ಎನ್‍ಜಿಓ: ಪರದೆ ಹಿಂದಿನ ಕತೆ
– ರೋಹಿತ್ ಚಕ್ರತೀರ್ಥ
ನರೇಂದ್ರ ಮೋದಿಯ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನೆಂದರೆ ಅದುವರೆಗೆ ಭಾರತದಲ್ಲಿ ಬೇರುಬಿಟ್ಟು ಹೆಮ್ಮರಗಳೂ ಹೆಮ್ಮಾರಿಗಳೂ ಆಗಿ ವಿಜೃಂಭಿಸುತ್ತಿದ್ದ ಎನ್‍ಜಿಓಗಳಿಂದ ಅವುಗಳ ಹಣಕಾಸು ವ್ಯವಹಾರಗಳ ಲೆಕ್ಕ ಕೇಳಿದ್ದು ಮತ್ತು ಹಾಗೆ ಲೆಕ್ಕ ಕೊಡದೆ ಅಂಗಡಿ ತೆರೆದಿರುವ ಎಲ್ಲ ಎನ್‍ಜಿಓಗಳಿಗೂ ಬಾಗಿಲು ಹಾಕಿಸಿ ಬೀಗ ಜಡಿಯುತ್ತೇನೆಂದು ಖಡಕ್ ಸೂಚನೆ ಇತ್ತಿದ್ದು. ಯಾವ್ಯಾವುದೋ ಬೇನಾಮಿ ಹೆಸರು ಮತ್ತು ಖಾತೆಗಳಿಂದ ಧನಸಹಾಯ ಪಡೆಯುತ್ತ ಆರಾಮಾಗಿದ್ದ ಎನ್‍ಜಿಓಗಳಿಗೆ ಕೇಂದ್ರ ಸರಕಾರ ಹೀಗೆ ಚಾಟಿ ಬೀಸತೊಡಗಿದ್ದೇ ಕಣ್ಣುಕತ್ತಲೆ ಬಂದಂತಾಯಿತು. ಕೇಂದ್ರದ ಗೃಹಖಾತೆ 2015ರ ಎಪ್ರೀಲ್‍ನಲ್ಲಿ ಗ್ರೀನ್‍ಪೀಸ್ ಎಂಬ ಅಂತಾರಾಷ್ಟ್ರೀಯ ಎನ್‍ಜಿಓದ ಮಾನ್ಯತೆ ರದ್ದುಮಾಡಿದ್ದೇ ತಡ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬುಡಕ್ಕೂ ಕೊಡಲಿಯೇಟು ಬೀಳುವುದು ಖಚಿತವೆಂದು ತಿಳಿದ ಉಳಿದ ಎನ್‍ಜಿಓಗಳು ಚಿರೋಬರೋ ಅಳತೊಡಗಿದವು. ಬಿಲಕ್ಕೆ ಹೊಗೆ ಹಾಕಿದಾಗ ದಂಶಕಗಳು ದಿಕ್ಕಾಪಾಲಾಗಿ ಹೊರಗೋಡಿಬರುವುದು ಸಾಮಾನ್ಯವೇ ತಾನೇ? ಗ್ರೀನ್‍ಪೀಸ್ ಸಂಸ್ಥೆಗೆ ಬರೆ ಎಳೆದೊಡನೆ ಫೋರ್ಡ್ ಫೌಂಡೇಶನ್, ಆಮ್ನೆಸ್ಟಿ ಇಂಟರ್‍ನ್ಯಾಷನಲ್, ವಿಶ್ವಸಂಸ್ಥೆ ಎಲ್ಲವೂ ಕೋರಸ್‍ನಲ್ಲಿ ಕೂಗು ಹಾಕಿದವು. ಗ್ರೀನ್‍ಪೀಸ್ ಮತ್ತು ಉಳಿದ ದೇಶದ್ರೋಹಿಗಳ ನೆಟ್‍ವರ್ಕ್ ಹೇಗಿದೆ ಎಂಬುದನ್ನು ಯಾವ ತನಿಖೆಯೂ ಇಲ್ಲದೆ ಸರಕಾರಕ್ಕೆ ನೋಡಲು ಅವಕಾಶವಾಯಿತು. ನಂಬಿದರೆ ನಂಬಿ, ಆ ಕಾಲಕ್ಕೆ ಭಾರತದಲ್ಲಿ ಯಾರ ನಿಯಂತ್ರಣ ಇಲ್ಲದೆ ಸಿಕ್ಕಸಿಕ್ಕ ಮೂಲಗಳಿಂದ ಧನಸಹಾಯ ಪಡೆದುಕೊಂಡು ಆಯಾ ವ್ಯಕ್ತಿ/ಸಂಸ್ಥೆಗಳಿಗೆ ಬೇಕಾದಂತೆ ಕೆಲಸ ಮಾಡಿಕೊಡುತ್ತಿದ್ದ ಎನ್‍ಜಿಓಗಳ ಸಂಖ್ಯೆ ಒಟ್ಟು 42,273! ಮತ್ತಷ್ಟು ಓದು