ಶಿಕ್ಷಣ: ಗುರಿ ಭೀಮ, ಸಾಧಕ ಕುಚೇಲ!
– ಕಲ್ಗುಂಡಿ ನವೀನ್
ಇಂದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಚರ್ಚೆಗಳು, ಪ್ರಯೋಗಗಳು ಇನ್ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ತೀರಾ ವಿರಳವಾಗಿದ್ದ ಓಪನ್ ಮಾದರಿ ಶಾಲೆಗಳು ಇಂದು ವಿಪುಲವಾಗಿವೆ. ಸರ್ಕಾರಿ ಶಾಲೆಗಳೂ ಅದರ ಕೆಲವು ಆಂಶಗಳನ್ನು “ಕಾಪಿ” ಮಾಡುತ್ತಿವೆ. ಇನ್ನು ಮಾಂಟೆಸ್ಸೊರಿ ಎಂಬ ಪದ್ಧತಿ (ಮಾರಿಯಾ ಮಾಂಟೆಸ್ಸೊರಿ ಎಂಬಾಕೆ ಚಾಲ್ತಿಗೆ ತಂದ ಶಿಕ್ಷಣ ಪದ್ಧತಿ) ಹೆಚ್ಚುಕಡಿಮೆ ಮನೆ ಮಾತಾಗಿದೆ. ಇದಲ್ಲದೆ, ಖಾಸಗಿ ನೆಲೆಯಲ್ಲಿ ಅನೇಕರು ತಾವೇ ಕಂಡರಿಸಿದ ಪದ್ಥತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಶಾಲೆ ಹೀಗೂ ಇರಬಲ್ಲುದೇ ಎಂದು ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ. “ಒಂದು ಇಡೀ ವರ್ಷ ನೀನು ಏನು ಬೇಕೋ ಮಾಡಿಕೋ, ನಿನಗಿಷ್ಟವಾದದ್ದನ್ನು ಕಲಿತುಕೋ” ಎಂದು ಶಾಲೆಯಲ್ಲಿ ಹೇಳುತ್ತಾರೆ ಎಂದರೆ ನಂಬುತ್ತೀರಾ? ಅದು ಆರೋಹಿ ಎಂಬ ಶಾಲೆ. ಶಿಕ್ಷಣದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಹೋಗಿ ನೋಡಿಯಾದರೂ ಬರಬೇಕಾದ ಶಾಲೆಯಿದು ( http://www.aarohilife.org ). ಪೂರ್ಣಪ್ರಮತಿ ಎಂಬ ವಿಶಿಷ್ಟ ಶಾಲೆಯಲ್ಲಿ ಪ್ರತಿ ವರ್ಷ ಶಿಕ್ಷಣ ಪದ್ಧತಿಗಳು ಹಾಗೂ ಕಲಿಕೆ ಹೇಗೆ ನಡೆಯುತ್ತದೆ ಎಂದು ವಿಶ್ಲೇಷಿಸಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲೆಂದೇ ಪೂರ್ಣಪ್ರಮತಿ ವ್ಯಾಖ್ಯಾ ಎಂಬ ಹೆಸರಿನಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಅನೇಕ ದೃಷ್ಟಿಕೋನಗಳಿಂದ ಹಾಗೂ ಪ್ರಯೋಗಗಳಿಂದಾಗಿ ಗಮನಿಸುತ್ತಿರಬೇಕಾದ ಶಾಲೆ, ಪೂರ್ಣಪ್ರಮತಿ (http://purnapramati.in/) ಹ್ಞಾ ಹಾಗೆ “ನೀವು ನೋಡಲೆಂದು ಬರಲೇಬೇಡಿ. ಮಕ್ಕಳು ತಮಗಿಷ್ಟವಾದದ್ದನ್ನು ಮಾಡುತ್ತಿರುತ್ತಾರೆ. ನಿಮ್ಮ ಭೇಟಿ ಅವರನ್ನು ಡಿಸ್ಟರ್ಬ್ ಮಾಡುತ್ತದೆ” ಎನ್ನುವ ಮಣಿವೆಣ್ಣನ್ ಅವರ ಶಾಲೆಯೂ ಇದೆ! ಅಷ್ಟೇ ಅಲ್ಲ ಅಲ್ಲಿನ ಪದ್ಧತಿಗಳು ನಿರಂತರ ಚರ್ಚೆ, ಮಂಥನದ ಆಧಾರದಿಂದ ಬದಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ನೀಡಿರುವ ಸ್ವಾತಂತ್ರ್ಯವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚಿ ತಲೆದೂಗುವಂತಹ ಪ್ರಯತ್ನಗಳು ಖಾಸಗಿ ನೆಲೆಯಲ್ಲಿ ನಡೆದಿದೆ. ಇದರ ನಡುವೆ ನಮ್ಮ ಶಿಷ್ಟ ಪದ್ಧತಿಯನ್ನೇ ಮುಂದುವರೆಸುತ್ತಿರುವ, ಆದರೆ ಆದರ್ಶ ಪ್ರಾಯವಾದ ಖಾಸಗಿ ಶಾಲೆಗಳಿವೆ. ಇಲ್ಲಿಯೂ “ಅಂಕವಲ್ಲ, ಗುಣ ಮುಖ್ಯ” ಎಂದು ಯೋಚಿಸುತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಶಾಲೆಗಳಿವೆ. ಇದರ ಜೊತೆ ತನ್ನಷ್ಟಕ್ಕೆ ತಾನು ಬೇರೆ ಯಾವ ಗೊಡವೆಗೂ ಹೋಗದೆ ಮುಂದುವರೆಯುತ್ತಿರುವ ಸಿ ಬಿ ಎಸ್ ಇ ಇತ್ಯಾದಿ ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಿವೆ. ಈ ಎಲ್ಲಕ್ಕಿಂತ ದೊಡ್ಡ, ಕೊರತೆ ಎಂಬ ಪದದ ಅರ್ಥವೇ ತಿಳಿಯದ ರಾಜವೈಭೋಗದ ಅಂತಾರಾಷ್ಟ್ರೀಯ ಶಾಲೆಗಳನ್ನು ಸದ್ಯದ ಚರ್ಚೆಯಿಂದ ದೂರ ಇಡೋಣ. ಮತ್ತಷ್ಟು ಓದು
ಸಾಮಾಜಿಕ ಸಮಾನತೆಯ ಐಡಿಯಾಲಜಿ ಹಾಗೂ ಸಮವಸ್ತ್ರ ನಿಯಮದ ಸಮಸ್ಯೆ
– ವಿನಾಯಕ ಹಂಪಿಹೊಳಿ
ಪಶ್ಚಿಮದ ದೇಶಗಳು ಶಾಲಾ ಕಾಲೇಜುಗಳಲ್ಲಿರುವ ಸಮವಸ್ತ್ರದ ನಿಯಮವನ್ನು ಕೇವಲ ಒಂದು ಶಿಸ್ತಿನ ನಿಯಮವನ್ನಾಗಿ ನೋಡುವದಿಲ್ಲ. ಆ ದೇಶಗಳು ಪ್ರೊಟೆಸ್ಟಂಟ್ ಚಳುವಳಿಯ ಕಾಲದಿಂದ ರೂಪಿಸಿಕೊಂಡಿರುವ ಸಾಮಾಜಿಕ ಸಮಾನತೆಯ ಐಡಿಯಾಲಜಿಯನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಮತ್ತು ಬೆಳೆಯುತ್ತಿರುವ ಮಕ್ಕಳಿಗೆ ಆ ಐಡಿಯಾಲಜಿಯನ್ನು ತಿಳಿಸುವ ಪ್ರಯತ್ನ ಎಂದು ಅರ್ಥೈಸಲಾಗುತ್ತದೆ. ಶಾಲೆ ಎಂಬ ಸಂಸ್ಥೆಯ ಮುಂದೆ ಎಲ್ಲ ಮಕ್ಕಳೂ ಸಮಾನರು ಹಾಗೂ ಅಲ್ಲಿ ಬಡವ ಮತ್ತು ಬಲ್ಲಿದ ಎಂಬ ಭೇದವಿಲ್ಲ ಎಂಬ ಉನ್ನತವಾದ ಆಶಯವನ್ನು ಈ ಸಮವಸ್ತ್ರದ ನಿಯಮವು ಹೊಂದಿದೆ. ಹೀಗಾಗಿ ಅಲ್ಲಿ ಸಮವಸ್ತ್ರವನ್ನು ಹಾಕಿಕೊಳ್ಳಲು ಒಪ್ಪದಿರುವವರನ್ನು ಸಾಮಾಜಿಕ ಸಮಾನತೆಯ ವಿರೋಧಿ ಎಂದೇ ಪರಿಗಣಿಸಲಾಗುತ್ತದೆ. ಮತ್ತಷ್ಟು ಓದು
ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.
ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?