ನನ್ನಿ- ತಾತ್ವಿಕ ಒಳಸುಳಿಗಳ ವಿಶ್ಲೇಷಣೆ.
— ನವೀನ ಗಂಗೋತ್ರಿ
ಗಂಭೀರ ಓದುಗರು, ನೋಡುಗರು, ಕನ್ನಡದಲ್ಲಿ ಕಡಿಮೆಯಾದ್ದರಿಂದಲೇ ಕಡಮೆ ದರ್ಜೆಯ ಪತ್ರಿಕೆಗಳು, ಸಿನಿಮಾಗಳು, ಕಾದಂಬರಿಗಳು ನಮ್ಮಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎನ್ನುವ ಮಾತನ್ನು ಆಗಾಗ ನಿರಾಶಾವಾದಿ ವಿಮರ್ಶಕರೂ, ತಮ್ಮ ಕಣ್ಣೀರಿನ ಕಾರ್ಯಕ್ರಮಗಳ ಸಮರ್ಥಕರಾದ ಚಾನೆಲ್ಗಳೂ ಹೇಳಿಕೊಂಡು ಬಂದಿವೆ. ಸಕಾರಾತ್ಮಕ ಧೋರಣೆಯ ಕೆಲವು ಬರಹಗಾರರು, ಚಿಂತಕರು ಓದುಗರನ್ನು ಇಷ್ಟು ತಳಮಟ್ಟದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಘನವಾದ ಕೃತಿಗಳನ್ನು ಕೊಡುವುದು ಅವರಿಗೆ ಇಂದಿಗೂ ಸಾಧ್ಯವಾಗುತ್ತಿದೆ.
ಕರ್ಮ ಕಾದಂಬರಿಯ ಮೂಲಕ ಕರಣಂ ಪವನ್ ಪ್ರಸಾದ್ ಹಾಗೊಬ್ಬ ಆಳ ಚಿಂತನೆಯ ಕಾದಂಬರಿಕಾರರಾಗುವ ಭರವಸೆಯನ್ನು ಹುಟ್ಟಿಸಿದ್ದರು. ತಾತ್ತ್ವಿಕ ಎತ್ತರವನ್ನು ಅಡಕಗೊಳಿಸಿಕೊಂಡಿದ್ದರೂ ಕರ್ಮದ ಓಘದಲ್ಲಿ ಇನ್ನೊಂದಿಷ್ಟು ನೈಪುಣ್ಯವನ್ನು ಬಯಸಿದ್ದ ಓದುಗ, ಇದೀಗ ಅವರ ಹೊಸ ಕಾದಂಬರಿ ’ನನ್ನಿ’ಯ ಮೂಲಕ ಹೆಚ್ಚು ಕುಶಲಿಯಾದ ಮತ್ತು ಪ್ರಭಾವಿಯಾದ ಕಾದಂಬರಿಕಾರನನ್ನು ಕಂಡಿದ್ದಾರೆ. ಎರಡುವಾರದ ಹಿಂದೆ ಬಿಡುಗಡೆಯಾದ ನನ್ನಿ ಅದಾಗಲೇ ಎರಡುಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆನ್ ಲೈನ್ ನ್ಯೂಸ್ ಪೋರ್ಟಲ್ಗಳಲ್ಲಿ ಸುದ್ದಿಯಾಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಹೊತ್ತಿ ಉರಿವ ಬೆಂಕಿಯಂತಲ್ಲದೆ, ಚಾಪೆಯಡಿಗೆ ಹರಿವ ನೀರಿನಂತೆ ಓದುಗನನ್ನು ಆಂತವಾಗಿ ತಲುಪುತ್ತಿದೆ. ಅದ್ಯಾಕೆ ಹಾಗೆ ತಲುಪುತ್ತಿದೆ ಎನ್ನುವುದಕ್ಕೆ ನನ್ನಿ ಕಾದಂಬರಿಯ ಸಾಮರ್ಥ್ಯವೇ ಉತ್ತರ.