ಜಾತಿ ಆಧಾರಿತ ಮೀಸಲಾತಿಯ ಎರಡು ಮುಖಗಳು
– ಮು.ಅ ಶ್ರೀರಂಗ,ಬೆಂಗಳೂರು
ಜಾತಿ ಆಧಾರಿತ ಮೀಸಲಾತಿ ಕುರಿತ ಪರ-ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರುಗಳು ಮನುವಿನಿಂದ ಹಿಡಿದು ಪುರೋಹಿತಶಾಹಿ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ. ವಿರೋಧವಾಗಿರುವವರದ್ದು ಅವರವರ ಸದ್ಯದ ಸ್ವಂತ ಅನುಭವವಷ್ಟೇ ಆಗಿ ಕ್ಷೀಣ ದನಿಯಾಗಿದೆ. ಮೀಸಲಾತಿಯು ವೋಟಿನ ರಾಜಕಾರಣಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣದಿಂದ ಸ್ವಾತಂತ್ರ್ಯಾನಂತರ ಮೀಸಲಾತಿಯ ಗಡಿಗಳು(line of limits) ವಿಸ್ತಾರಗೊಳ್ಳುತ್ತಲೇ ಇದೆ. ಇದು ವೈಜ್ನಾನಿಕವೋ,ಅವೈಜ್ನಾನಿಕವೋ ಅಥವಾ ಸಹಜ ನ್ಯಾಯವೋ ಎಂಬ ಯಾವುದೇ ಚರ್ಚೆಗೆ, ಸಂವಾದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಬೆಲೆಯಿಲ್ಲ. ಇಷ್ಟಾಗಿಯೂ ಸಹ ಮೀಸಲಾತಿಯ ಗಡಿ ರೇಖೆಯಿಂದಾಚೆಗೆ ಇರುವ ಜಾತಿಗಳಲ್ಲಿನ(ಸರ್ಕಾರದ ದೃಷ್ಟಿಯಲ್ಲಿ ಮುಂದುವರಿದವರು, ಮೇಲ್ಜಾತಿಯವರು) ಕೆಲವರು ಆಗಾಗ ತಮ್ಮ ವಿರೋಧವನ್ನು ಧರಣಿ,ಮೆರವಣಿಗೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ತೀರಾ ಭಾವಾವೇಶಕ್ಕೊಳಗಾದ ಒಂದಿಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾರೆ;ಪ್ರಾಣ ಕಳೆದುಕೊಳ್ಳುತ್ತಾರೆ. ಕಾಲ ಕಳೆದಂತೆ ಜನಗಳು ಅದನ್ನೆಲ್ಲಾ ಮರೆಯುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ವ್ಯವಸ್ಥೆ ಹಿಂದಿನಂತೆಯೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ. ತಮ್ಮ ಹಿರಿಯರು ಮಾಡಿದರೆನ್ನಲಾದ ಪಾಪದ ಹೊರೆ ಹೊರಬೇಕಾಗಿ ಬಂದಿರುವ ಮೇಲ್ಜಾತಿಯ ಯುವ ಜನತೆ “ಯಾವ ರಾಜ ಬಂದರೇನು ರಾಗಿ ಬೀಸುವುದಂತೂ ತಪ್ಪುವುದಿಲ್ಲವಲ್ಲ” ಎಂಬ ಗಾದೆಯಂತೆ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುತ್ತಾರೆ. ಕ್ರಮೇಣ ಇದೇ ಅಭ್ಯಾಸವಾಗಿ ತಾನಾಯ್ತು ತನ್ನ ಸಂಸಾರವಾಯ್ತು ಎಂದು ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.