ಮಾನ ಕಳೆದುಕೊಂಡ ಸನ್ಮಾನಗಳು
– ರೋಹಿತ್ ಚಕ್ರತೀರ್ಥ
ನಾನು ಮಾಡಿದ ಕೆಲಸ ಸರಿಯಿದೆ ಎಂದು ಒಪ್ಪಿದರೆ ಸಾಕು. ಅದೇ ನನಗೆ ಬಹುದೊಡ್ಡ ಪ್ರಶಸ್ತಿ. ಬೇರೆ ಬಹುಮಾನ ಏಕೆ? – ಎಂದ ಗ್ರೆಗೊರಿ ಪೆರೆಲ್ಮನ್. ಅವನ ಕೆಲಸದ ಔನ್ನತ್ಯವನ್ನು ಮೆಚ್ಚಿ ಒಂದು ಮಿಲಿಯ ಡಾಲರ್‍ಗಳನ್ನು (ಅಂದರೆ, ಆರು ಕೋಟಿ ರುಪಾಯಿ!) ಹಿಡಿದು ನಿಂತಿದ್ದವರಿಗೆ ಬಾಗಿಲು ಕೂಡ ತೆರೆಯಲಿಲ್ಲ ಆ ಮಹರಾಯ! ನಿಮ್ಮನ್ನು ಒಳಬಿಟ್ಟೆನೆಂದರೆ, ಹಿಂದೆಯೇ ಪತ್ರಕರ್ತರು ತೂರಿಕೊಂಡು ಒಳಸೇರುತ್ತಾರೆ. ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇನ್ನು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನನ್ನ ಮುಖ ಕಂಡರೆ ಸಾಕು, ಬೀದಿಯಲ್ಲಿ ಆರಾಮಾಗಿ ನಡೆದುಹೋಗಲಿಕ್ಕೂ ತೊಂದರೆ. ಪ್ರಶಸ್ತಿ ಬಂತು ಅಂತ ಕೈಗೊಂದು-ಕಾಲಿಗೊಂದು ಗೆಳೆಯರು, ನೆಂಟರು ಹುಟ್ಟಿಕೊಳ್ಳುತ್ತಾರೆ. ಇದೆಲ್ಲ ಬೇಕಾ? ಪ್ರಶಸ್ತಿಯೂ ಬೇಡ, ಅದು ತರುವ ನೂರೆಂಟು ತಾಪತ್ರಯಗಳೂ ಬೇಡ ಎಂದು ಎಲ್ಲರನ್ನೂ ಗೇಟ್‍ಪಾಸ್ ಮಾಡಿದ್ದ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬನಾದ ಪೆರೆಲ್ಮನ್.
“ದುಡ್ಡೇ ಎಲ್ಲ ತೊಂದರೆಗಳಿಗೆ ಬೇರು” ಎಂದು ಸ್ವಾಮೀಜಿಗಳು ಹೇಳಿದಾಗ ಭಕ್ತರೆಲ್ಲ ಒಂದೇ ಧ್ವನಿಯಲ್ಲಿ “ನಮಗೆ ಆ ಬೇರು ಬೇಕು!” ಎಂದು ಕೂಗಿದ್ದರಂತೆ. ಬಹುಶಃ ಈಗ, “ಪ್ರಶಸ್ತಿಯೇ ಎಲ್ಲ ತಾಪತ್ರಯಗಳಿಗೂ ಮೂಲ” ಎಂದು ಹೇಳಿದರೆ, ಸರಕಾರ ಕೊಟ್ಟ ಗೆಡ್ಡೆಗೆಣಸುಗಳಲ್ಲೇ ಉಸಿರು ಹಿಡಿದುಕೊಂಡಿರುವ ಬುದ್ಧಿಜೀವಿಗಳು ನಮಗೂ ಆ ಕಂದಮೂಲ ಬೇಕು ಎಂದು ಪಟ್ಟುಹಿಡಿದಾರು. ಅರ್ಹರನ್ನು ಅನ್ಯರು ಗುರುತಿಸಿ ಪ್ರಶಸ್ತಿಯ ಕಿರೀಟ ತೊಡಿಸಿ ಶಾಲುಹೊದಿಸಿ ಒಂದಷ್ಟು ದುಡ್ಡೋ ಸ್ಮರಣಿಕೆಯೋ ಕೈಯಲ್ಲಿಟ್ಟು ಕೃತಾರ್ಥರಾಗುವ ಕಾಲ ಒಂದಿತ್ತು. ಆದರೆ, ಈಗ ಪ್ರಶಸ್ತಿಗಳನ್ನು ಕೂಡ ಬಿಕರಿಗಿಡಲಾಗಿದೆ. ರಾಜ್ಯ ಅಥವಾ ಕೇಂದ್ರದಲ್ಲಿ ಸರಕಾರ ಬದಲಾದ ಕೂಡಲೇ, ಆಯಾಯಾ ಪಕ್ಷಗಳನ್ನು ಬೆಂಬಲಿಸುವ ಪ್ರತಿಭಾವಂತರು ಚುರುಕಾಗುತ್ತಾರೆ. ಇಷ್ಟು ವರ್ಷ ಆಗದೇ ನೆನೆಗುದಿಗೆ ಬಿದ್ದ ಕೆಲಸವನ್ನು ಈಗ ಹೇಗಾದರೂ ಮಾಡಿಸಿಕೊಳ್ಳಬೇಕು ಎಂದು ಸರಕಾರವೆಂಬ ವೃಂದಾವನಕ್ಕೆ ಸುತ್ತುಬರುತ್ತಾರೆ. ಕಾಯಿ ಒಡೆಯುತ್ತಾರೆ. ಹಣ್ಣು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಅಷ್ಟಶತೋತ್ತರ ನಾಮಾವಳಿಯೂ ನಡೆಯುತ್ತದೆ. ಇಷ್ಟೆಲ್ಲ ಪಾಡುಪಟ್ಟ ಭಕ್ತನನ್ನು ಸಂಪ್ರೀತಗೊಳಿಸಲು ಸರಕಾರ ಅವನಲ್ಲಿ ಯಾವ ಪ್ರಶಸ್ತಿ ಬೇಕು ವತ್ಸಾ ಎಂದು ಕೇಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಪೂಸಿ ಹೊಡೆದು ಗಾಳಿ ಖಾಲಿಯಾದವರು ಯಾವುದಾದರೂ ನಡೆದೀತು ಎಂಬ ಹಂತಕ್ಕೆ ಬಂದಿರುತ್ತಾರೆ. ಆದರೆ, ಕೆಲವು ಜಗಜಟ್ಟಿಗಳು ಇಂಥದ್ದೇ ಬೇಕು, ಅದು ಕೊಡೋದಿಲ್ಲವಾದರೆ ಯಾವುದೂ ಬೇಡ ಎಂದು ರಚ್ಚೆ ಹಿಡಿಯುತ್ತಾರೆ. ಇಂತಹ ಕಂದಮ್ಮಗಳನ್ನು ರಮಿಸಿ ಮುದ್ದಿಸಿ ಹಾಲುಕೊಟ್ಟು ತಣ್ಣಗಾಗಿಸುವ ಹೊತ್ತಿಗೆ ಕೆಲವು ಸಲ ಸರಕಾರಕ್ಕೆ ಹೆಣ ಬಿತ್ತೆನ್ನಿಸುವಷ್ಟು ಸುಸ್ತು ಹೊಡೆಯುವುದೂ ಉಂಟು. ಆದರೇನು ಮಾಡೋಣ? ಸರಕಾರಕ್ಕೆ ತನ್ನ ಪರಾಕುಪಂಪು ಒತ್ತಿಸಿಕೊಳ್ಳಲು ಈ ವಂಧಿಮಾಗಧರ ಗಡಣ ಬೇಕು. ಮತ್ತು ಈ ಗಡಣಕ್ಕೆ ತನ್ನಗಂಟಲನ್ನು ಸದಾ ತೇವವಾಗಿಟ್ಟುಕೊಳ್ಳಲು ನೆರವು ನೀಡುವ ರಾಜಾಶ್ರಯ ಬೇಕು. ಇದು ಸಾರ್ವಜನಿಕ ತೆರಿಗೆ ದುಡ್ಡಿನ ಕೃಪಾಪೋಷಿತ ಪರಸ್ಪರ ಸಹಕಾರ ಸಂಘ.
ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?
– ರಾಕೇಶ್ ಶೆಟ್ಟಿ
ಮಂಗಳೂರು ಹೋಂ-ಸ್ಟೇ ಮೇಲೆ ದಾಳಿ ಮಾಡಿದವರನ್ನು ‘ಆಧುನಿಕ ದುಶ್ಯಾಸನರು’ ಅಂದಾಗ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೈ ಮುಟ್ಟುವುದು,ಹೊಡೆಯುವುದು ಇಂತ ವಿಕೃತಿ ಮಾಡುವವರನ್ನು ದುಶ್ಯಾಸನರೆಂದರೆ ತಪ್ಪಿಲ್ಲ ಅನ್ನಿಸುತ್ತದೆ ಅನ್ನಿಸಲೇಬೇಕು.ಆದರೆ “ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?”.ಹಾಗಂತ ದೃತರಾಷ್ಟ್ರ,ದುರ್ಯೋಧನರ ನೆಪವೊಡ್ಡಿ ದುಶ್ಯಾಸನರ ನಡವಳಿಕೆಯನ್ನು ಬೆಂಬಲಿಸಬೇಕಿಲ್ಲ,ಬೆಂಬಲಿಸುವುದು ಆರೋಗ್ಯವಂತ ಸಮಾಜದ ಲಕ್ಷಣವೂ ಅಲ್ಲ. ಅಂದು ಮಹಾಭಾರತದ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಂತೆ ಅಪ್ಪಣೆ ಕೊಟ್ಟಿದ್ದು ದುರ್ಯೋಧನ ಮತ್ತು ಅದನ್ನ ಕೇಳಿಯೂ ತೆಪ್ಪಗೆ ಕೂತಿದ್ದು ಅಪ್ಪ ಅನ್ನಿಸಿಕೊಂಡ ಧೃತರಾಷ್ಟ್ರ ಅಲ್ಲವೇ? ಆಗಲೂ ಈಗಿನಂತೆ ಎಲ್ಲ ಗೊತ್ತಿದ್ದೂ ನಮ್ಮ ಸೆಕ್ಯುಲರ್ಗಳಂತೆ ಕಂಡು ಕಾಣದಂತಿದ್ದವರು ಉಳಿದೆಲ್ಲರು.ಒಬ್ಬ ಶ್ರೀ ಕೃಷ್ಣನನ್ನು ಬಿಟ್ಟು..! ಇಂದಿನ ಭಾರತದಲ್ಲಿ ದುಶ್ಯಾಸನರನ್ನೇನೋ ಮಾಧ್ಯಮಗಳು ತೋರಿಸಿವೆ.ಆದರೆ ಧೃತರಾಷ್ಟ್ರ,ದುರ್ಯೋಧನರೆಲ್ಲಿ? ದುಶ್ಯಾಸನ ಅನ್ನುವವನ ಹೆಸರು ಈ ಪರಿ (ಕು)ಖ್ಯಾತಿ ಪಡೆಯಲು ಕಾರಣ ವಸ್ತ್ರಾಪಹರಣ ಮಾಡಲು ಹೇಳಿದ ಅವನಣ್ಣ ದುರ್ಯೋಧನನಲ್ಲವೇ? ದುರ್ಯೋಧನ,ದುಶ್ಯಾಸನರಿಗೆ ಮೌನ ಸಮ್ಮತಿ ಕೊಟ್ಟ ದ್ರುತರಾಷ್ಟ್ರನು ಸೇರಿ ಇಡಿ ಕುರು ಸಭೆಯಲ್ಲವೇ? ಹಾಗಿದ್ದರೆ ಕರಾವಳಿಯ ಮಹಾಭಾರತದಲ್ಲಿ ದುಶ್ಯಾಸನರ ಸೃಷ್ಟಿಗೆ ಕಾರಣವಾದ ದುರ್ಯೋಧನ ಯಾರು?