ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ಧಿಗಳ ಜಾತ್ರೆ!
– ಸುಜಿತ್ ಕುಮಾರ್
ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ. ಮತ್ತಷ್ಟು ಓದು
ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ
– ನವೀನ್ ಗಂಗೋತ್ರಿ
ಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.
ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಭ್ಯಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ. ಕನ್ನಡದಂಥಾ ಕನ್ನಡಕ್ಕೇನಾಗಿದೆ?