ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪಂಡಿತ್ ದೀನದಯಾಳ ಉಪಾಧ್ಯಾಯ’

6
ಜುಲೈ

ಪಂಡಿತ್ ದೀನದಯಾಳ ಉಪಾಧ್ಯಾಯ – ಶತಮಾನೋತ್ಸವ ಸ್ಮರಣೆ

– ವಿಘ್ನೇಶ್, ಯಲ್ಲಾಪುರ

ಅವರು ಹುಟ್ಟಿದ್ದು 1916ರ ಸೆಪ್ಪೆಂಬರ್ 25ರಂದು, ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ತರ್ ಆಗಿ ಕೆಲಸ ಮಾಡುತ್ತಿದ್ದ ಅಜ್ಜನ ಮನೆಯಲ್ಲಿ; ಇನ್ನೂ ಎರಡೂವರೆ ವರ್ಷವಾಗುವಷ್ಟರಲ್ಲೇ ತಂದೆ ಪಂ|| ಭಗವತಿಪ್ರಸಾದರ ದೇಹಾಂತ್ಯವಾಯಿತು; ತಾಯಿ ರಾಮಪ್ಯಾರಿ ಪುಟ್ಟ ಮಗು ಶಿವದಯಾಳನನ್ನು ಮಡಿಲಲ್ಲಿಟ್ಟುಕೊಂಡು, ಇವರನ್ನು ಕೈ ಹಿಡಿದು ಕರೆದುಕೊಂಡು ಹೋಗಿದ್ದು ತನ್ನ ತಮ್ಮನ ಮನೆಗೆ.. ಸೋದರಮಾವನ ಮನೆಯಲ್ಲಿ ನಾಲ್ಕೈದು ವರ್ಷ ಕಳೆಯಿತು ಎನ್ನುವಾಗ ತಾಯಿ ರಾಮಪ್ಯಾರಿ ರಾಮನಿಗೆ ಪ್ರಿಯಳಾದಳು, ವೈಕುಂಠಧಾಮ ಸೇರಿದಳು.. ಮುಂದೆ ಹತ್ತು ವರ್ಷ ಕಳೆಯುವಷ್ಟರಲ್ಲಿ ಇವರಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ತಮ್ಮ ಶಿವದಯಾಳ ಗುಣವಾಗದ ಜ್ವರದಿಂದ ಇಹಲೋಕ ತ್ಯಜಿಸಿದ. ಅಲ್ಲಿಗೆ ತಮ್ಮ ಹದಿನೆಂಟರ ಹರೆಯದಲ್ಲೇ ಮೊದಲನೇ ಸುತ್ತಿನ ರಕ್ತಸಂಬಂಧಿಗಳೆಲ್ಲರನ್ನೂ ಕಳೆದುಕೊಂಡು ‘ವಿರಕ್ತ’ ರಾದರೀತ. ಆದರೆ, ಆ ವಿರಕ್ತಿಯಾದರೂ ವ್ಯಕ್ತಿಗತ ‘ಸಂಸಾರ’ವನ್ನು ಕುರಿತುದಾಗಿತ್ತಷ್ಟೆ; ‘ಸಮಷ್ಟಿಸಂಸಾರ’ದ ಸೇವೆಯಲ್ಲಿ ಅವರನ್ನು ಅನುರಕ್ತರನ್ನಾಗಿಸಿತು. ಕಾಲೇಜು ಶಿಕ್ಷಣದ ಸಮಯದಲ್ಲಿ ಬಾಳಾಸಾಹೇಬ ದೇವರಸರ ಸಂಪರ್ಕಕ್ಕೆ ಬಂದಮೇಲೆ ಅವರ ಜೀವನದ ದಾರಿ-ದಿಕ್ಕುಗಳು ಸ್ಪಷ್ಟವಾದುವು. ಅಲ್ಲಿಂದ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೂ ಆದರು. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು; ಸಂಘಟನೆಯ ಅಪೇಕ್ಷೆಯಂತೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು; ಜನಸಂಘದ ಜವಾಬ್ದಾರಿ ಹೊತ್ತರು. ವ್ಯಕ್ತಿಗತ ಜೀವನದಲ್ಲಿ ಪಾರದರ್ಶಕತೆ, ತಾವು ನಂಬಿದ ಸಿದ್ಧಾಂತದ ಅನುಷ್ಠಾನದಲ್ಲಿ-ಬೋಧನೆಯಲ್ಲಲ್ಲ-ಏಕನಿಷ್ಠೆ, ಆಚರಣೆಯ ಮೂಲಕ ಅನುಕರಣೀಯರಾಗುವ ಮೇಲ್ಪಂಕ್ತಿ, ಸಮಾಜದ ಎಲ್ಲ ಸ್ತರದ ಜನರನ್ನೂ ಜೀವನವನ್ನೂ ಕುರಿತು ಕಳಕಳಿ, ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಕುರಿತ ಆತ್ಯಂತಿಕ ಶ್ರದ್ಧೆ – ಇವೆಲ್ಲವುಗಳಿಂದಾಗಿ ಅವರು ಕೇವಲ ಸಂಘದ, ಜನಸಂಘದ ವಲಯದಲ್ಲಷ್ಟೇ ಅಲ್ಲ; ಇಡೀ ದೇಶದಾದ್ಯಂತ ಪರಿಚಿತರಾದರು. ಪಕ್ಷಭೇದವಿಲ್ಲದೆ ಎಲ್ಲರ ಗೌರವಕ್ಕೆ ಪಾತ್ರರಾದರು. ಮತ್ತಷ್ಟು ಓದು »