ಶೂರ್ಪನಖಿ, ಆಹಾ! ಎಂಥಾ ಸುಖಿ!
– ನಾಗೇಶ ಮೈಸೂರು
ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೇ?
ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸೀತೆ, ಕೈಕೆ, ಮಂಡೋದರಿ, ಮಂಥರೆ ಹೀಗೆ ಎಷ್ಟೋ ಪಾತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ ಅವುಗಳ ನಡುವೆ ಸಾಮಾನ್ಯವಾಗಿ ಯಾರೂ ಪರಿಗಣಿಸದ ಒಂದು ವಿಶೇಷ ಪಾತ್ರವೆಂದರೆ ಶೂರ್ಪನಖಿಯದು. ತೀರಾ ಪ್ರಖರವಾಗಿ ಎದ್ದು ಕಾಣದೆ, ತೆಳುವಾದ ಮೇಲುಸ್ತರದಲ್ಲೇ ಮುಲುಗಾಡುವ ಈ ಪಾತ್ರ ಇಡೀ ರಾಮಾಯಣದಲ್ಲಿ ಬಂದು ಹೋಗುವ ಆವರ್ತಗಳ ಗಣನೆಯಲ್ಲಿ ಕೆಲವೇ ಕೆಲವಾದರೂ, ಆ ಪಾತ್ರ ಇಡೀ ರಾಮಾಯಣ ಕಥನದಲ್ಲುಂಟುಮಾಡುವ ಪರಿಣಾಮ ನೋಡಿದರೆ, ಈ ಪಾತ್ರದ ಕುರಿತು ಅಷ್ಟಾಗಿ ಪರಿಶೀಲನೆ, ವಿಶ್ಲೇಷಣೆ ನಡೆದಿಲ್ಲವೆಂದೇ ಕಾಣುತ್ತದೆ. ಮತ್ತಷ್ಟು ಓದು
ಮೆಲ್ಲುಸಿರೆ ಸವಿಗಾನ….!
– ನಾಗೇಶ ಮೈಸೂರು
ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ ಆಶಯ..
ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೇ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೇ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ – ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ. ಮತ್ತಷ್ಟು ಓದು
ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…
– ನಾಗೇಶ ಮೈಸೂರು
ಶ್ರೀ ರಾಮ ಸೀತೆಯ ಕಥೆ ನಮಗೇನು ಹೊಸದಲ್ಲ ಬಿಡಿ.. ಎಲ್ಲಾ ಭಾಷೆಗಳಲ್ಲಿ ಖಂಡುಗಗಟ್ಟಲೆ ಕಥೆ, ಕಾವ್ಯಗಳು ಸಿಕ್ಕುತ್ತವೆ. ಆದರಿದು ಆಧುನಿಕ ವೇಗದ ಜಗ.. ಎಲ್ಲಾ ಸಂಕ್ಷಿಪ್ತದಲ್ಲಿ, ಫಾಸ್ಟ್ ಪುಡ್ಡಿನ ಹಾಗೆ ಶೀಘ್ರಗತಿಯಲ್ಲಿ ಸಿಗುವಂತಿದ್ದರೆ ಅದನ್ನೇ ಬಯಸುವ ಗ್ರಾಹಕ ವರ್ಗವೂ ಸಾಕಷ್ಟು ದೊಡ್ಡದಿದೆ. ಇನ್ನು ಮಿಕ್ಕವರಿಗೆ ದೊಡ್ಡದು, ಚಿಕ್ಕದು ಎನ್ನುವ ಜಿಜ್ಞಾಸೆಗಿಂತ ಸಮಯದ ಅಭಾವ. ಇನ್ನು ಕಿರಿಯರ ವಿಷಯಕ್ಕೆ ಬಂದರೆ ಅವರಿಗೆ ತೀರಾ ಭಾರವಾಗದ ರೀತಿಯಲ್ಲಿ ಅರುಹಬೇಕಾದ ಅನಿವಾರ್ಯ.. ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಹೆಣೆದ ನೂರು ಸಾಲಿನ, ಚತುಷ್ಪಾದಿ ಅವತಾರದಲ್ಲಿರುವ ಕಾವ್ಯರೂಪಿ ರಾಮಾಯಣ ಸಾರ – ಈ ಶ್ರೀರಾಮ ಚರಿತ. ನರಮಾನವನಾಗಿ ಪಡಿಪಾಟಲು ಪಟ್ಟನೆನ್ನುವ ಹಿನ್ನಲೆಯನ್ನು ಅಂತರ್ಗತವಾಗಿಸಿಕೊಂಡು ಮೂಡಿಬಂದ ಕಥಾಲಹರಿ. ಸರಳ ಲಹರಿ ಹಿತವಾಗಿ ನುಡಿವಂತಿದ್ದು ಮುದ ತಂದರೆ ಧನ್ಯ .
ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||
ಜನಸಾಮಾನ್ಯರಿಗಾಗಿ ಕಾವ್ಯ ಮತ್ತು ಕಾವ್ಯದಲ್ಲಿ ಸರಳತೆ
– ನಾಗೇಶ ಮೈಸೂರು
ಕೆಲವೊಮ್ಮೆ ನನಗನಿಸುತ್ತದೆ – ಚಲನಚಿತ್ರ ಗೀತೆಗಳಿಗೆ ಸಿಕ್ಕಷ್ಟು ಹೆಸರು, ಪ್ರಾಮುಖ್ಯತೆ ಒಳ್ಳೆಯ ಕಾವ್ಯ- ಕವಿತೆಗಳಿಗೆ ದೊರಕುತ್ತಿಲ್ಲವೆಂದು. ಎಲ್ಲಾ ಸ್ತರಗಳ ಹೆಚ್ಚು ಮನಸುಗಳನ್ನು ಚಲನಚಿತ್ರ ಗೀತೆಗಳು ತಲುಪುತ್ತದೆ ಎನ್ನುವುದು ನಿರ್ವಿವಾದ. ಆದರೆ ಅವುಗಳ ರೀತಿಯಲ್ಲೆ ಕವನಗಳ ಶ್ರೇಷ್ಠತೆ ಮುಖ್ಯವಾಹಿನಿಗೆ ಮುಟ್ಟುತ್ತಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ.
ಕಾವ್ಯಕ್ಕು ಭಾವಕ್ಕು ಅವಿನಾಭಾವ ಸಂಬಂಧ. ಭಾವ ಜೀವಿಯೊಬ್ಬ ಬರಹಗಾರನಾಗಿರಲಿ, ಬಿಡಲಿ – ಅಂತರಂಗದ ಬಡಿತ ಝೇಂಕರಿಸಿದಾಗ ಸ್ಪುರಿಸುವ ಭಾವನೆ ಪದಗಳಾಗಿ ಹೊರಬಿದ್ದಾಗ ಕಾವ್ಯ ರೂಪದಲ್ಲಿರುವುದೆ ಹೆಚ್ಚು. ಭಾವನೆಯ ನವಿರು ಮತ್ತು ನಾವೀನ್ಯತೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಕಾವ್ಯ ರೂಪದಲ್ಲಿರುವುದೆ ಸಹಜ ಗುಣ ಧರ್ಮ. ಈ ಭಾವ ಕೆಲವರಲ್ಲಿ ಕ್ಲಿಷ್ಠ ಕವನದ ರೂಪತಾಳಿದರೆ ಮತ್ತೆ ಕೆಲವರಿಗೆ ಸರಳ ಪದ ಕುಣಿತದ ಹಾಡಾಗಬಹುದು. ಮತ್ತಿತರರಿಗೆ ಎರಡು ಅಲ್ಲದ ನಡುವಿನ ಗಡಿಯ ತ್ರಿಶಂಕುವೂ ಆಗಬಹುದು. ಭಾವ ಗಣಿತದಲ್ಲಿ ಗಣನೆಗೆ ಬರುವುದು ಅದು ಆ ಗಳಿಗೆಯಲ್ಲಿರುವ ಮನಸ್ಥಿತಿಗನುಸಾರವಾಗಿ ಅಂಕೆಗಿಲ್ಲದೆ ಪ್ರಸ್ತಾವಗೊಳ್ಳುವ ರೀತಿಯೆ ಹೊರತು ಯಾವುದೆ ನೀತಿ ನಿಯಮಾವಳಿಗೊಳಪಟ್ಟ ನಿರ್ಬಂಧಿತ ಸರಕಲ್ಲ. ಹೀಗಾಗಿ ಅದು ಅದ್ಬುತವೂ ಆಗಿಬಡಿಬಹುದು, ಅನಾಥವೂ ಅನಿಸಿಬಿಡಬಹುದು.
ಇಷ್ಟಾದರೂ ಇಲ್ಲೊಂದು ವಿಲಕ್ಷಣ ವಿಪರ್ಯಾಸವಿದೆ. ಮೇಲ್ನೋಟಕ್ಕೆ ಇದು ಎದ್ದು ಕಾಣಿಸದಿದ್ದರು, ಸ್ವಲ್ಪ ಒಳಹೊಕ್ಕು ಆಳ ನೋಡಿ ಈಜಲು ಬಯಸಿದವರಿಗೆ ಇದು ಚಿರಪರಿಚಿತವೇ ಎನ್ನಬಹುದು. ಇದನ್ನು ಅರ್ಥ ಮಾಡಿಕೊಳ್ಳಲ್ಲು ಒಂದು ಉದಾಹರಣೆಯ ಮುಖೇನ ಯತ್ನಿಸುವುದು ಸೂಕ್ತವೆನಿಸುತ್ತದೆ. ಉತ್ತಮವಾಗಿಯೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಕವಿಯೊಬ್ಬ, ತಾನು ಬರೆದುದು ಹೆಚ್ಚು ಜನರಲ್ಲಿ ತಲುಪಲಿ ಎಂಬ ಅಶೆಯಿಂದ ಒಂದು ಪುಸ್ತಕವಾಗಿ ಪ್ರಕಟಿಸಲು ಬಯಸುತ್ತಾನೆ ಎಂದಿಟ್ಟುಕೊಳ್ಳೋಣ. ಅಲ್ಲಿಂದಲೆ ಆರಂಭ ತೊಂದರೆ. ಮೊದಲಿಗೆ ಅದನ್ನು ಪ್ರಕಟಿಸುವ ಇಚ್ಛೆಯಿರುವ ಪ್ರಕಾಶಕ ದೊರಕುವುದೆ ಕಷ್ಟ. ಸಿಗುವವರೆಲ್ಲ ಆ ಕ್ಷೇತ್ರದಲ್ಲಿ ಹೆಸರು ಮಾಡಿರುವವರ ಮೇಲಷ್ಟೆ ಬಂಡವಾಳ ಹಾಕಲು ಸಿದ್ದರಿರುತ್ತಾರೆಯೆ ಹೊರತು, ಹೊಸಬರ ಮೇಲಲ್ಲ. ಎಷ್ಟೊ ಸಲ ಬರೆದವರ ಪ್ರಕಟಿಸಬೇಕೆಂಬ ಹಂಬಲ, ಸ್ವಂತವಾಗಿ ಎಲ್ಲಾ ವೆಚ್ಚ ಭರಿಸಿ ಪುಸ್ತಕವಾಗಿಸುವುದರಲ್ಲಿ ಪರ್ಯಾವಸಾನವಾಗುವ ಪ್ರಕರಣಗಳು ಕಡಿಮೆಯೇನಲ್ಲ. ಆದರೆ ಅಲ್ಲಿಯೂ ಹೆಚ್ಚು ಜನರನ್ನು ತಲುಪೀತೆಂಬ ಆಶಯ ಕೈಗೂಡುವುದೆಂದು ಹೇಳುವಂತಿಲ್ಲ – ಮಾರುಕಟ್ಟೆಗೆ ತಲುಪಿಸುವ ರೀತಿ, ನೀತಿ, ವಿಧಾನಗಳ ಕೊರತೆಯಿಂದಾಗಿ. ಜತೆಗೆ ಕಥೆಯೊ, ಕಾದಂಬರಿಯೊ ಆದರೆ ಪ್ರಕಟಿಸಲು ಯಾರಾದರೂ ಸಿಕ್ಕಿದರೂ ಸಿಗಬಹುದು ; ಆದರೆ ಕಾವ್ಯವೆಂದ ತಕ್ಷಣ ಅರ್ಧಕರ್ಧ ಆಸಕ್ತಿಯೆ ತಗ್ಗಿ ಹೋಗುತ್ತದೆ. ಆ ಕಡಯಿಂದ ಫಕ್ಕನೆ ಬರುವ ಉತ್ತರ – ‘ಈ ದಿನಗಳಲ್ಲಿ ಕಾವ್ಯ, ಕವನ ಕೊಂಡು ಓದುವವರು ಕಮ್ಮಿ’ ಎಂಬುದಾಗಿ.
ಮತ್ತಷ್ಟು ಓದು
ಅಮರು ಶತಕದೊಳಗೊಂದು ಇಣುಕುನೋಟ
– ಹಂಸಾನಂದಿ
ಅಮರುಕ ಎಂಟನೇ ಶತಮಾನದಲ್ಲಿದ್ದ ಒಬ್ಬ ಸಂಸ್ಕೃತ ಕವಿ. ಈಗ ಕಾಶ್ಮೀರದ ರಾಜನೆಂದೂ, ಮಾಹಿಷ್ಮತಿಯ ರಾಜನೆಂದೂ ಪ್ರತೀತಿಯಿದೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಇವನ ಕಾವ್ಯದ ಹಲವು ಹಸ್ತಪ್ರತಿಗಳು ದೊರತಿದ್ದು ಮುಖ್ಯವಾಗಿ ಮೂರು ಪಾಠಾಂತರಗಳಿವೆ – ಇವುಗಳಲ್ಲಿ ಇರುವ ಪದ್ಯಗಳೆಲ್ಲ ಎಲ್ಲವೂ ಒಂದೇ ಆಗಿಲ್ಲ. ಅಲ್ಲದೆ, ನಂತರದ ಕೆಲವು ಕವಿಗಳೂ ಅಮರುಕನದ್ದೆಂದು ಕೆಲವು ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಉದಾಹರಿಸಿಯೂ ಇದ್ದಾರೆ. ಇವೆಲ್ಲಾ ಸೇರಿಸಿ, ಅಮರುಕನದ್ದೆಂದು ಹೇಳಲಾಗುವ ಸುಮಾರು ೧೬೦ ಪದ್ಯಗಳಿವೆ.
ಇವನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಲು ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕನ ದೇಹದಲ್ಲಿ ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳ ಸತ್ಯಾಸತ್ಯತೆ ಹೇಗೇ ಇರಲಿ – ಅಮರು ಬರೆದ ಪದ್ಯಗಳು ಸಾವಿರದಿನ್ನೂರು ವರ್ಷಗಳ ನಂತರವೂ ರಸಿಕರ ಮನ ಸೆಳೆಯುತ್ತಿವೆ. ಅಂದ ಹಾಗೆ , ಎಸ್ ಎಲ್ ಭೈರಪ್ಪ ಅವರ ’ಸಾರ್ಥ’ ಕಾದಂಬರಿಯನ್ನು ಓದಿದ್ದವರಿಗೆ ಅದರಲ್ಲಿ ಬರುವ ಅಮರುಕನ ಪಾತ್ರ ನೆನಪಾದರೂ ಆಗಬಹುದೇನೋ.
ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ. ಹಾಗಾಗಿ ಅವುಗಳ ಅನುವಾದ ಸ್ವಲ್ಪ ಕಷ್ಟವೇ ಆದರೂ, ಮನಸ್ಸಿಗೆ ಬಹಳ ತೃಪ್ತಿ ಕೊಡುವಂತಹವು. ನಾನು ಮಾಡಿರುವ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.
****
ಯಾವಾಗಲೋ ಒಮ್ಮೆ ನಾಯಕಿ ತನ್ನ ನಲ್ಲನಲ್ಲಿ ಹುಸಿಮುನಿಸು ತೋರಿದಳು. ಆದರೆ ಅದು ಸುಳ್ಳು ಎಂದರಿಯದ ಅವನು ದೂರವಾಗಿಬಿಟ್ಟ. ಈಗ ಇವಳಿಗೆ ಉಳಿದಿದ್ದೇನು? ಬರೀ ಒಂಟಿತನ. ತನ್ನ ಕೊರಗನ್ನು ಹೇಳಿಕೊಳ್ಳುವುದಕ್ಕೆ ಒಬ್ಬ ಗೆಳತಿಯಿದ್ದಾಳಲ್ಲ, ಸದ್ಯ! ಇಲ್ಲದಿದ್ದರೆ ಇವಳ ಪಾಡು ಏನಾಗುತ್ತಿತ್ತೋ! (ಅಮರುಶತಕ: ೧೫)
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?
ತೆಲಿಯಲೇರು ರಾಮ ಭಕ್ತಿ ಮಾರ್ಗಮುನು
– ಹಂಸಾನಂದಿ
ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.
ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು ‘ತೆಲಿಯಲೇರು ರಾಮ ಭಕ್ತಿಮಾರ್ಗಮುನು’ ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.
ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||
ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||
ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||
ಶಿವ ನಾನು, ಶಿವ ನಾನು!
ಈ ಬರಹವು ’ಎಲ್ಲರ ಕನ್ನಡ ‘ ದಲ್ಲಿದೆ.ಎಲ್ಲರ ದನಿಗೂ ವೇದಿಕೆಯಾಗುವ ನಿಲುಮೆಯ ಎಂದಿನ ನಿಲುವಿನಂತೆ ಈ ಲೇಖನವನ್ನು “ನಿಲುಮೆ” ಪ್ರಕಟಿಸುತ್ತಿದೆ.ಆದರೆ ವಿಷಯಗಳು ಸಾಮಾನ್ಯ ಕನ್ನಡಿಗರಿಗೆ ತಲುಪಬೇಕೆಂದರೆ ವಿಷಯ ಸಾಮಾನ್ಯ ಕನ್ನಡದಲ್ಲಿದ್ದರೆ ಒಳಿತಾದ್ದರಿಂದ ಪ್ರಚಲಿತ ಬಳಕೆಯಲ್ಲಿರುವ ಕನ್ನಡದ ಲೇಖನಗಳನ್ನು ಅಪೇಕ್ಷಿಸುತ್ತದೆ.
– ಕಿರಣ್ ಬಾಟ್ನಿ
{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ ಅನಿಸಿಕೆಯನ್ನು ಬಿತ್ತುತ್ತಿದ್ದಾರೆ. ಇನ್ನೊಂದು ಕಡೆ ’ಎಡಗಡೆ’ಯವರಲ್ಲಿ ಜಾತಿಯೇರ‍್ಪಾಡಿನ ಕೆಡುಕುಗಳ ಬಗ್ಗೆ ಹಾಡಿ ಗೋಳಾಡುವುದೇ ಒಂದು ಕಸುಬಾಗಿ ಬಿಟ್ಟಿರುವುದರಿಂದ ಅವರಿಂದ ಕೂಡಣಮಾರ‍್ಪಿನ ನಿಟ್ಟನ್ನು ಬಯಸುವುದೇ ತಪ್ಪೆಂಬಂತಿದೆ. ಇನ್ನು ಇವೆರಡು ಗುಂಪುಗಳು ಅರಿವನ್ನು ಹಂಚಿಕೊಳ್ಳುವುದಂತೂ ದೂರದ ಮಾತು.
ಇವೆರಡರ ನಡುವಿನ ಹಾದಿಯೊಂದನ್ನು ನಾವು ಕಂಡುಕೊಳ್ಳದೆ ಹೋದರೆ ಒಟ್ಟಾರೆಯಾಗಿ ಕನ್ನಡಿಗರಿಗೆ ಏಳಿಗೆಯಿಲ್ಲ ಎಂಬ ನಂಬಿಕೆ ನನ್ನಲ್ಲಿ ಬಹಳ ಗಟ್ಟಿಯಾಗಿದೆ. ’ಎಲ್ಲರಕನ್ನಡ’ವನ್ನು ನಾನು ಒಪ್ಪಿ ಅದನ್ನೇ ಬಳಸುವ ಹಟ ಹಿಡಿದಿರುವುದಕ್ಕೆ ಈ ನಂಬಿಕೆ ಒಂದು ಮುಕ್ಯವಾದ ಕಾರಣ. ಹುಟ್ಟಿನಿಂದ ಮಾದ್ವ ಬ್ರಾಮಣ ಜಾತಿಗೆ ಸೇರಿದ ನಾನು ಈ ನಡುಹಾದಿಯಲ್ಲಿ ನಡೆಯುವಾಗ ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ.
ಇಲ್ಲಿ ಬಹಳ ಚಿಕ್ಕದಾದ ಅಂತಹ ಒಂದು ಮೊಗಸನ್ನು ಮಾಡಿದ್ದೇನೆ. ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.}
ಭಾನುಮತಿಯ ಸ್ವಗತ
– ಅನಿತ ನರೇಶ್ ಮಂಚಿ
ಸೌಂದರ್ಯ ಎಂದರೆ ಏನು
ನೀನೇ ನೀನು ..
ಎಣೆಯಾರು ನಿನಗೆ ಎಂದಿದ್ದವ
ದ್ರೌಪದಿಗೆ ಸ್ವಯಂವರ
ಎಂಬ ವಾರ್ತೆಗೆ
ಬಾಸಿಂಗ ಕಟ್ಟಿದ್ದ ಕೌರವ
ಭುಜಬಲದ ಗದೆಯಲ್ಲ
ಎತ್ತಬೇಕಿದೆ ಬಿಲ್ಲು
ಹೂಡಬೇಕಿದೆ ಬಾಣ
ನೀರೊಳಗೆ ನಿಜವಲ್ಲದ
ಪ್ರತಿಬಿಂಬ ಗುರಿ
ತಿರುಗುವ ಮೀನ ಕಣ್ಣ
ಸೋತನಂತೆ ಆವ
ಗೆದ್ದೆ ಎಂದುಕೊಂಡಿದ್ದೆ ನಾನು
ಒಳಗೆಲ್ಲ ಅವಮಾನದ ಗಾಳಿ
ಅವಳಿಗಾದರೋ
ಹೊರಲಾರದ ಭಾರ
ಕೊರಳೊಳಗೆ ಐವರ ತಾಳಿ
ಮತ್ತಷ್ಟು ಓದು
ವೃದ್ಧಾಶ್ರಮ
– ಅಶೋಕ್ ಕುಮಾರ್ ವಳದೂರು (ಅಕುವ)
ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು
ದೂರದೂರಿಂದ ಬರುವ ಮನೆಯ ಅತಿಥಿಗೆ !
ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !
ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !
ಪದವೀಧರೆಯಾದೆ
– ಮೂಲ್ಕಿ ನಾಗ
ಉಲ್ಲಾಸ ಮಹದೊಲ್ಲಾಸ ಆಹ್ಲಾದ
ಲಾಸ್ಯ ನಾಟ್ಯವಾಡುತಿದೆ ಇಂದು
ಪದ ವಾಕ್ಯಗಳಿಂದ ವರ್ಣಿಸಲಾಗದು
ಗದ್ಯ ಪದ್ಯಗಳಿಂದ ಬಣ್ಣಿಸಲಾಗದು
ಈ ಧರೆಯಲೊಂದು ಒಂದು ಪದವಿ
ಪಡೆದ ವೀರೇ ಪದವೀಧರೆಯಾದೆ
ಅದೆಷ್ಟೂ ಪರೀಕ್ಷೆಗಳೋ
ಅದೇನೋ ನಿರೀಕ್ಷೆಗಳೋ
ಏನೇನೋ ಅನಿರೀಕ್ಷೆಗಳೋ
ಮುಗಿಯಿತೊಂದು ಶುರುವಾಯಿತು
ಇನ್ನೊಂದು ಮತ್ತೊಂದು
ಬರುವುದು ಹೋಗುವುದು
ವಾಲದೆ ಜಾರದೆ ಮುನ್ನಡೆದರೆ
ಪರಿ ಪರಿಯ ಪರಿಶ್ರಮ ಕ್ರಮವಾಗಿ
ಫಲ ಸಫಲ ಪ್ರತಿಫಲ ಸುಫಲ
ಹೆತ್ತವರ ತೆತ್ತವರ ಹಕ್ಕಿನವರ
ಕಥೆ ವ್ಯಥೆ ಗಾಥೆ ಗಾದೆ ಹಕ್ಕಿಗಳ
ಸುರ ಪುರ ಗೋಪುರ ಆಶಾಗೋಪುರ
ಅರ್ಥೈಸು! ವ್ಯರ್ಥ ಅನರ್ಥವಾಗದೆ
ಮತ್ತಷ್ಟು ಓದು