ಕನ್ನಡದ ಮೊದಲ ಕೋಮುವಾದಿ ಈ ಮುಮ್ಮಡಿ ಬಲ್ಲಾಳ ವೀರ!
– ಸಂತೋಷ್ ತಮ್ಮಯ್ಯ
ಕ್ರಿ.ಶ ೧೩೧೦. ಅದು ಮುಸಲ್ಮಾನರ ರಂಜಾನ್ ತಿಂಗಳಿನ ೨೨ನೇ ದಿನ, ಭಾನುವಾರ. ಆ ಪವಿತ್ರ ತಿಂಗಳಿನ ೨೧ ದಿನಗಳೂ ಮುಸಲ್ಮಾನರು ದಕ್ಷಿಣ ಭಾರತದಲ್ಲಿ ನಿರಂತರ ಲೂಟಿ ನಡೆಸಿದ್ದರು. ಕಾಫಿರರ ಕೊಲೆ ಮಾಡಿದ್ದರು, ವಿಗ್ರಹ ಭಂಜನೆ ನಡೆಸಿದ್ದರು, ಮತಾಂತರಗಳು ನಡೆದಿದ್ದವು.
ರಂಜಾನಿನ ೨೨ನೇ ದಿನದಂದು ಅವರು ಲೂಟಿಗೆ ಆರಿಸಿಕೊಂಡದ್ದು ಶ್ರೀಮಂತ ದ್ವಾರಸಮುದ್ರವನ್ನು. ಮಲ್ಲಿಕಾಫರ್ ಎಂಬ ಒಂದು ಕಾಲದ ಬ್ರಾಹ್ಮಣ ಮತಾಂತರವಾದೊಡನೆಯೇ ವಿಪರೀತ ಕ್ರೂರಿಯೂ, ಮಾತೃ ಧರ್ಮದ ದ್ವೇಷಿಯೂ ಆಗಿ ಬದಲಾಗಿದ್ದ. ಹಿಂದೂ ಧರ್ಮದ ಯಾವ ನರವನ್ನು ಮೀಟಿದರೆ ಲಾಭ ಎಂಬುದನ್ನು ಉಳಿದ ದಾಳಿಕೋರರಿಗಿಂತ ಆತ ಚೆನ್ನಾಗಿ ಬಲ್ಲವನಾಗಿದ್ದ. ಅಲ್ಲಾವುದ್ದೀನ್ ಖಿಲ್ಜಿಯ ಕೂಲಿ ಮಾಡುತ್ತಿದ್ದ ಆತ ದಣಿಯನ್ನು ಮೆಚ್ಚಿಸಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ದ್ವಾರಸಮುದ್ರವನ್ನು ಲೂಟಿಮಾಡಬೇಕು ಎಂದು ಆತನೇ ಮುಹೂರ್ತ ನಿಗದಿಪಡಿಸಿದ್ದ. ಏಕೆಂದರೆ ಆ ಹೊತ್ತಲ್ಲಿ ದ್ವಾರಸಮುದ್ರದ ರಾಜ ರಾಜಧಾನಿಯಲ್ಲಿರಲಿಲ್ಲ. ನಿಶ್ಚಯವಾದಂತೆ ದ್ವಾರಸಮುದ್ರದ ಮೇಲೆ ದಾಳಿಯಾಯಿತು. ನಿರಂತರ ೧೩ ದಿನ ಲೂಟಿ ನಡೆಯಿತು. ದೇವಸ್ಥಾನಗಳು ಧ್ವಂಸವಾದವು. ಅತ್ತ ರಾಜ ರಾಜಧಾನಿಗೆ ದೌಢಾಯಿಸಿ ಬಂದಾಗ ಕಾಲ ಮಿಂಚಿಹೋಗಿತ್ತು. ಮಲ್ಲಿಕಾಫರನಿಗೆ ಶರಣಾಗದೆ ಆತನಿಗೆ ಬೇರೆ ದಾರಿಯಿರಲಿಲ್ಲ. ದುಷ್ಟ ಮಲ್ಲಿಕಾಫರ್ ಆತನಿಗೆ ಎರಡು ಆಯ್ಕೆಗಳನ್ನು ನೀಡಿದ. ಒಂದೋ ಇಸ್ಲಾಮಿಗೆ ಮತಾಂತರವಾಗಬೇಕು. ಇಲ್ಲವೇ ತಮಿಳು ಪಾಂಡ್ಯರನ್ನು ಗೆಲ್ಲಲು ಸಹಾಯ ಮಾಡಬೇಕು ಮತ್ತು ದ್ವಾರಸಮುದ್ರದಲ್ಲಿ ಮುಸಲ್ಮಾನ ಸೈನ್ಯವನ್ನು ಇರಿಸಿಕೊಳ್ಳಬೇಕು. ರಾಜ ಮತಾಂತರಕ್ಕೆ ಒಪ್ಪಿಗೆ ನೀಡಲಿಲ್ಲ. ಉಳಿದ ಷರತ್ತುಗಳಿಗೆ ಒಪ್ಪಿದ. ಮಲ್ಲಿಕಾಫರ್ ದ್ವಾರಸಮುದ್ರದ ಸೈನ್ಯದ ಬಲದಿಂದ ತಮಿಳು ಪಾಂಡ್ಯರನ್ನು ಗೆದ್ದು ಲೂಟಿಗೈದು ದೆಹಲಿಗೆ ಹೊರಟುಹೋದ. ಮತ್ತಷ್ಟು ಓದು
ಬರಹಗಾರನ ತಲ್ಲಣಗಳು
ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ – ದಿನಕರ ದೇಸಾಯಿ
ತೀರ ಬೇಸರ, ಅವಮಾನದ ಸಂದರ್ಭ, ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ. ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಮತ್ತಷ್ಟು ಓದು
“ಚಪ್ಪಟೆ ಪಾದದ ಕನ್ನಡಿಗರು”
-ದೀಕ್ಷಿತ್ ಪೊಯ್ಯೆಕಂಡ
“100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಮುಗಿಸಬಹುದು ಬಿಡು ಮತ್ತೆ ಹಗ್ಗ ಹತ್ತೋದು ಕಂಬ ಹತ್ತೋದು ಕಷ್ಟ ಬಿಡು” ಎಂದು ಮಂಜು ವೈದ್ಯಕೀಯ ಪರೀಕ್ಷೆಯ ಬಳಿಕ ಕೊಚ್ಚಿಕೊಳ್ಳತೊಡಗಿದ. ನನ್ನದೇನೂ ಹೊರತಾಗಿರಲಿಲ್ಲ, “ಅಯ್ಯೋ ಮೆಡಿಕಲ್ ಹೆಂಗೂ ಆಯ್ತು ಇನ್ನು ಫಿಸಿಕಲ್ ಟೆಸ್ಟ್ ಹೇಗೆ ಪಾಸ್ ಮಾಡೊದಪ್ಪಾ” ಅನ್ನುತ್ತಾ ಜೊತೆಗಿದ್ದವರೊಂದಿಗೆ ಮಾತಿಗಿಳಿದೆ. ಮತ್ತೊಬ್ಬನದೂ ಅದೇ ರಾಗ. ನಮಗಿದ್ದ ಸಂತೋಷದ ವಿಷಯವೆಂದರೆ ಆ ದಿನ 8 ಮಂದಿ ಕನ್ನಡಿಗರು ಅಲ್ಲಿದ್ದೆವು. ಸರಿಸುಮಾರು ಮೂರು ಗಂಟೆ ಕಾದ ಬಳಿಕ ಮೆಡಿಕಲ್ ರಿಸಲ್ಟ್ ಬಂತು. ಅದನ್ನು ಹಿಡಿದುಕೊಂಡು ಬಂದ ಏರ್ಪೋರ್ಟ್ ಮುಖ್ಯಸ್ಥ “ನಾನು ರಿಜೆಕ್ಟ್ ಆದ ಅಭ್ಯರ್ಥಿಗಳ ಹೆಸರು ಮಾತ್ರ ಕರೆಯುತ್ತಿದ್ದೇನೆ’ ಎಂದು ಮಲಯಾಳಿ ಮಿಶ್ರಿತ ಆಂಗ್ಲ ಭಾಷೆಯಲ್ಲಿ ಓದತೊಡಗಿದ. ರಮೇಶ್.. ಸುರೇಶ್.. ಹೀಗೆ ಹೆಸರು ಕೇಳಿದಾಗ, ನನಗೇನೋ ಫೈವ್ ಸ್ಟಾರ್ ಜಾಹೀರಾತು ಕೇಳಿದಂತಾಗುತಿತ್ತು. ಉಫ್ ಅದೇನೋ ಎದೆಯಲಿ ಡವ ಡವ! ವರುಷಗಳ ಕನಸು. ಲಿಖಿತ ಪರೀಕ್ಷೆಯ ಬಳಿಕದ ತಯಾರಿ, ಬಯಲಲ್ಲಿ ಪಟ್ಟ ಕಷ್ಟ ಎಲ್ಲವೂ ನೆನಪಾಗುತಿದ್ದವು. ಒಂದೊಂದೇ ಹೆಸರನ್ನು ಕೇಳಿಸಿಕೊಳ್ಳುತ್ತಾ ಹೋದಂತೆ ಸಿಡಿಲು ಬಡಿದಂತೆ ದೀಕ್ಷಿತ್ ಕುಮಾರ್ ಅಂತ ಹೆಸರನ್ನೂ ಕೇಳಿಬಿಟ್ಟೆ. ಆಯ್ತು ನನ್ನ ಕನ್ನಂಬಾಡಿ ಕಟ್ಟೆ ಒಡೆದೋಯ್ತು. ಕಣ್ಣು ಮಂಜಾಗತೊಡಗಿತು. ನನ್ನ ಹೆಸರನ್ನೂ ಹೇಳಿಯೇಬಿಟ್ಟರು. ಈ ಕೆಲಸಕ್ಕಾಗಿ ಇನ್ನಿಲ್ಲದಂತೆ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ಹೋಯಿತು. ಮತ್ತೆ ಮಂಜು, ತ್ರಿಭುವನ್ ಹೀಗೇ ಮುಂದುವರಿದಿತ್ತು. ಅಷ್ಟೂ ಕನ್ನಡಿಗರ ಯಾತ್ರೆ ಮುಗಿದಿತ್ತು. ಕಾರಣ ಕೇಳಿದ್ರೆ, ನಮ್ಮದು ಚಪ್ಪಟೆ ಪಾದ ಅಂತೆ ! ಮತ್ತಷ್ಟು ಓದು
ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!
– ತುರುವೇಕೆರೆ ಪ್ರಸಾದ್
ತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’ ಮತ್ತಷ್ಟು ಓದು
ಕನ್ನಡ ಎನೆ ಕಿವಿ ನಿಮಿರಬೇಕಿರುವುದು ಪರರದ್ದು!
-ಸಂಕೇತ್ ಡಿ ಹೆಗಡೆ, ಸಾಗರ
ಕೋರಾ ಅಂತ ಒಂದು ಸಾಮಾಜಿಕ ಜಾಲತಾಣವಿದೆ. ಮೊನ್ನೆ ಹೀಗೆ ಜಾಲಾಡುತ್ತಿದ್ದಾಗ ಒಂದು ಭಲೇ ಬುದ್ಧಿವಂತಿಕೆಯ ಪ್ರಶ್ನೆ ಎದುರಾಯಿತು. ಪುಣ್ಯಾತ್ಮನೊಬ್ಬ ಬೆಂಗಳೂರಿನ ರಸ್ತೆಯೊಂದರ ಮೇಲೆ ಕಾರಿನಲ್ಲಿ ಕುಳಿತು ಪೋಸ್ಟ್ ಮಾಡಿದ್ದು. “ನಾನೀಗ ಬೆಂಗಳೂರಿನಲ್ಲಿದ್ದೇನೆ. ಕರ್ನಾಟಕ ಇಲ್ಲಿಂದ ಎಷ್ಟು ಕಿಲೋಮೀಟರ್ ಪ್ರಯಾಣಿಸಿದರೆ ಸಿಗುತ್ತೆ” ಅಂತ! ಹಾಗೆ ಕೇಳಿದವನ ಕಂಡು ಮತ್ತೊಬ್ಬ ಉತ್ತರ ಬರೆದಿದ್ದ. “೧೦೮ಕ್ಕೆ ಕರೆಮಾಡಿ ’ನಾನು ಬೆಂಗಳೂರಿನಲ್ಲಿದ್ದೇನೆ, ನನಗೆ ಕರ್ನಾಟಕಕ್ಕೆ ಕರೆದುಕೊಂಡುಹೋಗಿ’ ಅಂತ ಹೇಳಿ. ಅವರು ವಿಲ್ಸನ್ ಗಾರ್ಡನ್ ಅನ್ನುವ ಸ್ಥಳದಲ್ಲಿರುವ ನಿಮ್ಹಾನ್ಸ್ ಅನ್ನುವ ಕಟ್ಟಡದ ಬಳಿ ಇಳಿಸುತ್ತಾರೆ” ಅಂತ. ಇವರ ಪ್ರಶ್ನೋತ್ತರಗಳ ನೋಡಿ ಉಕ್ಕಿಬಂದ ನಗು, “ತಪ್ಪು ಅವನದಲ್ಲ” ಎಂದು ಅನಿಸಿದಾಗ ಮುಚ್ಚಿಕೊಂಡು ಹಿಂದೆಹೋಗಿಬಿಟ್ಟಿತು. ಎಂತಹ ಸ್ಥಿತಿಗೆ ಬೆಂಗಳೂರನ್ನು ತಂದಿಟ್ಟುಬಿಟ್ಟಿದ್ದೇವೆ ಅನ್ನುವುದು ನೆನಪಾಗಿ ಹೃದಯದ ಒಂದು ಮೂಲೆಯಲ್ಲಿರುವ ಭಾಷಾಭಿಮಾನಕ್ಕೆ ಅತೀವ ವೇದನೆಯಾಯಿತು. ಪಾಪ ಆ ಕಾರಿನವನದೇನು ತಪ್ಪು? ಬೆಂಗಳೂರಿನ ಗಾಳಿಯನ್ನು ಪ್ರಥಮ ಬಾರಿಗೆ ಕುಡಿಯುತ್ತಿರುವ ಯಾವನಿಗೆ ಕರ್ನಾಟಕದ “ರಾಜಧಾನಿ”ಯ ಗಾಳಿ ಕುಡಿದ ಅನುಭವವಾಗುತ್ತೆ? ಅವನೋ ಕನ್ನಡಿಗರ ನಾಡಾಗಿರುವ, ಕನ್ನಡವನ್ನು ಉಸಿರಾಗಿಸಿಕೊಂಡಿರುವ, ಕನ್ನಡತನದ ಬೀಡಾಗಿರುವ ಪ್ರದೇಶವೊಂದು ಸಿಕ್ಕಾಗ ಇಳಿದುಕೊಂಡುಬಿಡೋಣ ಅಂದುಕೊಂಡಿದ್ದ. ಅವನಿಗೇನು ಗೊತ್ತು, “ದಿಸ್ ಇಸ್ ಕರ್ನಾಟಕಾಸ್ ಕ್ಯಾಪಿಟಲ್, ಫಾರ್ ಯು” ಅಂತ. ಬೆಂಗಳೂರು ಕರ್ನಾಟಕದಲ್ಲಿದೆ, ಅದೇ ಅದರ ರಾಜಧಾನಿ ಅಂತ ಅವನಿಗೆ ಗೊತ್ತಿಲ್ಲದಿರುವ ಅವನ ಸಾಮಾನ್ಯ ಜ್ನಾನಕ್ಕೆ ವಿಷಾದಿಸೋಣ. ಆದರೆ ಅವನಿಗೆ ಬೆಂಗಳೂರಿನಲ್ಲಿದ್ದರೂ ಇದು ಕರ್ನಾಟಕವೆನ್ನುವುದು ಗೊತ್ತಾಗದ ಮಟ್ಟದಲ್ಲಿ ನಾವು ಬೆಂಗಳೂರನ್ನು ಕಾಪಾಡಿಕೊಂಡಿದ್ದೇವೆ ಎಂಬ ಕಟುವಾಸ್ತವಕ್ಕೆ, ಕೇವಲ ವಿಷಾದಿಸಿದರೆ ಸಾಕೇನು? ಮತ್ತಷ್ಟು ಓದು
ಮೆಲ್ಲುಸಿರೆ ಸವಿಗಾನ….!
– ನಾಗೇಶ ಮೈಸೂರು
ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ ಆಶಯ..
ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೇ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೇ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ – ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ. ಮತ್ತಷ್ಟು ಓದು
ಭಾಷೆ – ಜಿಜ್ಞಾಸೆ : ಗಂಜಿ, ಹಿಂಡಿ, ಬೂಸಾ ಇತ್ಯಾದಿ
– ರೋಹಿತ್ ಚಕ್ರತೀರ್ಥ
ನಮ್ಮ ಮನೆಯಲ್ಲಿದ್ದ ಕಾಮಧೇನು ಎಂಬ ದನವನ್ನು ದಿನವೂ ಬಯಲಿಗೆ ಅಟ್ಟಿಸಿಕೊಂಡು ಹೋಗಿ ಸಂಜೆ ಹೊತ್ತಿಗೆ ಮರಳಿ ಹಟ್ಟಿಗೆ ತರುವ ಕೆಲಸ ಮಾಡುತ್ತಿದ್ದ ನನಗೆ, ಹಸುವಿಗೆ ಅಕ್ಕಚ್ಚು ಇಡುವುದು ಅತ್ಯಂತ ಪ್ರಿಯವಾಗಿದ್ದ ಕೆಲಸ. ಬೆಂದ ಅನ್ನವನ್ನು ಬಸಿದಾಗ ಸಿಗುವ ಗಂಜಿನೀರಿಗೆ ಒಂದಷ್ಟು ಕಲ್ಲುಪ್ಪು ಹಾಕಿ ಕರಗಿಸಿ ಅಜ್ಜಿ ಕೊಟ್ಟರೆ ಅದನ್ನು ದನದ ಮುಂದಿಟ್ಟು ಅದು ಕುಡಿಯುವ ಚಂದ ನೋಡುತ್ತ ಕೂರುತ್ತಿದ್ದೆ. ಮೂತಿ ಇಳಿಸಿದರೂ ಮೂಗೊಳಗೆ ನೀರು ಹೋಗದಂತೆ ಬಹಳ ಎಚ್ಚರಿಕೆಯಿಂದ ನಾಜೂಕಾಗಿ ಸುರ್‍ಸುರ್ರೆನ್ನುತ್ತ ಗಂಜಿ ಹೀರುವ ದನದ ಜಾಣ್ಮೆಗೆ ತಲೆದೂಗುತ್ತಿದ್ದೆ. ಮತ್ತಷ್ಟು ಓದು
ಅಗ್ನಿರಾಜನ ಪ್ರಕರಣ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ
ಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.
ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.
ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ
– ವಿಕಾಸ್ ಹೆಗಡೆ, ಬೆಂಗಳೂರು
ವಿಕಿಪೀಡಿಯ – ಇಂದಿನ ಆನ್ ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ, ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ ಮುಕ್ತವಾಗಿ ಸಿಗುವ ಲೋಕವೊಂದನ್ನು ಕಲ್ಪಿಸಿಕೊಳ್ಳಿ” ಎಂಬ ಘೋಷವಾಕ್ಯದ ವಿಕಿಪೀಡಿಯ ಇಂದು ಹೆಮ್ಮರವಾಗಿ ಬೆಳೆದಿದೆ.ವಿಕಿಪೀಡಿಯ ನಾನ್ ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದರ ವಿಶೇಷವೆಂದರೆ ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಸಮುದಾಯ ಕಾರ್ಯ. ಜನರ ಮತ್ತು ಸಂಸ್ಥೆಗಳ ದೇಣಿಗೆಗಳೇ ಇದರ ಆರ್ಥಿಕ ಮೂಲ. ಇದರಲ್ಲಿ ಮಾಹಿತಿ ತುಂಬಿಸುವಿಕೆ ಮತ್ತು ಮಾಹಿತಿ ಪಡೆದುಕೊಳ್ಳುವಿಕೆ ಪ್ರತಿಯೊಬ್ಬನಿಗೂ ಮುಕ್ತ. ಜಗತ್ತಿನ ಯಾವುದೇ ವಿಷಯದ ಬಗ್ಗೆ ಮಾಹಿತಿಪೂರ್ಣ ವಿಷಯಗಳನ್ನು ಯಾರುಬೇಕಾದರೂ ವಿಕಿಪೀಡಿಯ ಸಂಪಾದಕನಾಗಿ ನೊಂದಾಯಿಸಿಕೊಂಡು ಹಾಕಬಹುದು. ಹೊಸ ಲೇಖನದ ಪುಟ ರಚಿಸಬಹುದು.ಇರುವ ಲೇಖನ ತಿದ್ದಬಹುದು. ಹೆಚ್ಚಿನ ಮಾಹಿತಿ ಸೇರಿಸಬಹುದು. ಬೇರೆ ಬೇರೆ ದೇಶ ಪ್ರದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ಹಾಗಾಗಿ ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ.ಇಂತಹ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಆನ್ ಲೈನ್ ವಿಶ್ವಕೋಶ ಇಂದು ಸುಮಾರು ಮುನ್ನೂರು ಭಾಷೆಗಳಲ್ಲಿ ಇದೆ. ಇಂಗ್ಲೀಷ್ ವಿಕಿಪೀಡಿಯಾ ಒಂದರಲ್ಲೇ ಸುಮಾರು ಐವತ್ತು ಲಕ್ಷ ಲೇಖನಗಳಿವೆ ಅಂದರೆ ಅದರ ಮಾಹಿತಿ ಅಗಾಧತೆಯನ್ನು ಊಹಿಸಿಕೊಳ್ಳಬಹುದು! ವಿಕಿಪೀಡಿಯಾ ಆರಂಭವಾಗಿದ್ದು ೨೦೦೧ರ ಜನವರಿ ೧೫ರಂದುಈ ವರ್ಷ ಜನವರಿಯಲ್ಲಿ ಅದು ೧೫ನೇ ಹುಟ್ಟುಹಬ್ಬ ಆಚರಿಸಿಕೊಂಡಿತು.
ಮತ್ತಷ್ಟು ಓದು
ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ
– ನವೀನ್ ಗಂಗೋತ್ರಿ
ಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.
ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಭ್ಯಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ. ಕನ್ನಡದಂಥಾ ಕನ್ನಡಕ್ಕೇನಾಗಿದೆ?