ವಿಷಯದ ವಿವರಗಳಿಗೆ ದಾಟಿರಿ

Posts from the ‘ಸ್ಯಾಂಡಲ್ ವುಡ್’ Category

6
ಮಾರ್ಚ್

“ಪಟ್ಟಭದ್ರಹಿತಾಸಕ್ತಿಗಳ ಕೈಗಳಲ್ಲಿ ಸಿಕ್ಕಿ ಒದ್ದಾಡುತ್ತಿದೆ ಕನ್ನಡ ಚಿತ್ರರಂಗ”

– ಸುರೇಶ್ ಮುಗಬಾಳ್

kannada-dubbing1ಗೆಳೆಯನೊಬ್ಬ ತಮಿಳು ನಟ ವಿಜಯ್ ನಟಿಸಿರುವ ‘ಕತ್ತಿ’ ಸಿನೆಮಾವನ್ನು ವೀಕ್ಷಿಸುವಂತೆ ಹೇಳಿದ, ಆ ಸಿನೆಮಾದಲ್ಲೇನಿದೆ ಅಂತಹ ವಿಶೇಷತೆ? ಎಂದು ಕೇಳಿದಾಗ, ‘ಸಾಮಾಜಿಕ ಕಳಕಳಿಯುಳ್ಳ ಅತ್ಯುತ್ತಮ ನಿನೆಮಾ, ಸಾಧ್ಯವಾದರೆ ವೀಕ್ಷಿಸು’ ಎಂದ, ಸರಿ ನಾನೂ Hotstar ನಲ್ಲಿ ಚಿತ್ರಕ್ಕಾಗಿ ತಡಕಾಡಿದೆ, ಸಿನೆಮಾವೇನೋ ವೀಕ್ಷಿಸಲು ಸಿಕ್ಕಿತು, ಆದರೆ ಚಿತ್ರವನ್ನು ಮಲೆಯಾಳಂ ಭಾಷೆಯಲ್ಲಿ ಡಬ್ಬ್ ಮಾಡಲಾಗಿತ್ತು. ಭಾಷೆ ಬಾರದವನಿಗೆ ತಮಿಳು ಭಾಷೆಯಾದರೇನು? ಮಲೆಯಾಳಂ ಭಾಷೆಯಾದರೇನು? ಅದು ಒತ್ತಟ್ಟಿಗಿರಲಿ, ಭಾಷೆಯ ಗಂಧವೇ ಗೊತ್ತಿರದ ಅರೇಬಿಕ್ ಭಾಷೆಯ ಅಲ್ ಲೈಲ್, ಕೋರಿಯನ್ ಭಾಷೆಯ Miracle in cell No. 7 ಸಿನೆಮಾಗಳನ್ನೂ ವೀಕ್ಷಿಸಿದ್ದೇನೆ, ಈ ಚಿತ್ರಗಳಲ್ಲಿ ನನಗೆ ಅರ್ಥವಾಗುತ್ತಿದ್ದದ್ದು ಕೇವಲ ಮುಖಭಾವ, ಆಂಗಿಕ ಚಲನೆ, ಚಿತ್ರದ ನಿರೂಪಣೆಗಳು ಮಾತ್ರ. ಇವುಗಳ ಸಹಾಯದಿಂದಲೇ ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳು ಪ್ರಯತ್ನಿಸುತ್ತಿದ್ದೆ. ಒಂದು ವೇಳೆ English ಅಡಿಬರಹಗಳಿಲ್ಲದಿದ್ದರೆ ಸಿನೆಮಾ ಅರ್ಥವೇ ಆಗುತ್ತಿರಲಿಲ್ಲ. Miracle in cell No. 7 ಚಿತ್ರವನ್ನು ಇತ್ತೀಚೆಗೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಕನ್ನಡಕ್ಕೆ ‘ಪುಷ್ಫಕ ವಿಮಾನ’ ಎಂಬ ಹೆಸರಿನಲ್ಲಿ ರಿಮೇಕ್ ಕೂಡ ಮಾಡಲಾಯಿತು. ನಾಯಕನ ನಟನೆ ಅದ್ಭುತವಾಗಿದ್ದರೂ ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಿತು. ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾದ ಚಿತ್ರ ನನ್ನ ಅಂತರಂಗವನ್ನು ಕಲುಕಿದಷ್ಟೂ ಕನ್ನಡದಲ್ಲಿ ರಿಮೇಕ್ ಮಾಡಿದ ಚಿತ್ರ ಅಂತರಂಗಕ್ಕಿಳಿಯಲಿಲ್ಲ. ಪ್ರಾಯಶಃ ಕೊರಿಯನ್ ಭಾಷೆಯ ಚಿತ್ರವನ್ನೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದರೆ ಚಿತ್ರ ಇನ್ನಷ್ಟು ಅರ್ಥಗಳನ್ನು ಮೂಡಿಸುತ್ತಿತ್ತೇನೋ. ಮತ್ತಷ್ಟು ಓದು »

18
ಸೆಪ್ಟೆಂ

ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ

– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ವಿಷ್ಣುವರ್ಧನ್ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು ‘ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು’ ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ ‘ಸಾಹಸ ಸಿಂಹ’ ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಲು, ಬಂಧನ, ಸುಪ್ರಭಾತ, ಲಾಲಿಯಂಥ ಭಾವಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಂಡರು. ಹೀಗೆ ಪ್ರಯತ್ನಿಸದೆ ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತುಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ನಮ್ಮೊಡನಿದ್ದರೆ ಅವರನ್ನು ನಾವು ಒಬ್ಬ ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ  ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್, 18) ವಿಷ್ಣುವರ್ಧನ್ ತಮ್ಮ 65 ನೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

ಮತ್ತಷ್ಟು ಓದು »

9
ಜುಲೈ

ರಂಗಿತರಂಗ

– ಚಿರು ಭಟ್

#‎ರಂಗಿತರಂಗ‬!

ರಂಗಿತರಂಗಒಂದೇ ಮಾತಲ್ಲಿ ಹೇಳುವುದಾದರೆ, ನಾನು ಕೆಲವು ವರ್ಷಗಳ ನಂತರ ಮನಸಾರೆ ಇಷ್ಟ ಪಟ್ಟ ಚಿತ್ರ. ಈಗ ಚಿತ್ರದ ಬಗ್ಗೆ ಮಾತಾಡೋಣ. ಅಸಲಿಗೆ ಚಿತ್ರದ ಬಗ್ಗೆ ನಾವು ವಿಮರ್ಶೆ ಬರೆದರೆ ಅದು ತಪ್ಪಾಗುತ್ತದೆ. ಕಥೆ ಅರ್ಧ ಹೇಳಿದರೆ ನಿಮಗೆ ಅರ್ಥವಾಗುವುದಿಲ್ಲ, ಪೂರ್ತಿ ಹೇಳಿದರೆ ಮಜಾ ಬರಲ್ಲ. ಗುಡ್ಡದ ಭೂತ, ಅಂಗಾರನ ಭೂತ, ಸಾಲು ಸಾಲು ಬಸುರಿ ಹೆಂಗಸರ ಕೊಲೆ, ತನ್ನ ಸುತ್ತ ಏನಾಗುತ್ತಿದೆ ಎಂದೇ ತಿಳಿಯದ ನಾಯಕ, ಅವನ ಹೆಂಡತಿ ಮತ್ತು ಅದೇ ನಾಯಕನನ್ನು ಒಂದು ಉದ್ದೇಶದಿಂದ ಹುಡುಕುತ್ತಾ ಅಲೆದಾಡುತ್ತಿರುವ ಮತ್ತೊಬ್ಬ ಜರ್ನಲಿಸ್ಟ್ ಹುಡುಗಿ.

ಇವಿಷ್ಟು ಸಾಮಾನ್ಯ ಜನರ ಕೈಯಲ್ಲಿ ಕೊಟ್ಟರೆ ಪುಳಿಯೊಗರೆ ಚಿತ್ರಾನ್ನ ಸೇರಿಸಿ ಉಪ್ಪಿಟ್ಟು ಮಾಡುತ್ತಿದ್ದರೇನೋ ಆದರೆ ಅನುಪ್ ಭಂಡಾರಿಯವರಿಗೆ ಕೊಟ್ಟಿದ್ದರಿಂದ ಅದು “ರಂಗಿತರಂಗ”ವಾಗಿದೆ. ನಿಜಕ್ಕೂ ಒಂದು ಸದಭಿರುಚಿಯ ಚಿತ್ರ. ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬಿದ್ದಿರುವ ನಾಯಕನ ಚಿತ್ರಕ್ಕೆ ಹೋಗುವುದಕ್ಕಿಂತ ಇಂಥ ಒಂದು ಚಿತ್ರ ನೋಡಿದರೆ, ಕಾಸು ಕೊಟ್ಟಿದ್ದಕ್ಕೂ ಮೈ ಉರಿಯುವುದಿಲ್ಲ. ಸಿನಿಮಾದ ಒಂದೊಂದು ಫ್ರೇಮ್ ಕೂಡ ಕಮರೊಟ್ಟುಗೇ ನಮ್ಮನ್ನು ಫ್ರೀಯಾಗಿ ಕರೆದುಕೊಂಡು ಹೋದಂತಿದೆ. ಛಾಯಾಗ್ರಹಣ ನಿರ್ದೇಶನದಲ್ಲಿ ಲ್ಯಾನ್ಸ್ ಕ್ಯಾಪ್ಲನ್ ಗೆದ್ದಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಸಂಗೀತ ಬಹಳ ಅದ್ಭುತವಾಗಿ ಮೂಡಿಬಂದಿದೆ. ರಾಧಿಕಾ ಚೇತನ್ ನಟನೆ ಚೆನ್ನಾಗಿದೆ. ಅವಂತಿಕ ಶೆಟ್ಟಿ ನಟನೆಯೂ ಚೆನ್ನಾಗಿದೆ ಆದರೆ, ಮತ್ತಷ್ಟು ಎಫರ್ಟ್ ಹಾಕಬೇಕು. ನಾಯಕ ನಟ ನಿರುಪ್ ನಟನೆಯಲ್ಲಿ ಸುಧಾರಿಸುವುದು ಬಹಳ ಇದೆ. ಆದರೆ ಈ ಚಿತ್ರಕ್ಕೆ ಅವರ ನಟನೆ ತಕ್ಕ ಮಟ್ಟಿಗಿದೆ ಅಷ್ಟೆ. ಚಿತ್ರ ನಿಂತಿರುವುದೇ ಸಾಯಿಕುಮಾರ್‍ರ ನಟನೆಯ ಮೇಲೆ, ಅವರ ಪಾತ್ರದ ಮೇಲೆ ಎಂದರೆ ತಪ್ಪಾಗುವುದಿಲ್ಲ. ಅವರ ಬಗ್ಗೆ ಹೇಳಬೇಕೆಂದರೆ “Guys, Saikumar is backkkk!!”
ಮತ್ತಷ್ಟು ಓದು »

24
ಏಪ್ರಿಲ್

ರಾಜ್ ಕುಮಾರ್: ನಾಡಿನ ಸೃಜನಶೀಲ ಆಯಾಮ

– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
 ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

Dr Raj‘ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಇದ್ದಾಗ,ಕಲಾವಿದನಾಗಿ ರಾಜ್ ಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು’ ಕನ್ನಡದ ವರನಟ ರಾಜ್ ಕುಮಾರ್ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಹೇಳಿದ ಮಾತಿದು.ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ.

ನಿಜ.ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜ್ ಕುಮಾರ್ ಒಬ್ಬ ಕಲಾವಿದನಾಗಿ ಸಾಧಿಸಿದರು.ರಾಜ್ ಕುಮಾರ್ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾದರು.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜ್ ಕುಮಾರ್ ಪೂರ್ವದಲ್ಲಿ ಮತ್ತು ರಾಜ್ ಕುಮಾರ್ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು.ಕನ್ನಡ ಚಿತ್ರರಂಗದ ಈ ಮೇರುನಟ ಎಪ್ರಿಲ್ ೧೨ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು.ಬದುಕಿದ್ದರೆ ಈ ದಿನ (ಏಪ್ರಿಲ್ ೨೪) ತಮ್ಮ ೮೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.

ಮತ್ತಷ್ಟು ಓದು »

13
ಏಪ್ರಿಲ್

ಹೊಸದನ್ನೇನೋ ಕಂಡಂತೆ…!!

– ಅವಿನಾಶ್ ಜಿ ರಾಮ್

ಉಳಿದವರು ಕಂಡಂತೆವಿಚಿತ್ರವಾಗಿ ಕಾಡುವ ರಿಚ್ಚಿ, ಮೌನವಾಗಿಯೇ ಕೊಲ್ಲುವ ಮುನ್ನಾ ಅಲಿಯಾಸ್ ಪ್ರಣಯರಾಜ.. ನೋಡುವವರ ಕಣ್ಣು ತೇವ ಮಾಡಲೇಂದೆ ಕಾದು ಕುಳಿತ ರತ್ನಕ್ಕ ಮತ್ತವಳ ಮಗ ರಾಘು.. ಪಾಪ ಎನಿಸುವ ಬಾಲು.. ಕಣ್ಣೆದುರು ಬಂದಾಗೆಲ್ಲಾ ಬೆರಗು ಮೂಡಿಸುವ ಡೆಮಾಕ್ರಸಿ.. ಹೀಗೆ ಪಟ್ಟಿ ಮಾಡುತ್ತ ಹೋದರೆ ಉಳಿದವರ ಗುಂಪು ದೊಡ್ಡದಾಗುತ್ತ ಹೋಗುತ್ತದೆ..

ಅತ್ಯಂತ ವಿಭಿನ್ನ ಆಯಾಮಗಳೊಂದಿರುವ ಈ ಸಿನಿಮಾ ನನ್ನ ಕುತೂಹಲಕ್ಕೆ ಮೋಸ ಮಾಡಿಲ್ಲ. ಪ್ರತಿ ಪ್ರೇಮ್‌ನಲ್ಲೂ ತನ್ನ ಸಹಿ ಉಳಿಸಿರುವ ಕರಮ್ ಚಾವ್ಲಾರ ಕ್ಯಾಮೆರಾ ಕೈಚಳಕ, ಇಡೀ ಸಿನಿಮಾದಲ್ಲೊಂದು ಯಶಸ್ವಿ ಪಾತ್ರವಾಗಿರುವ ಅಜನೀಶ್ ರ ಸಂಗೀತ..:) ಕತ್ತರಿ ಪ್ರಯೋಗದಲ್ಲಿ ಕುಶಲತೆ ತೋರಿರುವ ಸಚಿನ್. ಈ ಎಲ್ಲಾ ತಂತ್ರಜ್ಞರ ತಾಂತ್ರಿಕತೆಯಲ್ಲಿ ಮಿಂದಿದೆ ‘ಉಳಿದವರು..‘

ತಂಡದ ನಾಯಕನಾಗಿರುವ ರಕ್ಷಿತ್ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನದ್ದು ನೀಡಬಲ್ಲೇ ಎಂದು ಸಾಬೀತು ಮಾಡಿದ್ದಾರೆ. ಚಿತ್ರಕಥೆಯ ಶೈಲಿ ಭಿನ್ನವಾಗಿದೆ. ವರ್ಲ್ಡ್ ಸಿನಿಮಾಗಳ ಪ್ರಭಾವ ಅವರಿಗಾಗಿದೆ. ರಕ್ಷಿತ್ ಬರೀ ನಟನಾಗಿ ಮಾತ್ರ ಉಳಿದು ಹೋಗಬಾರದಾಗಿ ವಿನಂತಿ..

ಇನ್ನೂ ಲಾಭಾಂಶಗಳ ಲೆಕ್ಕಾಚಾರ ಮಾಡದೇ ಚಿತ್ರ ನಿರ್ಮಾಣ ಮಾಡಿದ ಸಿಂಪಲ್ ಸುನಿ ಮತ್ತು ತಂಡಕ್ಕೆ ಕೃತಜ್ಞತೆ ಹೇಳಲೇಬೇಕು..ಈ ಚಿತ್ರ ಅರ್ಥ ಆಗ್ತಿಲ್ಲ ಅನ್ನೋ ಕೊರಗು ಹಾಗೂ ವಿಮರ್ಶೆಗಳು ಎಲ್ಲೆಡೆ ಉಚಿತವಾಗಿ ಕೇಳಿ ಬರುತ್ತಿವೆ. ಇದುವರೆಗೂ ಎಂತೆಂಥ ಅನರ್ಥಗಳು, ಹೊಲಸು ತುಂಬಿರುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಂತವುಗಳನ್ನು ಗೆಲ್ಲಿಸಿ ಯಶಸ್ವಿ ಚಿತ್ರ ಎಂಬ ಹಣೆ ಪಟ್ಟಿ ಕೊಟ್ಟವರು ನಾವು ಇನ್ನು ಈ ‘ ಉಳಿದವರನ್ನು ಅರಗಿಸಿಕೊಳ್ಳಲಾಗಲಿಲ್ಲವೆಂದರೇ ಹೇಗೆ..?

ಮತ್ತಷ್ಟು ಓದು »

4
ಏಪ್ರಿಲ್

ಜೋಶಿಯವರು ಕಂಡಂತೆ.. ಉಳಿದವರು ಕಂಡಂತೆ.. ಹೀಗಂತೆ…

-ಶ್ರೀವತ್ಸ ಜೋಶಿ

ಉಳಿದವರು ಕಂಡಂತೆಬೇಡಾ ನಂಬಬೇಡಾ… ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ.

‘ಉಳಿದವರು ಕಂಡಂತೆ’ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ.

ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ.

ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು.

ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, “ಈರೀತಿಯದು ಕನ್ನಡದಲ್ಲಿ ಇದೇ ಮೊದಲು” ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು.

’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ “ದ್ರಾಕ್ಷಿ ಹುಳಿಯಾಗಿದೆ” ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು.

ಮತ್ತಷ್ಟು ಓದು »

4
ಏಪ್ರಿಲ್

“ಉಳಿದವರು ಕಂಡಂತೆ” – ಅವರಿವರು ಕಂಡಂತೆ

– ವಸಂತ ಗಿಳಿಯಾರ್ ಕಂಡಂತೆ

ಉಳಿದವರು ಕಂಡಂತೆ ಅವರಿವರು ಕಂಡಂತೆ “ಉಳಿದವರು ಕಂಡಂತೆ” ಚಿತ್ರ ಹೇಗಿದೆಯೋ ಎಂಬುದರ ಬಗ್ಗೆ ನಾನು ಮಂಡೆಕೆಡಿಸಿಕೊಳ್ಳಲಾರೆ.. ತಾಂತ್ರಿಕವಾಗಿ ಮೊದಲ ನಿರ್ದೇಶನದಲ್ಲೆ ಗೆದ್ದಿದ್ದಾರೆ ರಕ್ಷಿತ್ ಎಂದು ನೇರವಾಗಿ ಮಾರ್ಕ್ ಕೊಡುತ್ತಿದ್ದೇನೆ. ಮಿಕ್ಕುಳಿದಂತೆ ಭಾಷೆ ಅರ್ಥವಾಗುವುದಿಲ್ಲ ಎಂದು ಮಗುಮ್ಮಾಗಿ ದೂರುವವರಿಗೆ ನಾನು ಕೇಳುವುದು ಇಷ್ಟನ್ನೆ ಒಂದು ಚೂರೂ ಅರ್ಥವಾಗದಿದ್ದರೂ ಕೆಲವರು english,ತಮಿಳು,ತೆಲುಗು ಚಿತ್ರವನ್ನ ನೋಡುವುದಿಲ್ಲವೇ? ಇದು ನಮ್ಮದೇ ರಾಜ್ಯದ ಒಂದು ಪ್ರದೇಶದ ವಿಶಿಷ್ಟವಾದಂತ ಚಂದದ ಕುಂದಗನ್ನಡವೆಂಬ ಭಾಷೆ. ಅರ್ಥವಾಗದಿದ್ದರೂ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ.. ನಿಮ್ಮ ಪ್ರಯತ್ನ ವ್ಯರ್ಥವಾಗದು..ಯಾಕೆಂದರೇ ನಮ್ಮದೇ ರಾಜ್ಯದಲ್ಲಿ ಕನ್ನಡ ಭಾಷೆ ಯಾವ ಯಾವ ರೀತಿಯಲ್ಲಿದೆ ಎಂಬುದು ನಿಮ್ಮ ಗ್ರಹಿಕೆಗೆ ನಿಲುಕುತ್ತದೆ.. “ಉಳಿದವರು ಕಂಡಂತೆ” ಚಿತ್ರ ನನಗೆ ನನ್ನ ಬಾಲ್ಯದ ಬದುಕನ್ನ ನೆನಪಿಸಿತು.. ರಿಚ್ಚಿ ಪಾತ್ರವನ್ನ ಕಂಡು ನನಗೆ ನನ್ನ ಬಾಲ್ಯದ ಗೆಳೆಯ ಹಂದಾಡಿಯ ರಾಬರ್ಟ್ ನೆನಪಾದ. ಡೆಮಕ್ರಶಿ ನನ್ನ ಬಾಲ್ಯದ ಅವತಾರದ ಚಿತ್ರಣವೆಂದೆನಿಸಿತು..

“ಪೇಪರ್ ಪೇಪರ್ ಮೆಡಿಸಿನ್ ಪೇಪರ್” ಎಂಬ ಹಾಡು ಬಾಲ್ಯದಲ್ಲಿ ದನಕಾಯುವಾಗ ನಮ್ಮ ಗುಂಪಿನಲ್ಲಿ ನಾವು ಹಾಡಿಕೊಳ್ಳುತ್ತಿದ್ದ ಚಲನಚಿತ್ರ ಗೀತೆಯ ನೆನಪು ತಂದರೆ ವಿಟ್ಲಪಿಂಡಿಯ ಹುಲಿವೇಶ ಕಣ್ಣ ಮುಂದೆ ಹಾದು ಹೋದಂತಾಯಿತು.. ಊರಿಗೆ ಕೇವಲ ೪೦೦ ಕಿಲೋಮೀಟರ್ ದೂರದಲ್ಲಿರುವ ನನಗಿಂತ ಸಾವಿರಾರು ಕಿಲೋಮೀಟರ್ ದೂರದಲ್ಲಿರುವವರಿಗೆ ಅಥವ ಊರಿನಿಂದ ದೂರವೆ ಉಳಿದವರಿಗೆ ಇದು ಮತ್ತಷ್ಟು ಆಪ್ತವಾಗಿ ಕಾಣಿಸ ಬಹುದು. ಕಥೆಯೆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ ಘಟಿಸುವ ಘಟನೆಗಳು ಒಂದನ್ನೊಂದು ಬೆನ್ನತ್ತುವ ರೀತಿ ಸೊಗಸಾಗಿದ. ಚಿತ್ರ ಮುಗಿಸಿ ಹೊರಬಂದ ಮೇಲೆ ನನ್ನೊಳಗೆ ಕಥೆ ಆರಂಭವಾಗಲು ಆರಂಬಿಸಿತು.. ಒಂದೊಂದು ಪಾತ್ರದಲ್ಲು ಒಂದೊಂದು ಕಥೆ ಅರಳ ತೊಡಗಿತು. ಚಿತ್ರ ಒಳಗೊಂಡ ಸಂಗೀತ ಸಾಹಿತ್ಯ ನವಿರು ಭಾವದ ಅಲರು ಕಂಪನವನ್ನ ಹುಟ್ಟಿಸುತ್ತದೆ..” ಮಳೆ ಮರೆತು ಹಸಿರಾಗಿ ನಿಂತಾಗ ಈ ಭೂಮಿ ..ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ.. ಹಾಡು ಗುಂಗಿನಂತೆ ಕಾಡುತಿದೆ.. ಹೌದು ಉಳಿದವರು ಕಂಡಂತೆ ಒಂದು ಉತ್ತಮವಾದ ಚಿತ್ರ.. ಕನ್ನಡಕ್ಕೊಂದು ಪ್ರಯೋಗಾತ್ಮಕ ಚಿತ್ರ ಎಂದು ಹೇಳಬಲ್ಲೆ.. ರಕ್ಷಿತ್ ಮತ್ತು ತಂಡಕ್ಕೆ ನನ್ನದೂಂದು ಅಭಿನಂದನೆ…

*** *** *** ಮತ್ತಷ್ಟು ಓದು »

27
ಜನ

ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ

– ಗುರುರಾಜ್ ಕೊಡ್ಕಣಿ

Kannada Dubbingಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.

ಮತ್ತಷ್ಟು ಓದು »

3
ಡಿಸೆ

6-5=2 ಚಿತ್ರ ವಿಮರ್ಶೆ

-ಡಾ.ಅಶೋಕ್ ಕೆ ಆರ್

6-5=2ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.
ಎರಡು ಘಂಟೆಯ 6-5=2 ಚಿತ್ರ ಪ್ರೀತಿ ಪ್ರೇಮದ ಚಿತ್ರಗಳ ಗುಂಗಿನಲ್ಲಿ ಕಳೆದುಹೋದ ಪ್ರೇಕ್ಷಕರನ್ನು ಖಂಡಿತ ಹೊಡೆದೆಬ್ಬಿಸುತ್ತದೆ! ಬಹುಶಃ ಉಪೇಂದ್ರ ನಿರ್ದೇಶನದ ಶ್ ಚಿತ್ರದ ನಂತರ ಕನ್ನಡದಲ್ಲಿ ಬಂದ ಪರಿಣಾಮಕಾರಿ ‘ದೆವ್ವದ’ ಚಿತ್ರ ಎಂದರೆ ತಪ್ಪಲ್ಲ. ಕೊನೇಪಕ್ಷ ಶ್  ಸಿನಿಮಾದಲ್ಲೂ ಪ್ರೀತಿ ಪ್ರೇಮ ಕಾಮ ಹಾಡು ಫೈಟುಗಳಿದ್ದವು. ಈ ಚಿತ್ರದಲ್ಲಿ ಅದೂ ಇಲ್ಲ. ಆರು ಮಂದಿ ಟ್ರೆಕ್ಕಿಂಗಿಗೆಂದು ಹೋಗುತ್ತಾರೆ, ಕಾಡಿನ ಪರಿಸರ ಗಮನಿಸಿದರೆ ಗುಂಡ್ಯ, ಬಿಸಿಲೆ, ಕುಮಾರಪರ್ವತವಿರಬೇಕು. ಆ ಆರು ಜನರಲ್ಲಿ ಒಬ್ಬ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಬೇಕೆಂಬ ಕನಸನ್ನೊತ್ತವನು. ತನ್ನ ಗುರುವಿನಿಂದ ಒಂದು ಕ್ಯಾಮೆರಾ ತರುತ್ತಾನೆ ಟ್ರೆಕ್ಕಿಂಗಿನ ಪ್ರತಿ ಘಟ್ಟವನ್ನು ಚಿತ್ರಿಸಬೇಕೆಂಬ ಆಸೆಯೊಂದಿಗೆ. ಇಡೀ ಚಿತ್ರ ಆ ಕ್ಯಾಮೆರಾದಲ್ಲಿ ಚಿತ್ರಿತವಾದ ‘ನೈಜ’ ದೃಶ್ಯಗಳಷ್ಟೇ! ಟ್ರೆಕ್ಕಿಂಗಿನ ಸಮಯದಲ್ಲಿ ನಡೆದ ತಮಾಷೆ ಸಿಟ್ಟು ಸೆಡವು ದುರ್ಘಟನೆಗಳು ಅಲ್ಲಿನ ರಮ್ಯ ಪರಿಸರವೆಲ್ಲ ಲೇಟ್ ರಮೇಶನ ಕ್ಯಾಮೆರಾದಲ್ಲಿ ಹಸಿಹಸಿಯಾಗಿ ಬಂಧಿಯಾಗಿದೆ. ಚಾರಣಕ್ಕೆಂದು ಬಂದವರ ಮೇಲೆ ಆ ಪರಿಸರದಲ್ಲಿನ ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡುತ್ತವೆ. ಬದುಕುವರ್ಯಾರು, ಸಾಯುವವರ್ಯಾರು, ಕಾಣೆಯಾಗುವವರ್ಯಾರು ಎಂಬುದೇ ಚಿತ್ರದ ಹೂರಣ. ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡಲು ಕಾರಣವೇನು ಎಂಬುದರ ವಿವರವಿಲ್ಲ, ಮನದಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಯಾವ ವಿವರಗಳೂ ಚಿತ್ರದಲ್ಲಿಲ್ಲ! ಯಾಕೆಂದರೆ ಸ್ವರ್ಣಲತಾ ಪ್ರೊಡಕ್ಷನ್ನಿನ ಜಾಹೀರಾತು ತಿಳಿಸುವಂತೆ ಇದು ಚಲನಚಿತ್ರವಲ್ಲ! ನೈಜ ವಿಡಿಯೋ ಅಷ್ಟೇ!!
25
ನವೆಂ

ಕನ್ನಡ ಚಿತ್ರರ೦ಗದ ಬಗೆಗೊ೦ದಿಷ್ಟು…

– ಗುರುರಾಜ ಕೊಡ್ಕಣಿ

Sandalwoodಮೊನ್ನೆಯಷ್ಟೇ ಕನ್ನಡದ ಹೊಸ ಚಿತ್ರವೊ೦ದು ಬಿಡುಗಡೆಯಾಗಿದೆ.ಹೆಸರು ’ಖತರ್ನಾಕ್’.ಇದು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರ.’ಉಮೇಶ್ ರೆಡ್ಡಿಯ ವಿಕೃತಿಗಳು ಬೆಳ್ಳಿತೆರೆಗೆ ’ಎ೦ದು ಚಿತ್ರತ೦ಡದವರು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳನೊಮ್ಮೆ ಗಮನಿಸಿ.’ಖತರ್ನಾಕ್’,’ಉಮೇಶ’,’ದ೦ಡುಪಾಳ್ಯ’,’ಸಿಲ್ಕ್:ಸಕತ ಹಾಟ್ ಮಗಾ’ ಇತ್ಯಾದಿ ಇತ್ಯಾದಿ.ಮೊದಲೆರಡು ಚಿತ್ರಗಳು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರಗಳಾದರೆ,ದ೦ಡು ಪಾಳ್ಯದ ಹ೦ತಕರ ಕತೆಯನ್ನಾಧರಿಸಿ ’ದ೦ಡು ಪಾಳ್ಯ’ ಚಿತ್ರ ಮಾಡಲಾಗಿತ್ತು.’ಸಿಲ್ಕ್’ ಚಿತ್ರ ಕ್ಯಾಬರೇ ಡಾನ್ಸರ್ ಗತಕಾಲದ ನಟಿಯೊಬ್ಬಳ ಹೆಸರಿನಿ೦ದ ಪ್ರೇರಿತ ಚಿತ್ರವಾಗಿತ್ತು.

‘message oriented film’ ಎ೦ಬ ಹೆಸರಿನಡಿಯಲ್ಲಿ ಬರುತ್ತಿರುವ ಇ೦ಥ ಚಲನ ಚಿತ್ರಗಳ ದಿಕ್ಕಿನೆಡೆಗೆ ಸಾಗುತ್ತಿರುವ ಕನ್ನಡ ಚಿತ್ರರ೦ಗವನ್ನು ಗಮನಿಸಿದಾಗ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಿರಾಸೆ,ಆತ೦ಕಗಳ ಅನುಭವ.ಆಶ್ಲೀಲತೆ,ಹಸಿಹಸಿ ಕಾಮ,ವಿಕೃತಿ,ದ್ವ೦ದಾರ್ಥ ಮತ್ತು ಕ್ರೌರ್ಯಗಳೇ ಇ೦ಥಹ ಚಿತ್ರಗಳ ಬ೦ಡವಾಳ.ಇಷ್ಟೊ೦ದು ಅತೀರೇಕದ ಚಿತ್ರದಲ್ಲಿ ಬೇಕಿತ್ತಾ ಎ೦ದು ಚಿತ್ರತ೦ಡದವರನ್ನು ಕೇಳಿದರೆ.ಮೂಲ ಕತೆ ಇ೦ಥದ್ದನೆಲ್ಲ ಬೇಡುತ್ತದೆ ಎನ್ನುತ್ತಾರವರು…!! ಇನ್ನು ಇದೊ೦ದು ’ಸ೦ದೇಶ ಪ್ರಧಾನ ಚಿತ್ರ’ ಕೆಟ್ಟವರ ಜೀವನ ಕೊನೆಯಲ್ಲಿ ಹೇಗಾಗುತ್ತದೆ ಎ೦ದು ತೋರಿಸುವುದಕ್ಕೆ ಇದೆಲ್ಲ ಅವಶ್ಯಕ ಎನ್ನುವ ಸಮರ್ಥನೆ ಬೇರೆ.

ಮತ್ತಷ್ಟು ಓದು »