ವಿಷಯದ ವಿವರಗಳಿಗೆ ದಾಟಿರಿ

Posts from the ‘ಪರಿಸರ’ Category

25
ಮಾರ್ಚ್

ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?

– ಅನೇಕಲೇಖ

ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.

ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.

ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.

ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ?  ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.

ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.

17
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)

– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು. ಮತ್ತಷ್ಟು ಓದು »

24
ಏಪ್ರಿಲ್

ವಿಶ್ವ ಭೂ ದಿನ..

– ಗೀತಾ ಹೆಗ್ಡೆ

ವಿಶ್ವ ಭೂ ದಿನಾಚರಣೆಯನ್ನು 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು. ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970 ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ. ಆದರೆ ಈ ಕಾಳಜಿ ಕೇವಲ ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ ಪ್ರತಿಯೊಬ್ಬರಲ್ಲೂ ಪ್ರತಿ ಮನೆ ಮನೆಗಳಲ್ಲೂ ಜಾಗೃತವಾಗಿರಬೇಕು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕೂಡ ಈ ದಿನ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ‌ಸಂತೋಷದ ಸಂಗತಿ. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ಅನ್ನುವಂತೆ ಚಿಕ್ಕಂದಿನಿಂದಲೆ ಅವರಲ್ಲಿ ಭೂಮಿ ಅಂದರೆ ಏನು, ಅದನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ, ಪರಿಸರ ಕಾಳಜಿ, ಗಿಡ ಮರಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸುವುದು ಹೆತ್ತವರ ಕರ್ತವ್ಯ ಕೂಡಾ. ಮತ್ತಷ್ಟು ಓದು »

17
ಆಕ್ಟೋ

ಪರಿಸರ ಶಿಕ್ಷಣ: ಸಾಧನೆ ಮತ್ತು ಸವಾಲುಗಳು

– ಕಲ್ಗುಂಡಿ ನವೀನ್
ಬೆಂಗಳೂರು
ದೂರವಾಣಿ: 944 89 05214

curriculumಇಂದು ಪರಿಸರ, ಪರಿಸರ ಮಾಲೀನ್ಯ ಎಂದರೆ ಅದನ್ನು ವಿವರಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ ಎಂದರೆ ಪರಿಸರ ಕುರಿತಾದ ಸಕಾರಾತ್ಮಕ ನಿಲುವು. ಹಿಂದೆ ಪರಿಸರ ಎಂಜಿನಿಯರ್‍ ಒಬ್ಬರು ಹೇಳುತ್ತಿದ್ದರು: “..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು” ಎಂದು! ಇಂದು ಆ ಸ್ಥಿತಿ ಖಂಡಿತಾ ಇಲ್ಲ.  ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಆ ಜಾಗೃತಿ ಮೂಡಿರುವುದು ಗಮನಾರ್ಹ ಮತ್ತು ಸಂತೋಷದಾಯಕ ಅಂಶ. ಮತ್ತಷ್ಟು ಓದು »

16
ಆಕ್ಟೋ

ದೇವರ ಪಟದ ಹಿಂದಿನ ಸೈಟು ಮಾರಾಟಕ್ಕಿದೆ!

– ರೋಹಿತ್ ಚಕ್ರತೀರ್ಥ

hires_ddesancic_sparrowgroupನಮ್ಮ ಹಳ್ಳಿಮನೆಗಳ ಪಡಸಾಲೆಗಳ ನಾಲ್ಕೂ ಸುತ್ತು ಗೋಡೆಗಳಲ್ಲಿ ಚೌಕಟ್ಟಿನ ಪಟಗಳು ತೂಗಾಡುತ್ತಿದ್ದವು. ಧ್ಯಾನಾಸಕ್ತನಾಗಿ ಉನ್ಮೀಲಿತ ನೇತ್ರನಾದ ನೀಲಕಂಠ ಶಿವ, ಸಿಂಹವಾಹಿನಿ ದುರ್ಗೆ, ಸ್ಟುಡಿಯೋದಲ್ಲಿ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಂತಿರುವ ರಾಮಭದ್ರ ಮತ್ತವನ ಅವಿಭಕ್ತ ಸಂಸಾರ, ಹೆಂಡತಿಯಿಂದ ಕಾಲೊತ್ತಿಸಿಕೊಂಡು ಹಾವಿನ ಮೇಲೆ ಸುಖಾಸೀನನಾಗಿರುವ ಮಹಾವಿಷ್ಣು – ಹೀಗೆ ಒಂದು ರೀತಿಯಲ್ಲಿ ಜಗತ್ತಿನ ಮುಕ್ಕೋಟಿ ದೇವತೆಗಳೆಲ್ಲ ಈ ಮನೆಯಲ್ಲೇ ಝಂಡಾ ಹೂಡಿದ್ದಾರೆಂಬ ಭಾವನೆ ತರಿಸುವ ಪಟಗಳ ಚಿತ್ರಶಾಲೆಯಾಗಿತ್ತು ನಮ್ಮ ಪಡಸಾಲೆ. ದೇವರ ಭಯ ಮತ್ತು ಅದಕ್ಕಿಂತ ಮಿಗಿಲಾಗಿ, ಕೈ ಜಾರಿ ಬಿದ್ದು ಫಳಾರನೆ ಒಡೆದೇ ಹೋದರೆ ಬೆನ್ನು ಮುರಿಯಲಿದ್ದ ಅಜ್ಜನ ಭಯದಿಂದಾಗಿ ನಾವು ಈ ದೇವರ ಸಹವಾಸಕ್ಕೇ ಹೋಗುತ್ತಿರಲಿಲ್ಲ. ಆದರೆ ಆಗೀಗ ಆ ಪಟಗಳೆಡೆಯಲ್ಲಿ ಚಿಕ್‍ಚಿಕ್ ಚೀಂವ್ ಎಂಬ ದನಿ ಬಂದಾಗ ಮಾತ್ರ ಸ್ಟೂಲ್ ಹತ್ತಿ ಅಲ್ಲೇನಿದೆ ಎಂದು ಇಣುಕುವ ಕುತೂಹಲ ಚಿಗುರುತ್ತಿತ್ತು. ಅಲ್ಲಿ ನಮಗೆ ಕಾಣಿಸುತ್ತಿದ್ದುದು ಪುಟಾಣಿ ಗುಬ್ಬಚ್ಚಿಗಳ ಸಂಸಾರ. ದೇವರ ಪಟವನ್ನು ನಲವತ್ತೈದು ಡಿಗ್ರಿ ವಾರೆಯಾಗಿ ನೇತಾಡಿಸುತ್ತಿದ್ದುದರಿಂದ ಆ ಸಂದಿ ತಮ್ಮ ಮನೆ ಕಟ್ಟಲಿಕ್ಕೆಂದೇ ಮನುಷ್ಯ ಮಾಡಿಟ್ಟ ಏರ್ಪಾಟು ಎಂದು ಗುಬ್ಬಚ್ಚಿಗಳು ಬಗೆಯುತ್ತಿದ್ದವೋ ಏನೋ. ಉಗ್ರ ನರಸಿಂಹನಂಥ ಕಡುಕೋಪಿಷ್ಠ ದೇವರ ಪಟದ ಹಿಂದೆಯೂ ಅವು ನಿರಾತಂಕವಾಗಿ ತಮ್ಮ ಸಂಸಾರದ ಗುಡಾರ ಬಿಚ್ಚಿಕೊಳ್ಳುತ್ತಿದ್ದವು. ಮತ್ತಷ್ಟು ಓದು »

2
ಮೇ

ಮರವನ್ನು ಮರೆತರೆ ಬರ ಬಾರದ್ದು ಬಂದೀತು!

fresh_nature-1280x720

– ರೋಹಿತ್ ಚಕ್ರತೀರ್ಥ

ಅವೊತ್ತು ಶುಕ್ರವಾರ. ಆಫೀಸಿನಿಂದ ಹೊರಟು ನಗರದ ಮುಖ್ಯರಸ್ತೆಯೊಂದಕ್ಕೆ ಬಂದು ಸೇರಿದಾಗ, ಆ ಸಾಗರದಲ್ಲಾಗಲೇ ಸಾವಿರಾರು ದೋಣಿಗಳು ಹುಟ್ಟುಹಾಕಲಿಕ್ಕೂ ಜಾಗ ಸಿಗದಂತೆ ತುಂಬಿಕೊಂಡಿದ್ದವು. ಯಾಕೆ ಇಷ್ಟೊಂದು ಟ್ರಾಫಿಕ್‍ಜಾಮ್ ಆಗಿದೆ ಎಂದು ಬಾತುಕೋಳಿಗಳಂತೆ ಕತ್ತು ಎತ್ತರಿಸಿ ನಿರುಕಿಸುತ್ತಿದ್ದವರಿಗೆ ದೂರದಲ್ಲಿ ಮಳೆಯ ರಭಸಕ್ಕೆ ಮರವೊಂದು ಮಾರ್ಗಶಾಯಿಯಾಗಿರುವುದು ಕಾಣಿಸಿತು. ಹತ್ತಾರು ಅಡಿಗಳ ರೆಂಬೆಕೊಂಬೆಗಳನ್ನು ದಶದಿಕ್ಕುಗಳಿಗೂ ಚಾಚಿ ಇಷ್ಟುದಿನ ರಸ್ತೆಯ ಬದಿಯಲ್ಲಿ ಗತ್ತಿನಿಂದ ನಿಂತು ನಮಗೆಲ್ಲ ಹಾಯ್ ಹೇಳುತ್ತ ಕೈಬೀಸುತ್ತಿದ್ದ ಈ ಮರ, ಇವೊತ್ತು ಹೃದಯಾಘಾತವಾದಂತೆ ಮಳೆಯ ಹೊಡೆತಕ್ಕೆ ನೆಲಕ್ಕೆ ಬಿದ್ದಿದೆಯಲ್ಲ ಅಂದುಕೊಂಡೆ. ಮರದ ಶವ ಬಿದ್ದಲ್ಲಿ ಹತ್ತಾರು ಅಧಿಕಾರಿಗಳು ನಿಂತು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದರು. ಅದರ ಕೈಕಾಲುಗಳನ್ನು ಆದಷ್ಟು ಬೇಗ ಕತ್ತರಿಸಿ ಎಲ್ಲಿಗಾದರೂ ಸಾಗಿಸಿಬಿಟ್ಟರೆ ಸಾಕು ಎಂಬ ಧಾವಂತ ಅವರ ಮುಖಗಳಲ್ಲಿ ಕುಣಿದಾಡುತ್ತಿತ್ತು. ಗ್ಯಾಂಗ್ರಿನ್ ಆದ ಕಾಲು ಕತ್ತರಿಸುವ ನಿರ್ಭಾವುಕ ವೈದ್ಯನಂತೆ, ನಾಲ್ಕು ಜನ ಕೆಲಸಗಾರರು ಶಕ್ತಿಮೀರಿ ಬಲಪ್ರಯೋಗಿಸಿ ಅದರ ದೇಹವಿಚ್ಛೇದನದಲ್ಲಿ ನಿರತರಾಗಿದ್ದರು. ಶೋಕೇಸಿನ ಹಲವಾರು ಶೋಪೀಸುಗಳ ನಡುವೆ ಕೈಮೇಲೆತ್ತಿ ನಗುವ ಪುಟ್ಟ ಬುದ್ಧನ ಮೂರ್ತಿಯಂತೆ; ಈ ನಗರದ ಸಾಫ್ಟ್‍ವೇರ್ ತಜ್ಞರು ಬರೆಯುವ ಧೀರ್ಘ ಪ್ರೋಗ್ರಾಮಿನ ಒಂದೇ ಒಂದು ಪುಟ್ಟ ಸಾಲಿನಂತೆ, ಅಥವಾ ಬೀದಿಬದಿಯಲ್ಲಿ ಹುಡುಗ ಮಾರುವ ನೂರಾರು ಪೋಸ್ಟರುಗಳ ನಡುವೆ ತಣ್ಣಗೆ ನಗುತ್ತ ಕೂತ ಹೃತಿಕ್ ರೋಷನ್ನಿನಂತೆ ಇಷ್ಟುದಿನ ಧ್ಯಾನಾಸಕ್ತನಾಗಿ ನಿಂತಿದ್ದ ವೃಕ್ಷ ಇನ್ನು ಅಲ್ಲಿ ಇರುವುದಿಲ್ಲವಲ್ಲ ಅಂತ ಸಂಕಟವಾಯಿತು. ಅದನ್ನು ತುಂಡುತುಂಡಾಗಿ ಕತ್ತರಿಸಿ ತೆಗೆದು ಸ್ಥಳಾವಕಾಶ ಮಾಡಿಕೊಡುತ್ತಲೇ ಅಸಹನೆಯಿಂದ ಕುದಿಯುತ್ತಿದ್ದ ಸವಾರರು ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು. ಅಣೆಕಟ್ಟಿನ ಬಾಗಿಲು ತೆರೆದಾಗ ಹೊರಹಾರುವ ನೀರಿನ ಧಾರೆಯಂತೆ ಬೈಕು-ಕಾರುಗಳು ಧಿಮ್ಮನೆ ಚಿಮ್ಮಿದವು. ಮತ್ತಷ್ಟು ಓದು »

10
ಮಾರ್ಚ್

ಪಕ್ಷಿಗಳಿಗೆ ಒಂದು ಬೊಗಸೆ ನೀರು ಕೊಡಿ.ಪ್ಲೀಸ್…!

6
ಆಕ್ಟೋ

ಎತ್ತಿನ ಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!

– ಪ್ರಸಾದ್ ಕುಮಾರ್,ಮಾರ್ನಬೈಲ್

ನೇತ್ರಾವತಿ ಉಳಿಸಿಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ.  ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ,ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ ಮಾತ್ರ ಅನಾವಶ್ಯಕ ಪೌರುಷದ ಪ್ರದರ್ಶನ ನೀಡುತ್ತಿದೆ! ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕಳಸಾ ಬಂಡೂರಿ ಯೋಜನೆಯೇನಾದರೂ ಜಾರಿಯಾದರೆ ಅದರಿಂದ ರಾಜ್ಯಕ್ಕೆ ಲಾಭವಲ್ಲದೆ ಯಾವ ವಿಧದ ನಷ್ಟವೂ ಇಲ್ಲ. ಆದರೆ ಅದೇ ಎತ್ತಿನ ಹೊಳೆ ಯೋಜನೆಯೇನಾದರು ಕಾರ್ಯರೂಪಕ್ಕೆ ಬಂತು ಎಂದಾದರೆ ಅದರಿಂದ ರಾಜ್ಯವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಅಧಿಕ! ಕರಾವಳಿಗರ ಭಾವನೆಗಳಿಗೆ ಬೆಲೆ ನೀಡದೆ ಅತ್ತ ಬಯಲು ಸೀಮೆಗೂ ಸರಿಯಾಗಿ ನೀರು ದೊರೆಯದೆ ಎಲ್ಲಾ ರೀತಿಯಲ್ಲೂ  ವಂಚನೆಗೈದಂತಾಗಲಿದೆ ಇಲ್ಲಿ! ಮೇಲಾಗಿ ಇದು ಸುಪ್ತವಾಗಿರುವ ಕರಾವಳಿಗರ ಪ್ರತ್ಯೇಕತೆಯ ಕೂಗಿಗೂ ಭವಿಷ್ಯದಲ್ಲಿ ಒಂದಷ್ಟು ಪುಷ್ಠಿ ನೀಡುವ ಸಾಧ್ಯತೆಯೂ ಇದೆ! ಮೇಲಾಗಿ ಇಲ್ಲಿ ಸಿಗುವ ನೀರಿನ ಬಗ್ಗೆಯೇ ದೊಡ್ಡ ಮಟ್ಟದ ಸಂಶಯವಿರುವುದರಿಂದ ಪೂರ್ಣ ಯೋಜನೆಯೇ ಅಂತಿಮವಾಗಿ ವಿಫಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ!

ಹಾಗಿದ್ದರೂ ಯಾಕಿಷ್ಟು ಆತುರ!?
ಮತ್ತಷ್ಟು ಓದು »

19
ನವೆಂ

ನಾನು ನೇತ್ರಾವತಿ

– ಭರತೇಶ ಅಲಸಂಡೆಮಜಲು

ನೇತ್ರಾವತಿನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ಅದೇ ನಿಮ್ಮ ನೇತ್ರಾವತಿ ನಾನು.

ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ … ಹೀಗೆ…ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ…

ಮತ್ತಷ್ಟು ಓದು »

8
ಮಾರ್ಚ್

ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ

– ರಾಘವೇಂದ್ರ ಅಡಿಗ ಎಚ್ಚೆನ್

ಸಾಲು ಮರದ ತಿಮ್ಮಕ್ಕಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು. ಬಡತನದ  ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅದು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ  ಮಹಿಳೆಗೆ ಇದೀಗ ನೂರರ ವಸಂತ.

ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು “ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.

ಮತ್ತಷ್ಟು ಓದು »