ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕ್ಷತ್ರಿಯ’

4
ನವೆಂ

ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ

– ವಿನಾಯಕ್ ಹಂಪಿಹೊಳಿ

ಭಗವದ್ಗೀತೆಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.

ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.

ಮತ್ತಷ್ಟು ಓದು »

29
ಏಪ್ರಿಲ್

ನಾಡು-ನುಡಿ : ಮರುಚಿಂತನೆ – ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಹಿಂದೂದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಲಕ್ಷಣವಾದರೆ, ಹಾಗೂ ದಲಿತರು ಹಿಂದೂ ಸಮಾಜದೊಳಗೆ ಇಲ್ಲ ಅಂತಾದರೆ ಅವರು ಇದುವರೆಗೆ ಜಾತಿ ವ್ಯವಸ್ಥೆಗೆ ಒಳಪಟ್ಟಿಲ್ಲ ಎಂದು ಇಂಗಿತವೆ? ಅಥವಾ ಜಾತಿವ್ಯವಸ್ಥೆಯ ಹೊರಗಿದ್ದೂ ಅವರನ್ನು ಸಾವಿರಾರು ವರ್ಷಗಳ ವರೆಗೆ ಶೋಷಿಸಲು ಹಿಂದೂಗಳಿಗೆ ಸಾಧ್ಯವಾಗಿದ್ದೇ ಹೌದಾದಲ್ಲಿ ಆ ಕೆಲಸವನ್ನೇ ಮಾಡಲು ಹಿಂದೂ ಸಮಾಜದೊಳಗೆ ಅವರನ್ನು ಹೊಸತಾಗಿ ಸೇರಿಸಿಕೊಳ್ಳುವ ಅಗತ್ಯವೇಕೆ? ಒಟ್ಟಿನಲ್ಲಿ ಇದು ಒಂದು ಒಗಟಾಗಿ ಬಿಡುತ್ತದೆ.

ಈ ಒಗಟು ಏಕೆ ಹುಟ್ಟುತ್ತದೆಯೆಂದರೆ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕಟ್ಟುವಾಗ ಪರಸ್ಪರ ಸುಸಂಬದ್ಧವಲ್ಲದ ಅನೇಕ ವಿವರಗಳನ್ನು ಒಟ್ಟಿಗೆ ತರಲಾಗಿದೆ.  ಅವುಗಳಲ್ಲಿ ಒಂದು ಹಿಂದೂಯಿಸಂ ಎಂಬ ರಿಲಿಜನ್ನಿನ ಕಲ್ಪನೆ, ಮತ್ತೊಂದು ಆರ್ಯರ ಆಕ್ರಮಣದ ಕಥೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ, ಅದಕ್ಕೆ ಬ್ರಾಹ್ಮಣರು ಪುರೋಹಿತಶಾಹಿಗಳು, ಇದರಲ್ಲಿ ಮೂರ್ತಿಪೂಜೆ ಜಾತಿ ವ್ಯವಸ್ಥೆಗಳಂಥ ಅನಿಷ್ಟ ಆಚರಣೆಗಳಿವೆ ಎಂಬ ಕಥೆ 19ನೆಯ ಶತಮಾನದಲ್ಲೇ ಗಟ್ಟಿಯಾಯಿತು. ಪಾಶ್ಚಾತ್ಯರು ಕ್ಯಾಥೋಲಿಕ್ ಚರ್ಚಿನಂತೇ ಇದೊಂದು ಭ್ರಷ್ಟವಾದ ರಿಲಿಜನ್ನು ಎಂದು ಭಾವಿಸಿದ್ದರು. ಆ ಸಂದರ್ಭದಲ್ಲಿ ರಾಜಾ ರಾಮಮೋಹನರಾಯರಂಥವರು ಹಿಂದೂಯಿಸಂ ಮೂಲತಃ ಉದಾತ್ತವಾದ ರಿಲಿಜನ್ನಾಗಿದೆ ಎಂಬ ನಿರೂಪಣೆಯನ್ನು ಗಟ್ಟಿಮಾಡತೊಡಗಿದರು.ಈ ನಿರೂಪಣೆಗೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಏಕದೇವತಾ ತತ್ವವೇ ಆಧಾರವಾಯಿತು.ಅಂದರೆ ಹಿಂದೂಯಿಸಂನ ಶುದ್ಧ ರೂಪವು ವೇದಾಂತದಲ್ಲಿ ಇದೆ ಎಂದಾಯಿತು.

ಮತ್ತಷ್ಟು ಓದು »