ಜಾತೀಯತೆ: ಏನು? ಎತ್ತ?
– ಡಾ. ಶ್ರೀಪಾದ ಭಟ್
ಸೆಪ್ಟೆಂಬರ್ 13, 2007ರಂದು 11 ನೇ ಪಂಚವಾರ್ಷಿಕ ಯೋಜನೆ ಕುರಿತ ಯೋಜನಾ ಆಯೋಗದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ “ಸ್ಪೆಶಲ್ ಅಟೆನ್ಷನ್ ವುಡ್ ನೀಡ್ ಟು ಬಿ ಪೇಯ್ಡ್ ಟು ಡಿಸ್ಟ್ರಿಕ್ಟ್ಸ್ ವಿತ್ ಎಸ್‍ಸಿ, ಎಸ್‍ಟಿ, ಒಬಿಸಿ ಆಂಡ್ ಮೈನಾರಿಟಿ ಕಾನ್ಸನ್‍ಟ್ರೇಶನ್’’ ಎಂದು ಭಾಷಣ ಮಾಡಿದ್ದರು. ಅಲ್ಪ ಸಂಖ್ಯಾತರಿಗೆ ಸರ್ಕಾರಿ ಯೋಜನೆಯಲ್ಲಿ ಸಿಂಹಪಾಲು ದೊರೆಯಬೇಕು ಎಂದೂ ಅವರು ಹೇಳಿದ್ದರು. ಸಿಂಗ್ ಮೂಲತಃ ಅರ್ಥಶಾಸ್ತ್ರಜ್ಞರು, ರಾಜಕಾರಣಿಯಲ್ಲ. ಆದರೆ ಅವರ ಧಾಟಿ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಯಾವ ರಾಜಕಾರಣಿಗೂ ಕಡಿಮೆ ಇರಲಿಲ್ಲ. ಅಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಎಲ್ಲ ಹಾಜರಿದ್ದರು. ಸರ್ಕಾರದ ಯೋಜನೆಯ ಲಾಭ ಬಡವರಿಗೆ ದೊರೆಯಬೇಕು ಎಂದು ಹೇಳುವ ಬದಲು ಅಲ್ಪ ಸಂಖ್ಯಾತರಿಗೆ ದೊರೆಯಬೇಕು ಎಂದು ಅವರು ಹೇಳಿದ್ದರಲ್ಲಿ ಅಭಿವೃದ್ಧಿಗಿಂತಲೂ ಮತಗಳಿಕೆಯ ವಾಸನೆ ಢಾಳಾಗಿ ರಾಚಿದರೆ ಅದರಲ್ಲಿ ಅವರ ತಪ್ಪಿಲ್ಲ. ಕರ್ನಾಟಕದಲ್ಲಿ ಶಾದಿ ಭಾಗ್ಯ ಯೋಜನೆ ಕುರಿತ ಸರ್ಕಾರದ ನಿಲುವನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡಬಹುದು. ಆ ಸರ್ಕಾರ, ಈ ಸರ್ಕಾರ ಎಂದಲ್ಲ ಎಲ್ಲ ಸರ್ಕಾರಗಳ ಯೋಜನೆಗಳೂ ಮತಗಳಿಕೆಯತ್ತ ನೆಟ್ಟಿರುವುದರಿಂದ ಅವರ ಘೋಷಣೆಗಳು ಹೀಗಾಗಿಬಿಡುತ್ತವೆ ಅಷ್ಟೆ.