‘ಗ್ರಸ್ತ’ ಕಾದಂಬರಿ – ನನ್ನ ಅನಿಸಿಕೆಗಳು.
– ಸುದರ್ಶನ ಗುರುರಾಜ ರಾವ್
ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು.
ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು.
ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್!