ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…
-ಸಾತ್ವಿಕ್ ಎನ್ ವಿ
ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.
ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!! ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ. ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. ಮತ್ತಷ್ಟು ಓದು
ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ
ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಗೌಡಪ್ಪನ ದುಬೈ ಪ್ರವಾಸ : ಜನಾರ್ಧನ ಹೋಟೆಲ್ ಜಾಮೂನು – ಮಸಾಲೆ ದೋಸೆ!
ಮಂಜುನಾಥ್ ಹೊಳೆನರಸೀಪುರ
ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು! ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ ” ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ” ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ…’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು. ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!
ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ. ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು. ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು. ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ! ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ. ಮತ್ತಷ್ಟು ಓದು
ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!
– ರವಿ ಮುರ್ನಾಡು
ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.
ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.
ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಮತ್ತಷ್ಟು ಓದು
ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?
– ಡಾ.ಶೈಲಾ ಯು.
ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ. ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. ಮತ್ತಷ್ಟು ಓದು
ಚಿತ್ರದುರ್ಗ: ಒಂದು ಅಪರೂಪ ಐತಿಹಾಸಿಕ ತಾಣ.
– ಆರ್.ರಾಘವೇಂದ್ರ, ಚಳ್ಳಕೆರೆ
ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಹೊಳಲ್ಕೆರೆ ಎಂಬ ಆರು ತಾಲ್ಲೂಕು ಕೇಂದ್ರಗಳನ್ನೊಳಗೊಂಡಂತೆ ೧೮೫ ಗ್ರಾಮ ಪಂಚಾಯಿತಿ ಕೇಂದ್ರಗಳಿಂದ ಕೂಡಿರುತ್ತದೆ. ಚಿತ್ರದುರ್ಗ ಜಿಲ್ಲೆಯು ೮೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಒಟ್ಟು ೧೫,೧೦,೨೨೭ ಜನಸಂಖ್ಯೆ ಇರುತ್ತದೆ.
ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ, ಚಿತ್ರದುರ್ಗ ತಾಲ್ಲೂಕು ಸಾಪೇಕ್ಷಿತವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕಿನ ಗುಂಪಿನಲ್ಲಿದ್ದರೆ, ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಅತಿ ಹಿಂದುಳಿದ ತಾಲ್ಲೂಕುಗಳ ಗುಂಪಿನಲ್ಲಿವೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕಿನ ಗುಂಪಿನಲ್ಲಿದೆ. ಆದರೆ ರಾಜ್ಯದ ಹಿಂದುಳಿದ ಪ್ರದೇಶವಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಅದು ಹೇಗೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕ್ಷರತೆ ಪ್ರಮಾಣ, ಮಕ್ಕಳು-ಉಪಾಧ್ಯಾಯರ ಅನುಪಾತ, ೬-೧೪ ವಯೋಮಾನದಲ್ಲಿ ಶಾಲೆ ಸೇರದ ಮಕ್ಕಳ ಪ್ರಮಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇವುಗಳ ಮೇಲೆ ನಾವು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಕಾಣಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶವೆಂದು ಮೊಳಕಾಲ್ಮೂರು ತಾಲ್ಲೂಕು ಒಂದೇ. ಚಿತ್ರದುರ್ಗವು ತಾಮ್ರದ ಖನಿಜ ಸಂಪತ್ರವನ್ನು ಇಂಗಳದಾಳ್‌ನಲ್ಲಿ ಒಳಗೊಂಡಿದೆ.
ಸಾಹಿತ್ಯ ಕ್ಷೇತ್ರದ ಮೇರುವ್ಯಕ್ತಿಯಾದ ರಸಕವಿ ‘ಕುವೆಂಪು’ರವರನ್ನೇ ಶಿಷ್ಯರಾಗಿ ಪಡೆದಂತಹ ಕೀರ್ತಿ ಟಿ.ಎಸ್.ವೆಂಕಣ್ಣಯ್ಯರವರದು. ತಳಕಿನ ಕುಟುಂಬದ ತ.ಸು.ಶಾಮರಾಯರು, ತ.ರಾ.ಸು., ಅಂಬುಜಾ ತ.ರಾ.ಸು., ರವರು ಸೇರಿದಂತೆ, ಬೆಳಗೆರೆ ಮನತೆನದ ಬೆಳಗೆರೆ ಚಂದ್ರಶೇಖರಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ ಜಾನಕಮ್ಮ ಮುಂತಾದ ಸಾಹಿತ್ಯ ಗಣಿಗಳು ಚಿತ್ರದುರ್ಗದ ಸಾಹಿತ್ಯವನ್ನು ಅಮರವಾಗಿಸಿದ್ದಾರೆ. ತ.ರಾ.ಸು. ರವರ ದುರ್ಗಾಸ್ತಮಾನ, ನಾಗರಹಾವು ಹಾಗೂ ಇತರೆ ಕೃತಿಗಳು ವಿಶ್ವಕ್ಕೆ ಚಿತ್ರದುರ್ಗದ ಪರಿಚಯವನ್ನು ಬಹುಸುಂದರವಾಗಿ ಮಾಡಿಕೊಟ್ಟಿದೆ. ‘ಬಿ.ಎಲ್.ವೇಣು’ ರವರ ‘ಕಲ್ಲರಳಿ ಹೂವಾಗಿ’ ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದಿದ್ದು, ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ಜಾನಪದ ತಜ್ಞರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಮಲ್ಲಿಕಾರ್ಜುನ ಕಲಮರಹಳ್ಳಿ, ನೇಮಿಚಂದ್ರ, ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯ ಕಣ್ಮಣಿಗಳನ್ನೊಳಗೊಂಡಿದ್ದು, ದುರ್ಗವು ಸಾಹಿತ್ಯದ ಗಣಿಯಾಗಿದೆ. ಮತ್ತಷ್ಟು ಓದು
ಅಮರನಾಥ ಯಾತ್ರೆಯ ಪ್ರಾರಂಭ
ಶ್ರೀಹರ್ಷ ಸಾಲಿಮಠ
ಅಮರನಾಥ ಯಾತ್ರೆ ಮತ್ತೆ ಶುರುವಾಗಿದೆ. ಅಲ್ಲಿ ಇಲ್ಲಿ ರಿಸರ್ಚು ಮಾಡುವವರಿಗಿಂತ ಹೋಗಿಬಂದವನ ಬಾಯಲ್ಲೇ ಕೇಳಿದರೆ ವಿವರವಾದ ಐಡಿಯಾ ಸಿಗುತ್ತದೆ! ವಾಟ್ ಎನ್ ಐಡಿಯಾ ಸರ್ ಜಿ!
ಅಮರನಾಥಕ್ಕೆ ಹೋಗುವವರು ಮೊದಲು ಪರವಾನಗಿ ಪಡೆಯಬೇಕು. ಪರವಾನಗಿ ಜೆ&ಕೆ (ಜಮ್ಮು ಕಾಶ್ಮೀರ) ಬ್ಯಾಂಕ್ ನಲ್ಲಿ ದೊರೆಯುತ್ತದೆ. ಕರುನಾಡಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕಿದೆ. ಬೆಂಗಳೂರಲ್ಲಿ ಅವೆನ್ಯೂ ರಸ್ತೆಯ ಕೊನೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿ ಜಮ್ಮು ಕಾಶ್ಮೀರ ಬ್ಯಾಂಕಿದೆ. ದಿನಕ್ಕೆ ಪರಿಮಿತ ಜನರಿಗೆ ಮಾತ್ರ ಪರವಾನಗಿ ಕೊಡುತ್ತಾರೆ. ಇವತ್ತು ಪರವಾನಗಿ ಪಡೆದರೆ ಜುಲೈಗೆ ಸಿಗಬಹುದು. ಪರವಾನಗಿ ಸಿಕ್ಕ ದಿನವೇ ಗುಹೆಯ ಬಳಿ ಹೋಗಬೇಕೆಂದು ಹೇಳುತ್ತಾರಾದರೂ ಅಮರನಾಥದಲ್ಲಿ ಅಷ್ಟು ಕಟ್ಟುನಿಟ್ಟಿನ ನಿಯಮವಿರಲಿಲ್ಲ.
ಯಾತ್ರೆಗೆ ಹೊರಡಲು ಮದ್ಯಮವರ್ಗದವರಿಗೆ ರೈಲು ಒಳ್ಳೆಯ ಮಾರ್ಗ. ಪುಣೆಯಿಂದ ಜಮ್ಮುವಿಗೆ ನೇರ ರೈಲು ಇದೆ. ಇಲ್ಲವೇ ಹುಬ್ಬಳ್ಳಿ ಅಥವಾ ಬೆಂಗಳೂರಿನಿಂದ ಹೊಸದೆಹಲಿ ತಲುಪಿ ಹಳೆ ದೆಹಲಿ ರೇಲ್ವೇ ನಿಲ್ದಾಣದಿಂದ ಜಮ್ಮು ತಲುಪಬಹುದು (ಹೊಸ ದೆಹಲಿ ಯಿಂದ ಹಳೆದೆಹಲಿ ರೇಲ್ವೇ ನಿಲ್ದಾಣಕ್ಕೆ ಹೋಗಬೇಕು). ದೆಹಲಿಯಿಂದ ಜಮ್ಮು ಸುಮಾರು ಹದಿನೈದು ತಾಸುಗಳ ರೈಲು ಪಯಣ. ಸರ್ಕುಲಾರ್ ಟಿಕೆಟ್ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತದೆ.
ಜಮ್ಮು ಕಾಶ್ಮೀರದಲ್ಲಿ ಆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳನ್ನು ಹೊರತುಪಡಿಸಿ ಬೇರೆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳು ಕೆಲಸ ಮಾಡುವುದಿಲ್ಲ. ಎಲ್ಲ ರಾಜ್ಯದ ಎಲ್ಲ ಪೋಸ್ಟ್ ಪೇಡ್ ನೆಟ್ವರ್ಕ್‌ಗಳು ಕೆಲಸ ಮಾಡುತ್ತವಾದರೂ ಬಿ ಎಸ್ ಎನ್ ಎಲ್ ಪೋಸ್ಟ್ ಪೇಡ್ ಉತ್ತಮವಾದದ್ದು. ಮತ್ತಷ್ಟು ಓದು
ಎಲ್ಲಿ ಹೋದವು ಆ ವೈಶಾಖದ ದಿನಗಳು …..

ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….
ಮೊದಲ ಬಾನಯಾನ : ಚಳಿಯಲ್ಲೂ ಬೆವೆತಿತ್ತು ಮನಸ್ಸು..!
– ಪ್ರಶಾಂತ್ ಯಳವಾರಮಠ
ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩’ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೇಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು! ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೊಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಷ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.
ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾ ಇರೋ ಈ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.