Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ
– ವಿನಾಯಕ ಹಂಪಿಹೊಳಿ
Sin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?
ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?