ವಿಷಯದ ವಿವರಗಳಿಗೆ ದಾಟಿರಿ

Posts tagged ‘ನರೇಂದ್ರ ಮೋದಿ’

15
ಡಿಸೆ

ಮೋದಿಯ ಅಂತರಂಗಲ್ಲಿರುವ ಮಾಧವ; ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!


– ಅಜಿತ್ ಶೆಟ್ಟಿ ಹೆರಂಜೆ

ಕುರುಕ್ಷೇತ್ರದಲ್ಲಿ ಭೀಷ್ಮ ಪಿತಾಮಹರು ಕೌರವರ ಪಕ್ಷದಿಂದ ಯುದ್ಧ ಮಾಡುತ್ತಾರೆ. ಕಾರಣ ಅವರು ತೆಗೆದುಕೊಂಡ ಭೀಷಣ ಪ್ರತಿಜ್ಞೆ. ಭೀಷ್ಮರಿಗೂ ಇದರ ಬಗ್ಗೆ ಹೆಮ್ಮೆ ಇತ್ತು. ಆದರೆ ಅವರಿಗೆ ತಮ್ಮ ಬಗ್ಗೆ ಇದ್ದ ಈ ಅಭಿಮಾನದ ಭ್ರಮನಿರಸನವಾಗಿದ್ದು ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ. ಭೀಷ್ಮರು ಮಹಾಭಾರತ ಕಾಲದಲ್ಲಿ ಅತ್ಯಂತ ಪರಾಕ್ರಮಿ ಮತ್ತು ಶಕ್ತಿಶಾಲಿ ಯೋಧ. ಅವರನ್ನು ಸೋಲಿಸುವ ಒಬ್ಬನೇ ಒಬ್ಬ ಯೋಧ ಇಡೀ ಆರ್ಯವರ್ತದಲ್ಲಿ ಇರಲಿಲ್ಲ. ಆ ಕಾರಣಕ್ಕೆ ಹಸ್ತಿನಾವತಿಯ ಗೃಹ ಕಲಹದ ನಡುವೆಯೋ ಬೇರೆ ರಾಜರು ಹಸ್ತಿನಾವತಿಯ ಮೇಲೆ ಆಕ್ರಮಣ ಮಾಡಲಿಲ್ಲ. ಹದಿನೆಂಟು ದಿನದ ಮಹಾಭಾರತದ ಯುದ್ಧದಲ್ಲಿ 10 ದಿನ ಭೀಷ್ಮರು ಯುದ್ಧ ಮಾಡುತ್ತಾರೆ. ಆ ಹತ್ತೂ ದಿನ ಅವರು ಪಾಂಡವರ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ಇನ್ನು ಇವರು ಬದುಕುಳಿದರೆ ಪಾಂಡವರ ಜಯ ಅಸಾಧ್ಯ ಎಂದು ಅರಿತ ಕೃಷ್ಣ, ಭೀಷ್ಮರಿಗೆ ಒಂದೋ ಯುದ್ಧಭೂಮಿಯ ತ್ಯಾಗ ಮಾಡಿ, ಇಲ್ಲಾ ನಾನೇ ನಿಮ್ಮನ್ನು ವಧಿಸುತ್ತೇನೆ ಎಂದವನೇ ಚಕ್ರಧಾರಿಯಾಗಿ ರಣರಂಗದಲ್ಲಿ ಶಸ್ತ್ರ ಹಿಡಿಯುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನ ತಾನೇ ಮುರಿಯುತ್ತಾನೆ. ಆಗ ಅರ್ಜುನ, ಮಾಧವ ಲೋಕ ನಿನ್ನನ್ನು ವಚನ ಭ್ರಷ್ಟ ಎಂದು ಆಡಿಕೊಳ್ಳುತ್ತದೆ ಅಂದಾಗ, ಕೃಷ್ಣ “ನನಗೆ ಲೋಕ ಹಿತ ಮುಖ್ಯವೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಳಲ್ಲ. ಒಂದೋ ನೀನು ಭೀಷ್ಮರನ್ನು ಕೊಲ್ಲು, ಇಲ್ಲವಾದರೆ ನಾನು ಕೊಲ್ಲುತ್ತೇನೆ” ಎನ್ನುತ್ತಾನೆ. ಆಗ ಕೃಷ್ಣ ಮತ್ತು ಭೀಷ್ಮರಲ್ಲಿ ಒಂದಷ್ಟು ಧರ್ಮಸೂಕ್ಷ್ಮಗಳ ಚರ್ಚೆ ನಡೆಯುತ್ತದೆ. “ನಾನು ಕೊಟ್ಟ ವಚನವನ್ನು ಸದಾ ನಿಭಾಯಿಸುತ್ತಲೇ ಬಂದೆ. ಎಷ್ಟೇ ಕಷ್ಟವಾದರೂ ನಾನು ನನ್ನ ಪ್ರತಿಜ್ಞೆಯ ಭಂಗ ಮಾಡಲ್ಲಿಲ್ಲ. ಆ ಮೂಲಕ ಸದಾ ಧರ್ಮದ ಮಾರ್ಗದಲ್ಲಿ ನನ್ನ ಜೀವನದ ಉದ್ದಕ್ಕೂ ನಡೆದೆ” ಎನ್ನುತ್ತಾರೆ ಭೀಷ್ಮರು. ಆಗ ಕೃಷ್ಣ “ದೃತರಾಷ್ಟ್ರನಂತಹ ಒಬ್ಬ ಅಪಾತ್ರ ಹಸ್ತಿನಾವತಿಯ ಸಿಂಹಾಸನ ಏರುವುದರಿಂದ ಹಿಡಿದು ಇವತ್ತಿನ ಈ ಭಾರತ ಯುದ್ಧದ ಎಲ್ಲಾ ಅಧರ್ಮಕ್ಕೆ ನಿನ್ನ ಪ್ರತಿಜ್ಞೆಯೇ ಕಾರಣ. ಭಗವಂತ ನಿನ್ನ ಸರ್ವಶಕ್ತನನ್ನಾಗಿ ಮಾಡಿದ್ದ, ನಿನ್ನಲ್ಲಿ ಧರ್ಮ ಜ್ಞಾನ ಇತ್ತು, ಬಾಹುಬಲ ಇತ್ತು. ಈ ಮೂಲಕ ನೀನು ನಿನ್ನ ಪ್ರಜಾ ವರ್ಗದ ಹಿತವನ್ನು ಕಾಪಾಡಬೇಕಿತ್ತು. ಆದರೆ ನಿನ್ನ ಜೀವನದ ಉದ್ದಕ್ಕೂ ಆದ ಅಧರ್ಮಗಳನ್ನು ನೋಡಿ ಅದನ್ನ ತಡೆಯುವ ಸಾಮರ್ಥ್ಯವಿದ್ದರೂ ನಿನ್ನ ಪ್ರತಿಜ್ಞೆಗೆ ಕಟ್ಟುಬಿದ್ದು ಎಲ್ಲವನ್ನೂ ಆಗಲು ಬಿಟ್ಟೆ. ಲೋಕ ಹಿತಕ್ಕೆ ಉಪಯೋಗವಾಗದ ನಿನ್ನ ಸಾಮರ್ಥ್ಯ ಇದ್ದರೆಷ್ಟು ಬಿಟ್ಟರೆಷ್ಟು? ಇದು ನೀನು ಭಗವಂತನಿಗೂ ಮಾಡುವ ಅವಮಾನವಲ್ಲವೇ? ನೀನು ಸದಾ ನಿನ್ನ ಪ್ರತಿಜ್ಞೆಗಾಗಿ ಬದುಕಿದೆಯೇ ಹೊರತು,ಸಮಾಜಕ್ಕಾಗಿ ನಿನ್ನ ಸ್ವಜನರ ಕಲ್ಯಾಣಕ್ಕಾಗಿ ಬದುಕಲೇ ಇಲ್ಲ. ಅದರಿಂದ ಆದ ಅನಾಹುತಗಳು ಅನರ್ಥಗಳೆ ಹೆಚ್ಚು. ಭೀಮನಿಗೆ ವಿಷಪ್ರಾಶನ ಆದಾಗ, ಪಾಂಡವರಿಗೆ ಹಸ್ತಿನಾವತಿಯ ಅಧಿಕಾರ ಸಿಗದಿದ್ದಾಗ, ಅರಗಿನ ಮನೆಯಲ್ಲಿ ಪಾಂಡವರನ್ನು ಸುಡುವ ಯೋಜನೆ ಆದಾಗ, ಮೋಸದ ದ್ಯೂತ ಆಗುವಾಗ, ದ್ರೌಪದಿ ವಸ್ತ್ರಾಪಹರಣ ಆಗುವಾಗ, ಈಗ ಧರ್ಮ ಸ್ಥಾಪನೆಯ ಕಾರಣಕ್ಕೆ ಭಾರತ ಯುದ್ಧ ಆಗುತ್ತಿರುವಾಗಲೂ ನಿನ್ನ ಸಾಮರ್ಥ್ಯವನ್ನು ನಿನ್ನ ಪ್ರತಿಜ್ಞೆಯನ್ನು ಕಾಪಾಡಲು ವಿನಿಯೋಗ ಮಾಡುತ್ತಿರುವೆಯೇ ಹೊರತು ಧರ್ಮದ ರಕ್ಷಣೆಗೆ ನೀನು ಏನೂ ಮಾಡುತ್ತಿಲ್ಲ. ನಿಯತಿ ಕಾರ್ಯಕ್ಕೆ ಅಡ್ಡಿಯಾಗಿ ನಿಂತಿದ್ದೆ. ನನಗೆ ಧರ್ಮ ಸ್ಥಾಪನೆ ಮುಖ್ಯವೇ ಹೊರತು ನನ್ನ ಸ್ವಪ್ರತಿಷ್ಟೆ ಅಲ್ಲ. ಲೋಕ ಕಲ್ಯಾಣಕ್ಕೆ ಇಂತಹ ಸಾವಿರ ಅಪರಾಧಗಳನ್ನು ಬೇಕಿದ್ದರೆ ಸಹಿಸಿಕೊಳ್ಳಬಲ್ಲೆ. ನಾವು ಯಾವುದೋ ಕಾಲಘಟ್ಟದಲ್ಲಿ ಆ ಪರಿಸ್ಥಿಗೆ ಅನುಗುಣವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಬದಲಾದ ಸನ್ನಿವೇಶದಲ್ಲಿ ಅದೇ ನಿರ್ಣಯಗಳು ಸಮಾಜದ ಹಿತಕ್ಕೆ ಧಕ್ಕೆ ಆಗುವಂತಿದ್ದರೆ ಅಥವಾ ಅದನ್ನೇ ಕಾರಣ ಮಾಡಿ ದುಷ್ಟರು ಸಮಾಜದಲ್ಲಿ ಅಧರ್ಮ ಮಾಡುತ್ತಿದ್ದಾರೆ ಅಂದಾಗ ಸ್ವಪ್ರತಿಷ್ಟೆಯನ್ನು ಬಿಟ್ಟು ಸಮಾಜದ ಹಿತಕ್ಕಾಗಿ ಅಂತಹ ನಿರ್ಣಯಗಳ ಕೈಬಿಡಬೇಕು. ಅದೇ ಧರ್ಮ!” ಎಂದ ಕೃಷ್ಣ, ಜೀವನಪೂರ್ತಿ ತನ್ನ ಪ್ರತಿಜ್ಞೆಗಾಗಿ ಬದುಕಿದ ಭಿಷ್ಮರನ್ನು ವಧಿಸಲು, ಆ ಮೂಲಕ ಧರ್ಮ ಸ್ಥಾಪನೆ ಮಾಡಲು ತಾನು ಮಾಡಿದ ಪ್ರತಿಜ್ಜೆಯನ್ನೇ ಮುರಿಯಲು ಮುಂದಾಗುತ್ತಾನೆ.

ಪ್ರಧಾನಿ ಮೋದಿ ನವೆಂಬರ್‌ 19ರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ರೈತರ ಹಿತಕಾಯುವ ಉದ್ದೇಶದಿಂದ ಒಂದು ವರ್ಷ ಮೂರು ತಿಂಗಳ ಹಿಂದೆ ಜಾರಿಗೆ ತಂದಿದ್ದ ತ್ರಿವಳಿ ಕೃಷಿ ಸುಧಾರಣಾ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಘೊಷಣೆ ಮಾಡಿದರು. ಈ ಮೂರು ಕೃಷಿ ಸುಧಾರಾಣಾ ಮಸೂದೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳಾಗಿದ್ದವು. ಕರ್ನಾಟಕದ ರೈತ ಹೋರಾಟದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದ ಪ್ರೊ.ನಂಜುಂಡ ಸ್ವಾಮಿಯಿಂದ ಹಿಡಿದು ಉತ್ತರ ಭಾರತದಲ್ಲಿ ರೈತ ಕ್ರಾಂತಿಯ ಹರಿಕಾರ ಚೌಧರಿ ಚರಣ್‌ಸಿಂಗ್ ಆದಿಯಾಗಿ ದಶಕಗಳಿಂದ ಇಟ್ಟ ಬೇಡಿಕೆಗಳು ಅಕ್ಷರಶಃ ಈ ಕಾಯಿದೆಯ ಮುಖಾಂತರ ಅನುಷ್ಠಾನಕ್ಕೆ ಬಂದವು. ಕೇವಲ ದೇಶದ ರೈತ ಹೋರಾಟಗಳು ಮಾತ್ರವಲ್ಲ, ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಅವರುಗಳು ವಿರೋಧ ಪಕ್ಷದಲ್ಲಿ ಇದ್ದಾಗ ರೈತರ ಇದೇ ಬೇಡಿಕೆಗಳನ್ನು ಮುಂದಿಟ್ಟು ಆಳುವ ಸರಕಾರಗಳ ವಿರುದ್ಧ ಪ್ರತಿಭಟನೆಗೂ ಕೂತಿದ್ದವು. ಅದೆಲ್ಲವನ್ನು ಅಕ್ಷರಶಃ ಅನುಷ್ಟಾನಕ್ಕೆ ತರುವ ಕಾಯಿದೆಯನ್ನು ಮೋದಿ ಸರಕಾರ ಕಳೆದ ವರ್ಷ‌ ಸೆಪ್ಟಂಬರ್‌ ತಿಂಗಳಿನಲ್ಲಿ ತಂದಿತು. ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರನ್ನು ಮುಕ್ತಗೊಳಿಸಿ, ರೈತರು ತಾವು ಉತ್ಪಾದಿಸಿದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯದ ಜೊತೆಗೆ ವಾಣಿಜ್ಯಕ್ಕೆ ಖಾಸಗೀ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾನೂನಿನ ರಕ್ಷಣೆಯೊಂದಿಗೆ ಕೃಷಿ ಮಾಡುವ ಅವಕಾಶವನ್ನೂ ಈ ಕಾಯಿದೆ ರೈತರಿಗೆ ಕೊಟ್ಟಿತು. ದುರಂತ ಅಂದರೆ ಮೋದಿ ಕಳೆದ 7 ವರ್ಷಗಳಿದೆ ಕೇವಲ ವಿರೋಧಿಸುವ ಕಾರಣಕ್ಕೆ ವಿರೋಧ ಮಾಡುತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಹಿಂದೆ ತಾವೇ ಧರಣಿ ಕೂತು ಜಾರಿಯಾಗಲೇಬೇಕು ಎಂದ ಕಾನೂನು ಜಾರಿಗೆ ಬಂದಾಗ ಅದನ್ನ ಸ್ವಾಗತಿಸುವ ಬದಲು ವಿರೋಧಿಸಲು ಮುಂದಾದರು. ಕೇಂದ್ರ ಸರಕಾರ ಈ ರೈತ ಸಂಘಟನೆಗಳ ಜತೆಗೆ ಸುಮಾರು 12 ಸುತ್ತಿನ ಮಾತುಕತೆ ನಡೆಸಿದರೂ ಅವರು ತಮ್ಮ ವಿತಂಡವಾದದ ಪಟ್ಟನ್ನು ಸಡಿಸಲೇ ಇಲ್ಲ. ರೈತ ಮಸೂದೆ ಕಾಯಿದೆಯ ಯಾವ ಅಂಶದಲ್ಲಿ ನಿಮಗೆ ಸಮಸ್ಯೆ ಇದೆ ಚರ್ಚಿಸೋಣ ಎಂದರೆ ಅದಕ್ಕೂ ಅವರು ಸಿದ್ದರಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಮತ್ತು ಅದಕ್ಕೂ ಪೂರ್ವದ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕೂಡ ಆಳುವ ಸರಕಾರಗಳು ಎಲ್ಲಾ ನಿಲುವುಗಳು ಬಹುತೇಕ ರೈತ ವಿರೋಧಿಗಳೇ ಆಗಿದ್ದವು. 2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷ್‌ ಸರಕಾರ ತಂದ ಎಪಿಎಮ್‌ಸಿ ಕಾಯಿದೆ ಭಾರತದಲ್ಲಿ ಕೃತಕ ಅಹಾರ ಧಾನ್ಯಗಳ ಅಭಾವ ಸೃಷ್ಟಿ ಮಾಡಿತು. ಬಂಗಾಳದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಹಸಿವಿನಿಂದ ಸತ್ತರು. ಅಲ್ಲಿಂದ ಪ್ರಾರಂಭವಾಗಿ 2020ರ ಕೃಷಿ ಸುಧಾರಣಾ ನೀತಿ ಬರುವ ತನಕ ಭಾರತದ ರೈತನ ಬದುಕು ಸುಧಾರಿಸುವ ಯಾವುದೇ ನೀತಿಗಳು ಜಾರಿಯಾಗಲೇ ಇಲ್ಲ. ಈ ಕಾರಣಕ್ಕೆ ರೈತರು ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತ ಬಂದ. ರೈತನ ಮನಸ್ಸಿನಲ್ಲಿ ಸರಕಾರಗಳು ರೈತವಿ ರೋಧಿಗಳು ಅನ್ನುವ ಭಾವನೆ ಅಚ್ಚೊತ್ತಿತು. ನಮ್ಮ ದೇಶದ ಎಡಪಂಥೀಯ ಪಕ್ಷಗಳಿಗೆ ಇಂತಹಾ ಮನಃಸ್ಥಿತಿಯ ರೈತ ಸಮುದಾಯಗಳನ್ನು ತಮ್ಮತ್ತ ಸೆಳೆದುಕೊಳ್ಳುವುದು ಕಷ್ಟವಾಗಲಿಲ್ಲ. ಇಂತವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ದೇಶದೊಳಗೆ ಹಲವಾರು ವಿಧ್ವಂಸಕ ಕೆಲಸಗಳನ್ನು ಮಾಡುತ್ತಲೇ ಬಂದರು. ಈ ದೇಶದಲ್ಲಿ ರೈತನನ್ನು ಅನ್ನದಾತ ಎಂದೇ ಕಾಣುತ್ತೇವೆ ಮತ್ತು ಸರಕಾರಗಳು ಇವರ ಹೋರಾಟ, ಪ್ರತಿಭಟನೆ ಎಲ್ಲದರ ಬಗ್ಗೆಯ ಹೆಚ್ಚು ಸಹಿಷ್ಣುಗಳಾಗಿರುತ್ತಿದ್ದವು. ರೈತರನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದರೆ ಸರಕಾರಗಳು ನಮ್ಮನ್ನು ಏನೂ ಮಾಡಲಾರವು. ಒಂದೊಮ್ಮೆ ಅವುಗಳನ್ನು ಬಲಪೂರ್ವವಾಗಿ ಹತ್ತಿಕ್ಕಲು ಸರಕಾರ ಮುಂದಾದರೆ ಅಂತಹಾ ಘಟನೆಗಳನ್ನು ಸಮಾಜ ಯಾವತ್ತೂ ಸಹಿಸಿಕೊಂಡಿರಲಿಲ್ಲ ಅನ್ನುವುದರ ಅರಿವು ಅವರಿಗಿತ್ತು. ಕರ್ನಾಟಕದಲ್ಲಿ 1980ರ ನರಗುಂದ-ನವಲಗುಂದದಲ್ಲಿ ಆದ ರೈತ ಬಂಡಾಯದಲ್ಲಿ ಅಂದಿನ ಸರಕಾರ ತಾಳ್ಮೆ ಕಳೆದುಕೊಂಡ ಮಾಡಿದ ಗೋಲಿಬಾರ್‌ ಮುಂದಿನ ದಿನಗಳಲ್ಲಿ ಗುಂಡೂರಾವ್‌ ಅವರ ಸರಕಾರವನ್ನೇ ಬಲಿತೆಗೆದುಕೊಂಡಿತ್ತು. ಇದೆಲ್ಲದರಿಂದ ಹುಟ್ಟಿದ ಅನೇಕ ರೈತ ಸಂಘಟನೆಗಳು, ಒಂದಷ್ಟು ನಾಯಕರು, ಉದಾಹರಣೆಗೆ ಪ್ರೊ. ನಂಜುಂಡ್‌ಸ್ವಾಮಿ, ಚೌಧರಿ ಚರಣ ಸಿಂಗ್‌, ಟಿಕಾಯತ್‌ ಅಂತವರು ರೈತರ ನೈಜ ಕಾಳಜಿಯನ್ನು ತೋರಿದರಾದರೂ, ಅವರ ನಂತರ ಬಂದವರೆಲ್ಲರೂ ರೈತ ಹೋರಾಟದ ನೆಪದಲ್ಲಿ ತಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ರೈತ ಹೋರಾಟಗಳನ್ನು ಬಳಸತೊಡಗಿದರು. ರೈತರೂ ತಮಗೆ ಅರಿವಿಲ್ಲದೇ ಈ ವೀಷ ವರ್ತುಲದಲ್ಲಿ ಸಿಕ್ಕಿಕೊಂಡರು. ಇಂತಹಾ ರಾಜಕೀಯ ಸ್ವಾರ್ಥ ಭರಿತ ಹೋರಾಟದ ಉಗ್ರ ಸ್ವರೂಪವೇ ದೆಹಲಿಯಲ್ಲಿ ರಾಕೇಶ್‌ ಸಿಂಗ್‌ ಟಿಕಾಯತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು.

ಕಾಯಿದೆ ಜಾರಿಯಾದಾಗಿನಿಂದ ಇಲ್ಲಿಯ ತನಕ ಮಧ್ಯವರ್ತಿಗಳೂ ಒಂದಿಷ್ಟು ಅಮಾಯಕ ರೈತರನ್ನು ಮುಂದಿಟ್ಟು ದೆಹಲಿ ಪರಿಸರದಲ್ಲಿ ಈ ಕಾಯಿದೆಯನ್ನು, ರೈತ ವಿರೋಧಿ ಪ್ರತಿಭಟನೆಯನ್ನಾಗಿ ಮಾಡಲು ಪ್ರಾರಂಭಿದರು. ಹೀಗೆ ಪ್ರಾರಂಭವಾದ ಪ್ರತಿಭಟನೆ ಆರಂಭದಲ್ಲಿ ಇಂದೊದು ಪ್ರತಿಕ್ರಿಯೆ ಅಷ್ಟೇ ಎಂದು ಭಾವಿಸಲಾಗಿತ್ತು. ನಂತರದ ದಿನಗಳಲ್ಲಿ ಆದ ಬೆಳವಣಿಗೆಯಿಂದ ಇದು ದೆಹಲಿಯ CAA ಪ್ರತಿಭಟನೆಯ ಮುಂದುವರಿದ ಭಾಗವಾಗಿದ್ದು. ಇದು ಸಂಪೂರ್ಣ ಪೂರ್ವಯೋಜಿತ ಮತ್ತು ಪೂರ್ವ ನಿರ್ಧಾರಿತ ಅನ್ನುವುದು ಅರಿಯಲು ಬಹಳ ಕಾಲ ಬೇಕಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಮೋದಿ ಸರಕಾರ ಕೈಗೊಂಡ ಅನೇಕ ನಿರ್ಧಾರಗಳು ಇಷ್ಟು ದಿನ ಭಾರತದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಅನೇಕ ಸಂಘಟನೆಗಳು ಎನ್‌ಜಿಓಗಳ ಪ್ರಭಾವಗಳನ್ನು ಹತ್ತಿಕ್ಕಿತ್ತು. ವಿದೇಶಗಳಿಂದ ಇಂತಹ ಸಂಘಟನೆಗಳಿಗೆ ಲೆಕ್ಕವಿಲ್ಲದಷ್ಟು ಬರುತ್ತಿದ್ದ ಕೋಟ್ಯಂತರ ರುಪಾಯಿ ವಿದೇಶಿ ಅನುಧಾನಗಳನ್ನು ಮೋದಿಯರು 2020ರಲ್ಲಿ ತಂದ FCRA ತಿದ್ದುಪಡಿ ಕಾಯಿದೆಯಿಂದಾಗಿ ಸರಕಾರಿ ನಿಯಂತ್ರಣಕ್ಕೆ ಬಂದಿತು. ಇದೆಲ್ಲದರ ಜೊತೆಗೆ ಜಾಗತಿಕ ರಾಜಕಾರಣದಲ್ಲಿ ಮೋದಿಯವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಯಾವ ವ್ಯಕ್ತಿಗೆ ಅಮೇರಿಕಾ ವಿಸಾ ಕೊಡಬಾರದು ಎಂದು ಅಮೇರಿಕಾದ ಸರಕಾರದ ಮಂದೆ ಮಂಡಿಯೂರಿ ಗೋಗರೆದರೂ ಅದೇ ವ್ಯಕ್ತಿ ಈಗ ಅವರ ಕಣ್ಣಮುಂದೆ ವಿಶ್ವದ ಅತ್ಯಂತ ಪ್ರಭಾವಿ ನಾಯಕನಾಗಿ ಬೆಳದಿದ್ದ. ಹೀಗೆ ದೇದೀಪ್ಯಮಾನವಾಗಿ ಬೆಳಗುತ್ತಿದ್ದ ಮೋದಿ ಮತ್ತು ಭಾರತದ ವರ್ಚಸ್ಸಿಗೆ ಹೇಗಾದರೂ ಮಾಡಿ ಧಕ್ಕೆ ತರಬೇಕಾಗಿತ್ತು. ಭಾರತದ 5G ಇಂಟರ್ನೆಟ್‌ ಸಂಪರ್ಕದ ಗುತ್ತಿಗೆ ಚೀನಾದ ಹ್ವುವೆ ಕಂಪೆನಿಯ ಬದಲು ಭಾರತದ ಜಿಯೋದ ಪಾಲಾಗಿತ್ತು. ಇದರಿಂದ ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನದ ಜೊತೆಗೆ ಭಾರಿ ಆರ್ಥಿಕ ನಷ್ಟವೂ ಆಗಿತ್ತು. ಅದಕ್ಕೆ ಮೋದಿಯನ್ನು ಹಣಿಯಲು ರೈತ ಕಾಯಿದೆಯನ್ನು ಬಳಸಿಕೊಂಡರು. ಇವರ ಸ್ವಾರ್ಥ ರಾಜಕಾರಣಕ್ಕೆ ಅಮಾಯಕ ರೈತರು ದಾಳವೂ ಆದರು, ಗುರಾಣಿಯೂ ಆದರು. ಈ ಕಾಯಿದೆಯಿಂದ ಪೆಟ್ಟು ಬಿದ್ದದ್ದು ಎಪಿಎಮ್‌ಸಿಯ ಮಧ್ಯವರ್ತಿಗಗಳಿಗೆ, ಅವರು ಹೇಗೆ ಸುಮ್ಮನಿರಲು ಸಾಧ್ಯ? ಆ ಕಾರಣಕ್ಕೆ NDA ಒಕ್ಕೂಟದ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಈ ಕಾಯಿದೆಯನ್ನು ವಿರೋಧಿಸಿ ಸರಕಾರದಿಂದ ಹೊರನಡೆಯಿತು. ಪಂಜಾಬಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಏಕಸ್ವಾಮ್ಯ ಅವರಲ್ಲಿತ್ತು, ಕೇವಲ ದಲ್ಲಾಳಿಕೆಯಲ್ಲಿ ವಾರ್ಷಿಕ ಸುಮಾರು 400 ಕೋಟಿ ಕಮಿಶನ್‌ ಗಳಿಸುತ್ತಿದ್ದರು. ಈ ವ್ಯವಸ್ಥೆಯನ್ನು ಕಾಪಿಡಲೆಂದೇ ರಾಜಕಾರಣಕ್ಕೆ ಬಂದವರು, ಅದರ ಬುಡಕ್ಕೆ ಪೆಟ್ಟುಬಿದ್ದಾಗ ಸಹಿಸಿಕೊಂಡಾರೋ? ಖಂಡಿತಾ ಇಲ್ಲ. ಪಂಜಾಬಿನ ರೈತರನ್ನು ಕೇಂದ್ರ ಸರಕಾರದ ವಿರುದ್ದ ಎತ್ತಿ ಕಟ್ಟಿದರು. ಇವರ ಜೊತೆಗೆ ಮೋದಿಯಿಂದ ನೊಂದ, ಮೋದಿಯ ಕಾರಣಕ್ಕೆ ತಮ್ಮ ಅಸ್ತಿತ್ವ ಕಳೆದಕೊಳ್ಳುತ್ತಿರುವ ಅಷ್ಟೂ ಸಂಘಟನೆಗಳು, ವ್ಯಕ್ತಿಗಳು ಒಟ್ಟಿಗೆ ಸೇರಿ ರೈತರನ್ನು ಮುಂದೆ ಬಿಟ್ಟು ವ್ಯವಸ್ಥಿತ ಪ್ರತಿಭಟನೆಗೆ ಮುಂದಾದರು. ಇವರ ಉದ್ದೇಶ ಇದ್ದದ್ದು ಇಷ್ಟೆ ಮೋದಿಯವರಿಗೆ ನರ ಹಂತಕ ಎಂಬ ಹಣೆಪಟ್ಟಿ ಕಟ್ಟಬೇಕು, ಮೋದಿಯನ್ನು ರೈತ ವಿರೋಧಿ, ರೈತ ಹಂತಕ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕು. ಮೋದಿಯನ್ನು ಈ ವ್ಯೂಹದಲ್ಲಿ ಕೆಡವಬೇಕು ಎನ್ನುವ ಕಾರಣಕ್ಕೆ ರೈತ ಹೋರಾಟದ ಹೆಸರಿನಲ್ಲಿ ಆಡಬಾರದ ಆಟಗಳೆನ್ನಲ್ಲಾ ಆಡಿದರು. ಇಲ್ಲದೇ ಹೋದರೆ ಪಂಜಾಬಿನಲ್ಲಿ ಕೃಷಿ ಮಸೂದೆಯ ವಿರುದ್ಧ ಹೋರಾಟ ಮಾಡುತ್ತಿದ್ದ ರೈತರು ರಾಜ್ಯಾದ್ಯಂತ ಜಿಯೋ ಕಂಪನಿಯ ಮೊಬೈಲ್‌ ಟವರ್‌ ಕೆಡೆಯುವ ಆವಶ್ಯಕತೆ ಏನಿತ್ತು? ಈ ರೈತ ಮಸೂದೆಯ ಹೋರಾಟಕ್ಕೂ ಜೀಯೋ ಕಂಪನಿಯ ಮೊಬೈಲ್‌ ಟವರಿಗೂ ಏನು ಸಂಬಂಧ? ಇವರು 1500 ಮೋಬೈಲ್ ಟವರ್‌ಗಳನ್ನು ದ್ವಂಸಮಾಡಿದರು. ಜನವರಿ 26 2021ರಂದು ದೆಹಲಿಯ ಕೆಂಪುಕೋಟೆಗೆ ನುಗ್ಗಿ ಅಲ್ಲಿ ಭಾರತದ ತ್ರಿವರ್ಣ ಬದಲು ಬೇರೆ ದ್ವಜ ಹಾರಿಸಿದರು. ಈ ಗಲಾಟೆಯಲ್ಲಿ ರೈತರು ತಮ್ಮ ಟ್ರಾಕ್ಟರ್ ಗಳಿಗೆ ಆರ್ಮರ್‌ ಪ್ಲೇಟ್‌ ಹಾಕಿಸಿಕೊಂಡು ಅದನ್ನು ಯೋದ್ಧ ಟ್ಯಾಂಕುಗಳಂತೆ ದೆಹಲಿ ಬೀದಿಬೀದಿಗಳಲ್ಲಿ ಓಡಿಸಿ ದಾಂಧಲೆ ಮಾಡಿದರು. ಈ ಗಲಾಟೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಪೋಲೀಸರಿಗೆ ಗಾಯವಾದವು, ಕೋವಿಡ್‌ ಸಮಯದಲ್ಲೂ ರೋಗ ಸಂಕ್ರಮಣ ಆಗಬೇಕು ಎಂಬ ದುರದ್ದೇಶದಿಂದಲೇ ಲಸಿಕೆ ಹಾಕಿಸಲು ಬಿಡಲಿಲ್ಲ, ಜೊತೆಗೆ ಲಸಿಕೆಯ ಬಗ್ಗೆ ಅಪಪ್ರಚಾರವನ್ನೂ ಮಾಡಿದರು. ಸಿಂಘೂ ಗಡಿ ಪ್ರದೇಶದಲ್ಲಿ ವಾಸವಿದ್ದ ಹಳ್ಳಿಯ ಜನರು ಇವರ ಮೇಲೆ ಅತ್ಯಾಚಾರ ದರೋಡೆಯಂತಹ ಗಂಬೀರ ಆರೋಪ ಮಾಡಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬಿನ ಸಿಕ್ಖರೇ ಹೆಚ್ಚಿದ್ದ ಪ್ರತಿಭಟನೆಯಲ್ಲಿ ಖಲಿಸ್ಥಾನಿಯ ಉಗ್ರರೂ ಸೇರಿಕೊಂಡರು. ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ತೆಗೆದು ಮತೀಯ ದ್ವಜ ಹಾರಿಸಿದ ದೀಪ್‌ ಸಿದ್ದುವನ್ನು ಬಂಧಿಸಿದ ಪೋಲಿಸರಿಗೆ, ಈತನಿಗೆ ಖಲಿಸ್ಥಾನಿ ಉಗ್ರ ಸಂಘಟನೆಯ ಭಾಗಾವಗಿರುವ SFJ (Sikhs for Justice) ಎಂಬ ಗುಂಪಿನ ನಡುವೆ ಸಂಪರ್ಕ ಇರುವುದು ತಿಳಿಯಿತು. ಕಳೆದ ಒಂದು ವರ್ಷದಿಂದ ಭಾರತ ಪಾಕಿಸ್ಥಾನ ಗಡಿಯಲ್ಲಿ ಅದರಲ್ಲೂ ಪಂಜಾಬಿನ ಗಡಿ ಪ್ರದೇಶದಲ್ಲಿ ಪಾಕಿಸ್ಥಾನದಿಂದ ಡ್ರೋನ್‌ಗಳು ದೇಶದ ಗಡಿ ಪ್ರವೇಶಿಸಿ ಅದರ ಮುಖಾಂತರ ಶಸ್ತ್ರಾಸ್ತ್ರ, ಡ್ರಗ್‌ಗಳನ್ನು ರವಾನಿಸುವವ ಕೆಲಸ ಹೆಚ್ಚಾಗತೊಡಗಿತು. ಎಲ್ಲಿಯ ತನಕ ಪಂಜಾಬಿನ ಆಡಳಿತದ ಚುಕ್ಕಾಣಿ ಕ್ಯಾಪ್ಟನ್‌ ಅಮರಿಂದರ್ ಅವರ ಬಳಿ ಇತ್ತೋ ಅವರು ರೈತ ಹೋರಾಟ ಮತ್ತು ದೇಶದ ಭದ್ರತೆಯ ನಡುವೆ ಎಲ್ಲೂ ಹೊಂದಾಣಿಕೆಮಾಡಿಕೊಳ್ಳದೆ ಒಂದು ಹಂತದ ತನಕವಷ್ಟೇ ಈ ರೈತ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದರು.

ಅಫ್ಘಾನಿಸ್ಥಾದಲ್ಲಿ ತಾಲಿಬಾನಿನ ಆಡಳಿತ ಪ್ರಾರಂಭವಾದ ಮೇಲಂತೂ ಭಾರತದ ಗಡಿಯೊಳಗೆ ದ್ರೋಣ್‌ ಮುಖಾಂತರ ಮಾದಕ ವಸ್ತುಗಳನ್ನು ಕಳಿಸುವ ಪ್ರಮಾಣ ಇನ್ನೂ ಹೆಚ್ಚಾಯಿತು. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಇರುವ ತನಕ ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಸಿಗುತ್ತಿದ್ದ ಗುಪ್ತಚರ ಮಾಹಿತಿ ಎಲ್ಲವೂ ಅವರು ಕೆಂದ್ರದ ಜೊತೆ ಹಂಚಿಕೊಳ್ಳುತ್ತಿದ್ದರು. ಯಾವಾಗ ಅವರು ರಾಜಿನಾಮೆ ಕೊಟ್ಟು ಹೊರೆನೆಡದು ಚರಣ್ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದರೋ, ಎಲ್ಲವೂ ಬದಲಾಯಿತು. ಗಡಿಯಾಚೆ ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ಥಾನ ಯುದ್ಧದ ತಯಾರಿ ಹೆಚ್ಚಿಸುತ್ತಲೆ ಇದ್ದವು. ಗಡಿಯೊಳಗೆ ಪಾಕಿಸ್ಥಾನ ಡ್ರೋಣ್‌ ಮುಖಾಂತರ ವಿಧ್ವಂಸಕ ಚಟುವಟಿಕೆ ನಡೆಸುವುದು ಹೆಚ್ಚಾಯಿತು. ಇವುಗಳ ತೀವ್ರತೆ ಮನಗೊಂಡ ಕೇಂದ್ರ ಸರಕಾರ ಗುಜರಾತಿನಿಂದ ಬಂಗಾಳದ ತನಕ ದೇಶದ ಅಂತಾರಾಷ್ಟ್ರೀಯ ಗಡಿಯಿಂದ ೫೦ ಕಿಮಿ ಒಳಗಿನ ತನಕ ಯಾವುದೇ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೂ ಅದನ್ನು ಅಲ್ಲಿಯ ಸ್ಥಳಿಯ ಪೊಲೀಸರ ಬದಲು ಗಡಿ ನಿಯಂತ್ರಣ ಪಡೆಯ ಅಧಿಕಾರಿಗಳು ನಿಭಾಯಿಸಬೇಕು ಎಂಬ ಆದೇಶ ಹೊರಡಿಸಿತು. ಇದನ್ನು ಪಂಜಾಬಿನ ಚನ್ನಿ ಸರಕಾರ ಸದನದಲ್ಲಿ ಒಂದು ನಿಲುವಳಿ ಜಾರಿಗೆ ತಂದು ವಿರೋಧಿಸಿತು. ಖಲಿಸ್ಥಾನಿ ಉಗ್ರ ಸಂಘಟನೆಯನ್ನು ಒಬ್ಬಂಟಿಯಾಗಿ ಬಲಪ್ರಯೋಗ ಮುಖಾಂತರ ನಿಭಾಯಿಸಬಹುದು. ಆದರೆ ಅದು ಯಾವಾಗ ರೈತ ಹೋರಾಟದ ಮುಖವಾಡ ಹಾಕುತ್ತದೆಯೋ ಅದನ್ನು ಬಲಪ್ರಯೋಗದ ಮುಖಾಂತರ ಹತ್ತಿಕ್ಕುವುದು ಕಷ್ಟವಾಗುತ್ತದೆ. ಇದರ ಜೊತೆಗೆ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಇಂತಹಾ ಹೋರಾಟಗಳಿಗೆ ಬೆಂಬಲ ಕೊಡಲು ಪ್ರಾರಂಭ ಮಾಡಿತು. ಕೆಲವೊಮ್ಮೆ ನ್ಯಾಯಾಲಯಗಳು ತೆಗೆದುಕೊಳ್ಳುವ ನಿಲುವುಗಳು ಭಾರತದ ಪ್ರಭುತ್ವದ ಬಗ್ಗೆ ಇರುವ ಬದ್ಧತೆಯನ್ನೇ ಪ್ರಶ್ನೆ ಮಾಡುವಂತೆ ಇರುತ್ತದೆ. ಚೀನಾ ಉತ್ತರದ್ ಖಂಡ್‌ ರಾಜ್ಯದ ಗಡಿಭಾಗದಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತದ ಸೈನ್ಯ ಕೂಡಾ ತನ್ನ ಸೈನ್ಯ ಜಮಾವಣೆ ಜೊತೆಗೆ ಯುದ್ದೋಪಕರಣಗಳನ್ನು ಸಾಗಿಸಲು ಅಗಲವಾದ ರಸ್ತೆ ಮಾಡಬೇಕಿತ್ತು.

ಸರಕಾರ ಈ ಕೆಲಸವನ್ನು ಕೈಗೆತ್ತಿಕೊಂಡಾಗ Citizen for GreenDoon ಎನ್ನುವ NGO ಒಂದು ಅಲ್ಲಿಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಹಾಕಿ ರಸ್ತೆ ಅಗಲೀಕರಣ, ಹಿಮಾಲಯದ ಪರಿಸರ ನಾಶಕ್ಕೆ ಎಡೆಮಾಡಿಕೊಡುತ್ತದೆ ಎಂದರು. ನ್ಯಾಯಾಲಯ ಈ ಅರ್ಜಿಯನ್ನು ಪರಿಗಣಿಸಿ ವಿಚಾರಣೆ ಪ್ರಾರಂಭಿಸಿ ದೇಶದ ಭದ್ರತೆಗೆ ಸಂಭಂದ ಪಟ್ಟ ಪ್ರಮುಖ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಸಲ್ಲಿಸಿದ ಅಫಿಡವಿಟ್ಟನಲ್ಲಿ ಅಲ್ಲಿ ರಸ್ತೆಗಳು ಸುಮಾರು ೫ ಮೀ ಅಗಲವಿದ್ದು ಅದರಲ್ಲಿ ಸೈನ್ಯಕ್ಕೆ ಅತಿ ಭಾರಿ ವಾಹನಗಳನ್ನ ಬ್ರಹ್ಮೋಸ್‌ ಕ್ಷಿಪಣಿ ವಾಹಕಗಳನ್ನು ಸಾಗಿಸಲು ಆಗುವುದಿಲ್ಲ, ಆ ಕಾರಣಕ್ಕೆ ರಸ್ತೆಯನ್ನು ಕನಿಷ್ಟ ೮ ಮೀ ಅಗಲ ಮಾಡಬೇಕು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿಗಳು “ದೇಶದ ಭದ್ರತೆ ಅಗತ್ಯ. ಆದರೆ ಪ್ರಕೃತಿ ನಾಶ ಮಾಡಿ ದೇಶದ ಗಡಿ ಕಾಯಬೇಕಾ?” ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು. ನ್ಯಾಯಾಲಯಗಳು ದೇಶದ ಭದ್ರತೆಯ ವಿಷಯದಲ್ಲೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದಾಗ ಇವುಗಳ ಮೇಲೆ ಹೇಗೆ ವಿಶ್ವಾಸವಿಟ್ಟು ದೇಶ ನಡೆಸಬೇಕು? ಇಂತಹಾ ನ್ಯಾಯಾಲಯಗಳು, ರೈತರ ಮುಖವಾಡ ಹಾಕಿದ ಖಲಿಸ್ಥಾನಿ ಉಗ್ರರು, ಇಂತಹ ಉಗ್ರರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವ ಪಂಜಾಬಿನ ಚನ್ನಿ ಸರಕಾರ ಇವೆಲ್ಲದರ ಲಾಭ ಪಡೆದು ಭಾರತದೊಳಗೆ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಟೂಲ್‌ ಕಿಟ್‌ ಗ್ಯಾಂಗ್‌, ಜೊತೆಗೆ ಭಾರತದ ಗಡಿಯಾಚಗೆ ಯುದ್ದ ದಾಳಿ ಮಾಡಲು ಕಾದು ಕೂತಿರುವ ಪಾಕಿಸ್ಥಾನ ಮತ್ತು ಚೀನಾ.

ಈ ಇಷ್ಟು ಸಮಸ್ಯೆಗಳನ್ನು ಪರಿಗಣಿಸಿ ಮೋದಿಯವರು ನಾನು ರೈತರಿಗೋಸ್ಕರ ಕಾಯಿದೆ ಜಾರಿಗೆ ತಂದೆ, ಈಗ ದೇಶಕ್ಕೋಸ್ಕರ ಹಿಂಪಡೆಯುತ್ತಿದ್ದೇವೆ ಅಂದಿದ್ದು ಈ ಕಾರಣಕ್ಕೆ. ನೇರವಾಗಿ ದಾಳಿಮಾಡುವ ಶತ್ರು ದೇಶಗಳನ್ನು ಮಣಿಸಬಹುದು ಆದರೆ ಆಂತರಿಕ ಶತ್ರುಗಳ ಜೊತೆ ಕಷ್ಟ. ಈ ಆಂತರಿಕ ಶತ್ರುಗಳ ದುಷ್ಟಕೂಟಗಳು ಒಟ್ಟಾಗಿರುವ ಕಾರಣ ರೈತ ಮಸೂದೆ, ರೈತರು ಅನ್ನು ಕಾರಣಕ್ಕೆ ದೇಶದ ಜನತೆ ಕೂಡ ಭಾವನಾತ್ಮಕವಾಗಿ ಅವರ ಜೊತೆ ಕೊಂಚ ವಾಲಿದ್ದಾರೆ. ಭಾರತದ ಪ್ರಥಮ ಸೇನಾ ಮುಖ್ಯಸ್ಥ ( CDS) ಜನರಲ್‌ ಬಿಪಿನ ರಾವತ್‌ ಹೇಳಿದ 2.5 ಫ್ರಂಟ್‌ ಯುದ್ದದ್ದಲ್ಲಿ .5 ಫ್ರಂಟ್‌ ಇದೇ ದೇಶದೊಳಗಿರುವ ಹಿತ ಶತ್ರುಗಳು. ಹಾಗಾಗಿ ಎಲ್ಲದಕ್ಕೂ ಮೂಲವಾದ ರೈತ ಕಾಯಿದೆಯನ್ನೇ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಮಂಗಳ ಹಾಡಿದಂತೆ ಎಂದು ಮನಗೊಂಡ ಸರಕಾರ ಈ ರೈತ ಕಾಯಿದೆಯನ್ನುಹಿಂಪಡೆಯಿತು.

ಈಗ ಮೋದಿ ತನ್ನವರಿಂದಲೇ ಟೀಕಾ ಪ್ರಹಾರಕ್ಕೆ ಗುರಿಯಾದರು. ಮೋದಿ ಹೀಗೆ ಮಾಡಬಾರದಿತ್ತು, ಮೋದಿ ಸೋತರು. ಸುಗ್ರೀವಾಜ್ಞೆಯ ಮುಖಾಂತರ ಜಾರಿಗೆ ತಂದ ಕಾಯಿದೆ, ರೈತರಿಗೆ ಇಷ್ಟು ಅನುಕೂಲ ಮಾಡಿಕೊಡುವ ಕಾಯಿದೆ ಮೋದಿ ಏಕಾಏಕಿ ಹಿಂತೆಗೆದುಕೊಂಡದ್ದು ಸರಿಯಲ್ಲ. ಇದನ್ನು ಜನ ಮೋದಿ ಸರಕಾರದ ದುರ್ಭಲತೆ ಎಂದು ಭಾವಿಸುತ್ತಾರೆ. ಇವತ್ತು ರೈತ ಮಸೂದೆಗೆ ಬಗ್ಗಿದರೆ ನಾಳೆ CAA ಬಗ್ಗೆ ಗಲಾಟೆ ಮಾಡುತ್ತಾರೆ, ತ್ರಿವಳಿ ತಲಾಕ್‌ ಬಗ್ಗೆ ಗಲಾಟೆ ಮಾಡುತ್ತಾರೆ. ಕಾಶ್ಮೀರದ ಕುರಿತು ಧರಣಿ ಕೂರುತ್ತಾರೆ. ನೀವೇ ಎದೆ ತಟ್ಟಿ ತೆಗೆದುಕೊಂಡ ನಿರ್ಣಯ ಈಗ ನೀವೇ ಹಿಂಪಡೆದುದು ದುರ್ಬಲತೆಯ ಲಕ್ಷಣ. ಯುದ್ಧರಂಗದಿಂದ ಪಲಾಯನ ಮಾಡಿದರು ಎಂಬಿತ್ಯಾದಿ ಟೀಕೆಗಳು ಕಳೆದ ಹಲವು ದಿನಗಳಿಂದ ಕೇಳುತ್ತಲೇ ಇದ್ದೇವೆ. ಹಾಗಿದ್ದರೆ ಇವರು ಹೇಳುತ್ತಿರುವುದು ಸರಿಯಾ ಎಂಬ ಪ್ರಶ್ನೆಗೆ ಒಂದಷ್ಟು ಉತ್ತರಗಳೂ ಸಿಗಲಾರಂಭಿಸಿದವು. ಮೋದಿಯವರು ರೈತಮಸೂದೆ ಕಾಯಿದೆಯನ್ನು ವಾಪಾಸು ಮಾಡಿದಾಗ ಈ ರೈತ ಹೋರಾಟಗಾರರು ಕೊಂಚ ವಿಚಲಿತರಾದಂತೆ ಕಂಡರು. ನಾವು ಸಂಸತ್ತಿನಲ್ಲಿ ಕಾಯಿದೆ ವಾಪಾಸು ತೆಗೆಯದ ಹೊರತು ಹೋರಾಟ ಮುಗಿಸುವುದಿಲ್ಲ ಅಂದರು. ಅದೂ ಆಯಿತು. ನಂತರ ತಮ್ಮ ಉಳಿದ ಬೇಡಿಕೆಗೆಗಳನ್ನೂ ಈಡೇರಿಸಿದರೇ ಮಾತ್ರ ಹೋರಾಟದಿಂದ ವಾಪಾಸು ಹೋಗುವುದಾಗಿ ಹೇಳಿದಾಗ ಅಮಿತ ಶಾವರು ಮದ್ಯ ಪ್ರವೇಶಿಸಿ.

ನಕಲೀ ಹೋರಾಟಗಾರಾರ ಮಧ್ಯೆ ಇದ್ದ ಒಂದಷ್ಟು ಅಸಲೀ ಹೋರಾಟಗಾರರ ಮನ ವಲಿಸಿ ಪ್ರತಿಭಟನೆಯನ್ನು ನಿಲ್ಲಿಸುವಲ್ಲಿ ಸಫಲರಾದರು. ಇದರಿಂದ ವಿಚಲಿತರಾದ ನಕಲಿ ಹೋರಾಟಗಾರರೂ ತಮ್‌ ಹೋರಾಟದ ನಾಟಕ ಮುಂದುವರಿಸಲೂ ಆಗದೆ ಇತ್ತ ಅದನ್ನು ನಿಲ್ಲಿಸಲೂ ಆಗದೆ ಒದ್ದಾಡುತ್ತಿರುವುದು ಎಲ್ಲರಿಗೂ ತೋರುತ್ತಿದೆ. ಯಾವಾಗ ಈ ಹೋರಾಟ ರೈತ ಆಶಯಗಳನ್ನು ಬಿಟ್ಟು ಇನ್ನಾವುದೇ ದಿಕ್ಕಿಗೆ ಇವರ ಹೋರಾಟಗಳು ತಿರುಗಿದರೂ ದೇಶದ ಜನರ ಭಾವನೆ ಇವರ ವಿರುದ್ದವಾಗಿಯೇ ಇರುತ್ತದೆ. ಮತ್ತು ಅಂತಹ ಹೋರಾಟಗಳನ್ನು ಹತ್ತಿಕ್ಕುವುದು ಸರಕಾರಕ್ಕೆ ಕಷ್ಟದ ಕೆಲಸವೂ ಅಲ್ಲ. ಅದು ಈ ಸಂಘಟನೆಗಳಿಗೂ ಗೊತ್ತು. ಇನ್ನು ಮೋದಿಯವರು ಅವರದ್ದೇ ನಿರ್ಧಾರಗಳಿಂದ ಹಿಂದೆ ಸರಿದಿದ್ದು ಸರಿ ಅಲ್ಲ, ಒಬ್ಬ ಬಲಿಷ್ಟ ನಾಯಕನ ಲಕ್ಷಣ ಅಲ್ಲ, ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದರಿಂದ ಹಿಂದೆ ಸರಿಯಬಾರದು ಅನ್ನುವವರಿಗೆ ನಾನು ಹೇಳುವುದು ಇಷ್ಟೆ. ಮೋದಿಯ ಅಂತರಂಗಲ್ಲಿದ್ದ ಮಾಧವ ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!

6
ಮೇ

ಕೊರೊನಾ ಯುದ್ಧ – ವಿಶ್ವಕ್ಕೆ ಭಾರತ ತೋರಿಸಿದ ಹಾದಿಯೇನು?

– ಬಿ.ಎಲ್. ಸಂತೋಷ್
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ,ಬಿಜೆಪಿ
ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ
ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಇಲ್ಲಿ ಹೆಚ್ಚುತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು 2, ಕ್ವಾರಂಟೈನ್, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ವೈದ್ಯಕೀಯ ಮತ್ತು ಔಷಧಗಳ ವ್ಯವಸ್ಥೆ ಹೀಗೆ ಹಲವಾರು ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ತೆಗೆದುಕೊಂಡ ಕಠಿಣ ಮತ್ತು ಸೂಕ್ತ ಕ್ರಮಗಳ ಬಗ್ಗೆ ವಿಶ್ವ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಮೇರೆಗೆ ಜನವರಿ ಮೊದಲ ವಾರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೋವಿಡ್ಗೆ ಸಂಬಂಧಿಸಿ ಎಲ್ಲಾ ಮುಖ್ಯ ಕಾರ್ಯದರ್ಶಿಗಳ ಪ್ರಥಮ ಸಭೆ ಜರುಗಿತು. ಜ.17ರಿಂದಲೇ ಚೀನಾದಿಂದ ಭಾರತಕ್ಕೆ ಆಗಮಿಸುವವರ ಆರೋಗ್ಯ ತಪಾಸಣೆ ಪ್ರಾರಂಭಿಸಲಾಯಿತು. ಶಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು. ಜನವರಿ ಕೊನೆಯಲ್ಲಿ ಮತ್ತೆ ಪ್ರಧಾನಿ ಮುಖ್ಯ ಕಾರ್ಯದರ್ಶಿಗಳ ಪುನರ್ ಪರಿಶೀಲನಾ ಸಭೆ ನಡೆಸಿ, N95 ಮಾಸ್ಕ್ ಮತ್ತು PPE ಕಿಟ್ಗಳ ರಫ್ತು ನಿಷೇಧಿಸಿದರು.
ಜ.30ರಂದು ಭಾರತದಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾದ ವೇಳೆಗೆ ಕೊರೊನಾ ಪರೀಕ್ಷೆಗೆ 6 ಲ್ಯಾಬ್ ಮತ್ತು 6 ಕ್ವಾರಂಟ್ವೆನ್ಗಳು ಕಾರ್ಯ ನಿರ್ವಹಿಸುತ್ತಿದ್ದವು. ಫೆಬ್ರವರಿ ಪ್ರಾರಂಭದಿಂದಲೇ ಭಾರತದಿಂದ ಚೀನಾ ಪ್ರವಾಸ ನಿಷೇಧಿಸಲಾಯಿತು. ನಂತರದ ದಿನಗಳಲ್ಲಿ ಸಿಂಗಾಪುರ, ದ.ಕೊರಿಯಾ ಮತ್ತು ಇಟಲಿಗಳಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಆದೇಶ ಹೊರಡಿಸಲಾಯಿತು. ಫೆಬ್ರವರಿ 2ನೇ ವಾರದಲ್ಲಿ ಕೇವಲ 3 ಪಾಸಿಟಿವ್ ಪ್ರಕರಣ ಕಂಡುಬಂದಿದ್ದರೂ ಮುಂಜಾಗ್ರತಾ ಕ್ರಮವಾಗಿ 1.39 ಕೋಟಿ ಜನರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು ಮತ್ತು 7000 ಜನರನ್ನು ಗುರುತಿಸಿ ನಿಗಾ ಇಡಲಾಗಿತ್ತು. ಮಾ.3ರ ವರೆಗೆ ಭಾರತದಲ್ಲಿ ಒಟ್ಟು 6 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ವಿದೇಶದಿಂದ ಆಗಮಿಸುವ ಎಲ್ಲರ ವೈದ್ಯಕೀಯ ಪರೀಕ್ಷೆ ಮಾಡುವ ಕ್ರಮ ಕೈಗೊಳ್ಳಲಾಯಿತು. ಶಂಕಿತರನ್ನು 14 ದಿನಗಳ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಯಿತು. ಪ್ರಧಾನಿ ಹೋಳಿ ಆಚರಣೆ ರದ್ದುಗೊಳಿಸಿದರು. ಮಾ.15ರ ವರೆಗೆ ಭಾರತದಲ್ಲಿ ಕೋವಿಡ್ ಪರೀಕ್ಷೆಗೆ 52 ಲ್ಯಾಬ್ ಸಿದ್ಧಪಡಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದವು. ಸಾರ್ವಜನಿಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಹೀರಾತು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಎಲ್ಲಾ ಪ್ರವಾಸಿ ತಾಣ ವೀಕ್ಷಣೆ ನಿರ್ಬಂಧಿಸಲಾಯಿತು. ವಿದೇಶಗಳಲ್ಲಿದ್ದ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಾಯಿತು. ಸಾರ್ಕ್ ಒಕ್ಕೂಟ ಸಭೆ ಆಯೋಜಿಸಿ, ಪ್ರಧಾನಿ ಮೋದಿ 15 ಸಾವಿರ ಕೋಟಿ ಅನುದಾನ ಘೋಷಿಸಿದರು. ಜಿ-20 ದೇಶಗಳ ಸಭೆ ಕರೆದು ಚರ್ಚಿಸಿದರು.
ಮಾ.19ರ ವರೆಗೆ ಭಾರತದಲ್ಲಿ 200 ಪಾಸಿಟಿವ್ ಪ್ರಕರಣ ದಾಖಲಾಯಿತು. ಮಾ.19ರಂದು ಎಕಾನಾಮಿಕ್ ಟಾಸ್ಕ್ ಫೋರ್ಸ್ ರಚಿಸಿದ್ದಷ್ಟೇ ಅಲ್ಲದೆ ಮಾಧ್ಯಮಗಳ ಮೂಲಕ ಪ್ರಧಾನಿ ಮಾ.22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದರು. ಅದಕ್ಕೆ ವ್ಯಾಪಕ ಬೆಂಬಲ ದೇಶದ ಜನರಿಂದ ವ್ಯಕ್ತವಾಯಿತು. ಮಾ.22ರಿಂದ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಳಿಸಲಾಯಿತು. ಮಾರ್ಚ್ 3ನೇ ವಾರದಲ್ಲಿ ಕೊರೊನಾ ವ್ಯಾಪಕತೆ ಹೆಚ್ಚಾಗುತ್ತಿದ್ದಂತೆ ಲಾಕ್ಡೌನ್ ಘೋಷಿಸಿ ಹರಡುವಿಕೆಯ ಸರಪಳಿಗೆ ತಡೆ ಹಾಕಲಾಯಿತು. ನಂತರದ ದಿನಗಳಲ್ಲಿ ಲಾಕ್ಡೌನ್-1, ಲಾಕ್ಡೌನ್-2 ನಿರ್ಧಾರಗಳನ್ನು ಘೋಷಿಸಿದಾಗಲೂ ಸಮಸ್ತ ಭಾರತೀಯರು ಲಾಕ್ಡೌನ್ಗೆ ಬೆಂಬಲ ನೀಡಿದರು; ಸಂಯಮ ಮತ್ತು ಶಿಸ್ತು ಕಾಪಾಡಿಕೊಂಡು ಬಂದರು. ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕ, ಬ್ರೆಜಿಲ್, ಸ್ಪೇನ್, ಇಟಲಿ, ಲಂಡನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಮೃತರ ಸಂಖ್ಯೆ ಐದಂಕಿ ದಾಟಿವೆ.
ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳಾಗುತ್ತಿವೆ. ದಿಲ್ಲಿ ಐಐಟಿ ಸೇರಿದಂತೆ ವಿವಿಧ ಸಂಶೋಧನಾ ಕೇಂದ್ರಗಳು ಕೊರೊನಾ ಪರೀಕ್ಷಾ ಕಿಟ್ಗಳ ತಯಾರಿಕೆಗೆ ಮುಂದಾಗಿವೆ. ಮೇ ತಿಂಗಳಲ್ಲಿ Rapid ಪರೀಕ್ಷೆಗೆ ಅವಶ್ಯವಿರುವ ಲಕ್ಷಾಂತರ ಕಿಟ್ಗಳು ದೊರೆಯುತ್ತವೆ. ಫೆಬ್ರವರಿಯಲ್ಲಿ ಪರೀಕ್ಷೆಗೆ ಕೇವಲ 3 ಲ್ಯಾಬ್ ಗಳಿದ್ದವು; ಇಂದು 372ಕ್ಕೂ ಹೆಚ್ಚು ಲ್ಯಾಬ್ ಗಳನ್ನು ಸಿದ್ಧಪಡಿಸಲಾಗಿದೆ. ಮೇ ಅಂತ್ಯದವರೆಗೆ 750 ಲ್ಯಾಬ್ ಸ್ಥಾಪನೆಯ ಗುರಿ ಹೊಂದಲಾಗಿದೆ. ದೇಶದಲ್ಲಿ 19 ಸಾವಿರ ವೆಂಟಿಲೇಟರ್ಗಳನ್ನು ಕೋವಿಡ್ಗೆ ಮೀಸಲಿರಿಸಿದೆ. ಮೇ ತಿಂಗಳ ಅಂತ್ಯದವರೆಗೆ ಇನ್ನೂ 30 ಸಾವಿರ ದೊರೆಯಲಿವೆ. 22 ಲಕ್ಷ N95 ಮಾಸ್ಕ್ ಗಳನ್ನು ಒದಗಿಸಲಾಗಿದೆ. ಭಾರತ ಬಡರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಒದಗಿಸಿ ಸಂಜೀವಿನಿಯಾಗಿದೆ. ಭಾರತದ ಬಯೊಟೆಕ್ನಾಲಜಿ ವಿಭಾಗವು ಕೋವಿಡ್ ಲಸಿಕೆ ಸಂಶೋಧನೆಗಾಗಿ ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್, ಸೆರ್ಮನ್ ಇನ್ಸ್ಟಿಟ್ಯೂಟ್ ಮತ್ತು ಭಾರತ ಲ್ಯಾಬ್ ಎಂಬ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಕೋವಿಡ್ ವೈರಸ್ನ ಮೂರು ಸರಣಿಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಆಯುಷ್ ವಿಭಾಗದ ಮೂಲಕ ಮಾನವನ ರೋಗನಿರೋಧಕ ಶಕ್ತಿ ವೃದ್ಧಿಗೆ ಔಷಧೋಪಚಾರಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬಾಟ್ಗಳನ್ನು ಸೋಂಕಿತರಿಗೆ ಔಷಧ, ಆಹಾರ ನೀಡುವ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. N95 ಮಾಸ್ಕ್, ಗುಣಮಟ್ಟದ PPE ಕಿಟ್ಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಪಂಜಾಬ್ನಲ್ಲಿ ಈ ಬಾರಿ ಒಂದೂವರೆ ಪಟ್ಟು ಹೆಚ್ಚು ಗೋಧಿಯ ಇಳುವರಿ ಬಂದಿದ್ದು, ಭಾರತೀಯ ರೈಲ್ವೆ ಅದರ ಸಾಗಣೆಗಾಗಿ 84 ಬೋಗಿಗಳನ್ನು ಮೀಸಲಿಟ್ಟಿದೆ. ಗೂಡ್ಸ್ ರೈಲುಗಳು ಅವಶ್ಯಕ ವಸ್ತುಗಳ ಸಾಗಾಟ ಮಾಡುತ್ತಿವೆ. 70ಕ್ಕೂ ಹೆಚ್ಚು ಅನ್ನಪೂರ್ಣ ಗೂಡ್ಸ್ ರೈಲು ಪ್ರತಿನಿತ್ಯ ತಮ್ಮ ಮೂರುಪಟ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿವೆ. ಕ್ವಾರಂಟೈನ್ಗಾಗಿ ದೇಶದ ಬಹುತೇಕ ಕಡೆ ರೈಲ್ವೆ ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಸಿದ್ಧಪಡಿಸಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳು ದೇಶಕ್ಕೆ ಶೇ.30ರಷ್ಟು ಜಿಡಿಪಿ ಒದಗಿಸುವ ಮಾಸಗಳಾಗಿವೆ. ಈ ತಿಂಗಳಲ್ಲಿ ದೇಶದ ಬಹುತೇಕ ಧಾರ್ಮಿಕ ಹಬ್ಬಗಳು, ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು ನಡೆಯುತ್ತವೆ. ಕೈಗಾರಿಕಾ ವಲಯಗಳಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತದೆ.
ಆದರೆ ಈ ತಿಂಗಳಲ್ಲಿ ಲಾಕ್ಡೌನ್ ಇರುವ ಕಾರಣ ದೇಶದ ಜಿಡಿಪಿ ಕುಸಿಯುವ ಸಾಧ್ಯತೆಯಿದೆ. ಮೂರು ಹಂತದಲ್ಲಿ ಕೇಂದ್ರ ಸರಕಾರ ಜನರ ನೆರವಿಗೆ ಅನೇಕ ಕ್ರಮ ತೆಗೆದುಕೊಂಡಿದೆ. ಗರೀಬ್ ಕಲ್ಯಾಣ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 20.02 ಕೋಟಿ ಮಹಿಳೆಯರ ಜನಧನ ಖಾತೆಗಳಿಗೆ ರೂ.500ರಂತೆ ಮೂರು ತಿಂಗಳು ಸಂದಾಯ ಮಾಡಲಿದ್ದಾರೆ. ಕಿಸಾನ್ ಸನ್ಮಾನ್ ನಿಧಿಯ ಮೊದಲ ಕಂತು ರೂ.2000 ಅನ್ನು 8 ಕೋಟಿ ರೈತರ ಖಾತೆಗೆ ಸಂದಾಯ ಮಾಡಲಾಗಿದೆ. 8 ಕೋಟಿ ಕುಟುಂಬಗಳಿಗೆ ಉಜ್ವಲ ಸಿಲಿಂಡರ್ ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. 2.8 ಕೋಟಿ ದಿವ್ಯಾಂಗ, ವಿಧವೆ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಹೆಚ್ಚುವರಿ ಒಂದು ಸಾವಿರ ರೂಪಾಯಿ ಮೂರು ತಿಂಗಳು ನೀಡಲಾಗುತ್ತಿದೆ. 2.17 ಕೋಟಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಿಂಗಳಿಗೆ 1500 ರೂ. ಸಹಾಯಧನ ನೀಡಲಾಗುತ್ತಿದೆ. ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ದಾದಿಯರಿಗೆ 50 ಲಕ್ಷ ಮೌಲ್ಯದ ವಿಮೆ ನೀಡಲಾಗುತ್ತಿದೆ. 15 ಸಾವಿರ ಕೋಟಿ ಅನುದಾನವನ್ನು ಪ್ರತಿ ರಾಜ್ಯಗಳಿಗೆ ನೀಡಲಾಗಿದ್ದು ಆರೋಗ್ಯ ಸೌಲಭ್ಯ ಬಳಕೆ ಮತ್ತು ಸುಧಾರಣೆಗೆ ಮಹತ್ವ ನೀಡಲು ಕೇಂದ್ರ ಸೂಚನೆ ನೀಡಿದೆ. ಐಟಿ ರಿಟರ್ನ್, ಜಿಎಸ್ಟಿ ಮತ್ತು ಇಎಂಐ ಕಂತು ತುಂಬುವುದಕ್ಕೆ ಮೂರು ತಿಂಗಳು ಅವಕಾಶ ಕಲ್ಪಿಸಲಾಗಿದೆ. ಆರ್ಬಿಐ ಕೂಡಾ ಲಘು ಮತ್ತು ಮಧ್ಯಮ ಉದ್ಯಮದಾರರಿಗೆ ಸಹಾಯಾರ್ಥ ಬಡ್ಡಿ ನೀಡಲು 50 ಸಾವಿರ ಕೋಟಿ ಹಣವನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ನೀಡಿದೆ. ಮ್ಯೂಚುವಲ್ ಫಂಡ್ನಲ್ಲಿ ಹಣ ಹೂಡಿಕೆಗೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಚೈತನ್ಯ ತುಂಬಲು ಆರ್ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲ ಅನುದಾನ ಮತ್ತು ಸಹಾಯ ಈ ವಿಷಮ ಪರಿಸ್ಥಿತಿಯಲ್ಲಿ ಕಡುಬಡವರ ಜೀವನೋಪಾಯಕ್ಕೆ ಮತ್ತು ಮುಂದಿನ ದಿನಗಳ ಅರ್ಥಿಕ ಚೈತ್ಯನಕ್ಕೆ ಅಲ್ಪ ಪ್ರಮಾಣದ ನೆರವು ಎಂದು ಹೇಳಬಹುದು.
ಈ ಲಾಕ್ಡೌನ್ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಂತರದ ದಿನಗಳಲ್ಲಿ ಜೀವನ ಕಟ್ಟಿಕೊಳ್ಳಲು ಅವಶ್ಯವಿರುವ ಸಂಗತಿಗಳಿಗೆ ಸಂದರ್ಭಕ್ಕೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಲಿದೆ. ಲಾಕ್ಡೌನ್ನ 45 ದಿನಗಳ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸನ್ನು ಭಾರತ ಕಂಡಿದೆ. ಜೀವನ ಕಟ್ಟಿಕೊಳ್ಳಲು ಮುಂದಿನ ಆರು ತಿಂಗಳು ಅತ್ಯಂತ ನಿರ್ಣಾಯಕ ಹೋರಾಟ ಎಲ್ಲರೂ ಮಾಡಬೇಕಿದೆ. ಸತತ ಹೋರಾಟದ ಫಲದಿಂದ ಮೂರು ವರ್ಷಗಳ ತರುವಾಯ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.
130 ಕೋಟಿ ಜನಸಂಖ್ಯೆ, 8.25 ಗ್ರಾಮಗಳು, ಪ್ರಜಾಪ್ರಭುತ್ವ, ಬಹುಪಕ್ಷ ಆಡಳಿತ ರಾಜಕೀಯ ವ್ಯವಸ್ಥೆ, ಅಧಿಕಾರ ವಿಕೇಂದ್ರಿಕರಣ, ವಿವಿಧ ರಾಜ್ಯಗಳಲ್ಲಿ 10ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಆಡಳಿತ. ಹೀಗೆಲ್ಲಾ ಇದ್ದರೂ, ಪಶ್ಚಿಮ ಬಂಗಾಳ ರಾಜ್ಯ ಹೊರತುಪಡಿಸಿ ಸಂಪೂರ್ಣ ಭಾರತ ‘ಒಂದು ದೇಶ ಒಂದು ಆಡಳಿತ ವ್ಯವಸ್ಥೆ’ ಎಂಬ ನೀತಿಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿಸಾಗುತ್ತಿದೆ. ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಹೋಗಲು ಮುಂದಾಗಿದ್ದರೂ, ಸರಕಾರದ ವಿರುದ್ಧ ಯಾವುದೇ ದೂರು ಹೊಂದಿರಲಿಲ್ಲ. ಇದು ನಮ್ಮ ಪ್ರಜೆಗಳ ಸಂಯಮ ಮತ್ತು ಶಿಸ್ತಿನ ಜೊತೆಗೆ ಪ್ರಧಾನಿಗಳ ದಿಟ್ಟ ಆಡಳಿತ ಸೂತ್ರ ತೋರುತ್ತದೆ. ಎಲ್ಲ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಅಧಿಕಾರಿ ವರ್ಗ, ವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ ಇವೆಲ್ಲವೂ ಪರಸ್ಪರ ಸಹಕಾರದೊಂದಿಗೆ ಈ ವಿಪತ್ತಿನಲ್ಲಿ ಕಾರ್ಯ ನಿರ್ವಹಿಸಿರುವುದನ್ನು ಕಂಡರೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಡಗಿದ ಅದಮ್ಯ ಶಕ್ತಿಯ ಪರಿಚಯವಾಗುತ್ತದೆ.
ಭಾರತೀಯ ಜೀವನ ಪದ್ಧತಿ, ಕೈ ಜೋಡಿಸುವ ನಮಸ್ಕಾರ ಆಚರಣೆ, ಯೋಗ ಮತ್ತು ಆಯುರ್ವೇದ ಮಹತ್ವ ಹೀಗೆ ಅನೇಕ ಸಂಗತಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ. ಕೊರೊನಾ ಸಂಕಟ ಅನೇಕ ರೀತಿಯ ಬದುಕಿನ ಪಾಠಗಳನ್ನು ಭಾರತ ಸರಕಾರಕ್ಕೆ ಮತ್ತು ಭಾರತೀಯರಿಗೆ ನೀಡಿದೆ. ಮೇಕೆ, ಹಸು ಮತ್ತು ಎಮ್ಮೆ ಹಾಲಿಗೆ ಅಲರ್ಜಿ ಹೊಂದಿರುವ ತನ್ನ ಮೂರೂವರೆ ವರ್ಷದ ಮಗುವಿಗೆ ಹಾಲು ಲಭ್ಯವಿಲ್ಲದಿರುವ ಬಗ್ಗೆ ಮಹಿಳೆಯೊಬ್ಬರು ಟ್ವೀಟ್‌ ಮಾಡಿದಾಗ, ಆ ಮಗುವಿಗೆ 20 ಲೀಟರ್‌ ಒಂಟೆ ಹಾಲನ್ನು ಕೇಂದ್ರ ಸರ್ಕಾರ ರೈಲಿನಲ್ಲಿ ಕಳುಹಿಸಿ ಕೊಡುತ್ತದೆ. ಸ್ವಾವಲಂಬನೆಯ ಮಹತ್ವ ತಿಳಿಸಿಕೊಟ್ಟಿದೆ. ಚೀನಾ ಜಗತ್ತಿನಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಪರಿಣಾಮ ಅನೇಕ ರಾಷ್ಟ್ರಗಳು ತಮ್ಮ ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳುವತ್ತ ಸರಕಾರ ಗಮನ ನೀಡಿದೆ. ಭಾರತೀಯರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿದೆ. ಒಟ್ಟಾರೆ ಈಗಿನ ಸನ್ನಿವೇಶ ಇಡೀ ವಿಶ್ವ ಭಾರತದತ್ತ ಹೊರಳಿ ನೋಡಲು, ಭಾರತ ತನ್ನ ಸಿಂಹಾವಲೋಕನ ಮಾಡಿಕೊಳ್ಳಲು ಕಾರಣವಾಗಿದೆ ಎಂದರೆ ತಪ್ಪಲ್ಲ.
14
ಜೂನ್

ಕೆಲವು ವ್ಯಕ್ತಿತ್ವಗಳು ಅರ್ಥವಾಗಬಾರದು, ಅಮಿತ್ ಶಾರಂತೆ!

– ಸಂತೋಷ್ ತಮ್ಮಯ್ಯ

೨೦೧೫ರ ಅಕ್ಟೋಬರಿನಲ್ಲಿ ದೆಹಲಿಯ ಶ್ಯಾಮ್‌ಪ್ರಸಾದ್ ಮುಖರ್ಜಿ ಅಧ್ಯಯನ ಕೇಂದ್ರ ಯುವ ಬರಹಗಾರರನ್ನು ಕರೆಸಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಆಯೋಜಿಸಿತ್ತು. ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ಬರಹಗಾರರು ದೆಹಲಿಯ ಪಾಲಿಕಾ ಭವನದಲ್ಲಿ ಕಿಕ್ಕಿರಿದು ತುಂಬಿದ್ದರು. ಎರಡು ದಿನ ಪೂರ್ತಿ ರಾಷ್ಟ್ರೀಯತೆ, ರಾಜಕೀಯ ಸಿದ್ಧಾಂತಗಳು, ರಾಷ್ಟ್ರೀಯತೆಯ ಸವಾಲುಗಳು ಮತ್ತು ಅಪಾಯಗಳ ಬಗೆಗಿನ ಗೋಷ್ಠಿಗಳು ನಡೆದವು. ಅನಿರ್ಬನ್ ಗಂಗೂಲಿ, ವಿವೇಕ್ ಅಗ್ನಿಹೋತ್ರಿ, ಆರೆಸ್ಸೆಸ್ಸಿನ ನಂದಕುಮಾರ್ ಮುಂತಾದ ಖ್ಯಾತ ಚಿಂತಕರ ಗೋಷ್ಠಿಗಳು ಜರುಗಿದವು. ಸಮಾರೋಪ ಸಮಾರಂಭಕ್ಕೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾರವರು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಲಾಯಿತು. ಅಲ್ಲಿಯವರೆಗೂ ವೈಚಾರಿಕತೆಯ ಗುಂಗಲ್ಲಿದ್ದ ಕೆಲ ಯುವ ಬರಹಗಾರರು ಸಣ್ಣಗೆ ಗೊಣಗಲಾರಂಭಿಸಿದರು. ಇಷ್ಟು ಹೊತ್ತು ಚಿಂತಕರಿಂದ ಉಪನ್ಯಾಸ ಮಾಡಿಸಿದ ಕೇಂದ್ರದವರು ಈಗ ರಾಜಕಾರಣಿಯನ್ನೇಕೆ ಕರೆಸಿದ್ದಾರೆ? ಅದೂ ರಾಜಕಾರಣ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ಅಮಿತ್ ಶಾರೇನು ಮಾತಾಡಬಲ್ಲರು? ಹೆಚ್ಚೆಂದರೆ ಜನಸಂಘದ ಒಂದೆರಡು ಕಥೆಗಳನ್ನು ಹೇಳಿ ಮುಗಿಸಬಲ್ಲರಷ್ಟೆ ಎಂದುಕೊಂಡರು. ಸಂಜೆಯಾಯಿತು. ಎಂದಿನಂತೆ ಮುಖ ಗಂಟಿಕ್ಕಿಕೊಂಡ ಅಮಿತ್ ಶಾ ವೇದಿಕೆಗೆ ಹತ್ತಿದರು. ಪೋಡಿಯಂ ಮುಂದೆ ನಿಂತರು.ಇದ್ದಕ್ಕಿದ್ದಂತೆ ಪಿಸುಗುಡುತ್ತಿದ್ದ ಪಾಲಿಕಾ ಭವನದ ಸಭಾಂಗಣ ಸೂಜಿ ಬಿದ್ದರೂ ಸದ್ದಾಗುವಷ್ಟು ಮೌನವಾಯಿತು, ಗಡಸು ಧ್ವನಿಗೆ ಸಭೆ ಸಮ್ಮೋಹನಕ್ಕೊಳಗಾಯಿತು. ಮುಂದಿನ ಒಂದೂವರೆ ಗಂಟೆ ಅಮಿತ್ ಶಾ ಅದೆಂಥಾ ವಾಗ್ಝರಿ ಹರಿಸಿದರೆಂದರೆ ತಿಲಕರು, ಸಾವರ್ಕರರು ಬಂದುಹೋದರು. ಗಾಂಧಿ ಚಳವಳಿ ಮತ್ತು ಸ್ವಾತಂತ್ರ್ಯಪೂರ್ವದ ಕಾಂಗ್ರೆಸಿನ ವಿಶ್ಲೇಷಣೆಯಾಯಿತು. ಲೋಹಿಯಾ ವಾಕ್ಯಗಳ ಉಲ್ಲೇಖವಾಯಿತು. ಜೆಪಿ ನುಸುಳಿದರು, ಹಳೆಯ ಯುಎಸ್‌ಎಸ್‌ಆರ್‌ನ ಪ್ರಾರಬ್ಧಗಳ ಮಂಡನೆಯಾಯಿತು. ನೆಹರೂ ಯುಗದ ಅದ್ವಾನಗಳು ಎಳೆಎಳೆಯಾಗಿ ಬಿಚ್ಚಲ್ಪಟ್ಟವು. ಮುಖರ್ಜಿ, ಉಪಾಧ್ಯಾಯರ ಆದರ್ಶಮಯ ಸಿದ್ಧಾಂತಗಳು ತೇಲಿಬಂದವು. ಅಟಲ್-ಅಧ್ವಾನಿಯವರ ರಾಜಕೀಯ ಬದ್ಧತೆಯವರೆಗೂ ಮಾತು ಸಾಗಿತು. ಕೆಲ ಚಿಂತಕರು ಘನಗಂಭೀರವಾಗಿ ತಲೆತೂಗುತಿದ್ದರೆ, ಇನ್ನು ಕೆಲವರು ಟಿಪ್ಪಣಿ ಮಾಡಿಕೊಳ್ಳತೊಡಗಿದರು! ಅಂದರೆ ಅಮಿತ್ ಶಾ ಸಂಶೋಧಕರಂತೆ, ಇವೆಲ್ಲಕ್ಕೂ ಪುರಾವೆ ಅಂಗೈಯಲ್ಲಿದೆ ಎನ್ನುವಂತೆ ಅಧಿಕಾರಯುತವಾಗಿ ಮಾತಾಡುತ್ತಿದ್ದರು. ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು, ಸಮಾಜವಾದವನ್ನು, ರಾಷ್ಟ್ರೀಯತೆಯ ಮಜಲುಗಳೆಲ್ಲವನ್ನೂ ಅರೆದು ಕುಡಿದಿದ್ದರು. ಅವರ ಅಂದಿನ ಮಾತುಗಳು ಸಭಿಕರಲ್ಲಿ ಎಂಥಾ ಗುಂಗು ಹಿಡಿಸಿತ್ತೆಂದರೆ ಭಾಷಣದ ನಂತರ ಆಯೋಜಕರು ಪ್ರಶ್ನೆಗಳಿಗೆ ಅವಕಾಶವಿದೆ ಎಂದು ಘೋಷಿಸಿದರು. ಆದರೆ ಯಾರಲ್ಲೂ ಪ್ರಶ್ನೆಗಳು ಉಳಿದಿರಲಿಲ್ಲ.

ಹಾಗೆ ನೊಡಿದರೆ ಅಮಿತ್ ಶಾ ಅಂದು ಹಾಗೆ ಕಂಡಿದ್ದು ನಮಗೆ ಮಾತ್ರವೇನೂ ಅಲ್ಲ, ಅವರು ಹಾಗೆ ಕಾಣುವುದು ಮೊದಲೂ ಆಗಿರಲಿಲ್ಲ!

ಮತ್ತಷ್ಟು ಓದು »

7
ಏಪ್ರಿಲ್

‘ನಿಧಿ’ಗಿಂತ ‘ದನಿ’ನೀಡುವ ಸಂಸದರು ಬೇಕು – ಸಂಸದರ ಕಾರ್ಯಕ್ಷೇತ್ರದ ಅರಿವೂ ಇರಬೇಕು!

– ತುರುವೇಕೆರೆ ಪ್ರಸಾದ್

ಉತ್ತರಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಮಾತನಾಡಿದರೆ ವಿವಾದವಾಗುತ್ತದೆ ಎಂದು ತಿಳಿದವರೇ ಹೆಚ್ಚು. ಹೆಗಡೆಯವರು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನ ಹಾಗೂ ಸಂಸದರ ಜವಾಬ್ಧಾರಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮಾತನಾಡಬಲ್ಲರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಅನಂತಕುಮಾರ ಹೆಗಡೆಯವರು ಸಂಸದರ ಜವಾಬ್ಧಾರಿಗಳ ಬಗ್ಗೆ ಮಾತಾಡಿರುವ ಒಂದು ಪುಟ್ಟ ವೀಡಿಯೋ ನೋಡಿದೆ. ಆ ಪುಟ್ಟ ವೀಡಿಯೋದಲ್ಲಿ ಹೆಗಡೆಯವರು ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಬಹಳ ಅದ್ಭುತವಾಗಿ ಮಾತನಾಡಿದ್ದಾರೆ. ಅಭಿವೃದ್ಧಿಯ ಅತ್ಯಂತ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಗಳಲ್ಲ, ಕಾಮಗಾರಿಗಳು ಕೇವಲ ಅಭಿವೃದ್ಧಿಯ ಒಂದು ಭಾಗವಷ್ಟೇ. ಸಮುದಾಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕು ವಿಧಗಳಿವೆ. ಮೂಲಭೂತ ಅಭಿವೃದ್ಧಿ, ಸಾಂಸ್ಕøತಿಕ ಅಭಿವೃದ್ಧಿ,ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ಅದಕ್ಕೆ ಅಂತ್ಯವಿಲ್ಲ. ಕಾಮಗಾರಿಗೆ ಮಾತ್ರ ಅಂತ್ಯವಿದೆ. ಜನಸಾಮಾನ್ಯರಿಗೆ ಮೂಲಭೂತ ಅಭಿವೃದ್ಧಿಯಷ್ಟೇ ಕಾಣುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅವರು ಹೆಚ್ಚು ಒತ್ತು ಕೊಡುವುದಿಲ್ಲ. ಸಮುದಾಯದ ಅಭಿವೃದ್ದಿಯ ಅಂತರಾಳ ಅಡಗಿರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ! ಇದರ ಒಂದು ಭಾಗ ಮಾತ್ರ ಮೂಲಭೂತ ಅಭಿವೃದ್ಧಿ. ಇದು ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ.ಕೇಂದ್ರ ಯಾವ ಮೂಲಭೂತ ಅಭಿವೃದ್ಧಿಗೆ ಒತ್ತು ಕೊಡಬೇಕು? ಒಂದು ಗ್ರಾಮೀಣ ಕಾಮಗಾರಿಗೆ ಗ್ರಾ.ಪಂ. ಜಿ.ಪಂ ಸದಸ್ಯರಷ್ಟೇ ಮಹತ್ವವನ್ನು ಸಂಸದರೂ ಕೊಡಬೇಕಾ?ಆ ಮಟ್ಟದಲ್ಲಿ ರಾಜಕಾರಣವನ್ನು ಒಬ್ಬ ಸಂಸದ ಮಾಡಬಾರದು.ಸಂಸದರ ಕಾರ್ಯವ್ಯಾಪ್ತಿಯ ಅರಿವೇ ಇಲ್ಲದೆ ಅತ್ಯಂತ ಕೆಳಹಂತಕ್ಕೆ ಇಳಿದು ರಾಜಕಾರಣ ಮಾಡುವುದು ಮತ್ತು ಹಾಗೆ ನಿರೀಕ್ಷಿಸುವುದು ದುರ್ದೈವ ಎನ್ನುತ್ತಾರೆ.

ಮತ್ತಷ್ಟು ಓದು »

31
ಮಾರ್ಚ್

ಮತದಾರರ ಮೋದಿ Vs ಬೆಂಗಳೂರು ಮಾಫಿಯಾ

– ರಾಕೇಶ್ ಶೆಟ್ಟಿ 

‘ನಾವು ಗೆದ್ದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಅಣ್ಣ. ಈ ಹಿಂದೆ ಯುಟಿ ಖಾದರ್ ಅಪ್ಪನ ಕಾಲದಲ್ಲೇ ಉಳ್ಳಾಲದಲ್ಲಿ ಬಿಜೆಪಿಯಿಂದ ಜಯರಾಮ ಶೆಟ್ಟರು ಗೆದ್ದಿದ್ದರು. ನಂತರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೋಪಿಸಿಕೊಂಡು ದಳಕ್ಕೆ ಹೋಗಿ ಸ್ಪರ್ಧಿಸಿ ವೋಟ್ ಡಿವೈಡ್ ಮಾಡಿದರು.ಹಾಗೆ ಕಾಂಗ್ರೆಸ್ಸಿನ ಯು.ಟಿ ಫರೀದ್ ಗೆದ್ದರು. ಉಳ್ಳಾಲ ನಮ್ಮ ಕೈ ಬಿಟ್ಟು ಹೋಯಿತು. ಅಲ್ಲಿಂದ ಇಲ್ಲಿನವರೆಗೆ ನಮಗೆ ಆ ಕ್ಷೇತ್ರವನ್ನು ಮತ್ತೆ ಗೆಲ್ಲಲಿಕ್ಕಾಗಿಲ್ಲ ನೋಡಿ’ ನನ್ನ ತಮ್ಮನಂತಹ ಮಿತ್ರ ರಾಜೇಶ್ ನರಿಂಗಾನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಮಾತು ನನಗೀಗ ನೆನಪಾಯ್ತು. ನೆನಪು ಮಾಡಿಸಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಳಬೇಗುದಿ.

ಬೆಂಗಳೂರು ದಕ್ಷಿಣದ ಬಗ್ಗೆ ಮಾತನಾಡುವ ಮೊದಲು, ರಾಜರಾಜೇಶ್ವರಿ ನಗರ,ಜಯನಗರದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಬೇಕು.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅತಿ ಪ್ರಮುಖ ನಾಯಕರು ಹಠಾತ್ ನಿಧನರಾಗುವ ಮೂಲಕ ಪಕ್ಷಕ್ಕೆ ನಷ್ಟವಾಗಿದೆ. ಆದರೆ ಈ ರೀತಿಯ ಹಠಾತ್ ಆಘಾತಗಳು ಈ ಪಕ್ಷದ ಆರಂಭದಿಂದಲೇ ಶುರುವಾಗಿದೆ. ಪಕ್ಷದ ಆಧಾರ ಸ್ತಂಭದಂತಿದ್ದ ಶ್ಯಾಂ ಪ್ರಸಾದ್ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕೊಲೆಗಳು ಮೊದಲನೇ ಆಘಾತಗಳು. ಅದರಿಂದ ಚೇತರಿಸಿಕೊಂಡೇ ಪಕ್ಷ ಇಲ್ಲಿವರೆಗೂ ಬಂದು ನಿಂತಿದೆ. ಪ್ರಮೋದ್ ಮಹಾಜನ್,ಗೋಪಿನಾಥ್ ಮುಂಡೆ,ಪರಿಕ್ಕರ್, ಅನಂತಕುಮಾರ್,ವಿಜಯಕುಮಾರ್ ಇವೆಲ್ಲ ಇತ್ತೀಚಿನ ಆಘಾತಗಳು.

ಮತ್ತಷ್ಟು ಓದು »

29
ಮಾರ್ಚ್

2019 : ನವಭಾರತ Vs ಬ್ರಿಟಿಷ್ ಇಂಡಿಯಾ ನಡುವಿನ ಚುನಾವಣೆ

– ರಾಕೇಶ್ ಶೆಟ್ಟಿ

೨೦೧೯ ಚುನಾವಣೆಯ ದಿನಾಂಕ ಘೋಷಣೆಯಾಗಿ ಮೊದಲ ಹಂತದ ಚುನಾವಣೆಯೂ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದೂ ಹೋಗಲಿದೆ. ಈ ಬಾರಿಯ ಚುನಾವಣೆಯ ಮೇಲೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಕಣ್ಣೂ ಇದೆ. ೨೦೧೪ರ ಚುನಾವಣೆಯೂ ಹೀಗೆಯೇ ಇತ್ತು.೨೦೧೪ರ ಚುನಾವಣೆ ಭಾರತದ ರಾಜಕೀಯದಲ್ಲಿ ಢಾಳಾಗಿ ಮಿಳಿತವಾಗಿರುವ  ಜಾತಿ,ಹಣ,ರಿಲಿಜಿಯನ್,ಓಲೈಕೆ ಇತ್ಯಾದಿಗಳನ್ನು ಜನತೆಯೇ ನಿವಾಳಿಸಿ ಬಿಸಾಡಿದ,ದೇಶದ ಚಿಂತನೆಯ ದಿಕ್ಕನ್ನು ಬದಲಿಸಿದ ಚುನಾವಣೆ ಎನ್ನಬಹುದು.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದ ಚುನಾವಣಾ ರಾಜಕೀಯವನ್ನು ಬಹುಶಃ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಮೊದಲನೆಯದು ೪೭ ರಿಂದ ೭೦ರ ದಶಕದವರೆಗಿನ ನೆಹರೂ ಕುಟುಂಬದ ರಾಜಕಾರಣ (ಶಾಸ್ತ್ರೀಜಿಯವರ ಸಮಯ ಬಿಟ್ಟು). ೭೦ರ ದಶಕದ ಆದಿಯಿಂದ ೯೦ರ ದಶಕದವರೆಗಿನ ಇಂದಿರಾ ಕಾಂಗ್ರೆಸ್ಸಿನ ಸರ್ವಾಧಿಕಾರಿ ತುರ್ತುಪರಿಸ್ಥಿತಿ ವಿರೋಧಿ ಹಾಗೂ ರಾಮಜನ್ಮಭೂಮಿ ಚಳವಳಿಯರವರೆಗಿನ ರಾಜಕಾರಣ. ೯೦ರ ದಶಕದ ಆದಿಯಿಂದ – ೨೦೧೩ರ ಕೊನೆಯವರೆಗಿನ ಸೆಕ್ಯುಲರಿಸಂ-ಹಿಂದುತ್ವದ ರಾಜಕಾರಣ. ಈ  ನಾಲ್ಕು ಭಾಗಗಳಲ್ಲಿ ನಿಚ್ಚಳ ಬಹುಮತದ ಸರ್ಕಾರಗಳು ರೂಪುತಳೆದಿದ್ದು ನೆಹರೂ ಕಾಲದ ಸ್ವಾತಂತ್ರ್ಯ ಹೋರಾಟದ ಹ್ಯಾಂಗ್ ಓವರ್ ಹಾಗೂ ವಿರೋಧ ಪಕ್ಷಗಳಿಲ್ಲದ ಕಾಲದಲ್ಲಿ,ಇಂದಿರಾ  ಹತ್ಯೆಯ ನಂತರದ ಚುನಾವಣೆಯಲ್ಲಿ ಹಾಗೂ ಕಳೆದ ೨೦೧೪ ರ ಚುನಾವಣೆಯಲ್ಲಿ.

ಮೊದಲ ಎರಡು ಚುನಾವಣೆಯ ವಿಷಯಗಳೇನೂ ಚರ್ಚಿಸ ಬೇಕಾದ ವಿಷಯಗಳೇನೂ ಅಲ್ಲ. ಇನ್ನುಳಿಯುವುದು ೨೦೧೪ರ ಚುನಾವಣೆಯ ವಿಷಯ. ಯಾಕೆ ೨೦೧೪ರ ಚುನಾವಣೆಯ ವಿಷಯ ಮುಖ್ಯವಾಗುತ್ತದೆ ಎಂದರೇ,ಯಾವುದೇ ಜಾತಿ-ರಿಲಿಜಿಯನ್-ಓಲೈಕೆ-ಬಿಟ್ಟಿ ಭಾಗ್ಯ ಯೋಜನೆಗಳಿಲ್ಲದೇ, ಗುಜರಾತಿನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಅಭಿವೃದ್ಧಿಯ,ನವಭಾರತದ ಕನಸು ಕಟ್ಟಿಕೊಟ್ಟಿದ್ದರು ನರೇಂದ್ರ ಮೋದಿಯವರು.ಆದರೆ ವಿಪಕ್ಷಗಳಿಗೆ ಮೋದಿಯವರ ಅಭಿವೃದ್ಧಿ ಅಜೆಂಡದ ಅಸ್ತ್ರ್ರಕ್ಕೆ ಪ್ರತಿಯಾಗಿ ವಿಭಿನ್ನವಾದ ಅಥವಾ ಅದಕ್ಕಿಂತಲೂ ಉತ್ತಮವಾದ ಅಜೇಂಡಾವನ್ನು ಸೆಟ್ ಮಾಡಲಾಗಲೇ ಇಲ್ಲ. ಅವರು ೨೦೦೨ರ ಗುಜಾರಾತಿನಲ್ಲೇ ಉಳಿದುಹೋದರು. ಇತ್ತ ಮೋದಿಯವರು ನವಭಾರತದ ಅಲೆಯಲ್ಲಿ ೨೦೧೪ರ ಮೇ ತಿಂಗಳಲ್ಲಿ ಸಂಸತ್ತಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಮತ್ತಷ್ಟು ಓದು »

30
ಜನ

ಅಬ್ಬಾ..ಈ ದೇಶದಲ್ಲಿ ಅದೆಂತಹ ಅಸಹಿಷ್ಣುತೆ..!

– ವರುಣ್ ಕುಮಾರ್
ಪುತ್ತೂರು

modi-naseer.jpg

  • ಈ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆಶಾರುಖ್ ಖಾನ್
  • ನನ್ನ ಪತ್ನಿಗೆ ಮತ್ತು ನನಗೆ ಈ ದೇಶದಲ್ಲಿ ಇರಲು ಭಯವಾಗುತ್ತಿದೆ, ಯಾಕೆಂದರೆ ಇಲ್ಲಿ ಅಸಹಿಷ್ಣುತೆ ಇದೆಅಮೀರ್ ಖಾನ್
  • ನನ್ನ ಮೊಮ್ಮಕ್ಕಳಿಗೆ ಈ ದೇಶದಲ್ಲಿರಲು ಭಯವಾಗುತ್ತಿದೆನಾಸೀರುದ್ದಿನ್ ಷಾ

ಹೌದಲ್ಲವೇ, ಇವರು ಹೇಳಿದಂತೆ ಕಳೆದ ನಾಲ್ಕೂವರೆ ವರ್ಷಗಳಿಂದ ಎಷ್ಟೊಂದು ಅಸಹಿಷ್ಣುತೆ ಇದೆಯಲ್ಲವೆ, ಎಲ್ಲ ಕಡೆಗಳಲ್ಲಿ ಗೋವಿನ ಹೆಸರಲ್ಲಿ ಕೊಲೆ,ಸುಲಿಗೆ ಧರ್ಮದ ಹೆಸರಲ್ಲಿ ಗಲಭೆ, ಅಲ್ಪಸಂಖ್ಯಾತರಿಗಂತೂ ಉಸಿರುಗಟ್ಟಿದ ಸ್ಥಿತಿ. ಒಂದೇ ಎರಡೇ, ಇದಕ್ಕೆಲ್ಲ ಯಾರು ಮುಖ್ಯ ಕಾರಣ ಕೇಂದ್ರ ಸರ್ಕಾರ. ಅದರಲ್ಲೂ ಮುಖ್ಯವಾಗಿ ಮೋದಿ. ಈ ಮನುಷ್ಯ ಬಂದ ಮೇಲಂತೂ ಈ ದೇಶದ ಬಗ್ಗೆ ತಾತ್ಸರ ಮೂಡುವಂತೆ ಮಾಡಿದ್ದಾನೆ. ಅಲ್ಲವೇ.. ಅಷ್ಟಕ್ಕೂ‌ ಮೋದಿಯ ಬಗ್ಗೆ ಈ ನಮ್ಮ ದೇಶಭಕ್ತ(?)ರಿಗೆ ಯಾಕೆ ಇಷ್ಟೊಂದು ಕೋಪ ಸ್ವಲ್ಪ‌ ಮೆಲುಕು ಹಾಕೋಣ. ಮತ್ತಷ್ಟು ಓದು »

3
ಜನ

ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?

– ಗೋಪಾಲಕೃಷ್ಣ
ಚಿಕ್ಕಮಗಳೂರು

4CE0D6B8-390C-4E23-889C-7727E2BCC073ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್‍ಮೇಲ್’ ಮಾಡಬಹುದಿತ್ತು! ಅಂದು ಎನ್‍ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ. ಮತ್ತಷ್ಟು ಓದು »

21
ಡಿಸೆ

ಮೋದಿ ಮತ್ತೊಮ್ಮೆ ಎನ್ನುವುದಕ್ಕಿಂತ, ಮೋದಿ ಮತ್ತೆ ಮತ್ತೆ ಎನ್ನಿ!

– ಸಾಗರ ಮುಧೋಳ

4CE0D6B8-390C-4E23-889C-7727E2BCC073ಕಳೆದ ಒಂದು ದಶಕದ ಹಿಂದೆ ಯಾರಾದರೂ ಒಬ್ಬ ವಿದ್ಯಾರ್ಥಿ ಅಥವಾ ಯುವಕ ತಾನೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಅಂದುಕೊಂಡಿದ್ದರೆ, ಅದು ಅವನ ದೃಷ್ಟಿಯಲ್ಲಿ ವಿಜ್ಞಾನಿ, ಅಧ್ಯಾಪಕ, ಅಧಿಕಾರಿ, ವೈದ್ಯ ಹೀಗೆ ಹಲವು ಬಗೆಯಲ್ಲಿ ಯೋಚಿಸುತ್ತಿದ್ದ. ಆದರೆ, ತಪ್ಪಿಯೂ ನಾನೊಬ್ಬ ರಾಜಕಾರಣಿಯಾಗಬೇಕೆಂದು ಚಿಂತಿಸುತ್ತಿರಲಿಲ್ಲ. ರಾಜಕಾರಣವೆಂದರೆ ಅದೊಂದು ಸಮಾಜದ ಬಹು ಜನರ ಆಶೋತ್ತರಗಳಿಂದ ಅಸ್ಪೃಶ್ಯವಾಗಿಯೇ ಉಳಿದ ಕ್ಷೇತ್ರ. ಅಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲ. ರಾಜಕಾರಣವಿರುವುದೇ ದುಡ್ಡು ಮಾಡುವುದಕ್ಕೆ, ಜನರನ್ನು ಮೋಸ ಮಾಡುವುದಕ್ಕೆ ಎನ್ನುವುದು ನಾಡಿನ ಹಲವರಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದ ವಾಣಿ. ಯಾರೊಬ್ಬರೂ ಊಹಿಸಿರಲಿಲ್ಲ! 2014 ರ ಸಂದರ್ಭದಿಂದ ಈ ದೇಶದಲ್ಲಿ ಬಾಲಿವುಡ್, ಕ್ರಿಕೆಟ್ ಗಿಂತ ಅತಿ ಹೆಚ್ಚು ಚರ್ಚೆ ಮತ್ತು ಮೆಚ್ಚುಗೆ ಪಡೆದ ವಿಷಯ ರಾಷ್ಟ್ರದ ರಾಜಕೀಯವೇ ಆಯಿತು. ಮೋದಿ ಎಂದರೆ ಅವರೊಬ್ಬ Political leader ಅಲ್ಲ, ಬದಲಾಗಿ ದೇಶದ ಬ್ರಾಂಡ್! ಮೋದಿ ಟೀ,ಮೋದಿ ಕುರ್ತಾ,ಮೋದಿ ಜಾಕೆಟ್ ಎಲ್ಲವೂ ಬ್ರಾಂಡ್. ಮೋದಿಗೆ ಸಂಬಂಧಿಸಿರುವುದೆಲ್ಲವು ಬ್ರಾಂಡ್. ಹಿಂದೆ ಅಪ್ಪ -ಅಮ್ಮ ಮನೆಯಲ್ಲಿ ರಾತ್ರಿ ನ್ಯೂಸ್ ನೋಡುತ್ತಿರಬೇಕಾದರೆ, ತಮ್ಮನ್ನು ಇಂದಿನ ಕ್ರಿಕೆಟ್ ಮ್ಯಾಚನ್ನು ನೋಡುವುದರಿಂದ ತಪ್ಪಿಸಿರುವವರ ಕಡೆ ಮಕ್ಕಳು ಶಪಿಸುತ್ತಾ ಮೂಗು ಮುರಿಯುತ್ತಿದ್ದರು. ಆದರೆ ಮೋದಿ ಎಂಟ್ರಿ ಕೊಟ್ಟ ಮೇಲೆ ಸಕುಟುಂಬ ಸಮೇತರಾಗಿ ಮನೆಯ ಟಿ.ವಿ. ಪರದೆಯ ಮೇಲೆ ಮೋದಿ ಗಾಥೆಯನ್ನು ನೋಡಲು ಶುರುಹಚ್ಚಿದರು. 2014 ರಲ್ಲಿ ಮೋದಿ ಗೆಲ್ಲುವುದು ಅನಿವಾರ್ಯ ಮಾತ್ರವಲ್ಲ, ಅಂತಿಮವಾದ ಪೂರ್ವ ನಿಯೋಜಿತ ತೀರ್ಮಾನವಾಗಿತ್ತು. Breaking news ಗಾಗಿ ಹಪಹಪಿಸುತ್ತಿದ್ದ ನ್ಯೂಸ್ ಚಾನೆಲ್ ಗಳಿಗೆ ಮೋದಿಯಿಂದ ಪ್ರತಿದಿನ Breaking news ಸಿಗುವ ಹಾಗಾಯಿತು. ಕೊನೆಗೆ ಮೋದಿ ಸುನಾಮಿಯ ಎದುರು ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋದವು. ಅತ್ತ ನಾಯಕತ್ವವುಯಿಲ್ಲದೆ, ಇತ್ತ ಧ್ಯೇಯೋದ್ದೇಶಗಳು ಇಲ್ಲದ ಪ್ರತಿಪಕ್ಷಗಳು ಮೋದಿಯ ವಿಜಯಕ್ಕೆ ತಲೆ ಬಾಗಲೇ ಬೇಕಾಯಿತು. ಮೋದಿ ಈ ದೇಶದ ಪ್ರಧಾನಮಂತ್ರಿ ಎಂದು ಜನ ಹೇಳುತ್ತಿರುವಾಗ, ” ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, 125 ಕೋಟಿ ಭಾರತೀಯರ ಪ್ರಧಾನ ಸೇವಕ” ಎಂದ ಮೋದಿಯ ಕೃತಜ್ಞತಾ ಭಾವಕ್ಕೆ ಇಡೀ ದೇಶ ಶರಣೆಂದಿತು. ಮತ್ತಷ್ಟು ಓದು »

26
ಜುಲೈ

ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು

– ಅಜಿತ್ ಶೆಟ್ಟಿ ಹೆರಂಜೆ

ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ  ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು.  ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ.  ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ  ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ  ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ  ಕಲಿತ ಪಾಠವೇನು.? ಬನ್ನಿ ತಿಳಿಯೋಣ.

ಸಾಮಾನ್ಯವಾಗಿ  ಯುದ್ಧ‌ವನ್ನು ಗೆಲ್ಲಬೇಕಾದರೆ  ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ  ಬೇಕಾಗಿರುವ ಸೈನ್ಯದ ಸಂಖ್ಯೆ  ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ  ಬಗ್ಗೆ ಇದ್ದ ಮಾಹಿತಿ.

ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ  ಬಗ್ಗೆ ಮಾಹಿತಿ  ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ  ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ  ಭಾರತೀಯ ಸೈನ್ಯದ ಓರ್ವ ಅಧಿಕಾರಿ  ಕಾರ್ಗಿಲ್  ಪರ್ವತ ಶ್ರೇಣಿಯ  ಉಗ್ರರ ಗುಂಡಿಗೆ ಹುತಾತ್ಮನಾಗುವ  ಮುಂಚೆ ತಮ್ಮ ಮೇಲಧಿಕಾರಿಗೆ  ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ,  ಕ್ಯಾಪ್ಟನ್ ವಿಕ್ರಮ್  ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು  ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ  ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ  ಹಿಂದಿನ ಸರ್ಕಾರಗಳ  ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ  ಮಾಹಿತಿ  ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ  ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!!  ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ  ನೇರ ಯದ್ದದಲ್ಲಿ  ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ‌ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!

ಮತ್ತಷ್ಟು ಓದು »