ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕೊರೊನಾ’

25
ಮೇ

ಫಾರ್ಮಾ ಲಾಬಿ Vs ಮೋದಿಯವರ ಭಾರತ

– ಅಜಿತ್ ಶೆಟ್ಟಿ ಹೆರಂಜೆ

ಜಗತ್ತಿನ ತಥಾಕಥಿತ ಮುಂದುವರಿದ  ರಾಷ್ಟ್ರಗಳಿಗೆ, ಭಾರತದ ಸಾಮರ್ಥ್ಯವನ್ನು ಒಪ್ಪಿ ಅರಗಿಸಿಕೊಳ್ಳಲು ಇಂದಿಗೂ ಕಷ್ಟ ಆಗುತ್ತಿರುವುದಂತೂ ಸತ್ಯ.

ಕೋವಿಡ್ ಇಡೀ ವಿಶ್ವಕ್ಕೆ ಸಂಕಷ್ಟದ ಜೊತೆಗೆ‌ ಜಗತ್ತಿನ ರಾಷ್ಟ್ರಗಳಿಗೆ  ಔಷಧೀಯ ಕ್ಷೇತ್ರದಲ್ಲಿ ತಮ್ಮ‌ ತಮ್ಮ‌ ಸಾಮರ್ಥ್ಯವನ್ನು ಸಾಬೀತುಪಡಿಸುವ ಒಂದು‌ ವೇದಿಕೆಯನ್ನೂ‌ ನಿರ್ಮಾಣ‌ ಮಾಡಿಕೊಟ್ಟಿತು.‌‌ ಯಾವುದೇ ರೋಗ ಮತ್ತು ಅದರ ಔಷಧಿ ಎರಡೂ ಒಂದಕ್ಕೊಂದು ಸಮಾನಾಂತರವಾಗಿ ಅಥವಾ ಒಂದರ ಹಿಂದೆ ಇನ್ನೊಂದು ಅಷ್ಟೇ ವೇಗದಲ್ಲಿ‌‌‌ ಚಲಿಸುವ ಸರಳ‌ ರೇಖೆಯಂತೆ. ಅದು ಯಾವುದೇ ಕಾಯಿಲೆ ಇರಲಿ. ಪೋಲಿಯೋ, ಕ್ಷಯ, ಕ್ಯಾನ್ಸರ್, ಏಡ್ಸ್ ಹೀಗೆ. ಒಂದೋ‌ ಈ ರೋಗಗಳಿಗೆ  ಚಿಕಿತ್ಸೆ ಕೊಟ್ಟು ಅವುಗಳನ್ನು ನಿಯಂತ್ರಿಸುವುದು ಅಥವಾ ‌ಅವುಗಳಿಗೆ ಮದ್ದು ಕಂಡು ಹಿಡಿದು ರೋಗವನ್ನು ವಾಸಿ ಮಾಡುವುದು. ಅಂದಹಾಗೆ ಇವೆರಡೂ ವ್ಯವಸ್ಥೆಯ ನಿಯಂತ್ರಣ, ‌ಇಂದಿಗೂ‌ ಯಾವುದೇ ದೇಶದ ಸರಕಾರಗಳ ಬಳಿ‌ ಇಲ್ಲ. ಅವುಗಳ ನಿಯಂತ್ರಣ ಇರುವುದು‌ ಈ‌ ಔಷಧ‌‌ ಕಂಪೆನಿಗಳ‌ ಕಪಿ ಮುಷ್ಟಿಯಲ್ಲಿ. ಅವುಗಳು ಪೇಂಟೆಂಟ್ ಎನ್ನುವ ಕೃತಿ ‌ಸೌಮ್ಯದ ಹಕ್ಕನ್ನು ‌ಕಾಯ್ದಿರಿಸುವ ಮೂಲಕ‌  ಬಹುತೇಕ ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಇದರ‌ ಪಾರುಪತ್ಯ ನಡೆಸುತ್ತಿವೆ.  ಈ ಪೇಟೆಂಟ್ ಮತ್ತು ಯಾವ ರೋಗಕ್ಕೆ ಔಷಧ ಕಂಡು‌ಹಿಡಿದರೆ ಹೆಚ್ಚು ಲಾಭ? ಹಾಗೆಯೇ ಯಾವ ರೋಗಕ್ಕೆ ಔಷಧಿ ಕಂಡು‌ಹಿಡಿಯದೇ ಇದ್ದರೆ ಅಥವಾ ಕಂಡು‌ಹಿಡಿದರೂ ಅದನ್ನು ಜಗತ್ತಿಗೆ ಕೊಡದೇ ಇದ್ದರೆ ಔಷಧ‌‌ ಕಂಪೆನಿಗಳಿಗೆ  ಹೆಚ್ಚು ಲಾಭ? ಅನ್ನುವ ಲೆಕ್ಕಾಚಾರ ಇವರ ಕಾರ್ಯ ಯೋಜನೆಯನ್ನು ನಿರ್ಧಾರ ಮಾಡುತ್ತದೆ.

ಉದಾಹರಣೆಗೆ ಕ್ಯಾನ್ಸರ್ ರೋಗವನ್ನೇ ತೆಗೆದುಕೊಳ್ಳಿ!

ಈ ರೋಗ ಮನುಕುಲವನ್ನು ಕ್ರಿ. ಪೂರ್ವ 3000 ದಿಂದಲೇ ಕಾಡಲು ಶುರು ಮಾಡಿದೆ. ಮನುಷ್ಯ ಇವತ್ತು ವಿಜ್ಞಾನ ತಂತ್ರಜ್ಞಾನದ ಮುಖಾಂತರ ಸೌರಮಂಡಲದ ಆಚೆಗೂ ಹೋಗಿದ್ದಾನೆ  ಆದರೆ 5000 ವರ್ಷಗಳಷ್ಟು ಹಳೆಯ ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಅಂದ್ರೆ ಇದು ತಮ್ಮನ್ನು ತಾವು ಆಧುನಿಕರು, ವೈಜ್ಞಾನಿಕರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರಿಗೆ   ನಾಚಿಕೆಯ ವಿಷಯ ಅಲ್ವಾ? 

ನಾಚಿಕೆ ಯಾಕೆ ಆಗಬೇಕು ಹೇಳಿ! ಈ ರೋಗ 2019ರ ಹೊತ್ತಿಗೆ $ 1,18,352 ಮಿಲಿಯನ್ ಡಾಲರ್ ಮಾರುಕಟ್ಟೆ, 2027ರ ಹೊತ್ತಿಗೆ ಇದು ಇನ್ನೂ 7% ಬೆಳವಣಿಗೆ ಸಾಧಿಸಲಿದೆ ಅಂತೆ. ಈ ರೋಗಕ್ಕೆ ಇರುವ  ಜನಜನಿತ ಚಿಕಿತ್ಸೆ ಕಿಮೋ ಥೆರಪಿ ಯ  ಒಟ್ಟು  ವಾರ್ಷಿಕ ವಹಿವಾಟು ಸುಮಾರು 74.3 ಬಿಲಿಯನ್ ಡಾಲರ್.  ಜಗತ್ತಿನ ಔಷಧಿ ಕಂಪೆನಿ ಗಳಿಗೆ, ಆಸ್ಪತ್ರೆಗಳಿಗೆ  ಕ್ಯಾನ್ಸರ್ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ. ಇಂತಿಪ್ಪ ಕಾಯಿಲೆಗೆ ಔಷಧಿ ಕಂಡು ಹಿಡಿದು  ತಮ್ಮ  ಉದ್ಯಮದ ಬುಡಕ್ಕೆ ತಾವೇ ಪೆಟ್ಟು ಕೊಟ್ಟುಕೊಂಡಾರಾ?  ಖಂಡಿತಾ ಇಲ್ಲ! ಸಾವಿರ ವರ್ಷ ಹೋದರೂ ಇವ್ರು ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡುಹಿಡಿಯೋಲ್ಲ. ಒಂದೊಮ್ಮೆ ಕಂಡು ಹಿಡಿದರೂ ಅದನ್ನು ಗುಪ್ತವಾಗಿಯೇ ಇಡುತ್ತಾರೆ. ಜಗತ್ತಿನ ಯಾವುದೋ ಪ್ರಭಾವಿ ವ್ಯಕ್ತಿಯ ಜೀವ ರಕ್ಷಣೆಗೆ ಮಾತ್ರ ಉಪಯೋಗಿಸಿಯಾರು ಅಷ್ಟೇ! ಜನಸಮಾನ್ಯನ ಕೈಗೆ ಖಂಡಿತ ಅದು ಸಿಗಲಿಕ್ಕೆ ಇಲ್ಲ.

ನಾಗರಿಕತೆಯ ಇತಿಹಾಸವನ್ನೇ ತೆಗೆದು ನೋಡಿ! ಮಾನವ ಭೂಮಿಯ ಮೇಲೆ ಬದುಕಿದ್ದ ಅಷ್ಟು ಸಮಯ ರೋಗರುಜಿನಗಳ ಜೊತೆಗೆ ಬದುಕಿದ. ತನ್ನ ಅನುಭವದ ಆಧಾರದ ಮೇಲೆ  ಕೆಲವೊಂದಿಷ್ಟು ರೋಗಗಳಿಗೆ ಔಷಧೋಪಚಾರ ವನ್ನೂ ಕಂಡುಹಿಡಿದ. ಇದು ಜಗತ್ತು ಕಂಡ ಎಲ್ಲಾ ನಾಗರೀಕತೆಯಲ್ಲೂ ಇತ್ತು.ಅಮೇರಿಕಾದ ಮಾಯನ್ ನಾಗರೀಕತೆ ಇರಲಿ, ಈಜಿಪ್ಟಿನ ನಾಗರೀಕತೆ ಇರಲಿ, ರೋಮನ್ ನಾಗರೀಕತೆ, ಮಸೊಪೊಟೋಮಿಯಾ,  ಚೀನಾದ ನಾಗರೀಕತೆಯೇ ಇರಲಿ ಅಥವಾ ಭಾರತದ ಸಿಂಧೂ ಕಣಿವೆಯ ನಾಗರೀಕತೆಯೇ ಇರಲಿ,ಈ ಎಲ್ಲಾ ಸಮಾಜಗಳಲ್ಲೂ ರೋಗಗಳು ಕಾಡುತ್ತಿದ್ದವು ಹಾಗು ಅವರು ಅವುಗಳೊಡನೆ ಸೆಣಸಾಡಲು ತಮ್ಮದೇ ರೀತಿಯ  ಔಷಧೋಪಚಾರದ ಪದ್ದತಿಯನ್ನು ಬೆಳೆಸಿಕೊಂಡರು. ಇಲ್ಲಿ ಯಾವತ್ತೂ ಸರಕಾರದ ಹಸ್ತಕ್ಷೇಪ ಇರಲಿಲ್ಲ. ಪ್ರತಿ ಸಮಾಜದ ಒಂದು‌ ವರ್ಗ ಔಷಧಯ ಪದ್ದತಿಯನ್ನು ಸಂಶೋಧನೆ ಮಾಡುತ್ತಾ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿ ಕೊಂಡು ಬಂದರು. ಎಲ್ಲೂ ಯಾರೂ ಯಾವತ್ತೂ ಇಂತಾ ರೋಗಕ್ಕೆ ಇಂತವರೇ ಔಷಧೋಪಚಾರ ಮಾಡಬೇಕು, ಇಂತವರು ಹೇಳಿದ್ದರೆ ಮಾತ್ರ ಅದು ಔಷಧ, ಈ ರೋಗಕ್ಕೆ ನಾನು ಮಾತ್ರ ಔಷಧ ಕಂಡುಹಿಡಿಯ ಬೇಕು, ಬೇರೆಯವರು ಕಂಡುಹಿಡಿಯಲು ಅನುಮತಿ ಕೊಡ ಬಾರದು ಇಂತಹ ಯಾವುದೇ ವಿಲಕ್ಷಣ ಕಟ್ಟುಪಾಡುಗಳು ಇರಲಿಲ್ಲ.

ಯಾವ ರೋಗಕ್ಕೆ ಯಾರಬಳಿ ಔಷಧ ತೆಗೆದು ಕೊಳ್ಳಬೇಕು ಎಂದು ಜನತೆಯೇ ತೀರ್ಮಾನ ಮಾಡುತ್ತಿದ್ದರು. ಬಹುತೇಕ  ಔಷಧೋಪಚಾರ ಮಾಡುವವರು ತಾವೇ ಖುದ್ದಾಗಿ ಔಷಧ ತಯಾರು  ಮಾಡುತ್ತಿದ್ದರು. ಇಂದಿನ ಹಾಗೆ ಯಾರೋ ಮಾಡಿದ ಔಷಧಿಗೆ ಪಟ್ಟಿ ಬರೆದು ಕೊಡುವ ಡಾಕ್ಟರ್ ಅಲ್ಲ. ಆದರೆ ಈ ಆಧುನಿಕ ವೈದ್ಯಕೀಯ ವಿಜ್ಞಾನ, ಎಲ್ಲಾ ಸ್ಥಳೀಯ ಔಷಧಿ ಪದ್ಧತಿಗಳನ್ನು ಕೊಲ್ಲುತ್ತಾ ಬಂತು, ವಿಜ್ಞಾನದ ಹೆಸರಿನಲ್ಲಿ ಇವುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಾ ಬಂದರು. ಜನರಿಗೂ ಹಿತ್ತಲ‌ಗಿಡ ಮದ್ದಲ್ಲ ಅನ್ನಿಸತೊಡಗಿತು. ಕೊನೆಗೆ ರೋಗಗಳಿಗೆ ಇಂಗ್ಲಿಷ್ ಮದ್ದು ಬಿಟ್ಟರೆ ಬೇರೆ ಉಪಾಯ ಇಲ್ಲ ಅನ್ನುವಷ್ಟು ಜನ ಇವರ ಮೇಲೆ ಅವಲಂಬಿತರಾದರು. 

ಈ ಜಾಗತೀಕರಣ ಉಳಿದ ಎಲ್ಲಾ ಸ್ಥಳೀಯ ಸಂಸ್ಕೃತಿಗಳಂತೆಯೇ ಸ್ಥಳೀಯ ಔಷದೀಯ ವ್ಯವಸ್ಥೆಯನ್ನು ಆಪೋಷಣೆಗೆ ತೆಗೆದುಕೊಂಡಿತು.  ಈಗ ಪ್ರಪಂಚದಲ್ಲಿ ಹುಟ್ಟಿದ ಯಾವುದೇ ರೋಗಕ್ಕೆ ಇವರೇ ಔಷಧ ಕಂಡು ಹಿಡಿಯವ ದೊಣ್ಣೆ ನಾಯಕರು, ಇವರು ಹೇಳಿದ ಮಾತೇ ವೇದ ವಾಕ್ಯ, ಇವರು ಹೇಳಿದ್ದನ್ನು ಮಾತ್ರ ಜಗತ್ತು ಕೇಳಬೇಕು. ಉಳಿದ ಯಾವುದೇ ಚಿಕಿತ್ಸಾ ವಿಧಾನಕ್ಕೆ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಬೌದ್ದಿಕ ಸಾಮರ್ಥ್ಯ ಇಲ್ಲ. ಒಂದೊಮ್ಮೆ ಅವರು ಅಂತಹಾ ಸಾಮರ್ಥ್ಯವನ್ನು ತೋರಿಸಿದರೂ ಅವರಿಗೆ ಡಾ.ಗಿರಿಧರ್ ಕಜೆ, ಬಾಬಾ ರಾಮ ದೇವ್ ಅಥವಾ ಈಗ ಆಂದ್ರಧಲ್ಲಿ ಸುದ್ದಿ ಮಾಡುತ್ತಿರುವು ಆನಂದಯ್ಯಾ ಅವರಿಗೆ ಆದ ಪರಿಸ್ಥಿತಿಯೇ ಆಗುತ್ತದೆ.

ಗಿರಿಧರ ಕಜೆಯವರು ಔಷಧಿ ಕಂಡುಹಿಡಿದಾಗ ಅವರಿಗೆ ಮತ್ತು ಅವರ ಔಷದಕ್ಕೆ ಅಪ‌ಪ್ರಚಾರ ಮಾಡಲು ತಾ ಮುಂದು ನಾ ಮುಂದು‌ ಎಂದು ನಿಂತರು, ಇವರು ಕಜೆಯವರನ್ನು ಕೇಳಿದ ಒಟ್ಟು ಪ್ರಶ್ನೆಗಳ ಸಾರಂಶ ಇಷ್ಟೆ, ಅಲ್ಲಾ ನಾವು ಕೋಟಿಗಟ್ಟಲೆ ಹಣ ಹಾಕಿ ಅಷ್ಟು ದೊಡ್ಡ ಕಂಪೆನಿ‌ ಜಗತ್ತಿನಾದ್ಯಂತ ಮಾಡಿದ್ದೇವೆ ನೀನು‌ ಪುಸಕ್ಕನೆ ಬಂದು ಈ ನಾಕಾಣೆ ಗಿಡಮೂಲಿಕೆ ಔಷಧ ಮಾಡಿ  ಜನರಿಗೆ ಕೊಟ್ಟರೆ ನಾವು ಹಾಕಿದ ಕೋಟ್ಯಾಂತರ ರೂಪಾಯಿ ಬಂಡವಾಳ ಯಾವ ಸಮುದ್ರದಿಂದ ವಾಪಾಸ್ ತೆಗೆಯೋದು?.  ಇದನ್ನ ಅವರು ನೇರವಾಗಿ ಹೇಳದ ವಿಜ್ಞಾನದ ಭಾಷೆ ಅಂದ್ರೆ ಸೈಂಟಿಫಿಕ್ ಲಾಂಗ್ವೇಜ್‌ ಮುಖಾಂತರ ಹೇಳಿದರು. ಕೊನೆಗೆ ಈ ಲಾಬಿಗೆ ಮಣಿದ ಕಜೆಯವರು ಇದೇ ಔಷಧಿಯನ್ನು ಇಮ್ಯುನಿಟಿ ಬೂಷ್ಟರ್ ಹೆಸರಿನಲ್ಲಿ ಕೊಡಬೇಕಾಯಿತು. ಕಜೆಯವರಿಗೆ ಬೈದ ಅದೆಷ್ಟು ಮಂದಿ ಅವರ ಕ್ಲಿನಿಕ್ ಮುಂದೆ ಬಂದು ನಿಂತು ಮುಖ ಮುಚ್ಚಿಕೊಂಡು ಅವರ ಔಷಧ ಕೊಂಡು ಹೋಗಿಲ್ಲ?. ಅನ್ ಅಫೀಷಿಯಲ್ಲಿ ಅವರ ಮದ್ದು ಕರೋನ ಒಂದರ ಅಲೆಯ ಸಂದರ್ಭದಲ್ಲಿ ಬಹುತೇಕ ಎಲ್ಲ ಮನೆಯಲ್ಲೂ ಇತ್ತು. ಅವರ ಕಂಪೆನಿ‌ ಈ ಔಷಧದ ಉತ್ಪಾದನೆ ಹಗಲೂ ರಾತ್ರಿ ಮಾಡಬೇಕಾಯಿತು.  ಅಧೀಕೃತವಾಗಿ ವಿರೋಧ ವ್ಯಕ್ತಪಡಿಸಿದ  ಆರೋಗ್ಯ ಇಲಾಖೆಯ ಅಧಿಕಾರಿ ಕೂಡ ತನ್ನ ಮನೆಯವರಿಗೆ ಕರೋನ ಬಂದಾಗ ಇದೆ ಔಷಧ ಕೊಟ್ಟು ಸಂಬಾಳಿಸಿದ್ದು ನನಗೆ ಗೊತ್ತಿದೆ. ಆದರೆ ಆತ ಅದನ್ನ ಬಹಿರಂಗವಾಗಿ ಹೇಳುವಂತಿಲ್ಲ. ಬಾಬಾ ರಾಮ್‌ದೇವ್ ಅವರ ಕರೊನಿಲ್ ಔಷಧಯ ವಿರುದ್ಧ ಎಂತಹಾ ಅಪಪ್ರಚಾರ  ಮಾಡಿದರು. ಕೊನೆಗೆ ಸರಕಾರಕ್ಕೂ ಮುಜುಗರ ಆಗುವಂತೆ ಮಾಡಿ ಅದನ್ನ ಇಮ್ಯುನಟಿ ಭೂಸ್ಟರ್ ಎಂದು ಮಾರುಕಟ್ಟೆಗೆ ತಂದರು. ಈಗ ಕೋವಿಡ್ ರೋಗಕ್ಕ ಡಿ.ಆರ್.ಡಿ.ಒ ಮತ್ತು ರೆಡ್ಡಿ ಲೆಬೋರಟರಿ ಜಂಟಿಯಾಗಿ ಔಷಧ ಕಂಡುಹಿಡಿದು ‌ ಮಾರುಕಟ್ಟೆಗೆ ತಂದರು. ಬಹುಶಃ ಇದು ವಿಶ್ವದ ಮೊದಲ ಕೋವಿಡ್ ಔಷಧ. ಈ ಮದ್ದು ಹೊರಗೆ ಬಂದು ಜನಮಾನಸದ ನಡುವೆ ವಿಶ್ವಾಸ ಮೂಡುವ ತನಕ ಎಲ್ಲೂ ಇದರ  ಮೂಲ ಬಾಬಾ ರಾಮ್ ದೇವ್ ಅವರ ಪತಂಜಲಿ  ಮಾಡಿದ‌ ಸಂಶೋಧನೆಯ ಆಧಾರದ ಮೇಲೆ ಎಂದು ಹೇಳಲಿಲ್ಲ. ಹೇಳಿದ್ದರೆ ಪಾಶ್ಚಾತ್ಯ ಆಧುನಿಕ‌ ವೈದ್ಯಕೀಯ ಜಗತ್ತು ಕಜೆಯವರನ್ನು ಪ್ರಶ್ನೆ ಮಾಡಿದಂತೆ ಇದನ್ನೂ‌ ಮಾಡುತ್ತಿತ್ತು. ಒಂದು ವಾರದಿಂದ ಆಂಧ್ರ ಪ್ರದೇಶದ ಒಂದು ಪುಟ್ಟ ಹಳ್ಳಿಯ ನಾಟೀ ವೈದ್ಯರು ಒಬ್ಬರು ಕರೋನಾಕ್ಕೆ ಕೊಡುತ್ತಿರುವ ನಾಟಿ ಔಷದ ಅವರನ್ನ ಇವತ್ತು  ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದೆ. ಇವರ ಇರುವ ಎರಡೂ ಹಳ್ಳಿಗೆ ಇವರ ಮದ್ದಿನ ಕಾರಣ ಕರೋನ ಬಂದೇ ಇಲ್ಲ ಇವರ ಕೊಟ್ಟ ಔಷದಿಯ ಪ್ರಭಾವಕ್ಕೆ! ಇವರು ಈ ಔಷದವನ್ನ ಹಣಕ್ಕೂ ಮಾರುತ್ತಿರಲಿಲ್ಲ. ಜನರು ಮುಗಿಬಿದ್ದರು. ಮಾಧ್ಯಮಕ್ಕೆ ಗೊತ್ತಾಯಿತು, ಸರಕಾರಕ್ಕೆ ಇದು ಮುಜುಗರ, ಮೂಢನಂಬಿಕೆ ‌ಎಂಬಂತೆ ಭಾಸವಾಯಿತು, ಬಂಧಿಸಿದರು, ಜನರು ದಂಗೆ ಎದ್ದರು. ಅದು ಉಪರಾಷ್ಟ್ರಪತಿ ವೇಂಕಯ್ಯ ನಾಯ್ಡು  ಅವರ ಕ್ಷೇತ್ರ ಹಾಗು‌  ಆನಂದಯ್ಯನವರ ಪರಿಚಯ ಅವರಿಗೂ ತಕ್ಕಮಟ್ಟಿಗೆ ಇರುವ ಕಾರಣ ಕೂಡಲೆ ಆಂದ್ರಪ್ರದೇಶದ ಸರಕಾರ ಅವರನ್ನು ಬಿಡುಗಡೆ ಮಾಡಿ ಅವರಿಗೆ ಜಡ್ + ಭದ್ರತೆ ಒದಗಿಸುವಂತೆ ಹೇಳಿದರು ಜೊತೆಗೆ ಅವರ ಔಷಧದ ಸ್ಯಾಂಪಲ್ ಐಎಮ್ ಆರ್ ಸಿ ಗೆ ಪರೀಕ್ಷೆಗೆ ಕಳುಹಿಸಲಾಯಿತು. ಒಟ್ಟಿನಲ್ಲಿ  ಕೇಂದ್ರ ಸರಕಾರದ ಮುಂಜಾಗ್ರತೆಯಿಂದ ಒಬ್ಬ ನಾಟೀ ವೈದ್ಯರ ಮತ್ತು ಅವರ ಜ್ಞಾನದ ರಕ್ಷಣೆ ಮಾಡುವಲ್ಲಿ ಸದ್ಯಕ್ಕೆ ಸಫಲ ಆಯಿತು. ನೋಡಿತ್ತಿರಿ  ಈ ನಾಟಿ ವೈದ್ಯರ ಔಷಧಿಯ ಮಾನ ಹಾರಾಜು ಹಾಕಲು ಈ ಫಾರ್ಮಾ ಲಾಭಿಗಳು ಮಾಧ್ಯಮಕ್ಕೆ ಹೇಗೆ ಹಣ ಸುಪಾರಿ ಕೊಡಲಿದ್ದಾರೆ ಎಂದು. ಅವರು ಮಾಡುವುದೇ ಇದನ್ನು, ಮೊದಲು ಸಾದ್ಯವಾದರೆ ವ್ಯಕ್ತಿಯ ಪ್ರಾಣ ಹರಣ, ಇಲ್ಲವೋ ಮಾನ ಹರಣ. ನೀವು ಒಮ್ಮೆ ಭಾರತದ ಅಣು ವಿಜ್ಞಾನದ ಪಿತಾಮಹ ಹೋಮೀ ಬಾಬಾ ಅವರ ಸಾವು ಹೇಗಾಯಿತು ಎಂದು ಗೂಗಲ್ ಮಾಡಿ. ನಿಮಗೇ ತಿಳಿಯುತ್ತದೆ, ಈ ಪಾಶ್ಚಾತ್ಯ ದೇಶಗಳು ಭಾರತವನ್ನ ಹೇಗೆ ನಡೆಸಿಕೊಳ್ಳುತ್ತವೆ ಎಂದು. 

ಕೋವಿಡ್ ಕಾಯಿಲೆಗ  ಔಷಧ ಕಂಪೆನಿಗಳು ಮೊದಮೊದಲು ಔಷಧ ಕಂಡುಹಿಡಿಯಲು ಬಹುಕಾಲ ತಗೆದುಕೊಳ್ಳತ್ತದೆ ಎಂದರೂ ಕೊನೆಗೆ ರೋಗದ ಒತ್ತಡ ತೀವ್ರತೆ ಅರಿತು ತ್ವರಿತವಾಗಿ ಔಷಧ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿದರು. ಭಾರತ ಸೇರಿದಂತೆ ಬಹತೇಕರು ಈ ರೋಗಕ್ಕೆ ಅಮೇರಿಕಾ ಇಲ್ಲಾ ಯುರೋಪ್ ದೇಶಗಳು ಔಷಧ ಕಂಡುಹಿಡಿಯುತ್ತವೆ ಅಂದುಕೊಂಡಿದ್ದರು. ಮೊದಲಬಾರಗೆ ಈ ಪ್ರಕ್ರಿಯೆಯುಲ್ಲಿ ಭಾರತ ಸರಕಾರ ಈ  ಸಂಪೂರ್ಣ ನೇತ್ರತ್ವ ವಹಿಸಿತು. ಭಾರತ ಬಯೋಟೆಕ್ ಸೇರಿದಂತೆ ನಾಲ್ಕೈದು ಫಾರ್ಮಾ ಕಂಪೆನಿಗಳಿಗೆ ಅಗತ್ಯ ಕಾನೂನು ಮತ್ತು ಹಣಕಾಸಿನ ಸಹಾಯ ಮಾಡಿ ಔಷಧಿ ತಯಾರಿಕೆಗೆ ವೇಗ ಕೊಟ್ಟಿತು. ಜಗತ್ತಿನ ಫಾರ್ಮಾ ಕಂಪೆನಿಯ ದೈತ್ಯ ಫೈಜರ್ ಕಂಪೆನಿ ತನ್ನ ಲಸಿಕೆ ಮಾರುಕಟ್ಟೆಗೆ ಪರಿಚಯಿಸವ ಸಮಯಕ್ಕೆ ಸರಿಯಾಗಿ ಭಾರತದ ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸ್ಇನ್ ಹೊರಬಂತು. ಇದರ ಜೊತೆಗೆ ಮೋದಿ ‌ಸರಕಾರ ಇದರ ಬೆಲೆ  ಪ್ರತೀ ಡೋಸಿಗೆ ಇನ್ನೂರೈವತ್ತು ನಿಗದಿ ಮಾಡಿತು. ಮತ್ತು ಜಗತ್ತಿನ ಸುಮಾರು ನೂರು ದೇಶಗಳಿಗೆ  ಕೊಟ್ಟಿತು. ದಕ್ಷಿಣ ಆಫ್ರಿಕಾದೊಂದಿಗೆ ಸೇರಿ ಲಸಿಕೆಯ ಪೇಟೆಂಟ್ ತೆಗೆದು ಈ ಲಸಿಕೆಗಳು ಜಗತ್ತಿನ ಎಲ್ಲಾ ದೇಶಗಳಿಗೂ ಕೈಗೆಟಕುವ ದರಕ್ಕೆ ಸಿಗಲಿ ಎಂದಿತು. ಇದು ವಿಶ್ವದ ಫಾರ್ಮಾ ಲಾಭಿಗಳ ನಿದ್ದೆಗೆಡಿಸಿತು. ಆಗ ಕೋವ್ಯಾಕ್ಸಿನ್ ವಿಶ್ವಾಸಾರ್ಹತೆ ಹಾಳು ಮಾಡುವ ಎಲ್ಲಾ ಪ್ರಯತ್ನ ಕಾಂಗ್ರಸ್ ಪಕ್ಷದ ನೇತ್ರತ್ವದಲ್ಲಿ ನಡೆಯಿತು. ಭಾರತದ ಜನರು ಕೊಂಚಮಟ್ಟಿಗೆ ಇದನ್ನ ನಂಬಿದರು. ಕಾರಣ ಜಗತ್ತಿನ ಯಾವ ಮುಂದುವರಿದ ರಾಷ್ಟ್ರಗಳು ಭಾರತ ಇವುಗಳಿಗೆ ಸರಿಸಮಾನವಾಗಿ ಅವುಗಳಿಗಿಂತ ಕಮ್ಮಿ ಬೆಲೆಯ ಮತ್ತು ಹೆಚ್ಚು ಸಮರ್ಥ ಲಸಿಕೆ ಕಂಡುಹಿಡುತ್ತದೆ ಎಂಬ ನಿರೀಕ್ಷೆಯಲ್ಲಿ ಇರಲೇ ಇಲ್ಲ. ಇವರ ಲೆಕ್ಕಾಚಾರವೇ ಬೇರೆ ಇತ್ತು. ಭಾರತ ಒಂದು ದೊಡ್ಡ ಮಾರುಕಟ್ಟೆ , ತಮ್ಮ  ಈಕೊ ಸಿಸ್ಟಮ್ ಬಳಸಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ ತಾವು ಹೇಳಿದ ಬೆಲೆಗೆ ಮತ್ತು ತಾವು ಹೇಳಿದ ಷರತ್ತಿಗೆ ಭಾರತ ಸರಕಾರವನ್ನು ಸಿಕ್ಕಿಸಿ ಇಲ್ಲಿ‌ ಲಸಿಕೆ ಮಾರಬಹುದು ಅಂದುಕೊಂಡಿದ್ದರು. ಇದರಲ್ಲಿ ಅಮೇರಿಕಾದ ಫೈಜರ್ ಕಂಪೆನಿಯ ಪಾತ್ರ ಬಹಳಾ ದೊಡ್ಡದು. ತನ್ನ ಬಳಿ ಮಿಲಿಯನ್ ಗಟ್ಟಲೆ ಲಸಿಕೆ ಶೇಖರಿಸಿ ಇಟ್ಟಿದ್ದ ಈ ಕಂಪೆನಿ ತನ್ನ ಲಸಿಕೆ ಬೇಕಾದರೆ ನೀವು ನಿಮ್ಮ ಮಿಲಟರಿ ನೆಲೆಗಳನ್ನು ನಮಗೆ ಅಡಮಾನವಾಗಿಡಿ ಎಂದು ಲ್ಯಾಟಿನ್ ಅಮೆರಿಕ ದೇಶಗಳಿಗೆ ನಿಬಂಧನೆ ಹಾಕಿತ್ತು. ಒಂತರಾ ಈಷ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಹಿಂದೆ ಮಾಡಿದ ರೀತಿಯಲ್ಲೇ. ನೋಡಿ ಸರಕಾರದ ಅಸಹಾಯಕತೆಯನ್ನ ಈ ದೈತ್ಯ ಕಂಪೆನಿಗಳು ಹೇಗೆ ಬಳಸಕೊಳ್ಳುತ್ತವೆ ಎಂದು. ಭಾರತದಲ್ಲೂ ಅದೇ ರೀತಿಯಲ್ಲಿ ಹೊಗಬಹುದು ಎಂದು ಯೋಚಿಸಿತು. ಇದೇ ಸಮಯದಲ್ಲಿ ನಮ್ಮ ದೇಶದ ವಿರೋಧ ಪಕ್ಷಗಳು ಒಂದಷ್ಟು ಬುದ್ದಿ ಜೀವಿಗಳು, ಸುದ್ದಿ ಸಂಸ್ಥಗಳು ಒಂದು ಹಂತದ ಲಸಿಕೆ ಯೋಜನೆಯನ್ನ ಅಪ್ರಚಾರದ ಸುಳಿಗೆ ಸಿಕ್ಕಿಸಿ ಎರಡನೇ ಹಂತದ ಅಪ ಪ್ರಚಾರದಲ್ಲಿ ತೊಡಗಿದ್ದವು. “ಭಾರತದಲ್ಲಿ‌ ಲಸಿಕೆ ಸಾಲುತ್ತಿಲ್ಲ, ವಿದೇಶದಿಂದಾದರೂ ಲಸಿಕೆ ತಂದು ಕೊಡಿ” ಇದು ಸಿದ್ದರಾಮಯ್ಯನವರು ಮೋದಿಗೆ ಹೇಳಿದ ಮಾತು.  ಈ ರೀತಿ ಸರಕಾರದ ಮೇಲೆ ಇನ್ನೊಂದು ಹಂತದ ಒತ್ತಡ ಹೇರುವ ಪ್ರಯತ್ನ ನಡೆಯಿತು‌. ಇದರ ನಡುವೆ ಫೈಜರ್ ಭಾರತ ಸರಕಾರದ ಮುಂದೆ ಪ್ರಸ್ತಾಪ ಇಟ್ಟಿತು,  ಭಾರತ ಈ ಕಂಪೆನಿಗೆ ಎರಡು ನಿಭಂದನೆ ಇಟ್ಟಿತು. ನಿಮ್ಮ‌ ಲಸಿಕೆ ಭಾರತದಲ್ಲಿ ಉಪಯೋಗಿಸಲು ಯೋಗ್ಯಾವಾ ಎಂದು ಒಂದು ಸಣ್ಣ ಪ್ರಾಯೋಗಿಕ ಪರೀಕ್ಷೆ ಮಾಡಿ, ಇನ್ನೊಂದು ನಿಮ್ಮ‌ ಲಸಿಕೆಯುಂದ ತೊಂದರೆಗೆ ಒಳಗಾದ ಯಾರಾದರೂ ನಿಮ್ಮ ಮೇಲೆ ಕಾಂಪನ್ಸೇಶನ್ ಕೇಳಿ ಕೇಸು ಹಾಕಿದರೆ ಅದಕ್ಕೇ ನೀವೆ ಜವಾಬ್ದಾರರು ಎಂದಿತು. ಫೈಜರ್ ಇವೆರಡಕ್ಕೂ ಒಪ್ಪಲಿಲ್ಲ. ಮೋದಿ ಸರಕಾರ ಈ ಶರತ್ತಿಗೆ ಒಪ್ಪದೆ ಇದ್ದರೆ ‌ನಿಮಗೆ ಭಾರತದ ಮಾರುಕಟ್ಟಗೆ ಪ್ರವೇಶ ಇಲ್ಲ ಎಂದಿತು. ಇದರ ಬೆನ್ನಲ್ಲೇ ಮತ್ತೆ ಸರಕಾರದ ಲಸಿಕೆ ಜನರಿಗೆ ತಲುಪುತ್ತಿಲ್ಲ ಎಂಬ ಮಾಧ್ಯಮ ಮತ್ತು ವಿಪಕ್ಷಗಳ ಹಾಹಾಕಾರ ಜೋರಾಯಿತು. ಮೋದಿ‌ಸರಕಾರ ನೀತಿಆಯೋಗದೊಂದಿಗೆ ಒಂದು ಹೊಸ ಪ್ರಸ್ತಾವನೆ ಇಟ್ಟಿತು. ಭಾರತದ  ಎರಡು ಕಂಪೆನಿ ಸೇರಿದಂತೆ ವಿಶ್ವದ ಒಟ್ಟು ಎಂಟು ಕಂಪೆನಿಗಳ ಸಹಯೋಗದೊಂದಿಗೆ ಡಿಸೆಂಬರ ಒಳಗೆ ಭಾರತದ ಅಷ್ಟೂ ಜನರಿಗೆ ವ್ಯಾಕ್ಸಿನ್ ಹಾಕಿಸುವ ಯೋಜನೆ ಜನರ ಮುಂದೆ ಇಟ್ಟಿತು. ಇಲ್ಲೂ ಅಮೇರಿಕಾದ ಫೈಜರ್ ಕಂಪೆನಿಗೆ ಅವಕಾಶ ಇರಲಿಲ್ಲ. ಈಗ ಮೋದಿ‌ಸರಕಾರ ಯಾವುದಕ್ಕೂ ಅಷ್ಟು ಸುಲಭಾಗಿ ಜಗ್ಗುವುದಿಲ್ಲ ಎಂದು ಮನಗಂಡು ಭಾರತದ ಮಾರುಕಟ್ಟೆ ಕಳೆದುಕೊಂಡರೆ ಆಗುವ ನಷ್ಟವನ್ನು ತಪ್ಪಿಸಲು ಭಾರತ ಸರಕಾರ ಹಾಕಿದ ಷರತ್ತು ಒಪ್ಪಿ ಲಸಿಕೆ ಪೂರೈಸುವ ಬಗ್ಗೆ ಮತ್ತೊಂದು ಪ್ರಸ್ತಾಪ ಇಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಗಿದೆ.

ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ  ತನ್ನ ಲಸಿಕೆ ಪಟ್ಟಿಯಲ್ಲಿ ಭಾರತದ ಕೊ ವ್ಯಾಕ್ಸಿನನ್ನು ಸೇರಿಸುವುದಿಲ್ಲ. ಹೀಗಾದಾಗ ವಿಶ್ವದ ಇತರ ದೇಶಗಳು ಈ ಲಸಿಕೆಯನ್ನು ಬಳಸುವಲ್ಲಿ ಒಮ್ಮೆ ಯೋಚಿಸುತ್ತವೆ. ಒಟ್ಟಿನಲ್ಲಿ ಭಾರತ ಇವರ ಯಾವುದೇ ಪಟ್ಟುಗಳಿಗೆ ಬಗ್ಗದೆ ಇರುವುದು ಈ ಫಾರ್ಮ ಲಾಬಿಗಳಿಗೆ ನುಂಗಲಾರದ ತುತ್ತಾಗಿದೆ. ಭಾರತದ ಸೇವೆಯ ಭಾವ ಇವರ ವ್ಯವಹಾರಕ್ಕೆ ಅಡ್ಡಗಾಲಾಗುತ್ತಿದೆ. ಹಾಗಾಗಿ ಅವಕಾಶ ಸಿಕ್ಕ ಕಡೆಯಲ್ಲಾ ಭಾರತವನ್ನು ಹಣಿಯಬೇಕು, ಅವಮಾನಿಸಬೇಕು. ಮೊನ್ನೆ ಬೆಂಗಳೂರಿನ ಮಹಿಳ ಇನ್ಸ್ಪೆಕ್ಟರ್ ಒಬ್ಬರು ಇದೇ ಫಾರ್ಮಾ ಲಾಭಿಯ ಬೆನ್ನು ಮುರಿಯಲು ಹೋಗಿ ಸಸ್ಪೆಂಡ್ ಆಗಿ ಮನೆಯಲ್ಲಿ ಕೂತಿದ್ದಾರೆ. ಮೋದಿಯನ್ನೇ ಬಿಡದ ಈ ಫಾರ್ಮಾ ಲಾಭಿಗಳು, ಇವರ ವಿರುದ್ಧ ತೊಡೆ ತಟ್ಟುವ ದಕ್ಷ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟಾರಾ?  ಇವರು ಭಾರತವನ್ನು ಹಿಂದೆ ಗುಲಾಮಿತನಕ್ಕೆ ತಳ್ಳಿದ ಈಸ್ಟ್ ಇಂಡಿಯಾ ಕಂಪೆನಿಗೆ ಯಾವ ಲೆಕ್ಕದಲ್ಲೂ ಕಮ್ಮಿ ಇಲ್ಲ..!! 

ಚಿತ್ರಕೃಪೆ : biospace.com

6
ಮೇ

ಕೊರೊನಾ ಯುದ್ಧ – ವಿಶ್ವಕ್ಕೆ ಭಾರತ ತೋರಿಸಿದ ಹಾದಿಯೇನು?

– ಬಿ.ಎಲ್. ಸಂತೋಷ್
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ,ಬಿಜೆಪಿ
ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ
ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಇಲ್ಲಿ ಹೆಚ್ಚುತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು 2, ಕ್ವಾರಂಟೈನ್, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ವೈದ್ಯಕೀಯ ಮತ್ತು ಔಷಧಗಳ ವ್ಯವಸ್ಥೆ ಹೀಗೆ ಹಲವಾರು ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ತೆಗೆದುಕೊಂಡ ಕಠಿಣ ಮತ್ತು ಸೂಕ್ತ ಕ್ರಮಗಳ ಬಗ್ಗೆ ವಿಶ್ವ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಮೇರೆಗೆ ಜನವರಿ ಮೊದಲ ವಾರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೋವಿಡ್ಗೆ ಸಂಬಂಧಿಸಿ ಎಲ್ಲಾ ಮುಖ್ಯ ಕಾರ್ಯದರ್ಶಿಗಳ ಪ್ರಥಮ ಸಭೆ ಜರುಗಿತು. ಜ.17ರಿಂದಲೇ ಚೀನಾದಿಂದ ಭಾರತಕ್ಕೆ ಆಗಮಿಸುವವರ ಆರೋಗ್ಯ ತಪಾಸಣೆ ಪ್ರಾರಂಭಿಸಲಾಯಿತು. ಶಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು. ಜನವರಿ ಕೊನೆಯಲ್ಲಿ ಮತ್ತೆ ಪ್ರಧಾನಿ ಮುಖ್ಯ ಕಾರ್ಯದರ್ಶಿಗಳ ಪುನರ್ ಪರಿಶೀಲನಾ ಸಭೆ ನಡೆಸಿ, N95 ಮಾಸ್ಕ್ ಮತ್ತು PPE ಕಿಟ್ಗಳ ರಫ್ತು ನಿಷೇಧಿಸಿದರು.
ಜ.30ರಂದು ಭಾರತದಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾದ ವೇಳೆಗೆ ಕೊರೊನಾ ಪರೀಕ್ಷೆಗೆ 6 ಲ್ಯಾಬ್ ಮತ್ತು 6 ಕ್ವಾರಂಟ್ವೆನ್ಗಳು ಕಾರ್ಯ ನಿರ್ವಹಿಸುತ್ತಿದ್ದವು. ಫೆಬ್ರವರಿ ಪ್ರಾರಂಭದಿಂದಲೇ ಭಾರತದಿಂದ ಚೀನಾ ಪ್ರವಾಸ ನಿಷೇಧಿಸಲಾಯಿತು. ನಂತರದ ದಿನಗಳಲ್ಲಿ ಸಿಂಗಾಪುರ, ದ.ಕೊರಿಯಾ ಮತ್ತು ಇಟಲಿಗಳಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಆದೇಶ ಹೊರಡಿಸಲಾಯಿತು. ಫೆಬ್ರವರಿ 2ನೇ ವಾರದಲ್ಲಿ ಕೇವಲ 3 ಪಾಸಿಟಿವ್ ಪ್ರಕರಣ ಕಂಡುಬಂದಿದ್ದರೂ ಮುಂಜಾಗ್ರತಾ ಕ್ರಮವಾಗಿ 1.39 ಕೋಟಿ ಜನರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು ಮತ್ತು 7000 ಜನರನ್ನು ಗುರುತಿಸಿ ನಿಗಾ ಇಡಲಾಗಿತ್ತು. ಮಾ.3ರ ವರೆಗೆ ಭಾರತದಲ್ಲಿ ಒಟ್ಟು 6 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ವಿದೇಶದಿಂದ ಆಗಮಿಸುವ ಎಲ್ಲರ ವೈದ್ಯಕೀಯ ಪರೀಕ್ಷೆ ಮಾಡುವ ಕ್ರಮ ಕೈಗೊಳ್ಳಲಾಯಿತು. ಶಂಕಿತರನ್ನು 14 ದಿನಗಳ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಯಿತು. ಪ್ರಧಾನಿ ಹೋಳಿ ಆಚರಣೆ ರದ್ದುಗೊಳಿಸಿದರು. ಮಾ.15ರ ವರೆಗೆ ಭಾರತದಲ್ಲಿ ಕೋವಿಡ್ ಪರೀಕ್ಷೆಗೆ 52 ಲ್ಯಾಬ್ ಸಿದ್ಧಪಡಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದವು. ಸಾರ್ವಜನಿಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಹೀರಾತು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಎಲ್ಲಾ ಪ್ರವಾಸಿ ತಾಣ ವೀಕ್ಷಣೆ ನಿರ್ಬಂಧಿಸಲಾಯಿತು. ವಿದೇಶಗಳಲ್ಲಿದ್ದ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಾಯಿತು. ಸಾರ್ಕ್ ಒಕ್ಕೂಟ ಸಭೆ ಆಯೋಜಿಸಿ, ಪ್ರಧಾನಿ ಮೋದಿ 15 ಸಾವಿರ ಕೋಟಿ ಅನುದಾನ ಘೋಷಿಸಿದರು. ಜಿ-20 ದೇಶಗಳ ಸಭೆ ಕರೆದು ಚರ್ಚಿಸಿದರು.
ಮಾ.19ರ ವರೆಗೆ ಭಾರತದಲ್ಲಿ 200 ಪಾಸಿಟಿವ್ ಪ್ರಕರಣ ದಾಖಲಾಯಿತು. ಮಾ.19ರಂದು ಎಕಾನಾಮಿಕ್ ಟಾಸ್ಕ್ ಫೋರ್ಸ್ ರಚಿಸಿದ್ದಷ್ಟೇ ಅಲ್ಲದೆ ಮಾಧ್ಯಮಗಳ ಮೂಲಕ ಪ್ರಧಾನಿ ಮಾ.22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದರು. ಅದಕ್ಕೆ ವ್ಯಾಪಕ ಬೆಂಬಲ ದೇಶದ ಜನರಿಂದ ವ್ಯಕ್ತವಾಯಿತು. ಮಾ.22ರಿಂದ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಳಿಸಲಾಯಿತು. ಮಾರ್ಚ್ 3ನೇ ವಾರದಲ್ಲಿ ಕೊರೊನಾ ವ್ಯಾಪಕತೆ ಹೆಚ್ಚಾಗುತ್ತಿದ್ದಂತೆ ಲಾಕ್ಡೌನ್ ಘೋಷಿಸಿ ಹರಡುವಿಕೆಯ ಸರಪಳಿಗೆ ತಡೆ ಹಾಕಲಾಯಿತು. ನಂತರದ ದಿನಗಳಲ್ಲಿ ಲಾಕ್ಡೌನ್-1, ಲಾಕ್ಡೌನ್-2 ನಿರ್ಧಾರಗಳನ್ನು ಘೋಷಿಸಿದಾಗಲೂ ಸಮಸ್ತ ಭಾರತೀಯರು ಲಾಕ್ಡೌನ್ಗೆ ಬೆಂಬಲ ನೀಡಿದರು; ಸಂಯಮ ಮತ್ತು ಶಿಸ್ತು ಕಾಪಾಡಿಕೊಂಡು ಬಂದರು. ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕ, ಬ್ರೆಜಿಲ್, ಸ್ಪೇನ್, ಇಟಲಿ, ಲಂಡನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಮೃತರ ಸಂಖ್ಯೆ ಐದಂಕಿ ದಾಟಿವೆ.
ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳಾಗುತ್ತಿವೆ. ದಿಲ್ಲಿ ಐಐಟಿ ಸೇರಿದಂತೆ ವಿವಿಧ ಸಂಶೋಧನಾ ಕೇಂದ್ರಗಳು ಕೊರೊನಾ ಪರೀಕ್ಷಾ ಕಿಟ್ಗಳ ತಯಾರಿಕೆಗೆ ಮುಂದಾಗಿವೆ. ಮೇ ತಿಂಗಳಲ್ಲಿ Rapid ಪರೀಕ್ಷೆಗೆ ಅವಶ್ಯವಿರುವ ಲಕ್ಷಾಂತರ ಕಿಟ್ಗಳು ದೊರೆಯುತ್ತವೆ. ಫೆಬ್ರವರಿಯಲ್ಲಿ ಪರೀಕ್ಷೆಗೆ ಕೇವಲ 3 ಲ್ಯಾಬ್ ಗಳಿದ್ದವು; ಇಂದು 372ಕ್ಕೂ ಹೆಚ್ಚು ಲ್ಯಾಬ್ ಗಳನ್ನು ಸಿದ್ಧಪಡಿಸಲಾಗಿದೆ. ಮೇ ಅಂತ್ಯದವರೆಗೆ 750 ಲ್ಯಾಬ್ ಸ್ಥಾಪನೆಯ ಗುರಿ ಹೊಂದಲಾಗಿದೆ. ದೇಶದಲ್ಲಿ 19 ಸಾವಿರ ವೆಂಟಿಲೇಟರ್ಗಳನ್ನು ಕೋವಿಡ್ಗೆ ಮೀಸಲಿರಿಸಿದೆ. ಮೇ ತಿಂಗಳ ಅಂತ್ಯದವರೆಗೆ ಇನ್ನೂ 30 ಸಾವಿರ ದೊರೆಯಲಿವೆ. 22 ಲಕ್ಷ N95 ಮಾಸ್ಕ್ ಗಳನ್ನು ಒದಗಿಸಲಾಗಿದೆ. ಭಾರತ ಬಡರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಒದಗಿಸಿ ಸಂಜೀವಿನಿಯಾಗಿದೆ. ಭಾರತದ ಬಯೊಟೆಕ್ನಾಲಜಿ ವಿಭಾಗವು ಕೋವಿಡ್ ಲಸಿಕೆ ಸಂಶೋಧನೆಗಾಗಿ ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್, ಸೆರ್ಮನ್ ಇನ್ಸ್ಟಿಟ್ಯೂಟ್ ಮತ್ತು ಭಾರತ ಲ್ಯಾಬ್ ಎಂಬ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಕೋವಿಡ್ ವೈರಸ್ನ ಮೂರು ಸರಣಿಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಆಯುಷ್ ವಿಭಾಗದ ಮೂಲಕ ಮಾನವನ ರೋಗನಿರೋಧಕ ಶಕ್ತಿ ವೃದ್ಧಿಗೆ ಔಷಧೋಪಚಾರಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬಾಟ್ಗಳನ್ನು ಸೋಂಕಿತರಿಗೆ ಔಷಧ, ಆಹಾರ ನೀಡುವ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. N95 ಮಾಸ್ಕ್, ಗುಣಮಟ್ಟದ PPE ಕಿಟ್ಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಪಂಜಾಬ್ನಲ್ಲಿ ಈ ಬಾರಿ ಒಂದೂವರೆ ಪಟ್ಟು ಹೆಚ್ಚು ಗೋಧಿಯ ಇಳುವರಿ ಬಂದಿದ್ದು, ಭಾರತೀಯ ರೈಲ್ವೆ ಅದರ ಸಾಗಣೆಗಾಗಿ 84 ಬೋಗಿಗಳನ್ನು ಮೀಸಲಿಟ್ಟಿದೆ. ಗೂಡ್ಸ್ ರೈಲುಗಳು ಅವಶ್ಯಕ ವಸ್ತುಗಳ ಸಾಗಾಟ ಮಾಡುತ್ತಿವೆ. 70ಕ್ಕೂ ಹೆಚ್ಚು ಅನ್ನಪೂರ್ಣ ಗೂಡ್ಸ್ ರೈಲು ಪ್ರತಿನಿತ್ಯ ತಮ್ಮ ಮೂರುಪಟ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿವೆ. ಕ್ವಾರಂಟೈನ್ಗಾಗಿ ದೇಶದ ಬಹುತೇಕ ಕಡೆ ರೈಲ್ವೆ ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಸಿದ್ಧಪಡಿಸಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳು ದೇಶಕ್ಕೆ ಶೇ.30ರಷ್ಟು ಜಿಡಿಪಿ ಒದಗಿಸುವ ಮಾಸಗಳಾಗಿವೆ. ಈ ತಿಂಗಳಲ್ಲಿ ದೇಶದ ಬಹುತೇಕ ಧಾರ್ಮಿಕ ಹಬ್ಬಗಳು, ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು ನಡೆಯುತ್ತವೆ. ಕೈಗಾರಿಕಾ ವಲಯಗಳಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತದೆ.
ಆದರೆ ಈ ತಿಂಗಳಲ್ಲಿ ಲಾಕ್ಡೌನ್ ಇರುವ ಕಾರಣ ದೇಶದ ಜಿಡಿಪಿ ಕುಸಿಯುವ ಸಾಧ್ಯತೆಯಿದೆ. ಮೂರು ಹಂತದಲ್ಲಿ ಕೇಂದ್ರ ಸರಕಾರ ಜನರ ನೆರವಿಗೆ ಅನೇಕ ಕ್ರಮ ತೆಗೆದುಕೊಂಡಿದೆ. ಗರೀಬ್ ಕಲ್ಯಾಣ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 20.02 ಕೋಟಿ ಮಹಿಳೆಯರ ಜನಧನ ಖಾತೆಗಳಿಗೆ ರೂ.500ರಂತೆ ಮೂರು ತಿಂಗಳು ಸಂದಾಯ ಮಾಡಲಿದ್ದಾರೆ. ಕಿಸಾನ್ ಸನ್ಮಾನ್ ನಿಧಿಯ ಮೊದಲ ಕಂತು ರೂ.2000 ಅನ್ನು 8 ಕೋಟಿ ರೈತರ ಖಾತೆಗೆ ಸಂದಾಯ ಮಾಡಲಾಗಿದೆ. 8 ಕೋಟಿ ಕುಟುಂಬಗಳಿಗೆ ಉಜ್ವಲ ಸಿಲಿಂಡರ್ ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. 2.8 ಕೋಟಿ ದಿವ್ಯಾಂಗ, ವಿಧವೆ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಹೆಚ್ಚುವರಿ ಒಂದು ಸಾವಿರ ರೂಪಾಯಿ ಮೂರು ತಿಂಗಳು ನೀಡಲಾಗುತ್ತಿದೆ. 2.17 ಕೋಟಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಿಂಗಳಿಗೆ 1500 ರೂ. ಸಹಾಯಧನ ನೀಡಲಾಗುತ್ತಿದೆ. ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ದಾದಿಯರಿಗೆ 50 ಲಕ್ಷ ಮೌಲ್ಯದ ವಿಮೆ ನೀಡಲಾಗುತ್ತಿದೆ. 15 ಸಾವಿರ ಕೋಟಿ ಅನುದಾನವನ್ನು ಪ್ರತಿ ರಾಜ್ಯಗಳಿಗೆ ನೀಡಲಾಗಿದ್ದು ಆರೋಗ್ಯ ಸೌಲಭ್ಯ ಬಳಕೆ ಮತ್ತು ಸುಧಾರಣೆಗೆ ಮಹತ್ವ ನೀಡಲು ಕೇಂದ್ರ ಸೂಚನೆ ನೀಡಿದೆ. ಐಟಿ ರಿಟರ್ನ್, ಜಿಎಸ್ಟಿ ಮತ್ತು ಇಎಂಐ ಕಂತು ತುಂಬುವುದಕ್ಕೆ ಮೂರು ತಿಂಗಳು ಅವಕಾಶ ಕಲ್ಪಿಸಲಾಗಿದೆ. ಆರ್ಬಿಐ ಕೂಡಾ ಲಘು ಮತ್ತು ಮಧ್ಯಮ ಉದ್ಯಮದಾರರಿಗೆ ಸಹಾಯಾರ್ಥ ಬಡ್ಡಿ ನೀಡಲು 50 ಸಾವಿರ ಕೋಟಿ ಹಣವನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ನೀಡಿದೆ. ಮ್ಯೂಚುವಲ್ ಫಂಡ್ನಲ್ಲಿ ಹಣ ಹೂಡಿಕೆಗೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಚೈತನ್ಯ ತುಂಬಲು ಆರ್ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲ ಅನುದಾನ ಮತ್ತು ಸಹಾಯ ಈ ವಿಷಮ ಪರಿಸ್ಥಿತಿಯಲ್ಲಿ ಕಡುಬಡವರ ಜೀವನೋಪಾಯಕ್ಕೆ ಮತ್ತು ಮುಂದಿನ ದಿನಗಳ ಅರ್ಥಿಕ ಚೈತ್ಯನಕ್ಕೆ ಅಲ್ಪ ಪ್ರಮಾಣದ ನೆರವು ಎಂದು ಹೇಳಬಹುದು.
ಈ ಲಾಕ್ಡೌನ್ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಂತರದ ದಿನಗಳಲ್ಲಿ ಜೀವನ ಕಟ್ಟಿಕೊಳ್ಳಲು ಅವಶ್ಯವಿರುವ ಸಂಗತಿಗಳಿಗೆ ಸಂದರ್ಭಕ್ಕೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಲಿದೆ. ಲಾಕ್ಡೌನ್ನ 45 ದಿನಗಳ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸನ್ನು ಭಾರತ ಕಂಡಿದೆ. ಜೀವನ ಕಟ್ಟಿಕೊಳ್ಳಲು ಮುಂದಿನ ಆರು ತಿಂಗಳು ಅತ್ಯಂತ ನಿರ್ಣಾಯಕ ಹೋರಾಟ ಎಲ್ಲರೂ ಮಾಡಬೇಕಿದೆ. ಸತತ ಹೋರಾಟದ ಫಲದಿಂದ ಮೂರು ವರ್ಷಗಳ ತರುವಾಯ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.
130 ಕೋಟಿ ಜನಸಂಖ್ಯೆ, 8.25 ಗ್ರಾಮಗಳು, ಪ್ರಜಾಪ್ರಭುತ್ವ, ಬಹುಪಕ್ಷ ಆಡಳಿತ ರಾಜಕೀಯ ವ್ಯವಸ್ಥೆ, ಅಧಿಕಾರ ವಿಕೇಂದ್ರಿಕರಣ, ವಿವಿಧ ರಾಜ್ಯಗಳಲ್ಲಿ 10ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಆಡಳಿತ. ಹೀಗೆಲ್ಲಾ ಇದ್ದರೂ, ಪಶ್ಚಿಮ ಬಂಗಾಳ ರಾಜ್ಯ ಹೊರತುಪಡಿಸಿ ಸಂಪೂರ್ಣ ಭಾರತ ‘ಒಂದು ದೇಶ ಒಂದು ಆಡಳಿತ ವ್ಯವಸ್ಥೆ’ ಎಂಬ ನೀತಿಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿಸಾಗುತ್ತಿದೆ. ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಹೋಗಲು ಮುಂದಾಗಿದ್ದರೂ, ಸರಕಾರದ ವಿರುದ್ಧ ಯಾವುದೇ ದೂರು ಹೊಂದಿರಲಿಲ್ಲ. ಇದು ನಮ್ಮ ಪ್ರಜೆಗಳ ಸಂಯಮ ಮತ್ತು ಶಿಸ್ತಿನ ಜೊತೆಗೆ ಪ್ರಧಾನಿಗಳ ದಿಟ್ಟ ಆಡಳಿತ ಸೂತ್ರ ತೋರುತ್ತದೆ. ಎಲ್ಲ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಅಧಿಕಾರಿ ವರ್ಗ, ವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ ಇವೆಲ್ಲವೂ ಪರಸ್ಪರ ಸಹಕಾರದೊಂದಿಗೆ ಈ ವಿಪತ್ತಿನಲ್ಲಿ ಕಾರ್ಯ ನಿರ್ವಹಿಸಿರುವುದನ್ನು ಕಂಡರೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಡಗಿದ ಅದಮ್ಯ ಶಕ್ತಿಯ ಪರಿಚಯವಾಗುತ್ತದೆ.
ಭಾರತೀಯ ಜೀವನ ಪದ್ಧತಿ, ಕೈ ಜೋಡಿಸುವ ನಮಸ್ಕಾರ ಆಚರಣೆ, ಯೋಗ ಮತ್ತು ಆಯುರ್ವೇದ ಮಹತ್ವ ಹೀಗೆ ಅನೇಕ ಸಂಗತಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ. ಕೊರೊನಾ ಸಂಕಟ ಅನೇಕ ರೀತಿಯ ಬದುಕಿನ ಪಾಠಗಳನ್ನು ಭಾರತ ಸರಕಾರಕ್ಕೆ ಮತ್ತು ಭಾರತೀಯರಿಗೆ ನೀಡಿದೆ. ಮೇಕೆ, ಹಸು ಮತ್ತು ಎಮ್ಮೆ ಹಾಲಿಗೆ ಅಲರ್ಜಿ ಹೊಂದಿರುವ ತನ್ನ ಮೂರೂವರೆ ವರ್ಷದ ಮಗುವಿಗೆ ಹಾಲು ಲಭ್ಯವಿಲ್ಲದಿರುವ ಬಗ್ಗೆ ಮಹಿಳೆಯೊಬ್ಬರು ಟ್ವೀಟ್‌ ಮಾಡಿದಾಗ, ಆ ಮಗುವಿಗೆ 20 ಲೀಟರ್‌ ಒಂಟೆ ಹಾಲನ್ನು ಕೇಂದ್ರ ಸರ್ಕಾರ ರೈಲಿನಲ್ಲಿ ಕಳುಹಿಸಿ ಕೊಡುತ್ತದೆ. ಸ್ವಾವಲಂಬನೆಯ ಮಹತ್ವ ತಿಳಿಸಿಕೊಟ್ಟಿದೆ. ಚೀನಾ ಜಗತ್ತಿನಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಪರಿಣಾಮ ಅನೇಕ ರಾಷ್ಟ್ರಗಳು ತಮ್ಮ ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳುವತ್ತ ಸರಕಾರ ಗಮನ ನೀಡಿದೆ. ಭಾರತೀಯರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿದೆ. ಒಟ್ಟಾರೆ ಈಗಿನ ಸನ್ನಿವೇಶ ಇಡೀ ವಿಶ್ವ ಭಾರತದತ್ತ ಹೊರಳಿ ನೋಡಲು, ಭಾರತ ತನ್ನ ಸಿಂಹಾವಲೋಕನ ಮಾಡಿಕೊಳ್ಳಲು ಕಾರಣವಾಗಿದೆ ಎಂದರೆ ತಪ್ಪಲ್ಲ.