ಎತ್ತಿನ ಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!
– ಪ್ರಸಾದ್ ಕುಮಾರ್,ಮಾರ್ನಬೈಲ್
ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ. ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ,ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ ಮಾತ್ರ ಅನಾವಶ್ಯಕ ಪೌರುಷದ ಪ್ರದರ್ಶನ ನೀಡುತ್ತಿದೆ! ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕಳಸಾ ಬಂಡೂರಿ ಯೋಜನೆಯೇನಾದರೂ ಜಾರಿಯಾದರೆ ಅದರಿಂದ ರಾಜ್ಯಕ್ಕೆ ಲಾಭವಲ್ಲದೆ ಯಾವ ವಿಧದ ನಷ್ಟವೂ ಇಲ್ಲ. ಆದರೆ ಅದೇ ಎತ್ತಿನ ಹೊಳೆ ಯೋಜನೆಯೇನಾದರು ಕಾರ್ಯರೂಪಕ್ಕೆ ಬಂತು ಎಂದಾದರೆ ಅದರಿಂದ ರಾಜ್ಯವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಅಧಿಕ! ಕರಾವಳಿಗರ ಭಾವನೆಗಳಿಗೆ ಬೆಲೆ ನೀಡದೆ ಅತ್ತ ಬಯಲು ಸೀಮೆಗೂ ಸರಿಯಾಗಿ ನೀರು ದೊರೆಯದೆ ಎಲ್ಲಾ ರೀತಿಯಲ್ಲೂ ವಂಚನೆಗೈದಂತಾಗಲಿದೆ ಇಲ್ಲಿ! ಮೇಲಾಗಿ ಇದು ಸುಪ್ತವಾಗಿರುವ ಕರಾವಳಿಗರ ಪ್ರತ್ಯೇಕತೆಯ ಕೂಗಿಗೂ ಭವಿಷ್ಯದಲ್ಲಿ ಒಂದಷ್ಟು ಪುಷ್ಠಿ ನೀಡುವ ಸಾಧ್ಯತೆಯೂ ಇದೆ! ಮೇಲಾಗಿ ಇಲ್ಲಿ ಸಿಗುವ ನೀರಿನ ಬಗ್ಗೆಯೇ ದೊಡ್ಡ ಮಟ್ಟದ ಸಂಶಯವಿರುವುದರಿಂದ ಪೂರ್ಣ ಯೋಜನೆಯೇ ಅಂತಿಮವಾಗಿ ವಿಫಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ!
ಹಾಗಿದ್ದರೂ ಯಾಕಿಷ್ಟು ಆತುರ!?
ಮತ್ತಷ್ಟು ಓದು
ನಾನು ನೇತ್ರಾವತಿ
– ಭರತೇಶ ಅಲಸಂಡೆಮಜಲು
ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ಅದೇ ನಿಮ್ಮ ನೇತ್ರಾವತಿ ನಾನು.
ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ … ಹೀಗೆ…ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ…