ವಿಷಯದ ವಿವರಗಳಿಗೆ ದಾಟಿರಿ

Posts tagged ‘ನಾಸ್ತಿಕತೆ’

22
ಡಿಸೆ

ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ

– ರೋಹಿತ್ ಚಕ್ರತೀರ್ಥ

ನಕಲಿ ಮೆದುಳು“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.

ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.

ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು »