ಬಡ್ಜೆಟ್ಟೆಂಬ ಬಕಾಸುರ
– ನಾಗೇಶ ಮೈಸೂರು
ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.
ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ. ಮತ್ತಷ್ಟು ಓದು