ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2023

2

ಈ ಶೆಟ್ಟರ್, ‘ಆ ಶೆಟ್ಟರ್’ಗಳಂತಲ್ಲ!

‍ನಿಲುಮೆ ಮೂಲಕ


ಸಂತೋಷ್ ತಮ್ಮಯ್ಯ

ತುಂಬಿದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಚೌಗಲೆ ಸಾಹೇಬರು ಕಲಾಪ ನಡೆಸುತ್ತಿದ್ದರು. ಆಗಿನ್ನೂ ವಕೀಲರುಗಳು ಕಡ್ಡಾಯವಾಗಿ ಕರಿಕೋಟನ್ನು ಧರಿಸಬೇಕೆಂದಿರಲಿಲ್ಲ. ಹಾಗಾಗಿ ಸಭಾಂಗಣದೊಳಗೆ ವಕೀಲರ‍್ಯಾರು? ಕಕ್ಷಿದಾರರ‍್ಯಾರೆಂಬುದು ಗೊತ್ತಾಗುತ್ತಿರಲಿಲ್ಲ. ಅಂದು ನ್ಯಾ. ಚೌಗಲೆಯವರು, ಖ್ಯಾತ ವಕೀಲ ಭೀಮರಾವ್ ಭಂಡಿವಾಡರಿಗೆ ಮೈತಾಗಿಸಿ ಕುಳಿತು ತನ್ನನ್ನೇ ದಿಟ್ಟಿಸುತ್ತಿದ್ದ ಯುವಕನೊಬ್ಬನತ್ತ ಬೊಟ್ಟುಮಾಡಿ ’ಯಾರು ಈ ಹುಡುಗ?’ ಎಂದು ಕೇಳಿದರು. ’ಭಂಡಿವಾಡರು ನನಗೆ ತಿಳಿಯದು ಮಹಾಸ್ವಾಮಿ’ ಎಂದುತ್ತರಿಸಿದರು. ನ್ಯಾಯಮೂರ್ತಿಗಳು ಸಿಡುಕುಮುಖದೊಂದಿಗೆ ಕಲಾಪದಲ್ಲಿ ವ್ಯಸ್ತರಾದರು. ಆ ಯುವಕ ಬೇಸರದಿಂದ ಹೊರನಡೆದ.

ಮರುದಿನ ಕಛೇರಿಗೆ ಬಂದಾಗ ಚೌಗಲೆಯವರಿಗೆ ಲಕೋಟೆಯೊಂದು ಕಾಯುತ್ತಿತ್ತು. ಅದನ್ನು ಓದುತ್ತಲೇ ಚೌಗಲೆ ಸಾಹೇಬರು ಕೋಪದಿಂದ ನಡುಗಲಾರಂಭಿಸಿದರು.

ಆ ಪತ್ರ ಹೀಗಿತ್ತು: ‘ನ್ಯಾಯಾಲಯದೊಳಗೆ ಬಂದು ಕಲಾಪಗಳನ್ನು ವೀಕ್ಷಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಅಧಿಕಾರವಿದೆ. ಹೊಸದಾಗಿ ವಕೀಲಿ ವೃತ್ತಿ ಆರಂಭಿಸುವವರು ಕಲಾಪಗಳನ್ನು ವೀಕ್ಷಿಸಿ ಅನುಭವವನ್ನು ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಬ್ಬ ತರುಣ ವಕೀಲನಾದ ನಾನು ಹಿರಿಯ ವಕೀಲರ ಪಕ್ಕದಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿರುತ್ತೇನೆ. ತಾವು ನೇರವಾಗಿ ನನಗೇ ಪ್ರಶ್ನೆಯನ್ನು ಮಾಡಬಹುದಿತ್ತು. ಆದರೆ ನೀವು ನಾನು ಯಾರೆಂದು ಹಿರಿಯ ವಕೀಲರನ್ನು ಕೇಳಿದಿರಿ. ಆದ್ದರಿಂದ ನಾನು ಏನನ್ನೂ ಹೇಳದೆ ಸುಮ್ಮನಿದ್ದೆ. ಹೀಗೆ ಬೇರೆಯವರಿಗೆ ಪ್ರಶ್ನೆ ಹಾಕಿ ನನ್ನ ಬಗ್ಗೆ ಉತ್ತರ ಪಡೆಯುವ ನಿಮ್ಮ ವಿಧಾನ ನನಗೂ, ವಕೀಲಿ ವೃತ್ತಿಗೂ ಗೈದ ಅಪಮಾನವೆಂದು ತಿಳಿದಿದ್ದೇನೆ ಮತ್ತು ಅಸಮಾಧಾನವನ್ನು ಸೂಚಿಸುತ್ತಿದ್ದೇನೆ. ಇದು ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟುಮಾಡಿದೆ. ಹೀಗೆ ಮಾಡಲು ನಿಮಗೇನು ಅಧಿಕಾರವಿದೆ? ನೀವು ನಿಮ್ಮ ತಪ್ಪಿಗಾಗಿ ಕ್ಷಮೆ ಕೋರಿ ವಕೀಲಿ ವೃತ್ತಿಯ ಘನತೆಯನ್ನು ಎತ್ತಿಹಿಡಿಯಬೇಕು-ಸದಾಶಿವ ಶಂಕರಪ್ಪ ಶೆಟ್ಟರ್‘

ಈ ಪತ್ರವನ್ನೋದಿದ ನ್ಯಾಯಾಶರು ತಬ್ಬಿಬ್ಬಾದರು. ಅದು ಭಾರೀ ಸುದ್ದಿಯಾಗಿ ಪೇಟೆಯಲ್ಲೂ ಚರ್ಚೆಯಾಯಿತು. ’ಯಾರೀತ? ಯಾರು ಈ ಶೆಟ್ಟರ್?’ ಕೊನೆಗೆ ಏನೋ ನೆನಪು ಮಾಡಿಕೊಂಡ ಚೌಗಲೆಯವರು ಆ ಯುವಕನನ್ನು ಕಛೇರಿಗೆ ಕರೆಸಿಕೊಂಡು ‘ನೀನು ಶಂಕ್ರಪ್ಪ ಶಿವಪ್ಪ ಶೆಟ್ಟರ್ (ಎಸ್.ಎಸ್ ಶೆಟ್ಟರ್) ಮಗನೇನು?‘ ಎಂದು ಕೇಳಿದರು. ಹುಡುಗ ಹೌದೆಂದ!

ಇವೆಲ್ಲಾ ನಡೆದು ಈಗ ಅರ್ಧ ಶತಮಾನಗಳೇ ಕಳೆದಿವೆ. ಆದರೆ ’ಯಾರೀತ? ಯಾರು ಈ ಶೆಟ್ಟರ್?’ ಎಂಬ ಪ್ರಶ್ನೆ ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯವನ್ನು ಕಾಡುತ್ತಿದೆ! ಎಸ್.ಎಸ್. ಶೆಟ್ಟರ್ ಮಗ ಈ ಸದಾಶಿವ ಶೆಟ್ಟರ್ ಆದರೆ, ಇಂವ ಯಾವ ಶೆಟ್ಟರ್? ಇವರಪ್ಪನೂ ಎಸ್.ಎಸ್. ಶೆಟ್ಟರ್ ಅಲ್ಲವೇ? ಮುಂತಾದ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಇವು ಕೇವಲ ಪ್ರಶ್ನೆಗಳು ಮಾತ್ರವಾಗಿದ್ದರೆ ಅದರಲ್ಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಈಗ ಉದ್ಭವಿಸಿದ ಪ್ರಶ್ನೆ ಮೌಲ್ಯಗಳ, ನಿಷ್ಠೆಯ, ಪ್ರಾಮಾಣಿಕತೆಯ ಪ್ರಶ್ನೆ. ಇದೀಗ ಚರ್ಚೆಯಾಗುತ್ತಿರುವ ಅಧಿಕಾರದಾಸೆಯ ಶೆಟ್ಟರನ್ನು ಕೆಲವರು ವಕೀಲ ಸದಾಶಿವ ಶೆಟ್ಟರರ ಮಗ ಎಂದುಕೊಂಡಿದ್ದಾರೆ. ಜನಸಂಘದ ಮಹಾ ನಾಯಕರ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟರ್ ಕುಡಿಯೇಕೆ ಹೀಗೆ ಮಾಡಿದರು ಎಂದು ನೊಂದುಕೊಂಡವರಿದ್ದಾರೆ. ಆದರೆ ಸದಾಶಿವ ಶೆಟ್ಟರ್ ಮನೆತನದ ಇತಿಹಾಸವನ್ನು ಅಧ್ಯಯನ ಮಾಡಿದರೆ ಅಲ್ಲಿ ಮೂರು ಶತಮಾನಗಳಿಂದಲೂ ಪ್ರಾಮಾಣಿಕರು, ಧರ್ಮರಕ್ಷಣೆಗೆ ಬದುಕು ಮುಡಿಪಾಗಿಟ್ಟವರು, ಸಮಾಜಕ್ಕಾಗಿ ಬದುಕಿದವರು ಮಾತ್ರ ಕಾಣುತ್ತಾರೆಯೇ ಹೊರತು ಅಧಿಕಾರಕ್ಕಾಗಿ ಹಪಹಪಿಸಿದ, ಧನದಾಹಿ ’ಶೆಟ್ಟರ್’ ಕಾಣಿಸುವುದಿಲ್ಲ. ಹಾಗಾದರೆ ಬಣ್ಣಬದಲಿಸಿದ ಈ ಶೆಟ್ಟರ್ ಯಾರು?

ಅದರ ಕಥೆ ರಾಜಮೌಳಿ ಸಿನೆಮಾದಂತೆ, ತ.ಸು. ಶಾಮರಾಯರ ’ಮೂರು ತಲೆಮಾರು’ ಪುಸ್ತಕದಂತೆ ರೋಚಕವಾಗಿದೆ.

ಲಭ್ಯ ದಾಖಲೆಗಳ ಪ್ರಕಾರ ಶೆಟ್ಟರ್ ವಂಶದ ಇತಿಹಾಸ ಆರಂಭವಾಗುವುದು ೧೬ನೇ ಶತಮಾನದ ಗೋಕಾಕದ ಕಾಡಪ್ಪ ಶೆಟ್ಟರ್ ಎಂಬ ಶಿವಭಕ್ತರಿಂದ. ಶರಣತತ್ತ್ವಗಳ ಪ್ರಕಾರ ಬದುಕಿದ ಅನುಕೂಲಸ್ಥ ಕಾಡಪ್ಪನವರಿಗೆ ಇಬ್ಬರು ಮಕ್ಕಳು. ಎರಡನೆಯ ಮಗ ಬಸಪ್ಪ ಶೆಟ್ಟರ್ ತಂದೆಯಂತೆಯೇ ಶಿವಭಕ್ತ. ಅವರ ಸಮಾಜಸೇವೆ ಮತ್ತು ಸಾತ್ತ್ವಿಕ ಗುಣವನ್ನು ಗದಗಿನ ತೋಂಟದಾರ್ಯ ಸ್ವಾಮಿಗಳು, ಸವಣೂರಿನ ನವಾಬರು ಮತ್ತು ಜಡೆ ಮಠದ ಸ್ವಾಮಿಗಳು ಮೆಚ್ಚಿ ಗೌರವದ ಸ್ಥಾನಮಾನಗಳನ್ನು ನೀಡಿದ್ದರು. ಗುರುಸಿದ್ದೇಶ್ವರ ಸ್ವಾಮಿಗಳನ್ನು ಚಿತ್ರದುರ್ಗದಿಂದ ಕರೆಸಿ ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠವನ್ನು ಅವರು ನಿರ್ಮಿಸಿದ್ದರು. ಮುಂದೆ ಮಠಕ್ಕೆ ಅವರ ಮೂರನೆಯ ಮಗ ಗುರುಸಿದ್ಧಪ್ಪ ಶೆಟ್ಟರ್ ಮಠಾಧಿಪತಿಯೂ ಆದರು. ಇವರು ಕಾಡಪ್ಪ ಶೆಟ್ಟರ್ ವಂಶದ ಮೂರನೇ ತಲೆಮಾರು. ಇವರ ನಂತರದ ಐದನೇ ತಲೆಮಾರಿನಲ್ಲಿ ಜನಿಸಿದವರೇ ಶಂಕ್ರಪ್ಪ ಶಿವಪ್ಪ ಶೆಟ್ಟರ್ ಅಥವಾ ಎಸ್.ಎಸ್. ಶೆಟ್ಟರ್. ಇವರೇ ನ್ಯಾಯಾಶರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ ಸ್ವಾಭಿಮಾನಿ ಸದಾಶಿವ ಶೆಟ್ಟರ್ ತಂದೆ. ವಕೀಲರಾಗಿದ್ದ ಎಸ್.ಎಸ್. ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೀಮೆಯಲ್ಲಿ ಹೆಸರಾಂತ ವ್ಯಕ್ತಿ. ಶೆಟ್ಟರ್ ಚಾಳ್‌ಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸದ ಕೊಡುಗೈ ದಾನಿ. ಧಾರವಾಡ ಸೀಮೆಯ ಹಳ್ಳಿಗಳಿಂದ ಮಕ್ಕಳನ್ನು ಕರೆತಂದು ತಮ್ಮ ಮನೆಯಲ್ಲಿಟ್ಟು ಓದಿಸುತ್ತಲೇ ತಮ್ಮ ೩೪ನೇ ವಯಸ್ಸಿನಲ್ಲಿ ಕಾಲವಾದರು. ಅವರು ಕಾಲವಾಗುವ ಕೆಲ ವರ್ಷಗಳ ಮುನ್ನ ಕಲಘಟಗಿ, ಮಿಸರಕೋಟಿಗಳಿಂದ ಬಡಮಕ್ಕಳನ್ನು ತಂದು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದರು. ಹಾಗೆ ಬಂದ ಒಬ್ಬ ಬುದ್ಧಿವಂತ ಹುಡುಗ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್. ಮುಂದೆ ಇವರೂ ಎಸ್.ಎಸ್. ಶೆಟ್ಟರ್ ಎಂದೇ ಖ್ಯಾತರಾದರು. ಈ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಅವರಿಗೆ ತನ್ನನ್ನೂ ಜನ ಎಸ್.ಎಸ್. ಶೆಟ್ಟರ್ ಎಂದು ಕರೆಯುವುದು ಹೆಮ್ಮೆ ತರುತ್ತಿತ್ತು ಮತ್ತವರು ಅನ್ನ-ವಿದ್ಯೆ ನೀಡಿದ ಶೆಟ್ಟರ್ ಮನೆತನಕ್ಕೆ ನಿಷ್ಠರೂ ಆಗಿದ್ದರು. ಹಿರಿಯ ಎಸ್.ಎಸ್. ಶೆಟ್ಟರರ ಅಪಾರ ಆಸ್ತಿಗೆ ಕಿಂಚಿತ್ತೂ ಅಪಾಯ ಬರದಂತೆ ಕಾಪಾಡಿದವರು ಈ ಕಿರಿಯ ಎಸ್.ಎಸ್. ಶೆಟ್ಟರ್. ಹಿರಿಯ ಎಸ್.ಎಸ್ ಶೆಟ್ಟರರ ಸ್ವಂತ ಮಗ ಸದಾಶಿವ ಶೆಟ್ಟರ್ ವಕೀಲಿ ವೃತ್ತಿ ಹಿಡಿಯುವವರೆಗೂ ರಕ್ತಸಂಬಂಧಿಯಲ್ಲದ ಕಿರಿಯ ಎಸ್.ಎಸ್. ಶೆಟ್ಟರ್ ಆ ಕುಟುಂಬದ ಸೇವೆ ಮಾಡುತ್ತಾ ಸಾರ್ಥಕ ಬದುಕನ್ನು ಬದುಕಿದರು.

ಇತ್ತ ಸದಾಶಿವ ಶೆಟ್ಟರ್ ಯಶಸ್ವಿ ವಕೀಲರಾಗಿ, ವಿವಾಹವಾಗಿ ಅವರಿಗೆ ಐವರು ಮಕ್ಕಳೂ ಆದರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಾದರು. ಅತ್ತ ಕಾಡಪ್ಪ ಶೆಟ್ಟರ್ ವಂಶದವರಲ್ಲದ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಯಾನೆ ಕಿರಿಯ ಎಸ್.ಎಸ್. ಶೆಟ್ಟರ್ ಕೂಡ ಸಂಸಾರಸ್ಥರಾಗಿ ಅವರಿಗೂ ಮಕ್ಕಳಾದರು. ಅವರಲ್ಲೊಬ್ಬರು ಮುಂದೆ ಬಿಜೆಪಿಯಲ್ಲಿ ಸಕಲ ಅಧಿಕಾರಗಳನ್ನು ಅನುಭವಿಸಿ ಜಗದೀಶ ಶೆಟ್ಟರ್ ಎಂದು ಖ್ಯಾತರಾದರು.

ಕಾಂಗ್ರೆಸಿನಲ್ಲಿ ಸಕ್ರಿಯರಾಗಿದ್ದ ವಕೀಲ ಸದಾಶಿವ ಶೆಟ್ಟರಿಗೆ ಕ್ರಮೆಣ ಕಾಂಗ್ರೆಸಿಗರಿಗೆ ಶ್ರದ್ಧೆಯಿಲ್ಲ, ಕ್ರಿಯಾಶೀಲತೆಯಿಲ್ಲ ಎನಿಸತೊಡಗಿತು. ಅಧಿಕಾರದಾಹ, ಜಾತೀಯತೆ ಮತ್ತು ಅಲ್ಪಸಂಖ್ಯಾತರ ಓಲೈಕೆಗಳು ರಾಷ್ಟ್ರಭಾವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂಬುದು ಅವರಿಗೆ ಅರಿವಾಗತೊಡಗಿತು. ತಾನು ಇಲ್ಲೇ ಉಳಿದರೆ ಕಾಂಗ್ರೆಸಿನಂತೆ ನಿಷ್ಕ್ರಿಯನಾಗಿಬಿಡುವೆ ಎಂಬ ಭಯ ಕಾಡತೊಡಗಿತು. ಆಗ ಅವರನ್ನು ಸೆಳೆದಿದ್ದು ಡಾ.ಶ್ಯಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯರ ಚಿಂತನೆಗಳು. ಅನಂತರ ಹಿಂದೆಮುಂದೆ ಯೋಚಿಸದ ಸದಾಶಿವ ಶೆಟ್ಟರ್ ಜನಸಂಘ ಸೇರಿದರು. ಜಗನ್ನಾಥರಾವ್ ಜೋಷಿ, ಭಾವುರಾವ್ ದೇಶಪಾಂಡೆ ಹಾಗೂ ಗದಗಿನ ಡಾ. ರಾಮಚಂದ್ರ ಅನಂತರಾವ ಜಾಲಿಹಾಳರ ಮಾರ್ಗದರ್ಶನದಿಂದ ಆರೆಸ್ಸೆಸ್ಸಿನ ಸಂಪರ್ಕಕ್ಕೂ ಬಂದರು. ೧೯೬೨ರಲ್ಲಿ ಹುಬ್ಬಳ್ಳಿಯಿಂದ, ೧೯೬೪ರಲ್ಲಿ ಧಾರವಾಡದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ೧೯೬೭ರ ಚುನಾವಣೆಯಲ್ಲಿ ಹುಬ್ಬಳ್ಳಿಯಿಂದ ಸ್ಪರ್ಧಿಸಿ ಗೆದ್ದು ದಕ್ಷಿಣ ಭಾರತದ ಜನಸಂಘದ ಮೊದಲ ಶಾಸಕ ಎನಿಸಿಕೊಂಡರು. ತಡವಾಗಿ ಜನಸಂಘ ಸೇರಿದರೂ ನಿಷ್ಠಾವಂತ ಕಾರ್ಯಕರ್ತರಾದರು. ಪಕ್ಷದ ಕಾರ್ಯಕ್ಕೆಂದೇ ಪ್ರಿಂಟಿಂಗ್ ಪ್ರೆಸ್ ತೆರೆದರು. ಮನೆಯಲ್ಲಿ ಊಟಹಾಕಿ ಪಕ್ಷ ಕಟ್ಟಿದರು. ದೀನದಯಾಳರಂಥ ರಾಷ್ಟ್ರನಾಯಕರ ನಿಕಟವರ್ತಿಗಳಾದರು. ಹುಬ್ಬಳ್ಳಿ ಆಸ್ಪತ್ರೆ ನಿರ್ಮಾಣದ ನಂತರ ನಿರ್ಗತಿಕರಾದ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ವಸತಿ ಕಲ್ಪಿಸಿದರು. ರೈತಹೋರಾಟಗಳನ್ನು ಸಂಘಟಿಸಿದರು, ಕಟ್ಟಡ ತೆರಿಗೆಯ ವಿರುದ್ಧ ಧರಣಿ ಕುಳಿತರು. ಬೆಲೆ ಏರಿಕೆ, ಪಡಿತರ ತಾರತಮ್ಯದ ವಿರುದ್ಧ ಬೀದಿಗಿಳಿದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ದೀನದಯಾಳ ಉಪಾಧ್ಯಾಯರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಾಗ ಅವರ ಜೊತೆಗೂಡಿ ಸಂಘಟನೆ ಮಾಡಿದರು. ಹಿಡಿದ ಕಾರ್ಯವನ್ನು ವೇಗದಿಂದ ಮುಗಿಸುತ್ತಿದ್ದ ಸದಾಶಿವ ಶೆಟ್ಟರ್ ತಮ್ಮ ಬದುಕನ್ನೂ ತುರಾತುರಿಯಲ್ಲಿ ಮುಗಿಸಿಬಿಟ್ಟರು. ೧೯೬೮ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಶಾಸಕರಾಗಿದ್ದಾಗಲೇ ಕಾಲವಾದರು. ಅಲ್ಲಿಗೆ ಶೆಟ್ಟರ್ ಕುಟುಂಬದ ರಾಜಕೀಯ ಬದುಕೂ ಅಂತ್ಯವಾಯಿತು.

ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಕಾರ್ಯಕರ್ತರು ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ (ಕಿರಿಯ ಎಸ್.ಎಸ್ ಶೆಟ್ಟರ್)ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರು. ಆದರೆ ಅವರು ಗೆಲ್ಲಲಿಲ್ಲ. ತಮಗೆ ಅನ್ನ ಕೊಟ್ಟ ಸದಾಶಿವ ಶೆಟ್ಟರ್ ಕುಟುಂಬದ ಮೌಲ್ಯಕ್ಕೆ ಅನುಗುಣವಾಗಿ ಬದುಕಿದರು. ಆದರೆ ಕಿರಿಯ ಎಸ್.ಎಸ್. ಶೆಟ್ಟರ್ ಹಾಗೆ ಬದುಕಿದರೆಂದು ಅವರ ಮಗ ಬದುಕಬೇಕೆಂದಿದೆಯೇ?

ಹೇಗೂ ಹುಬ್ಬಳ್ಳಿ-ಧಾರವಾಡದಲ್ಲಿ ಶೆಟ್ಟರ್ ಮನೆತನಕ್ಕೆ ಒಂದು ಹವಾ ಇತ್ತು. ಸದಾಶಿವ ಶೆಟ್ಟರರು ಕಾಲವಾದಾಗ ಒಂದು ಲಕ್ಷಕ್ಕೂ ಹೆಚ್ಚು ಜನ ಶವಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸಿಗೆ ಠಕ್ಕರ್ ಕೊಡಲು ಶೆಟ್ಟರ್ ಕುಟುಂಬದ ಯಾರಾದರೂ ಅ‘ರ್ಥಿಯಾದರೆ ಬಿಜೆಪಿ ಗೆಲ್ಲಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಸದಾಶಿವ ಶೆಟ್ಟರರ ಮಕ್ಕಳಾರೂ ರಾಜಕೀಯಕ್ಕೆ ಬರಲಾರೆವು ಎಂದು ಸುಮ್ಮನಾಗಿಬಿಟ್ಟರು. ಆ ಸಮಯದಲ್ಲಿ ರಾಜಕೀಯ ನಾಯಕರ ಕಣ್ಣಿಗೆ ಆಕಸ್ಮಿಕವಾಗಿ ಬಿದ್ದವರೇ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಎಂಬ ಕಿರಿಯ ಎಸ್.ಎಸ್ ಶೆಟ್ಟರ್ ಮಗ. ಅನಂತರ ಆತ ಹಿಂದಿರುಗಿ ನೋಡಲಿಲ್ಲ. ಒಂದೊಂದಾಗಿ ರಾಜಕೀಯ ಮೆಟ್ಟಿಲುಗಳನ್ನೇರತೊಡಗಿದರು. ಶೆಟ್ಟರ್ ಹೆಸರೇ ಅವರಿಗೆ ವಿಜಯವನ್ನು ತಂದುಕೊಡುತ್ತಿತ್ತು. ಹಾಗಾಗಿ ಆಧುನಿಕ ಶೆಟ್ಟರರ ರಾಜಕೀಯ ಬದುಕು ಸುಲಭವಾಯಿತು. ಕಾಲಕ್ರಮೇಣ ಹಳೆಯ ಶೆಟ್ಟರ್ ಮೌಲ್ಯಗಳು ಅವಳಿ ನಗರದಲ್ಲಿ ದಂತಕಥೆಗಳಾಗಿ ಜನಪ್ರಿಯವಾದಾಗ ಈ ಶೆಟ್ಟರರಿಗೆ ತಾನೇ ಸಿದ್ಧಾಂತ, ತಾನೇ ಬಿಜೆಪಿ ಎಂಬ ಭ್ರಮೆಯೂ ಬೆಳೆಯಿತು. ಕಾಡಪ್ಪ ಶೆಟ್ಟರ್ ಮನೆತನದ ಪ್ರಭಾವಳಿಗಳಿಲ್ಲದೆಯೇ ತಾನು ಮೇಲೆ ಬಂದೆ ಎಂಬ ಅಹಂಕಾರವೂ ಬಂತು. ಯಡಿಯೂರಪ್ಪ ಸರ್ಕಾರವಿದ್ದಾಗ ಹುಬ್ಬಳ್ಳಿಯಲ್ಲಿ ಸದಾಶಿವ ಶೆಟ್ಟರರ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಕೂಗಿಗೆ ಈ ಶೆಟ್ಟರ್ ಸೊಪ್ಪು ಹಾಕಲಿಲ್ಲ, ಕೊನೆಗೆ ಅಭಿಮಾನಿಗಳೇ ಪುಟ್ಟ ಪ್ರತಿಮೆ ನಿರ್ಮಿಸಿದಾಗ ಕೆಲವರು ಅದಕ್ಕೆ ಅಡ್ಡಗಾಲನ್ನೂ ಹಾಕಿದರು! ಸರ್ಕಾರ ಸದಾಶಿವ ಶೆಟ್ಟರ್ ಕುರಿತ ಪುಸ್ತಕ ಬಿಡುಗಡೆ ಮಾಡಿದಾಗ ಮಂತ್ರಿ ಶೆಟ್ಟರರು ದೊಡ್ಡಮನೆಯ ಶೆಟ್ಟರರ ಮಕ್ಕಳನ್ನು ಸೌಜನ್ಯಕ್ಕೂ ವೇದಿಕೆಗೆ ಕರೆಯದೆ ನೋವು ಕೊಟ್ಟರು. ಅಂದರೆ ಬಿಜೆಪಿಯಲ್ಲಿದ್ದಾಗಲೇ ಈ ಶೆಟ್ಟರ್ ಒಳಗೊಳಗೇ ಹುನ್ನಾರ, ಕುಟಿಲತೆ, ಧೂರ್ತತನಗಳನ್ನು ತುಂಬಿಕೊಂಡಿದ್ದರು. ಆದರೆ ಮುಖವಾಡವಾದರೂ ಎಷ್ಟು ದಿನ ಮರೆಯಲ್ಲಿದ್ದೀತು? ಈಗ ಅದು ಕಳಚಿದೆ. ಸಂಘದ ಪ್ರಚಾರಕರ ಬಗ್ಗೆ ಅಪಸವ್ಯ ನುಡಿಯುವಷ್ಟು ಪತನಕ್ಕೆ ತಲುಪಿದೆ. ಆದರೆ ಇದರಲ್ಲೇನೂ ಆಶ್ಚರ್ಯ ಕಾಣಿಸುತ್ತಿಲ್ಲ. ಏಕೆಂದರೆ ಇವರು ಕಾಡಪ್ಪ ಶೆಟ್ಟರರಂತೆ ಬದುಕಿರಲೇ ಇಲ್ಲ! ಹಾಗಾಗಿ ಅಚ್ಚರಿಯೇಕೆ ಪಡಬೇಕು? ಅಲ್ಲದೆ ತಂದೆ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ್ ಬೇರೆ ಕಾಲವಾಗಿದ್ದರು. ಇನ್ನು ಈ ಶೆಟ್ಟರರಿಗೆ ಯಾರ ಹಂಗೂ ಇರಲಿಲ್ಲ. ಹಾಗಾಗಿ ಪಕ್ಷ ಬಿಡುವಾಗಲೂ ಅವರಿಗೆ ನಾಚಿಕೆಯಾಗಲಿಲ್ಲ.

ವಿಪರ್ಯಾಸವೆಂದರೆ ಬಹುತೇಕ ಜನ ಇಂದಿಗೂ ಬೆನ್ನುಹಾಕಿಹೋದ ಈ ಶೆಟ್ಟರರನ್ನು ಸದಾಶಿವ ಶೆಟ್ಟರರ ಪುತ್ರ, ದೀನದಯಾಳರ ಸಂಪರ್ಕದಲ್ಲಿದ್ದ ಮನೆಯಾಂವ ಎಂದೇ ಅಂದುಕೊಂಡಿದ್ದಾರೆ! ಇದು ಹೇಗಾಯಿತೆಂದರೆ ಬಿಸ್ಲೆರಿ ನೀರಿನ ಬಾಟಲ್ ಯಶಸ್ವಿಯಾದಾಗ ಅದೇ ಹೆಸರನ್ನು ಹೋಲುವ ನಕಲಿ ನೀರಿನ ಬಾಟಲ್‌ಗಳು ಬಂದವಲ್ಲ ಹಾಗೆ!

ಗ್ರಂಥಋಣ: ಸಂಸದೀಯಪಟು-ಸದಾಶಿವ ಎಸ್. ಶೆಟ್ಟರ್-ಗ್ರಂಥಾಲಯ ಉಪಸಮಿತಿ, ಬೆಂಗಳೂರು

ಕೃಪೆ : ಹೊಸದಿಗಂತ

2 ಟಿಪ್ಪಣಿಗಳು Post a comment
 1. hgopalakrishna60
  ಏಪ್ರಿಲ್ 21 2023

  ಮಾನ್ಯರೆ ,
  ನಮಸ್ಕಾರ. ಒಂದು ಕವಿತೆ, ಪ್ರಕಟಣೆಯ ಕೃಪೆಗಾಗಿ.
  ದಯವಿಟ್ಟು ತಮ್ಮ email ವಿಳಾಸ ಕಳಿಸಿ.

  ಅರವತ್ತರ ಚಲುವೆ… *
  *ಎಚ್. ಗೋಪಾಲಕೃಷ್ಣ

  ಅರವತ್ತರ ಚಲುವೆ
  ಹಾದು ಹೋದರೆ ನಿಂತು ಮತ್ತೊಮ್ಮೆ ನೋಡಬೇಕು
  ಒಂದು ಕಾಲದಲ್ಲಿ ಮೊಳದುದ್ದ ಇದ್ದ ಜಡೆ
  ವಿಶಾಲವಾಗಿ ಹರಡಿರುವ ಕೂದಲು
  ಎತ್ತರದ ಬಾಗದ ನಿಲುವು
  ಮುಗಿಲುದ್ದ ನಿಂತ ನಿಲುವು
  ಗುಂಡು ಸೌಂದರ್ಯ ತುಂಬಿದ ಮುಖ
  ದೊಡ್ಡ ಹಣೆಯ ರೂಪಸಿ
  ನಕ್ಕರೆ ಮಿಂಚುವ ಬಿಳಿಯ ದಾಳಿಂಬೆ
  ಮನ್ಮಥನ ರತಿದೇವಿ ಕಾಮದರಗಿಣಿ
  ಅಂದು ಅವಳು ಇಪ್ಪತ್ತರ ಚೆಲುವೆ
  ಅದೇ ಎತ್ತರದ ಬಾಗಿದ ನಿಲುವು
  ಬಾಬ್ ಆದ ಬಿಳಿಯ ಹಂಜಿ ತಲೆಯ ಮೇಲೆ
  ನಕ್ಕರೆ ಎದ್ದು ಕಾಣುವ ಮುರಿದ ಹಲ್ಲು
  ಬಿಟ್ಟರೆ ಬಾಯಿ ಉದ್ಧಾರ ಕುಲಕೋಟಿ
  ಅನುಭವ ತುಂಬಿದ ಮೈ
  ಮಾಗಿದ ಮನಸು ಪ್ರಪಂಚ ಬಗೆದ ಕಣ್ಣು
  ಬರಿಗಾಲ ನಡಿಗೆ, ಓಟ
  ಗೆಲಲಿಲ್ಲ ಪ್ರಶಸ್ತಿ ಪದಕ
  ಆದರೂ ಉಂಟು ಸಮಾಧಾನ
  ಈ ಸಿದೆ ಇದ್ದು ಜೈಸಿದೆ
  ಜತೆಯವರ ಕರೆದೊಯ್ದೆ ಒಟ್ಟಿಗೆ
  ಕಟ್ಟಿದ ಪೊರಕೆಯ ಹಾಗೆ..
  ಅರವತ್ತರ ಚೆಲುವೆ ಈಗವಳು
  ಎಪ್ಪತ್ತರ ಹರೆಯದ ಯುವಕನಿಗೆ
  ಬಾಳು ಕೊಟ್ಟವಳು ಮಾತೃ ಹೃದಯಿ
  ಎಚ್. ಗೋಪಾಲಕೃಷ್ಣ

  ಉತ್ತರ
 2. hgopalakrishna60
  ಏಪ್ರಿಲ್ 30 2023

  ಮಾನ್ಯರೇ,
  ಕವಿತೆ ಪ್ರಕಟಿಸ ಬೇಡಿ, ಅವಧಿ ಪ್ರಕಟಿಸಿ ದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments