ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!
– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು
ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.
ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.
ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )
– ಡಾ. ಮಾಧವ ಪೆರಾಜೆ
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )
ಎರಡು ಭಿನ್ನ ಶಾಸನಗಳು:
ಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ …… ಮತ್ತಷ್ಟು ಓದು
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )
– ಡಾ. ಮಾಧವ ಪೆರಾಜೆ
ಮಧ್ಯಕಾಲದಲ್ಲಿ ಗುಡಿಗಳು:
ದೇವಾಲಯಗಳಿಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಬಂದಿರುವುದೇ ಮಧ್ಯಯುಗದಲ್ಲಿ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ. ಪುರಾಣಗಳು ಕಾವ್ಯಗಳು ದೇವಾಲಯಗಳ ಕುರಿತು ಹಾಡಿಹೊಗಳುವುದಕ್ಕೆ ಈ ಕಾಲದಲ್ಲಿ ಪ್ರಾರಂಭ ಮಾಡುತ್ತವೆ. ಅಗ್ನಿಪುರಾಣದ ಪ್ರಕಾರ ದೇವಾಲಯಗಳನ್ನು ಕಟ್ಟಿಸುವ ಬಯಕೆ ಬಂತೆಂದರೆ ಸಾಕು – ಅವರ ಪಾಪ ಪರಿಹಾರವಾಗುತ್ತದೆಯಂತೆ. ದೇವಾಲಯಕ್ಕೆ ಒಂದು ಇಟ್ಟಿಗೆಯನ್ನು ಇಟ್ಟರೆ ಅದು ಅವನಿಗೆ ಸಾಯುವಾಗ ಒಂದು ಯಜ್ಞವನ್ನು ಮಾಡಿದ ಪುಣ್ಯವನ್ನು ಕೊಡುತ್ತದೆಯಂತೆ – ಹಾಗೆಂದು ಹಯಶೀರ್ಷ ಸಂಹಿತೆ ಹೇಳುತ್ತದೆ. ಯಾವುದಾದರೊಂದು ಮಗು ಆಟದ ನೆಪದಲ್ಲಿ ಮರಳಿನಲ್ಲಿ ಗುಡಿ ಕಟ್ಟಿದರೂ ಆ ಮಗುವಿಗೆ ಸ್ವರ್ಗ ಲಭಿಸುತ್ತದೆ ಎಂದು ವಿಷ್ಣು ರಹಸ್ಯವು ತಿಳಿಸುತ್ತದೆ. ಹೀಗೆ ಇಲ್ಲಿಂದ ದೇವಾಲಯಗಳಿಗೆ ಮಹತ್ವವೂ ಪ್ರಸಿದ್ಧಿಯೂ ದೊರೆಯುತ್ತದೆ. ಶ್ರೀಮಂತರು,ಚಕ್ರವರ್ತಿಗಳು, ದಂಡನಾಯಕರು ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯಗಳನ್ನು ಕಟ್ಟಿಸುವುದು, ಅಂತಹ ದೇವಾಲಯಗಳಿಗೆ ಪೂಜಾರಿಗಳನ್ನು ನೇಮಕ ಮಾಡುವುದು, ದೇವಾಲಯಗಳ ಸಂದರ್ಶನಕ್ಕಾಗಿ ಹೋಗುವುದು, ಅಲ್ಲಿ ಪ್ರಾರ್ಥನೆ ಮಾಡುವುದು, ಯಾರು ಪೂಜೆ ಮಾಡಬಹುದು, ಮಾಡಬಾರದು ಎನ್ನುವುದು ಮೊದಲಾದವುಗಳೆಲ್ಲ ಈ ಕಾಲದಿಂದಲೇ ಆರಂಭವಾಗುತ್ತವೆ. ನಮ್ಮ ಕನಕದಾಸರು ಈ ಕಾಲದವರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹೀಗಾಗಿ ಮಧ್ಯಕಾಲೀನ ವಿಷಯಗಳಿಗೆ ಸಂಬಂಧಿಸಿದ ಈಗ ನಾವು ನಿರ್ದಿಷ್ಟವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, ಈ ವಿವರಗಳು ಇನ್ನಷ್ಟು ಸ್ಪಷ್ಟವಾಗಬಲ್ಲವು. ಹಾಗಾದುದರಿಂದ ನಿರ್ದಿಷ್ಟವಾಗಿ ದೇವಾಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನೇ ಲಕ್ಷಿಸಿ ಇನ್ನು ಮುಂದೆ ಈ ವಿಷಯವನ್ನು ಇನ್ನಷ್ಟು ವಿಸ್ತರಿಸೋಣ. ಮತ್ತಷ್ಟು ಓದು
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
– ಡಾ. ಮಾಧವ ಪೆರಾಜೆ
‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ. ಮತ್ತಷ್ಟು ಓದು
ನಾಡು-ನುಡಿ : ಮರುಚಿಂತನೆ – ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾದಾರು?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇತ್ತೀಚೆಗೆ ಕನಕದಾಸರ ಜಯಂತಿಯ ಆಚರಣೆ ನಡೆಯಿತು.ಹಾಗೂ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಜೊತೆಗೇ ರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ನೀಡಿದ ಹೇಳಿಕೆಗಳೂ ವರದಿಯಾದವು. ಅವುಗಳಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಗತಿಪರ ಧೋರಣೆಯೊಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ.ನಮ್ಮ ವಚನಕಾರರು, ದಾಸರು ಇವರೆಲ್ಲರೂ ಶಿವ ಭಕ್ತರು, ವಿಷ್ಣು ಭಕ್ತರು ಎಂಬುದಾಗಿ ತಿಳಿದಿದ್ದೇವೆ. ಆದರೆ ಆಶ್ಚರ್ಯದ ವಿಷಯವೆಂದರೆ ಈ ಶರಣರ, ದಾಸರ ಭಕ್ತಿಯ ಪರಿಕಲ್ಪನೆಯ ಕುರಿತಾಗಲೀ, ಅವರು ಭಗವಂತನ ಕುರಿತು ಏನು ಹೇಳುತ್ತಾರೆ ಎಂಬುದರ ಕುರಿತಾಗಲೀ ಕುತೂಹಲವೇ ನಮ್ಮ ಬಹುತೇಕ ಸಾಮಾಜಿಕ ಚಿಂತಕರಿಗೆ ಅಪ್ರಸ್ತುತವಾದಂತಿದೆ. ಹಾಗೂ ಅಂಥ ಚಿತ್ರಣದ ಅಗತ್ಯವೇ ಇಲ್ಲ ಎಂಬ ಧೋರಣೆಯನ್ನು ಇಂಥ ಚಿಂತಕರು ಹಾಗೂ ಅವರಿಂದ ಪ್ರಭಾವಿತರಾದ ರಾಜಕಾರಣಿಗಳು ತಳೆದಂತಿದೆ. ಆ ಶರಣರು ಹಾಗೂ ದಾಸರೆಲ್ಲ ಲಿಂಗ, ಜಾತಿ, ವರ್ಗ ಸಮಾನತೆಗಾಗಿ ಹೋರಾಡಿದರು ಎಂಬುದೊಂದೇ ವಿಷಯ ಅಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಅವರು ಜಾತಿಯ ತುಳಿತಕ್ಕೊಳಗಾಗಿದ್ದರು, ಹಾಗೂ ಅದರ ವಿರುದ್ಧ ಹೋರಾಡುವ ಏಕಮೇವ ಉದ್ದೇಶಕ್ಕಾಗಿಯೇ ಅವರು ಸಂತರಾದರು ಎಂದು ಬಿಂಬಿಸಲಾಗುತ್ತದೆ. ಇಂಥವರು ನಮ್ಮ ಭಕ್ತಿಯುಗದ ಸಂತರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ?