ಹಸಿರ ಪಯಣ …
– ಸುಜಿತ್ ಕುಮಾರ್
ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! ಮತ್ತಷ್ಟು ಓದು
ಆಲಾಪ..
– ಸುಜಿತ್ ಕುಮಾರ್
‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’
‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.
‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.
ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ. ಮತ್ತಷ್ಟು ಓದು
ಕಥೆ: ಸ೦ದರ್ಶನ
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಪ್ರಕಾಶ್ ಹೊರಟಿರಾ ಇ೦ಟರ್ವ್ಯೂ ಗೆ ..? ’ಎ೦ದು ಕೇಳಿದರು ಬಾಸ್ ಪ್ರಕಾಶನಿಗೆ,
’ಯಸ್ ಬಾಸ್,ಆನ ದಿ ವೆ’ ಎ೦ದ ಪ್ರಕಾಶ ,ಬೈಕಿನ ಪಕ್ಕೆಗೊ೦ದು ಒದೆಯುತ್ತಾ…
’ಓಕೆ .ಆಲ್ ದಿ ಬೆಸ್ಟ್,ಚೆನ್ನಾಗಿ ಮಾಡಿ,ಮಾಡ್ಲೇ ಬೇಕು ಗೊತ್ತಾಯ್ತಾ..’? ಎ೦ದರು ಬಾಸ್.
’ಡೆಫಿನೆಟ್ಲಿ ಬಾಸ್,ಚಿ೦ತೆನೇ ಬೇಡ ನಮ್ಮ ಪೇಪರಿನ ಬೆಸ್ಟ್ ಇ೦ಟರ್ವ್ಯೂ ಇದಾಗಿರುತ್ತೇ ನೊಡ್ತಿರಿ..’ ಎ೦ದವನೇ ಅಕ್ಸಲರೇಟರ್ ಹೆಚ್ಚಿಸಿ ,ಸೊ೦ಯ್ಯನೇ ಹೊರಟ.
ಇಷ್ಟಕ್ಕೂ ಪ್ರಕಾಶ ಹೊರಟಿರುವುದು ನಗರದ ಭಾರಿ ಉದ್ಯಮಿ ದಿನಕರನ್ ಚಷ್ಮೇರಾ ನ ಪತ್ರಿಕಾ ಸ೦ದರ್ಶನಕ್ಕಾಗಿ.ದಿನಕರನ್ ಚಷ್ಮೇರಾ: ಆ ಹೆಸರೇ ಒ೦ದು ಸ೦ಚಲನ .ಒ೦ದು ಚಿಕ್ಕ ಗೂಡ೦ಗಡಿಯಿ೦ದ ತನ್ನ ಜೀವನ ಆರ೦ಭಿಸಿದ ದಿನಕರನ್ ಇವತ್ತು ಸರಿ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳ ಮಾಲೀಕ.ಇಡಿ ದೇಶದ ತು೦ಬೆಲ್ಲಾ ಆತನ ಉದ್ದಿಮೆಗಳಿವೆ.ಆತ ಯಾವ ಉದ್ದಿಮೆಗೆ ಕೈ ಹಾಕಿದರೂ ಸೋಲು ಕ೦ಡವನಲ್ಲ.ಜವಳಿ,ಹೊಟೆಲು,ಚಿನ್ನದ ವ್ಯಾಪಾರ,ರಿಯಲ್ ಎಸ್ಟೆಟ್ ಹೀಗೆ ಎಲ್ಲದರಲ್ಲೂ ಆತ ನ೦ಬರ್ ಒನ್ ಆಗಿದ್ದವನು.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ. ಅವನ ಉದ್ದಿಮೆಗಳನ್ನೆಲ್ಲಾ ಈಗ ಅವನ ಮಗ ಕುಲಸೇಕರನ್ ನೋಡಿಕೊಳ್ಳುತ್ತಿದ್ದಾನೆ
ನನ್ನ ಆಕಾಶಯಾನ
–ಕವಿ ನಾಗರಾಜ್
ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು.
ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ – ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ? ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;
ದಾರಿ
-ಪ್ರೇಮಶೇಖರ
ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ. ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.
ಕೆಂಪುಮಣ್ಣಿನ ಹಾದಿ. ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು. ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ. ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು. ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು. ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು. ಆಗ ಕಂಡಿತು ಆ ಊರು. ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.
ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ! ಗ್ರಾಮಸಿಂಹಗಳಿಲ್ಲದ ಊರೂ ಉಂಟೇ? ಅವಳಿಗೆ ಅಚ್ಚರಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು. ಬೀದಿಯಲ್ಲಿ ಜನರೇ ಇಲ್ಲ! ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇ? ಎಂಥಾ ಜನರಪ್ಪ! ಎಂಥಾ ಊರಪ್ಪ!
ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ! ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ! ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು. ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು. ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.
ನಿರೀಕ್ಷೆ
– ರಂಜಿತ್ ಅಡಿಗ
ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ.
ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ?
ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ ” ಹಣವಂತರೆಲ್ಲಾ ಗುಣವಿರುವವರಲ್ಲ” ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!
**********
ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ.
ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.
ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.
ಜೀವನವೆಂದರೆ ಅಲ್ಪವಿರಾಮಗಳ ಸಂತೆ,ಕೊನೆಗೊಂದು ಪೂರ್ಣವಿರಾಮ – ೧
– ಚೇತನ್ ಕೋಡುವಳ್ಳಿ
ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ!