ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕನ್ನಡ ಮಾಧ್ಯಮ’

29
ಜೂನ್

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೨

– ರಾಕೇಶ್ ಶೆಟ್ಟಿ

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೧

ಭಾರತೀಯ ಶಿಕ್ಷಣ ವ್ಯವಸ್ಥೆಇಂಗ್ಲೀಷ್ ಶಿಕ್ಷಣ ಮಾಧ್ಯಮದಲ್ಲಿ ಓದುವ ನಮ್ಮ ಹಳ್ಳಗಾಡಿನ,ಚಿಕ್ಕ-ಪುಟ್ಟ ಪಟ್ಟಣದ,ಸರ್ಕಾರಿ ಶಾಲೆಯವರು ಅನುಭವಿಸುವ ಕೀಳರಿಮೆ,ಅವಮಾನಗಳೆಂತದ್ದು ಎನ್ನುವುದು,ಕನ್ನಡ ಮಾಧ್ಯಮದಲ್ಲಿ ೧೦ನೇ ತರಗತಿಯವರೆಗೆ ಓದಿಕೊಂಡು ನಂತರ ವಿಜ್ಞಾನ ವಿಷಯದ ಮೇಲೆ ಪಿಯುಸಿ ಓದಿ,ಇಂಜೀನಿಯರಿಂಗ್ ಮಾಡಿದ ನನ್ನಂತವರಿಗೆ ತಿಳಿದಿದೆ.ಮೊದಲನೇ ವರ್ಷದ ಪಿಯುಸಿ ತರಗತಿಯಲ್ಲಿ ಇಂಗ್ಲೀಷಿನಲ್ಲೇ ಪಾಠ ನಡೆಯುವಾಗ ಕನ್ನಡ ಮಾಧ್ಯಮದಿಂದ ಬಂದ,ನನ್ನನ್ನೂ ಸೇರಿದಂತೆ ಉಳಿದ ೭-೮ ಹುಡುಗರಿಗೆ ಏನು ಅರ್ಥವಾಗದೇ, ಆ ಕೀಳರಿಮೆಯಿಂದ ಕ್ಲಾಸಿನಲ್ಲಿ ಕೂರಲಿಕ್ಕೂ ಆಗದೇ,ಇಂತ ಪಾಠಕ್ಕಿಂತ ಕ್ರಿಕೆಟ್ಟೇ ಮೇಲೂ ಎನಿಸಿ.ಕ್ಲಾಸ್ ಬಿಟ್ಟು ಕ್ರಿಕೆಟ್ ಆಡಲು ಹೋಗುತಿದ್ದೆವು.ಕಡೆಗೆ ನಮ್ಮಲ್ಲಿ ೩-೪ ಜನ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಅವರ ಶಿಕ್ಷಣಕ್ಕೇ ಎಳ್ಳು ನೀರು ಬಿಟ್ಟರು.ಅಲ್ಲಿಗೆ ಇಂಗ್ಲೀಷ್ ಅರಗಿಸಿಕೊಳ್ಳಲಾಗದೇ ಅವರ ಉನ್ನತ ವಿದ್ಯಾಭ್ಯಾಸ ಮರಿಚೀಕೆಯಾಯಿತು. ಹಾಗಂತ ಆ ವಿದ್ಯಾರ್ಥಿಗಳೇನು ಓದಿನಲ್ಲಿ ಹಿಂದೆ ಬಿದ್ದವರಲ್ಲ.ಇಂಗ್ಲೀಷ್ ನಮಗಲ್ಲ ಎನ್ನುವ ಕೀಳರಿಮೆಯಿಂದ ಅವರು ಪಿಯುಸಿಯಲ್ಲಿ ಹಿಂದೆ ಬಿದ್ದರು.ಕಡೆಗೆ ಉನ್ನತ ಶಿಕ್ಷಣವನ್ನೂ ಬಿಟ್ಟರು.

ಮಾಲಾವಿ ದೇಶದ ಉದಾಹರಣೆಗೆ ತದ್ವಿರುದ್ಧ ಉದಾಹರಣೆಯಾಗಿ,ಇಸ್ರೇಲ್ ದೇಶವನ್ನು ತೆಗೆದುಕೊಳ್ಳಬಹುದು.ರಾಜಕೀಯ ವಿಪ್ಲವ ಮತ್ತಿತ್ತರ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಹರಿದು ಅಂಚಿಹೋಗಿ,ವಿವಿಧ ದೇಶಗಳಲ್ಲಿ ನೆಲೆಸಿ ಕಡೆಗೆ ೨೦ನೇ ಶತಮಾನದಲ್ಲಿ ಒಂದುಗೂಡಿ ಇಸ್ರೇಲ್ ದೇಶ ರಚಿಸಿಕೊಂಡ,ಯಹೂದಿಯರು ತಮ್ಮ ದೇಶವನ್ನು ಕಟಿಕೊಳ್ಳುವುದರ ಜೊತೆಗೆ ನಶಿಸುವ ಹಂತ ತಲುಪಿದ್ದ ಹಿಬ್ರೂ ಭಾಷೆಯನ್ನೇ ಶಿಕ್ಷಣ ಸೇರಿದಂತೆ ತಮ್ಮೆಲ್ಲಾ ರಂಗಗಳಲ್ಲೂ ಬಳಸಿಕೊಂಡರು.ಇವತ್ತು ಇಸ್ರೇಲ್ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಸ್ರೇಲಿನ “ಟೆಕ್ನಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ” ವಿಶ್ವದ ಉತ್ತಮ ವಿದ್ಯಾಲಯಗಳಲ್ಲಿ ಒಂದು.ಅಲ್ಲಿ ಚಳಿಗಾಲದ ಮತ್ತು ಬೇಸಿಗೆ ಕಾಲದ ತರಗತಿಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ೫ ವಾರಗಳ ಕಡ್ಡಾಯ ಹಿಬ್ರೂ ಭಾಷಾ ಕಲಿಕೆಯಾಗಬೇಕು.ಅದು ಮುಗಿದ ನಂತರವೇ ಮುಖ್ಯ ಪಠ್ಯಗಳು ಶುರುವಾಗುವುದು. ಮತ್ತಷ್ಟು ಓದು »

24
ಜೂನ್

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?

– ರಾಕೇಶ್ ಶೆಟ್ಟಿ

ಭಾರತೀಯ ಶಿಕ್ಷಣ ವ್ಯವಸ್ಥೆಅಂಡಮಾನ್ ದ್ವೀಪದ,’ಬೋ’ ಎಂಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಹೆಸರು ಬೋ ಎಸ್ಸರ್.ಈಕೆ ‘ಬೋ’ ಭಾಷೆ ಮಾತನಾಡಬಲ್ಲ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯಾಗಿದ್ದರು.೨೦೧೦ರಲ್ಲಿ,ತನ್ನ ೮೫ನೇ ವಯಸ್ಸಿನಲ್ಲಿ ಬೋ ಎಸ್ಸರ್ ಮರಣಹೊಂದುವುದರೊಂದಿಗೆ “ಬೋ” ಎಂಬ ಬುಡಕಟ್ಟು ಭಾಷೆಯೂ ಮಣ್ಣಾಯಿತು.ಭಾರತದಂತಹ ಸಾವಿರಾರು ಭಾಷೆಗಳಿರುವ ನೆಲದಲ್ಲಿ ಇಂತ ಅದಿನ್ನೆಷ್ಟು ಭಾಷೆಗಳು ಹೀಗೆ ಮಣ್ಣಾಗಿವೆಯೋ ಗೊತ್ತಿಲ್ಲ.ಒಂದು ಭಾಷೆ ಮಣ್ಣಾಗುವುದೊರೊಂದಿಗೆ ಆ ಭಾಷೆಯ ಜೊತೆಗೆ ಬೆಸೆದುಕೊಂಡ ಸಂಸ್ಕೃತಿ,ಆಚರಣೆಗಳು,ನೋವು,ನಲಿವುಗಳೂ ಮಣ್ಣಾಗುತ್ತವೆ.

ಭಾರತದಂತ ಅಗಾಧ ವೈವಿಧ್ಯಮಯ ದೇಶದಲ್ಲಿ ಭಾಷೆಯ ಕುರಿತ ಚರ್ಚೆಗಳಲ್ಲಿ ಎದ್ದು ಕಾಣುವುದು,ಈ ದೇಶಕ್ಕೊಂದು ರಾಷ್ಟ್ರ ಭಾಷೆಯ ಅಗತ್ಯವಿದೆಯೇ ಅಥವಾ ಲಿಂಕಿಂಗ್ (ಸಂವಹನ) ಭಾಷೆಯ ಅಗತ್ಯವಿದೆಯೇ ಎನ್ನುವುದು.ಇದರ ಜೊತೆಗೆ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವ ವಿಷಯ ಬಂದಾಗ,ಚರ್ಚೆಯನ್ನು ಎರಡು ಹಾದಿಯಲ್ಲಿ ತಂದು ನಿಲ್ಲಿಸಬಹುದು.

ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದು ಒಂದು ಹಾದಿಯಾದರೇ,ಇನ್ನೊಂದು ಹಾದಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮತ್ತು ಅದರ ಲಾಭ.

ಸಂವಹನ ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ಮತ್ತಷ್ಟು ಓದು »

12
ಜೂನ್

ತೆಗಳಬೇಕಾದುದು ಯಾರನ್ನು?

– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಕಲಿಕನ್ನಡ ಮಾಧ್ಯಮ ಕುರಿತ ಚರ್ಚೆ ನಿಲ್ಲುವಂತೆಯೂ ಕನ್ನಡ ಉಳಿಸುವ ಪರ್ಯಾಯ ಮಾರ್ಗ ಶುರುಮಾಡುವ ಪ್ರಯತ್ನ ಆರಂಭವಾಗುವಂತೆಯೂ ಕಾಣುತ್ತಿಲ್ಲ. ಕನ್ನಡವೂ ಸೇರಿ ಯಾವ ಮಾಧ್ಯಮವನ್ನೂ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಕನ್ನಡ ಮಾತ್ರ ಮಾಧ್ಯಮವಾಗಬಾರದು, ಆದರೆ ಇಂಗಿಷ್ ಮಾತ್ರ ಆಗಬಹುದು ಎನ್ನಲಾಗಿದೆ ಎಂದು ಓದಿಕೊಂಡ ಪ್ರಭೃತಿಗಳಿಗೆ ಕೊರತೆ ಇಲ್ಲ. ಇದೇ ದಾಟಿಯಲ್ಲಿ ಮಾತನಾಡುವ ಹೋರಾಟಗಾರರಿಗೆ, ಅವರಿಂದ ತಪ್ಪಿಸಿಕೊಳ್ಳಬಯಸುವ ಸಾಹಿತಿಗಳಿಗೆ ಕನ್ನಡ ಉಳಿಸುವ ಬೇರೆ ಮಾರ್ಗಗಳೇ ಕಾಣದಿರುವುದು ಆಶ್ಚರ್ಯಕರ. ಈಗ ಇವರೇ ಪ್ರತಿಪಾದಿಸುವಂತೆ ನಾಲ್ಕನೆಯತ್ತೆವರೆಗೆ ಕಡ್ಡಾಯ ಮಾಧ್ಯಮವಾದರೆ ಕನ್ನಡ ಉಳಿದುಬಿಡುತ್ತದೆಯೇ? ಪರಿಸ್ಥಿತಿ ನೋಡೋಣ:

ಮೊನ್ನೆ ತಾನೆ ಹಿರಿಯರೊಬ್ಬರು ಭೇಟಿಯಾಗಿದ್ದರು. ಕನ್ನಡ ಮಾಧ್ಯಮದ ಬಗ್ಗೆ ಮಾತು ಬಂತು. ಅವರ ಮನೆಯಲ್ಲಿ ಇದೀಗ ಡಿಗ್ರಿ ಓದುತ್ತಿರುವ ಹುಡುಗನಿದ್ದಾನಂತೆ. ಆತ ಪಿಯುಸಿವರೆಗೆ ಕನ್ನಡದಲ್ಲೇ ಓದಿದ್ದು. ಡಿಗ್ರಿಗೆ ಸೇರಿದ ಮೇಲೆ ಕನ್ನಡದ ಕಡೆ ಕಣ್ಣೆತ್ತಿ ನೋಡುವುದಿಲ್ಲವಂತೆ, ಕನ್ನಡ ಪತ್ರಿಕೆಗಳತ್ತ ಮುಖವನ್ನೂ ಹಾಕುವುದಿಲ್ಲವಂತೆ. ಕನ್ನಡ ಮಾತಾಡುವುದೇ ಅಲರ್ಜಿ ಎಂಬಂತೆ ವರ್ತಿಸುತ್ತಾನಂತೆ. ಸರ್ಕಾರದವರೇನೋ ನಾಲ್ಕನೆಯ ತರಗತಿವರೆಗೆ ಕನ್ನಡವನ್ನು ಕಲಿಕಾ ಮಾಧ್ಯಮ ಮಾಡಿಬಿಟ್ಟರೆ ಕನ್ನಡಕ್ಕೆ ಭವಿಷ್ಯವಿದೆ ಅಂತಾರಲ್ಲ, ನಮ್ಮ ಹುಡುಗ ನಾಲ್ಕನೆಯತ್ತೆಯಲ್ಲ, ಪಿಯುಸಿವರೆಗೂ ಕನ್ನಡದಲ್ಲೇ ಓದಿದ್ದಾನೆ. ಈಗ ಅವನ ವರ್ತನೆ ನೋಡಿ. ಇವನಿಂದ ಕನ್ನಡ ಮುಂದೆ ಹೇಗೆ ಉಳಿಯುತ್ತದೆ ಸ್ವಲ್ಪ ಹೇಳ್ತೀರಾ ಅಂದರು. ನಾಲ್ಕನೆಯ ತರಗತಿವರೆಗೆ ಮಾಧ್ಯಮವಾಗಿ ಕಡ್ಡಾಯ ಮಾಡುವುದರಿಂದ ಕನ್ನಡ ಉಳಿಯುತ್ತದೆ ಎಂಬ ಭ್ರಮೆ ನನಗೆ ಇಲ್ಲ. ಕನ್ನಡ ನಮ್ಮ ನಡೆ ನುಡಿಗೆ, ಬದುಕಿಗೆ ಅನಿವಾರ್ಯ ಎಂದು ಅವನಿಗೆ ಅರ್ಥವಾಗುವಂತೆ ನೀವು ಮನೆಯಲ್ಲಿ ನಡೆದುಕೊಂಡಿದ್ದೀರಾ ಎಂದು ಕೇಳಿದೆ. ಅಂದರೆ? ಎಂದು ಕೇಳಿದರು.

ಮತ್ತಷ್ಟು ಓದು »

22
ಮೇ

ಸಾಹಿತಿಗಳೆಂದರೆ ಸರ್ವಸ್ವವೇ?

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕನ್ನಡ ಸಾಹಿತ್ಯಕನ್ನಡ ಕಲಿಕಾ ಮಾಧ್ಯಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಶಯ ಕುರಿತು ಬರುತ್ತಿರುವ ಅಭಿಪ್ರಾಯಗಳಲ್ಲಿ ಸುಪ್ರೀಂ ತೀರ್ಪಿನ ಪರ ಬಹುತೇಕ ದನಿಗಳಿವೆ. ಸುಪ್ರೀಂ ತೀರ್ಪು ಸರಿ. ನಮ್ಮ ಸರ್ಕಾರದ ನೀತಿಗಳು ಸರಿ ಇಲ್ಲ ಎಂಬುದೂ ಸರಿ, ಆದರೂ… ಎಂದು ಅನುಮಾನದ ರಾಗ ಎಳೆಯುವವರು ಕೆಲವರು ಮಾತ್ರ. ಈ ಸರ್ವೇ ಸ್ಯಾಂಪಲ್ ಸಂಖ್ಯೆ ತುಂಬ ಕಡಿಮೆ ಎನಿಸಿದರೂ ಸುಪ್ರೀಂ ತೀರ್ಪು ಜನಸಾಮಾನ್ಯರ ದೃಷ್ಟಿಗೆ ತಕ್ಕಂತೆಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಬಹುಸಂಖ್ಯಾತರ ಆಶಯವನ್ನು ಗಮನಕ್ಕೆ ತಂದುಕೊಂಡು ಹೆಜ್ಜೆ ಇಡುತ್ತಿದೆಯೇ? ಇಲ್ಲ.

ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಒಂದಿಷ್ಟು ಸಾಹಿತಿಗಳು, ಚಳವಳಿಗಾರರು ಹಾಗೂ ಸರ್ಕಾರಿ ಅಧಿಕಾರಿಗಳು. ಇವರೇ ಈ ವಿಷಯಕ್ಕೆ ಸಂಬಂಧಿಸಿದ ಸಮಸ್ತ ಸಂಗತಿಗಳನ್ನು ಪ್ರತಿನಿಧಿಸುತ್ತಾರಾ? ಇವರನ್ನೇ ಶಿಕ್ಷಣ ತಜ್ಞರು, ಪಾಲಕ-ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು ಇತ್ಯಾದಿ ಊಹಿಸಿಕೊಳ್ಳಬೇಕಾ? ಅಷ್ಟಕ್ಕೂ ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.

ಮತ್ತಷ್ಟು ಓದು »

13
ಮೇ

ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ

kannaಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.

ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?

ಮತ್ತಷ್ಟು ಓದು »

12
ಮಾರ್ಚ್

ASER ವರದಿ 2012 ಮತ್ತು ಕರ್ನಾಟಕದ ಕಲಿಕೆ ಒಳನೋಟ – 1

-ಪ್ರಶಾಂತ ಸೊರಟೂರ

aser 1ASER (Annual Status Education Report – ಕಲಿಕೆ ಗುಣಮಟ್ಟದ ವರುಶದ ವರದಿ)

ಇದು ಸರಕಾರೇತರ ಸಂಸ್ಥೆಯಾದ ’ಪ್ರಥಮ್’ನಿಂದ ಕಲಿಕೆಯ ಗುಣಮಟ್ಟ ತಿಳಿದುಕೊಳ್ಳಲು 2005ರಿಂದ ಪ್ರತಿ ವರುಶ, ಇಂಡಿಯಾದ ಸುಮಾರು 15,000 ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಅರಸುವಿಕೆ (ಸಮೀಕ್ಷೆ) ನಡೆಸಿ ಹೊರತರಲಾಗುತ್ತಿರುವ ವರದಿ.

ASER ಕಲಿಕೆಮಟ್ಟವನ್ನು ಒರೆಗೆಹಚ್ಚುವ ಬಗೆ:

ಇಂಡಿಯಾದ ಪ್ರತಿ ಜಿಲ್ಲೆಯಲ್ಲಿ 30 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಹಿಂದಿನ ಎರಡು ವರುಶದ 20 ಮತ್ತು 10 ಹೊಸ ಹಳ್ಳಿಗಳು).
ಹಳ್ಳಿಗಳ ಗುಣಮಟ್ಟ (ರಸ್ತೆ, ಮನೆಗಳು ಇತ್ಯಾದಿ), ಕುಟುಂಬದ ಗುಣಮಟ್ಟ (ತಂದೆ-ತಾಯಿಯ ಕಲಿಕೆ, ಮನೆ ಇತ್ಯಾದಿ), ಶಾಲೆಯ ಗುಣಮಟ್ಟ (ಶಿಕ್ಶಕರು-ಮಕ್ಕಳ ಅನುಪಾತ, ಕಲಿಕೆಯ ಸಲಕರಣೆಗಳು, ಕುಡಿಯುವ ನೀರು, ಓದುಮನೆ) ಮುಂತಾದವುಗಳನ್ನು ಈ ಅರಸುವಿಕೆಯು (ಸಮೀಕ್ಶೆಯು) ಒಳಗೊಂಡಿರುತ್ತದೆ.
6 – 14 ವಯಸ್ಸಿನ (1 ರಿಂದ 7/8 ನೇ ತರಗತಿ) ಮಕ್ಕಳು ಈ ವರದಿಗೆ ಒಳಪಡುತ್ತಾರೆ.ಕಲಿಕೆಯ ಗುಣಮಟ್ಟವನ್ನು ASER ನ ಮೂರು ಸಲಕರಣೆಗಳಿಂದ ಅಳೆಯಲಾಗುತ್ತದೆ. 1) ತಾಯ್ನುಡಿಯಲ್ಲಿ ಓದುವಿಕೆಯ ಮಟ್ಟ 2) ಇಂಗ್ಲಿಶ ಓದುವಿಕೆಯ ಮಟ್ಟ 3) ಗಣಿತ ಕಲಿಕೆಯ ಮಟ್ಟ (ಕಳೆಯುವಿಕೆ ಮತ್ತು ಭಾಗಾಕಾರ)
ಜೊತೆಗೆ 2012ರ ವರದಿಯಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ, ಸರಕಾರ ಮತ್ತು ಖಾಸಗಿ ಶಾಲೆಗಳ ಪ್ರಮಾಣ, ಹೊರಕಲಿಕೆಗೆ (ಟ್ಯೂಶನ್) ಹೋಗುವವರ ಪ್ರಮಾಣ ಮುಂತಾದವುಗಳ ಕುರಿತು ತಿಳಿಸಲಾಗಿದೆ.
2012 ರಲ್ಲಿ ಕರ್ನಾಟಕದ 778 ಹಳ್ಳಿಗಳ, ಸುಮಾರು 18,000 ಸಾವಿರ ಮಕ್ಕಳು ಈ ಆರಸುವಿಕೆಗೆ (ಸಮೀಕ್ಷೆಗೆ) ಒಳಪಟ್ಟಿದ್ದರು.
ಮತ್ತಷ್ಟು ಓದು »

27
ಡಿಸೆ

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?

-ರಾವ್ ಎವಿಜಿ 

ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?

ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ.  ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?

ಮತ್ತಷ್ಟು ಓದು »