ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅನಂತಮೂರ್ತಿ’

11
ಮಾರ್ಚ್

ಭಿತ್ತಿ : ಭಾವಪ್ರಧಾನ ವ್ಯಕ್ತಿತ್ವದ ಕಥನ

– ರಾಜಕುಮಾರ.ವ್ಹಿ.ಕುಲಕರ್ಣಿ,ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ

ಭಿತ್ತಿ‘ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಿ ಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು.ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣುದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು’. ಓದಿದ ಆ ಕ್ಷಣ ಬುದ್ದಿಯನ್ನೇ ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ ‘ಭಿತ್ತಿ’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.

‘ಭಿತ್ತಿ’ ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.

Read more »

5
ಮಾರ್ಚ್

ಸಂಸ್ಕಾರ ಮತ್ತು ವಂಶವೃಕ್ಷ: ಅಪೂರ್ಣದಿಂದ ಪೂರ್ಣದೆಡೆಗೆ

-ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ.

ಓದುವ ಮುನ್ನ:

ಸಂಸ್ಕಾರ ಮತ್ತು ವಂಶವೃಕ್ಷಸಿದ್ದಾಂತ, ಬದ್ದತೆ, ನಿಷ್ಠೆ ಇವು ಹೆಚ್ಚು ಬಿಗಿಯಾದಷ್ಟೂ ಬೌದ್ದಿಕ ತಿಳುವು ಉಸಿರುಗಟ್ಟುತ್ತದೆ. ಗ್ರಹಿಕೆಯು ಪೂರ್ವಾಗ್ರಹಗಳಿಂದ ಹೊರತಾಗಿದ್ದಷ್ಟೂ ನಿಲುವು ಪರಿಪಕ್ವವಾಗುತ್ತದೆ. ಚಿಂತನೆ ಮತ್ತಷ್ಟು ವಿಕಸಿತವಾಗುತ್ತದೆ. ಸಾಹಿತ್ಯ, ಸೃಷ್ಟಿ ಅಥವಾ ಇಡೀ ಮನುಕುಲವೇ ಆಗಲೀ ಸತ್ಯಾನ್ವೇ಼ಣೆಯ ಹಾದಿಯಲ್ಲಿ, ಸತ್ಯ-ಅಸತ್ಯಗಳ ಪರಾಮರ್ಷೆಯಲ್ಲಿ ನಿತ್ಯ ಚಲನಶೀಲ, ಅಪೂರ್ಣದಿಂದ ಪೂರ್ಣದೆಡೆಗೆ. ಪೂರ್ಣತೆ ಎಂಬುದು ಅಂತ್ಯವಿಲ್ಲದ ಹಾದಿ, ಇದರೆಡೆಗಿನ ಪಯಣ ನಿರಂತರ. ಇಗೋ ಮುಟ್ಟಿದೆ ಇದೇ ಅಂತ್ಯ, ಇದೇ ಸತ್ಯ ಎಂದು ಗ್ರಹಿಸಿದ ಮರುಕ್ಷಣಕ್ಕೆ ಮತ್ತೊಂದು ಹಾದಿ ಕಾಲ ಬುಡದಿಂದ ಹಾಯುತ್ತಾ ಅನಂತದವರೆಗೆ ಹಾಸಿರುತ್ತದೆ. ಧುರ್ಗಮವೋ ಸುಗಮವೋ ಹೆಜ್ಜೆ ಇಟ್ಟ ನಂತರವಷ್ಟೇ ತಿಳಿಯುತ್ತದೆ. ಗ್ರಹಿಕೆಯಿಂದ ಅರಿವು, ಅರಿವಿನಿಂದ ಜ್ಞಾನ, ಹೀಗೆ ಮುಂದೆ ಮುಂದೆ ಸಾಗಿದಷ್ಟೂ ತಾತ್ಕಾಲಿಕವಾಗಿಯಾದರೂ ಪೂರ್ಣತೆಯ ಅನುಭವ ದೊರೆಯುತ್ತದೆ. ಇದೊಂದು ಅಂತ್ಯವಿಲ್ಲದ ಹಾದಿ, ಪರಿಪೂರ್ಣತೆಯ ಗಮ್ಯದೆಡೆಗೆ ಆತ್ಮದ ನಿತ್ಯಪಯಣ. ಇಲ್ಲಿ ಅನುಭೂತಿಯೆಲ್ಲವೂ ಅಮೃತ; ಗಳಿಸಿದ್ದೆಲ್ಲವೂ ಶಾಶ್ವತ.

ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರಿಂದ, ವಿಮರ್ಷಕರಿಂದ ಅತೀ ಹೆಚ್ಚು ಚರ್ಚೆಗಳಿಗೆ, ವಾದ ವಿವಾದಗಳಿಗೆ ಕಾರಣವಾದ ಕೃತಿಗಳಲ್ಲಿ ದಿವಂಗತ ಡಾ.ಯು.ಆರ್‍ ಅನಂತಮೂರ್ತಿಯವರು ಬರೆದಿರುವ ಸಂಸ್ಕಾರ ಕಾದಂಬರಿ ಪ್ರಮುಖವಾದುದು. ಈ ಕಾದಂಬರಿಯ ಕಥಾವಸ್ತುವೇ ವಿವಾದಕ್ಕೆ ಮೂಲವಾಗಿದೆ. ಹಲವಾರು ವೇದಿಕೆಗಳಲ್ಲಿ ಈಗಾಗಲೇ ಚಿಂತನ-ಮಂಥನಗಳಿಗೆ ಸಂಸ್ಕಾರ ಕಾದಂಬರಿ ವಿಷಯ ವಸ್ತುವಾಗಿದೆ. ಇನ್ನು ಎಸ್.ಎಲ್ ಬೈರಪ್ಪ ರವರ ವಂಶವೃಕ್ಷ ಕಾದಂಬರಿಯು ಸಹಾ ಬಹುಚರ್ಚಿತವಾದ ಕಾದಂಬರಿಯಾಗಿದೆ. ಎಸ್.ಎಲ್.ಬೈರಪ್ಪ ರವರ ಅನೇಕ ಕಾದಂಬರಿಗಳ ಪೈಕಿ ಇದುವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಹೆಚ್ಚು ಪ್ರಸಿದ್ದವಾದ ಕೃತಿಯಾಗಿದೆ. ಸಂಸ್ಕಾರ ಮತ್ತು ವಂಶವೃಕ್ಷ ಈ ಎರಡೂ ಕಾದಂಬರಿಗಳು ಕ್ರಮವಾಗಿ ೧೯೬೫ ಮತ್ತು ೧೯೬೬ ರಲ್ಲಿ ಪ್ರಥಮವಾಗಿ ಪ್ರಕಟಗೊಳ್ಳುತ್ತವೆ.

Read more »

10
ಜನ

ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು

– ಮು ಅ ಶ್ರೀರಂಗ ಬೆಂಗಳೂರು

ದಾಟು - ಭೈರಪ್ಪಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.

ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

Read more »

4
ಆಕ್ಟೋ

ಮೂರ್ತಿಗಳ ದ್ವಂದ್ವಗಳು ಮತ್ತು ದೇವನೂರರ ಬಾಂಬುಗಳು

– ಮು.ಅ ಶ್ರೀರಂಗ, ಬೆಂಗಳೂರು

anantamurthy mattu devanuruಸುಮಾರು ಹತ್ತು ದಿನಗಳಿಂದ ಈಚೆಗೆ ನಮ್ಮೀ ಸುವರ್ಣ ಕರ್ನಾಟಕವು ಅನಂತಮೂರ್ತಿಯವರ ಹೇಳಿಕೆ,ಮರುಹೇಳಿಕೆ,ಅವುಗಳಿಗೆ ಮಾಧ್ಯಮಗಳ,ಜನರ ಪ್ರತಿಕ್ರಿಯೆಗಳು,ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು ಎತ್ತ ಎಂದು ಇತರ ಬುದ್ಧಿಜೀವಿಗಳ ಪಾಠಗಳಿಂದ ತುಂಬಿ ಹೋಗಿದೆ. ಈರುಳ್ಳಿ ಬೆಲೆ ಎಷ್ಟು ಏರಿತು,ರುಪಾಯಿ ಎಷ್ಟು ಆಳಕ್ಕೆ ಬಿತ್ತು ಇತ್ಯಾದಿಗಳ ಕಡೆಗೆ ನಮಗೆ ಆಸಕ್ತಿಯಿಲ್ಲ. ಅನಂತಮೂರ್ತಿಯವರು ಏನು ಹೇಳಿದ್ದಾರೆ?ಈಗ ಎಲ್ಲಿದ್ದಾರೆ?ಏನು ಮಾಡುತ್ತಿದ್ದಾರೆ?ಇದೇ ಮುಖ್ಯವಾಗಿದೆ. ಇದರ ಜತೆಗೆ ಈಗ ನಮ್ಮ ಖ್ಯಾತ ದಲಿತ ಮತ್ತು ಬಂಡಾಯ ಸಾಹಿತಿಗಳಾದಂತಹ ಮಾನ್ಯ ದೇವನೂರು ಮಹಾದೇವ ಅವರು ಬೆಂಗಳೂರು ಸುತ್ತಮುತ್ತಲಿನ ಬ್ರಾಹ್ಮಣ ಮತ್ತು ಲಿಂಗಾಯಿತರ townshipಗಳನ್ನು  ಪ್ರಾಣಹಾನಿ ಆಗದಂತೆ ಬಾಂಬ್ ಹಾಕಿ ನಾಶಪಡಿಸಲೇಬೇಕು ಎಂದು “ಫತ್ವಾ” ಹೊರಡಿಸಿದ್ದಾರೆ. . ಈ ಬಾಂಬ್ ಯೋಜನೆಯನ್ನು ಅವರು ಹೇಳಿದ್ದು ಕರ್ನಾಟಕ ಕೇಂದ್ರೀಯ ವಿ ವಿ ಮತ್ತು ಗುಲ್ಬರ್ಗ ವಿ ವಿ ಸಂಯುಕ್ತವಾಗಿ ಆಯೋಜಿಸಿದ ಕರ್ನಾಟಕ ದಲಿತ ಚಳುವಳಿ ಹಾಗು ಸಾಹಿತ್ಯದ “ಉದ್ಘಾಟನಾ” ಸಮಾರಂಭದಲ್ಲಿ. ಇದುವರೆಗೆ ವಿ ವಿ ಗಳ ಕೆಲವು ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ನಕ್ಸಲರ ಮತ್ತು ಮಾವೋವಾದಿಗಳ ಹಿಂಸೆಗೆ ಬೌದ್ಧಿಕ ಬೆಂಬಲವನ್ನು ಮಾತ್ರ ಕೊಡುತ್ತಿದ್ದರು. ಇನ್ನು ಮುಂದೆ ಭೌತಿಕ ಬೆಂಬಲವನ್ನೂ ಸಹ ನಿರ್ಭಯವಾಗಿ ನೀಡಬಹುದು. ಏಕೆಂದರೆ ಬುದ್ಧಿಜೀವಿಗಳು ಹೇಳಿದ ಮೇಲೆ ಮುಗಿಯಿತು. ಅವರು ಏನೇ ಮಾಡಿದರೂ, ಹೇಳಿದರೂ ಅದು ಅಪರಾಧವಲ್ಲ.

Read more »

18
ಸೆಪ್ಟೆಂ

ಅನಂತ ಮುಖದ ಮೂರ್ತಿಯವರ ಕಾಲ್ಪನಿಕ ಸಂದರ್ಶನ

– ಮು ಅ ಶ್ರೀರಂಗ ಬೆಂಗಳೂರು

anantamurthyಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಮ್ಮ ಹೆಮ್ಮೆಯ ಯು ಆರ್ ಅನಂತಮೂರ್ತಿಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಲೇಖನವೊಂದನ್ನು ಬರೆಯುವುದಕ್ಕಿಂತ ಒಂದು ಕಾಲ್ಪನಿಕ ಸಂದರ್ಶನದ ಮೂಲಕ ಅವರ ನಡೆ-ನುಡಿಗಳನ್ನು ತಿಳಿದುಕೊಳ್ಳಬಹುದು ಎಂದು ಅನಿಸಿತು. ಅನಂತಮೂರ್ತಿಯವರದ್ದು ಸಮ್ಮೋಹಕವಾದ  ರೂಪ;ಅವರ ಭಾಷಣದ ಶೈಲಿ ಅನನ್ಯ. ಆ ಮಾತಿನ ಶೈಲಿಯನ್ನು ಜ್ಞಾಪಿಸಿಕೊಂಡು ಈ ಕಾಲ್ಪನಿಕ ಸಂದರ್ಶನವನ್ನು ಓದಿದರೆ ನಿಮಗೆ ಆಪ್ತವೆನಿಸಬಹುದು. ಒಮ್ಮೆ ಪ್ರಯತ್ನಿಸಿ.

ಪ್ರಶ್ನೆ: ನಿಮ್ಮನ್ನು ಗುಲ್ಬರ್ಗ ಕೇಂದ್ರಿಯ ವಿ. ವಿ. ಕುಲಪತಿಗಳನ್ನಾಗಿ ಈಗಾಗಲೇ ಕೆಂದ್ರ ಸರ್ಕಾರ ನೇಮಿಸಿದೆ. ಇದಕ್ಕೂ ಮತ್ತು ಹಿಂದೆ ನಡೆದ ಅಸ್ಸಾಂ ಹಾಗು ಮುಂಬೈ ಗಲಭೆಗಳ ಬಗ್ಗೆ ತಾವು ಇದುವರೆಗೂ ಏನೂ ಹೇಳಿಕೆ ನೀಡದೆ ಇರುವುದಕ್ಕೂ ಏನಾದರು ಸಂಬಂಧ,ಹಿಡನ್ ಅಜೆಂಡಾ ಉಂಟೆ? ಜತೆಗೆ ಇತ್ತೀಚಿನ ಉತ್ತರ ಪ್ರದೇಶದ ಗಲಭೆಗಳ ಬಗ್ಗೆಯೂ ತಾವು ಪ್ರತಿಕ್ರಿಯಿಸಿಲ್ಲ ಏಕೆ?

ಅನಂತಮೂರ್ತಿ: ನೋಡಿ ಇದಕ್ಕೆ ಹಿಡನ್ ಅಜೆಂಡಾ ಎಂಬ ಪದದ ಪ್ರಯೋಗ ಸರಿಯಲ್ಲ. ಈ ಪ್ರಶ್ನೆಗೆ ನಾನು ಎರಡು ಆಯಾಮಗಳ ಮೂಲಕ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ನಂಬಿರುವ ಸೆಕ್ಯುಲರಿಸಂ ಪ್ರಕಾರ ನಾವು ಅಂದರೆ ಬಹುಸಂಖ್ಯಾತರು ಯಾವಾಗಲು ಅಲ್ಪಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು. ಗಾಂಧೀಜಿಯವರು ಹೇಳಿದ್ದೂ ಇದನ್ನೇ. ನಮ್ಮ ಪ್ರಜಾತಂತ್ರದ ತಳಪಾಯ ನಿಂತಿರುವುದು ನಮ್ಮ ಹಿರಿಯರ ಈ ಆಶಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಳ್ಳುವುದರಲ್ಲಿ ಮಾತ್ರ. ಈ ಕಾರಣದಿಂದ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ತಾವು ಹೇಳಿದ ಆ ಎರಡೂ ಘಟನೆಗಳ ಬಗ್ಗೆ (ಅದು ಗಲಭೆಯಲ್ಲ) ಮೌನವಹಿಸಿದ್ದು. ಇನ್ನು ಎರಡನೇ ಆಯಾಮವೆಂದರೆ ನಾನು ಈ ನನ್ನ ೮೦ರ ವಯಸ್ಸಿನಲ್ಲಿ ಕುಲಪತಿಯಾಗಲು ಒಪ್ಪಿಕೊಂಡಿರುವುದಕ್ಕೆ ನನಗೆ “ಕುರ್ಚಿ”ಯ ವ್ಯಾಮೋಹ ಕಾರಣವೆಂದು ಅಲ್ಲಲ್ಲಿ ಕೆಲವರು ಅಂದು ಕೊಂಡಿರಬಹುದು. ಆದರೆ ಅವರು ಮರೆತಿರಬಹುದಾದ ಒಂದು ಸಂಗತಿಯೆಂದರೆ ನಾನು ಕುಲಪತಿಯಾಗಿರುವುದು ನಮ್ಮ ಸುವರ್ಣ ಕರ್ನಾಟಕದ ಒಂದು ಕೇಂದ್ರಿಯ ವಿ ವಿ ಗೆ. ಕುಲಪತಿಯಾಗಿ ಅಲ್ಲಿ ನನಗೆ ದೊರಕಬಹುದಾದಂತಹ ಅಧಿಕಾರ ಏನಿದೆ ಅದರಿಂದ ಆ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಬದಲಾವಣೆಯ ಒಂದು ವಾತಾವರಣ ನಿರ್ಮಿಸಲು ಪ್ರಯತ್ನಿಸುವ ಆಸೆ ಇದೆ. ಅದರ ರೂಪ-ರೇಷೆಗಳ ಬಗ್ಗೆ ನಾನು ಗಾಢವಾಗಿ ಯೋಚಿಸುತ್ತಿದ್ದೆ. ನಾನು “ಮೌನಿ”ಯಾಗಿರಲು ಇದೂ ಒಂದು ಕಾರಣವಾಗಿರಬಹುದು. ಇನ್ನು ಉತ್ತರ ಪ್ರದೇಶದ ಘಟನೆಗಳ ಬಗ್ಗೆ “ಸದ್ಯದ”ಪರಿಸ್ಥಿತಿಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದರೆ ಅದು ಸೆಕ್ಯುಲರ್ ಅನಿಸಿಕೊಳ್ಳಬಹುದುದೆಂದು ಯೋಚಿಸುತ್ತಿದ್ದೇನೆ.

Read more »