7ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…
ನಿಲುಮೆ ವೆಬ್ ತಾಣ ಶುರುವಾಗಿ 6ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಕ್ರಮಣದ ದಿನವಿದು. 5ನೇ ವರ್ಷದ ಸಂಭ್ರಮದಲ್ಲಿ,ನಿಲುಮೆ ಪ್ರಕಾಶನ ಶುರುವಾಗುವ ಹಂತದಲ್ಲಿದ್ದಾಗ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು.ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.
ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು. 2016ರಲ್ಲಿ ನಿಲುಮೆ ಪ್ರಕಾಶನ ಸ್ತಬ್ಧವಾಗಿತ್ತು ಎಂಬುದನ್ನು ನಿಮ್ಮ ಮುಂದೆ ಮಂಡಿಯೂರಿ ಒಪ್ಪಿಕೊಳ್ಳುತ್ತೇವೆ.
ಈ ವರ್ಷ ನಿಲುಮೆಯ ಹೆಜ್ಜೆ ಗುರುತುಗಳು….
1.ಹೈದರಾಬಾದಿನ ಯುನಿವರ್ಸಿಟಿಯಲ್ಲಿ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನಿಡಿದುಕೊಂಡು ದೇಶಾದಾದ್ಯಂತ ಗಂಜಿಗಿರಾಕಿಗಳು ಬೊಬ್ಬೆಯಿಟ್ಟಾಗ,ನಿಲುಮೆ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶವನ್ನು ಓದೌಗರ ಮುಂದೆ ಇಡುವ ಕೆಲಸವನ್ನು ಮಾಡಿದೆ.
2.ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿ,ಕಾಶ್ಮೀರದ ಆಜಾದಿ ಘೋಷಣೆಗಳನ್ನು ಕೂಗಿದ್ದ ಜೆ.ಎನ್.ಯು ವಿವಿಯ ಕನ್ನಯ್ಯ ಕುಮಾರನ ಪಟಾಲಂನ ವಿರುದ್ಧ ನಡೆದ ಆನ್ಲೈನ್ ಹೋರಾಟದಲ್ಲು ನಿಲುಮೆ ಬಳಗ ಸಕ್ರೀಯವಾಗಿತ್ತು.
3.೨೦೧೬ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ JNUವಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿ ಬಂದಾಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಅದಾದ ಕೆಲವೇ ದಿನಗಳಲ್ಲಿ ಬಂಗಾಳದಲ್ಲೂ ಇದೇ ಬಗೆಯ ಘೋಷಣೆಗಳ ಸುದ್ದಿಯಾಗಿತ್ತು. ಜುಲೈ ೯ನೇ ತಾರೀಖು ಜಮ್ಮುಕಾಶ್ಮೀರ ರಾಜ್ಯದಲ್ಲಿ ಉಗ್ರ ಬರ್ಹನ್ ವಾನಿಯ ಹತ್ಯೆಯಾದ ನಂತರ,ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ, ಕೆಲವು ಅರ್ಬನ್ ನಕ್ಸಲರು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ತಯಾರಾಗಿದ್ದ ಹೊರಟಿದ್ದರು. ಇವರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು.
ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದು ‘ನಿರ್ದೇಶಿಸುವ’ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಈ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವ “ಓದುವ-ತಿಳಿಯುವ ಕ್ರಮದ ನಿರ್ದೇಶನ”ದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನು “ಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.
ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು’ ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು?
5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು
ಅಂದು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ,”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ”ವೆಂದಾಗ,ನನ್ನ ಮುಖಾಮುಖಿಯಾಗಿದ್ದವರು “ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಿರುವ ಜೋಷ್ ಹೀಗೆಲ್ಲ ಮಾತನಾಡಿಸುತ್ತದೆ” ಅನ್ನುವ ಅರ್ಥದಲ್ಲೆನೋ ವ್ಯಂಗ್ಯವಾಡಿದ್ದರು.ನನಗದು ಕೇಳಿಸಿತಾದರೂ,ಉತ್ತರಿಸಬೇಕಾದ ಸಮಯ ಅದಲ್ಲ ಅಂತ ಸುಮ್ಮನಾಗಿದ್ದೆ…
ಮತ್ತಷ್ಟು ಓದು
“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕದ ಕುರಿತ ಓದುಗರ ಅಭಿಪ್ರಾಯಗಳು
– ವಿನಾಯಕ್ ಹಂಪಿಹೊಳಿ
ಬೌದ್ಧಿಕ ದಾಸ್ಯದಲ್ಲಿ ಭಾರತವನ್ನು ಬಹಳ ಮುಂಚೆಯೇ ಖರೀದಿಸಿದ್ದೆನಾದರೂ ಅದನ್ನು ಮರುದಿನವೇ ಮನೆಯಲ್ಲಿ ಇಟ್ಟು ಬರಬೇಕಾಯಿತು. ಹೀಗಾಗಿ ಸರಿಯಾಗಿ ಓದಲು ಆಗಿರಲಿಲ್ಲ. ಹೀಗಾಗಿ ನಿನ್ನೆ ಇನ್ನೊಂದು ಪ್ರತಿಯನ್ನು ಖರೀದಿಸಿ ಇವತ್ತು ಅದನ್ನು heathen in his blindness ಮತ್ತು ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ ಪುಸ್ತಕಗಳ ಪಿಡಿಎಫ಼್ ಪ್ರತಿಗಳೊಂದಿಗೆ ತಾಳೆ ಮಾಡಿ ಸರಿಯಾಗಿ ಓದಿದೆ. ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಶೀರ್ಷಿಕೆ ಅಕ್ಷರಶಃ ಸಿದ್ಧವಾಗುತ್ತದೆ.
ಮೊದಲನೇಯದಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವನ್ನು ಬುದ್ಧಿಜೀವಿಗಳು ಏಕೆ ಮುಚ್ಚಿಸಿದ್ದಾರೆ ಎಂಬುದು ಈಗ ತಿಳಿಯಿತು. ಏಕೆಂದರೆ ಹಿಂದೂ-ಸಂಪ್ರದಾಯಗಳನ್ನು ರಿಲಿಜನ್ನಿನ ಅಡಿಯಲ್ಲಿ ತಂದರಷ್ಟೇ ಅಲ್ಲವೇ, ಅದರಲ್ಲಿನ ಗ್ರಂಥಗಳ ಆಧಾರವಿಲ್ಲದ ಸಂಪ್ರದಾಯಗಳನ್ನು ತೆಗಳಿ, ಪ್ರಗತಿಪರರೆಂದೆನಿಸಿಕೊಂಡು ಇವರು “ಬುದ್ಧಿಜೀವಿ”ಗಳಾಗುವದು? ರಿಲಿಜನ್ನೇ ಇಲ್ಲದ ಸಮಾಜದಲ್ಲಿ ಬುದ್ಧಿಜೀವಿಗೇನು ಕೆಲಸ?
ನನಗೆ ತುಂಬ ಮೆಚ್ಚಿಗೆಯಾದ ಅಂಶ ಕ್ರಿಯೆಯಿಂದ ಜ್ಞಾನವನ್ನು ಪಡೆಯುವದು ಭಾರತೀಯ ಪದ್ಧತಿ ಎಂಬ ಅಂಶವನ್ನು ಇದು ತೋರಿಸಿರುವದು. ನನ್ನ+ಅಣ್ಣ=ನನ್ನಣ್ಣ ಆಗುವದರಿಂದ ಕನ್ನಡದಲ್ಲಿ ಲೋಪಸಂಧಿ ಹುಟ್ಟಿಕೊಂಡಿದೆಯೋ ಅಥವಾ ಲೋಪಸಂಧಿ ಇರುವದರಿಂದ ನನ್ನ+ಅಣ್ಣ=ನನ್ನಣ್ಣ ಎಂದು ಮಾಡಲು ಭಾಷೆ ಅನುಮತಿ ನೀಡುತ್ತದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮೊದಲು ಪ್ರಯೋಗ, ನಂತರ ವ್ಯಾಕರಣ ಎಂಬುದು ಅನುಭವಕ್ಕೆ ಸರಿಹೊಂದುತ್ತಿದ್ದರೂ ಅದಕ್ಕೆ ಸರಿಯಾದ ವಾದ ಇಲ್ಲಿ ಸಿಕ್ಕಿತು.
ಮತ್ತಷ್ಟು ಓದು
ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆ ಮತ್ತು ನಿಲುಮೆ ಫೌಂಡೇಶನ್ ನ ಉದ್ಘಾಟನಾ ಸಮಾರಂಭದ ವರದಿ
– ಹರೀಶ್ ಆತ್ರೇಯ,ಹರ್ಷಿತ್ ಜೋಸೆಫ್
ನಿಲುಮೆ ಪ್ರಕಾಶನದಿಂದ ದಿನಾಂಕ ೧ ಮಾರ್ಚ್ ೨೦೧೫ ರಂದು ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು. ಕಳೆದ ಐದು ವರ್ಷಗಳಿಂದ ಸತತವಾಗಿ ಬೌದ್ಧಿಕ ವಿಚಾರಗಳನ್ನು ಮಂಡಿಸುತ್ತಿದ್ದ ನಿಲುಮೆ ಬ್ಲಾಗ್ ಈಗ ಪ್ರಕಾಶನ ಸಂಸ್ಥೆಯ ಹೆಸರಿನಲ್ಲಿ ನಿಲುಮೆ ಫೌಂಡೇಶನ್ ಆಗಿ ಹೊರಹೊಮ್ಮಿದೆ, ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿಯೇ ನಿಲುಮೆ ಫೌಂಡೇಶನ್ನಿನ ಉದ್ಘಾಟನೆಯಾಯಿತು.
ಬ್ರಿಟಿಷರ ಕೆಳಗೆ ದಾಸರಾಗಿ ಬಾಳಿದ (?) ಭಾರತೀಯರ ಚರಿತ್ರೆ (?) ನಮಗೆ ಗೊತ್ತಿದೆ. ರಾಜಕೀಯವಾಗಿ ನಮ್ಮನ್ನು ಆಳಿದುದು ಹೌದಾದರೂ ಬೌದ್ಧಿಕವಾಗಿ ನಾವು ಅವರಿಂದ ಆಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದು ಶೋಚನೀಯ. ಅವರಿಂದ ಭೌತಿಕವಾಗಿ ಆಳಿಸಿಕೊಳ್ಳುವ ಕಾಲಘಟ್ಟವನ್ನು ವಸಾಹತುಶಾಹಿ ಕಾಲವೆಂದು ಕರೆಯುವುದಾದರೆ, ಈಗಲೂ ಅವರ ಬೌದ್ಧಿಕ ಚಿಂತನೆಗಳ, ಆಲೋಚನಾ ಕ್ರಮಗಳ ರೂಪದಲ್ಲಿ ಅವರಿಂದ ಬೌದ್ಧಿಕವಾಗಿ ಆಳಿಸಿಕೊಳ್ಳುತ್ತಿದ್ದೇವೆ ಎನ್ನುವುದೂ ಸತ್ಯ. ಇವೆಲ್ಲದರಿಂದ ಹೊರಬರಬೇಕಾದರೆ ನಮ್ಮ ಸಂಸ್ಕೃತಿಯ , ಆಚರಣೆಗಳ ಅರಿವು ನಮಗೆ ಬೇಕಾಗುತ್ತದೆ. ಸತ್ಯವನ್ನು ತಿಳಿಯುವ ಮತ್ತು ತಿಳಿಸುವ ಹೊಣೆ ನಮ್ಮದಾಗಿರುತ್ತದೆ. ಇವೆಲ್ಲವನ್ನೂ ಪ್ರಚುರಪಡಿಸಲು ನಮಗೊಂದು ದಾರಿ,ಕ್ರಮ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ. ಹತ್ತು ಹಲವು ಪುಸ್ತಕಗಳು ನಮ್ಮ ಕಣ್ಣಿಗೆ ಕಾಣಬಹುದು ಮತ್ತು ನಾವು ಓದಬಹುದು ಆದರೆ ದುರದೃಷ್ಟವಶಾತ್ ಅವೆಲ್ಲವೂ ಪಾಶ್ಚಾತ್ಯದ ಕಂಗಳಿಂದ ಕಂಡ ದೃಶ್ಯಗಳಾಗಿವೆ. ಅವರು ಚಿಂತನ ಕ್ರಮವನ್ನು ಅಳವಡಿಸಿಕೊಂಡು ಲೇಖಿಸಿದ ಮಹಾ ಪ್ರಬಂಧಗಳು ನಮ್ಮ ಸಂಸ್ಕೃತಿಯ ಮೂಲವನ್ನು ಅರಿಯುವ ಪ್ರಯತ್ನವನ್ನು ಮಾಡಿಯಾವೇ? ಇದು ಪ್ರಶ್ನೆಯಾಗಿ ಉಳಿಯುತ್ತಿರುವ ಹಂತದಲ್ಲಿ ಪ್ರೊ|| ಬಾಲಗಂಗಾಧರ್ ಅವರ ಲೇಖನಗಳು ಮತ್ತು ಕ್ರಮ ಹೆಚ್ಚು ಮೌಲ್ಯಯುತವೂ ಮತ್ತು ಸರಿಯಾದ ಮಾರ್ಗವೂ ಆಗಿರುವುದು ನಿಜಕ್ಕೂ ಸಂತಸದ ಸಂಗತಿ. ಆಲೋಚನಾ ಕ್ರಮಕ್ಕೆ ಹೊಸದೊಂದು ಹೊಳಹನ್ನು ತಂದುಕೊಟ್ಟವರು ಪ್ರೊ ಬಾಲು ರವರು.
ಮತ್ತಷ್ಟು ಓದು
ನಿಲುಮೆ ಪ್ರಕಾಶನ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ
ನಿಲುಮೆಯ ಓದುಗರೇ,
ಮುಂದಿನ ಭಾನುವಾರ,ಮಾರ್ಚ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ,ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ “ನಿಲುಮೆ ಪ್ರಕಾಶನ”ದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಾಲಗಂಗಾಧರ,ಶತಾವಧಾನಿ ಗಣೇಶ್,ಪ್ರೊ.ಪ್ರಧಾನ್ ಗುರುದತ್ತ,ಪ್ರೊ.ರಾಜಾರಾಮ್ ಹೆಗಡೆ ಹಾಗೂ ಇನ್ನಿತರ ಗಣ್ಯರು ನಮ್ಮೊಂದಿಗಿರಲಿದ್ದಾರೆ.
ಪುಸ್ತಕ ಬಿಡುಗಡೆಗೆ ಸರ್ವರಿಗೂ ಸುಸ್ವಾಗತ.
ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿದ ನಂತರ “ನಿಲುಮಿಗರ ದಿನ”ವಿರಲಿದೆ. ನಿಲುಮಿಗರ ದಿನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ-ವಿವರಗಳನ್ನು ಈ http://goo.gl/X981PX ಕೊಂಡಿಯಲ್ಲಿ ದಾಖಲಿಸಿ.ನಮಗೆ ಕಾರ್ಯಕ್ರಮದ ತಯಾರಿಗೆ ಇದು ಅವಶ್ಯಕ.ಈ ವಿವರಗಳನ್ನು ದಾಖಲಿಸಲು ಕಡೆಯ ದಿನ ೨೫ನೇ ತಾರೀಖು.ಅದರಾಚೆಗೆ ಈ ಕೊಂಡಿ ಲಭ್ಯವಿರುವುದಿಲ್ಲ.
ಮಿಥಿಕ್ ಸೊಸೈಟಿ,ನೃಪತುಂಗ ರಸ್ತೆ.ತಲುಪುವ ಮಾರ್ಗ : ಮೆಜೆಸ್ಟಿಕ್ ಕಡೆಯಿಂದ ಬರುವುದಾದರೆ ಕೆ.ಆರ್ ಸರ್ಕಲ್ ನಲ್ಲಿ ಬಲ ತಿರುವು (ಕಬ್ಬನ್ ಪಾರ್ಕಿನೊಳಗಿನಿಂದ ಬಂದರೆ,ಕಾರ್ಪೊರೇಶನ್ ಸರ್ಕಲ್ ಕಡೆಗೆ ಎಡತಿರುವು) ತೆಗೆದುಕೊಂಡು ರಸ್ತೆಯ ಬಲಭಾಗದಲ್ಲೆ ಮುಂದುವರೆದರೆ ಸರ್ಕಾರಿ ವಿಜ್ನಾನ ಕಾಲೇಜಿನ ನಂತರದ ಕಟ್ಟಡವೇ ಮಿಥಿಕ್ ಸೊಸೈಟಿ (ಎದುರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ). ಬಸ್ಸಿನಲ್ಲಿ ಬರುವವರು ಬನ್ನಪ್ಪ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಸಿಟಿ ಸಿವಿಲ್ ಕೋರ್ಟ್ ರಸ್ತೆಯ ಕಡೆ ನಡೆದುಕೊಂಡು ಬಂದರೂ ತಲುಪಬಹುದು.(ಹತ್ತು-ಹದಿನೈದು ನಿಮಿಷದ ಹಾದಿ)
ನಿಮ್ಮ ಆಗಮನದ ನಿರೀಕ್ಷೆಯಲ್ಲಿ.
ನಿಮ್ಮೊಲವಿನ,
ನಿಲುಮೆ ಬಳಗ
5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ “ನಿಲುಮೆ ಪ್ರಕಾಶನ”
ನಿಲುಮೆಯ ಪ್ರಿಯ ಓದುಗರೇ,
“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ,ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು.ಅಷ್ಟಕ್ಕೂ ‘ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು” ಎನ್ನುವ “ನಿಲುವು” ಮತ್ತು “ಎಲ್ಲ ತತ್ವದ ಎಲ್ಲೆ ಮೀರಿ” ಎಂಬ ಅಡಿ ಬರಹದೊಂದಿಗೆ ನಾವೊಂದಿಷ್ಟು ಗೆಳೆಯರು ಸೇರಿಕೊಂಡು “ನಿಲುಮೆ” (nilume.net) ವೆಬ್ ತಾಣವನ್ನು ಪ್ರಾರಂಭಿಸಿ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ “ನಿಲುಮೆ ಪ್ರಕಾಶನ”ವನ್ನು ಪ್ರಾರಂಭಿಸುತ್ತಿದ್ದೇವೆ.
ಈಗಾಗಲೇ ಕನ್ನಡದಲ್ಲಿ ಹಲವಾರು ಪ್ರಕಾಶನಗಳಿರುವಾಗ ಇನ್ನೊಂದು ಏಕೆ? ಅನ್ನೋ ಪ್ರಶ್ನೆ ಕೂಡ ಹುಟ್ಟಲಾರದ ಸಮಯವಿದು.ಹಾಗಾಗಿ ಈ ಮೇಲಿನ ಪ್ರಶ್ನೆ ಓದುಗರಲ್ಲಿ ಏಳುವ ಸಾಧ್ಯತೆಯೂ ಇಲ್ಲ.ಈ ಕಾರಣದಿಂದ ನಾವೇ ಈ ಪ್ರಶ್ನೆಯನ್ನು ಎತ್ತಿ ನಮ್ಮ ಉದ್ದೇಶದ ಕುರಿತು ತಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತೇವೆ.
ರಮಾನಂದ ಐನಕೈಯವರ ‘ಸಂಸ್ಕೃತಿ ಸಂಕಥನ” ಲೇಖನ ಸರಣಿಯ (ಈ ಲೇಖನಗಳು “ನಮಗೇ ನಾವೇ ಪರಕೀಯರು” ಪುಸ್ತಕವಾಗಿ ಹೊರಬಂದು ಇದೀಗ ಮೂರನೇ ಮುದ್ರಣವನ್ನು ಕಾಣುತ್ತಿದೆ) ಮೂಲಕ ಶುರುವಾದ ನಿಲುಮೆ ಮತ್ತು CSLC ತಂಡಗಳ ಬಾಂಧವ್ಯ ಇನ್ನಷ್ಟು ಆಪ್ತವಾಗಿದ್ದು ೨೦೧೩ರಲ್ಲಿ ಕರ್ನಾಟಕದ ಬೌದ್ಧಿಕ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿದ್ದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆಯ ಸಂದರ್ಭದಲ್ಲಿ.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು,ನಿಲುಮೆಯ ನಿಲುವಿಗೆ ಬದ್ಧವಾಗಿ ನಾವು ಬೌದ್ಧಿಕ ಫ್ಯಾಸಿಸಂ ಅನ್ನು ವಿರೋಧಿಸಿದೆವು.
ಈ ಚರ್ಚೆಯ ಸಮಯದಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಅವರ ನಡೆ ಹೇಗಿತ್ತೆಂದರೆ,ತಮಗೇ ಬೇಕಾದ ವಾದಗಳಿಗೆ ಮಾತ್ರ ಮನ್ನಣೆ ನೀಡುತ್ತ,ಅಂತ ವಾದವನ್ನು ಮುಂದಿಡುವ ಜನರನ್ನು ಒಂದಾಗಿಸಿಕೊಂಡು ಉಳಿದವರನ್ನು ಬೌದ್ಧಿಕ ಅಸ್ಪೃಷ್ಯರನ್ನಾಗಿಸುವುದು.ಇಂತ ಬೌದ್ಧಿಕ ಫ್ಯಾಸಿಸಂನ ಉಸಿರುಗಟ್ಟಿಸುವ ಕಾಲದಲ್ಲಿ ಹೊಸತೊಂದು ಬೌದ್ಧಿಕ ಚಳುವಳಿ ಸಾಮಾನ್ಯ ಜನರನ್ನು ತಲುಪಬೇಕೆಂದರೆ ಅದಕ್ಕೊಂದು ಪ್ರಕಾಶನದ ಅಗತ್ಯವನ್ನು ನಾವು ಮನಗಂಡೆವು.ಹಾಗೇ ರೂಪು ತಳೆದಿದ್ದೇ ನಿಲುಮೆ ಪ್ರಕಾಶನ.
ನಮ್ಮ ಪ್ರಕಾಶನದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ”.ಈ ಪುಸ್ತಕ ಪ್ರೊ.ಬಾಲಗಂಗಾಧರ ಅವರ ಸಂಶೋಧನಾ ಗ್ರಂಥ “The Heathen in his Blindness” ನ ವಿಚಾರಧಾರೆಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆ ಅವರು ಬರೆದಿರುವ ಮತ್ತು ವಿಜಯವಾಣಿ ಪತ್ರಿಕೆಯಲ್ಲಿ ಕೆಲಕಾಲ “ವಸಾಹತುಶಾಹಿಯ ವಿಶ್ವಪ್ರಜ್ಞೆ” ಸರಣಿಯಾಗಿ ಪ್ರಕಟಗೊಂಡಿದ್ದ ಲೇಖನಗಳಗುಚ್ಛ.
ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ, ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.(ಕರ್ನಾಟಕದ ಕೆಲವು ಬುದ್ಧಿಜೀವಿಗಳ ಚಿತಾವಣೆಯಿಂದಾಗಿ ಈಗ ಆ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲಾಗಿರುವುದು ನಿಮಗೇ ತಿಳಿದೇ ಇದೆ.)
ಕಳೆದ ಕೆಲವು ವರ್ಷಗಳಿಂದ ಪ್ರೊ.ಬಾಲಗಂಗಾಧರರಿಂದ ಕನ್ನಡದಲ್ಲಿ ಹೊಸ ಚಿಂತನೆಯ ಅಲೆ ಹುಟ್ಟಿಕೊಂಡಿದೆ.ಅವರು ಭಾರತೀಯ ಸಂಸ್ಕೃತಿಯ ಕುರಿತು ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆ.ಕನ್ನಡದ ಹಾಗೂ ಭಾರತೀಯ ಚಿಂತಕರು ಶತಮಾನಕ್ಕೂ ಹಿಂದಿನಿಂದ ಎದುರಿಸಿದ ಬೌದ್ಧಿಕ ಸಮಸ್ಯೆಗಳನ್ನು ತಮ್ಮ ಸಂಶೋಧನೆಗಳ ಮೂಲಕ ಉತ್ತರಿಸಲು ಬಾಲು ಪ್ರಯತ್ನಿಸುತ್ತಾರೆ.ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವು ನಿರ್ದಿಷ್ಟವಾಗಿ ಏಕೆ ಹುಟ್ಟಿಕೊಳ್ಳುತ್ತವೆ,ಅವುಗಳಿಂದ ಹೊರಬರುವ ದಾರಿ ಯಾವುದು ಎಂಬುದನ್ನು ಕಂಡುಕೊಳ್ಳಲು ಅವರ ಸಂಶೋಧನೆ ಸಹಾಯಮಾಡುತ್ತದೆ. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಸಂಶೋಧನೆಗಳು ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುತ್ತವೆ ಹಾಗೂ ಪ್ರಶ್ನೆಗೀಡುಮಾಡುತ್ತವೆ.ಇಂದಿನ ಭಾರತೀಯ ಸಮಾಜದಲ್ಲಿ ಇಂಥ ಸ್ವೀಕೃತ ಚಿಂತನೆಗಳು ಬಗೆಹರಿಯದ ಸಮಸ್ಯೆಗಳನ್ನು ಸೃಷ್ಟಿಸಿವೆ.ಬಾಲಗಂಗಾಧರರ ವಿಚಾರಗಳು ತುಂಬ ಸಮರ್ಥವಾಗಿ ಅವುಗಳಿಂದ ಹೊರಬರುವ ದಾರಿಯನ್ನು ಸೂಚಿಸುತ್ತಿವೆ.ಜೊತೆಗೇ ನಮ್ಮ ಹಿಂದಿನ ಚಿಂತಕರ ಒಳನೋಟಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳ ಮಹತ್ವವನ್ನು ಅರಿಯಲೂ ಅವು ಸಹಾಯ ಮಾಡುತ್ತವೆ.ಈ ಕಾರಣದಿಂದ ಕಳೆದ ಒಂದು ದಶಕದಿಂದ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಬೌದ್ಧಿಕ ವಲಯದಲ್ಲಿ ಅವರ ವಿಚಾರಗಳ ಕುರಿತು ತೀವ್ರ ಆಸಕ್ತಿ ಹಾಗೂ ಕುತೂಹಲ ಮೂಡಿದೆ.
ಬಾಲಗಂಗಾಧರ ಚಿಂತನೆಗಳು ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ.ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ.ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿಯಾಗಿದೆ.ಅವರು ಇದನ್ನು ಪ್ರತ್ಯಭಿಜ್ಞಾನ ಎಂದು ಗುರುತಿಸುತ್ತಾರೆ.ಅಂದರೆ ವಸಾಹತುಕಾಲದಲ್ಲಿ ನಾವೊಂದು ಸಾಂಸ್ಕೃತಿಕ ಮರೆವೆಗೆ ಒಳಗಾಗಿದ್ದೇವೆ.ಪ್ರತ್ಯಭಿಜ್ಞಾನ ಎಂದರೆ ಆ ಮರೆವೆಯಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳುವುದು.
ಇಂತಹ ಬೌದ್ಧಿಕ ಚಳವಳಿಯ ಮೂಲಕ ಒಂದು ಓದುಗರ ಬಳಗವನ್ನು ಕಟ್ಟುತ್ತಾ ಚಿಂತನ ಮಂಥನಗಳಿಗೆ ಕನ್ನಡದಲ್ಲಿ ಸರಾಗ ಮಾರ್ಗವನ್ನು ನಿರ್ಮಿಸುವುದೂ ನಿಲುಮೆ ಪ್ರಕಾಶನದ ಗುರಿ.ಪ್ರತ್ಯಭಿಜ್ಞಾನಕ್ಕಾಗಿ ತುಡಿಯುತ್ತಿರುವ ಕನ್ನಡ ಓದುಗರು ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ,ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ.
ಈ ಬೌದ್ಧಿಕ ಚಳವಳಿಯ ಭಾಗವಾಗಿಸಿಕೊಂಡು ಇತರೆ ಉತ್ಸಾಹಿ ಚಿಂತಕರು ಬರೆಯಲು ಆರಂಭಿಸಿದ್ದಾರೆ.ಬಾಲು ಅವರ ಚಿಂತನೆಗಳನ್ನು ಅಧ್ಯಯನ ನಡೆಸಿ ಆ ಮೂಲಕ ತತ್ಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ.ಅವರ ಪುಸ್ತಕಗಳನ್ನೂ ಪ್ರಕಟಿಸುವ ಉದ್ದೇಶವಿದೆ.
ಇವೆಲ್ಲದರ ಜೊತೆಗೆ,”ಎಲ್ಲ ತತ್ವದ ಎಲ್ಲೆ ಮೀರಿ” ನಿಲ್ಲುವ ನಿಲುಮೆಯ ನಿಲುವಿಗೆ ಬದ್ಧವಾಗಿ ಎಲ್ಲಾ ಸಾಹಿತ್ಯ ಪ್ರಕಾರದ ಸೃಜನಶೀಲ ಕೃತಿಗಳನ್ನು ಪ್ರಕಟಿಸುವ ಮೂಲಕ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆಯಾಗುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಸಲ್ಲಿಸುವುದು ನಮ್ಮ ಯೋಜನೆಯಾಗಿದ್ದು ಆದ್ಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಲು ಯೋಚಿಸಲಾಗಿದೆ.
ನಿಮ್ಮ ಬೆಂಬಲ,ಹಾರೈಕೆ ನಮ್ಮ ಜೊತೆಗಿರಲಿ.
ನಿಮ್ಮೊಲುಮೆಯ,
ನಿಲುಮೆ ಬಳಗ