ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ
– ಅಕ್ಷತಾ ಬಜ್ಪೆ
ವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು. ಮತ್ತಷ್ಟು ಓದು
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 11
ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್)
– ರಾಮಚಂದ್ರ ಹೆಗಡೆ
ವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ ಮಾರ್ಗರೇಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಭಾರತೀಯ ಧರ್ಮ, ಸಂಸ್ಕೃತಿ, ವೇದ ಉಪನಿಷತ್ತುಗಳ ಕುರಿತ ಅವರ ಚಿಂತನೆಗಳಿಂದ ಮಂತ್ರಮುಗ್ಧರಾದ ಆಕೆ ಅವರನ್ನೇ ತನ್ನ ‘ಗುರುದೇವ’ ರೆಂದು ಸ್ವೀಕರಿಸಿದರು. ಭಾರತೀಯ ಚಿಂತನೆಗಳ ಅಧ್ಯಯನದಲ್ಲಿ ತೊಡಗಿದ ಆಕೆಗೆ ಭಾರತವನ್ನು ಕಾಣುವ ಹೆಬ್ಬಯಕ್ಕೆ ಹುಟ್ಟಿತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಇಲ್ಲಿ ನಿನಗಾಗಿ ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಓಗೊಟ್ಟ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು. ಮತ್ತಷ್ಟು ಓದು
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨
– ರೋಹಿತ್ ಚಕ್ರತೀರ್ಥ
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
ಮೊಳಗಿತು ಕಂಚಿನ ಕಂಠ
ಅಂದು, ಸೆಪ್ಟೆಂಬರ್ 11ನೇ ತಾರೀಖು, ಶಿಕಾಗೋದಲ್ಲಿ ಜಮಾಯಿಸಿದ್ದ ಧರ್ಮಜಿಜ್ಞಾಸುಗಳೆದುರು ಸರ್ವಧರ್ಮ ಸಂಸತ್ತಿನ ವೇದಿಕೆಯಲ್ಲಿ ನಿಂತ ವಿವೇಕಾನಂದರ ಮಾತು ಶುರುವಾಗಿದ್ದು “ಅಮೆರಿಕದ ಸೋದರ ಸೋದರಿಯರೇ” ಎಂಬ ಶಕ್ತಿಶಾಲಿಯಾದ ಪದಗಳ ಮೂಲಕ. ತನ್ನೆದುರು ಕೂತಿದ್ದ ಅಷ್ಟೂ ಜನರನ್ನು ಹಾಗೆ ಒಂದೇ ಉಸಿರಿನಲ್ಲಿ ತನ್ನವರನ್ನಾಗಿ ಮಾಡಿಕೊಂಡ ಯಾವ ಧರ್ಮಗುರುವೂ ಅಲ್ಲಿರಲಿಲ್ಲ. ಹಾಗಿದ್ದಾಗ ವಿವೇಕಾನಂದರು ಸೋದರ-ಸೋದರಿಯರೇ ಎಂದಿದ್ದೇ ತಡ ಇಡೀ ಸಭಾಂಗಣದಲ್ಲಿ ವಿದ್ಯುತ್ಸಂಚಾರವಾಯಿತು! ಸಭಿಕರು ಎದ್ದು ಮೂರ್ನಾಲ್ಕು ನಿಮಿಷಗಳ ದೀರ್ಘ ಕರತಾಡನ ಮಾಡಿದರು. ತನ್ನ ಕೇವಲ ಹದಿನೈದು ನಿಮಿಷಗಳ ಪುಟ್ಟ ಭಾಷಣದಲ್ಲಿ ವಿವೇಕಾನಂದರು ಭಾರತದ ಸನಾತನ ಸಂಸ್ಕøತಿಯ ಮೂಲ ಆಶಯವನ್ನು ಅನಾವರಣ ಮಾಡಿದ್ದರು. ಮರುದಿನದ ಪತ್ರಿಕೆಗಳಲ್ಲಿ ದೂರದ ಹಿಂದೂಸ್ತಾನದಿಂದ ಬಂದ ಈ ಯುವ ಸಂನ್ಯಾಸಿಯ ಸಿಂಹಗರ್ಜನೆಯದ್ದೇ ಸುದ್ದಿ! ದ ನ್ಯೂಯಾಕ್ ಹೆರಾಲ್ಡ್ ಪತ್ರಿಕೆ, “ಧರ್ಮ ಸಂಸತ್ತಿನ ಅತ್ಯಂತ ಪ್ರಮುಖ ಆಕರ್ಷಣೆ ಭಾರತದಿಂದ ಬಂದ ಸ್ವಾಮಿ ವಿವೇಕಾನಂದರು. ಅವರ ಮಾತುಗಳನ್ನು ಕೇಳಿದ ಮೇಲೆ, ಆ ಪುಣ್ಯಭೂಮಿಯತ್ತ ನಾವು ಮಿಷನರಿಗಳನ್ನು ಧರ್ಮಪ್ರಚಾರಕ್ಕಾಗಿ ಕಳಿಸುತ್ತಿರುವುದು ಅದೆಷ್ಟು ಹಾಸ್ಯಾಸ್ಪದ ಕಾರ್ಯ ಎಂಬುದು ಅರಿವಾಗುತ್ತದೆ” ಎಂದು ಬರೆಯಿತು. ಇನ್ನೊಂದು ಪತ್ರಿಕೆ, “ಜನರು ಉಳಿದವರ ಗಂಟೆಗಟ್ಟಲೆ ಉಪನ್ಯಾಸಗಳನ್ನು ಕೂಡ ಸಹಿಸಿಕೊಂಡು ಈ ಸ್ವಾಮೀಜಿಯ ಹದಿನೈದು ನಿಮಿಷಗಳ ಚಿಕ್ಕ ಭಾಷಣವನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದರು” ಎಂದು ವಿಮರ್ಶೆ ಬರೆದಿತ್ತು. ತನ್ನ ಹನ್ನೆರಡು ವರ್ಷಗಳ ಕಠಿಣ ತಪಸ್ಸು, ಸಾಧನೆ, ಅಧ್ಯಯನ, ಚಿಂತನಗಳಿಂದ ವಿವೇಕಾನಂದರು ಈಗ “ರಾತ್ರಿಬೆಳಗಾಗುವುದರಲ್ಲಿ” ತಾರೆಯಾಗಿದ್ದರು! ಭಾರತದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಕೂಡ ಅಮೆರಿಕನ್ ಪತ್ರಕರ್ತರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದವು. ವಿವೇಕಾನಂದರ ಅಮೆರಿಕಾ ದಿಗ್ವಿಜಯ ಭಾರತದಲ್ಲಿ ಬಲುದೊಡ್ಡ ಸುದ್ದಿಯಾಯಿತು. ರಾಮಕೃಷ್ಣ ಮಠದಲ್ಲಂತೂ ಸಂಭ್ರಮವೇ ಸಂಭ್ರಮ ಮನೆಮಾಡಿತು. ಅಮೆರಿಕೆಯ ಹತ್ತುಹಲವಾರು ಕಡೆಗಳಲ್ಲಿ ಸ್ವಾಮೀಜಿಯ ಭಾಷಣ ಏರ್ಪಾಟಾಯಿತು. ಭಾರತದ ಸನಾತನ ಧರ್ಮದ ಬಗ್ಗೆ ಅರಿಯುವ ಆಸಕ್ತಿ ಅಲ್ಲಿನ ಬಿಳಿತೊಗಲಿನ ಜಿಜ್ಞಾಸುಗಳಿಗೆ ಹೆಚ್ಚಾಯಿತು.
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
– ರೋಹಿತ್ ಚಕ್ರತೀರ್ಥ
ಕೆಲ ವರ್ಷಗಳ ಹಿಂದೆ ವಿವೇಕಾನಂದರ ಮೇಲೆ ಅದೊಂದು ಲೇಖನ ಪ್ರಕಟವಾಗಿತ್ತು. ಭಗವಾನ್ ಗೀತೆಯನ್ನು ಸುಟ್ಟು ಹಾಕುತ್ತೇನೆ ಎಂದಮೇಲೆ ಏಕಾಏಕಿ ಆ ಪುಸ್ತಕದ ಸೇಲ್ಸ್ ಹೆಚ್ಚಾದಂತೆ, ವಿವೇಕರ ಮೇಲೆ ಬರೆದಿದ್ದ ಈ ಲೇಖನ ಪ್ರಕಟವಾದ ಮೇಲೆ ಹಲವು ತರುಣರು ವಿವೇಕಾನಂದರನ್ನು ಆಳವಾಗಿ ಅಭ್ಯಾಸ ಮಾಡಲು ಕೂತುಬಿಟ್ಟಿದ್ದರು! ಯಾಕೆಂದರೆ ವಿವೇಕರ ನಿಜಬಣ್ಣ ಬಯಲು ಮಾಡುವ ಉತ್ಸಾಹದಲ್ಲಿ ಲೇಖಕ ಬರೆದಿದ್ದ ಸಾಲುಗಳು ಆಘಾತ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಲೇಖನದ ತೊಂಬತ್ತೊಂಬತ್ತು ಭಾಗ ವಿವೇಕಾನಂದರನ್ನು ವಾಚಾಮಗೋಚರವಾಗಿ ತೆಗಳಿ, ಕೊನೆಯ ಒಂದೆರಡು ಸಾಲುಗಳಲ್ಲಿ “ಇಷ್ಟೆಲ್ಲ ಇದ್ದರೂ ಯಕಶ್ಚಿತ್ ಮನುಷ್ಯನೊಬ್ಬ ವಿವೇಕಾನಂದ ಆಗಲು ಸಾಧ್ಯ” ಎಂಬ “ತಿಪ್ಪೆ ಸಾರಿಸಿ” ಲೇಖನವನ್ನು ಮುಗಿಸಲಾಗಿತ್ತು. ಹೆತ್ತತಾಯಿಯನ್ನು ಅಸಹ್ಯ ಪದಗಳಿಂದ ನಿಂದಿಸಿ ಕೊನೆಗೆ “ಅವೇನೇ ಇದ್ದರೂ ನೀನು ತಾಯಿ” ಎಂದು ಹೇಳುವ ಧಾಟಿಯಲ್ಲಿ ಲೇಖಕರು ತನ್ನ ಜಾಣಮಾತುಗಳನ್ನು ಹೊಸೆದಿದ್ದರು. ವಿವೇಕಾನಂದರ ಬಗ್ಗೆ ಸರ್ವೇಸಾಧಾರಣವಾದ ಒಂದಷ್ಟು ಜನರಲ್ ಸಾಹಿತ್ಯವನ್ನು ಓದಿಕೊಂಡದ್ದು ಬಿಟ್ಟರೆ ನನಗೂ ಆ ಧೀಮಂತನ ಜೀವನದ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಲೇಖನದ ಅಪಪ್ರಚಾರವೊಂದು ನೆಪವಾಗಿ ನಾನೂ ವಿವೇಕಾನಂದರ ಬಗ್ಗೆ ಓದಲು ಕೂತೆ!
ಆ ಅಪಪ್ರಚಾರದ ಲೇಖನವನ್ನು ಓದುತ್ತಿದ್ದಾಗ ನನ್ನನ್ನು ತಡೆದುನಿಲ್ಲಿಸಿದ ಒಂದು ಸಾಲು ಹೀಗಿತ್ತು: ವಿವೇಕಾನಂದರು ಇಂಗ್ಲೀಷಿನಲ್ಲಿ 46 ಅಂಕ ಪಡೆದಿದ್ದರು; ಶಾಲಾಶಿಕ್ಷಕನಾಗುವ ಅರ್ಹತೆಯೂ ಇಲ್ಲ ಎಂಬ ಕಾರಣಕ್ಕೆ ಸ್ವತಃ ಈಶ್ವರಚಂದ್ರ ವಿದ್ಯಾಸಾಗರರು ಅವರನ್ನು ಕೆಲಸದಿಂದ ತೆಗೆದುಹಾಕಿದ್ದರು.ಈ ಮಾತುಗಳನ್ನು ಓದಿದಾಗ,ನನಗೆ ಥಟ್ಟನೆ ಆರ್.ಕೆ.ನಾರಾಯಣ, ಬನ್ನಂಜೆ ಗೋವಿಂದಾಚಾರ್ಯ, ಶ್ರೀನಿವಾಸ ರಾಮಾನುಜನ್, ಎವಾರಿಸ್ಟ್ ಗ್ಯಾಲ್ವ ನೆನಪಿಗೆ ಬಂದರು. ನಿಮಗೆ ಗೊತ್ತಿದೆಯೋ ಇಲ್ಲವೋ, ಭಾರತೀಯ ಇಂಗ್ಲೀಷ್ ಸಾಹಿತ್ಯಲೋಕದ ದಿಗ್ಗಜ ಆರ್.ಕೆ. ನಾರಾಯಣ್ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿದ್ದರು! ಸಂಸ್ಕೃತದ ಪ್ರಕಾಂಡ ಪಂಡಿತ ಬನ್ನಂಜೆಯವರಿಗೆ ಎರಡು ಸಲ ಪ್ರವೇಶ ಪರೀಕ್ಷೆಗೆ ಕೂತರೂ ಸಂಸ್ಕೃತ ಕಾಲೇಜಿಗೆ ಸೇರಬೇಕಾದಷ್ಟು ಮಾರ್ಕು ಸಿಗಲಿಲ್ಲ! ಗಣಿತ ತಾರೆ ರಾಮಾನುಜನ್ ಎಫ್‍ಎ ಪರೀಕ್ಷೆಯಲ್ಲಿ ಫೇಲಾಗಿದ್ದ ಹುಡುಗ, ಮುಂದೆ ಕೇವಲ ಮೂವತ್ತು ವರ್ಷ ವಯಸ್ಸಲ್ಲೇ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಬಿ.ಎ. ಪದವಿ ಪಡೆದು ಫೆಲೋ ಆಫ್ ರಾಯಲ್ ಸೊಸೈಟಿ ಆದರು! ಗಣಿತದ ಇನ್ನೊಂದು ಅದ್ಭುತ ಪ್ರತಿಭೆ; ಗ್ರೂಪ್ ಸಿದ್ಧಾಂತವೆಂಬ ಹೊಸ ಶಾಖೆಯನ್ನು ಹುಟ್ಟಿಸಿದ ಗ್ಯಾಲ್ವನಿಗೆ ತನ್ನ ಹುಟ್ಟೂರು ಪ್ಯಾರಿಸ್ಸಿನ ಎಕೋಲ್ ಪಾಲಿಟೆಕ್ನಿಕ್ ಎಂಬ ಕಾಲೇಜಿನ ಸಂದರ್ಶನದಲ್ಲಿ ಎರಡು ಸಲ ಮಂಗಳಾರತಿಯಾಗಿತ್ತು. ಯಾವುದೇ ವ್ಯಕ್ತಿಯ ಜೀವನ ನಿಂತ ನೀರಾಗಿರುವುದಿಲ್ಲ; ಅದು ನಿರಂತರ ಚಲನಶೀಲ. ಹಾಗೊಂದು ಊಧ್ರ್ವಗತಿ ಇರುವುದರಿಂದಲೇ ಸಾಮಾನ್ಯವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂಬುದನ್ನು ಬಲ್ಲ ಯಾರಿಗೇ ಆಗಲಿ, ವಿವೇಕಾನಂದರು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಮಾರ್ಕು ಪಡೆದರು ಎನ್ನುವುದು ಅವರನ್ನು ಅಳೆಯುವ ಮಾನದಂಡ ಅನ್ನಿಸುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ತನ್ನ ಜೀವನದಲ್ಲಿ ಎದುರಾಗುತ್ತಹೋದ ಪಲ್ಲಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಮಹಾತ್ಮನಾಗಬಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆಯಲ್ಲಿ 46 ಮಾರ್ಕು ಪಡೆದರು ಎಂಬ ಕಾರಣ ಕೊಟ್ಟು ಓದುಗರನ್ನು ಆಘಾತಗೊಳಿಸಿದ ಲೇಖನದಲ್ಲಿ ವಿವೇಕಾನಂದರ ಔನ್ನತ್ಯವನ್ನು ಅರಿತುಕೊಳ್ಳಲು ದಾರಿಯಾಗುವ ಇನ್ನಷ್ಟು ಆಘಾತಗಳಿರಬಲ್ಲವು ಎಂದು ಮನದಟ್ಟಾಯಿತು. ಅಲ್ಲಿಂದ ಮುಂದಕ್ಕೆ ನಾನು ಕಂಡುಕೊಂಡ ವಿವೇಕಾನಂದರ ನಿಜಚಿತ್ರಣ ಇಲ್ಲಿದೆ.
ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ವಿಚಾರಗಳು
– ಪ್ರೊ.ರಾಜಾರಾಮ ಹೆಗಡೆ,
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
೩.ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ
ವಿವೇಕಾನಂದರ ಗುರಿಯನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ ‘ಹಿಂದೂ ಸಂಸ್ಕೃತಿಯ ಉದಾತ್ತ ಧ್ಯೇಯಗಳ ಕುರಿತು ಜಾಗೃತಿ ಮೂಡಿಸುವುದು’ ಎನ್ನಬಹುದು. ಆದರೆ ಈ ಒಂದು ಸಾಲೇ ನಮಗಿಂದು ಅರ್ಥವಾಗದ ಸ್ಥಿತಿಗೆ ಬಂದಿದ್ದೇವೆ ಎಂಬುದೊಂದು ವಿಪರ್ಯಾಸ. ಅದಕ್ಕೆ ಕಾರಣ ಕಳೆದ ನೂರು ವರ್ಷಗಳಲ್ಲಿ ಭಾರತೀಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಗಳು. ಹಿಂದೂ ಎಂಬ ಶಬ್ದವನ್ನು ಇಂದು ನಿರ್ವಿಕಾರವಾಗಿ, ವಸ್ತುನಿಷ್ಠವಾಗಿ ನೋಡುವುದೇ ನಮಗೆ ಸಾಧ್ಯವಿಲ್ಲದಂತಾಗಿದೆ. ಒಂದೆಡೆ ಹಿಂದುತ್ವದ ರಾಜಕೀಯದಿಂದಾಗಿ ಅದನ್ನು ಭಾವನಾತ್ಮಕವಾಗಿ ಕ್ರೈಸ್ತ, ಇಸ್ಲಾಂ ಎಂಬ ಪ್ರಭೇದಗಳಿಗೆ ಪ್ರತಿಯಾಗಿ ನಮ್ಮೊಂದು ಅಹಂ ಎಂಬಂತೇ ನೋಡುವುದನ್ನು ಕಲಿತಿದ್ದೇವೆ,ಅಥವಾ ಪ್ರಗತಿಪರ ಚಳವಳಿಗಳ ರಾಜಕೀಯದಿಂದಾಗಿ ಅದಕ್ಕೆ ಇಲ್ಲದ ಹಲ್ಲು ಉಗುರುಗಳನ್ನು ಆರೋಪಿಸಿ ಅದರ ಕುರಿತು ಸಂದೇಹ ಹಾಗೂ ಭಯಗಳ ಮೂಲಕ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇವೆ. ಎರಡೂ ಪಕ್ಷಗಳೂ ಈ ಶಬ್ದಕ್ಕೆ ನಿರ್ದಿಷ್ಟ ರಾಜಕೀಯ ಅರ್ಥಗಳನ್ನು ರೂಢಿಸಿಬಿಟ್ಟಿವೆ. ವಿವೇಕಾನಂದರ ಕುರಿತು ನಮ್ಮ ತಲೆಮಾರಿನವರ ಪ್ರತಿಕ್ರಿಯೆಗಳು ಈ ಅರ್ಥಗಳಿಂದ ಪ್ರಭಾವಿತವಾಗಿವೆ ಎಂಬುದು ಸ್ಪಷ್ಟ.
ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
ಸಾಧಾರಣವಾಗಿ ಇಂದು ವಿವೇಕಾನಂದರ ಕುರಿತು ಒಂದು ಅಭಿಪ್ರಾಯ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ. ಅದೆಂದರೆ ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡಿದರು ಎಂಬುದು. ವಿವೇಕಾನಂದರ ಕುರಿತ ಈ ಚಿತ್ರವು ಇಂದು ಎಷ್ಟು ಗಟ್ಟಿಯಾಗಿದೆಯೆಂದರೆ ಅವರ ಅನುಯಾಯಿಗಳು ಕೂಡ ಅವರ ಕುರಿತು ಮಾತನಾಡುವಾಗ ಈ ಅಂಶವನ್ನೇ ಮೊದಲು ಒತ್ತಿ ಹೇಳುತ್ತಾರೆ. ವಿವೇಕಾನಂದರ ಪ್ರಸ್ತುತತೆಯನ್ನು ಮನದಟ್ಟು ಮಾಡಿ ಕೊಡುವಾಗ ಅವರು ಹಿಂದೂ ಧರ್ಮದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದರು ಎನ್ನುವುದು ಅನಿವಾರ್ಯ.
ಆ ಅಂಶವನ್ನಿಟ್ಟುಕೊಂಡೇ ಹಿಂದುತ್ವವಾದಿಗಳು ವಿವೇಕಾನಂದರನ್ನು ತಮ್ಮ ಮೂಲಪುರುಷರೆಂಬಂತೆ ಪರಿಗಣಿಸುತ್ತಾರೆ. ಹಾಗಾಗಿ ಬಹುಶಃ ಇಂದಿನ ಸೆಕ್ಯುಲರ್ ಚಿಂತಕರು ಅವರು ಜಾತಿಯ ಕುರಿತು ಮಾಡಿದ ಟೀಕೆಗಳನ್ನು ಪ್ರಧಾನವಾಗಿ ಇಟ್ಟು ಅವರ ವಿಚಾರಗಳನ್ನು ಪ್ರಸ್ತುತ ಪಡಿಸುವ ಉಪಾಯಗಳನ್ನು ಬೆಳೆಸಿರಲೂ ಬಹುದು. ಒಟ್ಟಿನಲ್ಲಿ ವಿವೇಕಾನಂದರ ಸೆಕ್ಯುಲರೀಕರಣದ ಒಂದು ಭಾಗವಾಗಿ ಈ ಅಭಿಪ್ರಾಯವು ಜನಪ್ರಿಯತೆಯನ್ನು ಪಡೆದಿದೆ.
ಕರ್ನಾಟಕದಲ್ಲಿ ಕುವೆಂಪು ಅವರು ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಹಾಗೂ ಅವರ ಮೂಲಕ ವಿವೇಕಾನಂದರ ವಿಚಾರಗಳು ಶೂದ್ರ ಚಳವಳಿಯ ಒಂದು ಭಾಗವಾಗಿ ಕನ್ನಡ ಚಿಂತಕರಿಗೆ ಪರಿಚಯಿಸಲ್ಪಟ್ಟಿವೆ. ಹಿಂದುತ್ವದವರು ಬ್ರಾಹ್ಮಣರ ವಕ್ತಾರರು ಎಂದು ಈ ಚಿಂತಕರು ಪರಿಗಣಿಸಿರುವುದರಿಂದ ವಿವೇಕಾನಂದರ ಮೂಲ ಆಶಯವನ್ನು ಇವರು ತಿರುಚಬಹುದೆಂಬ ಆತಂಕ ಕೂಡ ಈ ಚಿಂತಕರಲ್ಲಿದೆ. ಹಾಗಾಗಿ ಕುವೆಂಪು ಅವರು ಹಿಂದೂ ಪರಂಪರೆಯ ಶ್ರೇಷ್ಟತೆಯ ಕುರಿತು ವ್ಯಕ್ತಪಡಿಸುವ ಚಿಂತನೆಗಳನ್ನು ಅವರ ಆರಾಧಕರು ಈಗ ಮೂಲೆಗೆ ಹಾಕಿದಂತಿದೆ. ಅವರನ್ನೂ ಕೂಡ ಇಂದಿನ ಪ್ರಗತಿಪರರ ಆಕಾರಕ್ಕೆ ಒಗ್ಗಿಸುವ ಪ್ರಯತ್ನವೇ ಎದ್ದುಕಾಣುವಂತಿದೆ. ಒಟ್ಟಿನಲ್ಲಿ ವಿವೇಕಾನಂದರು ಜಾತಿವಿರೋಧಿ ಎಂಬ ಚಿತ್ರಣವನ್ನು ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳಲಾಗುತ್ತಿದೆ. ವಿವೇಕಾನಂದರು ಜಾತಿಯ ಕುರಿತು ಏನು ಹೇಳುತ್ತಾರೆ?
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು, ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕøತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಾಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು( ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.
ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು. ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.
ಮತ್ತಷ್ಟು ಓದು