ವಿಷಯದ ವಿವರಗಳಿಗೆ ದಾಟಿರಿ

Posts tagged ‘ಎದೆಗೆ ಬಿದ್ದ ಅಕ್ಷರ’

26
ಮಾರ್ಚ್

ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ

– ರಾಜಕುಮಾರ.ವ್ಹಿ.ಕುಲಕರ್ಣಿ

ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ

ಎದೆಗೆ ಬಿದ್ದ ಅಕ್ಷರ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ.ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೆಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರು ಬರಹಗಳು ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. 1973 ರಲ್ಲಿ ‘ದ್ಯಾವನೂರು’, 1982 ರಲ್ಲಿ ‘ಒಡಲಾಳ’, 1988 ರಲ್ಲಿ ‘ಕುಸುಮ ಬಾಲೆ’ಯ ನಂತರ ಪ್ರಕಟವಾದ ಕೃತಿ ಈ ‘ಎದೆಗೆ ಬಿದ್ದ ಅಕ್ಷರ’.

ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜಿನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು.ಜೊತೆಗೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೂ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್‍ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರರಷ್ಟೇ ಗಾಂಧಿಯನ್ನೂ ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ ‘ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ’ ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯಗಳ ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳೇ ಎದ್ದು ಕಾಣುತ್ತವೆ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು’ ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.

ಮತ್ತಷ್ಟು ಓದು »