ಗೀತೆಯನ್ನು ಅರ್ಥೈಸಿಕೊಳ್ಳಲಾಗದವರು ಬದುಕಿನ ವಾಸ್ತವಗಳನ್ನು ಅರಗಿಸಿಕೊಳ್ಳಲಾರರು
– ಮಯೂರ ಲಕ್ಷ್ಮಿ
“ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು… ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” – ಆಲ್ಬರ್ಟ್ ಐನ್ ಸ್ಟೀನ್
ಭಗವದ್ಗೀತೆಯನ್ನು ಉದಾತ್ತ ಮನಸ್ಸುಗಳಿಂದ ವಿಶಾಲ ಹೃದಯಗಳಿಂದ ಅರ್ಥಮಾಡಿಕೊಳ್ಳುವವರಿಗೆ ಅದು ಸಕ್ಕರೆಯಂತೆ ಸಿಹಿ, ಅತ್ಯಂತ ಸರಳವಾದ ರೀತಿಯಲ್ಲಿ ಮನುಷ್ಯನು ಈ ಭೂಮಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸುವ ಸುಲಭ ಸಾಧನ, ಸಂಕುಚಿತ ಮನಸ್ಸುಗಳಿಂದ ಅದರ ವ್ಯಾಪ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ತಪ್ಪುಗಳನ್ನೇ ಹುಡುಕಿ ನೋಡುವವರಿಗೆ ಅದು ಅರ್ಥವಾಗದ ಕ್ಲಿಷ್ಟ ಗ್ರಂಥವೇ ಸರಿ! ಇನ್ನು ಗೀತೆ ಎಂದರೆ ಕೋಮುವಾದಿ ಗ್ರಂಥ ಶ್ರೀಕೃಷ್ಣನೆಂದರೆ ಸ್ತ್ರೀಲೋಲ ಎಂಬ ಭಾವನೆಯಿಂದಲೇ ನೋಡುವವರಿಗೆ ಇದು ಅರ್ಥವಾದೀತಾದರೂ ಹೇಗೆ? ಕೃಷ್ಣನ ರಾಜನೀತಿಯ ನೈಪುಣ್ಯತೆಯನ್ನು ಮುತ್ಸದ್ದಿತನವನ್ನೂ ಅವನ ಸಮಾಜ ಪರಿವರ್ತನೆಯ ಮತ್ತು ಧರ್ಮರಕ್ಷಣೆಯ ಸಂಕಲ್ಪವನ್ನು ಒಪ್ಪದವರು ಅವನ ವಾಣಿಯಾದ ಗೀತೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲಾ. ಹಿಂದೂ ಧರ್ಮಗ್ರಂಥಗಳನ್ನು ಟೀಕಿಸಿ ಬುದ್ಧಿವಂತರೆನಿಸಿಕೊಳ್ಳುವುದು ಕೆಲವರ ಹವ್ಯಾಸ.
ಪ್ರಪಂಚದ ಎಲ್ಲಾ ಮಹನೀಯರೂ ದಾರ್ಶನಿಕರೂ ಗೀತೆಯನ್ನು ಕೋಮುವಾದವನ್ನು ಪ್ರಚೋದಿಸುವ ಗ್ರಂಥವೆಂದೇ ನೋಡಿದ್ದಲ್ಲಿ ಭಗವದ್ಗೀತೆ ವಿಶ್ವವ್ಯಾಪಿ ಎನಿಸಿಕೊಳ್ಳುತ್ತಿತ್ತೇ? ಸಾಹಿತ್ಯವೆಂದರೆ ಜ್ಞಾನದ ಸಾಧನಗಳು,ಜಾಗೃತಿಯ ಚೇತನಗಳು.. ಇಂತಹ ಪುಸ್ತಕಗಳನ್ನೋದಿ ವಿವೇಕಿಗಳಾಗಲೂ ಬಹುದು, ವಿಮರ್ಶಕರಾಗಲೂಬಹುದು.ಪುಸ್ತಕಗಳ ವಿಮರ್ಶೆ ಓದುಗರಿಗೆ ಬಿಟ್ಟದ್ದು, ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಇದೆ ಎನ್ನವುದು ನಿಜವಾದರೂ ಅಭಿವ್ಯಕ್ತಿಯ ಹೆಸರಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ ಪುಸ್ತಕಗಳನ್ನು ಸುಡುವುದು ಪರಿಹಾರವೆಂದು ವಾದಿಸುವುದು ಭ್ರಮೆಯಲ್ಲದೇ ಇನ್ನೇನು? ಪ್ರತಿಯೊಂದನ್ನೂ ತಾರ್ಕಿಕ ಮಟ್ಟದಲ್ಲೇ ವಿಮರ್ಶಿಸುತ್ತಾ ಹೋದರೆ ಹೊಸ ಹೊಸ ರೀತಿಯ ‘ಇಸಂ’ಗಳ ಸೃಷ್ಟಿಯಾಗುತ್ತಾ ಹೋಗುವುದೇ ಹೊರತು ಬೌದ್ಧಿಕ ಪರಾಮರ್ಶೆಯಾಗದು.