ಪುಣ್ಯಕೋಟಿಯ ವ್ಯಥೆ ಮತ್ತು ಕಾನೂನು ಅವ್ಯವಸ್ಥೆ
– ರಾಕೇಶ್ ಶೆಟ್ಟಿ
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗ ಭದ್ರೆ ತಾಯಿ ಬಾರೆ …
ಪುಣ್ಯಕೋಟಿಯ ಕಥೆ ಅಚ್ಚಳಿಯದೇ ಮನದಲ್ಲಿ ಉಳಿಯುವಂತೆ ಮಾಡಿದ ಗೋವಿನ ಹಾಡನ್ನು ಕೇಳಿ ಬೆಳೆದವರು ನಾವು. ಆಗಿನ ಕಾಲದ ಗೊಲ್ಲಗೌಡನೇನೋ ತನ್ನ ಮುದ್ದಿನ ಗೋವುಗಳನ್ನು ಹರುಷದಿಂದ ಕರೆಯುವ ಪರಿಸ್ಥಿತಿ ಇತ್ತು. ಆದರೆ ಈಗಿನ ಕರಾವಳಿಯ ಗೋಪಾಲಕರ ಸ್ಥಿತಿ ಯಾವ ಶತ್ರುವಿಗೂ ಬೇಡವೆನಿಸುವಂತಿದೆ. ಕಣ್ಣೆದುರಿಗೆ ಆಡಿ ಬೆಳೆಯುತ್ತಿದ್ದ ಕರುಗಳು, ಲೀಟರ್ಗಟ್ಟಲೆ ಹಾಲು ಕೊಡುತ್ತ ಜೀವನಾಧಾರವಾಗಿರುವ ಗೋವುಗಳು ರಾತ್ರಿ ಬೆಳಗಾಗುವುದರೊಳಗೆ ಕೊಟ್ಟಿಗೆಯಿಂದ ಕಾಣೆಯಾಗಿರುತ್ತವೆ.ಹಾಗೆಂದು ಈ ಗೋವುಗಳು,ಎಳೆಗರುಗಳೇನೂ ಮಾಯವಾಗುವುದಿಲ್ಲ ಅಥವಾ ಭೂಮಿ ಬಾಯಿಬಿಟ್ಟು ಅವನ್ನು ನುಂಗಿಹಾಕುವುದಿಲ್ಲ. ನಟ್ಟ ನಡುರಾತ್ರಿ ತಲವಾರುಗಳನ್ನಿಡಿದು ನುಗ್ಗುವ ದನಗಳ್ಳರು ಮನೆಯವರನ್ನು ಬೆದರಿಸಿ ಅವರ ಕಣ್ಣೆದುರಿನಲ್ಲಿಯೇ ಸಾಕಿದ ಗೋವುಗಳನ್ನು ಕದ್ದೊಯ್ಯುತ್ತಾರೆ. ಕೇವಲ ಕದ್ದೊಯ್ಯುವುದು ಮಾತ್ರವಲ್ಲ,ಮತ್ತೆ ಬಂದು ಉಳಿದವನ್ನು ಕದ್ದೊಯ್ಯುತ್ತೇವೆ,ನಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮನ್ನು ಉಳಿಸುವುದಿಲ್ಲವೆಂದು ಧಮಕಿ ಹಾಕಿ ಹೋಗುತ್ತಾರೆ.ಮಂಗಳೂರಿನ ಮೂಡುಶೆಡ್ಡೆಯೊಂದರಲ್ಲೇ ಕಳೆದ ಒಂದೆರಡು ತಿಂಗಳಲ್ಲಿ ೨೦ಕ್ಕೂ ಹೆಚ್ಚು ಹಸುಗಳನ್ನು ದನಗಳ್ಳರು ಕದ್ದೊಯ್ದಿದ್ದಾರೆ.ಮೂಡುಶೆಡ್ಡೆಯ ಜೊತೆಗೆ ಕಾವೂರು,ವಾಮಂಜೂರು,ಕುಳಾಯಿ,ಅತ್ತಾವರ,ಜಪ್ಪಿನಮೊಗರು ಹೀಗೆ ಕರಾವಳಿಯ ಹಲವು ಭಾಗಗಳ ಗೋಪಾಲಕರ,ಬಡರೈತರ ಜೀವನವನ್ನೇ ಹಾಳುಗೆಡವಿದ್ದಾರೆ ಈ ದನಗಳ್ಳರು.
ಇತ್ತಿಚೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಒಂದು ಕರಾವಳಿಯ ಗೋಪಾಲಕರ ಸಂಕಟವನ್ನು ಬಿಚ್ಚಿಡುತ್ತದೆ. ದೈಜಿ ವರ್ಲ್ಡ್ ನವರು ಮಾಡಿದ್ದ ಈ ವಿಡಿಯೋದ ಕೇಂದ್ರ ಬಿಂದು ಕೊಣಾಜೆಯ ನಡುಪದವಿನ ಕಲ್ಯಾಣಿ ಅಮ್ಮ. ಒಂದು ಕಾಲದಲ್ಲಿ ಕಲ್ಯಾಣಿ ಅಮ್ಮನ ಕೊಟ್ಟಿಗೆಯಲ್ಲಿ ೫೦ ಗೋವುಗಳಿದ್ದವು.೪೦ ಲೀಟರಿನಷ್ಟು ಹಾಲನ್ನು ಡೈರಿಗೆ ಹಾಕುತ್ತಿದ್ದ ಕಲ್ಯಾಣಿ ಅಮ್ಮನವರು ಒಳ್ಳೆ ಆದಾಯವನ್ನು ಪಡೆಯುತ್ತಿದ್ದರು.ನೆಮ್ಮದಿಯಾಗಿದ್ದ ಕಲ್ಯಾಣಿಯವರ ಕೊಟ್ಟಿಗೆಯ ಮೇಲೆ ದನಗಳ್ಳರ ವಕ್ರದೃಷ್ಟಿ ಬಿದ್ದಿತ್ತು. ೨೦೧೦ರಿಂದ ಈಚೆಗೆ ಶುರುವಾದ ಕಳ್ಳತನದಿಂದಾಗಿ ಇವತ್ತಿಗೆ ಕಲ್ಯಾಣಿ ಅಮ್ಮನವರ ಕೊಟ್ಟಿಗೆ ಬರಿದಾಗಿದೆ.ಮಕ್ಕಳಂತೆ ಸಾಕಿ ಸಲಹುತ್ತಿದ್ದ ಗೋವುಗಳು ಕಾಣೆಯಾದಾಗಲೆಲ್ಲ ಊಟ-ನಿದ್ದೆ ಬಿಟ್ಟು ಕಲ್ಯಾಣಿ ಅಮ್ಮ ಕಣ್ಣೀರು ಹಾಕಿದ್ದಾರೆ.ಮೊದಲ ಬಾರಿ ಕಳ್ಳತನವಾದಾಗ ಪೋಲೀಸರ ಬಳಿ ಹೋಗಿದ್ದೆ,ಅವರು ನನಗೆ ಗದರಿಸಿ ಕಳುಹಿಸಿದರು ನಂತರ ಮತ್ತೆಂದೂ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ ಎನ್ನುತ್ತಾರೆ ಕಲ್ಯಾಣಿ ಅಮ್ಮ.ಗೋವಿನೊಂದಿಗೆ ಅವಿನಾಭಾವ ಸಂಬಂಧವಿರುವ ಅವರಿಗೆ ಖಾಲಿ ಕೊಟ್ಟಿಗೆಯನ್ನು ನೋಡಲಾಗದೇ,ಈಗ ಮತ್ತೊಂದು ಗೋವನ್ನು ತಂದಿದ್ದಾರೆ.ಅದನ್ನೂ ದನಗಳ್ಳರು ಕದ್ದೊಯ್ಯಬಾರದೆಂದು ಪ್ರತಿರಾತ್ರಿ ಅದರ ಕಾವಲು ಕಾಯುತ್ತ ಕೊಟ್ಟಿಗೆಯ ಹೊರಗೆಯೇ ಮಲಗುತ್ತಿದ್ದಾರೆ ಎಂದರೆ ಕರಾವಳಿಯ ಕಾನೂನು ಅವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ಹೌದು. ಸಿಎಂ ಸಿದ್ದರಾಮಯ್ಯನವರು ಎರಡನೇ ದೇವರಾಜ ಅರಸು…!
– ರಾಕೇಶ್ ಶೆಟ್ಟಿ
‘Law and order are the medicine of the politic body and when the politic body gets sick, medicine must be administered’ – ಕಾನೂನು ಸುವ್ಯವಸ್ಥೆಯು ರಾಜಕೀಯ ವ್ಯವಸ್ಥೆಗೆ ಔಷಧವಿದ್ದಂತೆ ಮತ್ತು ರಾಜಕೀಯ ವ್ಯವಸ್ಥೆಯೇ ಅನಾರೋಗ್ಯಕ್ಕೆ ಒಳಗಾದಾಗ, ಔಷಧವನ್ನು ನೀಡಲೇಬೇಕು” ಕಾನೂನು ಸುವ್ಯವಸ್ಥೆಯ ಕುರಿತು ಹೀಗೆ ಹೇಳುತ್ತಾರೆ ಡಾ. ಅಂಬೇಡ್ಕರ್. ಕರ್ನಾಟಕದ ಮಟ್ಟಿಗೆ ಸೂಕ್ತವಾದ ಮಾತಿದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ರೋಗಗ್ರಸ್ಥವಾಗಿ ಕುಳಿತಿದೆ. ಅದು ಯಾವ ಪರಿ ಕುಲಗೆಟ್ಟಿದೆಯೆಂದರೆ, ರಾಜಧಾನಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯ ಅನತಿದೂರದಲ್ಲೇ ರಾಬರಿಗಳು ನಡೆದಿರುವ ವರದಿಗಳಾಗುತ್ತಿವೆ. ಪೊಲೀಸ್ ಕಚೇರಿಯ ಬಳಿ ಬಿಡಿ, ಖುದ್ದು ಪೊಲೀಸರಿಗೆ ರಕ್ಷಣೆಯಿಲ್ಲದಂತಾಗಿದೆ. ರಸ್ತೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ರೌಡಿಗಳು ಮಚ್ಚು ಬೀಸುತ್ತಿದ್ದಾರೆ, ಗನ್ ಕಿತ್ತುಕೊಳ್ಳುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ, ಪೊಲೀಸರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು? ಮತ್ತಷ್ಟು ಓದು
ಕನ್ನಡ ಪರ ಹೋರಾಟವೆಂದರೆ ಕಾಂಗ್ರೆಸ್ ಪರ ಹೋರಾಟವೇ?
– ರಾಕೇಶ್ ಶೆಟ್ಟಿ
ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ರಾಜಕೀಯ ಪಕ್ಷಗಳಿಗೆ ಯಾವತ್ತಿಗೂ ಲಾಭದ ಬಾಬತ್ತು. ಈಗ ಮಹದಾಯಿ ವಿಷಯದಲ್ಲೂ ಆಗುತ್ತಿರುವುದೂ ಅದೇ. ರಧಾನಿ ಮೋದಿಯವರ ಬಳಿ,ಗೋವಾ-ಮಹಾರಾಷ್ಟ್ರದ ಜೊತೆಗೆ ಸಂಧಾನದ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯದ ಸರ್ವಪಕ್ಷ ನಿಯೋಗ ಹೋಗಿ ಕೇಳಿಕೊಂಡಾಗ,ಈ ವಿವಾದದ ಇತಿಹಾಸದ ಅರಿವಿದ್ದ ಅವರು,ಮಧ್ಯಸ್ಥಿಕೆ ನಿರಾಕರಿಸಿ ಮೊದಲು ಆಯಾ ರಾಜ್ಯಗಳಲ್ಲಿರುವ ಪಕ್ಷಗಳ ಒಪ್ಪಿಸಿ ಎಂದಿದ್ದರು. ನಂತರ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ,ಗೋವಾದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಬಿಜೆಪಿಯವರು ಹಾಗೂ ಗೋವಾದ ವಿರೋಧ ಪಕ್ಷ ಕಾಂಗ್ರೆಸ್ಸನ್ನು ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ಸಿನವರು ಒಪ್ಪಿಸುವ ನಿರ್ಧಾರವಾಗಿತ್ತು.
ನಂತರ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ-ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪಾತ್ರ ಬರೆದಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯು ಬಂದಿತ್ತು. ಅವರ ಮಧ್ಯಸ್ಥಿಕೆಯಲ್ಲಿಯೇ ಮಾತುಕತೆ ನಡೆಯಲಿದೆ ಎನ್ನುವ ಸುದ್ದಿಗಳು ಇದ್ದವು.ಈ ನಡುವೆ ಕರ್ನಾಟಕದ ಬಿಜೆಪಿಯ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಹದಾಯಿ ವಿಷಯಕ್ಕೆ ಭೇಟಿ ಮಾಡಿದ್ದರು.ಆ ಭೇಟಿಯನ್ನೂ ವಿವಾದವಾಗಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸಮಸ್ಯೆಯಿರುವುದು ಗೋವಾ ರಾಜ್ಯದ ಜೊತೆ. ರಾಜ್ಯ ಬಿಜೆಪಿಯವರು ಗೋವಾ ಸಿಎಂ ಜೊತೆ ಮಾತನಾಡಲಿ’ ಎಂದು ಖ್ಯಾತೆ ತೆಗೆದಿದ್ದರು. ಆ ನಂತ್ರ ಗೋವಾದಲ್ಲಿ ಚುನಾವಣೆಯ ಕಾವೇರಿತು,ಇತ್ತ ರಾಜ್ಯ ಬಿಜೆಪಿಗೆ ಅದರದ್ದೇ ಆದ ತಲೆ ನೋವು ತಾಪತ್ರಯಗಳಿದ್ದವು. ಇತ್ತೀಚಿಗೆ ಧೂಳು ಕೊಡವಿಕೊಂಡು ಯಡ್ಯೂರಪ್ಪನವರ ನೇತೃತ್ವದಲ್ಲಿ ಶುರುವಾಗಿದ್ದ ಪರಿವರ್ತನಾ ಯಾತ್ರೆಯ ಹುಬ್ಬಳ್ಳಿ ಸಮಾವೇಶದ ಸಮಯದಲ್ಲಿ,Over Enthusiastic ಆದ ಯಡ್ಯೂರಪ್ಪನವರು ಮಹದಾಯಿ ವಿವಾದಕ್ಕೆ ಪರಿಹಾರ ದೊರಕಲಿದೆ,ಗೋವಾದಿಂದ ಸಿಹಿ ಸುದ್ದಿ ತರುತ್ತೇನೆ ಎಂದು ಘೋಷಿಸಿಬಿಟ್ಟರು.ಅತ್ತ ಅಮಿತ್ ಷಾ ಅವರ ಮಧ್ಯಸ್ಥಿಕೆಯಲ್ಲಿ ಗೋವಾ ಸಿಎಂ ಪರಿಕ್ಕರ್,ರಾಜ್ಯದ ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆಯ ಫೋಟೋಗಳು ಬ್ರೇಕಿಂಗ್ ನ್ಯೂಸ್ ಚಾನೆಲ್ಲುಗಳಿಂದ ಹಿಡಿದು ದಿನಪತ್ರಿಕೆಗಳಲ್ಲೂ ಬಂದವು. ಏನೋ ಪವಾಡವಾಗಲಿದೆ ಎಂದು ಬರೆದವು.ಮುಗ್ಧ ರೈತರು,ಹೋರಾಟಗಾರರು ಕಾದು ಕುಳಿತರು, ಕಡೆಗೆ ಪರಿಕ್ಕರ್ ಅವರಿಂದ ಯಡ್ಯೂರಪ್ಪನವರಿಗೆ ಪತ್ರವೊಂದು ಬಂತು. ಕುಡಿಯುವ ನೀರಿನ ವಿಚಾರದಲ್ಲಿ ಮಾತ್ರ ತಾವು ಮಾತುಕತೆಗೆ ಸಿದ್ಧರಾಗಿರುವುದಾಗಿ ಬರೆದಿದ್ದರು. ಸಮ್ಮಿಶ್ರ ಸರ್ಕಾರದ ಏಕೈಕ ಬಿಜೆಪಿಯ ನಾಯಕರಾಗಿ ನಿಜಕ್ಕೂ ಪರಿಕ್ಕರ್ ಹಾಗೂ ಗೋವಾ ಬಿಜೆಪಿ ರಿಸ್ಕ್ ತೆಗೆದುಕೊಂಡೇ ಈ ಪತ್ರ ಬರೆದಿತ್ತು. ಗೋವಾ ಸಿಎಂ ಕರ್ನಾಟಕ ಸಿಎಂಗೆ ಪತ್ರ ಬರೆಯಬೇಕಿತ್ತು ಎಂದು ಖ್ಯಾತೆ ತೆಗೆದ ಕಾಂಗ್ರೆಸ್ಸು ಇತ್ತ ಹೋರಾಟಗಾರರನ್ನು ತಂದು ಬಿಜೆಪಿಯ ಕಚೇರಿ ಎದುರು ಕೂರಿಸಿ,ಅತ್ತ ಗೋವಾ ಕಾಂಗ್ರೆಸ್ಸಿಗೆ ತಿವಿಯಿತು.
ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||
– ರಾಘವೇಂದ್ರ ನಾವಡ
ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!! ಮತ್ತಷ್ಟು ಓದು
ಯಡಿಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದೇನು?
– ರಾಕೇಶ್ ಶೆಟ್ಟಿ
ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಪ್ರಧಾನಿ ಮೋದಿಯವರ ಭಾಷಣದಿಂದ ಪ್ರೇರಿತರಾಗಿ, ತಾನು ಸ್ವಇಚ್ಚೆಯಿಂದ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡು ೨೦೧೪ರ ಮೇ ೨೨ನೇ ತಾರೀಖಿನಂದು ಯಡ್ಯೂರಪ್ಪನವರು ಮೋದಿಯವರಿಗೊಂದು ಪತ್ರ ಬರೆದಿದ್ದರು.
ಆ ಪತ್ರ ಬರೆದು ಸುಮಾರು ೨ ವರ್ಷಗಳ ನಂತರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಯಡ್ಯೂರಪ್ಪನವರಿಗೆ ಒಲಿಯಿತು. ಈ ಬೆಳವಣಿಗೆಗೆ ಪಕ್ಷದೊಳಗೆ ಹಾಗೂ ಹೊರಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಅಧ್ಯಕ್ಷರಾಗುತ್ತಿದ್ದಂತೆ ‘ಎಲ್ಲರನ್ನೂ ವಿಶ್ವಾಸಕ್ಕೆ’ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದಿದ್ದರು ಯಡ್ಯೂರಪ್ಪ. ಮುಖ್ಯಮಂತ್ರಿಯಾಗಿದ್ದಾಗ ಸ್ವಯಂಕೃತಾಪರಾಧದ ಜೊತೆಗೆ, ಬೆನ್ನಿಗಂಟಿಕೊಂಡಿದ್ದ ಭಟ್ಟಂಗಿಗಳು, ಕಿಂಕರರಂತೆ ಆಜೂ-ಬಾಜೂ ಕಾಣಿಸಿಕೊಳ್ಳುತ್ತಿದ್ದವರು, ಪಕ್ಷದೊಳಗಿನ ಮೀರ್ ಸಾಧಿಖರ ಕುತಂತ್ರವೂ ಸೇರಿ ಅಧಿಕಾರವನ್ನೂ ಕಳೆದುಕೊಂಡು, ಕಾನೂನಿನ ಪೆಟ್ಟನ್ನು ತಿಂದು, ಕಡೆಗೆ ನ್ಯಾಯಾಲಯದಲ್ಲಿ ಜಯಿಸಿ ಸಾಕು ಸಾಕೆನಿಸುವಷ್ಟು ಹೈರಾಣಾದ ನಂತರ ದೊರೆತ ರಾಜ್ಯಾಧಕ್ಷ್ಯ ಹುದ್ದೆಯನ್ನು ಯಡ್ಯೂರಪ್ಪನವರು ಸರಿಯಾಗಿ ನಿರ್ವಹಿಸಿದ್ದಾರೆಯೇ? ಮತ್ತಷ್ಟು ಓದು
ಬೌದ್ಧಿಕ ಅಸಹಿಷ್ಣು ಪಾಕಿಸ್ತಾನ ಕರ್ನಾಟಕಕ್ಕಿಂತ ವಾಸಿ!
– ಪ್ರೇಮಶೇಖರ
ಎರಡು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಸಿಎಸ್‌ಎಲ್‌ಸಿ) ವಚನಸಾಹಿತ್ಯದ ಬಗ್ಗೆ ಇದುವರೆಗೂ ಪೋಷಿಸಿಕೊಂಡು ಬಂದಿರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನಿಖರ ಸಂಶೋಧನೆಯ ಮಾರ್ಗ ಹಿಡಿದಾಗ ಕಂಗೆಟ್ಟ ನಮ್ಮ ಪಟ್ಟಭದ್ರ ವಿಚಾರವಾದಿಗಳು ಸಂಸ್ಥೆಯ ವಿರುದ್ಧ ವೈಚಾರಿಕ ಗೂಂಡಾಗಿರಿ ನಡೆಸಿದ್ದು, ಅವರ ಉಗ್ರ ಬೌದ್ಧಿಕ ಅಸಹಿಷ್ಣುತೆಗೆ ಪ್ರಮುಖ ಕನ್ನಡ ದೈನಿಕವೊಂದು ವೇದಿಕೆಯಾಗಿ ಪತ್ರಿಕಾಧರ್ಮವನ್ನು ಗಾಳಿಗೆ ತೂರಿದ್ದು, ಕೊನೆಗೆ ಇವರೆಲ್ಲರ ಪಿತೂರಿಯಿಂದ ರಾಜ್ಯದ ಪರಮ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರವನ್ನು ಮುಚ್ಚಿದ್ದು ನೆನಪಿದೆಯೇ? ಇದಕ್ಕಿಂತ ಸ್ವಲ್ಪ ಕಡಿಮೆ ಅಸಹ್ಯಕರ ಹಾಗೂ ಪ್ರತಿಗಾಮಿ ಘಟನೆ ಇದೇ ಡಿಸೆಂಬರ್ 3ರಂದು ಪಾಕಿಸ್ತಾನದಲ್ಲಿ ಘಟಿಸಿದೆ. ಅಂದು ಇಸ್ಲಾಮಾಬಾದ್‌ನ ಕಾಯದ್- ಎಫ್ ಆಜಂ ವಿಶ್ವವಿದ್ಯಾಲಯದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಆಂಡ್ ಕಲ್ಚರಲ್ ರೀಸರ್ಚ್ (ಎನ್‌ಐಎಚ್‌ಸಿಆರ್) ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಯೀದ್ ವಖಾರ್ ಅಲಿ ಶಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು.
ಅವರು ಮಾಡಿದ ಅಪರಾಧ ಇಷ್ಟೇ- ನವೆಂಬರ್ 25ರಂದು ಸಿಂಧ್ ಪ್ರಾಂತ್ಯದ ಖಾಯರ್ಪುರ್‌ನಲ್ಲಿರುವ ಶಾ ಅಬ್ದುಲ್ ಲತೀಫ್ ವಿಶ್ವವಿದ್ಯಾಲಯ ಮತ್ತು ಎನ್‌ಐಎಚ್ಸಿಆರ್ ಜಂಟಿಯಾಗಿ ‘ಸಿಂಧ್: ಇತಿಹಾಸ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಆಯೋಜಿಸಿದವು. ಅಲ್ಲಿ ತಮ್ಮ ಪ್ರಬಂಧ ಮಂಡಿಸುತ್ತ ಪ್ರೊ. ಶಾ, ಪಾಕಿಸ್ತಾನದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿಲ್ಲದ ಹಲವು ಹೆಸರುಗಳನ್ನು ಪ್ರಸ್ತಾಪಿಸಿದರು. ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರು, ಜಿ. ಎಂ. ಸಯೀದ್, ಬಚ್ಚಾ ಖಾನ್, ವಲೀ ಖಾನ್ ಮುಂತಾದ ಸ್ವಾತಂತ್ಯ್ರೋತ್ತರ ಪಾಕಿಸ್ತಾನದ ಪ್ರಾಂತೀಯ ನಾಯಕರೂ ಪಾಕಿಸ್ತಾನದ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಬೇಕು ಎಂದು ವಾದಿಸಿದರು. ಅವರ ಮಾತುಗಳು ಪಠ್ಯಕ್ರಮಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಇರುವ ಸರ್ಕಾರದ ಉನ್ನತ ಶಿಕ್ಷಣ ಆಯೋಗದ ಕೆಂಗಣ್ಣಿಗೆ ಗುರಿಯಾದವು.
ಮಹದಾಯಿ : ಜನರ ದಾರಿ ತಪ್ಪಿಸುವುದು ಕಾಂಗ್ರೆಸ್‌ಗೆ ಶೋಭೆಯೇ?
– ವೃಷಾಂಕ್ ಭಟ್,ದೆಹಲಿ
ಕಳಸಾ-ಬಂಡೂರ ಕಾಲುವೆಗೆ ಮಹದಾಯಿ ನೀರು ಹರಿಸಲು ಪ್ರಧಾನಿಯೊಬ್ಬರೇ ಶಕ್ತರು ಎಂಬ ರಾಜಕೀಯ ಸುಳ್ಳನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ತಿಳಿದೋ ತಿಳಿಯದೆಯೋ ಮಾಧ್ಯಮಗಳು ಕೂಡ ಹೆಚ್ಚು ಕಡಿಮೆ ಇದೇ ಸುಳ್ಳನ್ನು ಪ್ರಸಾರ ಮಾಡುತ್ತಿದೆ. ಮಹದಾಯಿ ಸಮಸ್ಯೆ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಕಾಂಗ್ರೆಸ್ ಪಾಲಿಗಿದು ರಾಜಕೀಯ ಅವಕಾಶ. ಮಹದಾಯಿ ಸಮಸ್ಯೆ ಜೀವಂತವಾಗಿದ್ದಷ್ಟು ದಿನವೂ ರಾಜ್ಯದ ಜನರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುತ್ತದೆ ಎಂಬುವುದು ಸಿದ್ಧರಾಮಯ್ಯ ಮತ್ತವರ ಹೈಕಮಾಂಡ್‌ಗೆ ತಿಳಿಯದ ವಿಷಯವಲ್ಲ. ಹಾಗಾಗಿ ಮಹದಾಯಿ ಸಮಸ್ಯೆ ಬಹೆಗರಿಯುವುದು ರಾಜ್ಯ ಸರ್ಕಾರಕ್ಕೇ ಬೇಕಿಲ್ಲ. ಸಮಸ್ಯೆ ಬಗೆಹರಿಸಲು ನಿಜಕ್ಕೂ ಸಾಧ್ಯವಿದೆಯೆಂದಾದರೆ ಅದು ಕಾಂಗ್ರೆಸ್‌ಗೆ ಮಾತ್ರ. ಮಹದಾಯಿ ಪ್ರಕರಣ ಸಂಬಂಧ ನ್ಯಾಯಾಧಿಕರಣ ರಚನೆಯಾದ ಬಗೆ ಮತ್ತು ಅದರಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆ ಎಂಬುದನ್ನು ನೋಡೋಣ.
1) ಜುಲೈ 2002 : ಅಂತಾರಾಜ್ಯ ನದಿ ನೀರು ವ್ಯಾಜ್ಯ-1956 ಅಡಿಯಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಗೋವಾ ಸರ್ಕಾರ ಕೇಂದ್ರಕ್ಕೆ ಮನವಿ ನೀಡಿತ್ತು. ಆದರೆ ಕೇಂದ್ರವು ಆ ಕೂಡಲೇ ನ್ಯಾಯಾಧಿಕರಣ ರಚಿಸಲಿಲ್ಲ.ಆಗಿದ್ದದ್ದು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ.
2) ಏ.4-2006: ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸುತ್ತಾರೆ. ಆದರೆ ಅಂದು ಗೋವಾ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ರಾಣೆ ನ್ಯಾಯಾಧಿಕರಣ ರಚನೆಯಾಗಲೇ ಬೇಕು ಎಂದು ಹಠ ಹಿಡಿಯುತ್ತಾರೆ. ಆ ಮೂಲಕ ಮಾತು ಕತೆಯ ಉದ್ದೇಶ ವಿಫಲ.
ಮತ್ತಷ್ಟು ಓದು
ಭಾರತವನ್ನು “ಕಾಂಗ್ರೆಸ್ಸ್ ಮುಕ್ತ”ವಾಗಿಸಲು,ಕರ್ನಾಟಕದಲ್ಲಿ “ಬಿಜೆಪಿಯೇ ಇಲ್ಲ”!
– ರಾಕೇಶ್ ಶೆಟ್ಟಿ
ಕುರುಕ್ಷೇತ್ರದ ಯುದ್ದಕ್ಕೆ ಬೆಂಬಲ ಕೋರಿ ಬಂದ ಅರ್ಜುನನಿಗೆ,”ನಾರಾಯಣ ಬೇಕೋ?”,”ನಾರಾಯಣಿ ಸೈನ್ಯ ಬೇಕೋ?” ಎಂದು ಕೇಳುತ್ತಾನೆ ಶ್ರೀಕೃಷ್ಣ.’ಸಂಖ್ಯೆ’ ಗಿಂತ ‘ವ್ಯಕ್ತಿ’ ಮತ್ತು ‘ವ್ಯಕ್ತಿ’ಗಿಂತ ‘ವ್ಯಕ್ತಿತ್ವ’ದ ಮಹತ್ವ ಅರಿತಿದ್ದ ಅರ್ಜುನ “ನಾರಾಯಣ” ಎನ್ನುತ್ತಾನೆ. ಅರ್ಜುನನೆಡೆಗೆ ಕನಿಕರ ತೋರಿದ ದುರ್ಯೋಧನ “ನಾರಾಯಣಿ ಸೈನ್ಯ” ಪಡೆದು ಹೋಗುತ್ತಾನೆ.ಕಡೆಗೆ ಯುದ್ಧದಲ್ಲಿ ಗೆದ್ದಿದ್ದು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಇಲ್ಲಿ ನನ್ನ ಗಮನವಿರುವುದು ಯುದ್ಧದ ಮೇಲಲ್ಲ.ಯುದ್ಧಕ್ಕೆ ಹೊರಟು ನಿಂತವನು ಮಾಡಿಕೊಳ್ಳುವ ತಯಾರಿಯ ಮೇಲೆ.ಕುರುಕ್ಷೇತ್ರದ ಯುದ್ಧಕ್ಕೆ ಕಾರಣನಾದ ದುರ್ಯೋಧನ,ಯುದ್ಧಕ್ಕೆ ಬೇಕಾದ ಜನರನ್ನು (ಸಂಖ್ಯೆ) ಒಟ್ಟುಗೂಡಿಸಿಕೊಂಡು ಹೊರಟು ನಿಂತನೇ ಹೊರತು,ಯುದ್ದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ.
ಬಹುಷಃ, ತನ್ನ ಜೊತೆಗೆ ಭೀಷ್ಮ,ದ್ರೋಣಾಚರ್ಯರಂತ ಅಸಾಧಾರಣ ಸಾಮರ್ಥ್ಯದ “ವ್ಯಕ್ತಿ”ಗಳಿದ್ದಾರೆ ಎನ್ನುವ ಅಹಂ ದುರ್ಯೋಧನನಿಗಿದ್ದೀತು.ವ್ಯಕ್ತಿಗಳಿದ್ದರೇನಂತೆ “ವ್ಯಕ್ತಿತ್ವ” ಇರಲಿಲ್ಲವಲ್ಲ!
ಏನಿದು,ಭೀಷ್ಮನಂತ ಭೀಷ್ಮ,ದ್ರೋಣಾಚಾರ್ಯರಿಗೆ ವ್ಯಕ್ತಿತ್ವವಿರಲಿಲ್ಲ ಎನ್ನುತ್ತಿದ್ದೇನೆ ಎನ್ನಿಸಬಹುದು.ಧರ್ಮ-ಅಧರ್ಮದ ಪ್ರಶ್ನೆ ಬಂದಾಗ ಅದಿನ್ನೇನೋ ಸಬೂಬು ಕೊಟ್ಟು ಅಧರ್ಮದ ಪರ ನಿಲ್ಲುವ ವ್ಯಕ್ತಿಯ “ವ್ಯಕ್ತಿತ್ವ”ಕ್ಕೆ ಬೆಲೆ ಉಳಿಯುತ್ತದೆಯೇ? ಕಡೆಗೂ ಮಹಾಭಾರತದ ಯುದ್ಧದಲ್ಲಿ ಗೆದ್ದಿದ್ದು ಧರ್ಮದ ಪರನಿಂತ ವ್ಯಕ್ತಿಗಳೇ.
ನುಡಿಸಿರಿಯನ್ನು ವಿರೋಧಿಸುವ ನೈತಿಕತೆ ಇಂದಿನ ಸಾಹಿತಿಗಳಿಗಿದೆಯೇ?
– ಸಂತೋಷ್ ಕುಮಾರ್ ಪಿ.ಕೆ
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ 2014 ನ್ನು ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲಾಯಿತು. ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಡಾ.ಮೋಹನ್ ಆಳ್ವರ ಶ್ರಮ ಶ್ಲಾಘನೀಯವಾದುದು. ನುಡಿಸಿರಿಯ ವೈಭವವು ಆಗಮಿಸಿದ ಎಲ್ಲಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರೇಮಿಗಳಿಗಳಿಗೆ ಮನತಣಿಸುವಷ್ಟು ವಿಷಯ, ಮನರಂಜನೆಗಳನ್ನು ನೀಡಿರುವುದು ಸುಳ್ಳಲ್ಲ. ಅತ್ಯದ್ಭುತ ಮೆರವಣಿಗೆಯ ಮೂಲಕ ಪ್ರಾರಂಭವಾಗುವ ನುಡಿಸಿರಿಯು ಪ್ರತಿಯೊಂದು ಹಂತದಲ್ಲಿಯೂ ಸಮಯ ಮತ್ತು ಶಿಸ್ತು ಪಾಲನೆಯ ಅಣತಿಯಂತೆ ಜರುಗುತ್ತಾ ಹೋಗುತ್ತದೆ.
ಕನ್ನಡವು ಕರ್ನಾಟಕದ ವ್ಯವಹಾರಿಕ ಮತ್ತು ಮುಖ್ಯವಾಹಿನಿಯ ಭಾಷೆಯಾಗಿದ್ದರೂ ಸಹ ಇತರ ಭಾಷೆಗಳಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಉದಾಹರಣೆಗೆ, ತುಳು, ಕೊಂಕಣಿ, ಬ್ಯಾರಿ, ಬಂಜಾರ, ಕೊಡವ ಇನ್ನೂ ಮುಂತಾದ ಭಾಷೆಗಳು ಅಸ್ತಿತ್ವದಲ್ಲಿವೆ. ಈ ಬಾರಿಯ ನುಡಿಸಿರಿಯಲ್ಲಿ ಇಂತಹ ಪ್ರಾದೇಶಿಕ ಭಾಷೆಗಳಿಗೂ ಸಹ ಮನ್ನಣೆ ನೀಡುವ ಮೂಲಕ ಅವುಗಳಿಗೆ ಸಂಬಂಧಿಸಿದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಲಾಗಿತ್ತು. ಪ್ರತ್ಯೇಕವಾಗಿ ಒಂದೊಂದು ದಿನವೂ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷಾ ಸಮ್ಮೇಳನಗಳೂ ಪ್ರತಿದಿನ ಸಂಜೆ ಜರುಗಿದವು. ಹಾಗೂ ಕೃಷಿ ಸಲಕರಣೆಗಳ ಮೇಳ, ಆಹಾರ ತಿಂಡಿತಿನಿಸುಗಳ ಮೇಳ ಹಾಗೂ ಪುಸ್ತಕ ಮೇಳ ಇವೆಲ್ಲವೂ ನುಡಿಸಿರಿಯ ವಿಶೇಷ ರಂಗುಗಳು.
ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ
– ಗುರುರಾಜ್ ಕೊಡ್ಕಣಿ
ಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.