ವಿಷಯದ ವಿವರಗಳಿಗೆ ದಾಟಿರಿ

Posts from the ‘ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ’ Category

7
ಮೇ

ದೇವನೂರರ ಬರಹದ ಕುರಿತು ನಡೆದ ಚರ್ಚೆಯ ಸುತ್ತ . . .

-ಡಾ. ಕಿರಣ್ ಗಾಜನೂರು

Vachana Charche“ದೇವನೂರರ ಕುರಿತು ಅಪಾರ ಗೌರವ ಇಟ್ಟುಕೊಂಡೆ ಈ ಮಾತು ಹೇಳುತ್ತಿದ್ದೇನೆ ಅವರ ಲೇಖನದಲ್ಲಿ ಲಾಜಿಕ್ಕೆ ಇಲ್ಲ ಇನ್ನು ತಪ್ಪುಗಳನ್ನು ಹೇಗೆ ಗುರುತಿಸುವುದು ಈಗ ಒಬ್ಬರೂ ಒಂದು ಸಂಶೋಧನೆಯ ಮೂಲಕ ನಿಮಗೆ ಒಂದು ಪ್ರಶ್ನೆ/ವಾದ ಕೇಳುತ್ತಾರೆ ಎಂದು ಇಟ್ಟುಕೊಳ್ಳಿ ಅದಕ್ಕೆ ನೀವು ಬೌದ್ಧಿಕವಾಗಿ ಅಂಧರೆ ಆ ವ್ಯಕ್ತಿ ಯಾವ ಸಂಶೋಧಾನ ವಿಧಾನ ಬಳಸಿ ಯಾವ ಮಾಹಿತಿಯ ಆಧಾರದ ಮೇಲೆ ತನ್ನ ವಾದ ಮಂಡಿಸುತ್ತಿದ್ದಾನೆ ಅದರಲ್ಲಿರುವ ದೂಷಗಳೇನು ಅವನು ಬಳಸಿದ ವಿಧಾನ ಮತ್ತು ಪಡೆದ ಮಾಹಿತಿ ಹೇಗೆ ಆ ವಸ್ಥುವಿನ ಸರಿಯಾಗಿ ವಿವರಿಸುವಲ್ಲಿ ಎಡವಿದೆ ಎಂಬುದನ್ನು ಲಾಜಿಕಲಿ ಸಾಧಿಸಬೇಕಾಗುತ್ತದೆ. ಆದರೆ ದೆವನೂರರ ಬರಹದಲ್ಲಿ ಈ ಅಂಶವೇ ಇಲ್ಲ ಅವರೂ ಇದುವರೆಗೂ ನಂಬಿಕೊಂಡು ಬಂದ ಐಡಿಯಾಲಜಿಯನ್ನು ವಿವರಿಸಿದ್ದಾರೆ ಅಷ್ಟೆ ಈ ರೀತಿಯಾದರೆ ಯಾರೂ ಬೇಕಾದರೂ ಮಾತನಾಡಬಹುದು ಆದರೆ ಅದರಿಂದ ಎನೂ ಪ್ರಯೋಜನ? ಅದೂ ಅಲ್ಲದೆ ದೆವನೂರು ಮತ್ತು ಅವರ ಹಿಂಬಾಲಕರು ನಂಬಿದ ವಿಷಯಗಳೇ ಅಂತಿಮ ಅವರ ವಿವರಣೆಗೆ ವಿರುಧ್ಧದ ಸಂಶೋಧನೆ ಯಾರೂ ಮಾಡಬಾರದು ಮಾಡಿದರೆ ಅವರ ಮೇಲೆ ಕಣ್ಣಿಡಿ ವಿಚಾರಣೇ ಮಾಡಿ ಎಂಬಿತ್ಯಾದಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಷಯವು ಅಲ್ಲ ಒಂದೂ ಕಾಲದಲ್ಲಿ ಆರ್.ಎಸ್.ಎಸ್ ನವರನ್ನು ಯಾವ ಯಾವ ಕಾರಣಕ್ಕೆ ಇವರುಗಳು ವಿರೋಧಿಸಿದ್ದರೂ ಇವತ್ತು ಅವೇ ಲಕ್ಷಣಗಳನ್ನು ಇವರು ಅವಾಹಿಸಿಕೊಂಡು ಮಾತನಾಡುತ್ತಿದ್ದಾರೆ ಇತರರ ಸಂಶೋಧನೆ ಟೀಕಿಸುತ್ತಿದ್ದರೆ. ಅಂದರೆ ಯಾರೂ ಸಂಶೋಧನೆಯನ್ನೆ ಮಾಡಬಾರದು ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸುತ್ತಿದ್ದಾರೆ ಇನ್ನು ಮುಂದೆ ಹೋಗಿ ಜಿನ್ನಾ ನೀಡಿದಂತೆ ಡೈರೆಕ್ಟ್ ಆಕ್ಷನ್ ಗೆ ಕರೆನೀಡುತ್ತಿದ್ದಾರೆ ನನಗೆ ಆಶ್ಚರ್ಯವಾಗುವುದೇ ಇದಕ್ಕೆ ಯಾರೂ ಎನೇ ಸಂಶೋಧನೆ ಮಾಡಲಿ ನಾವು ಅವರೂ ಎತ್ತುವ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಆ ಮಟ್ಟದ ಸೈಂಧಾಂತಿಕ ಪಕ್ವತೆ ನಾವು ನಂಬಿದ ಸಿಂಧಾಂತಕ್ಕೆ ಇದೆ ಎಂದು ಆತ್ಮವಿಶ್ವಾಸದಿಂದ ನುಡಿಯುಬೇಕಾದ ಈ ಚಿಂತಕರೂ ಹೀಗೆ ವರ್ತಿಸುತ್ತಿರುವುದು ನಮ್ಮ ಸಂಶೋಧನಾ ಮಾದರಿಯ ವೈಪಲ್ಯ ತೋರಿಸುತ್ತದೆ”  ಪೇಸ್ ಬುಕ್ ನಲ್ಲಿ ನಾನೂ ಪ್ರಕಟಿಸಿದ ಈ ಬರಹಕ್ಕೆ ಹಲವರು ಅನೇಕ ರೀತಿಯ ಪ್ರಶ್ನೆಗಳನ್ನು/ಟೀಕೆಗಳನ್ನು ಮಾಡಿದ್ದಾರೆ ಅವೆಲ್ಲವುಗಳನ್ನು ಒಂದೂ ಚರ್ಚೆಯ ಮಾದರಿಯಲ್ಲಿ ಕೆಳಗೆ ಬರೆದಿದ್ದೇನೆ ನೋಡಿ. . . .
ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಶೋಷಣೆಗಳ ಕುರಿತು ಅವುಗಳ ನಿವಾರಣೆಯಗಳ ಕುರಿತು ಇಲ್ಲಿರುವ ಎಲ್ಲರ ಪ್ರಯತ್ನ ಮತ್ತು ಭಾವನೆ ಎಲ್ಲವೂ ತುಂಬಾ ಗೌರವಿಸುವ ವಿಚಾರಗಳೆ ಅಂದರೆ ನಮ್ಮೇಲ್ಲರ ಹಾನೆಸ್ಟ್ ಗುರಿ ಒಂದೇ ಅದು ನಮ್ಮ ಸಮಕಾಲಿನ ಸಮಾಜದ ಶೋಷಣೆಗಳನ್ನು ಹೊಗಲಾಡಿಸಬೇಕು.

ಮತ್ತಷ್ಟು ಓದು »

3
ಮೇ

ಸಂಶೋಧನೆ ಅಂದರೇನು? – ಒಂದು ಚರ್ಚೆ

Samshodhane“ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಶುರುವಾದಾಗ ಒಂದು ’ಅಕಾಡೆಮಿಕ್ ಚರ್ಚೆ’ಯ ನಿರೀಕ್ಷೆ ನಾಡಿನ ಸಂಶೋಧನಾ ವಿದ್ಯಾರ್ಥಿವಲಯದಲ್ಲಿತ್ತು.ಆದರೆ ಈ ಚರ್ಚೆ ಅಕಾಡೆಮಿಕ್ ಆಗುವುದಕ್ಕಿಂತಲೂ ಹೆಚ್ಚಾಗಿ ಪೊಲಿಟಿಕಲ್ ಚರ್ಚೆಯಾಗಿ ಮಾರ್ಪಟ್ಟಿದೆ.೨೧ ಸಾವಿರಕ್ಕೂ ಹೆಚ್ಚು ವಚನಗಳನ್ನು ಅಧ್ಯಯನ ಮಾಡಿದವರ ಜೊತೆ ೨೧ ವಚನಗಳನ್ನೂ ಸರಿಯಾಗಿ ಓದಿಕೊಳ್ಳದವರು ವಾದಕ್ಕಿಳಿಯುತಿದ್ದಾರೆ. ಗೂಗಲ್ ನಲ್ಲಿ ಸರ್ಚ್ ಮಾಡುವುದನ್ನೆ ’ರಿಸರ್ಚ್’ ಅಂದುಕೊಂಡಿರುವಂತಿದೆ ಕೆಲವರು. “ಸಂಶೋಧನೆ” ಅಂದರೇನು ಅನ್ನುವ ಕುತೂಅಲವನ್ನಿಟ್ಟುಕೊಂಡು ನಾನು ಸಿ.ಎಸ್.ಎಲ್.ಸಿ ತಂಡದವರ ಜೊತೆ ನಡೆಸಿದ ಮಾತುಕತೆಯಿದೆ ಇಲ್ಲಿದೆ ನೋಡಿ

ಸಾತ್ವಿಕ್ :  ಸಂತೋಷ್ ಶೆಟ್ಟಿ, ಸಂಶೋಧನೆಗೆ ಹೈಪೋಥಿಸಿಸ್ ರಚಿಸಿಕೊಳ್ಳುವಾಗ ಜನರಿಗೆ ಬೇಕಾದ (ಜನಪ್ರಿಯ) ವಾದಗಳನ್ನು ಆರಿಸಿಕೊಳ್ಳಬೇಕೋ ಇಲ್ಲವೇ ಕಠಿಣವಾದರೂ ಸತ್ಯದ ಕಡೆ ಹೆಜ್ಜೆ ಹಾಕಬೇಕೋ? ಅಥವಾ ಇಂದಿನ ಸಂಶೋಧನೆಗಳು ಯಾವ ದಿಕ್ಕಿನಲ್ಲಿವೇ?

ಸಂತೋಷ್ ಶೆಟ್ಟಿ : ಸಾತ್ವಿಕ್ , ಜನರಿಗೆ ಬೇಕಾದ ಜನಪ್ರಿಯ ವಾದಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಲು ಏನಿದೆ? ಈಗಾಗಲೆ ಪ್ರಚಲಿತದಲ್ಲಿರುವ ವಾದವನ್ನು ಪುಷ್ಠೀಗೊಳಿಸಬೇಕೆಂಬ ಐಡಿಯಾಲಜಿಯ ಬೆನ್ನು ಹತ್ತಿದರೆ ಅಂತಹ ವಿಷಯಗಳನ್ನು ಆಯ್ಕೆ ಮಾಡಬಹುದು, ಹಾಗೆ ಮಾಡುವ ಮೂಲಕ ಚಲಾವಣೆಯಲ್ಲಿರುವ ವಾದವೇ ಸತ್ಯವೆಂದು ಕೆಲವಾರು ಫ್ಯಾಕ್ಡ್ ನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ಯಾವ ಸಂಶೋಧನೆಯೂ ಆಗುವುದಿಲ್ಲ, ಏಕೆಂದರೆ ಮೊದಲೇ ಹೇಳಿದಂತೆ ಸಂಶೋಧನೆ ಮಾಡಿ ಕಂಡುಕೊಳ್ಳುವಂತದ್ದು ಅಲ್ಲಿ ಏನೂ ಇರುವುದಿಲ್ಲ.ಇನ್ನೊಂದು ಮಾರ್ಗವೆಂದರೆ ಅಧ್ಯಯನ ಮಾಡಲು ಮೊದಲು ಅಧ್ಯಯನದ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಪರಿಶೀಲಿಸಿ ಅಲ್ಲಿಂದ ಸಮಸ್ಯೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಜನರು ಏನನ್ನು ಒಪ್ಪುತ್ತಾರೆ ಏನನ್ನು ತಿರಸ್ಕರಿಸುತ್ತಾರೆ ಎಂಬುದಕ್ಕಿಂತ ಆ ವಿಷಯದ ಕುರಿತು ಏನೇನು ಅಧ್ಯಯನಗಾಳಗಿವೆ ಎಂಬುದನ್ನು ಗಮನಿಸಿ ಅದಕ್ಕಿಂತ ಮುಂದೆ ಹೋಗುವ ಕಾರ್ಯವನ್ನು ಸಂಶೋಧನೆ ಮಾಡಬೇಕಾಗುತ್ತದೆ. ಇನ್ನು ಈಗಿರುವ ಸಂಶೋಧನೆಯ ಕುರಿತು ನಾನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಸಂಶೋಧನೆ ಮಾಡದೆ ಮತ್ತು ಸಂಶೋಧನೆಯನ್ನು ಅರ್ಥವೂ ಮಾಡಿಕೊಳ್ಳದೆ ಹಾಗೂ ಚರ್ಚೆಯನ್ನೂ ಮಾಡದೆ ಪ್ರತಿಕ್ರಿಯಿಸುವವರು ಮಾತ್ರ ಹೆಚ್ಚಾಗಿದ್ದಾರೆ. ಅವರ ಬಹುತೇಕ ಪ್ರಶ್ನೆಗಳು ನಿಜವಾಗಿಯೂ ತಿಳಿದುಕೊಳ್ಳಲು ಇರುವ ಹಂಬಲವನ್ನು ಸೂಚಿಸದೆ ಅವರ ಅಸಮಾಧಾನವನ್ನು ಹೊರಹಾಕುವುದನ್ನು ಸೂಚಿಸುತ್ತದೆ…

ಮತ್ತಷ್ಟು ಓದು »

2
ಮೇ

ದೇವನೂರು ಮಹಾದೇವರ ಪ್ರತಿಕ್ರಿಯೆ ಮತ್ತು ನನ್ನ ಗೊಂದಲಗಳು

-ಡಾ.ಸಂತೋಷ್ ಕುಮಾರ‍್ ಪಿ.ಕೆ

ಪ್ರಜಾವಾಣಿಯಲ್ಲಿ ದೇವನೂರು ಮಹಾದೇವ ರವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ.

Vachana Charcheನನ್ನ ವಿದ್ಯಾರ್ಥಿ ಜೀವನದಿಂದಲೂ ದೇವನೂರು ಮಹಾದೇವ ಎಂಬ ಆದರ್ಶವ್ಯಕ್ತಿಯ ಕುರಿತು ಕೇಳಿದ್ದೆ, ಹಾಗೂ ಕೆಲವೊಮ್ಮೆ ನೋಡುವ ಭಾಗ್ಯವೂ ಒದಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಶಾಂತಿ ಮತ್ತು ಅಹಿಂಸಾ ಮಾರ್ಗವಾಗಿ ಹೋರಾಡುತ್ತಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಯಾಗಿದೆ. ಇದಕ್ಕೆ ಮಾರುಹೋದ ಹಲವಾರು ಯುವಸಮುದಾಯಗಳು ಅವರನ್ನು “ಆಧುನಿಕ ಸಂತ” ಎಂಬಂತೆ ಬಿಂಬಿಸುತ್ತವೆ. ಅಷ್ಟು ಶಾಂತಚಿತ್ತ ಮತ್ತು ಧೀಮಂತ ಹೋರಾಟಗಾರೆಂದೆ ಖ್ಯಾತಿ ಪಡೆದ ದೇವನೂರು ರವರು ಏನೇ ಬರೆದರೂ ಅದನ್ನು ಓದಲು ನನ್ನನ್ನೂ ಸೇರಿ ಅಪಾರ ಅಭಿಮಾನಿಗಳ ಬಳಗವೇ ಇದೆ. ವಚನ ಕುರಿತ ಚರ್ಚೆಗೆ ಅವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ಅವರ ಮೇಲಿದ್ದ ನನ್ನ ಗೌರವ, ನಂಬಿಕೆಗಳು ಆ ಲೇಖನವನ್ನು ಅವರೇ ಬರೆದಿದ್ದಾ ಎಂಬ ಅನುಮಾನವನ್ನು ಮೂಢಿಸಿದೆ. ಅದೇನೇ ಇದ್ದರೂ ದೇವನೂರು ಮಹಾದೇವ ರವರು ಕೆಲವು ತಪ್ಪುನಂಬಿಕೆಗಳ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದಿದ್ದಾರೆ, ಅವುಗಳನ್ನು ನನ್ನ ಓದಿನ ಮಿತಿಯಲ್ಲಿ ಚರ್ಚಿಸಲು ಬಯಸುತ್ತೇನೆ.

೧. ಲೇಖನದ ಪ್ರಾರಂಭದಲ್ಲಿ  ಒಂದು ಉದಾಹರಣೆಯನ್ನು ನೀಡುವ ಮೂಲಕ ಅಂಕಿ ಸಂಖ್ಯೆಯ ಆಧಾರವಾದ ವಿವರಣೆಯನ್ನು ವಿರೋಧಿಸಿದ್ದಾರೆ: ಅದೆಂದರೆ “ತಾಯಿಯನ್ನು ’ತಾಯಿ” ಎಂದು ಇಷ್ಟು ಸಾರಿ (ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ) ಕರೆಯದಿದ್ದರೆ ಬಂಜೆ ಎಂದು ಕರೆದು ದಿಗ್ವಿಜಯ ಸಾಧಿಸಿಬಿಡುತ್ತಾರೆ”. ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯನ್ನು ಮತ್ತೊಂದು ರೀತಿಯಲ್ಲಿ ಇಡಬಹುದು, ಒಲ್ಲೊಬ್ಬರು ಮಹಿಳೆ ಇದ್ದಾರೆ ಹಾಗೂ ಮಗನ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ ಎಂದಿಟ್ಟುಕೊಳ್ಳಿ. ಆಕೆಗೆ ಅಪಾರ ಆಸ್ತಿ ಇದ್ದು ಬೇರೆ ಯಾರೂ ವಾರಸ್ದಾರರು ಇಲ್ಲ ಎಂದಿಟ್ಟುಕೊಳ್ಳುವ, ಅವಳ ಆಸ್ತಿಯನ್ನು ಕಬಳಿಸಲು ಯಾರೋ ಆಕೆಯನ್ನು ಅಮ್ಮ ಅಮ್ಮ ಎಂದು ನೂರು ಸಾವಿರ ಲಕ್ಷ ಬಾರಿ ಕರೆಯುತ್ತಾರೆ ಎಂದಾದರೆ, ಅವರ ನಡುವೆ ಇರುವುದು ತಾಯಿ ಮಕ್ಕಳ ಸಂಬಂಧವೆ? ಅಥವಾ ಬೇರೆ ತರಹದ ಸಂಬಂಧವೆ? ಇಲ್ಲಿ ಆಸ್ತಿಗೋಸ್ಕರ ಆತ ಎಷ್ಟು ಬಾರಿ ತಾಯಿ ಎಂದು ಕರೆದರೂ ಆಕೆ ಆತನಿಗೆ ತಾಯಿಯಾಗಲು ಸಾಧ್ಯವಿಲ್ಲ, ಇದನ್ನು ಪ್ರಮಾಣೀಕರಿಸುವುದು ಹೇಗೆ? ಹೇಗೆಂದರೆ ಅವರ ನಡುವೆ ನಿಜವಾಗಿಯೂ ತಾಯಿ-ಮಗನ ಸಂಬಂಧವಿದೆಯೇ? ಎಂದು ಪರೀಕ್ಷೆ ಮಾಡುವುದು. ಆ ಪರೀಕ್ಷೆಯನ್ನೇ ಮಾಡದೆ ಕೆಲವು ಬಾರಿ ಆತ ಆಕೆಯನ್ನು ತಾಯಿ ಎಂದು ಕರೆದಿದ್ದಾನೆ ಆದ್ದರಿಂದ ಆಕೆ ಆತನ ತಾಯಿಯೇ ಎಂದು ನಿರ್ಣಯಕ್ಕೆ ಬರುವುದು ತೀರಾ ಅವಾಸ್ತವಿಕವಾಗುತ್ತದೆ. ಅಂತೆಯೇ ಜಾತಿ, ಕುಲ ಎಂಬ ಪದಗಳು ವಚನಗಳಲ್ಲಿ ಇದ್ದ ಮಾತ್ರಕ್ಕೆ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಜಾತಿ ವಿರೋಧ ಎಂದು ನಿರ್ಣಯಕ್ಕೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಹಾಗೆ ನೋಡಿದರೆ  ಅಂಕಿ ಅಂಶಗಳ ಮೂಲಕ ವಚನಗಳನ್ನು ಅರ್ಥೈಸುವುದು ಮುಖ್ಯವಾದ ಗುರಿ ನಮ್ಮದಲ್ಲ ಹಾಗೂ ಅದರ ಆಧಾರದ ಮೇಲೆಯೇ ವಚನಗಳ ಕುರಿತ ವಾದವೂ ಬೆಳೆದಿಲ್ಲ, ಬದಲಿಗೆ ವಚನಗಳನ್ನು ಸಮಗ್ರವಾಗಿ ನೋಡಿದಾಗ ಹೇಗೆ ಕಾಣುತ್ತದೆ ಎಂಬುದನ್ನು ವಾದಿಸುವ ಸಂದರ್ಭದಲ್ಲಿ ನಗಣ್ಯವಾಗಿ ಅಥವಾ ಅಷ್ಟೇನೂ ಪ್ರಮುಖವಲ್ಲದ ವಿಷಯ ಅದಾಗಿದೆ.

ಮತ್ತಷ್ಟು ಓದು »

24
ಏಪ್ರಿಲ್

ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ

– ಡಂಕಿನ್ ಝಳಕಿ
Vachana Charcheಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.

೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.

ಮತ್ತಷ್ಟು ಓದು »

23
ಏಪ್ರಿಲ್

ವಚನ ಸಂಶೋಧನೆಯ ವಿಮರ್ಶೆ: ನಿರ್ಬಲ ವಾದ, ತಾರ್ಕಿಕ ಸಮಸ್ಯೆ

ಡಂಕಿನ್ ಝಳಕಿ

Vachana Charche`ಪ್ರಜಾವಾಣಿ’ಯಲ್ಲಿ ವಚನಗಳ ಕುರಿತ ನಮ್ಮ ಸಂಶೋಧನೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಒಂದು ಸಮಸ್ಯೆ ಮತ್ತೆ ಮತ್ತೆ ಚರ್ಚೆಗೆ ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮುಂದಿನ ಮಾತುಗಳನ್ನು ಕುರಿತು ನಾವು ಚಿಂತಿಸಬೇಕು: “ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ”.

ಶಿವಪ್ರಕಾಶರ ಈ ಹೇಳಿಕೆಯ ಎರಡನೇ ಸಾಲನ್ನು ಗಮನಿಸಿ. ಈ ಸಾಲನ್ನು ನೋಡಿದಾಗಲೆಲ್ಲಾ ನನಗೆ ಅನಿಸಿದ್ದು ಈ ಆಕ್ಷೇಪಣೆಗೆ ಸಮರ್ಪಕವಾದ ಉತ್ತರ ನಮ್ಮ ಲೇಖನದಲ್ಲೇ ಇದೆಯಲ್ಲಾ ಎಂದು. ಹಾಗೇಕೆ ಅನಿಸುತ್ತದೆ ಎಂದೂ ಹೇಳಿ ಬಿಡುತ್ತೇನೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ನಮ್ಮ ಲೇಖನ ತೋರಿಸುವ ಪ್ರಕಾರ, ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ.

ಇರುವ ಈ 72 ವಚನಗಳಲ್ಲಿ, ವಚನಗಳು ಜಾತಿಯನ್ನು ವಿರೋಧಿಸುತ್ತವೆ ಎಂದು ಸಾಧಿಸ ಹೊರಡುವ ಚಿಂತಕರು ಬಳಸುವುದು ಕೇವಲ ಎಂಟು ಹತ್ತು ವಚನಗಳನ್ನು ಮಾತ್ರ. ಕೇವಲ ಎಂಟು ಹತ್ತು ವಚನಗಳನ್ನು ಆಯ್ದುಕೊಂಡು ಎಂಟುನೂರು ವರ್ಷಗಳ ಸುದೀರ್ಘ ಇತಿಹಾಸ ಉಳ್ಳ ಇಡಿಯ ವಚನ ಸಂಪ್ರದಾಯದ ಬಗ್ಗೆ ಮಾತನಾಡುವುದಾದರೆ, ಯೋಚಿಸಿ ನೋಡಿ, ನಾವು ಏನನ್ನು ಬೇಕಾದರೂ ಸಾಧಿಸಿಬಿಡಬಹುದು.

ಮತ್ತಷ್ಟು ಓದು »

20
ಏಪ್ರಿಲ್

ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ ಕಾಣಿಸುವುದೇನು?

– ಬಾಲಗಂಗಾಧರ ಎಸ್. ಎನ್.

ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ

Vachana Charcheವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಆಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.

ಭಾರತೀಯ ಆಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಅದರ ಕುರಿತು ಅಧಿಕೃತವಾಗಿ ತಿಳಿದುಕೊಳ್ಳುವ ಗುರಿಯನ್ನು ಸಮಾಜ ವಿಜ್ಞಾನವು ಇನ್ನೂ ತಲುಪಿಲ್ಲ. ಏಕೆಂದರೆ, ಅದರ ಒಂದು ವಿಶೇಷತೆಯೆಂದರೆ  ಅದನ್ನು ಗುರು, ಶಿಷ್ಯವೃತ್ತಿ, ಸತತ ಸಾಧನೆ ಇತ್ಯಾದಿಗಳಿಂದಲೇ ಕಲಿಯಬೇಕಾಗುತ್ತದೆ. ಅದರ ಕುರಿತು ನಮ್ಮ ಆಧುನಿಕ ಪರಿಭಾಷೆಗಳಲ್ಲಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ನಾವಿನ್ನೂ ಸರಿಯಾದ ಭಾಷೆಯನ್ನು ಬೆಳೆಸಿಕೊಂಡಿಲ್ಲವೆಂಬುದು ವಚನದ ಕುರಿತ ಈ ಚರ್ಚೆಯಂದ ಧೃಡಪಡುತ್ತದೆ. ಏಕೆ ಈ ಸಂಪ್ರದಾಯವನ್ನು ಪ್ರವೇಶಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಈಗ ಇರುವ ವಿವರಣೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯನ್ನಾಧರಿಸಿ ಹುಟ್ಟಿದಂಥವು. ಅಂದರೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ಞಾನದ ಪರಿಭಾಷೆಯಲ್ಲಿ ಇಟ್ಟ ಐರೋಪ್ಯರು ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಗಳ ಲೋಕದಿಂದ ಇದನ್ನು ವರ್ಣಿಸಿದರು, ಅದೇ ಕ್ರೈಸ್ತರ ಥಿಯಾಲಜಿಯ ಲೋಕ. ಅಂದರೆ, ಇಂದು ಆಧ್ಯಾತ್ಮದ ಜ್ಞಾನದ ಹಿನ್ನೆಲೆಯನ್ನು ಹೊಂದಿದವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಇಂದಿನ ಸಮಾಜ ವಿಜ್ಞಾನಿಗಳು ಸಂಶೋಧನಾ ಭಾಷೆಯಲ್ಲಿ ವರ್ಣಿಸಬೇಕಾದರೆ ಥಿಯಾಲಜಿಗೂ ಹೊರತಾದ ವೈಜ್ಞಾನಿಕ ಭಾಷೆಯೊಂದರ ಅಗತ್ಯವಿದೆ.
ಮತ್ತಷ್ಟು ಓದು »

14
ಏಪ್ರಿಲ್

ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ

– ಶಿವಕುಮಾರ ಪಿ.ವಿ.,  ಸಿ.ಎಸ್.ಎಲ್.ಸಿ

Vachana Charcheವಚನ ಸಾಹಿತ್ಯದ ಕುರಿತ ಸಂಶೋಧನಾ ಲೇಖನದ ವಾದದ ಕುರಿತು ಚರ್ಚಿಸಬೇಕಾದುದೇನು? ಮತ್ತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪವೇನು? ಒಂದೆಡೆ, ಇವೆರೆಡರ ನಡುವೆ ದೊಡ್ಡ ಕಂದರವಿದೆ. ಮತ್ತೊಂದೆಡೆ, ಅವು ತೀರ ಹತ್ತಿರವಾಗಿಯೂ ಇವೆ. ಈ ವಿಚಾರವು ವಿದ್ವಾಂಸರ ಪ್ರತಿಕ್ರಿಯೆಗಳಲ್ಲಿ ತಾನಾಗಿಯೇ ಸ್ಪಷ್ಟವಾಗುತ್ತದೆ. ಈ ಮೂಲಕ ಒಟ್ಟಾರೆ ಚರ್ಚೆಯ ಸ್ವರೂಪವನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.

‘ಜಾತಿವ್ಯವಸ್ಥೆ’ಯೆಂಬ ಪೂರ್ವನಂಬಿಕೆ ಇಟ್ಟುಕೊಂಡು ವಚನಸಾಹಿತ್ಯವನ್ನು ನೋಡಿದಾಗ ಅವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಂತೆ ಕಾಣುತ್ತವೆ. ಆ ಪೂರ್ವನಂಬಿಕೆಯ ಚೌಕಟ್ಟಿನಿಂದ ಹೊರತಾಗಿ ವಚನ ಸಾಹಿತ್ಯವನ್ನು ಅಧ್ಯಯನ ನಡೆಸಿದರೆ ಅದು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸೈದ್ಧಾಂತಿಕವಾಗಿ ನಿದರ್ಶಿಸಲು ಸಾಧ್ಯವಿಲ್ಲ. ಹಾಗೂ ಈವರೆಗೂ ವಚನ ಸಾಹಿತ್ಯವನ್ನು ಆ ಒಂದು ಪೂರ್ವನಂಬಿಕೆಯಿಂದಲೇ ವಿಶ್ಲೇಷಿಸಲಾಗಿದೆ. ಇದು ಡಂಕಿನ್‍ರವರ ಸಂಶೋಧನಾ ಲೇಖನದ ಮುಖ್ಯ ವಾದ. ಇದನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿಡುವ ಅನಿವಾರ್ಯತೆಯನ್ನು ಪ್ರಸ್ತುತ ವಾದಕ್ಕೆ ಶಿವಪ್ರಕಾಶರವರ ಪ್ರತಿಕ್ರಿಯೆ ಹಾಗೂ ಅದನ್ನೇ ಆಧರಿಸಿ ಬಂದಂತಹ ಉಳಿದ ಪ್ರತಿಕ್ರಿಯೆಗಳು ಉಂಟುಮಾಡಿವೆ.
ಈ ಮೇಲಿನ ವಾದಕ್ಕೆ ‘ಸಂಬಂಧಿಸಿ’ದಂತೆ ಬರುತ್ತಿರುವ ಬೌದ್ಧಿಕ ವಲಯದ ಟೀಕೆ ಅಥವಾ ‘ಪ್ರತಿಕ್ರಿಯೆ’ಗಳು ಹಾಗು ಅವುಗಳ ಮಿತಿಗಳನ್ನು ಈ ಮುಂದಿನಂತೆ ನೋಡಬಹುದು.

1. ಮೊದಲನೆಯದಾಗಿ, ಹೆಚ್.ಎಲ್. ಪುಷ್ಪರವರು “ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾದದ್ದು” ಹಾಗೂ ವಚನಕಾರರಲ್ಲಿ ಎಲ್ಲಿಯೂ “ಜಾತಿ ಪರವಾದ ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡು ಬರುವುದಿಲ್ಲ” ಎನ್ನುತ್ತಾರೆ. ಎರಡನೆಯದಾಗಿ ಟಿ.ಆರ್. ಚಂದ್ರಶೇಖರ್‍ರವರು ಡಂಕಿನ್ ಮತ್ತು ಬಾಲುರವರು “ಭಾರತದಲ್ಲಿ ಜಾತಿಯೇ ಇಲ್ಲ” ಎನ್ನುವ ಪೂರ್ವಾಗ್ರಹ ಹೊಂದಿದ್ದಾರೆ ಎಂದು ಗ್ರಹಿಸುತ್ತಾರೆ.  ಮೊದಲನೆಯದಕ್ಕೆ, ಉದಾಹರಣೆಯ ಮೂಲಕ ಹೇಳುವುದಾದರೆ, ಯಾರೋ ಒಬ್ಬ ವ್ಯಕ್ತಿಯು ಕಲಾತ್ಮಕ ಸಿನಿಮಾದ ಕುರಿತು ಮೃದು ಧೋರಣೆಯನ್ನು ಹೊಂದಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದಾಕ್ಷಣ, ಆತ ಕಲಾತ್ಮಕ ಸಿನಿಮಾ ಹಾಗೂ ಸಿನಿ ಪ್ರಪಂಚದ ವಿರೋಧಿಯಾಗಿದ್ದಾನೆ ಮಾತ್ರವಲ್ಲ ಅವುಗಳನ್ನು ನಾಶಮಾಡಲು ಹೋರಾಡಿದ್ದಾನೆ ಎನ್ನಲು ಹೇಗೆ ಸಾಧ್ಯ? ಎರಡನೆಯ ಅಂಶದಲ್ಲಿ, ವಾದದಲ್ಲಿನ ತರ್ಕರಹಿತತೆ ಹಾಗೂ ಪೂರ್ವಾಗ್ರಹ ಯಾವುದು? ಅದು ಎಲ್ಲಿದೆ? ಎಂಬುದನ್ನು ಸುಸಂಬದ್ಧವಾಗಿ ತೋರ್ಪಡಿಸದೇ, ಆ ಹೊಣೆಯನ್ನು ಓದುಗರ ಮೇಲೆಯೇ ಹಾಕಿಬಿಡುತ್ತಾರೆ. ಆದರೆ, ಡಂಕಿನ್ ಹಾಗೂ ಬಾಲುರವರು, ಅವರ ಒಟ್ಟಾರೆ ಸಂಶೋಧನೆಯಲ್ಲಿ, ಎಲ್ಲಿಯೂ ಕೂಡ ವಚನಕಾರರು ಜಾತಿಯ ಪರವಾಗಿದ್ದರು; ಭಾರತದಲ್ಲಿ ಜಾತಿಯೇ ಇಲ್ಲ ಎಂದು ಹೇಳಿರುವುದು ಕಂಡುಬರುವುದಿಲ್ಲ. ಇದನ್ನು ಸ್ವತಃ ಆರೋಪಿಸುವವರೇ ಸಾಭೀತು ಪಡಿಸಬೇಕಾಗುತ್ತದೆ. ಇಲ್ಲವಾದರೆ, ವಿದ್ವಾಂಸರುಗಳು ತಮ್ಮ ಈ ಆರೋಪಗಳೆಲ್ಲವೂ ನಿರಾಧಾರವಾದವುಗಳು ಎಂಬ ಬೆಲೆ ತೆರಬೇಕಾಗುತ್ತದೆ.

ಮತ್ತಷ್ಟು ಓದು »

8
ಏಪ್ರಿಲ್

ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ

ಡಾ. ಸಂತೋಷ್ ಕುಮಾರ್ ಪಿ.ಕೆ, ಶಿವಮೊಗ್ಗ.

Vachana Charcheಪ್ರಜಾವಾಣಿ ೧೯/೦೩/೨೦೧೩ ರಲ್ಲಿ ಪ್ರಕಟವಾದ ಕಲಬುರ್ಗಿಯವ ಲೇಖನಕ್ಕೆ ಪ್ರತಿಕ್ರಿಯೆ

ವಚನಗಳ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಒಂದು ರೀತಿಯ ಕಂದರವಿದೆ. ಒಂದೆಡೆ ಸಂಶೋಧನೆ ವಾಸ್ತವದ ಕುರಿತು ವಾದಿಸುತ್ತಿದ್ದರೆ ಮತ್ತೊಂದೆಡೆ ಐಡಿಯಾಲಜಿಗಳು ಕಟ್ಟುಕತೆಯನ್ನೇ ಮರುಪ್ರಸಾರ ಮಾಡುತ್ತಿವೆ. ಇಲ್ಲಿ ಕಂದರವಿರುವುದು ಸಂಶೋಧನೆ ಮತ್ತು ಐಡಿಯಾಲಜಿಯ ನಡುವೆ. ಸಂಶೋಧನೆ ನಡೆಸಿ ಸುಮಾರು ೨೨೦೦೦ ವಚನಗಳನ್ನು ಪರಿಶೀಲನೆಗೆ ಒಡ್ಡಿ, ಡಂಕಿನ್ ಮತ್ತು ಬಾಲುರವರು ಒಂದು ಹೊಸ ಹೈಪೋಥೀಸಿಸ್ ನ್ನು ನೀಡುತ್ತಿದ್ದಾರೆ. ಆದರೆ ಅದು ಸಂಶೋಧನಾ ಹೈಪೋಥೀಸಿಸ್ ಎಂಬುದು ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪೂರ್ವಪಕ್ಷದವರಿಗೆ ಅರ್ಥವಾಗದೆ ಇರುವುದು ಖೇದದ ಸಂಗತಿ.

ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ಪೂರ್ವಪಕ್ಷದವರು ಅದು ಹೇಗೆ ಜಾತಿವ್ಯವಸ್ಥೆಯ ವಿರುದ್ಧವೇ ನಡೆದಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಅರಚಾಟ, ಕಿರುಚಾಟ, ವಯಕ್ತಿಕ ಟೀಕೆಗಳನ್ನು ಮಾಡಿದರೆ ಯಾವುದೇ ಹೈಪೋಥೀಸಿಸ್ ನ್ನು ರೆಫ್ಯೂಟ್ ಮಾಡಿದಂತೆ ಆಗುವುದಿಲ್ಲ. ವಚನಗಳು ಸಾವಿರಾರು ವಿಷಯಗಳ ಕುರಿತು ಮಾತನಾಡಿವೆ, ಅವುಗಳಲ್ಲಿ ಜಾತಿಯ ಕುರಿತು ಮಾತನಾಡಿರುವುದು ಒಂದಾಗಿದೆ. ವಚನಗಳ ಮೂಲ ಸಿದ್ಧಾಂತ (ಕಲಬುರ್ಗಿಯವರು ಹೇಳುವಂತೆ) ಜಾತಿವ್ಯವಸ್ಥೆಯನ್ನು ಹೋಗಲಾಡಿಸುವುದೇ ಆಗಿದ್ದರೆ ಅವರು ರಚಿಸಿರುವ ಬಹುತೇಕ ವಚನಗಳು ಆ ವಿಷಯದ ಸುತ್ತವೇ ಇರಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ಈ ವಾದವನ್ನು ವಿರೋಧಿಸಬೇಕಾದರೆ ವಚನಗಳು ಬಹುಸಂಖ್ಯೆಯಲ್ಲಿ ಜಾತಿಯನ್ನು ವಿರೋಧಿಸುತ್ತವೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇಷ್ಟು ಕನಿಷ್ಟ ಜ್ಞಾನವಿರದಿದ್ದರೆ ಐಡಿಯಾಲಜಿ, ಅಂದರೆ ವಾಸ್ತವಕ್ಕಿಂತ ತಾನು ನಂಬಿರುವುದೇ ಸತ್ಯ ಎಂಬ ಧೋರಣೆ ಮುಸುಕಾಗಿ ನಿಲ್ಲುತ್ತದೆ. ಐಡಿಯಾಲಜಿಯು ಸಿದ್ಧಾಂತಕ್ಕೆ ತೀರಾ ವ್ಯತಿರಿಕ್ತವಾದುದಾಗಿದೆ. ಸಾಮಾನ್ಯವಾಗಿ ಸಿದ್ಧಾಂತಗಳು ಇರುವ ಜ್ಞಾನವನ್ನು ಒರೆಗೆ ಹಚ್ಚುವ ಮೂಲಕ ಹೆಚ್ಚೆಚ್ಚು ಸ್ಪಷ್ಟತೆಯನ್ನು ಒದಗಿಸುತ್ತಾ ಹೋಗುತ್ತವೆ.

ಮತ್ತಷ್ಟು ಓದು »

5
ಏಪ್ರಿಲ್

ಸಂಶೋಧನೆಯ ರೂಪುರೇಷೆಗಳನ್ನರಿಯದ ವಿಮರ್ಶಕರು

– ಡಂಕಿನ್ ಝಳಕಿ

Vachana Charcheಇಂದಿನ (04/05/2013) ಪ್ರಜಾವಾಣಿಯಲ್ಲಿ ಜಿ.ಬಿ. ಹರೀಶರು ಬರೆದ ಲೇಖನ ಮತ್ತು ಇದುವರೆಗೂ ಬಂದಿರುವ ಇನ್ನಿತರ ಪ್ರತಿಕ್ರಿಯೆಗಳಲ್ಲಿ  ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಬಹಳಷ್ಟು ಗೊಂದಲವನ್ನು ನಾವು ಕಾಣಬಹುದು. ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ನಾವು ಪದೇಪದೇ ಕಾಣುವ ಹಲವು ಸಣ್ಣ ದೊಡ್ಡ ತಪ್ಪುಗಳು ಈ ಪ್ರತಿಕ್ರಿಯೆಗಳ ತುಂಬಾ ಕಾಣಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಕುರಿತು ಚರ್ಚಿಸುವುದೇ ಈ ಪುಟ್ಟ ಲೇಖನದ ಉದ್ದೇಶ.

(೧) ಸಂಶೋಧನೆಗಳು ಮತ್ತು ಉಲ್ಲೇಖಗಳು: ನಾನು ನನ್ನ ಲೇಖನ ಮತ್ತು ಪ್ರಬಂಧಗಳಲ್ಲಿ ಯಾರನ್ನು ಮತ್ತು ಎಷ್ಟು ಮಂದಿಯನ್ನು ಉಲ್ಲೇಖಿಸುತ್ತೇನೆ ಮತ್ತು ಉಲ್ಲೇಖಿಸುವುದಿಲ್ಲ ಎಂಬ ವಿಚಾರವನ್ನು ಕುರಿತು ಮಾತನಾಡುತ್ತಾ ಹರೀಶರು ಹೀಗೆ ಹೇಳುತ್ತಾರೆ “ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ.”

ಮತ್ತಷ್ಟು ಓದು »

4
ಏಪ್ರಿಲ್

ಜಾತಿ-ವಿರೋಧಿ ನಿಲುವು : ಸರಿಯಾದ ವೈಧಾನಿಕತೆ!

– ಡಂಕಿನ್ ಝಳಕಿ

Vachana Charcheಇಂದಿನ ಪ್ರಜಾವಾಣಿಯಲ್ಲಿ (೦೪/೦೪/೨೦೧೩) ಎಂ.ಎಸ್. ಆಶಾದೇವಿಯವರು ಬರೆದ ವಚನ ಕುರಿತ ಚರ್ಚೆಯ ಬರಹಕ್ಕೆ ಇದು ನನ್ನ ಉತ್ತರ.

ನಮ್ಮ ಸಂಶೋಧನೆಯ ಕುರಿತು ಇವರು ಮಾಡುವ ಗುರುತರ ಆಪಾದನೆಯೆಂದರೆ, ಇದಕ್ಕೆ ವಚನಗಳ “ಜೀವಪರ ನಿಲುವು” ಕಾಣಿಸುವುದಿಲ್ಲ. ಏಕೆಂದರೆ ಈ ಸಂಶೋಧನೆಗೆ ಒಂದು “ವೈಧಾನಿಕತೆಯ ಕಣ್ಕಟ್ಟು” ಇದೆ. ಯಾವುದಿದು ವೈಧಾನಿಕತೆಯ ಕಣ್ಕಟ್ಟು? ಆಧ್ಯಾತ್ಮಿಕ ವಿಚಾರವನ್ನು ಅಕಾಡೆಮಿಕ್ ಅಧ್ಯಯನದಲ್ಲಿ ತರುವ ಪ್ರಯತ್ನವೇ ಈ ಕಣ್ಕಟ್ಟು ಅಥವಾ ಮಾಯೆ. ಮುಂದುವರೆಸಿ ಇವರು ಹೇಳುತ್ತಾರೆ, ಈ ಕುರುಡು ವೈಧಾನಿಕತೆಯು ಈ ಮುಂದಿನ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ: “ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು?”

ಇವರ ಈ ಹೇಳಿಕೆಗಳನ್ನು ನಾನು ‘ಆಪಾದನೆ’ ಎಂದು ಯಾಕೆ ಹೇಳಿದೆನೆಂದರೆ ಇವರು ತಮ್ಮ ಈ ಹೇಳಿಕೆಗಳನ್ನು ಮುಂದೆ ಎಲ್ಲೂ ವಿವರಿಸುವುದೂ ಇಲ್ಲ, ಸಮರ್ಥನೆ ಮಾಡಿಕೊಳ್ಳುವುದೂ ಇಲ್ಲ. ಈ ಆಪಾದನೆಯ ನಂತರ ಇವರ ಲೇಖನ ಬೇರೆಡೆ ಹೊರಳುತ್ತದೆ. ತಮ್ಮ ಹೇಳಿಕೆಗಳನ್ನು ಇವರು ತಾವೇ ವಿವರಿಸದೆ ಹೋಗುವುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ಓದುಗನಿಗೆ ಬಿಟ್ಟ ಕೆಲಸ. ನನಗೆ ಇವರ ಕಷ್ಟದ ಭಾಷೆ ಅರ್ಥವಾದ ಮಟ್ಟಿಗೆ ಹೇಳುವುದಾದರೆ, ಯಾವುದೇ ಸಂಶೋಧನೆ ಮಾಡದೆ, ನೂರು ವರ್ಷಗಳಿಂದ ಹೇಳುತ್ತಾ ಬಂದಿರುವ ‘ವಚನಗಳು ಜಾತಿವಿರೋಧಿ’ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದೇ ವಚನಗಳ ಜೀವಪರ ನಿಲುವನ್ನು ಗುರುತಿಸುವ ವೈಧಾನಿಕತೆ ಎಂದಾಯಿತು ಅಲ್ಲವೇ?

ಮತ್ತಷ್ಟು ಓದು »