ಆಕಾಶದಿಂದ ಅಂತರಿಕ್ಷದೆಡೆಗೆ ತಲೆಯೆತ್ತಿದ ಭಾರತ
– ರಾಘವೇಂದ್ರ ಎಮ್ ಸುಬ್ರಹ್ಮಣ್ಯ
ಸರಿ, ಇವತ್ತು ಭಾರತ ತನ್ನದೇ ಒಂದು ಉಪಗ್ರಹವನ್ನ, ತನ್ನದೇ ಮಿಸೈಲ್ ಉಪಯೋಗಿಸಿ ಹೊಡೆದುರುಳಿಸ್ತು. “ಮಿಷನ್ ಶಕ್ತಿ”ಯನ್ನು ಒಂದು ಅಭೂತಪೂರ್ವ ಸಾಧನೆ ಎಂದು ಹೊಗಳಲಾಯ್ತು. ಏನಿದು ಮಿಷನ್ ಶಕ್ತಿ? ಯಾಕೆ ಈ ಪ್ರಾಜೆಕ್ಟ್’ಗೆ ಇಷ್ಟು ಮಹತ್ವ? ಮಿಸೈಲ್ ತಂತ್ರಜ್ಞಾನ ಜಗತ್ತಿನ ಎಲ್ಲರ ಬಳಿಯೂ ಇದೆ. ಪಾಕಿಸ್ಥಾನದ ಬಳಿಯೂ ಇದೆ. ಮೊನ್ನೆಯಷ್ಟೆ ನಾವು SPICE ಮಿಸೈಲ್ ಬಳಸಿ, ಬಾಲಾಕೋಟ್’ನಲ್ಲಿ ಭಯೋತ್ಪಾದಕರ ಬಾಲ ಕಟ್ ಮಾಡಿದ್ದೀವಲ್ಲ. ಇದೂ ಇನ್ನೊಂದು ಅಂತಹದ್ದೇ ಸಾಧನೆ ತಾನೆ? ಅದಕ್ಕೆ ಇಷ್ಟು ದೊಡ್ಡ ಗಲಾಟೆಯಾಕೆ? ಮಿಸೈಲ್ ಒಂದಕ್ಕೆ ಸಂಬಂಧಿಸಿದ ಈ ಪ್ರಕಟಣೆಯನ್ನ ರಕ್ಷಣಾ ಇಲಾಖೆಯ ಬದಲು, ಪ್ರಧಾನಿ ಯಾಕೆ ಕೊಟ್ಟದ್ದು? ಈ ಪ್ರಶ್ನೆಗಳು ನಿಮ್ಮ ತಲೆಯಲ್ಲಿದ್ದರೆ, ಈ ಲೇಖನ ನಿಮಗೆ ಸಹಾಯಕವಾಗಲ್ಲದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಚರ್ಚೆ ಮಾಡೋಣ. ಮತ್ತಷ್ಟು ಓದು
ವಿಶ್ವವನ್ನೇ ಅಚ್ಚರಿಯ ತೆಕ್ಕೆಗೆ ಸೆಳೆಯುವ ಭಾರತದ ದೈತ್ಯ
– ಸುರೇಶ್ ಮುಗಬಾಳ್
ತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತನ್ನ ಆಸೆ ಈಡೇರದೆ ಸೆರೆಮನೆಯತ್ತ ಮುಖಮಾಡಿದಾಗ, ಇತ್ತ ಇಡೀ ಪ್ರಪಂಚವೇ ನಮ್ಮ ದೇಶದತ್ತ ಮುಖಮಾಡಿತ್ತು. ಶಶಿಕಲಾ ಸೆರೆಮನೆಗೆ ಹೋಗುವುದನ್ನು ನೋಡಲಿಕ್ಕಲ್ಲಾ, ನಮ್ಮ ಹೆಮ್ಮೆಯ ISRO ( Indian Space Research Organisation) PSLV-C37 ಗ್ರಹ ನೌಕೆಯ ಸಹಾಯದಿಂದ 104 ಉಪಗ್ರಹಗಳನ್ನು ಒಂದೇ ಬಾರಿಗೆ ಕಕ್ಷೆಗೆ ಸೇರಿಸುವುದರೊಂದಿಗೆ ಯಾರೂ ಮಾಡದ ಸಾಧನೆಗೆ ಕೈ ಹಾಕಿದೆ ಎಂದು. ಅಚ್ಚರಿ ಪಡಲೇಬೇಕು..! ಏಕೆ ಗೊತ್ತೇ? ಭಾರತೀಯ ಟಿ.ವಿ. ಮಾಧ್ಯಮಗಳು ಇಡೀ ದಿನ ಶಶಿಕಲಾರ ಬಗ್ಗೆ ಪ್ರಸಾರ ಮಾಡುತ್ತಿದ್ದರೆ ಅಲ್ಲೆಲ್ಲೋ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳು ತಮ್ಮ ಮಾಧ್ಯಮಗಳ ತಲೆಪಂಕ್ತಿಯಲ್ಲಿ (Headlines) ನಮ್ಮ ದೇಶದ ಸಾಧನೆಯನ್ನು ಬಿತ್ತರಿಸಿದವು. ತಮ್ಮದೇ ದೇಶದ ವಿಜ್ಞಾನಿಗಳು ಭೂಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದವರಂತೆ ಅಲ್ಲಿನ ಪ್ರಜೆಗಳು ಖುಷಿಪಟ್ಟುಕೊಂಡರು. ನಮ್ಮ ಟಿ.ವಿ.ಮಾಧ್ಯಮಗಳ ಕತೆಯೇ ಬೇರೆ, ಸುದ್ದಿ ಬಿತ್ತರಿಸುವಾಗ ಗಮನಾರ್ಹವಾದ ಸುದ್ದಿಗಳು 2-3 ನಿಮಿಷಗಳಿಗಷ್ಟೇ ಸೀಮಿತವಾಗಿಸಿಬಿಡುತ್ತವೆ. ಅದೇ ಕೊಳಕು ರಾಜಕೀಯವು ಮಾಧ್ಯಮಗಳ ತುಂಬೆಲ್ಲಾ ಹರಡಿರುತ್ತದೆ. ಚೀನಾದ ಪ್ರಮುಖ ಪತ್ರಿಕೆಯೊಂದು ಭಾರತದ ಈ ಸಾಧನೆಯನ್ನು ಕೊಂಡಾಡಿ, ಸಂಪಾದಕೀಯದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿತ್ತು. ಮತ್ತಷ್ಟು ಓದು
ಬಡವರ ಮಕ್ಕಳ ಭವಿಷ್ಯದ ಜೊತೆಗೆ ಬರಗೂರು ಭಂಡಾಟ
– ರಾಕೇಶ್ ಶೆಟ್ಟಿ
ಕಾಲಕ್ಕೆ ತಕ್ಕಂತೆ ಮನುಷ್ಯ Update ಆಗಲಿಲ್ಲಾಂದ್ರೆ Outdated ಆಗಿಬಿಡ್ತಾನೆ ಎನ್ನುವುದಕ್ಕೆ ರಾಜ್ಯದ ಬುದ್ಧಿಜೀವಿಗಳೇ ಸಾಕ್ಷಿ. ಉದಾಹರಣೆಗೆ, ಪಠ್ಯಪುಸ್ತಕ ಪುನರ್ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ಅವರನ್ನೇ ತೆಗೆದುಕೊಳ್ಳಬಹುದು. ಬರಗೂರು ಅವರೇ ಯಾಕೆಂದರೆ, ಸಿದ್ಧರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ,ಬಿಜೆಪಿಯ ಕಾಲದಲ್ಲಿ ಪಠ್ಯಪುಸ್ತಕಗಳ ಕೇಸರಿಕರಣವಾಗಿದೆ ಎಂಬ ಬುದ್ಧಿಜೀವಿಗಳ ಹುಯಿಲನ್ನು ಬೆಂಬಲಿಸಿ, ತಮ್ಮ ಆಸ್ಥಾನ ಸಾಹಿತಿಗಳಲ್ಲೊಬ್ಬರಾದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ೨೦೧೪ರಲ್ಲಿ ರಚಿಸಿದ್ದರು.ಈ ಸಮಿತಿಯ ಕೆಲಸ ಮುಗಿಯಬೇಕಾದ ಸಮಯಕ್ಕೆ ಮುಗಿದ್ದರಿಂದ ಅವಧಿಯ ವಿಸ್ತರಣೆಯನ್ನೂ ಮಾಡಲಾಯಿತು. ಸಮಿತಿಯೊಂದರ ಅವಧಿಯ ವಿಸ್ತರಣೆಯಾಗುವಾಗ ಅಲ್ಲಿಯವರೆಗೂ ಆಗಿರುವ ಕಾರ್ಯಗಳ ವರದಿ ನೀಡುವುದು ವಾಡಿಕೆ.ಆದರೆ,ಮುಖ್ಯಮಂತ್ರಿಗಳ ಆಸ್ಥಾನ ಸಾಹಿತಿಗಳ ನೇತೃತ್ವದ ಈ ಸಮಿತಿಯನ್ನು ಹಾಗೆಲ್ಲ ಪ್ರಶ್ನಿಸಲಾದೀತೆ? ಈ ಸಮಿತಿ ರಚನೆಯಾದ ನಂತರ, ಹಿಂದಿನ ಪಠ್ಯಗಳಲ್ಲಿನ ಯಾವೆಲ್ಲ ಲೋಪದೋಷಗಳನ್ನು ಪತ್ತೆ ಮಾಡಲಾಗಿದೆ,ಏನನ್ನು ಪುನರ್ ರಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಎಲ್ಲವನ್ನೂ ನಿಗೂಢವಾಗಿಡಲಾಗುತ್ತಿದೆ.
ಈ ಪರಿ ನಿಗೂಢತೆಯನ್ನಿಟ್ಟುಕೊಂಡು ಬರಗೂರು ರಾಮಚಂದ್ರಪ್ಪನವರೇನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಿದ್ದಾರೆಯೇ? ಎಲ್ಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಯಾದರೂ ಆಗಿದೆಯೇ ಎಂದರೆ ಅದೂ ಇಲ್ಲ ಜನವರಿ ೧೫ರೊಳಗೆ ನೀಡುತ್ತಾರಂತೆ.ಬಹುಶಃ ಎಲ್ಲಾ ಪ್ರಿಂಟ್ ಆದ ನಂತರವೇ ಬರಗೂರರ ನಿಗೂಢ ಪ್ರಪಂಚದಿಂದ ಈ ಪುಸ್ತಕ ಹೊರಬರುತ್ತದೆನಿಸುತ್ತದೆ. ಇಂತಹ ನಿಗೂಢತೆಯನ್ನಿಟ್ಟುಕೊಂಡೇನೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಹೊರಟಿದ್ದರೆಯೇ ಎಂದು ನಿರೀಕ್ಷೆಯಿಟ್ಟುಕೊಂಡರೇ ಆಘಾತವಾಗುತ್ತದೆ.
ಗುರುತ್ವದ ಅಲೆಗಳಲ್ಲಿ ಕೇಳುವ ಬ್ರಹ್ಮಾಂಡದ ಸಂಗೀತ
– ವಿನಾಯಕ ಹಂಪಿಹೊಳಿ
ನೀವು ಅಂತರಿಕ್ಷದ ಆಕಾಶನೌಕೆಯೊಂದರಲ್ಲಿದ್ದೀರಿ ಎಂದು ಭಾವಿಸಿ. ಆ ನೌಕೆಯು ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಚಲಿಸಲಾರಂಭಿಸಿತು ಎಂದಿಟ್ಟುಕೊಳ್ಳಿ. ಆ ನೌಕೆಯ ಕಿಟಕಿ ಬಾಗಿಲುಗಳೆಲ್ಲವೂ ಮುಚ್ಚಿವೆ ಎಂದು ಊಹಿಸಿ. ಆಗ ಅದು ವೇಗೋತ್ಕರ್ಷದಿಂದ ಚಲಿಸುತ್ತಿರುವ ಅನುಭವ ನಿಮಗೆ ನೇರವಾಗಿ ಆಗುವದಿಲ್ಲ. ಅದನ್ನು ಹೇಗೆ ತಿಳಿಯುತ್ತೀರಿ? ಸುಲಭ. ಆಗ ನಿಮ್ಮ ಕೈಯಲ್ಲಿನ ಚೆಂಡನ್ನು ಬಿಟ್ಟು ಬಿಡಿ. ಒಂದು ವೇಳೆ ನೌಕೆಯು ಏಕವೇಗದಿಂದ ಹೋಗುತ್ತಿದ್ದರೆ ಆ ಚೆಂಡು ಅಲ್ಲೇ ಇರುತ್ತದೆ. ನೌಕೆ ವೇಗೋತ್ಕರ್ಷವನ್ನು ಹೊಂದುತ್ತಿದ್ದರೆ ಚೆಂಡು ಮತ್ತು ನೌಕೆಯ ತಳದ ಅಂತರ ಕಡಿಮೆಯಾಗುತ್ತ ಸಾಗಿ ಕೊನೆಗೆ ನಿಮ್ಮ ಕಾಲ ಬಳಿ ಬಂದು ನೌಕೆಯ ತಳ ಭಾಗಕ್ಕೆ ಬಡಿಯುತ್ತದೆ. ಆಗ ನಿಮಗೆ ಚೆಂಡು ಕೆಳಗೆ ಬಿದ್ದಂತೆ ಕಾಣುತ್ತದೆ.
ಸರಿ. ಈ ಕಾಲ್ಪನಿಕ ಪ್ರಯೋಗದ ಲಾಭವೇನು? ತುಂಬಾ ಇದೆ. ಹೊರಗಡೆಯ ಸಂಪರ್ಕವೇ ಇಲ್ಲದ ಅಂಥ ನೌಕೆ ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಮುನ್ನುಗ್ಗುತ್ತಿದ್ದರೆ, ನಿಮಗೆ ಭೂಮಿಯ ಮೇಲೆ ಇದ್ದ ಅನುಭವವೇ ಆಗುತ್ತಿರುತ್ತದೆ. ಎಲ್ಲಿಯವರೆಗೆ ನೀವು ಕಿಟಕಿ ತೆರೆದು ಹೊರಜಗತ್ತನ್ನು ನೋಡುವದಿಲ್ಲವೋ ಅಲ್ಲಿಯವರೆಗೂ ನಿಮಗೆ ಆಕಾಶದಲ್ಲಿದ್ದೇವೆ ಎಂದೇ ಅನಿಸುವದಿಲ್ಲ. ಹಾಗೆ ಅನ್ನಿಸಬೇಕಾದರೆ ನೀವು ಮುಚ್ಚಿರುವ ನೌಕೆಯಿಂದ ಆಚೆಗಿನ ಜಗತ್ತಿನೆಡೆ ಕಣ್ಣು ಹಾಯಿಸಬೇಕು. ಆಗಲೇ “ಒಹೋ! ಭೂಮಿಯ ಮೇಲಿಲ್ಲ!!” ಎಂಬ ಅನುಭವ ಬರುತ್ತದೆ. ಕನಸನ್ನು ಕಾಣುತ್ತಿರುವಾಗ ಈ ಕನಸು ಸುಳ್ಳು ಎಂದು ಎಂದಾದರೂ ಅನಿಸಿದೆಯೇ? “ಒಹೋ! ಕನಸಾ!!” ಎಂಬ ಸುಳ್ಳಿನ ಅರಿವು ಉಂಟಾಗುವದು ಎಚ್ಚರವಾದ ಮೇಲೇ ಅಲ್ಲವೇ? ಹಾಗೇ ಇದು.
ಫ್ರೀ ಬೇಸಿಕ್ಸ್ ಅಸಲಿತನ
– ಲಹರಿ ಎಂ.ಹೆಚ್
ಆ ಆಫೀಸಲ್ಲಿ ನಿಯಮವೊಂದಿತ್ತು. ಯಾರಾದರೂ ಕೆಲಸಕ್ಕೆ ರಜಾ ಹಾಕಿದ್ದಲ್ಲಿ ರಜಾ ಮುಗಿಸಿ ಕೆಲಸಕ್ಕೆ ಮರಳಿದ ನಂತರ ಅದಕ್ಕೆ ಕಾರಣವನ್ನು ಪುಸ್ತಕವೊಂದರಲ್ಲಿ ನಮೂದಿಸಬೇಕಾಗಿತ್ತು. ಒಮ್ಮೆ ಒಬ್ಬಳು ಮಹಿಳಾ ಉದ್ಯೋಗಿ ಮೂರು ದಿನಗಳ ರಜಾ ತೆಗೆದುಕೊಂಡಿದ್ದಳು. ಕೆಲಸಕ್ಕೆ ಮರಳಿದ ದಿನವೇ ಅವಳು ಪುಸ್ತಕದಲ್ಲಿ ಕಾರಣವನ್ನು ನಮೂದಿಸಿದಳು, ‘ಮುಟ್ಟಿನಿಂದಾಗಿ ಹೊಟ್ಟೆ ನೋವು’.
ಆ ಅವಧಿಯಲ್ಲಿ ಬೇರೆ ಕೆಲವು ಉದ್ಯೋಗಿಗಳೂ (ಪುರುಷರೂ ಕೂಡ) ಕಾರಣವಿಲ್ಲದೇ ಕೆಲಸಕ್ಕೆ ಚಕ್ಕರ್ ಹಾಕಿದ್ದರು. ಅವರೆಲ್ಲರಿಗೂ ಯಾವ ಕಾರಣವನ್ನು ಕೊಟ್ಟು ತಪ್ಪಿಸಿಕೊಳ್ಳುವುದು ಎಂದು ಬಗೆಹರಿಯಲಿಲ್ಲ. ಯಾವ ಉಪಾಯವೂ ಹೊಳೆಯದೇ ಹೀಗೆ ಮಾಡುವುದೇ ಒಳಿತೆನಿಸಿ ಪುಸ್ತಕದಲ್ಲಿ ‘ನಮ್ಮದೂ ಅದೇ’ ಎಂದು ಬರೆದು ಆ ಮಹಿಳೆಯ ಕೊಟ್ಟ ಕಾರಣವನ್ನೇ ಎಲ್ಲರೂ ನಕಲಿಸಿದರು. ಅವಳು ಬರೆದುದಾದರೂ ಏನು ಎಂಬುದನ್ನು ಯಾರೊಬ್ಬರೂ ಓದುವ ಗೋಜಿಗೆ ಹೋಗಲಿಲ್ಲ.
ಪ್ರತಿದಿನ ಫೇಸ್ ಬುಕ್ ತೆರೆದಾಗಲೂ ಒಂದು ನೋಟಿಫಿಕೇಷನ್ ‘chek out, chek out’ ಎಂದು ಕುಣಿಯುತ್ತಿರುತ್ತದೆ. ಅದೇನೆಂದು ಓದಹೋದರೆ ಕಾಣಿಸಿವುದು ಇಷ್ಟು, “A, B and 15 others sent message to TRAI about digital equality in India. You can too.” ನಮ್ಮಲ್ಲಿ ಈಗ ಹೊಸದೊಂದು ಚಟ ಶುರುವಾಗಿದೆ. ಕೈ, ಕಾಲು, ಗಂಟಲುಗಳಿಗೆ ಕೆಲಸ ಸಿಗಲೆನ್ನುವಷ್ಟು ಉತ್ಸಾಹ ಇದ್ದವರೂ ಬೀದಿಗಿಳಿದು ಪ್ರತಿಭಟನೆ, ಬಂದ್ ಎನ್ನುತ್ತಾ ಹೋರಾಟ ಮಾಡಿದರೆ, ಇದೆಲ್ಲದಕ್ಕೂ ಆಲಸಿತನ ತೋರುವವರು ಮೊಬೈಲ್, ಟ್ಯಾಬ್ಲೆಟ್, ಪಿಸಿಗಳಲ್ಲಿ ಪಿಟಿಷನ್, ಮೆಸೇಜ್ ಕಳಿಸುತ್ತಾ ಹೋರಾಡುತ್ತಾರೆ. ಹೇಗೆ ಹೋರಾಡುವವರಲ್ಲಿ ೭೫% ಮಂದಿಗೆ ಯಾತಕ್ಕಾಗಿ ಈ ಪ್ರತಿಭಟನೆ, ಬಂದ್, ಪಿಟಿಷನ್ ಎನ್ನುವ ಅಸಲಿ ಸಂಗತಿಯೇ ಗೊತ್ತಿರುವುದಿಲ್ಲ. ಒಬ್ಬರು ಮಾಡಿದರೆಂದು ಇನ್ನೊಬ್ಬರು ಮಾಡುತ್ತಾರೆ. ಅಲ್ಲಿಗೆ ಹೋರಾಟವೆನ್ನುವುದು ಹಾರಾಟವಾಗುತ್ತದೆ. ಪ್ರಸ್ತುತ TRAI ಗೆ ಸಂದೇಶ ಕಳಿಸುವ ವಿಚಾರದಲ್ಲಿ ೯೦% ಜನರದ್ದು ಮೇಲೆ ಉದಾಹರಿಸಿದ ‘ನಮ್ಮದೂ ಅದೇ’ ಎನ್ನುತ್ತಾ ಆ ಮಹಿಳೆಯನ್ನು ನಕಲು ಹೊಡೆದ ಸಹೋದ್ಯೋಗಿಗಳ ಕತೆಯೇ ಆಗಿದೆ.
ಇಂಧನ ಸಮಸ್ಯೆಯ ಪರಿಹಾರಕ್ಕಾಗಿ ನಡೆಯುತ್ತಿರುವ ಸಂಶೋಧನೆಗಳ ಮತ್ತೊಂದು ಮುಖ…
– ಶ್ರೀವತ್ಸ ಭಟ್
ಒಮ್ಮೆ ಊಹಿಸಿಕೊಳ್ಳಿ ನಮ್ಮ ಮನೆಯ ಬಲ್ಬುಗಳು ವಿದ್ಯುತ್ತಿಲ್ಲದೆಯೇ ಉರಿಯತೊಡಗಿದರೆ,ಮನೆಯಂಗಳದಲ್ಲಿರುವ ಗಿಡಗಳು ಬೆಳಕನ್ನು ಹೊರಸೂಸತೊಡಗಿದರೆ ಹೇಗಿರುತ್ತದೆ ಅಲ್ಲವೇ..! ಹೌದು ಬಲ್ಬುಗಳೇ ಬೆಳಕನ್ನು ಉತ್ಪಾದಿಸಿ ಬೆಳಗುವ,ಸಸ್ಯಗಳು ಬೆಳಕನ್ನು ಸೂಸುವ ಅದ್ಭುತ ಸಂಶೋಧನೆಯೊಂದು ಬಹುತೇಕ ಯಶಸ್ಸಿನ ಹಂತದಲ್ಲಿದೆ.ನೀವು ಮಿಣುಕುಹುಳುಗಳನ್ನು ನೋಡಿರಬಹುದು. ಕತ್ತಲಿನಲ್ಲಿ ಬೆಳಕನ್ನು ಹೊರಸೂಸುತ್ತಾ ಹಾರುವ ಜೀವಜಗತ್ತಿನ ವಿಸ್ಮಯ ಜೀವಿಗಳು. ಹೀಗೆ ಜೀವಿಗಳು ಬೆಳಕನ್ನು ಹೊರಸೂಸುವ ಈ ಪ್ರಕ್ರಿಯೆಗೆ ಜೈವದೀಪ್ತತೆ ಎಂದು ಹೆಸರು.ಇಂಗ್ಲಿಷಿನಲ್ಲಿ ಇದಕ್ಕೆ Bio luminescence ಎಂದು ಕರೆಯುತ್ತಾರೆ.
ಜೈವದೀಪ್ತತೆ ಮನುಷ್ಯನ ಕುತೂಹಲ ಕೆರಳಿಸಿದ್ದು ಇವತ್ತು ನಿನ್ನೆಯ ವಿಷಯವಲ್ಲ. ಮೈಕೆಲೆಂಜಲೋ ಮೆರಿಜಿ (Michelangelo Merisi da Caravaggio) ಎಂಬ ಇಟಲಿಯ ಪ್ರಸಿದ್ಧ ಚಿತ್ರಕಾರನೊಬ್ಬ ಇದೇ ಹುಳುಗಳ ಒಣಗಿದ ಪುಡಿಯನ್ನು ಬಳಸಿಕೊಂಡು ತನ್ನ ಪೇಂಟಿಂಗ್ ಹೊಳೆಯುವಂತೆ ಮಾಡುತ್ತಿದ್ದನಂತೆ. ಇಂತಹ ಬಹುತೇಕ ಜೀವಿಗಳು ಕಾಣಸಿಗುವುದು ಸಮುದ್ರದಲ್ಲಿ. ವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾನೆ…“ ವಿಶಾಲ ಸಾಗರದಲ್ಲಿ ಪಯಣಿಸುತ್ತಿದ್ದೆ, ರಾತ್ರಿಯ ಸಮಯವದು, ತಂಪಾದ ಗಾಳಿ ಬೀಸುತ್ತಿತ್ತು, ಹಗಲಿನಲ್ಲಿ ಸಮುದ್ರದ ಮೇಲೆ ನೊರೆಯಂತೆ ಕಾಣುತ್ತಿದ್ದ ವಸ್ತುಗಳು ರಾತ್ರಿಯ ಸಮಯದಲ್ಲಿ ಹೊಳೆಯುತ್ತಿದ್ದವು.”
ವಿಜ್ಞಾನ ಮತ್ತು ಕುಜ್ಞಾನ
– ಡಾ| ಜಿ. ಭಾಸ್ಕರ ಮಯ್ಯ
ವಿಜ್ಞಾನ ಮತ್ತು ಅಜ್ಞಾನ ಎಂಬ ಎರಡು ಪದಪುಂಜಗಳನ್ನು ನಾನು ಒಂದು ವಿಶೇಷ ಅರ್ಥದಲ್ಲಿ ಬಳಸುತ್ತಿದ್ದೇನೆ. ಇದು ಕಳೆದ ವರ್ಷ (1914) ಜನವರಿ 3ರಿಂದ 7ರ ತನಕ ಮುಂಬೈಯಲ್ಲಿ ನಡೆದ ‘ಇಂಡಿಯನ್ ಸೈನ್ಸ್ ಕಾಂಗ್ರೆಸ್ ಎಸೋಸಿಯೇಶನ್’ನ 102ನೆಯ ಅಧಿವೇಶನದಲ್ಲಿ ನಡೆದ ಚಿತ್ರ ವಿಚಿತ್ರ-ಚಮತ್ಕಾರಗಳ ಹಿನ್ನೆಲೆಯಲ್ಲಿ ನಾನು ವಿಜ್ಞಾನ ಮತ್ತು ಕುಜ್ಞಾನ ಎಂಬ ಪದಪುಂಜಗಳನ್ನು ಪ್ರಯೋಗಿಸುತ್ತಿದ್ದೇನೆ. ಕುಜ್ಞಾನವೆಂದರೆ ಅಜ್ಞಾನವಲ್ಲ; ಬದಲಿಗೆ ವಿಜ್ಞಾನದ ಮುಖವಾಡವನ್ನು ಧರಿಸಿರುವ, ರಾಜಕೀಯ ದುಷ್ಪ್ರೇರಣೆಯಿಂದ ಚಾಲ್ತಿಗೆ ಬಂದ, ಸಮಾಜದ ಪ್ರಗತಿಗೆ ಕಂಟಕವಾದ ಕೆಟ್ಟ ಜ್ಞಾನ.
ಪ್ರತಿ ವರ್ಷವೂ ಭಾರತೀಯ ವಿಜ್ಞಾನ ಸಮ್ಮೇಳನವು ನಡೆಯುತ್ತಿರುತ್ತದೆ. ಆದರೆ, ಹಿಂದೆಂದೂ ಇಲ್ಲದ ಮಹಾಪ್ರಚಾರ ಈ ಸಮ್ಮೇಳನದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದುದು ಮೀಡಿಯಾದ ವರ್ಗ ಚಾರಿತ್ರ್ಯದ ಒಂದು ಸಹಜ ಪ್ರಕ್ರಿಯೆ. ಈ ಸಮ್ಮೇಳನದ ಫಲಶೃತಿಯೆಂದರೆ ಇಡೀ ಜಗತ್ತಿನೆದುರು ಭಾರತ ಬೆತ್ತಲಾದುದು; ಹಾಸ್ಯಾಸ್ಪದವಾದುದು. ಇದಕ್ಕೆ ಕಾರಣ ವಿಜ್ಞಾನದ ಸಮ್ಮೇಳನದಲ್ಲಿ ವಿಜ್ಞಾನವನ್ನು ಕಿತ್ತೆಸೆದು ಅದರ ಸ್ಥಾನದಲ್ಲಿ ‘ಕುಜ್ಞಾನ’ಕ್ಕೆ ಪಟ್ಟಾಭಿಷೇಕ ಮಾಡಿದುದೇ ಆಗಿದೆ.
ಭಾಜಪವು ಸಮ್ಮೇಳನಕ್ಕೆ ಬಹಳ ಮುಂಚೆಯೇ “ವಿಜ್ಞಾನಿ (!) ಆನಂದ ಬೋಡಸ್” ಅವರು ಪ್ರಾಚೀನ ಭಾರತದ ವೈಮಾನಿಕ ಶಾಸ್ತ್ರದ ಬಗ್ಗೆ ಮಾತನಾಡಲಿರುವರೆಂದು ಪ್ರಚಾರ ಕೊಟ್ಟಿತ್ತು. ಸಹಜವಾಗಿಯೇ ವಿಶ್ವದ ದೃಷ್ಟಿ ಈ ಕಡೆಗೆ ಕೇಂದ್ರಿತವಾಗಿತ್ತು. ಆಶ್ಚರ್ಯವೆಂದರೆ, ಕ್ಯಾಲಿಫೋರ್ನಿಯಾದಲ್ಲಿ ನಾಸಾದ ಏಮ್ಸ್ ರಿಸರ್ಚ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ| ರಾಮ್‍ಪ್ರಸಾದ್ ಗಾಂಧೀರ್‍ಮನ್ ಅವರು ‘ಬೋಡಸ್’ರವರ ವ್ಯಾಖ್ಯಾನದ ವಿರುದ್ಧ ಒಂದು ಪಿಟಿಶನ್ ಸಲ್ಲಿಸಿದ್ದರು.ಅದಕ್ಕೆ 220 ವಿಜ್ಞಾನಿಗಳು ಹಾಗೂ ಪ್ರೊಫೆಸರುಗಳು ಸಹಿ ಮಾಡಿದ್ದರು.ಭಾರತದಲ್ಲಿ ವಿಜ್ಞಾನ ಮತ್ತು ಪುರಾಣದ ‘ಕಿಚಿಡಿ’ ತಯಾರಾಗುತ್ತಿದೆ; ಇಂಥ ಕೆಟ್ಟ ಅಪವ್ಯಾಖ್ಯಾನಗಳನ್ನು ತಡೆಗಟ್ಟಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ತನ್ನ ಭಾಷಣದಲ್ಲಿ ಗಾಂಧೀರಮನ್ ಮೋದಿ ಭಾಷಣವನ್ನು ಉಲ್ಲೇಖಿಸಿದ್ದರು. ಉದಾ: ‘ಗಣೇಶನ ಆನೆ ತಲೆ ಪ್ರಾಚೀನ ಭಾರತದ ಪ್ಲಾಸ್ಟಿಕ್ ಸರ್ಜರಿ’. 102ನೇ ವಿಜ್ಞಾನದ ಸಮ್ಮೇಳನ ಘನಘೋರವಾಗಿ ಆರಂಭವಾಯಿತು.
ಮತ್ತಷ್ಟು ಓದು
ನಕ್ಷತ್ರಗಳ ಭವಿಷ್ಯಕಾರನ ಆಸಕ್ತಿ-ಅನಾಸಕ್ತಿಗಳು
– ರೋಹಿತ್ ಚಕ್ರತೀರ್ಥ
ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ, ಭಾರತ ಕಂಡ ಅಪರೂಪದ ವಿಜ್ಞಾನಿ. ಸರ್ ಸಿ.ವಿ. ರಾಮನ್ ಅವರ ಅತ್ಯಂತ ನಿಕಟ ಸಂಬಂಧಿಯಾಗಿಯೂ ಚಂದ್ರ ಅಂತಹ ಸಂಬಂಧಗಳನ್ನು ತನ್ನ ಉತ್ಥಾನಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಆದರ್ಶ ವಿಜ್ಞಾನಿ ಎನ್ನುವುದಕ್ಕೆ ಎಲ್ಲ ವಿಧದಲ್ಲೂ ಅರ್ಹನಾಗಿದ್ದ ಮೆಲುನುಡಿಯ ಕಠಿಣ ದುಡಿಮೆಯ ಅಪಾರ ಬುದ್ಧಿಮತ್ತೆಯ ಈ ನೊಬೆಲ್ ಪುರಸ್ಕೃತ ಪಂಡಿತ ಖಾಸಗಿಯಾಗಿ ಹೇಗಿದ್ದರು? ಅವರ ಬದುಕಿನ ಒಂದಷ್ಟು ಸೀಳುನೋಟಗಳು ಇಲ್ಲಿವೆ. ಅಕ್ಟೋಬರ್ 19, ಚಂದ್ರರ ಬರ್ತ್‍ಡೇ.
ಹೆಚ್ಚಾಗಿ ವಿಜ್ಞಾನಿಗಳು ಎಂದರೆ ಒಂದೇ ಲೆಕ್ಕವನ್ನು ವರ್ಷಾನುಗಟ್ಟಲೆ ಯೋಚಿಸುವ, ಒಂದು ಪ್ರಯೋಗದ ಬೆನ್ನು ಬಿದ್ದು ಹಲವಾರು ದಶಕಗಳ ಬದುಕನ್ನು ತೇಯುವ ತಪಸ್ವಿಗಳು ಎನ್ನುವ ಕಲ್ಪನೆ ಇರುತ್ತದೆ. ನಮ್ಮ ಸುತ್ತಲಿನ ಅನೇಕ ವಿಜ್ಞಾನಿಗಳು ಅದಕ್ಕೆ ಪುಷ್ಟಿ ನೀಡುತ್ತಾರೆ ಎಂದೂ ಹೇಳಬಹುದು. ವಿಜ್ಞಾನಿಗಳಿಗೆ ಅದರ ಹೊರಗೂ ಒಂದು ಬದುಕು ಇರುತ್ತದೆ, ಅವರಿಗೆ ಬೇರೆ ವಿಷಯಗಳಲ್ಲೂ ಆಸಕ್ತಿ ಇದ್ದಿರಬಹುದು ಎನ್ನುವ ಯೋಚನೆ ಬರುವಂತೆ ಅವರ ಬದುಕು ಇರುವುದಿಲ್ಲ. ಇದ್ದರೂ ಅದು ಸಾರ್ವಜನಿಕರಿಗೆ ಅಷ್ಟೊಂದು ತೆರೆದಿರುವುದಿಲ್ಲ. ಹೀಗಾಗಿ, ವಿಜ್ಞಾನಿಗಳ ಬಗ್ಗೆ ನಾವು ಸಾಮಾನ್ಯರು ಅನೇಕ ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳುತ್ತೇವೆ. ಭಾರತದಲ್ಲಿ ಹುಟ್ಟಿಬೆಳೆದ ವಿಶ್ವಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸುಬ್ರಹ್ಮಣ್ಯನ್ ಚಂದ್ರಶೇಖರ ಅವರ ಬಗ್ಗೆಯೂ ಇಂತಹದೊಂದು ಕಲ್ಪನೆ ಬೆಳೆಯಲು ಎಲ್ಲ ಸಾಧ್ಯತೆಗಳೂ ಇವೆ! ಯಾಕೆಂದರೆ ಚಂದ್ರ (ಅವರನ್ನು ಉಳಿದೆಲ್ಲರೂ ಕರೆಯುತ್ತಿದ್ದದ್ದು ಹಾಗೆಯೇ. ಅವರಿಗೂ ಆ ಸಂಕ್ಷಿಪ್ತನಾಮ ಇಷ್ಟ) ತನ್ನ ವೈಯಕ್ತಿಕ ಜೀವನದ ಬಗ್ಗೆ ಹೊರಗೆ ಹೇಳಿಕೊಂಡದ್ದು ಕಡಿಮೆ. ಖಾಸಗಿ ಬದುಕಿನ ಬಗ್ಗೆ ಎಲ್ಲೂ ಹೇಳೇ ಇಲ್ಲ ಎನ್ನಬೇಕು! ಆದರೂ ಅವರ ಕೆಲ ಬರಹಗಳನ್ನು, ಕೆಲವೇ ನಿಮಿಷಗಳಿಗೆ ಮೊಟಕಾದ ಒಂದೆರಡು ಸಂದರ್ಶನಗಳನ್ನು ನೋಡಿದಾಗ, ಈ ಮನುಷ್ಯನಿಗೆ ವಿಜ್ಞಾನದ ಹೊರಗೆಯೂ ಕೆಲವೊಂದು ಆಸಕ್ತಿಗಳು ಇದ್ದವು ಎನ್ನುವುದು ತಿಳಿಯುತ್ತದೆ.
ಮಾತೃಪ್ರೇಮಕ್ಕೂ ಒ೦ದು ವೈಜ್ಞಾನಿಕ ವಿವರಣೆಯಿದೆ ಗೊತ್ತಾ…?
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ತು೦ಬ ಪ್ರೀತಿಯಿ೦ದ ಮಗನನ್ನು ಬೆಳೆಸಿರುತ್ತಾಳೆ ತಾಯಿ.ಮಗನನ್ನು ಮುದ್ದು ಮಾಡುತ್ತ,ಆತ ಕೇಳಿದ್ದೆಲ್ಲವನ್ನೂ ಕೊಡಿಸುತ್ತ,ಕ೦ದನನ್ನು ಸಲುಹಿದ ತಾಯಿಗೆ ಮಗನ ಸ೦ತೋಷವೇ ತನ್ನ ಸ೦ತೋಷ.ಹೀಗಿರುವಾಗ ಬೆಳೆದುನಿ೦ತ ಮಗ ಚೆಲುವೆಯೊಬ್ಬಳನ್ನು ಪ್ರೀತಿಸುತ್ತಾನೆ.ಹುಡುಗಿಗೂ ಇವನನ್ನು ಕ೦ಡರೆ ಇಷ್ಟ.ಆದರೆ ಇವನಮ್ಮ ಅ೦ದರೆ ಕಷ್ಟ.ಹಾಗಾಗಿ ತನ್ನ ಪ್ರೀತಿಗಾಗಿ ಬೇಡುವ ಹುಡುಗನೆದುರು ಷರತ್ತೊ೦ದನ್ನಿಡುತ್ತಾಳೆ.’ತನ್ನ ಪ್ರೀತಿ ಬೇಕಾದರೆ ,ಹೆತ್ತಮ್ಮನ ಹೃದಯವನ್ನು ಕಿತ್ತು ತರಬೇಕು’.ಬೆಳೆದುನಿ೦ತ ಹುಡುಗನಿಗೆ ಈಗ ತಾಯಿ ಬೇಕಿಲ್ಲ.ಆತುರಾತುರವಾಗಿ ತೆರಳಿದವನೇ ತಾಯಿಯ ಎದೆಯನ್ನು ಸೀಳಿ ಹೃದಯವನ್ನೆತ್ತುಕೊ೦ಡು ಪ್ರೇಯಸಿಯ ಬಳಿಗೋಡುತ್ತಾನೆ.ಉದ್ವೇಗದಿ೦ದ ಓಡುತ್ತಿದ್ದವನು ಮಾರ್ಗದಲ್ಲಿದ್ದ ಕಲ್ಲೊ೦ದಕ್ಕೆ ಎಡವಿ ಬಿದ್ದು ಬಿಡುತ್ತಾನೆ. ‘ಅಮ್ಮಾ..’ ಎ೦ದು ನೋವಿನಿ೦ದ ನರಳಿದವನಿಗೆ ,’ಪೆಟ್ಟಾಯ್ತಾ ಮಗು,ನೋಡಿಕೊ೦ಡು ಹೋಗಬಾರದೇನೋ ಕ೦ದಾ’ ಎ೦ದು ಸಾ೦ತ್ವನ ಹೇಳುವುದು ಅವನ ಕೈಲಿದ್ದ ತಾಯಿಯ ಹೃದಯವ೦ತೆ.ಬಹುಶ; ಈ ಕತೆಯನ್ನು ನೀವೆಲ್ಲರೂ ಕೇಳಿರುತ್ತೀರಿ.ತಾಯಿಯ ಮಹತ್ವವನ್ನು ಸಾರುವ ಈ ಕತೆ ಸಾಕಷ್ಟು ಹಳೆಯದ್ದೇ.ಇ೦ಥಹ ನೂರಾರು ಕತೆಗಳು,ಕವಿವರ್ಣನೆ,ಸಿನಿಮಾ ಹಾಡುಗಳು ಏನೇ ಬ೦ದರೂ ಅಮ್ಮನ ಪ್ರೀತಿಯನ್ನು ವರ್ಣಿಸುವುದು ಕಷ್ಟವೇ ಬಿಡಿ.ಆಕೆಯ ಪ್ರೀತಿಗಿರುವ ಶಕ್ತಿಯೇ ಅ೦ಥದ್ದು.ಹುಟ್ಟಿದಾರಭ್ಯ ಮಗುವಿನ ಜೀವಕ್ಕೆ ಜೀವವಾಗುವವಳು ಅಮ್ಮ.ಎದೆಹಾಲನುಣಿಸುತ್ತ ಮಗುವಿಗೆ ತನ್ನ ಜೀವ ಮತ್ತು ಜೀವನಗಳೆರಡನ್ನೂ ಬಸಿಯುವವಳು ಜನನಿ.ಕೂಸಿಗಾಗಿ ತನ್ನ ಜೀವವನ್ನಾದರೂ ಆಕೆ ಒತ್ತೆಯಿಟ್ಟಾಳು.ಮನುಷ್ಯರು ಬಿಡಿ.ತೀರ ಜಿ೦ಕೆ ಮೊಲದ೦ತಹ ಪ್ರಾಣಿಗಳೂ ಸಹ ತಮ್ಮ ಮರಿಗಳಿಗಾಗಿ ಹುಲಿ ಸಿ೦ಹಗಳೊಡನೆ ಹೋರಾಟಕ್ಕೆ ನಿ೦ತಿರುವುದನ್ನು ನೀವು ಗಮನಿಸಿರಬಹುದು.ಕವಿವಾಣಿಗೆ ನಿಲುಕದ,ಯೋಗಿಗಳ ಶಕ್ತಿಗೆ ಬಗ್ಗದ ಮಾತೃಪ್ರೇಮದ ಬಗ್ಗೆ ನಮಗೆ ತಿಳಿದಿರದ ಕೆಲವು ವಿಷಯಗಳನ್ನು ಇ೦ದು ಬರೆಯ ಬೇಕೆನಿಸಿದೆ.
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
ದರ್ಶನಗಳಲ್ಲಿ ತರ್ಕ:
“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.
ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.