದಶಕಗಳ ಕಾಲ ಈ ʼಅತೀ ಬುದ್ಧಿವಂತಿಕೆ’ಯ ಮತ್ತು ಆತ್ಮನಾಶಕವಾದ ಕೆಲಸಗಳೆರಡೂ ಪ್ರಶ್ನಾತೀತವಾಗಿದ್ದವು!
ಭಾರತದ ಇತಿಹಾಸದಲ್ಲಿ ಇಂತಹ ವ್ಯವಸ್ಥಿತ ಅನ್ಯಾಯಕ್ಕೊಳಗಾದವರಲ್ಲಿ `ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರಿನಲ್ಲಿ ತಮ್ಮ ಚಿಕ್ಕಂದಿನಲ್ಲೇ `ಮಿತ್ರಮೇಳ’ವನ್ನು ಕಟ್ಟುವ ಮೂಲಕ, ಸಾವರ್ಕರ್ ದೇಶಾಭಿಮಾನದ ಎರಕದಲ್ಲಿ ಬೆಳೆದು ಬಂದವರು. ವಯಸ್ಕರಾದ ಮೇಲೆ, ಆ ಕಾಲದ ಎಲ್ಲ ಪ್ರತಿಭಾವಂತರಂತೆಯೇ ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದ ಅವರು, ತಮ್ಮ ಹೆಚ್ಚಿನ ಸಮಕಾಲೀನರಂತೆ ಲೌಕಿಕ ಸುಖದ ಹಾದಿಯಲ್ಲಿ ಹೋಗಲಿಲ್ಲ. ಬದಲಿಗೆ, ಅದನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ, ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ದಿನಗಳಲ್ಲೇ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಮಾರ್ಗದಲ್ಲಿ ಹೊರಟರು. ತಮ್ಮ ಪ್ರಖರ ವಿಚಾರಗಳ ಮೂಲಕ ಮದನ್ ಲಾಲ್ ಧಿಂಗ್ರಾ ತರಹದ ಕ್ರಾಂತಿಕಾರಿಗಳನ್ನು ಅವರು ರೂಪಿಸಿದರು. ಲಂಡನ್ನಿನಲ್ಲಿದ್ದ `ಇಂಡಿಯಾ ಹೌಸ್’ ಅನ್ನು ತಮ್ಮ ಚಟುವಟಿಕೆಗಳ ಆಡುಂಬೊಲವನ್ನಾಗಿ ಮಾಡಿಕೊಂಡು, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೂ ಮೊದಲು, ಭಾರತದಲ್ಲಿ ಓದುತ್ತಿದ್ದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿ ಸ್ವದೇಶಿ ಚಳವಳಿಯನ್ನು ಸಂಘಟಿಸಿ, ಸಂಚಲನ ಸೃಷ್ಟಿಸಿದ್ದರು. ಅವರು ಲಂಡನ್ನಿನಲ್ಲಿದ್ದ ದಿನಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಟುವಟಿಕೆಗಳ ವೃತ್ತಾಂತವೇ ರೋಮಾಂಚಕ! ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ನಡೆಸಿದ ಹೋರಾಟವನ್ನು `ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅದರ ಬಗ್ಗೆ ಸಮಗ್ರ ಗ್ರಂಥವನ್ನು ಬರೆದ ಹೆಗ್ಗಳಿಕೆ ಸಾವರ್ಕರ್ ಅವರದು. ವಾಸ್ತವವಾಗಿ, ಆ ದಿನಗಳಲ್ಲಿ ಲಂಡನ್ನಿನಲ್ಲಿ ಇವರಂತೆಯೇ ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ಜವಾಹರಲಾಲ್ ನೆಹರು ಕೂಡ ಈ ಗ್ರಂಥವನ್ನು ಅಪಾರವಾಗಿ ಮೆಚ್ಚಿಕೊಂಡು, ತಮ್ಮ ತಂದೆ ಮೋತಿಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದಕ್ಕೆ ಪುರಾವೆಗಳಿವೆ. ವಿಷಾದದ ಸಂಗತಿಯೆಂದರೆ, ಲಂಡನ್ನಿನಿಂದ ಭಾರತಕ್ಕೆ ವಾಪಸ್ ಬಂದಮೇಲೆ, ನೆಹರು ಅವರು ಸಾವರ್ಕರ್ ಬಗ್ಗೆ ವಿರೋಧ ಬೆಳೆಸಿಕೊಂಡು ಬಿಟ್ಟರು. ಇದು ಕೊನೆಗೆ ಎಲ್ಲಿಯವರೆಗೆ ಹೋಯಿತೆಂದರೆ, ತುಷ್ಟೀಕರಣದ ರಾಜಕಾರಣ ಮತ್ತು ದೇಶವಿಭಜನಗಾಗಿ ಮುಸ್ಲಿಂ ಲೀಗ್ ಮಾಡುತ್ತಿದ್ದ ಆಗ್ರಹಗಳನ್ನು ವಿರೋಧಿಸುತ್ತಿದ್ದ ಸಾವರ್ಕರ್ ಅವರಿಗೆ ಕೋಮುವಾದಿ, ಮೂಲಭೂತವಾದಿ, ದೇಶ ವಿಭಜಕ, ಗಾಂಧಿಯವರ ಹತ್ಯೆಯ ಹಿಂದಿನ ಪಾತ್ರಧಾರಿ ಎನ್ನುವ ರೋಗಗ್ರಸ್ತ ಹಣೆಪಟ್ಟಿಗಳನ್ನು ಹಚ್ಚಲಾಯಿತು. ಹಾಗಾದರೆ, ಸಾವರ್ಕರ್ ನಿಜಕ್ಕೂ ಏನಾಗಿದ್ದರು?
ಸಾವರ್ಕರ್ ಬಗ್ಗೆ ರಾಜಕೀಯ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನೂ ಇಲ್ಲ ಎನ್ನುತ್ತಿದ್ದಾರೆ. ಅಂಡಮಾನಿನ ಜೈಲಿನಲ್ಲಿ ಅವರು ಕರಾಳ `ಕಾಲಾಪಾನಿ’ ಶಿಕ್ಷೆ ಅನುಭವಿಸುತ್ತಿದ್ದಾಗ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಧಾಟಿಯ ಜಾಣ್ಮೆಯ ಪತ್ರಗಳನ್ನಿಟ್ಟುಕೊಂಡು ಅವರನ್ನು ದೇಶದ್ರೋಹಿಯೆಂದು ಬಿಂಬಿಸಿದ್ದಾರೆ. ಅವರೊಬ್ಬ ಬ್ರಾಹ್ಮಣವಾದಿಯಾಗಿದ್ದರು ಎಂದು ರಚ್ಚೆ ಮಾಡುತ್ತಿರುವವರ ಸಂತತಿಯೂ ಇದೆ. ಹಾಗಾದರೆ, ಇವುಗಳ ಸತ್ಯಾಸತ್ಯತೆ ಏನು? ಇಂತ ಮಿಥ್ಯೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ, ಭಗ್ನಗೊಳಿಸಲು ಇದು ಸಕಾಲ. ಈ ದೃಷ್ಟಿಯಿಂದ ನೋಡಿದರೆ, ಇದು ಭಾರತದ ನೈಜ ಚರಿತ್ರೆಯು ವಿಕೃತಿ ಮತ್ತು ವಿಸ್ಮೃತಿಗಳ ಪೊರೆಯನ್ನು ಕಿತ್ತೆಸೆದು, ವಸ್ತುನಿಷ್ಠ ಆಕೃತಿಯನ್ನು ಪಡೆದುಕೊಳ್ಳುತ್ತಿರುವ ನಿರ್ಣಾಯಕ ಕಾಲಘಟ್ಟವಾಗಿದೆ.
ದೇಶದಲ್ಲಿ ಇಂದು ʼಹಿಂದುತ್ವʼದ ಅಲೆ ಪ್ರಖರವಾಗಿದೆ. ಇದರ ಕೀರ್ತಿಯಲ್ಲಿ ಹೆಚ್ಚಿನ ಪಾಲು ಸಲ್ಲಬೇಕಾದ್ದು ಸಾವರ್ಕರ್ ಅವರಿಗೆ! ಏಕೆಂದರೆ, ಈ ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಪಕವಾಗಿ ಮುನ್ನೆಲೆಗೆ ತಂದವರೇ ಅವರು. ಇದರ ಜತೆಗೆ ಅವರು, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ದೇಶದಲ್ಲಿ ಎಬ್ಬಿಸಿದ ಹಿಂದೂ ಅಸ್ಮಿತೆಯ ನಂದಾದೀಪ ಈಗ ಜಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಅದರ ಪ್ರಭೆಯ ಮುಂದೆ ಬಣ್ಣಬಣ್ಣದ ತರಹೇವಾರಿ ಸಿದ್ಧಾಂತಗಳ ವೇಷ ಕಳಚಿ ಬಿದ್ದಿದೆ.
ಸಾವರ್ಕರ್ ಅವರ ಬಹುಮುಖಿ ಮತ್ತು ಸಮಾಜಪರ ವ್ಯಕ್ತಿತ್ವದ ಇನ್ನೊಂದಿಷ್ಟು ಆಯಾಮಗಳನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಶ್ರಮಿಸಿದರು ಎನ್ನುವ ಚಿತ್ರಣ ಹಲವು ತಲೆಮಾರುಗಳ ಜನರಲ್ಲಿ ಬೇರೂರಿದೆ. ಅಂದಂತೆ, ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಭಾರತಕ್ಕೆ ಪೂರ್ಣಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದು 1929ರಷ್ಟು ತಡವಾಗಿ! ಅಲ್ಲಿಯವರೆಗೂ ಆ ಪಕ್ಷದ ನಾಯಕರೆಲ್ಲ ಭಾರತವು ಬ್ರಿಟಿಷರ ಅಧೀನದಲ್ಲೇ (ಡೊಮಿನಿಯನ್ ಸ್ಟೇಟ್) ಮುಂದುವರಿಯುವುದರ ಪರವಾಗಿದ್ದರು. ಆದರೆ, ಸಾವರ್ಕರ್ ಇದಕ್ಕೂ 20 ವರ್ಷಗಳ ಮುಂಚೆಯೇ -1909ರಲ್ಲೇ- `ಸಂಪೂರ್ಣ ಸ್ವಾತಂತ್ರ್ಯವು ನಮ್ಮ ಹಕ್ಕು! ಇದರಲ್ಲಿ ಗುಲಗಂಜಿಯಷ್ಟು ಕಡಿಮೆಯಾದರೂ ನಾವು ಅದನ್ನು ಒಪ್ಪುವುದಿಲ್ಲ!!’ ಎಂದು ಘರ್ಜಿಸಿದ್ದರು. ಇದನ್ನು ಸಹಿಸದ ಬ್ರಿಟಿಷರು, ಸಾವರ್ಕರ್ ಅವರನ್ನು ಅಂಡಮಾನ್ ಜೈಲಿಗೆ ತಳ್ಳಿ, 50 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಅಲ್ಲಿ ಈ `ಸ್ವಾತಂತ್ರ್ಯವೀರ’ ಅನುಭವಿಸಿದ ಯಮಯಾತನೆ ವರ್ಣಿಸಲಸದಳ.
ಅಂಡಮಾನಿನಿಂದ ಬಿಡುಗಡೆಯಾಗಿ ಬಂದಮೇಲೂ ಸಾವರ್ಕರ್ ಅವರಿಗೆ ಇತರರಂತೆ ಮುಕ್ತವಾಗಿ ಓಡಾಡಲು ಬ್ರಿಟಿಷರು ಅವಕಾಶ ಕೊಡಲಿಲ್ಲ. ಬದಲಿಗೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವರನ್ನು 14-15 ವರ್ಷಗಳ ಕಾಲ ನಿರ್ಬಂಧಿತ ವಾಸದಲ್ಲಿ ಇಡಲಾಗಿತ್ತು! ಆದರೂ ಭಾರತದ ಶ್ರೇಯಸ್ಸಿಗೆ ತುಡಿಯುತ್ತಿದ್ದ ಅವರು ಆ ಇತಿಮಿತಿಗಳನ್ನು ಮೆಟ್ಟಿ ನಿಂತು, ಹಲವು ಶ್ರೇಯಸ್ಕರವಾದ ಉಪಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಮೊದಲು ಅವರು ಕೈಗೆತ್ತಿಕೊಂಡಿದ್ದು, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ನಿವಾರಣೆಯ ಕೆಲಸ. ಇದಕ್ಕಾಗಿ ಅವರು ದಲಿತ ಸಮುದಾಯಕ್ಕೆ ಸೇರಿದ ಮಹಾಡ್ ದಂಪತಿಗಳ ಪಾದಪೂಜೆ ಮಾಡಿದರು. ದೇವಸ್ಥಾನದ ಗಣೇಶೋತ್ಸವಗಳಲ್ಲಿ ದಲಿತರಿಗೆ ಅಗ್ರಮನ್ನಣೆ ಕೊಡಿಸಿದರು. ಜಾತಿಪಂಥಗಳ ಭೇದವಿಲ್ಲದ ಭಜನಾ ಮಂಡಲಿಗಳನ್ನು ಏರ್ಪಡಿಸಿದರು. ಶಾಲೆಗಳನ್ನು ಕಟ್ಟಿಸಿದರು. ದಲಿತರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ, ದಲಿತರಿಗೆ ದೇವಸ್ಥಾನ ಪ್ರವೇಶದ ಮುಕ್ತ ಹಕ್ಕು ಎಷ್ಟೊಂದು ಅಗತ್ಯವೆನ್ನುವುದನ್ನು ಮನಗಂಡಿದ್ದ ಅವರು, ಅವರಿಗೆಂದೇ `ಪತಿತ ಪಾವನ ಮಂದಿರ’ವನ್ನೇ ಕಟ್ಟಿಸಿದರು!
ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿದ್ದರೆ, ಬಾಬಾಸಾಹೇಬ್ ಅಂಬೇಡ್ಕರರೇ ಈ ಮಂದಿರವನ್ನು ಉದ್ಘಾಟಿಸಬೇಕಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲಾಗಲಿಲ್ಲ. ಆದರೇನಂತೆ, ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಸಾವರ್ಕರರ ಪ್ರಾಮಾಣಿಕ ಕಳಕಳಿಯನ್ನು ಮನಗಂಡಿದ್ದ ಅವರು, `ಸಾವರ್ಕರರಂಥ ಹತ್ತು ಮಂದಿ ಇದ್ದರೆ, ಒಂದೆರಡು ದಶಕಗಳಲ್ಲಿ ಈ ದೇಶದಿಂದ ಅಸ್ಪೃಶ್ಯತೆ ನಾಮಾವಶೇಷವಾಗಿ ಹೋಗಲಿದೆ!’ ಎಂದು ಉದ್ಗರಿಸಿದ್ದರು.
ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸಿದ ಸಾವರ್ಕರ್, ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸಿದರು. ಅಂತರ ಜಾತೀಯ ವಿವಾಹಗಳ ಜತೆಗೆ ಅಂತರಪ್ರಾಂತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನಿಜ ಹೇಳಬೇಕೆಂದರೆ, ಇವೆಲ್ಲವನ್ನೂ ಅವರು ಮಾಡಿದ್ದು ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ಕೊಡುವುದಕ್ಕೂ ಎಷ್ಟೋ ವರ್ಷಗಳ ಮುಂಚೆಯೇ! ಆದರೆ, ಗಾಂಧೀಜಿಯವರು ದಲಿತರ ಕೇರಿಗೆ ಹೋಗಿ ಮಲ ಎತ್ತಿದ್ದನ್ನು ಮಾತ್ರ ಹೇಳುವ `ಅನುಕೂಲಸಿಂಧು ಶಕ್ತಿಗಳು’, ಸಾವರ್ಕರರ ಈ ಸೇವೆಯನ್ನು ಮತ್ತು ಅವರು ರವಾನಿಸಿದ ಪರಿವರ್ತನೆಯ ಸಂಕೇತಗಳನ್ನು ನೇಪಥ್ಯಕ್ಕೆ ಸರಿಸಿರುವುದು ನಮ್ಮ ದೇಶದಲ್ಲಿ ಬೇರೂರಿರುವ `ಬೌದ್ಧಿಕ ಅಪ್ರಾಮಾಣಿಕತೆ’ಗೊಂದು ನಿದರ್ಶನವಷ್ಟೆ. ಇದಿಷ್ಟೇ ಅಲ್ಲ, ಹಿಂದೂಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನಗರೀಕರಣದ ಪ್ರಜ್ಞೆಗಳು ಹೆಚ್ಚುವುದರಿಂದ ಭಾರತ ಅಖಂಡವಾಗಿ ಉಳಿಯಲಿದೆ ಎಂದು ಅಚಲವಾಗಿ ನಂಬಿದ್ದ ಅವರು, ದಲಿತರ ಆಹಾರದ ಹಕ್ಕಿನ ವಿಚಾರದಲ್ಲಿ ಆ ಸಮುದಾಯದ ಪರವಾಗಿ ನಿಂತಿದ್ದರು! ಇದಕ್ಕಾಗಿ ಅವರು, ಮೇಲ್ಜಾತಿಗಳ ಮೇಲೆ ವೈಚಾರಿಕ ಪ್ರಹಾರವನ್ನೇ ನಡೆಸಿದರು.
ಇನ್ನು, ಸಾವರ್ಕರ್ ಅವರೊಬ್ಬ `ಮುಸ್ಲಿಂ ವಿರೋಧಿ’ ಎನ್ನುವ ವಿಚಾರಕ್ಕೆ ಬರೋಣ. ಇಂಥವರಿಗೆ ಚರಿತ್ರೆಯ ಪ್ರಜ್ಞೆ ಎಷ್ಟೊಂದು ಅಳ್ಳಕವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಏಕೆಂದರೆ, ಸಾವರ್ಕರ್ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಪ್ರಾಮಾಣಿಕವಾಗಿ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದವರು. ಅವರ ಈ ಪ್ರತಿಪಾದನೆಯನ್ನು ಸ್ವತಃ ಗಾಂಧೀಜಿಯೇ ಮೆಚ್ಚಿಕೊಂಡಿದ್ದರು. ವಿಲಕ್ಷಣ ಸಂಗತಿಯೆಂದರೆ, ಇವತ್ತಿನ ಗಾಂಧೀವಾದಿಗಳಿಗೆ ಇದು ಗೊತ್ತಿಲ್ಲ! ಆದರೆ, ದೂರದ ಟರ್ಕಿಗೆ ಸಂಬಂಧಿಸಿದ ವಿದ್ಯಮಾನವಾಗಿದ್ದ ಖಿಲಾಫತ್ ಚಳವಳಿಯ ಬಗ್ಗೆ ಅತಾರ್ಕಿಕವಾದ ಸಹಾನುಭೂತಿಯನ್ನು ಹೊಂದಿದ್ದ ಒಂದು ವರ್ಗ/ಪಕ್ಷವು ಬಿತ್ತತೊಡಗಿದ ಪ್ರತ್ಯೇಕತೆಯ ಭಾವನೆಯನ್ನು ನೋಡಿದ ಮೇಲೆ ಸಾವರ್ಕರ್, ಮುಂದಿನ ಅಪಾಯವನ್ನು ಗ್ರಹಿಸಿ ನಿಷ್ಠುರವಾಗಿ ಮಾತನಾಡತೊಡಗಿದರು. ಅಲ್ಲಿಯವರೆಗೂ ಬ್ರಿಟಿಷರ ಸೇನೆಯಲ್ಲಿ ತೀರಾ ಅತ್ಯಲ್ಪ ಪ್ರಮಾಣದಲ್ಲಿದ್ದ ಹಿಂದೂಗಳು ಹೆಚ್ಚುಹೆಚ್ಚಾಗಿ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಕೆಲಸವನ್ನು ಆಂದೋಲನದಂತೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೆಳಗುತ್ತಿರುವ ಭಾರತದ ಈ ಚರಿತ್ರೆಯನ್ನು ನಾವೆಲ್ಲರೂ ಅರಿಯಬೇಕು.
ಸಾವರ್ಕರ್ ಎಂದರೆ ಇಷ್ಟೇ ಅಲ್ಲ, ಭಾರತದ ತ್ರಿವರ್ಣ ಧ್ವಜದಲ್ಲಿ ಇಂದು ಸಾರನಾಥದ ಧರ್ಮಚಕ್ರವಿದ್ದರೆ ಅದಕ್ಕೆ ಕಾರಣರಾದವರೂ ಇವರೇ! ಇಂತಹ ಉದಾತ್ತ ಚಿಂತನಗಳ ಜತೆಯಲ್ಲೇ ಅವರು, ತಮ್ಮ ಕಾಲದ ಜಾಗತಿಕ ನಾಯಕರೊಂದಿಗೆ ಭಾರತದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪತ್ರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಂಬೇಡ್ಕರ್, ನೆಹರು, ಶಾಮಪ್ರಸಾದ್ ಮುಖರ್ಜಿ ಅವರಷ್ಟೆ ಅಲ್ಲದೆ, ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಂತೆಯೇ ಇವರು ಕೂಡ `ಕ್ವಿಟ್ ಇಂಡಿಯಾ’ ಚಳವಳಿಯನ್ನು ನಿರಾಕರಿಸಿದ್ದರು. ದೇಶ ವಿಭಜನೆಯ ಪ್ರಸ್ತಾಪವನ್ನು ಎಲ್ಲರಿಗಿಂತಲೂ ಮೊದಲೇ ವಿರೋಧಿಸಿದ್ದರು. ಹಾಗೆಯೇ, ಈ ದೇಶದ ಬಹುಸಂಖ್ಯಾತರನ್ನು ಮಾತ್ರ ಸದಾ ನೈತಿಕ ಬಿಕ್ಕಟ್ಟಿಗೆ ದೂಡುತ್ತಿದ್ದ ಕುಟಿಲ ರಾಜಕಾರಣವನ್ನು ಅವರು ತಿರಸ್ಕರಿಸುತ್ತ, `ಮಾತೃಭೂಮಿ’ ಮತ್ತು `ಪಿತೃಭೂಮಿ’ಗಳ ರಚನಾತ್ಮಕ ಪರಿಕಲ್ಪನೆಗಳನ್ನು ಮುಂಚೂಣಿಗೆ ತಂದರು.
ಬಹುಸಂಖ್ಯಾತರ ಪರವಾಗಿ ಮಾತನಾಡುವುದೇ ಅಪರಾಧವೆನ್ನುವ ದುಷ್ಟಕಾಲ ನಮ್ಮಲ್ಲಿ ಇತ್ತೀಚಿನವರೆಗೂ ತಾಂಡವವಾಡುತ್ತಿತ್ತು. ಅದರ ಪಳೆಯುಳಿಕೆಗಳು ಈಗಲೂ ಇವೆ. ಆದರೆ, ದೇಶದ ಪುಣ್ಯಸಂಚಯ ದೊಡ್ಡದಿದೆ. ಹೀಗಾಗಿ, ಸಾವರ್ಕರ್ ಮತ್ತು ಅವರಂತಹ ಇನ್ನೂ ಅನೇಕರ ವಿಚಾರಗಳು ಈಗ ಪುನರುಜ್ಜೀವನಗೊಂಡು, ಪ್ರಖರವಾಗಿ ಗೊತ್ತಾಗುತ್ತಿವೆ. ಇಂತಹ ದ್ರಷ್ಟಾರರ ವಾರಸುದಾರರಾಗಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು!
ಸಾವರ್ಕರ್ ಅವರು ನಮ್ಮ ದೇಶದ ಹೆಮ್ಮೆಯ ಪುತ್ರ