ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 22, 2022

1

ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?

‍ರಾಕೇಶ್ ಶೆಟ್ಟಿ ಮೂಲಕ
  • ರಾಕೇಶ್ ಶೆಟ್ಟಿ

ಸಾವರ್ಕರ್ ಅವರ ಹೆಸರು ಕೇಳಿದರೆ ದ್ವೇಷಕಾರುವ ಸಿದ್ದರಾಮಯ್ಯನವರು, ಸುಳ್ಳುಗಳೇ ತುಂಬಿರುವ ಲೇಖನವೊಂದನ್ನು ಬರೆದು ಮುಖ್ಯಮಂತ್ರಿಗಳನ್ನು ಚರ್ಚೆಗೆ ಕರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಹೀಗೆ ಆಧಾರ ರಹಿತ ಸುಳ್ಳುಗಳ ಸರಮಾಲೆಯನ್ನು ಹೇಗೆ ಬರೆಯಲು ಸಾಧ್ಯ? ಅವರ ಲೇಖನದ ಕೆಲವು ಪ್ರಶ್ನೆಗಳು, ಸುಳ್ಳುಗಳ ಬಗ್ಗೆ ಮಾತನಾಡುತ್ತಲೇ, ಸಾವರ್ಕರ್, ಗಾಂಧಿ, ನೆಹರೂ ಅವರ ಜೈಲುವಾಸಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕು.

10 ಡಿಸೆಂಬರ್ 1934 – ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜವಹರಲಾಲ್ ನೆಹರೂ ಅವರ ಜೈಲುವಾಸದ ಬಗ್ಗೆಯೊಂದು ಚರ್ಚೆಯಾಗುತ್ತದೆ. ಸದಸ್ಯರಾದ ಹಾರಾಲ್ದ್ ಹೇಲ್ಸ್ ಅವರು, ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರ ಅನಾರೋಗ್ಯದ ಸ್ಥಿತಿಯನ್ನು ಗಮನಿಸಿ, ಜವಹರಲಾಲ್ ನೆಹರೂ ಅವರನ್ನು ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸುತ್ತಾರೆ.

ಅದಕ್ಕೆ ಉತ್ತರವಾಗಿ, ಅಂದಿನ ಬ್ರಿಟಿಷ್ ಭಾರತದ ಅಧೀನ ಕಾರ್ಯದರ್ಶಿಯಾಗಿದ್ದ ಬಟ್ಲರ್ ಉತ್ತರಿಸುತ್ತಾ : ಅವರ ಹೆಂಡತಿಯನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ, ಕಳೆದ ಬೇಸಿಗೆಯಲ್ಲಿಯೇ ಅವರನ್ನು ಕೆಲವು ದಿನಗಳ ಕಾಲ ಬಿಡುಗಡೆ ಮಾಡಿದ್ದೆವು. ಈಗ ಅವರನ್ನು ಆಸ್ಪತ್ರಗೆ ಹತ್ತಿರ ಇರುವ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ವೈದ್ಯರ ಸಲಹೆಯಂತೆ ಅವರು ಹೋಗಿ ನೋಡಿಕೊಂಡು ಬರಲು ಅನುಮತಿ ನೀಡಲಾಗಿದೆ.

ಸರ್ಕಾರದ ವಿರುದ್ಧದ ಪಿತೂರಿಯ ಆರೋಪದಲ್ಲಿ ನೆಹರೂ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾಗಿದ್ದರು. ಆ ಜೈಲು ಶಿಕ್ಷೆಯ ಅವಧಿಯ ಕುರಿತು ನಡೆದ ಚರ್ಚೆಯಿದು. ಕೇಸ್ ದಾಖಲಾಗಿ ಬಂಧನವಾದ ನಂತರ, ನೆಹರೂ ಅವರ ಭಾವನೆಗಳಿಗೆ ಘಾಸಿ(!)ಯಾಗುವುದಾದರೆ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿಯೇ ಮಾಡುವ ಆಫರ್ ಅನ್ನು ಬ್ರಿಟಿಷ್ ಅಧಿಕಾರಿ ನೀಡುತ್ತಾರೆ! ಕಡೆಗೆ, 6 ತಿಂಗಳ ಮೊದಲೇ ಬಿಡುಗಡೆ ಮಾಡುತ್ತದೆ ಬ್ರಿಟಿಷ್ ಸರ್ಕಾರ. ನೆಹರೂ ಅವರ ಮೇಲೆ ಇಂತಹ ಪ್ರೀತಿಯನ್ನು ಇದೇ ಮೊದಲ ಬಾರಿಯೇನೂ ಬ್ರಿಟಿಷ್ ಸರ್ಕಾರ ತೋರಿಸಿದ್ದಲ್ಲ.

ಅಕ್ಟೋಬರ್ 24 ,1930 ರಂದು ಕೂಡ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾದಗಲೂ, ಅವರನ್ನು ಕೇವಲ 97 ದಿನಗಳಲ್ಲೇ ಬಿಡುಗಡೆ ಮಾಡಿತ್ತು ಬ್ರಿಟಿಷ್ ಸರ್ಕಾರ. ಬ್ರಿಟಿಷರಿಗೆ ನೆಹರೂ ಅವರ ಮೇಲೆ ಅದಿನ್ನೆಂತಹ ಪ್ರೀತಿ! ಅಥವಾ ನೆಹರೂ ಅವರು ಜೈಲಿನ ಒಳಗಿದ್ದರೂ, ಹೊರಗಿದ್ದರೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯಕಾರಿಯಲ್ಲ ಅಂತಲೇ? ನೆಹರೂ ಅವರ ರಾಜಕೀಯ ಜೀವನದಲ್ಲಿ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲು ವಾಸ ಅಂತ ಅವರಿಗೆ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲಿ. 2 ವರ್ಷ 8 ತಿಂಗಳ ಸೆರೆವಾಸವದು. ಹಾಗೆಂದು ನೆಹರೂ ಅವರ ಸೆರೆವಾಸಗಳೇನು ಸೆಲ್ಯುಲಾರ್ ಜೈಲಿನಂತೆ ಒಂಟಿಯಾಗಿ, ಕತ್ತಲೆ ಹಾಗೂ ಕೆಟ್ಟ ಸೆಲ್ಲಿನೊಳಗಿನ ವಾಸವೇನು ಆಗಿರಲಿಲ್ಲ. ಮೇಲಿನ ಉದಾಹರಣೆಯಂತೆ ಬ್ರಿಟಿಷರ ಉದಾರತೆ ಹೇಗಾದರೂ ನೆಹರೂ ಅವರಿಗೆ ಸಿಗುತ್ತಿತ್ತು. ಉದಾಹರಣೆಗೆ, ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರ ನೆಹರೂ ಅವರನ್ನು ನೈನಿಯಲ್ಲಿ ಜೈಲಿಗೆ ಹಾಕಿದರು. ಜೈಲಿನಲ್ಲಾದರೂ ಬಡಪಾಯಿ ನೆಹರೂ ಅವರಿಗೆ ಹೆಚ್ಚೇನು ಸೌಲಭ್ಯ ಸಿಗಲಿಲ್ಲ. ಅಬ್ಬಬ್ಬಾ ಎಂದರೆ ಒಬ್ಬ ಖೈದಿಯನ್ನು ಅವರ ಅಡುಗೆಯವನನ್ನಾಗಿ ನೇಮಿಸಲಾಯಿತು, ಗಾಳಿ ಬೀಸಲು ಮತ್ತೊಬ್ಬ ಖೈದಿ ನಿಯುಕ್ತಿಯಾದ. ಜೈಲಿನ ಊಟ ತಿಂದು ನಾಲಗೆ ಜಡ್ಡುಗಟ್ಟದಿರಲೆಂದು ಮನೆಯ ಊಟ, ಹಣ್ಣು ಹಂಪಲು ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.ನೆಹರೂ ಅವರ ದರ್ಶನಕ್ಕೆಂದು ಬರುತ್ತಿದ್ದ ಖೈದಿಗಳು ಬೇಕಾದ ಸಣ್ಣಪುಟ್ಟ ಸೇವೆಗಳನ್ನು ಮಾಡಿಕೊಡುತ್ತಿದ್ದರು. ತೀರಾ ನೆಹರೂ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ಶೇ.95 ರಾಜಕೀಯ ಖೈದಿಗಳಿಗೆ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ. ನೆಹರೂ-ಗಾಂಧಿಯಂತವರು 5% ನೊಳಗಿದ್ದವರು. ಬ್ರಿಟಿಷರ ಪಾಲಿಗೆ ನಿರುಪದ್ರವಿಗಳಾಗಿರಬಹುದೇ?

ನೆಹರೂ ಅವರು ರಾಜಕೀಯ ಜೀವನದಲ್ಲಿ ಕಂಡಂತಹ ಅಸಲಿ ಬ್ರಿಟಿಷ್ ಜೈಲುವಾಸವೆಂದರೆ ಅದು ಪಂಜಾಬಿನ ನಭಾ ಜೈಲಿನಲ್ಲಿ ಅವರು ಕಳೆದ 15 ದಿನಗಳ ಜೈಲುವಾಸ ಮಾತ್ರವೇ. ರಾಜರ ಆಳ್ವಿಕೆಗೆ ಒಳಪಟ್ಟಿದ್ದ ನಭಾದಲ್ಲಿ, ಆಗಿನ ರಾಜನನ್ನು ಪದಚ್ಯುತಿಗೊಳಿಸಿ ಬ್ರಿಟಿಷ್ ಐ.ಸಿ.ಎಸ್ ಅಧಿಕಾರಿಯ ಆಡಳಿತ ಅಲ್ಲಿ ಜಾರಿಯಾಗಿತ್ತು. ಹೇಗೆ ಸ್ವತಂತ್ರ ಭಾರತದಲ್ಲಿ ನೆಹರೂ ಸಾಬರು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಕಾನೂನು ತಂದು, ಭಾರತದ ಹಲವು ಕಾಯ್ದೆಗಳು ಅಲ್ಲಿ ಅಪ್ಲಿಕೇಬಲ್ ಆಗದಂತೆ ಮಾಡಿದ್ದರೋ, ಹಾಗೆಯೇ ಅಂದಿನ ಬ್ರಿಟಿಷರ ನಭಾ ವ್ಯಾಪ್ತಿಯೊಳಗೆ ಅದರದ್ದೇ ಆದ ಕಾನೂನುಗಳಿದ್ದವು. ಹೊರಗಿನ ರಾಜಕಾರಣಿಗಳು ಬರುವಂತಿರಲಿಲ್ಲ. ಅದನ್ನು ಮೀರಿ, ಅಖಾಲಿಗಳ ಮೋರ್ಚಾದಲ್ಲಿ ಪಾಲ್ಗೊಳ್ಳಲು ನಭಾದ ಪರಿಧಿಯೊಳಗೆ ಹೋಗಿದ್ದ ನೆಹರೂ, ಸಂತಾನಂ ಹಾಗೂ ಗಿದ್ವಾನಿಯವರನ್ನು ಪೋಲಿಸರು ಬಂಧಿಸಿ, ನೀವು ಈಗಲೇ ಇಲ್ಲಿಂದ ವಾಪಸ್ಸು ಹೋಗುವುದಾದರೇ ಬಿಟ್ಟು ಬಿಡುತ್ತೇವೆ ಎನ್ನುತ್ತಾರೆ. ವಾಪಸ್ ಹೋಗುವ ರೈಲು ರಾತ್ರಿಯಿದೆ. ನಾವು ಇಲ್ಲೇನು ಮೋರ್ಚಾ ಸಲುವಾಗಿ ಬಂದಿಲ್ಲ. ಇದನ್ನು ನೋಡಿಕೊಂಡು ಹೋಗುತ್ತೇವೆ ಎಂದು ಮೈಗೆ ಎಣ್ಣೆ ಹಚ್ಚಿಕೊಂಡೇ ನೆಹರೂ ಮಾತಿಗಿಳಿದಾಗ, ಪೋಲಿಸರು ಒಪ್ಪದೇ ಮೂರು ಜನರ ಕೈಗೆ ಕೋಳ ತೊಡಿಸಿ, ಜೈಟು ಜೈಲಿನಲ್ಲಿ ಮೊದಲ ದಿನ ಕೂರಿಸುತ್ತಾರೆ. ಎಫ್.ಐ.ಆರ್ ಆದ ನಂತರ ನಭಾ ಜೈಲಿಗೆ ಕರೆತರಲಾಗುತ್ತದೆ. ರೈಲಿನಲ್ಲಿ ಜನರಿಂದ ಗಿಜಿಗುಡುವ ಥರ್ಡ್ ಕ್ಲಾಸಿನಲ್ಲಿನ ಪ್ರಯಾಣ ಭಯಾನಕವಾಗಿತ್ತು ಎಂದು ಖುದ್ದು ನೆಹರೂ ಬರೆದುಕೊಂಡಿದ್ದಾರೆ.

ನೆಹರೂ ಅವರ ಸಹ ಖೈದಿಯಾಗಿದ್ದ ಸಂತಾನಂ ಅವರು ತಮ್ಮ ಈ ಸೆರೆವಾಸದ ಅನುಭವವನ್ನು ಬರೆಯುತ್ತ,”ನಭಾದ ಆ ಸೆರೆಮನೆ 20* 12 feet ಇತ್ತು. ನೆಲದ ಹಾಗೂ ತಾರಸಿ ಎರಡೂ ಮಣ್ಣಿನದು. ತಾರಸಿಯಿಂದ ಆಗಾಗ್ಗೆ ಮಣ್ಣು ಉದುರುತ್ತಲೇ ಇತ್ತು ಜೊತೆಗೆ ಈ ಸೆಲ್ ಕೆಟ್ಟ ವಾಸನೆಯಿಂದ ಕೂಡಿತ್ತು. ನೆಹರೂ ಅವರು ಕೋಪದಿಂದ ಕುದಿಯುತ್ತಿದ್ದರು. ಪ್ರತಿ ಅರ್ಧಗಂಟೆಗೊಮ್ಮೆ ನೆಲವನ್ನು ಗುಡಿಸುತ್ತಿದ್ದ ಅವರ ವರ್ತನೆ ನೋಡಿ ನನಗೆ ಹಾಗೂ ಗಿದ್ವಾನಿಗೆ ಕೋಪದ ಬದಲು ನಗು ಬರುತ್ತಿತ್ತು. ನಮಗೆ ಬೇರೆ ಬಟ್ಟೆಗಳನ್ನು ಕೊಡಲಿಲ್ಲ, ೨-೩ ದಿನ ಸ್ನಾನಕ್ಕೂ ಬಿಡಲಿಲ್ಲ. ಅಲ್ಲಿದ್ದ ಸೆಂಟ್ರಿಗಳು ನಮ್ಮ ಜೊತೆ ಮಾತನಾಡುವಂತೆಯೂ ಇರಲಿಲ್ಲ.” ಎಂದು ಬರೆಯುತ್ತಾರೆ. ಇತ್ತ ತಮ್ಮ ಪ್ರೀತಿಯ ಮಗನ ಬಗ್ಗೆ ಸುದ್ದಿ ಕಾಣದೇ ಕಂಗಾಲಾದ ಮೋತಿಲಾಲ್ ನೆಹರೂ ಅವರು ನೇರಾ ಬ್ರಿಟಿಷ್ ವೈಸರಾಯ್ ಅವರ ಮೊರೆಹೋಗಿ, ಮಗ ನಭಾ ಜೈಲಿನಲ್ಲಿ ಇರುವುದನ್ನು ಪತ್ತೆ ಮಾಡುತ್ತಾರೆ. ವೈಸರಾಯ್ ಅವರ ಅನುಮತಿಯ ನಂತರವೇ ನಭಾದ ಅಧಿಕಾರಿಗಳು ಮೋತಿಲಾಲ್ ಅವರಿಗೆ ಜೈಲಿನಲ್ಲಿ ಭೇಟಿಯ ಅವಕಾಶ ನೀಡುತ್ತಾರೆ. ಮೋತಿಲಾಲ್ ಅವರು ಬಂದು ಹೋದ ನಂತರ ಸ್ನಾನಕ್ಕೆ ಅವಕಾಶ ನೀಡಿ, ಹೊರಗಿನಿಂದ ಆಹಾರ ತರಿಸಿಕೊಳ್ಳಲು ಸ್ವಲ್ಪ ರಿಯಾಯಿತಿಯ ವರ್ತನೆ ತೋರಿಸುತ್ತಾರೆ ಜೈಲು ಅಧಿಕಾರಿಗಳು. ಈ ಪ್ರಕರಣದಲ್ಲಿ ಮೂರೂ ಜನರಿಗೆ ಆರು ತಿಂಗಳ ಜೈಲುವಾಸ ಹಾಗೂ ಮತ್ತೊಂದು ಪಿತೂರಿ ಪ್ರಕರಣದಲ್ಲಿ ಈ ಮೂವರ ಜೊತೆಗೆ ಒಬ್ಬ ಅನಾಮಿಕ ಸಿಖ್ ವ್ಯಕ್ತಿಯನ್ನು ಸೇರಿಸಿ ನಾಲ್ಕು ಜನಕ್ಕೆ ಹದಿನೆಂಟು ತಿಂಗಳ ಸೆರೆವಾಸ, ಅಂದರೆ ಒಟ್ಟು ಎರಡು ವರ್ಷಗಳ ಸೆರೆವಾಸದ ಶಿಕ್ಷೆಯ ಘೋಷಣೆಯಾಗುತ್ತದೆ. ಆದರೆ, ಸಂಜೆಯ ವೇಳೆಗೆ ಇದ್ದಕ್ಕಿದ್ದಂತೆಯೇ ಜೈಲಿನ ಅಧಿಕಾರಿ ಬಂದು, ನೆಹರು, ಸಂತಾನಂ ಹಾಗೂ ಗಿದ್ವಾನಿಯವರ ಸೆರೆವಾಸ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲಾಗಿದ್ದು, ನೀವು ಮೂವರು ಈಗಲೇ ನಭಾವನ್ನು ಬಿಟ್ಟು ಹೊರಡಬೇಕು ಹಾಗೂ ಮತ್ತಿನ್ನೆಂದೂ ಇಲ್ಲಿಗೆ ಬರಬಾರದು ಬಂದರೆ ಮತ್ತೆ ಬಂಧಿಸಿ ಸೆರೆವಾಸ ಅನುಭವಿಸಬೇಕಾಗುತ್ತದೆ ಎನ್ನುತ್ತಾನೆ. ಶ್ರೀಮಂತರ ಮಗ ನೆಹರೂ ಅವರಿಗೆ ಸಿಕ್ಕ ಈ ಬಿಡುಗಡೆ ಭಾಗ್ಯ ಆ ಅನಾಮಿಕ ಸಿಖ್ ವ್ಯಕ್ತಿಗೆ ಸಿಗುವುದಿಲ್ಲ. ನೆಹರೂ ಅವರ ತಂದೆ ಮೋತಿಲಾಲ್ ಅವರು ತಮ್ಮ ಪ್ರಭಾವ ಬಳಸಿ, ಇದ್ದಕ್ಕಿದಂತೆಯೇ ಶಿಕ್ಷೆ ರದ್ದು ಮಾಡಿಸಿದ್ದರು ಎನ್ನುವ ಮಾತಿದೆ. ಆದರೆ, ಆ ಕಾಣದ ಕೈಗಳು ಯಾವುದು ಎನ್ನುವ ಗುಟ್ಟನ್ನು ನೆಹರೂ ಅವರು ತಮ್ಮ ಆತ್ಮಕತೆಯಲ್ಲೇನೂ ಬಿಟ್ಟುಕೊಟ್ಟಿಲ್ಲ. ಆದರೂ ನೆಹರೂ ಅವರ ಮೇಲೆ ಬ್ರಿಟಿಷರ ಪ್ರೇಮ ಅನುಪಮವಾದದ್ದು. ಅವರ ಇಡೀ ಒಂಭತ್ತು ವರ್ಷಗಳ ಸೆರೆವಾಸಗಳ ಬಗ್ಗೆ ವಿವರವಾದ ಅಧ್ಯಯನ ಮಾಡಿದರೆ, ಬ್ರಿಟಿಷರಿಂದ ಪಡೆದ ಇಂತಹ ಹಲವು ವಿನಾಯಿತಿಗಳು ಖಂಡಿತ ಹೊರಗೆ ಬರುತ್ತವೆ.

ನೆಹರೂ ಅವರ ರಾಜಕೀಯ ಗುರುಗಳಾದ ಮೋಹನ್ ದಾಸ್ ಗಾಂಧಿಯವರ ಜೈಲುವಾಸದ ಬಗ್ಗೆ ನೋಡುವುದಾದರೇ,

ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಮೋಹನ್ ದಾಸ್ ಗಾಂಧಿಯವರ ನಡುವೆ ನಡೆದ ಪೂನ ಒಪ್ಪಂದದ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆ ಒಪ್ಪಂದದ ಮಾತುಕತೆಗಾಗಿ, ಡಾ.ಅಂಬೇಡ್ಕರ್ ಅವರು ಜೈಲಿಗೆ ಹೋದಾಗ ಅಲ್ಲಿನ ಚಿತ್ರಣವನ್ನು ಖ್ಯಾತ ಇತಿಹಾಸಕಾರರಾದ ಧನಂಜಯ್ ಕೀರ್ ಅವರ ಪುಸ್ತಕದಲ್ಲಿ ದಾಖಲಿಸಿದ್ದಾರೆ (ಕನ್ನಡ – ಸಂಘರ್ಷ : ಮಂಗ್ಳೂರು ವಿಜಯ) . “ಜೈಲಿನ ವರಾಂಡದಲ್ಲಿ ಕುಳ್ಳಗಿನ ಮಾವಿನ ಮರವೊಂದರ ಕೆಳಗೆ ಹಗ್ಗದ ಮಂಚದ ಮೇಲೆ ಗಾಂಧಿ ಮಲಗಿದ್ದರು. ಜೈಲಿನಲ್ಲಿ ಒದಗಿಸುವ ಬಟ್ಟೆ ಹಾಸಿತ್ತು. ಕುಡಿಯುವ ನೀರು, ಸೋಡಾದ ಬಾಟಲುಗಳು ಅಲ್ಲಿದ್ದವು.” ಗಾಂಧೀಜಿಯವರನ್ನು ಬ್ರಿಟಿಷರು ನೆಂಟರಂತೆ ಆಸ್ಥೆಯಿಂದ ನೋಡಿಕೊಳ್ಳುತ್ತಿದ್ದರು.

ನೆಹರೂ ಅವರಂತೆಯೇ, ಗಾಂಧೀಜಿಯವರ ರಾಜಕೀಯ ಜೀವನದಲ್ಲೂ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲುವಾಸ ಅಂತ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲೇ. 1 ವರ್ಷ 9 ತಿಂಗಳ ಸೆರೆವಾಸವದು ಹಾಗೂ ಅವರನ್ನು ಬಂಧಿಸಿಟ್ಟಿದ್ದು ಯಾವುದೇ ಜೈಲಿನಲ್ಲಿ ಅಲ್ಲ. ಆಗಾ ಖಾನ್ ಪ್ಯಾಲೇಸಿನಲ್ಲಿ!

ಇದಕ್ಕೆ ತದ್ವಿರುದ್ಧವಾಗಿ, ಈಗಿನ ಕಾಂಗ್ರೆಸ್ಸ್ ಪಕ್ಷದ ನಾಯಕರು ವಿಷಕಾರುವ ವೀರ ಸಾವರ್ಕರ್ ಅವರು ರಾಜಕೀಯ ಜೀವನದಲ್ಲಿ, ಅನುಭವಿಸಿದ ಗರಿಷ್ಟ ಜೈಲುವಾಸ 27 ವರ್ಷಗಳು. ಅದರಲ್ಲಿ 10 ವರ್ಷಗಳದ್ದು ಕರಾಳ ಕಾಲಾಪಾನಿಯ ಶಿಕ್ಷೆ, 4 ವರ್ಷ ಜೈಲು ಶಿಕ್ಷೆ ಹಾಗೂ 15 ವರ್ಷಗಳ ರತ್ನಗಿರಿಯಲ್ಲಿ ಬ್ರಿಟಿಷರ ಷರತ್ತಿಗೆ ಅನುಗುಣವಾಗಿ ಬದುಕುವುದು.

ನೆಹರೂ ಸಾಹೇಬರು ಅರ್ಧರಾತ್ರಿ, ರೈಲಿನ ಥರ್ಡ್ ಕ್ಲಾಸಿನ ಜನಜಂಗುಳಿಯಲ್ಲಿ ಪ್ರಯಾಣಿಸಿದ್ದನ್ನೇ ಭೀಕರ ಸ್ವಪ್ನ ಎಂಬಂತೆ ತಮ್ಮ ಜೀವನಗಾಥೆಯಲ್ಲಿ ದಾಖಲಿಸಿದ್ದಾರೆ. ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆಯಾದ ನಂತರ, ಮುಂಬೈನಿಂದ ಚೆನ್ನೈಗೆ ಕರೆತಂದು ಮಹಾರಾಜ ಹಡಗಿನ ಮೂಲಕ ಅಂಡಮಾನಿಗೆ ಕಳುಹಿಸಲಾಯಿತು.ಆ ಹಡಗಿನ ಕೆಳಗಿನ ಡೆಕ್ಕಿನಲ್ಲಿ ಮೂವತ್ತು ಜನರು ಕೂರಬಹುದಾದಷ್ಟು ಜಾಗದಲ್ಲಿ ಅದರ ದುಪ್ಪಟ್ಟು ಕೈದಿಗಳನ್ನು ತುಂಬಲಾಗಿತ್ತು. ಸಾವರ್ಕರ್ ಅವರಿಗೆ ಲಂಡನ್ನಿನಲ್ಲಿದ್ದಾಗಲೇ ಬ್ರಾಂಕೈಟಿಸ್ ಖಾಯಿಲೆ ಇತ್ತದ್ದಾರಿಂದ, ಆ ಡೆಕ್ಕಿನ ಮೂಲೆಯಲ್ಲಿ ಕೂರಲು ಹೇಳಿದರು. ಸಾವರ್ಕರ್ ಅವರ ಜೊತೆಗಿದ್ದವರೆಲ್ಲ ಭಯಾನಕ ಕ್ರಿಮಿನಲ್ಲುಗಳು. ಮಲಗಿದರೆ ಒಬ್ಬರ ಕಾಲು ಮತ್ತೊಬ್ಬರ ತಲೆಯ ಮೇಲೆ ಸೇರುವಷ್ಟು ಇಕ್ಕಟ್ಟಿನ ಜಾಗ ಅದು. ಸಾವರ್ಕರ್ ಅವರು ಕೂತಿದ್ದ ಮೂಲೆಯಲ್ಲಿ, ಈ ಕೈದಿಗಳ ಮಲ-ಮೂತ್ರ ವಿಸರ್ಜನೆಗೆಂದು ಬಕೇಟನ್ನು ಇಡಲಾಗಿತ್ತು. ಬಹಿರಂಗವಾಗಿಯೇ ಅದನ್ನು ಅವರೆಲ್ಲ ನಿರ್ವಹಿಸಬೇಕಿತ್ತು. ಇಂತಹ ಗಬ್ಬುನಾತ ಬೀರುವಂತಹ ಜಾಗದಲ್ಲೇ ನಾಲ್ಕು ದಿನಗಳನ್ನು ಸಾವರ್ಕರ್ ಅವರು ಸಹಿಸಿಕೊಳ್ಳಬೇಕಾಗಿತ್ತು. ಜೈಲಿನ ಕೋಣೆಗಳು 13.5 * 7.5 ಇದ್ದವು. ಸ್ನಾನಕ್ಕೆ ಅಂತ ಇದ್ದಿದ್ದು ಬಂಗಾಳ ಕೊಲ್ಲಿಯ ಸ್ಸಮುದ್ರದ ಉಪ್ಪು ನೀರು ಮಾತ್ರ. ನೆಹರೂ-ಗಾಂಧಿಯವರಿಗೆ ಇದ್ದಂತಹ A-Class ರಾಜಕೀಯ ಕೈದಿಯ ಯಾವ ಸೌಲಭ್ಯವೂ ಅವರಿಗಿರಲಿಲ್ಲ. ಪೆನ್ನು,ಪೇಪರ್,ಪತ್ರಿಕೆ ಊಹೂಂ ಯಾವುದೂ ಇಲ್ಲ. ಕಡುಕೆಟ್ಟ ಊಟ-ತಿಂಡಿ.

ಮೊದಲಿಗೆ ಅವರಿಗೆ ನೀಡಲಾದ ಕೆಲಸ ತೆಂಗಿನ ನಾರನ್ನು ಕುಟ್ಟುವ ಕೆಲಸ. ಬೆಳಗ್ಗೆ 6ಕ್ಕೆ ಆರಂಭವಾದರೇ ಸಂಜೆ 5ರವರೆಗೆ ಈ ಚಾಕರಿ ಮಾಡಬೇಕಿತ್ತು. ಇಪ್ಪತ್ತು ತೆಂಗಿನಕಾಯಿಗಳ ನಾರನ್ನು ಮರದ ಸುತ್ತಿಗೆಯಲ್ಲಿ ಮೃದುವಾಗುವವರೆಗೂ ಜಜ್ಜಿ ನಂತರ ಅದನ್ನು ನೀರಿನಲ್ಲಿ ನೆನೆಸಿ ಮತ್ತೆ ಜಜ್ಜಬೇಕಿತ್ತು. ನಂತರ ಬಿಸಿಲಿನಲ್ಲಿ ಒಣಗಿಸಿ ಒಟ್ಟು ಮಾಡುವಂತ ಕೆಲಸ. ಪ್ರತಿದಿನ ಸಂಜೆಯ ವೇಳೆಗೆ 1.5 ಕೆಜಿಯಷ್ಟು ಹಗ್ಗವನ್ನು ಹೊಸೆಯಬೇಕಿತ್ತು. ಪೆನ್ನು ಹಿಡಿದ ಚಿಂತಕ ಸಾವರ್ಕರ್ ಅವರ ಕೈಯಲ್ಲಿ ಗುಳ್ಳೆಗಳು, ರಟ್ಟೆಯಲ್ಲಿ ಅಸಾಧ್ಯವಾದ ನೋವಾಗುತ್ತಿತ್ತು. ಮತ್ತೊಂದು ಘನಘೋರ ಶಿಕ್ಷೆಯೆಂದರೆ ಅದು ಗಾಣದಿಂದ, ದಿನಕ್ಕೆ 12 ಕೆಜಿಯಷ್ಟು ಎಣ್ಣೆಯನ್ನು ಅರೆಯುವುದು. ಈ ಸಮಯದಲ್ಲಿ ಕುಡಿಯಲು ದಿನಕ್ಕೆ 2 ಚಿಪ್ಪು ನೀರು ಮಾತ್ರ ಕೊಡಲಾಗುತ್ತಿತ್ತು. ಒಮ್ಮೆ ಹೀಗೆ ಗಾಣ ತಿರುಗಿಸುವಾಗ ಸಾವರ್ಕರ್ ಅವರು ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ಹಾಗೆಂದು, ಯಾವುದೇ ಕನಿಕರವಿರುತ್ತಿರಲಿಲ್ಲ. ಮರುದಿನ ಮತ್ತದೇ ಕೆಲಸ ಮಾಡಬೇಕಿತ್ತು. ಈ ಗಾಣ ತಿರುಗಿಸುವ ಯಮಯಾತನೆಯ ಬಗ್ಗೆ, ಅಲಿಪುರ ಬಾಂಬ್ ಸ್ಪೋಟದ ಆರೋಪಿಯಾಗಿ ಸೆಲ್ಯುಲರ್ ಜೈಲಿನಲ್ಲಿದ್ದ ಉಪೇಂದ್ರನಾಥ ಬ್ಯಾನರ್ಜಿಯವರು ಹೀಗೆ ಬರೆಯುತ್ತಾರೆ – “ಗಾಣದಿಂದ ಎಣ್ಣೆ ತೆಗೆಯುವುದು ಮನುಷ್ಯ ಮಾತ್ರದವನು ಮಾಡುವ ಕೆಲಸವಾಗಿರಲಿಲ್ಲ. ಬದಲಿಗೆ ಅದೊಂದು ದೊಡ್ಡ ಹೋರಾಟವೇ ಆಗಿತ್ತು. ಗಾಣವನ್ನು ಎಳೆಯಲು ಶುರು ಮಾಡಿದ ಹತ್ತೇ ನಿಮಿಷಗಳಲ್ಲಿ ಉಸಿರೇ ನಿಂತತಾಗುತ್ತಿತ್ತು, ನಾಲಿಗೆ ಒಣಗಿ ಹೋಗುತ್ತಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಮೈಗೆಲ್ಲ ಲಕ್ವ ಹೊಡೆದಂತಾಗುತ್ತಿತ್ತು.” ಎಂದಿದ್ದರು.

ಇನ್ನು ಹೇಳಿದ ಕೆಲಸ ಮಾಡದೇ ಇದ್ದರೆ ಘೋರ ಶಿಕ್ಷೆಗಳು ಕಾದಿರುತ್ತಿದ್ದವು. ತಿಂಗಳುಗಳ ಕಾಲ ಏಕಾಂತವಾಸದ ಶಿಕ್ಷೆ. ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ ಕೋಳ ಹಾಕಿ ದಿನಕ್ಕೆ ಎಂಟು ಗಂಟೆಯಂತೆ ಏಳು ದಿನಗಳ ಕಾಲ ನಿಲ್ಲಿಸಲಾಗಿತ್ತು. (ಮಲ,ಮೂತ್ರ ವಿಸರ್ಜನೆಗೂ ಅವಕಾಶವಿರುತ್ತಿರಲಿಲ್ಲ), ಚೈನಾ ಟಾರ್ಚರ್ (ಮುತ್ತಿನ ಹಾರ ಸಿನಿಮಾದಲ್ಲಿ ನೀವು ನೋಡಿರಬಹುದಾದ ಶಿಕ್ಷೆ). ಸಾವರ್ಕರ್ ಅವರು ಕನಿಷ್ಟ 8 ಬಾರಿ ಇಂತಹ ವಿವಿಧ ಶಿಕ್ಷೆಗೆ ಒಳಪಟ್ಟಿದ್ದರು. ಇಂತಹ ಭೀಕರ ಯಾತನೆಗಳನ್ನು ತಡೆಯಲಾಗದೇ ಇಂದುಭೂಷಣ್ ಎಂಬ ಯುವ ಕ್ರಾಂತಿಕಾರಿ ನೇಣು ಹಾಕಿಕೊಂಡಿದ್ದ. ಉಲ್ಲಾಸ್ಕರ್ ದತ್ ಎಂಬ ಕ್ರಾಂತಿಕಾರಿಗೆ ಹುಚ್ಚು ಹಿಡಿದಿತ್ತು. ಇವತ್ತು ಸಾವರ್ಕರ್ ಅವರನ್ನು ಟೀಕಿಸುವ ಸಿದ್ಧರಾಮಯ್ಯನವರ ಆದಿಯಾಗಿ ಎಲ್ಲರನ್ನೂ ಕೇವಲ ಹದಿನೈದು ದಿನಗಳ ಕಾಲ ಇಂತಹ ಕೆಲಸಗಳನ್ನು ಹಾಗೂ ಶಿಕ್ಷೆಯನ್ನು ಅನುಭವಿಸಲು ಹೇಳಬೇಕು. ಆಗ ಅವರನ್ಯಾಕೆ ‘ವೀರ’ ಸಾವರ್ಕರ್ ಎಂದು ಕರೆಯಲಾಗುತ್ತದೆ ಎನ್ನುವುದು ಇವರಿಗೆ ಅರಿವಾಗಬಹುದು.

ಅಂದ ಹಾಗೆ, ಸಾವರ್ಕರ್ ಅವರನ್ನು “ಸ್ವಾತಂತ್ರ್ಯ ವೀರ” ಎಂದು ಕರೆಯುವುದನ್ನು ಹಲವರು ವಿರೋಧಿಸುತ್ತಾರೆ. ಇಂತಹ ಮೂರ್ಖರ ಪ್ರಕಾರ, ವಿನಾಯಕ ದಾಮೋದರ ಸಾವರ್ಕರ್ ಅವರು, ತಮಗೆ ತಾವೇ ‘ಸ್ವಾತಂತ್ರ್ಯ ವೀರ’ ಅನ್ನೋ ಬಿರುದನ್ನು ಕೊಟ್ಟು ಕೊಂಡಿದ್ದಾರೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅಸಲಿಗೆ, ಆ ಬಿರುದನ್ನು ನೀಡಿದವರು ಮಹಾರಾಷ್ಟ್ರದ ಖ್ಯಾತ ಪತ್ರಕರ್ತರು,ಮರಾಠ ಪತ್ರಿಕೆಯ ಸಂಪಾದಕರೂ, ರಂಗಕರ್ಮಿ ಹಾಗೂ ಕಾಂಗ್ರೆಸ್ಸಿಗರೂ ಆಗಿದ್ದ ಪ್ರಲ್ಹಾದ್ ಕೇಶವ ಅತ್ರೆ (ಆಚಾರ್ಯ ಅತ್ರೆಯವರು) ಪೂನಾದಲ್ಲಿ ಸಾವರ್ಕರ್ ಅವರ ಬಿಡುಗಡೆಯ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರಿಗೆ ‘ಸ್ವಾತಂತ್ರ್ಯವೀರ’ ಎಂಬ ಬಿರುದನ್ನು ಪ್ರಧಾನ ಮಾಡಿದ್ದರು.

ನೆಹರೂ ಅವರು ಒಮ್ಮೆ ತಿಂಗಳುಗಳ ಕಾಲ ಜೈಲಿನಲ್ಲಿದ್ದಾಗ, ಅವರ ತಂದೆಯವರೂ ಬಂಧನವಾಗಿ ಬಂದಾಗ ಇಬ್ಬರನ್ನು ಒಂದೇ ಸೆಲ್ಲಿನಲ್ಲಿ ಬ್ರಿಟಿಷರು ಇರಿಸಿದ್ದರು. ಇದಕ್ಕೆ ತದ್ವಿರುದ್ದವಾಗಿ ವೀರ ಸಾವರ್ಕರ್ ಅವರ ಅಣ್ಣ ಬಾಬಾ ಸಾವರ್ಕರ್ ಅವರು 1909ರಲ್ಲೇ 25 ವರ್ಷಗಳ ಕರಿನೀರಿನ ಶಿಕ್ಷೆ ಅನುಭವಿಸಲೆಂದು ಸೆಲ್ಯುಲರ್ ಜೈಲಿನಲ್ಲಿ ಅದಾಗಲೇ ಬಂದಿದ್ದರು. ವೀರ ಸಾವರ್ಕರ್ ಅವರು ಈ ಬಗ್ಗೆ ಜೈಲಿನ ಅಧಿಕಾರಿಗಳನ್ನು ನನ್ನ ಅಣ್ಣ ಎಲ್ಲಿದ್ದಾರೆ ಎಂದು ವಿಚಾರಿಸಿದರೇ, ನಿನ್ನ ಕೆಲಸ ನೋಡಿಕೋ ಎಂದು ದಬಾಯಿಸುತ್ತಿದ್ದರು. ಅಂತಿಮವಾಗಿ ಒಬ್ಬ ವಾರ್ಡರ್ ಸಹಾಯ ಮಾಡಿ ಅಣ್ಣ-ತಮ್ಮಂದಿರು ಎದುರಾಗುವಂತೆ ಮಾಡಿದ್ದ. ಎದುರಾದರೂ ಮಾತನಾಡುವ ಯಾವುದೇ ಅವಕಾಶವೂ ನೀಡಲಾಗಲಿಲ್ಲ! ಸೆಲ್ಯುಲರ್ ಜೈಲಿನ ನಿಯಮದ ಪ್ರಕಾರವೇ ಐದು ವರ್ಷ ಪೂರೈಸಿದ ಕೈದಿಗೆ, ಕುಟುಂಬದವರ ಭೇಟಿಯ ಅವಕಾಶವಿತ್ತು. ಆದರೆ, ಸಾವರ್ಕರ್ ಸಹೋದರರಿಗೆ ಅಂತಹ ಅವಕಾಶ ಸಿಕ್ಕಿದ್ದು 9 ವರ್ಷಗಳ ಬಳಿಕ. ಆದರೆ, ಆ ಭೇಟಿಗೂ ಕೆಲವೇ ದಿನಗಳ ಮೊದಲು ವೀರ್ ಸಾವರ್ಕರ್ ಅವರ ಪಾಲಿನ ಸ್ಪೂರ್ತಿಯಾಗಿದ್ದ ಅತ್ತಿಗೆ, ಬಾಬಾ ಸಾವರ್ಕರರ ಪತ್ನಿ ಯಶೂಬಾಯಿಯವರು ಮರಣಹೊಂದಿದ್ದರು. ವಿನಾಯಕ,ಬಾಬಾ ಮತ್ತು ನಾರಾಯಣ ಸಾವರ್ಕರ್ ಸಹೋದರರು ಹದಿಮೂರು ವರ್ಷಗಳ ನಂತರ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಸಾವರ್ಕರ್ ಕುಟುಂಬದ ಆಸ್ತಿಯನ್ನೆಲ್ಲ ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದರು. ಬ್ರಿಟನ್ ರಾಜನಿಗೆ ನಿಷ್ಟರಾಗಿರಬೇಕು ಎನ್ನುವ ಪ್ರಮಾಣವಚನವನ್ನು ಸ್ವೀಕರಿಸಲು ನಿರಾಕರಿಸಿದ ಕಾರಣಕ್ಕೆ ತಮ್ಮ ಬ್ಯಾರಿಸ್ಟರ್ ಪದವಿಯನ್ನೇ ಬಲಿಕೊಟ್ಟವರು ಸಾವರ್ಕರ್.

ಸಾವರ್ಕರ್ ಅವರನ್ನು ಟೀಕಿಸಲು ಪ್ರಮುಖವಾಗಿ ಬಳಸುತ್ತಿರುವುದು ಅವರು ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದರು ಎನ್ನುವುದನ್ನು. ನಿಜ, ಸಾವರ್ಕರ್ ಅವರು ಒಂದೆರಡಲ್ಲ, ಒಟ್ಟು ಏಳು ಪತ್ರಗಳನ್ನು ಬ್ರಿಟೀಷ್ ಸರ್ಕಾರಕ್ಕೆ ಬರೆದಿದ್ದರು. ಕಡೆಯ ಪತ್ರ ಅವರು ಬರೆದಿದ್ದು 1917ರಲ್ಲಿ . ಅದನ್ನೇನು ಕದ್ದು ಮುಚ್ಚಿ ಅವರು ಬರೆದಿರಲಿಲ್ಲ. ಸೆಲ್ಯುಲರ್ ಜೈಲಿನಲ್ಲಿದ್ದ ಇತರ ಕೈದಿಗಳೂ ಕೂಡ ಅದನ್ನು ಬರೆದಿದ್ದರು. ಅಲಿಪುರ ಬಾಂಬ್ ಸ್ಪೋಟದ ಕ್ರಾಂತಿಕಾರಿಗಳು, ಗದರ್ ಪಾರ್ಟಿಯ ಕ್ರಾಂತಿಕಾರಿಗಳ ಪತ್ರಗಳನ್ನು ಮನ್ನಿಸಿ ಹಾಗೂ ಕಾಲಕಾಲಕ್ಕೆ ಕ್ಷಮಾದಾನದ ಮೂಲಕವು ಹಲವು ರಾಜಕೀಯ ಕೈದಿಗಳಿಗೆ ಅಂಡಮಾನ್ ಜೈಲಿನಿಂದ ಬಿಡುಗಡೆಯ ಭಾಗ್ಯ ಸಿಕ್ಕಿತು. ಆದರೆ, “ಅಪಾಯಕಾರಿ” ವರ್ಗದಲ್ಲಿದ್ದ ಸಾವರ್ಕರ್ ಸಹೋದರರಿಗೆ ಅಂತಹ ಭಾಗ್ಯ ಸಿಕ್ಕಲು ಬ್ರಿಟಿಷ್ ಸರ್ಕಾರದ ಮೇಲೆ ವಿವಿಧ ಪ್ರಾಂತೀಯ ಸರ್ಕಾರಗಳು, ಸಾರ್ವಜನಿಕ ಮತ್ತು ಮಾಧ್ಯಮಗಳ ಒತ್ತಡವೇ ಬರಬೇಕಾಯಿತು, ಕಡೆಗೆ ಅಣ್ಣ-ತಮ್ಮನನ್ನು 1921ರಲ್ಲಿ ಅಂಡಮಾನಿನಿಂದ ಬಿಜಾಪುರ ಹಾಗೂ ರತ್ನಗಿರಿಯ ಜೈಲಿಗೆ ವರ್ಗಾಯಿಸಲಾಯಿತು. ಅಷ್ಟರಲ್ಲಾಗಲೇ ಸಾವರ್ಕರ್ ಸಹೋದರರ ಆರೋಗ್ಯ ಗಂಭೀರವಾಗಿತ್ತು. 1922ರಲ್ಲಿ ಬಾಬಾ ಸಾವರ್ಕರ್ ಅವರನ್ನು ಬೇಷರತ್ ಬಿಡುಗಡೆ ಮಾಡಲಾಯಿತು.

ಸಾವರ್ಕರ್ ಅವರನ್ನು ರತ್ನಗಿರಿ ಜೈಲಿಗೆ ವರ್ಗಾಯಿಸುವ ಕೆಲವು ದಿನಗಳ ಮೊದಲು , ಗಾಂಧೀಜಿಯವರು, ಚಿತ್ತರಂಜನ್ ದಾಸ್ ಅವರಿಗೆ ಬರೆದ ಪತ್ರವೊಂದರಲ್ಲಿ “ವಿನಾಯಕ ಸಾವರ್ಕರ್ ಅವರನ್ನು ಲಂಡನ್ನಿನಲ್ಲಿ ಭೇಟಿಯಾಗುವ ಸುಯೋಗ ನನಗೆ ಲಭಿಸಿತ್ತು. ಅವರು ಧೈರ್ಯಶಾಲಿಗಳು, ಚತುರರು, ಕೆಚ್ಚೆದೆಯ ಕ್ರಾಂತಿಕಾರಿಗಳು. ಇದರಲ್ಲಿ ಏನನ್ನೂ ಅವರು ಮುಚ್ಚುಮರೆ ಮಾಡಿಲ್ಲ. ನಮ್ಮನ್ನು ಆಳುತ್ತಿರುವ ಬ್ರಿಟಿಷ್ ಸರ್ಕಾರ ಆಳದಲ್ಲಿ ಛದ್ಮವೇಷವನ್ನು ಹಾಕಿಕುಳಿತಿದೆ. ಅದರ ಈ ಅಪಾಯಕಾರಿ ಸ್ವಭಾವವನ್ನು ನನಗಿಂತ ಮೊದಲೇ ಸಾವರ್ಕರ್ ಅವರು ಗುರುತಿಸಿದ್ದರು. ಭಾರತವನ್ನು ಪ್ರೀತಿಸಿದ್ದಕ್ಕಾಗಿ ಅವರು ಜೈಲು ಶಿಕ್ಷೆಗೆ ಒಳಪಡಬೇಕಾಯಿತು” ಎಂದು ಬರೆದಿದ್ದರು. ಗಾಂಧೀಜಿಯವರಿಗೆ ಸಾವರ್ಕರ್ ಅವರ ಕ್ಷಮಾಪಣೆ ಪತ್ರದ ಬಗ್ಗೆ ಗೊತ್ತಿರಲಿಲ್ಲವೇ? ಇದಕ್ಕೂ ಮೊದಲು ೧೯೨೦ರ ಮೇ ತಿಂಗಳಿನಲ್ಲೂ ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಸಾವರ್ಕರ್ ಸಹೋದರರ ಮನವಿ ಪತ್ರವನ್ನೇಕೆ ಬ್ರಿಟಿಷ್ ಸರ್ಕಾರ ಪರಿಗಣಿಸುತ್ತಿಲ್ಲ ಅಂತಲೂ ಗಾಂಧೀಜಿ ಪ್ರಶ್ನಿಸಿದ್ದರು.

“ಕೊಲೆ ಕೇಸಿನಲ್ಲಿ ಜೈಲಿಗೆ ಹೋದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಎಂದು ಹೇಗೆ ಕರೆಯಬೇಕು?” ಎಂದೆಲ್ಲ ಬೇಕಾಬಿಟ್ಟಿ ಬರೆದು, ಸಾವರ್ಕರ್ ಅವರ ಬಗ್ಗೆ ನಖಾಶಿಖಾಂತ ದ್ವೇಷಕಾರುತ್ತಿರುವ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಹೋಗಿ ಗಾಂಧೀಜಿಯವರ ಪತ್ರವನ್ನು ಓದಲಿ. ಓದದೇ ಚರ್ಚೆಗೆ ಬನ್ನಿ ಎನ್ನುವುದು ಹಾಸ್ಯಾಸ್ಪದ ಅಲ್ಲವೇ?

ಅಂತಿಮವಾಗಿ ಸಾವರ್ಕರ್ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು 1924ರಲ್ಲಿ. ಅದೂ ಸಂಪೂರ್ಣ ಸ್ವಾತಂತ್ರ್ಯವಲ್ಲ. (ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದ್ದು 1937ರಲ್ಲಿ) ಐದು ವರ್ಷಗಳ ಕಾಲ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಮತ್ತು ರತ್ನಗಿರಿಯನ್ನು ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತಿನೊಂದಿಗೆ. ಸಾವರ್ಕರ್ ಅವರ ಕ್ಷಮಾಪಣ ಪತ್ರದ ಬಗ್ಗೆ ಆಗಿನ ಕಾಲದಲ್ಲೂ ಕೆಲವರು ಟೀಕೆ ಮಾಡುತ್ತಿದ್ದರು ಅಂತವರಲ್ಲೊಬ್ಬ ಗಣೇಶ್ ಶಂಕರ ವಿದ್ಯಾರ್ಥಿ. ಕ್ಷಮಾಪಣಾ ಪತ್ರದ ಬದಲು ಜೈಲಿನಲ್ಲೇ ಏಕೆ ಮೃತ್ಯುವಿಗೆ ಶರಣಾಗಲಿಲ್ಲ ಎಂದು ಪತ್ರಿಕೆಯಲ್ಲಿ ಬರೆದಿದ್ದ. ಇದಕ್ಕೆ ಪ್ರತಿಕ್ರಿಯಿಸಿ ಸಾವರ್ಕರ್ ಅವರು ಲೇಖನ ಬರೆದಿದ್ದರು. ಆ ಲೇಖನದಲ್ಲಿ “ಮೊಘಲರ, ಅಫ್ಜಲ್ ಖಾನನ ಬಂಧನದಲ್ಲಿದ್ದಾಗ ಶಿವಾಜಿ ಮಹಾರಾಜರು ಪತ್ರಗಳನ್ನು ಬರೆದಿರಲಿಲ್ಲವೇ? ಅಲ್ಲಿಂದ ಬಿಡುಗಡೆಯಾದ ಮೇಲೆ ಅವರನ್ನು ಕೊಂದು ಸಾಮ್ರಾಜ್ಯವನ್ನು ಸ್ಥಾಪಿಸಲಿಲ್ಲವೇ” ಎಂದಿದ್ದರು. “ತಾವು ಬದುಕುಳಿದರೆ ಮಾತೃಭೂಮಿಯ ಶ್ರೇಯಸ್ಸಿಗಾಗಿ ಮತ್ತೆ ಹೋರಾಟಕ್ಕೆ ಧುಮುಕಬಹುದು ಎನ್ನುವುದು ಇದರ ಹಿಂದಿನ ತುಡಿತವಾಗಿತ್ತು” ಅಂತ ಸೇರಿಸಿದ್ದರು. ಪತ್ರದಲ್ಲಿ ಕಾಕೋರಿ ರೈಲಿನ ಮೇಲಿನ ದಾಳಿಯ ಪ್ರಕರಣದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ಶಚೀಂದ್ರನಾಥ್ ಸನ್ಯಾಲ್ ಮತ್ತಿತರರು ಕೂಡ ಬ್ರಿಟಿಷರಿಗೆ ತಮ್ಮನ್ನು ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದನ್ನೂ ಮತ್ತು ಸ್ವತಃ ಗಣೇಶ್ ಶಂಕರ ವಿದ್ಯಾರ್ಥಿಯೇ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಬ್ರಿಟಿಷ್ ಸರ್ಕಾರದ ಕ್ಷಮೆ ಕೋರಿ ಶಿಕ್ಷೆಯಿಂದ ಬಚಾವಾಗಿದ್ದನ್ನು ನೆನಪಿಸಿದ್ದರು. ಈಗಲೂ ಗಣೇಶ್ ಶಂಕರ ವಿದ್ಯಾರ್ಥಿಯಂತವರು ಸಾವರ್ಕರ್ ಅವರನ್ನು ಕ್ಷಮಾಪಣೆ ಪತ್ರ ಬರೆದಿದ್ದಕ್ಕಾಗಿ ಟೀಕಿಸುತ್ತಾರೆ. ಅಂತವರಲ್ಲೊಬ್ಬರು ಅರವಿಂದ ಕೇಜ್ರಿವಾಲ್. Yes, ಅರುಣ್ ಜೈಟ್ಲಿ ಹಾಗೂ ನಿತಿನ್ ಗಡ್ಕರಿಯವರ ಮಾನನಷ್ಟ ಮೊಕದ್ದಮೆಗೆ ಹೆದರಿ ಕ್ಷಮಾಪಣೆ ಕೋರಿದ್ದರಲ್ಲ ಅದೇ ಕೇಜ್ರಿವಾಲ್.

ಸಾವರ್ಕರ್ ಅವರನ್ನು ಟೀಕಿಸಲು ಬಳಸಲಾಗುವ ಮತ್ತೊಂದು ವಿಷಯ, ಬ್ರಿಟಿಷ್ ಭಾರತೀಯ ಸೈನ್ಯ ಸೇರುವಂತೆ ಅವರು ಯುವಕರನ್ನು ಒತ್ತಾಯಿಸಿದ್ದರು ಎನ್ನುವುದು. ಸಿದ್ದರಾಮಯ್ಯನವರ ಸಾವರ್ಕರ್ ಕುರಿತ ಲೇಖನದಲ್ಲೂ ಇದನ್ನೇ ಉಲ್ಲೇಖಿಸಿದ್ದಾರೆ. ಅರೇ ಸಿದ್ದರಾಮಯ್ಯನವರೇ! ಗಾಂಧೀಜಿಯವರೂ ಇದನ್ನು ಮಾಡಿರಲಿಲ್ಲವೇನು? ನಿಮಗೆ ಗೊತ್ತಿಲ್ಲವಾದರೇ, ನಿಮ್ಮದೇ ಪಕ್ಷದ ಗಾಂಧಿಯವರ ಜೀವನ ಚರಿತ್ರೆ ಓದಿಕೊಂಡು ಬನ್ನಿ. ಗಾಂಧೀಜಿ ಮಾಡಿದರೆ ಸರಿ, ಸಾವರ್ಕರ್ ಮಾಡಿದರೆ ತಪ್ಪೇ? ದ್ವೇಷದಲ್ಲಿ ಕುರುಡಾದಾಗ, ವಾಸ್ತವ ಮರೆಯಾಗುತ್ತದೆ.

ಇನ್ನು ಭಗತ್ ಸಿಂಗ್ ಅವರ ಹೆಗಲ ಮೇಲೆ ಬಂದೂಕನ್ನಿಟ್ಟು ಸಾವರ್ಕರ್ ಅವರ ಮೇಲೆ ಗುಂಡು ಹಾರಿಸುವ ವ್ಯರ್ಥ ಪ್ರಯತ್ನವನ್ನು ಸಿದ್ದರಾಮಯ್ಯನವರು ತಮ್ಮ ಲೇಖನದಲ್ಲಿ ಮಾಡಿದ್ದಾರೆ. ಬಿಜೆಪಿಯವರು ಮೊದಲು ಭಗತ್ ಸಿಂಗ್ ಅವರನ್ನು ಆಶ್ರಯಿಸಿದ್ದರಂತೆ, ನಂತರ ಭಗತ್ ಸಿಂಗ್ ಅವರು ‘ನಾನೇಕೆ ನಾಸ್ತಿಕ?’ ಎಂಬ ಪುಸ್ತಕ ಬರೆದಿದ್ದರಿಂದ ಅದು ಬಿಜೆಪಿಗೆ ಚಿಂತನೆಗೆ ಸೂಕ್ತವಲ್ಲ ಎನ್ನಿಸಿ ಅವರನ್ನು ದೂರ ಇಟ್ಟರಂತೆ! 1980 ರಲ್ಲಿ ಹುಟ್ಟಿಕೊಂಡ ಬಿಜೆಪಿಗೆ (ಅಥವಾ 1951ರ ಜನಸಂಘಕ್ಕೆ ಅಂತಲೇ ಇಟ್ಟುಕೊಳ್ಳಿ) 1931ರಲ್ಲೇ ಹುತಾತ್ಮರಾದ ಭಗತ್ ಸಿಂಗರು ಏನು ಬರೆದಿದ್ದರು ಎನ್ನುವುದು ತಿಳಿಯದೇ ಅವರನ್ನು ಐಕಾನ್ ಮಾಡಿಕೊಂಡಿದ್ದರೇನು? ಆಸಕ್ತಿಕರ ವಿಷಯವೇನು ಗೊತ್ತೇ? ಭಗತ್ ಸಿಂಗ್ ಅವರು ಜೈಲಿಗೆ ಹೋಗುವ ಮುನ್ನ ಹಾಗೂ ನಂತರ ಬರೆದ ಬರಹಗಳ ಹಸ್ತಪ್ರತಿಗಳೆಲ್ಲವೂ ನ್ಯಾಷನಲ್ ಆರ್ಕೈವ್ಸ್ ನಲ್ಲಿ ಲಭ್ಯವಿದೆ. ಆದರೆ, ಅವುಗಳಲ್ಲಿ ‘ನಾನೇಕೆ ನಾಸ್ತಿಕ’ ಎನ್ನುವುದು ಮಾತ್ರ ಸಿಗುವುದಿಲ್ಲ ಎಂದು ಬರೆಯುತ್ತಾರೆ ಇತಿಹಾಸಕಾರ ಉದಯ್ ಮಹೂರ್ಕರ್. ಇಲ್ಲದ, ಒಂದು ಪತ್ರವನ್ನು ಸೃಷ್ಟಿಸುವುದು ಎಡಪಂಥೀಯರಿಗೆ ಯಾವ ಲೆಕ್ಕ ಅಲ್ಲವೇ? ತನ್ನ ತಮ್ಮ ಕುಲ್ತಾರ್ ಸಿಂಗ್ ಅವರಿಗೆ ಬರೆದ ಕಡೆಯ ಪತ್ರದಲ್ಲಿ “ದೇವರ ಇಚ್ಚೆ” ಎನ್ನುವ ಪದವನ್ನು ಭಗತ್ ಸಿಂಗ್ ಬಳಸಿರುವುದನ್ನು ಉಲ್ಲೇಖಿಸಿ, ನಾಸ್ತಿಕನೇಕೆ ದೇವರಿಚ್ಚೆ ಎಂದು ಬರೆಯುತ್ತಾನೆ ಎಂದು ಪ್ರಶ್ನಿಸುತ್ತಾರೆ. ತಮ್ಮ ಜೈಲು ಡೈರಿಯಲ್ಲಿ ಬರೆದಿರುವ ಟಿಪ್ಪಣಿಗಳಲ್ಲಿ ಅವರು ನಾಸ್ತಿಕರಲ್ಲ ಎನ್ನುವ ಮತ್ತೊಂದು ಉದಾಹರಣೆಯನ್ನು ತೋರಿಸುತ್ತಾರೆ. “ಮತಾಂತರವಾಗುವುದಕ್ಕಿಂತ ಸಾಯುವುದು ಮೇಲೂ. ಹಿಂಸಕಾರಿ ಶಕ್ತಿಗಳ ವಿರುದ್ಧ ಧರ್ಮ ರಕ್ಷಣೆಗಾಗಿ ಹೋರಾಡಿ ಅವರನ್ನು ಸೋಲಿಸುವುದು ಅಥವಾ ಹೋರಾಡುತ್ತಲೇ ಸಾಯುವುದು ಅದಕ್ಕಿಂತಲೂ ಮೇಲು”. ಹೀಗೆ ಬರೆಯುತ್ತಿದ್ದ ಭಗತ್ ಸಿಂಗ್ ಕಮ್ಯುನಿಸ್ಟ್ ಆಗಿರಲು ಸಾಧ್ಯವೇ?

1924ರಲ್ಲಿ ಭಗತ್ ಸಿಂಗ್ ಅವರೇ ಬರೆದ ‘ವಿಶ್ವ ಪ್ರೇಮ’ ಎಂಬ ಲೇಖನದಲ್ಲಿ, ” ಸಾವರ್ಕರ್ ಅವರನ್ನು ಅರಾಜಕತವಾದಿ, ದ್ವೇಷ ತುಂಬಿದ ವ್ಯಕ್ತಿ ಎಂಬಂತೆ ಮಾತನಾಡುತ್ತಾರೆ. ಆದರೆ ಅವರು ವಿಶ್ವ ಭಾತೃತ್ವದಲ್ಲಿ ನಂಬಿಕೆಯಿರುವಂತವರು” ಎಂದು ಬರೆದಿದ್ದರು. ತಮ್ಮ ಜೈಲು ಡೈರಿಯಲ್ಲಿ ಸಾವರ್ಕರ್ ಅವರ ‘ಹಿಂದೂ-ಪದ್ ಪಾದಶಾಹಿಯ’ ಬಗ್ಗೆ ಆರು ಬಾರಿ ಉಲ್ಲೇಖಿಸಿದ್ದಾರೆ.

ಇವತ್ತಿನ ಕಮ್ಯುನಿಸ್ಟರು ಸಾವರ್ಕರ್ ಹೆಸರು ಕೇಳಿದರೆ ಉರಿದು ಬೀಳುತ್ತಾರೆ. ಆದರೆ, ಖುದ್ದು ಕಾರ್ಲ್ ಮಾರ್ಕ್ಸ್ ಅವರ ಮೊಮ್ಮಗ ಜೀನ್ ಲಾಂಗೇಟ್ ಅವರು, ಫ್ರಾನ್ಸಿನಲ್ಲಿ ಸಾವರ್ಕರ್ ಅವರನ್ನು ಬ್ರಿಟಿಷರು ಅಕ್ರಮವಾಗಿ ಬಂಧಿಸಿದ್ದರ ವಿರುದ್ದ ಮೊದಲಬಾರಿಗೆ ದೊಡ್ಡ ಮಟ್ಟದಲ್ಲಿ ದನಿಯೆತ್ತಿದವರು ಎನ್ನುವುದು ಇವರಿಗೆ ತಿಳಿಯಬೇಕು. ಹಲವು ಸಾಮಾಜವಾದಿಗಳು ಅಂದು ಸಾವರ್ಕರ್ ಅವರ ಬೆಂಬಲಕ್ಕೆ ಬಂದಿದ್ದರು. ಫ್ರಾನ್ಸ್, ಜರ್ಮನಿ, ಅಮೇರಿಕಾದ ಪತ್ರಿಕೆಗಳಲ್ಲಿ ಸಾವರ್ಕರ್ ಅವರನ್ನು ಫ್ರಾನ್ಸಿಗೆ ಒಪ್ಪಿಸುವಂತೆ ದೊಡ್ಡ ಮಟ್ಟದಲ್ಲಿ ಪರ-ವಿರೋಧದ ಚರ್ಚೆಗಳಾಗಿದ್ದವು. ಅದು ವೀರ್ ಸಾವರ್ಕರ್ ಅವರ ತಾಕತ್ತು. ಅಂತರರಾಷ್ಟ್ರೀಯ ನ್ಯಾಯಯಾಲಯದ ಮೆಟ್ಟಿಲೇರಿದ ಮೊದಲ ರಾಜಕೀಯ ಪ್ರಕರಣ ಸಾವರ್ಕರ್ ಅವರದ್ದು.

ಸಿದ್ದರಾಮಯ್ಯನವರು ತಮ್ಮ ಲೇಖನದಲ್ಲಿ , ದೇಶ ವಿಭಜನೆಯ ಚಿಂತನೆಯನ್ನು ಮೊದಲು ಮುಂದಿಟ್ಟಿದ್ದೇ ಸಾವರ್ಕರ್ ಅವರು ಎನ್ನುವ ಹಳೆ ಸುಳ್ಳನ್ನೇ ಮತ್ತೊಮ್ಮೆ ಒಗಾಯಿಸಿದ್ದಾರೆ. ಆದರೆ, ಅಸಲಿಗೆ ಅಂತಹ ವಿಭಜನೆಯ ವಿಷ ಬೀಜ ಬಿತ್ತಿದ್ದು ಸರ್ ಸಯ್ಯದ್ ಅಹ್ಮದ್ ಖಾನ್ ಅವರು. ಅದೂ ಕೂಡ 1887,88ರಲ್ಲಿ. ಕಾಂಗ್ರೆಸ್ಸ್ ಹುಟ್ಟಿದ ನಂತರ, ಅದನ್ನೇ ಗುರಿಯಾಗಿಸಿ, ಬ್ರಿಟಿಷರು ಬಂದು ಮುಸ್ಲಿಮರ ಕೈಯಲ್ಲಿದ್ದ ಆಡಳಿತವನ್ನು ಕಿತ್ತುಕೊಂಡು ಹಿಂದೂಗಳ ಕೈಗೆ ಕೊಡುತ್ತಿದ್ದಾರೆ ಎನ್ನುವ ಪುಕಾರನ್ನೆಬ್ಬಿಸ್ಸಿದ್ದು ಸಯ್ಯದ್ ಅಹ್ಮದ್ ಖಾನ್. ಆದರೆ ವಾಸ್ತವದಲ್ಲಿ ಬ್ರಿಟಿಷರು ಭಾರತವನ್ನು ಆಕ್ರಮಿಸುವ ವೇಳೆಗೆ ಮೊಘಲರು ಮೂಲೆ ಸೇರಿಯಾಗಿತ್ತು. ಅವಿಭಜಿತ ಭಾರತದ ಉತ್ತರ, ಪಶ್ಚಿಮ,ಪೂರ್ವದ ಬಹುತೇಕ ಭಾಗ ಮರಾಠ ಸಾಮ್ರಾಜ್ಯದ ಭಾಗವಾಗಿ ಹಿಂದೂಗಳಲ್ಲೇ ಇತ್ತು. ಸಯ್ಯದ್ ಅಹ್ಮದ್ ಖಾನ್ ಸಾವಿನ ೮ ವರ್ಷಗಳ ನಂತರ ಮುಸ್ಲಿಂ ಲೀಗ್ ಜನ್ಮ ತಾಳಿದ್ದು. ಸಾವರ್ಕರ್ ಅವರು ಜೈಲಿನಿಂದ ಬಿಡುಗಡೆಯಾಗಿ ಸಕ್ರಿಯ ರಾಜಕಾರಣಕ್ಕೆ ಬಂದಿದ್ದು 1937ರಲ್ಲಿ. ಹೀಗಿದ್ದಾಗ ಸಿದ್ದರಾಮಯ್ಯನವರಿಗೆ ಹೀಗೆ ಹಸಿಸುಳ್ಳು ಹೇಳಲು ಕಸಿವಿಸಿಯಾಗುವುದಿಲ್ಲವೇ? ಮುಸ್ಲಿಂ ಲೀಗಿನ ವಿಭಜನಕಾರಿ ನಡವಳಿಕೆಗೆ ನೀರೆರೆದು ಪೋಷಿಸಿದ್ದು ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿಯೇ. ಲೇಖನದಲ್ಲಿ ಸಿದ್ದರಾಮಯ್ಯನವರು ಆರೆಸ್ಸೆಸ್ಸ್ ಹಾಗೂ ಮುಸ್ಲಿಂ ಲೀಗ್ ಅವಳಿ ಜವಳಿ ಎಂದಿದ್ದಾರೆ. ಕಾಂಗ್ರೆಸ್ ಹುಟ್ಟಿದಾಗಲೂ ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಥೇಟ್ ಸಿದ್ದರಾಮಯ್ಯನವರು ಆರೆಸ್ಸೆಸ್ಸ್ ವಿರುದ್ಧ ಮಾತನಾಡುವ ಧಾಟಿಯಲ್ಲೇ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದರು. ಸಯ್ಯದ್ ಅಹ್ಮದ್ ಖಾನ್ ಹಾಗೂ ಮುಸ್ಲಿಂ ಲೀಗಿನ ಪಾಲಿಗೆ ಆಗಿನ ಕಾಂಗ್ರೆಸ್ ಎಂದರೆ ಹಿಂದೂಗಳ ಪಕ್ಷವಾಗಿತ್ತು. ಆದರೆ ತಾನು ಹಿಂದೂಗಳ ಪಕ್ಷವಲ್ಲ ಎಂದು ತೋರಿಸಲು ಹೆಣಗಾಡುತ್ತಿದ್ದ ಕಾಂಗ್ರೆಸ್ಸನ್ನು ಮೂಲಭೂತವಾದಿಗಳು ಪಕ್ಷದ ಒಳಗೆ ಬಂದೇ ನಿಯಂತ್ರಿಸಲು ಆರಂಭಿಸಿದ್ದರು. ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿಯ ಬಗ್ಗೆ ಸಿದ್ದರಾಮಯ್ಯನವರು ಆತ್ಮಾವಲೋಕನ ಮಾಡಿಕೊಂಡು, ನಂತರ ಉಳಿದವರಿಗೆ ಬುದ್ಧಿ ಹೇಳಲಿ.

ಇದು ಬೆರಳ ತುದಿಯಲ್ಲಿ ಮಾಹಿತಿಯನ್ನು ಜಾಲಾಡಿ ತೆಗೆಯಬಲ್ಲ ಜಮಾನಾ ಸಿದ್ದರಾಮಯ್ಯನವರೇ. ಇಂದಿನ ಯುವಕರು ಅದರಲ್ಲಿ ನಿಷ್ಣಾತರು. ಅವರು ಮೂಲಕ್ಕೆ ಹೋಗಿ ಶೋಧಿಸಲೂ ಬಲ್ಲರು, ನಿಮ್ಮಂತವರ ಸುಳ್ಳಿನ ಲೇಖನದ ಪರದೆಯನ್ನೂ ಸರಿಸಬಲ್ಲರು. ಸ್ವಾತಂತ್ರ್ಯ ವೀರ ಸಾವರ್ಕರ್ ಅವರು 27ನೇ ವಯಸ್ಸಿನ ತರುಣರಾಗಿದ್ದಾಗ ಬಂಧನಕ್ಕೊಳಪಟ್ಟು ಅದರಿಂದ ಸಂಪೂರ್ಣ ಬಿಡುಗಡೆ ಪಡೆದಿದ್ದು 54ರ ವಯಸ್ಸಿನಲ್ಲಿ. ನಿಮಗೆ ತಿಳಿದಿರಲಿ ಮೋಹನ್ ದಾಸ್ ಗಾಂಧಿಯವರು ಭಾರತೀಯದ ರಾಜಕೀಯಕ್ಕೆ ಕಾಲಿಡುವ ವೇಳೆಗಾಗಲೇ ಸಾವರ್ಕರ್ ಅವರು 5 ವರ್ಷಗಳ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದ್ದರು. ಅಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇನ್ನಾದರೂ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಿರಿ. ನೆಹರೂ,ಗಾಂಧಿಯವರನ್ನು ಶಿಕ್ಷೆಯ ಅವಧಿ ಪೂರ್ಣಗೊಳಿಸುವ ಮುನ್ನವೇ ಎಷ್ಟೋ ಬಾರಿ ಬಿಡುಗಡೆ ಮಾಡಿದ್ದ ಬ್ರಿಟಿಷರೇಕೆ ಸಾವರ್ಕರ್ ಸಹೋದರರನ್ನು ಮಾತ್ರ “ಅಪಾಯಕಾರಿ” ಎಂದು ಪರಿಗಣಿಸಿದ್ದರು, ಯಾಕೆ A-class ಕೈದಿಗಳ ಸ್ಥಾನಮಾನ ಕೊಡಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರೆ, ಅವರನ್ನೇಕೆ “ವೀರ” ಎಂದು ಕರೆಯುತ್ತಾರೆ ಎನ್ನುವುದು ನಿಮಗೇ ಅರ್ಥವಾದೀತು. ಬ್ರಿಟಿಷ್ ಅಧಿಕಾರಿಯೊಬ್ಬರು, ಈತನನ್ನು ಅಂಡಮಾನಿನಿಂದ ಹೊರಗಿನ ಜೈಲಿನಲ್ಲಿಟ್ಟರೆ, ಈತ ಅಲ್ಲಿಂದ ತಪ್ಪಿಸಿಕೊಂಡು ಹೋಗಬಹುದು. ಈತನ ಅನುಯಾಯಿಗಳು ಒಂದು ಹಡಗನ್ನೇ ತಂದು ಬೇರೆ ದೇಶಕ್ಕೆ ಕೊಂಡೊಯ್ಯಬಹುದು ಅಂತೆಲ್ಲ ಆತಂಕ ವ್ಯಕ್ತಪಡಿಸಿದ್ದ.

ಅಂತಿಮವಾಗಿ, ಸಾವರ್ಕರ್ ಅವರನ್ನು ದ್ವೇಷಿಸುವ ಮುಸಲ್ಮಾನರಿಗೆ ಹಾಗೂ ಮುಸಲ್ಮಾನ ಪ್ರಿಯ ಸಿದ್ದರಾಮಯ್ಯನವರಿಗೆ ತಿಳಿದಿರಲಿ. ಗದರ್ ಪಾರ್ಟಿಯ ಕ್ರಾಂತಿಕಾರಿಗಳು, ಸರ್ದಾರ್ ಭಗತ್ ಸಿಂಗ್ ಆದಿಯಾಗಿ ಭಾರತದ ಅಂದಿನ ಪ್ರತಿ ಕ್ರಾಂತಿಕಾರಿಗಳ ಪಾಲಿನ ದಿವ್ಯ ಗ್ರಂಥವಾಗಿದ್ದ 1857ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿಯಲ್ಲಿ ಸಾವರ್ಕರ್ ಅವರು ಹಿಂದೂ-ಮುಸ್ಲಿಂ ಐಕ್ಯತೆಯ ಹೋರಾಟವನ್ನೇ ಚಿತ್ರಿಸಿದ್ದರು. ಖುದ್ದು ಭಗತ್ ಸಿಂಗ್ ಅವರೇ ಈ ಗ್ರಂಥವನ್ನು ಪುನರ್ ಮುದ್ರಿಸಿದ್ದರು. ಈಗ ಅಯೋಧ್ಯೆಯಲ್ಲಿ ಸರ್ಕಾರ ನೀಡಿದ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ ಹೆಸರು, 1857ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೌಲ್ವಿ ಅಹ್ಮದುಲ್ಲಾ ಶಾ ಅವರದ್ದು. ಅಂತಹ ಅಹ್ಮದುಲ್ಲಾ ಶಾ ಅವರ ಬಗ್ಗೆ ತಮ್ಮ ಗ್ರಂಥದಲ್ಲಿ ಬರೆದು ಜಗತ್ತಿಗೆ ಪರಿಚಯಿಸಿದವರು ಸಾವರ್ಕರ್.

1909ರಲ್ಲಿ ಲಂಡನ್ನಿನಲ್ಲಿ ನಡೆದ ದಸರಾ ಸಮಾರಂಭದಲ್ಲಿ ಮಾತನಾಡಿದ್ದ ಸಾವರ್ಕರ್ ಅವರು ಭಾರತದ ವಿವಿಧ ಸಂಸ್ಕೃತಿಯ ಕಾಮನಬಿಲ್ಲುಗಳಲ್ಲಿ ಮುಸ್ಲಿಮರೂ ಇದ್ದಾರೆ ಎಂದಿದ್ದರು. ಆ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಕ್ರಾಂತಿಕಾರಿ ಅಸಫ್ ಅಲಿಯವರೂ ಕೂಡ ಇದ್ದರು. ಇಂತಹ ಸಾವರ್ಕರ ಅವರ ಇಸ್ಲಾಂ ಕುರಿತ ಧೋರಣೆಯನ್ನು ಬದಲಾಯಿಸಿದ್ದು ಅಂಡಮಾನ್ ಜೈಲಿನ ಪಠಾಣ್,ಬಲೂಚಿ ಮುಸಲ್ಮಾನರ ನಡವಳಿಕೆಗಳು. ಜೈಲಿನ ಅಸಹಾಯಕ ಕೈದಿಗಳನ್ನು ಮತಾಂತರ ಮಾಡಿಸುತ್ತಿದ್ದ ಅವರ ನೀತಿಗಳು. ಇದರ ಜೊತೆಗೆ ಗಾಯಕ್ಕೆ ಉಪ್ಪು ಸುರಿಯುವಂತೆ ನಡೆದ ಮೂಲಭೂತವಾದಿ ಖಿಲಾಫತ್ ಚಳವಳಿ ಹಾಗೂ ಮಾಪಿಳ್ಳೆಗಳು ನಡೆಸಿದ ಹಿಂದೂಗಳ ಹತ್ಯಾಕಾಂಡ. ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ಸಿನೊಳಗಿನ ಮುಸ್ಲಿಂ ಮೂಲಭೂತವಾದಿಗಳ ವರ್ತನೆಗಳು. 1938ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದಾಗಲೂ, ಲಾಹೋರಿನಲ್ಲಿ ಜಿನ್ನಾ ಹಾಗೂ ಅವರ ನಡುವಿನ ಸಾಮ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ” ಜಿನ್ನಾ ಹಾಗೂ ನಾನು ಇಬ್ಬರು ಒಂದೇ ನಾಣ್ಯದ ಎರಡು ಮುಖಗಳಲ್ಲ. ನನ್ನ ದೃಷ್ಟಿಯಲ್ಲಿ ಹಿಂದೂ ಮುಸ್ಲಿಂ ಇಬ್ಬರಿಗೂ ಒಂದೇ ರೀತಿಯ ಸೌಲಭ್ಯಗಳು ಸಿಗಬೇಕು.ಅದರಲ್ಲಿ ಯಾವುದೇ ಬೇಧ ಭಾವವಿರಕೂಡದು. ಆದರೆ ಜಿನ್ನಾ ಅವರ ದೃಷ್ಟಿಯಲ್ಲಿ ಮುಸ್ಲಿಮರಿಗೆ ಮಾತ್ರವೇ ವಿಶೇಷ ಸವಲತ್ತುಗಳು ಸಿಗಬೇಕು.” ಎಂದಿದ್ದರು. ಸಾವರ್ಕರ್ ಅವರ ಹಿಂದುತ್ವದ ದೃಷ್ಟಿಯ ಪ್ರಕಾರ “ಸ್ವತಂತ್ರ ಭಾರತದಲ್ಲಿ ಎಲ್ಲಾ ಧರ್ಮ,ಜಾತಿಯವರಿಗೂ ಸಮಾನ ಹಕ್ಕುಗಳಿರುತ್ತವೆ. ಅವರವರ ಧರ್ಮದ ಆಚರಣೆಗಳನ್ನು ಎಲ್ಲರೂ ಮುಕ್ತವಾಗಿ ಮಾಡಬಹುದು. ಆದರೆ, ದೇಶದೊಳಗೆ, ಧರ್ಮದ ಆಧಾರದಲ್ಲಿ ತಮ್ಮದೇ ಆದ ಮತ್ತೊಂದು ದೇಶವನ್ನು ಸೃಷ್ಟಿಸುವ ವಿಭಜನಕಾರಿ ನೀತಿಗೆ ಬಿಲ್ ಕುಲ್ ಒಪ್ಪಿಗೆಯಿಲ್ಲ” . ಹೇಳಿ ಇದರಲ್ಲೇನು ತಪ್ಪಿದೆ? ನಿಮಗೇಕೆ ವಿನಾಕಾರಣ ಸಾವರ್ಕರ್ ಅವರ ಮೇಲೆ ದ್ವೇಷ? ಮುಸ್ಲಿಮ್ ಏರಿಯಾಗಳಲ್ಲಿ ಸಾವರ್ಕರ್ ಬ್ಯಾನರ್ ಹಾಕುವಂತಿಲ್ಲ ಎನ್ನಲು, ಮುಸ್ಲಿಂ ಏರಿಯಾಗಳು ಪಾಕಿಸ್ತಾನದಲ್ಲಿವೆಯೇ? ಸಾವರ್ಕರ್ ಅವರನ್ನು ಪ್ರಶ್ನಿಸುವ ಮೊದಲು ನಿಮ್ಮ ಸಮುದಾಯದ ವರ್ತನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ.

ಗ್ರಂಥಋಣ :

ಸಾವರ್ಕರ್ – ಹಿಂದುತ್ವದ ಜನಕನ ನಿಜಕತೆ : ವೈಭವ್ ಪುರಂದರೆ (ಕನ್ನಡ : ಜಯಪ್ರಕಾಶ ನಾರಾಯಣ)

ವೀರ್ ಸಾವರ್ಕರ್ – ದಿ ಮ್ಯಾನ್ ವು ಕುಲ್ಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶಿಯನ್ – ಉದಯ್ ಮಹೂರ್ಕರ್, ಚಿರಾಯು ಪಂಡಿತ್

ಜವಹರಲಾಲ್ – ಆಟೋಬಯೋಗ್ರಾಫಿ

ಬ್ರಿಟನ್ ಪಾರ್ಲಿಮೆಂಟ್ ಚರ್ಚೆಗಳು

1 ಟಿಪ್ಪಣಿ Post a comment
  1. ಭಾನುಪ್ರಕಾಶ
    ಆಗಸ್ಟ್ 22 2022

    ಲೇಖನ ಸತ್ಯಯುತ ವಿಚಾರದಿಂದ ತುಂಬಿದೆ.ಜೈಲುಶಿಕ್ಷೆ ನೆಹರೂಗೆ ತಪ್ಪಿಸಲು ಅವರಪ್ಪ ಇದ್ದರು.!!.ಗಾಂಧಿಯವರು ಹೋರಾಟ ರಂಗ ಪ್ರವೇಶಿಸುವ ಮೊದಲು ಸಾವರ್ಕರ್,ಕ್ಷಾತ್ರತೇಜಸ್ಸಿನ ಹೋರಾಟ ಗಾರರನ್ನು ಸೃಷ್ಟಿಸಿ 5ವರ್ಷ ಕರಿನೀರಿನ ಶಿಕ್ಷೆ ಅನುಭವಿಸಿದ್ದರು. ನೆಹರೂಸಾಬರು! ಪದ ಸಕಾಲಿಕಸತ್ಯ.ತುಷ್ಟೀಕರಣ ವಿಕೃತಿಗೆ ಈ ಪದ ಸಾಕು.ಕಾಂಗ್ರೆಸ್ಸಿನ ರಾಜ್ಯದ ಎಲ್ಲ ಮರಿ,ಪುಡಿ ಭಾರೀ,ನಾಯಕರೆಲ್ಲ ಸೇರಿ ಸಾವರ್ಕರ್ ಅನುಭವಿಸಿದ ದಾರುಣ ಶಿಕ್ಷೆಯನ್ನು ಹಂಚಿಕೊಂಡು ಮಾಡಲು ಸಾದ್ಯವಾಗದ್ದನ್ನು ನೀವು ಸಿ ದ್ದರಾಮಯ್ಯ 15ದಿನ ಅನುಭವಿಸಲಿ ಎಂದು ಸವಾಲು ಹಾಕಿರುವ ಘೋರ ಅನ್ಯಾಯ!,ಅಧಿಕಾರಕ್ಕೆ ಮಾಡಿದ ಪಾದಯಾತ್ರೆಯ ಮಧ್ಯೆ ಕಾಲುನೋವಿನಿಂದ ಆಸ್ಪತ್ರೆಯ ಸೇರುವ ,ಮೊಟ್ಟೆಯ ಹೊಡೆತ ಸಹಿಸಲು ಆಗದವರ ಮೇಲೆ ನಿಮ್ಮ ಸವಾಲು ಬಹಳ ಅನ್ಯಾಯ!!! ಆತ್ಮಾವಲೋಕನ ಮಾಡಿಕೊಳ್ಳಲು ತಿಳಿಸಿರುವಿರಿ ನಿಮಗೆ ಅದರ ವಿಳಾಸ,ದರ,ಸಿಗುವ ಸ್ಥಳ,ತೂಕಕ್ಕೆ ಅಥವಾ ಲೀಟರ್,ಮಾಂಸದ ಅಂಗಡಿನಾ ಗ್ರಂಥಿಗೆ ಅಂಗಡಿಯಾ? ತಿಳಿಸುವ ಕೃಪೆಮಾಡಿ.ಕಾರಣ ಚುನಾವಣೆ ಸಮೀಪಿಸುತ್ತಿದೆ.ಕ್ಷೇತ ಹುಡುಕಾಟ ಮಾಡುವಾಗ ಅದನ್ನು ಹುಡುಕಲು ಪಾಪ ಸಿದ್ದರಾಮಯ್ಯಗೆ ಸಹಕಾರ ವಾಗುತ್ತೆ!!!?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments