ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?
– ನರೇಂದ್ರ ಎಸ್ ಗಂಗೊಳ್ಳಿ
ನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು
ಮೌಲ್ಯ ರಾಜಕಾರಣ ಮರೆತ ಜಯಲಲಿತಾ!
– ತುರುವೇಕೆರೆ ಪ್ರಸಾದ್
ಪತ್ರಕರ್ತರು
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಮತ್ತಷ್ಟು ಓದು
ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ “ಅಮ್ಮ ಉನವಾಗಮ್”
– ಶ್ರೇಯಾಂಕ ಎಸ್ ರಾನಡೆ
||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ “ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015″ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.|| ಮತ್ತಷ್ಟು ಓದು
ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||
– ರಾಘವೇಂದ್ರ ನಾವಡ
ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!! ಮತ್ತಷ್ಟು ಓದು
ತಮಿಳುನಾಡು, ಕಾವೇರಿ, ಜಯಲಲಿತ, ದೇವೇಗೌಡರು ಮತ್ತು ನಾನು
– ಪ್ರೇಮಶೇಖರ
ನೆರೆಯ ತಮಿಳುನಾಡಿನಲ್ಲಿ ಹಲವು ಅಚ್ಚರಿ ಹುಟ್ಟಿಸುವ ವಿರೋಧಾಭಾಸಗಳು ಕಾಣಸಿಗುತ್ತವೆ. ತಮಿಳರು ಮಹಾ ಭಾಷಾಭಿಮಾನಿಗಳು. ತಮ್ಮ ನಾಡು ನುಡಿಯ ಬಗ್ಗೆ ಅವರ ಪ್ರೀತಿ, ಅಭಿಮಾನ, ಕಾಳಜಿಗೆ ಸಮಕಾಲೀನ ಭಾರತೀಯ ಇತಿಹಾಸದಲ್ಲಿ ದಂತಕತೆಯ ಆಯಾಮವೊದಗಿಬಿಟ್ಟಿದೆ. ಆದರೆ, ಇಂತಹ ಸ್ವಾಭಿಮಾನಿ ತಮಿಳರು ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದಲೂ ತಮಿಳೇತರರನ್ನು ತಮ್ಮ ರಾಜಕೀಯ ನಾಯಕರನ್ನಾಗಿ ಒಪ್ಪಿಕೊಂಡು ಅವರ ಕೈಯಲ್ಲಿ ತಮ್ಮ ರಾಜ್ಯವನ್ನಿಟ್ಟುಬಿಟ್ಟಿದ್ದಾರೆ. ಕರುಣಾನಿಧಿ ಕಳೆದ ನಾಲ್ಕು ದಶಕಗಳಿಂದಲೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅನಭಿಷಿಕ್ತ ಸಾಮ್ರಾಟರಾಗಿ ಮೆರೆಯುತ್ತಿದ್ದಾರೆ, ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಕರುಣಾನಿಧಿ ತೆಲುಗು ಮೂಲದವರು. ಡಿಎಂಕೆ ಪಕ್ಷವನ್ನು ಒಡೆದು ಅದಕ್ಕೆ ಪರ್ಯಾಯವಾಗಿ “ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ” (ಎಐಎಡಿಎಂಕೆ) ಪಕ್ಷ ಕಟ್ಟಿ ಸತತ ಹತ್ತು ವರ್ಷಗಳವರೆಗೆ ತಮಿಳುನಾಡನ್ನು ಆಳಿದ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಒಬ್ಬ ಮಲೆಯಾಳಿ. ಅವರ ಸಹವರ್ತಿ ಮತ್ತು ಉತ್ತರಾಧಿಕಾರಿ, ಕೋಟ್ಯಂತರ ತಮಿಳರ ಪ್ರೀತಿಯ “ಅಮ್ಮ” ಜಯಲಲಿತಾರ ಮೂಲ ಕರ್ನಾಟಕದಲ್ಲಿ. ಅದಕ್ಕೂ ಹಿಂದೆ ಹೋಗುವುದಾದರೆ ದ್ರಾವಿಡ ಚಳುವಳಿಯ ಅಧ್ವರ್ಯು, ತಮಿಳುನಾಡಿನ ಇತಿಹಾಸದ ದಿಕ್ಕನ್ನೇ ಬದಲಿಸಿದ “ಪೆರಿಯಾರ್” ಬಿರುದಾಂಕಿತ ಇ. ವಿ. ರಾಮಸ್ವಾಮಿ ನಾಯಕರ್ ಕನ್ನಡಿಗರಂತೆ. ಇವರೆಲ್ಲರೂ ತಮಿಳನ್ನು ತಮ್ಮದಾಗಿಸಿಕೊಂಡು, ತಮಿಳುನಾಡಿಗೆ ತಮ್ಮನ್ನರ್ಪಿಸಿಕೊಂಡು ತಮಿಳರ ಹೃದಯಗಳಲ್ಲಿ ಸ್ಥಾನ ಗಳಿಸಿಕೊಂಡುಬಿಟ್ಟರು. ಮತ್ತಷ್ಟು ಓದು
ಕಾವೇರಿ ವಿವಾದ : ನಾಲಾಯಕ್ ನಾಯಕರ ನಡುವಿನ ಜನನಾಯಕರು
ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಸೆಪ್ಟಂಬರ್ ೯ರಂದು ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ನಮಗೆ ಕುಡಿಯಲಿಕ್ಕೇ ನೀರಿಲ್ಲದಿರುವಾಗ ಕೈಲಾಗದ ಸರ್ಕಾರ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸುತ್ತಿದೆ. ನಮ್ಮಲ್ಲೇ ಹೆಚ್ಚಾಗಿರುವ ನಾಲಾಯಕ್ ನಾಯಕರ ನಡುವೆ, ಅಪರೂಪಕ್ಕೆ ದಿಟ್ಟತನ ಹಾಗೂ ಚಾಣಾಕ್ಷತನ ತೋರಿದ ಇಬ್ಬರು ಜನನಾಯಕರ ನೆನಪುಗಳು ನಿಮಗಾಗಿ – ನಿಲುಮೆ
ನೆನಪು ೧ :
ನಿಜವಾದ ಗಂಡಸು ಎಂದರೆ ಅದು ಬಂಗಾರಪ್ಪ
1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೇ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು. ಮತ್ತಷ್ಟು ಓದು
ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ. ಮತ್ತಷ್ಟು ಓದು
ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!
– ತುರುವೇಕೆರೆ ಪ್ರಸಾದ್
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.
ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.
ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.
ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?
– ಚೇತನಾ ತೀರ್ಥಹಳ್ಳಿ
ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?
ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.
ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಮತ್ತಷ್ಟು ಓದು