ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕರ್ನಾಟಕ,ಕನ್ನಡ’

16
ಜನ

ಸಂಸ್ಕೃತಿ ಸಂಕಥನ – 18 – ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ

-ರಮಾನಂದ ಐನಕೈ

ಇತ್ತೀಚೆಗೆ ಮಂಚೀಕೇರಿಯಲ್ಲಿ ಬಾಲಗಂಗಾಧರರ ಸಂವಾದ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಮುಂಚೀಕೇರಿಯ ಸಂಹತಿ ಟ್ರಸ್ಟ್ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಹತಿ ಗೆಳೆಯರು ತುಂಬಾ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನೂರಕ್ಕೂ ಹೆಚ್ಚು ಜನ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಸುರಿಮಳೆ ಗೈದರು. ಬೇರೆ ಬೇರೆ ಪ್ರಶ್ನೆಗಳಿಗೆ ಬಾಲ ಗಂಗಾಧರರು ನೀಡಿದ ಉತ್ತರಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿದೆ.

ಭಾರತ ತನ್ನ ಇತಿಹಾಸದಲ್ಲಿ ಎರಡು ವಸಹಾತು ಶಾಹಿಗಳನ್ನು ಕಂಡಿದೆ. ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ. ಇವೆರಡೂ ಕೂಡಾ ಸೆಮೆಟಿಕ್ ರಿಲಿಜನ್ ಹೊಂದಿದ ಸಂಸ್ಕೃತಿ ಯಿಂದ ಬಂದಂತಹವುಗಳು. ಇವರು ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ರಿಲಿಜನ್ ಇದೆ ಎಂದು ನಂಬಿ ದವರು, ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ ಯಲ್ಲೂ ರಿಲಿಜನ್ ಹುಡುಕಲು ಪ್ರಾರಂಭಿಸಿದರು. ಅದು ಅವರಿಗೆ ಸುಲಭಕ್ಕೆ ಸಾಧ್ಯವಾಗಲಿಲ್ಲ. ಸೆಮೆಟಿಕ್ ರಿಲಿಜನ್ಗಳ ಕನ್ನಡಕ ಹಾಕಿಕೊಂಡು ಹುಡುಕಿದರು. ಕೊನೆಗೂ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಕಂಡುಹಿಡಿದೇಬಿಟ್ಟರು. ಹಿಂದೂ ರಿಲಿಜನ್ ಅಂದರೆ ಪಾಶ್ಚಾತ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಭಾರತೀಯರಿಗೆ ಅರ್ಥವಾಗುವು ದಿಲ್ಲ. ಏಕೆಂದರೆ ಭಾರತದ ಹೆಚ್ಚಿನ ಜನರಿಗೆ ಹಿಂದೂ ರಿಲಿಜನ್ನಿನ ಅನುಭವವೇ ಆಗುವುದಿಲ್ಲ. ರಿಲಿಜ ನ್ನಿನ ಯಾವುದೇ ಸರಳ ರೇಖೆಗಳು ನಮ್ಮಲ್ಲಿಲ್ಲ. ದಿನನಿತ್ಯ ನಮ್ಮ ನಡುವೆ ಕಾಣುವ ಗೊಂದಲಗಳು ರಿಲಿಜನ್ ಹಾಗೂ ಸಂಸ್ಕೃತಿಯ ನಡುವಿನ ಹೊಂದಾಣಿಕೆ ಆಗದ ತಿಕ್ಕಾಟಗಳು, ಆದರೆ ಇದು ವರೆಗೆ ಯಾವ ಭಾರತೀ ಯನೂ ಈ ಕುರಿತು ಸಂಶೋಧನೆ ನಡೆಸದೇ ಇದ್ದದ್ದು ಆಶ್ಚರ್ಯದ ವಿಷಯ. ಪಾಶ್ಚಿಮಾತ್ಯರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಭಾರತೀಯರು ತಮ್ಮ ನಿಜ ಎಂದು ನಂಬಿಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಈಗ ನಮ್ಮ ಅನುಭವಗಳೆಂಬಂತೆ ಪುನರಾವರ್ತಿಸುತ್ತಿದ್ದೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಬಾಲ ಗಂಗಾಧರರು ಈ ಕುರಿತು ಸಂಶೋ ಧನೆ ನಡೆಸುತ್ತಿರುವ ದೇಶದ ಹಾಗೂ ಪ್ರಪಂಚದ ಪ್ರಪ್ರಥಮ ಚಿಂತಕರು.

ಮತ್ತಷ್ಟು ಓದು »

10
ಜನ

ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!

-ಬಿ.ಆರ್. ಸತ್ಯನಾರಾಯಣ್

“ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!”

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಮತ್ತಷ್ಟು ಓದು »

6
ಜನ

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

-ಹರಿಹರಪುರಶ್ರೀಧರ್

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ “ವಿಶ್ವಗುರುವಿನ” ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ “ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ” ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ ” ಸರ್ವೇ ಭವಂತು ಸುಖಿನ:…….ಮಾ ಕಶ್ಚಿತ್ ದು:ಖ ಭಾಗ್ಭವೇತ್”-ಎಲ್ಲರೂ ಸುಖವಾಗಿರಬೇಕು…….., ಯಾರಿಗೂ ದು:ಖ ಬರುವುದು ಬೇಡ”. ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!

 ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು ” ಇದೇನೋ ನೀನು “ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!” ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ” ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?

ಅವರು ನಿರುತ್ತರರಾಗಿದ್ದರು.

4
ಜನ

ಸ್ಥಳೀಯ ಭಾಷೆಗಳ ಬಳಕೆಯ ಬಗೆಗೆ RBI ಹಾಗೂ BCSBI ಏನು ಹೇಳುತ್ತದೆ?

-ರವಿ ಸಾವ್ಕರ್

ಇತ್ತೀಚಿಗೆ ಹಲವಾರು ಕನ್ನಡಿಗ ಗ್ರಾಹಕರು ತಮಗೆ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕು ಎಂದು ಬ್ಯಾಂಕ್ ಗಳಿಗೆ ದೂರನ್ನು ಕೊಟ್ಟಿದಾರೆ. ಕೆಲವು ಬ್ಯಾಂಕ್ ಗಳು ಗ್ರಾಹಕರ ದೂರಿಗೆ ಸ್ಪಂದಿಸಿ ಕನ್ನಡದಲ್ಲಿ ಸೇವೆ ಕೊಟ್ಟಿದಾರೆ. ಮತ್ತೆ ಕೆಲವರು ಕೊಡುವುದಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ ಸಂಗತಿಗಳು ಇದೆ.

RBI ಹಾಗೂ BCSBI ಭಾಷೆಯ ಬಳಕೆಯ ಬಗ್ಗೆ ಏನು ಹೇಳುತ್ತದೆ ಹಾಗೂ ಕನ್ನಡದಲ್ಲಿ ಸೇವೆ ಕೊಡಲು ನಿರಾಕರಿಸಿದರೆ ಬ್ಯಾಂಕ್ ಗಳ ಲೋಕಪಾಲರಿಗೆ(Banking ombudsman) ದೂರು ಕೊಡುವುದು ಹೇಗೆ ಅಂತ ಇಲ್ಲಿ ಕಲೆ ಹಾಕಲಾಗಿದೆ. ಕನ್ನಡದಲ್ಲಿ ಸೇವೆ ಸಿಗದೇ ಹೋದರೆ ಈ ನಿಯಮಗಳನ್ನು ತಿಳಿಸಿ ಬ್ಯಾಂಕ್ ಗಳಿಗೆ ದೂರು ಕೊಡಿ.

ಭಾಷಾ ಆಯಾಮದಲ್ಲಿ RBI ನಿರ್ದೇಶನ ಹೀಗಿದೆ
“In order to ensure that banking facilities percolate to the vast sections of the population,banks should make available all printed material used by retail customers including account opening forms, pay-in-slips, passbooks etc. in trilingual form i.e. English, Hindi and the concerned Regional Language.”
http://rbi.org.in/scripts/BS_ViewMasCirculardetails.aspx?Id=2673&Mode=0
“ಎಲ್ಲ ಜನರಿಗೆ ಉಪಯೋಗ ಆಗುವಂತೆ ಚೆಕ್ಕು, ಪಾಸ್ ಬುಕ್ ಗಳು ಸೇರಿದಂತೆ ಎಲ್ಲ ಮುದ್ರಿತ ಸಾಮಗ್ರಿಗಳನ್ನು (printed material) ಸ್ಥಳೀಯ ಭಾಷೆಗಳಲ್ಲಿಯೂ ಕೊಡಬೇಕು ”

ಭಾಷಾ ಆಯಾಮದಲ್ಲಿ Code of Banks Commitment to Customers ಏನು ಹೇಳುತ್ತದೆ?
“Key commitment of BCSBI is to help You To Understand How Our Financial Products And Services Work By Giving you information about them in any one or more of the following languages – Hindi, English or the appropriate local language

http://www.bcsbi.org.in/pdf/CodeOfBanks_Aug09.pdf ಮತ್ತಷ್ಟು ಓದು »

3
ಜನ

ನನ್ನ ಆಕಾಶಯಾನ

ಕವಿ ನಾಗರಾಜ್

ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು.
ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ – ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;

ಮತ್ತಷ್ಟು ಓದು »

30
ಡಿಸೆ

ದಾರಿ

-ಪ್ರೇಮಶೇಖರ

ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ.  ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.

ಕೆಂಪುಮಣ್ಣಿನ ಹಾದಿ.  ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು.   ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ.  ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು.  ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು.  ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು.  ಆಗ ಕಂಡಿತು ಆ ಊರು.  ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.

ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ!  ಗ್ರಾಮಸಿಂಹಗಳಿಲ್ಲದ ಊರೂ ಉಂಟೇ?  ಅವಳಿಗೆ ಅಚ್ಚರಿ.  ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು.  ಬೀದಿಯಲ್ಲಿ ಜನರೇ ಇಲ್ಲ!  ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇ?  ಎಂಥಾ ಜನರಪ್ಪ!  ಎಂಥಾ ಊರಪ್ಪ!

ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ!  ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ!  ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು.  ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು.  ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.

ಮತ್ತಷ್ಟು ಓದು »

29
ಡಿಸೆ

ಕೋಲ್ಕತ್ತಾದಲ್ಲಿ ಕುವೆಂಪು

-ಪ್ರೊ. ಬಿ ಎ ವಿವೇಕ ರೈ

ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ  ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.

ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .

ಮತ್ತಷ್ಟು ಓದು »