ವಿಷಯದ ವಿವರಗಳಿಗೆ ದಾಟಿರಿ

Posts from the ‘ವಿಜ್ಞಾನ’ Category

5
ಜೂನ್

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ ರಿಲಿಜನ್ನುಗಳಲ್ಲಿ ತರ್ಕ:

ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.

ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.

ಮತ್ತಷ್ಟು ಓದು »

29
ಮೇ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನತರ್ಕ ಮನುಷ್ಯನಿಗಿರುವ ಒಂದು ಅತ್ಯುತ್ತಮ ಸಾಧನ. ಇದನ್ನು ಆಧರಿಸಿ ಮಾನವ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ವಿಜ್ಞಾನವಂತೂ ತರ್ಕದ ಆಧಾರದ ಮೇಲೆಯೇ ಬೆಳೆದಿರುವಂಥದ್ದು. ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕಕ್ಕೆ ವಿಜ್ಞಾನದಂತೆ ಮೊದಲನೇ ಪ್ರಾಶಸ್ತ್ಯವಿಲ್ಲವಾದರೂ, ತರ್ಕವನ್ನು ಸಂಪೂರ್ಣವಾಗಿ ಬಿಟ್ಟು ನಿಂತಿಲ್ಲ. ಪಾಶ್ಚಿಮಾತ್ಯ ರಿಲಿಜನ್ನುಗಳಿಗೂ ಭಾರತೀಯ ದರ್ಶನಗಳಿಗೂ ಇರುವ ಮುಖ್ಯ ವ್ಯತ್ಯಾಸ ಈಗಾಗಲೇ ನಿಲುಮೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹೀಗಾಗಿ ಅವುಗಳ ವ್ಯತ್ಯಾಸದ ಕಡೆಗೆ ಹೆಚ್ಚು ಗಮನ ಕೊಡದೇ ಇವೆರಡರಲ್ಲೂ ತರ್ಕದ ಸ್ಥಾನವೇನು ಎಂಬುದರ ಬಗ್ಗೆ ಚರ್ಚಿಸೋಣ.

ವಿಜ್ಞಾನದಲ್ಲಿ ತರ್ಕ:

ಗಣಿತೀಯ ತರ್ಕ ಪದ್ಧತಿಯನ್ನು ವಿಜ್ಞಾನ ಅಳವಡಿಸಿಕೊಂಡಿದೆ. ಗಣಿತೀಯ ತರ್ಕದಲ್ಲಿ ’ಅಥವಾ’, ’ಮತ್ತು’, ’ಆದರೆ’ ಮುಂತಾದ ಸಂಬಂಧಗಳು ಮುಖ್ಯವಾಗಿರುತ್ತವೆ. ಎಲ್ಲ ವೈಜ್ಞಾನಿಕ ಸಿದ್ಧಾಂತಗಳೂ ಒಂದು ಗಣಿತೀಯ ತರ್ಕವೊಂದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಕಾರಣ ಗಣಿತೀಯ ತರ್ಕದಿಂದ ಸಾಧಿಸಲ್ಪಟ್ಟ ಸಿದ್ಧಾಂತಗಳಲ್ಲಿ ಮೂಲ ಊಹೆಯು ತಪ್ಪಾಗಿಲ್ಲದಿದ್ದ ಪಕ್ಷದಲ್ಲಿ ಸಿದ್ಧಾಂತವು ಎಂದಿಗೂ ಸುಳ್ಳಾಗದು. ಐನ್ಸ್ಟೈನರ ಮಾತುಗಳಲ್ಲಿ ಹೇಳುವದಾದರೆ “ವೈಜ್ಞಾನಿಕ ಸಿದ್ಧಾಂತವೆಂಬುದು ಕೇವಲ ಕೆಲವೇ ಊಹೆಗಳನ್ನಾಧರಿಸಿ ನಿರ್ಮಿಸಿದ ಗಣಿತೀಯ ಮಾದರಿ”. ಉದಾಹರಣೆಗಾಗಿ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಅವರು ಮಾಡಿದ ಊಹೆಗಳು ಎರಡೇ. ಮೊದಲನೇಯದು ಭೌತಿಕ ಕ್ರಿಯೆಗಳು ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ತೆರನಾಗಿ ಅನ್ವಯವಾಗುತ್ತವೆ. ಎರಡನೇಯದು ಬೆಳಕಿನ ವೇಗ ಆ ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ಆಗಿರುತ್ತದೆ. ಎಲ್ಲಿಯವರೆಗೆ ಈ ಊಹೆಗಳನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುವದಿಲ್ಲವೋ ಅಲ್ಲಿಯವರೆಗೂ ಸಾಪೇಕ್ಷತಾ ಸಿದ್ಧಾಂತ ಸತ್ಯವೇ.

ಮತ್ತಷ್ಟು ಓದು »

8
ಮೇ

ವೈಜ್ಞಾನಿಕ ಮನೋಧರ್ಮ ಎಂದರೇನು?

– ರೋಹಿತ್ ಚಕ್ರತೀರ್ಥ

ವೈಜ್ಞಾನಿಕ ಮನೋಧರ್ಮನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ. ಕಂದಾಚಾರ ಎನ್ನುವ ಪದವನ್ನು ಕೇವಲ ಅರ್ಥಹೀನ ಆಚರಣೆ ಎಂಬುದಕ್ಕಷ್ಟೇ ಸೀಮಿತಗೊಳಿಸದೆ, ಮೌಢ್ಯ (ಅಜ್ಞಾನ), ಮೂಢನಂಬಿಕೆಗಳ ಮೇಲೆ ಅಚಲ ವಿಶ್ವಾಸ ಮತ್ತು ಕುರುಡುಭಕ್ತಿ, ತನ್ನದಲ್ಲದ ಯಾವ ಚಿಂತನೆಯನ್ನೂ ಒಪ್ಪದೆ ನಿರಾಕರಿಸುವುದು, ಹಾಗೆ ನಿರಾಕರಿಸಲು ವಿತಂಡವಾದ ಒಡ್ಡುತ್ತ ತನ್ನ ಮೂಗಿನ ನೇರಕ್ಕೆ ಕಾರಣಗಳನ್ನು ಕೊಡುವುದು, ವಿಜ್ಞಾನದ ಆಳಜ್ಞಾನ ಇಲ್ಲದಿರುವುದು, ವಿಜ್ಞಾನ ಗೊತ್ತಿದ್ದರೂ ಅರ್ಧಸತ್ಯಗಳನ್ನಷ್ಟೇ ಹೇಳುವುದು, ಒಂದೇ ವಿಷಯದ ಬಗ್ಗೆ ಎರಡುಮೂರು ಸಿದ್ಧಾಂತಗಳಿದ್ದಾಗ, ಅವುಗಳಲ್ಲಿ ಒಂದು ಮಾತ್ರ ನಿಜ ಎಂದು ಯಾವ ಪರೀಕ್ಷೆಗಳಿಲ್ಲದೆ ನಂಬುವುದು – ಇವೆಲ್ಲವೂ ಇರುವ ಒಂದು ಸಂಕೀರ್ಣ ಮನಸ್ಥಿತಿಗೆ ಸಮೀಕರಿಸಲು ಬಳಸಬಹುದಾದ ವಿಶಾಲಾರ್ಥದ ಪದವಾಗಿ ತೆಗೆದುಕೊಂಡಿದ್ದೇನೆ.

ಮೊದಲಿಗೆ “ವೈಜ್ಞಾನಿಕ” ಎಂದರೆ ಏನೆಂದು ನೋಡೋಣ. ವಿಜ್ಞಾನದ ತಳಹದಿ ಇರುವಂಥಾದ್ದು ವೈಜ್ಞಾನಿಕ. ವ್ಯಕ್ತಿಗೆ ಅಥವಾ ಸಮಾಜಕ್ಕೆ ಕೇವಲ ವೈಜ್ಞಾನಿಕ ದೃಷ್ಟಿಯೊಂದೇ ಇರಬೇಕು ಎನ್ನುವ ಯಾವ ನಿಬಂಧನೆಯೂ ಇಲ್ಲ. ವೈಜ್ಞಾನಿಕವಲ್ಲದ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತ ಮತ್ತು ಜೀವನದಲ್ಲಿ ಇರಬಹುದು. ಉದಾಹರಣೆಗೆ ಸಾಹಿತ್ಯ. ಒಂದು ಒಳ್ಳೆಯ ಸಾಹಿತ್ಯ (ಇದು ದ್ವಿರುಕ್ತಿ. “ಸಾಹಿತ್ಯ” ಅಂದರೇನೇ “ಹಿತವನ್ನುಂಟುಮಾಡುವಂಥದ್ದು”!) ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ; ಕೆಟ್ಟಸಾಹಿತ್ಯ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಮಾಡುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ಸಾಧಿಸಬಹುದೇನೋ. ಆದರೆ, ಅದೆಲ್ಲವನ್ನು ಆಳವಾಗಿ ಅಭ್ಯಾಸ ಮಾಡಿ ಯಾರೂ ಸಾಹಿತ್ಯ ಬರೆಯುವುದಿಲ್ಲ. ಲೇಖಕ ಮತ್ತು ಓದುಗ – ವಿಜ್ಞಾನದ ಯಾವ ತಲೆಬಿಸಿ ಇಲ್ಲದೆ ಬರೆಯುವ ಮತ್ತು ಓದುವ ಕ್ರಿಯೆಯನ್ನು ಮಾಡಬಹುದು. ಹಾಗಾಗಿ, ಸಾಹಿತ್ಯ ವೈಜ್ಞಾನಿಕತೆಯ ಛತ್ರಿಯಡಿ ಬರಬೇಕಾಗಿಲ್ಲ. ಇನ್ನು, ನಂಬಿಕೆಗಳು – ಇವೂ ಅಷ್ಟೆ, ವೈಜ್ಞಾನಿಕವಾಗಿರಬೇಕಾಗಿಲ್ಲ. ಉದಾಹರಣೆಗೆ ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ; ಯುಗಾದಿಗೆ ಬೇವುಬೆಲ್ಲ ತಿನ್ನುತ್ತೇವೆ; ರಂಜಾನ್ ತಿಂಗಳು ಉಪವಾಸವಿರುತ್ತೇವೆ, ಕ್ರಿಸ್‍ಮಸ್‍ಗೆ ಸಾಂತಾಕ್ಲಾಸ್‍ನ ಆಟ ಆಡುತ್ತೇವೆ. ಇವೆಲ್ಲ ಮನುಷ್ಯ ತನ್ನನ್ನು ಖುಷಿಯಾಗಿಟ್ಟುಕೊಳ್ಳಲು ಅಥವಾ ಹಬ್ಬಕ್ಕೆ ವಿಶೇಷತೆಯ ಮೆರುಗು ಕೊಡಲು ಅಳವಡಿಸಿಕೊಂಡಿರಬಹುದಾದ ಆಚರಣೆಗಳು. ಇವನ್ನು ವೈಜ್ಞಾನಿಕತೆಯ ನೆಲೆಯಲ್ಲಿ ನೋಡಬೇಕಾಗಿಲ್ಲ. ದೇವರು – ಎಂಬ ಕಲ್ಪನೆ – ಇದೂ ಅಷ್ಟೆ. ಮನುಷ್ಯನಿಗೆ ಹಲವು ಸಹಸ್ರವರ್ಷಗಳಿಂದ ಸದಾ ಕಾಡುವ ಸಂಗತಿಯಾಗಿ ನಿಂತಿರುವ “ದೇವರು” ಎಂಬ ಪರಿಕಲ್ಪನೆಯನ್ನು ಕೂಡ ವಿಜ್ಞಾನದಡಿ ತರಬೇಕಾಗಿಲ್ಲ. ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದು ವಿಜ್ಞಾನದ ಗುರಿ ಅಲ್ಲ. ಒಂದು ಸಂಗತಿ ವಿಜ್ಞಾನದ ಪರಿಧಿಗೆ ಬರುವುದಿಲ್ಲ; ವೈಜ್ಞಾನಿಕ ಅಲ್ಲ ಎನ್ನುವುದರಿಂದಲೇ ಅದರ ಮೌಲ್ಯನಿರ್ಣಯ ಆಗಿಹೋಗುವುದಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ವೈಜ್ಞಾನಿಕ ಅಲ್ಲದ್ದು ಅವೈಜ್ಞಾನಿಕ ಸರಿ. ಆದರೆ ನಾವಿಂದು ಕೊಟ್ಟಿರುವ ಮೂಢ, ಬುದ್ಧಿಯಿಲ್ಲದ ಎಂಬರ್ಥದಲ್ಲಿ ಅಲ್ಲ. ಮ್ಯಾರಥಾನ್ ಓಡುವ ಹಿಂದಿನ ದಿನ ಏನೇನು ಆಹಾರ ತೆಗೆದುಕೊಳ್ಳಬೇಕೆಂಬ ವಿಷಯದಲ್ಲಿ ವೈಜ್ಞಾನಿಕನಾದ ನಾನು, ಹಬ್ಬಕ್ಕೆ ಒಬ್ಬಟ್ಟು ತಿನ್ನುವ ವಿಚಾರ ಬಂದಾಗ ವಿಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳದ ಅವೈಜ್ಞಾನಿಕನಾಗುತ್ತೇನೆ. ಮತ್ತಷ್ಟು ಓದು »

30
ಏಪ್ರಿಲ್

ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ”

– ಪ್ರೇಮಶೇಖರ

ಪ್ರಿಯ ಓದುಗರೇ,

ಆತ್ಮವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ – ಭಾಗ ೪

ಅನ್ಯಲೋಕ ಜೀವಿಗಳ ಬಗೆಗಿನ ಲೇಖನಸರಣಿ ಮೆಚ್ಚುಗೆಗೆ ಪಾತ್ರವಾದಂತೇ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ಮೆಚ್ಚುಗೆಯ ಪತ್ರಗಳಿಗೆ ಖುಷಿಪಟ್ಟು ವೈಯುಕ್ತಿಕವಾಗಿ ಕೃತಜ್ಞತೆ ಹೇಳಿದ್ದೇನೆ, ಪ್ರಶ್ನೆಗಳಿಗೆ ಸಮಾಧಾನ ಹೇಳಲೂ ಪ್ರಯತ್ನಿಸಿದ್ದೇನೆ.  ಈ ಪ್ರಶ್ನೆಗಳು ನಿಮ್ಮವೂ ಆಗಿರಬಹುದು, ವಿವರಣೆಗಳನ್ನು ನೀವೂ ಬಯಸಿರಬಹುದು,ಎಲ್ಲ ಪ್ರಶ್ನೆಗಳಿಗೂ ಒಟ್ಟಿಗೆ ಪೂರಕ ವಿವರಗಳೊಂದಿಗೆ ಇಲ್ಲಿ ಉತ್ತರಿಸುವುದು ಈಗ ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ.ಯಾರಿಗೆ ಗೊತ್ತು, ಇದು ಯಾವುದೋ ಜನ್ಮದ ಯಾವುದೋ ಲೆಕ್ಕದ “ಸರಿಮಾಡುವಿಕೆ”ಯಾಗಿರಲೂಬಹುದು! ನಿಮ್ಮನಿಮ್ಮ ಭಾವಕ್ಕೆ, ನಿಮ್ಮನಿಮ್ಮ ಭಕುತಿಗೆ ಅನುಗುಣವಾಗಿ ಉತ್ತರವೆಂದಾಗಲೀ, ವಿವರಣೆಯೆಂದಾಗಲೀ ಪರಿಹಾರವೆಂದಾಗಲೀ ತೆಗೆದುಕೊಳ್ಳಿ.

ಪ್ರಶ್ನೆಗಳಲ್ಲಿ ಮುಖ್ಯವಾದುವನ್ನು ಆಯ್ದು ಸ್ಥೂಲವಾಗಿ ಎರಡು ಗುಂಪುಗಳನ್ನಾಗಿಸಿಕೊಳ್ಳುತ್ತೇನೆ.
1.‘ಸತ್ತ’ ನಂತರ ಏನಾಗುತ್ತದೆ? ಎಲ್ಲಿಗೆ ಹೋಗುತ್ತೇವೆ?
2. ಕೌಟುಂಬಿಕ ಸಂಬಂಧಗಳ ತೊಡಕುಗಳು, ಅವೇಕೆ ಅಸಹನೀಯವಾಗುತ್ತವೆ, ಅವುಗಳಿಗೆ ಪರಿಹಾರವೇ ಇಲ್ಲವೇ?  ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ.
ಮತ್ತಷ್ಟು ಓದು »

24
ಏಪ್ರಿಲ್

ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್

– ಪ್ರೇಮಶೇಖರ

ಆತ್ಮವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩

ನಾನೊಬ್ಬ ಪ್ರವಾದಿಯಲ್ಲ.ನನಗೆ ಏಕಾಏಕಿ ಯಾವ ಜ್ಞಾನೋದಯವೂ ಆಗಿಲ್ಲ.ವೈಜ್ಞಾನಿಕವಾಗಿ ಸಾಬೀತಾದ ಸತ್ಯಗಳ ಅಧ್ಯಯನದ ಆಧಾರದ ಮೇಲೆ, ಹಲವು ವರ್ಷಗಳ ಚಿಂತನೆಯ ಮೂಲಕ ಮಾನವಜನ್ಮದ ಉದ್ದೇಶದ ಬಗ್ಗೆ ನನ್ನದೇ ಆದ ಕೆಲವೊಂದು ವಿಚಾರಗಳನ್ನು ರೂಪಿಸಿಕೊಂಡಿದ್ದೇನೆ.ಅವುಗಳನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸತ್ಕರ್ಮ ಹಾಗೂ ಕುಕರ್ಮಗಳಿಗನುಗುಣವಾಗಿ ಮರುಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು ನಂಬಿಕೆಯನ್ನಿಟ್ಟಿದ್ದಾರೆ.ಈ ಮೂರು ಧರ್ಮಗಳ ತಳಹದಿಯೇ ಕರ್ಮ ಮತ್ತು ಕರ್ಮಕ್ಕನುಗುಣವಾಗಿ ಮರುಜನ್ಮ.  ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಪುನರ್ಜನ್ಮವನ್ನು ತಿರಸ್ಕರಿಸುತ್ತವೆ.ಇರುವುದೊಂದೇ ಜನ್ಮ,ನಂತರದ್ದು ಅಂತಿಮ ತೀರ್ಪು, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳುತ್ತವೆ.ಆದರೆ ಬೈಬಲ್‍ನ ಎರಡೂ ಒಡಂಬಡಿಕೆಗಳಲ್ಲಿ ಪುನರ್ಜನ್ಮದ ಬಗ್ಗೆ ಉಲ್ಲೇಖಗಳಿದ್ದುವೆಂದೂ, ಅವುಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಉದ್ದೇಶಪೂರ್ವಕವಾಗಿ ತೆಗೆದುಹಾಕಿದರು ಎಂದು ಹೇಳಲಾಗುತ್ತದೆ.ಅವರದನ್ನು ಮಾಡಿದ್ದು ಸದುದ್ದೇಶದಿಂದಲೇ.ಈ ಜನ್ಮದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಂದಿನ ಜನ್ಮದಲ್ಲಿ ಅವಕಾಶವಿದೆ ಎಂದು ನಂಬಿದ ಜನರು ತಪ್ಪುಗಳನ್ನೆಸಗುವುದಕ್ಕೆ ಹಿಂಜರಿಯದಿರಬಹುದು, ಅದಕ್ಕೆ ಬದಲಾಗಿ ಇರುವೊಂದೇ ಜನ್ಮ, ತಪ್ಪೆಸಗಿದರೆ ತಿದ್ದಿಕೊಳ್ಳಲು ಅವಕಾಶವೇ ಇಲ್ಲ, ಅದಕ್ಕನುಗುಣವಾಗಿ ಶಿಕ್ಷೆಯೂ ಶತಸಿದ್ಧ ಎಂದು ನಂಬಿಸಿದರೆ ಜನರು ತಪ್ಪುಗಳನ್ನೆಸಗಲು ಹಿಂಜರಿದು ಸದ್ಗುಣಿಗಳಾತ್ತಾರೆಂದು ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಆಶಿಸಿದ್ದರು.(ಇಷ್ಟಾಗಿಯೂ ಆವರ ಕಣ್ಣುತಪ್ಪಿಸಿ ಪುನರ್ಜನ್ಮದ ಬಗ್ಗೆ ಕೆಲ ಉಲ್ಲೇಖಗಳು ಬೈಬಲ್‍ನಲ್ಲಿ ಉಳಿದುಕೊಂಡಿವೆ.  ನೋಡಿ: ಮ್ಯಾಥ್ಯೂ 11:13-14, 17:10-13)

ಮತ್ತಷ್ಟು ಓದು »

17
ಏಪ್ರಿಲ್

ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩

– ಪ್ರೇಮಶೇಖರ

ಗ್ರಹಗಳು  ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
  ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨

ನಾವು ಹೋಮೋ ಸೇಪಿಯನ್ ಸೇಪಿಯನ್ ಮಾನವರು ಭೂಮಿಯಲ್ಲಿ ಕಾಣಿಸಿಕೊಂಡದ್ದು ಕೇವಲ ಮೂವತ್ತೈದು ಸಾವಿರ ವರ್ಷಗಳ ಹಿಂದೆ.ಆದರೆ ಅರವತ್ತು ಲಕ್ಷ ವರ್ಷಗಳ ಹಿಂದೆ ವಾನರನಿಂದ ಮಾನವ ಪ್ರತ್ಯೇಕವಾದದ್ದಕ್ಕಿಂತಲೂ ಹಿಂದೆಯೇ ಅಷ್ಟೇಕೆ ಕೋಟ್ಯಾಂತರ ವರ್ಷಗಳ ಹಿಂದೆಯೇ ಭೂಮಿಯಲ್ಲಿ ನಮ್ಮಂತಹ ಪೂರ್ಣ ಹೋಮೋ ಸೇಪಿಯನ್ ಸೇಪಿಯನ್ ಮಾನವರು ಇದ್ದ ಕುರುಹುಗಳು ದೊರೆತಿವೆ.ಅವರ ಪಾದದ ಗುರುತುಗಳಷ್ಟೇ ಏಕೆ,ಸುಸ್ಥಿತಿಯಲ್ಲಿರುವ ಪೂರ್ಣ ಆಸ್ಥಿಪಂಜರಗಳೇ ಚೀನಾ, ಅರ್ಜೆಂಟೈನಾ, ಮಧ್ಯ ಏಶಿಯಾ, ಅಮೆರಿಕಾ, ಸೇರಿದಂತೆ ಪ್ರಪಂಚದ ಎಲ್ಲೆಡೆ ಸಿಕ್ಕಿವೆ!  ಕ್ಯಾಲಿಫೋರ್ನಿಯಾದ ಟೇಬಲ್ ಮೌಂಟನ್‍ನಲ್ಲಿ ದೊರೆತಿರುವ ಅಸ್ಥಿಪಂಜರವೊಂದು ಮೂರುಕೋಟಿ ಮೂವತ್ತು ಲಕ್ಷ ವರ್ಷ ಹಳೆಯದು!  ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಕ್ಕಿರುವ ಅಸ್ಥಿಪಂಜರ ನಾಲ್ಕೂವರೆಕೋಟಿ ವರ್ಷ ಹಳೆಯದು!

ಡೈನೋಸಾರ್‍ಗಳು ನಿರ್ನಾಮವಾದದ್ದು ಆರೂವರೆ ಕೋಟಿ ವರ್ಷಗಳ ಹಿಂದೆ.ಅದಾದ ಮೇಲಷ್ಟೇ ಭೂಮಿಯಲ್ಲಿ ಸಸ್ತನಿಗಳು ಉಗಮವಾಗಿ ವಿಕಾಸ ಹೊಂದಿದ್ದು.ಆದರೆ,ಸಸ್ತನಿಯಾದ ಹೋಮೋ ಸೇಪಿಯನ್ ಸೇಪಿಯನ್ ಮಾನವ ಮತ್ತು ಡೈನೋಸಾರ್‍ಗಳ ಹೆಜ್ಜೆ ಗುರುತುಗಳು ಜತೆಜತೆಯಾಗಿಯೇ ಭೂಗರ್ಭದ ಒಂದೇ ಸ್ತರದಲ್ಲಿ ದೊರೆತು ಅವೆರಡೂ ಇದ್ದದ್ದು ಒಂದೇಕಾಲದಲ್ಲಿ ಎಂದು ಸೂಚಿಸುತ್ತವೆ.ಮಧ್ಯ ಏಶಿಯಾದ ತುರ್ಕ್‍ಮೆನಿಸ್ತಾನ,ಅಮೆರಿಕಾದ ಪೆನ್ಸಿಲ್‍ವೇನಿಯಾ ಮತ್ತು ಕೆಂಟಕಿ ಸೇರಿದಂತೆ ಹಲವೆಡೆ ಇವು ದೊರೆತಿವೆ.ಅಂದರೆ ಡಾರ್ವಿನ್‍ನ ವಿಕಾಸವಾದವನ್ನು ಕಸದಬುಟ್ಟಿಗೆಸೆದು ನಾವು ಭೂಮಿಯಲ್ಲಿ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೂ ಇದ್ದೇವೆ ಎಂದು ತಿಳಿಯಬೇಕೆ?

ಮತ್ತಷ್ಟು ಓದು »

10
ಏಪ್ರಿಲ್

ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨

– ಪ್ರೇಮಶೇಖರ

ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧

ಅನ್ಯಗ್ರಹ ಜೀವಿಗಳುಯುಎಫ್‍ಓಗಳಲ್ಲಿನ ‘ಅನ್ಯಲೋಕ’ ಜೀವಿಗಳು ಮನುಷ್ಯರನ್ನು,ಹೆಚ್ಚಾಗಿ ಸ್ತ್ರೀಯರನ್ನು ಅಪಹರಿಸುವ ಲೆಕ್ಕವಿಲ್ಲದಷ್ಟು ಪ್ರಕರಣಗಳು ವರದಿಯಾಗಿವೆ.ಈ ಬಗ್ಗೆ ಕೂಲಂಕಶವಾಗಿ “ವೈಜ್ಞಾನಿಕ ತನಿಖೆ” ನಡೆಸಿರುವ ಸಂಶೋಧಕರ ಪ್ರಕಾರ ಕೆಲವು ಅಪವಾದಗಳ ಹೊರತಾಗಿ ಎಲ್ಲ ‘ಅಪಹರಣ’ಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜರುಗುತ್ತವೆ.

ಅನ್ಯಲೋಕ ಜೀವಿಗಳು ಮನುಷ್ಯ ಸ್ತ್ರೀಯರ ಮೇಲೆ ಜೈವಿಕ ಪ್ರಯೋಗಗಳನ್ನು ನಡೆಸುತ್ತಿರುವಂತಿದೆ.ನಿದ್ರಿಸುತ್ತಿರುವ ಸ್ತ್ರೀಯರನ್ನು ಹಾಸಿಗೆಯಿಂದಲೇ ಎತ್ತಿಕೊಂಡು ತಮ್ಮ ವಾಹನದಲ್ಲಿ ಕೊಂಡೊಯ್ದು ಅವರ ಗರ್ಭಾಶಯಗಳಿಂದ ಅಂಡಾಣುಗಳನ್ನು ತೆಗೆದುಕೊಳ್ಳುತ್ತಾರೆ.ಆ ಅಂಡಾಣುಗಳನ್ನು ಬೇರಾವುದೋ ವೀರ್ಯಾಣುಗಳಿಂದ ಫಲಿತಗೊಳಿಸಿ ಅದೇ ಸ್ತ್ರೀಯರನ್ನು ಮತ್ತೆ ಹೊತ್ತೊಯ್ದು ಫಲಿತ ಅಂಡಾಣುಗಳನ್ನು ಅವರ ಗರ್ಭಾಶಯಗಳಲ್ಲಿಟ್ಟು ಅವರಿಗರಿವಿಲ್ಲದಂತೆ ಬೆಳೆಸಿ, ಕೆಲವಾರಗಳ ನಂತರ ಅವರನ್ನು ಮತ್ತೆ ಎತ್ತಿಕೊಂಡು ಹೋಗಿ ಭ್ರೂಣಗಳನ್ನು ತೆಗೆದುಕೊಳ್ಳುತ್ತಾರೆ.ಒಂದೆರಡು ವರ್ಷಗಳ ನಂತರ ಅದೇ ಮಹಿಳೆಯರನ್ನು ಮತ್ತೆ ತಮ್ಮ ವಾಹನದಲ್ಲಿ ಬೇರೆಲ್ಲಿಗೋ ಕರೆದುಕೊಂಡು ಹೋಗಿ ದಪ್ಪತಲೆಯ ವಿಚಿತ್ರ ಮಕ್ಕಳನ್ನು ತೋಳಲ್ಲಿಟ್ಟು “ಇದು ನಿನ್ನ ಮಗು, ಇದನ್ನು ಮುದ್ದು ಮಾಡು.ವಾತ್ಸಲ್ಯದ,ಭಾವನಾತ್ಮಕ ಸಾಮೀಪ್ಯದ ಅಗತ್ಯ ಈ ಮಗುವಿಗಿದೆ” ಎಂದು ಹೇಳುತ್ತಾರೆ.ಆ ಜೀವಿಗಳು ಭೂಮಿಯ ಗಂಡಸರನ್ನೂ ಎತ್ತಿಕೊಂಡು ಹೋಗಿ ಬಲವಂತವಾಗಿ ವೀರ್ಯ ಸಂಗ್ರಹಣೆ ಮಾಡಿಕೊಳ್ಳುವ ಉದಾಹರಣೆಗಳೂ ಇವೆ.ಬಹುಷಃ ತಮ್ಮ ಸ್ತ್ರೀಜೀವಿಗಳ ಅಂಡಾಣು ಜತೆ ಮನುಷ್ಯ ಪುರುಷರ ವೀರ್ಯಾಣುವಿನ ಸಂಗಮವನ್ನವರು ಮಾಡುತ್ತಿರಬಹುದು.ತಮ್ಮ ಸ್ತ್ರೀಜೀವಿಗಳ ಜತೆ ಭೂಮಿಯ ಪುರುಷರ ಲೈಂಗಿಕ ಸಮಾಗಮಕ್ಕೆ ಅನ್ಯಲೋಕಜೀವಿಗಳು ಅವಕಾಶ ಮಾಡಿಕೊಟ್ಟ ಉದಾಹರಣೆಗಳೂ ಇವೆ.

ಮತ್ತಷ್ಟು ಓದು »

3
ಏಪ್ರಿಲ್

ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧

– ಪ್ರೇಮಶೇಖರ

ಫ್ಲೈಯಿಂಗ್ ಸಾಸರ್ಫೆಬ್ರವರಿ 20-21ರ ಸುಮಾರಿಗೆ ಫ್ಲೈಯಿಂಗ್ ಸಾಸರೊಂದು ಕೆನಡಾದ ವಿನಿಪೆಗ್ ಸರೋವರಕ್ಕೆ ಬಿದ್ದ ಪ್ರಕರಣ ವರದಿಯಾಗಿದೆ.ಭೀಕರ ಚಳಿಯಿಂದಾಗಿ ಸರೋವರದ ನೀರು ಹಲವು ಅಡಿಗಳ ಆಳದವರೆಗೆ ಹಿಮಗಟ್ಟಿಹೋಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ ಮೆಟ್ಟಲುಮೆಟ್ಟಲಾಗಿರುವ ಪಿರಮಿಡ್ ಆಕಾರದ ಫ್ಲೈಯಿಂಗ್ ಸಾಸರ್ ಸರೋವರದ ಹಿಮಪದರವನ್ನು ಸೀಳಿಕೊಂಡು ಒಳತೂರಿಹೋಯಿತಂತೆ. ಇಷ್ಟರ ಹೊರತಾಗಿ ಬೇರಾವ ವಿವರಗಳೂ ದೊರೆಯುತ್ತಿಲ್ಲ. ಇದಕ್ಕೆ ಕಾರಣ, ವಿಷಯ ತಿಳಿದ ತಕ್ಷಣ ಕೆನಡಾ ರಕ್ಷಣಾಪಡೆಗಳು ವಿರಳ ಜನಸಂಖ್ಯೆಯ ಆ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿರುವುದು.ಅಷ್ಟೇ ಅಲ್ಲ, ಫ್ಲೈಯಿಂಗ್ ಸಾಸರ್‍ನ ಛಾಯಾಚಿತ್ರ ತೆಗೆದಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾಪಡೆಗಳು ವಶಕ್ಕೆ ತೆಗೆದುಕೊಂಡಿವೆ.ಸರೋವರಕ್ಕೆ ಬಿದ್ದದ್ದು ಫ್ಲೈಯಿಂಗ್ ಸಾಸರ್ ಅಲ್ಲವೆಂದೂ, ಕಡುಚಳಿಗಾಲದಲ್ಲಿ ವಿಮಾನಾಫಘಾತವಾದರೆ ರಕ್ಷಣಾಕ್ರಮಗಳನ್ನು ಹೇಗೆ ಕೈಗೊಳ್ಳಬೇಕೆಂದು ತಾವು ಪ್ರಯೋಗ ನಡೆಸುತ್ತಿರುವುದಾಗಿಯೂ ಸೈನಿಕರು ಮನೆಮನೆಗೆ ಹೋಗಿ ಜನರಿಗೆ ತಿಳಿಹೇಳುತ್ತಿದ್ದಾರೆ.ಯುಎಫ್‍ಓಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಅತ್ಯಂತ ಗೌಪ್ಯವಾಗಿರಿಸುವ ಸರ್ಕಾರಗಳ ನೀತಿಯ ಮುಂದುವರಿಕೆಗೆ ಇದು ಹೊಚ್ಚಹೊಸ ಉದಾಹರಣೆ.

ಮತ್ತಷ್ಟು ಓದು »

31
ಆಕ್ಟೋ

ವಿಜ್ಞಾನಿಗಳೇಕೆ ಪೂಜೆ ಮಾಡಬಾರದು?

– ಡಾ. ಪ್ರವೀಣ್ ಟಿ. ಎಲ್

ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ

Isro Chief in Turupatiಮಂಗಳಯಾನದ ಯಶಸ್ವೀ ಕಾರ್ಯಾಚರಣೆ ಬಗ್ಗೆ ಇಡೀ ದೇಶವೇ ಸಂತಸಪಟ್ಟಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತರ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿರುವುದು ಮಹಾನ್ ಸಾಧನೆಯೇ ಸರಿ. ಆದರೆ ಕೆಲವು ‘ಚಿಂತಕರು’ ಈ ಇಡೀ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ರಾಧಾಕೃಷ್ಣನ್‍ರವರ ನಡೆಯ ಕುರಿತು ತಮ್ಮ ಕುಹಕ, ತಕರಾರುಗಳನ್ನು ಅಂತರ್ಜಾಲ, ಮತ್ತಿತರ ಕಡೆಗಳಲ್ಲಿ ಹರಿಯಬಿಡುತ್ತಿದ್ದಾರೆ. ರಾಧಾಕೃಷ್ಣನ್‍ರವರು ‘MOM’ ನ ಸಣ್ಣ ಮಾದರಿಯೊಂದನ್ನು ತಿರುಪತಿಗೆ ತಂದು, ತಮ್ಮ ಧರ್ಮಪತ್ನಿಯೊಡನೆ ಪೂಜಾ ಕಾರ್ಯಗಳನ್ನು ನೇರವೇರಿಸಿದ್ದು ಅವರ ಟೀಕೆಗೆ ಕಾರಣ.

ಉಡಾವಣೆಗೊಂಡ ‘MOM’ ಮಂಗಳನ ತಲುಪುವ ಮುಂಚೆಯೇ ಇದೊಂದು ವಿಫಲಯತ್ನವೇನೋ ಎಂಬಂತೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇನ್ನೂ ಕೆಲವರು ವಿಫಲವಾಗಿದೆ ಎಂಬ ತೀರ್ಮಾನಕ್ಕೂ ಬಂದಿದ್ದರು. ಅಷ್ಟೇ ಅಲ್ಲದೇ ಈ ವಿಫಲತೆಗೆ ವಿಜ್ಞಾನಿಗಳು ತಿರುಪತಿಗೆ ತೆರಳಿ ‘ತಲೆಬೋಳಿಸಿ’ಕೊಳ್ಳದೇ ವಾಪಾಸಾದುದೇ ಪ್ರಮುಖ ಕಾರಣ ಎಂಬಂತೇ ಕುಹಕವಾಡಲು ಶುರುಮಾಡಿದರು. ಕುಹಕಗಳಿಗೆಲ್ಲಾ ಉತ್ತರವನ್ನು ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ.

ಈ ‘ವೈಜ್ಞಾನಿಕ’ ಚಿಂತಕರ ಪ್ರಮುಖ ತಕರಾರೆಂದರೆ, ವಿಜ್ಞಾನಿಗಳು ದೇವಸ್ಥಾನಗಳಿಗೆ ತೆರಳಿ ತಾವು ತಯಾರಿಸಿದ ಆಯುಧದ ಪೂಜೆ ನೆರವೇರಿಸಿರುವುದು ಎಷ್ಟು ಸರಿ. ವಿಜ್ಞಾನಿಗಳಿಗೆ ವಿಶ್ವದ ಸೃಷ್ಟಿಯ ಕುರಿತು ವೈಜ್ಞಾನಿಕ ಕಾರಣಗಳು ತಿಳಿದಿದ್ದರೂ ಸಹಾ ದೇವರ ಅಸ್ತಿತ್ವವನ್ನು ನಂಬುತ್ತಾರೆ ಮತ್ತು ತಮ್ಮ ವೈಜ್ಞಾನಿಕ ಪ್ರಯೋಗಗಳಲ್ಲಿ ದೇವರ ಕೈವಾಡ ಇದೆ ಎಂದುಕೊಳ್ಳುವುದು ಅಜ್ಞಾನ/ ಮೂಢತೆ ಎಂಬುದವರ ವಾದ. ISRO ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ರಾಧಾಕೃಷ್ಣನ್‍ರವರು ನೆನಪಿಡಬೇಕು ಎಂದು ಅಪ್ಪಣೆ ಹೊರಡಿಸುತ್ತಾರೆ.

ಮೇಲಿನ ತಕರಾರುಗಳು ಭಾರತದ ಕುರಿತ ಈ ಚಿಂತಕರ ಅಜ್ಞಾನವನ್ನೂ, ಅವೈಜ್ಞಾನಿಕತೆಯನ್ನೂ, ಮೌಢ್ಯತೆಯನ್ನೂ ಪ್ರದರ್ಶಿಸುತ್ತಿವೆ. ಈ ಚಿಂತಕರುಗಳು ತಪ್ಪಾದ ‘ಯೂರೋಪಿನ ಗ್ರಹಿಕೆ’ಗಳಿಂದ ಕೂಡಿದ ತಮ್ಮ ವಿವರಣೆಗಳನ್ನೇ ವೈಜ್ಞಾನಿಕ ಎಂದು, ತಾವೇ ವಿಜ್ಞಾನದ ಪಿತಾಮಹರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಜೊತೆಗೆ ಯೂರೋಪಿನ ಸೆಕ್ಯುಲರ್ ಚಿಂತನೆಯ ನಕಲನ್ನು ಭಾರತದಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತದೆ. ವಿಜ್ಞಾನಿಗಳ ಈ ನಡೆಯನ್ನು ಅವೈಜ್ಞಾನಿಕ, ಮೌಢ್ಯ ಎನ್ನಲು ಕಾರಣ ಅವರ ಆಚರಣೆ ಮತ್ತು ನಂಬಿಕೆಗಳ ನಡುವಿನ ಸಂಬಂಧ. ಅಂದರೆ ಬಾಹ್ಯಾಕಾಶ ನೌಕೆಯ ಉಡಾವಣೆಗೂ ದೇವರ ಮೇಲಿನ ನಂಬಿಕೆಗೂ ಸಂಬಂಧ ಇದೆ ಎಂಬುದು. ದೇವರೇ ಬಂದು ಕ್ಷಿಪಣಿಯನ್ನು ಉಡಾವಣೆ ಮಾಡುತ್ತಾನೆ ಎಂದೇನೂ ವಿಜ್ಞಾನಿಗಳು ನಂಬಿಲ್ಲವಲ್ಲ. ಹಾಗಿದ್ದರೆ ಅವರು ವರ್ಷಗಟ್ಟಲೇ ಶ್ರಮಪಟ್ಟು ತಯಾರಿಸುವ ಅವಶ್ಯಕತೆಯಾದರೂ ಏನಿತ್ತು. ಅಲ್ಲದೇ ಅದಕ್ಕೆ ನಿರ್ದಿಷ್ಟ ಕಾಲಕ್ಕೆ ಬೇಕಾಗುವಷ್ಟು ಇಂಧನವನ್ನು, ಆಧುನಿಕ ತಂತ್ರಜ್ಞಾನವನ್ನು ಬಳಸುವ ಅಗತ್ಯವಾದರೂ ಏಕೆ?

ಮತ್ತಷ್ಟು ಓದು »

16
ಆಕ್ಟೋ

ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು…

-ಗುರುರಾಜ್ ಕೊಡ್ಕಣಿ

ಮಂಗಳಯಾನಸುಮಾರು ಮೂರು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ  ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ ಇಪ್ಪತ್ನಾಲ್ಕನೆಯ ತಾರೀಕಿನ೦ದು ಮ೦ಗಳನ ಕಕ್ಷೆ ಸೇರಿಕೊ೦ಡಿದ್ದು ಈಗ ಇತಿಹಾಸ.ನಿಜಕ್ಕೂ ಇದೊ೦ದು ಐತಿಹಾಸಿಕ ಸಾಧನೆ.ಈ ವಿಜಯದ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದೆದುರು ಸಾಬೀತುಪಡಿಸಿದ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸ೦ಸ್ಥೆಯಾಗಿರುವ ಇಸ್ರೋ, ಇ೦ಥದ್ದೊ೦ದು ಸಾಧನೆ ಮಾಡಿರುವ ವಿಶ್ವದ ನಾಲ್ಕನೆಯ ಸ೦ಸ್ಥೆಯೆನಿಸಿಕೊ೦ಡಿತು.ಇದಕ್ಕೂ ಮೊದಲು ಅಮೇರಿಕಾ,ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸ೦ಸ್ಥೆಗಳು ಇ೦ಥಹ ಯಶಸ್ಸನ್ನು ಸಾಧಿಸಿದ್ದವು.ಅಲ್ಲದೆ ಈ ಸಾಧನೆಯನ್ನು ಮಾಡಿರುವ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎ೦ದರೇ ನಮಗೆ ಹೆಮ್ಮೆಯೆನಿಸಬಹುದು.ವಿಚಿತ್ರವೆ೦ದರೆ ವೈಜ್ನಾನಿಕ ಕ್ಷೇತ್ರದಲ್ಲಿ ಭಾರತಕ್ಕಿ೦ತ ಬಹು ದೂರ ಸಾಗಿರುವ ಚೀನಾ ದೇಶಕ್ಕೆ ಕುಜಗ್ರಹವಿನ್ನೂ ಕೈವಶವಾಗಿಲ್ಲ.ಸುಮಾರು ಸಾವಿರದ ಮುನ್ನೂರು ಕೇಜಿಗಳಷ್ಟು ತೂಗುವ ಉಪಗ್ರಹವನ್ನು ಅರವತ್ತಾರು ಕೋಟಿ ಕಿಲೋಮೀಟರುಗಳಷ್ಟು ದೂರಕ್ಕೆ ಕಳುಹಿಸಲು ಇಸ್ರೋ ಮಾಡಿರುವ ಖರ್ಚು ಕೇವಲ ನಾನೂರೈವತ್ತು ಕೋಟಿ ರೂಪಾಯಿಗಳು.ವಿಶ್ವದ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಮ೦ಗಳಯಾನವನ್ನು ಸಫಲಗೊಳಿಸಿರುವ ದೇಶವೆನ್ನುವ ಹಿರಿಮೆಯೂ ನಮ್ಮದೇ.ವರ್ಷಗಟ್ಟಲೇ ಕಷ್ಟಪಟ್ಟು ದುಡಿದು ಅ೦ಗಾರಕನನ್ನು ಗೆದ್ದ ಇಸ್ರೋದ ವಿಜ್ನಾನಿಗಳು ಅ೦ತಿಮ ಕ್ಷಣಗಳಲ್ಲಿ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.ದೊಡ್ಡದೊ೦ದು ಮಹತ್ವಾಕಾ೦ಕ್ಷೆಯ ಯಜ್ನವೊ೦ದರ ಸಫಲತೆಯ ಅದ್ಭುತ ತೃಪ್ತಿ ಅವರದ್ದು.

ಆದರೆ ಈ ಸ೦ಭ್ರಮಾಚರಣೆಯ ನ೦ತರ ನಡೆದ ಕೆಲವು ಘಟನೆಗಳು ನಮ್ಮ ಕೆಲವು ಪ್ರಗತಿಪರ ಬರಹಗಾರರ ಮತ್ತು ಹಲವು ರಾಜಕಾರಣಿಗಳ ರುಗ್ಣ ಮಾನಸಿಕತೆ ಹಿಡಿದ  ಕನ್ನಡಿಯ೦ತಿದ್ದವು.ಹೀಗೊ೦ದು ಯಶಸ್ಸಿನ ನ೦ತರ ಚಿಕ್ಕದೊ೦ದು ಅಭಿನ೦ದನಾ ಭಾಷಣವನ್ನು ಮಾಡಿದ ನಮ್ಮ ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರು,’ಇ೦ಥಹ ಆಕಾಶಯಾನದ ಕನಸು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಇತ್ತು’ ಎ೦ದುಬಿಟ್ಟರು.ನಮ್ಮ ಕೆಲವು ಪುಢಾರಿಗಳಿಗೆ ಅಷ್ಟು ಸಾಕಾಯಿತು.’ಈ ಮ೦ಗಳಯಾನದ ಯಶಸ್ಸಿಗೆ ನಾವು ಮೊಟ್ಟಮೊದಲು ಸ್ಮರಿಸಬೇಕಾಗಿರುವುದು ಸ್ವತ೦ತ್ರ ಭಾರತದ ಮೊದಲ ಪ್ರಧಾನಿ ನೆಹರೂರವರನ್ನು’ ಎ೦ದು ದಿಗ್ವಿಜಯ್ ಸಿ೦ಗ್ ಟ್ವೀಟಿಸಿದ್ದರೇ,’ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರಕಾರವನ್ನು ಸ್ಮರಿಸದೆ ಕೃತಘ್ನರ೦ತೆ ನಡೆದುಕೊ೦ಡರು’ ಎ೦ಬರ್ಥದಲ್ಲಿ ಕಾ೦ಗ್ರೆಸ್ಸಿನ ವಕ್ತಾರ ಸ೦ಜಯ್ ಝಾ ನುಡಿದರು. ಈ ಯೋಜನೆಗೆ ಸರ್ಕಾರಿ ನಿಧಿಯೇ ಬಳಕೆಯಾಗಿದ್ದರೂ ಇ೦ಥಹ ಗೆಲುವಿಗೆ ವಿಜ್ನಾನಿಗಳೇ ಪ್ರತ್ಯಕ್ಷ ಕಾರಣ ಹೊರತು ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಅರಿಯದಷ್ಟು ಸ೦ವೇದನಾರಹಿತರೇನಲ್ಲ ನಮ್ಮ ರಾಜಕೀಯ ನಾಯಕರು.ಆದರೂ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಅಭೂತಪೂರ್ವ ಯಶಸ್ಸಿನ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲ ಪ್ರಮುಖ ಪಕ್ಷಗಳು ಹೆಣಗಾಡಿದವು.ವೈಜ್ನಾನಿಕ ಯಶಸ್ಸನ್ನೂ ಸಹ ರಾಜಕೀಯದಾಟಕ್ಕೆ ಬಳಸಿಕೊ೦ಡ ರಾಜಕೀಯ ನೇತಾರರ ಚರ್ಯೆ ದೇಶದ ನಾಗರಿಕರಲ್ಲಿ ಪ್ರಜಾ ಪ್ರತಿನಿಧಿಗಳೆಡೆಗೊ೦ದು ತಿರಸ್ಕಾರ ಮೂಡಿಸಿದ್ದು ಸುಳ್ಳಲ್ಲ.

ಮತ್ತಷ್ಟು ಓದು »