ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪುನರ್ಜನ್ಮ’

6
ಜುಲೈ

ಹೀಗೊ೦ದು ’ಆತ್ಮ’ಕಥನ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಆತ್ಮಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ ನ೦ತರ ಏನಾಗುತ್ತದೆ?ದೇಹ ನಶಿಸಿದ ನ೦ತರವೂ ಆತ್ಮವೆನ್ನುವುದು ಉಳಿಯಲಿದೆಯೇ? ಅಸಲಿಗೆ ಆತ್ಮವೆ೦ದರೆ ಏನು? ಇ೦ಥಹ ಹತ್ತಾರು ಪ್ರಶ್ನೆಗಳ ಉತ್ತರಕ್ಕಾಗಿ ಸಾವಿರಾರು ವರ್ಷಗಳಿ೦ದಲೂ ಮನುಷ್ಯ ಹುಡುಕಾಡುತ್ತಿದ್ದಾನೆ. ತನಗೆ ತಿಳಿದ೦ತೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮ,ಪ್ರೇತಾತ್ಮ,ಪವಿತ್ರಾತ್ಮ,ಪರಮಾತ್ಮ ಎ೦ದೆಲ್ಲ ವಿ೦ಗಡಿಸಿದ್ದಾನೆ.ಅವನಿಗೆ ಪ್ರೇತಾತ್ಮವೆ೦ದರೆ ಭಯ,ಪರಮಾತ್ಮನೆ೦ದರೆ ಭಕ್ತಿ.ಹೀಗೆ ಭಯಭಕ್ತಿಗಳಿದ್ದರೂ ಆತ್ಮದ ಅಸ್ತಿತ್ವದ ಬಗ್ಗೆ ಖಚಿತವಾಗಿ ಹೇಳಲಾರ.ತಿಳಿದುಕೊಳ್ಳುವ ಪ್ರಯತ್ನವನ್ನ೦ತೂ ಕೈಬಿಡಲಾರ.ಆತ್ಮಜ್ಞಾನಕ್ಕಾಗಿ ಪುರಾಣಗಳನ್ನು ತಡಕಾಡುತ್ತಾನೆ.ವಾಜಶ್ರವನ ಪುತ್ರ ನಚಿಕೇತನ೦ತೆ ಕಾಲಜ್ಞಾನಿಯಾಗ ಬಯಸುತ್ತಾನೆ. ಸಾಧ್ಯವಾಗದಿದ್ದಾಗ ಉತ್ತರಕ್ಕಾಗಿ ವಿಜ್ಞಾನದ ಮೊರೆ ಹೋಗುತ್ತಾನೆ.ಇಷ್ಟಾಗಿಯೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತಾ? ಗೊತ್ತಿಲ್ಲ.ಆದರೆ ಆತ್ಮಜ್ಞಾನದ ಅರ್ಥೈಸುವಿಕೆಯ ಹಾದಿಯಲ್ಲಿ ವಿಜ್ಞಾನ ಮತ್ತು ಧಾರ್ಮಿಕತೆಯ ಕವಲುಗಳು ಸಾಗಿರಬಹುದಾದ ದೂರದ ಸಣ್ಣದೊ೦ದು ಪರಾಮರ್ಶೆಯ ಉದ್ಧಟತನ್ನು ತೋರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ.

Read more »

30
ಏಪ್ರಿಲ್

ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ”

– ಪ್ರೇಮಶೇಖರ

ಪ್ರಿಯ ಓದುಗರೇ,

ಆತ್ಮವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ – ಭಾಗ ೪

ಅನ್ಯಲೋಕ ಜೀವಿಗಳ ಬಗೆಗಿನ ಲೇಖನಸರಣಿ ಮೆಚ್ಚುಗೆಗೆ ಪಾತ್ರವಾದಂತೇ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ಮೆಚ್ಚುಗೆಯ ಪತ್ರಗಳಿಗೆ ಖುಷಿಪಟ್ಟು ವೈಯುಕ್ತಿಕವಾಗಿ ಕೃತಜ್ಞತೆ ಹೇಳಿದ್ದೇನೆ, ಪ್ರಶ್ನೆಗಳಿಗೆ ಸಮಾಧಾನ ಹೇಳಲೂ ಪ್ರಯತ್ನಿಸಿದ್ದೇನೆ.  ಈ ಪ್ರಶ್ನೆಗಳು ನಿಮ್ಮವೂ ಆಗಿರಬಹುದು, ವಿವರಣೆಗಳನ್ನು ನೀವೂ ಬಯಸಿರಬಹುದು,ಎಲ್ಲ ಪ್ರಶ್ನೆಗಳಿಗೂ ಒಟ್ಟಿಗೆ ಪೂರಕ ವಿವರಗಳೊಂದಿಗೆ ಇಲ್ಲಿ ಉತ್ತರಿಸುವುದು ಈಗ ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ.ಯಾರಿಗೆ ಗೊತ್ತು, ಇದು ಯಾವುದೋ ಜನ್ಮದ ಯಾವುದೋ ಲೆಕ್ಕದ “ಸರಿಮಾಡುವಿಕೆ”ಯಾಗಿರಲೂಬಹುದು! ನಿಮ್ಮನಿಮ್ಮ ಭಾವಕ್ಕೆ, ನಿಮ್ಮನಿಮ್ಮ ಭಕುತಿಗೆ ಅನುಗುಣವಾಗಿ ಉತ್ತರವೆಂದಾಗಲೀ, ವಿವರಣೆಯೆಂದಾಗಲೀ ಪರಿಹಾರವೆಂದಾಗಲೀ ತೆಗೆದುಕೊಳ್ಳಿ.

ಪ್ರಶ್ನೆಗಳಲ್ಲಿ ಮುಖ್ಯವಾದುವನ್ನು ಆಯ್ದು ಸ್ಥೂಲವಾಗಿ ಎರಡು ಗುಂಪುಗಳನ್ನಾಗಿಸಿಕೊಳ್ಳುತ್ತೇನೆ.
1.‘ಸತ್ತ’ ನಂತರ ಏನಾಗುತ್ತದೆ? ಎಲ್ಲಿಗೆ ಹೋಗುತ್ತೇವೆ?
2. ಕೌಟುಂಬಿಕ ಸಂಬಂಧಗಳ ತೊಡಕುಗಳು, ಅವೇಕೆ ಅಸಹನೀಯವಾಗುತ್ತವೆ, ಅವುಗಳಿಗೆ ಪರಿಹಾರವೇ ಇಲ್ಲವೇ?  ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ.
Read more »

22
ಡಿಸೆ

ಪುನರ್ಜನ್ಮ ಪರಿಕಲ್ಪನೆಯ ಕುರಿತು ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ

– ಗೋವಿಂದ ರಾವ್ ವಿ ಅಡಮನೆ

ನಾನೀಗ ಶಿಫಾರಸ್ಸು ಮಾಡುತ್ತಿರುವುದು ಒಂದು ಇಂಗ್ಲಿಷ್ ಪುಸ್ತಕ. ಈ ಪುಸ್ತಕ ೧೯೫೦ ರಲ್ಲಿ ಪ್ರಕಟವಾದ ಪುಸ್ತಕವಾದರೂ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಅದರ ವಿಷಯವೇ ಅಂಥದ್ದು. ಪುನರ್ಜನ್ಮ ಕ್ಕೆ ಸಂಬಂಧಿಸಿದಂತೆ ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ನೆರವು ನೀಡಬಲ್ಲ ಪುಸ್ತಕ ಇದು. ನಾನು ಇದನ್ನು ಖರೀದಿಸಿದ್ದು ೧೯೮೨ ರಲ್ಲಿ. ನನ್ನ ಬ್ಲಾಗ್ : ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ ಬರೆಯಲು ನೆರವು ನೀಡಿದ ಪುಸ್ತಕ ಇದು. ಯಾವುದೇ ವಿಷಯವನ್ನು ಮನೋಗತ ಮಾಡಿಕೊಳ್ಳ ಬೇಕಾದರೆ ಆ ವಿಷಯದ ಮೂಲ ಆಕರವನ್ನೇ ನೋಡು ಎಂಬುದು ನನ್ನ ಅಧ್ಯಾಪಕರು ನನಗೆ ಕಲಿಸಿದ ಅಮೂಲ್ಯ ಪಾಠಗಳಲ್ಲಿ ಒಂದು. ಪುನರ್ಜನ್ಮ ಕುರಿತಾದ ಕುತೂಹಲಜನಕ ಉದಾಹರಣೆಗಳು ಈ ಪುಸ್ತಕದಲ್ಲಿವೆ.  ಎಂದೇ, ಈ ವಿಷಯದಲ್ಲಿ ಆಸಕ್ತಿ ಇರುವವರು ನೀವಾಗಿದ್ದರೆ ಈ ಪುಸ್ತಕ ಓದುವುದು ಒಳಿತು ಎಂಬುದು ನನ್ನ ಸಲಹೆ.

ಪುಸ್ತಕದ ಹೆಸರು: Many Manisions – “The Edgar Cayce Story On Reincarnation”. ಬರೆದವರು: Gina Cerminaria [ಗಿನಾ ಸರ್ಮಿನಾರಾ (ಏಪ್ರಿಲ್ ೧೯೧೪ – ಏಪ್ರಿಲ್ ೧೯೮೪). ಮನೋವಿಜ್ಙಾನದಲ್ಲಿ Ph.D ಪದವೀಧರೆ. ವಿಷಯದ ಕುರಿತು ಸುದೀರ್ಘ ಕಾಲ ಸಂಶೋಧನೆ ಮಾಡಿದ ಬಳಿಕ ಪ್ರಕಟಿಸಿದ ಪುಸ್ತಕ ಇದು.] ಪ್ರಕಾಶನ: A Signet Bool from New American Library.

Read more »

13
ಡಿಸೆ

ದೇವರು, ಧರ್ಮ ಮತ್ತು ಮತ

–  ಗೋವಿಂದ ರಾವ್ ವಿ ಅಡಮನೆ

ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.

Read more »

5
ಡಿಸೆ

ಪುನರ್ಜನ್ಮ – ಒಂದು ವಿವೇಚನೆ

– ಗೋವಿಂದ ರಾವ್ ವಿ ಅಡಮನೆ

ಪುನರ್ಜನ್ಮ – ತಥ್ಯವೇ, ಮಿಥ್ಯಾಕಲ್ಪನೆಯೇ? ‘ಅತಿ ಸೂಕ್ಷ್ಮವಾದ ನಯವಾದ ಸದಾ ಚಲಿಸುತ್ತಿರುವ ಕಣಗಳಿಂದ ನಿರ್ಮಿತವಾದ ಆತ್ಮವು ವ್ಯಕ್ತಿ ಸತ್ತಾಗ ಚೆದರಿ ಹೋಗುತ್ತವೆ’, ‘ಪ್ರಾಣ ಿರುವಾಗ ಮಾನವ ಸಂತೋಷವಾಗಿ ಬದುಕಲಿ, ಸಾಲ ಮಾಡಿ ಆದರೂ ತುಪ್ಪ ತಿನ್ನಲಿ, ದೇಹ ಬೂದಿ ಆದ ನಂತರ ಅದು ಹಿಂತಿರುಗುವುದೆಂತು?’  ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಅಲ್ಲಗಳೆಯುವ ಭೋಗಪ್ರಿಯ ವಾದಗಳನ್ನು ನಂಬೋಣವೇ? ಅಥವ ‘ಒಬ್ಬ ವ್ಯಕ್ತಿ ಜೀರ್ಣವಾದ ವಸ್ತ್ರವನ್ನು ತೊರೆದು ಹೊಸ ವಸ್ತ್ರ ಧರಿಸುವಂತೆ ಆತ್ಮವು ಜೀರ್ಣವಾದ ಶರೀರವನ್ನು ತೊರೆದು ಹೊಸ ಶರೀರವನ್ನು ಧರಿಸುತ್ತದೆ’, ‘ಶರೀರ ರಥ, ಆತ್ಮ ರಥಿ. ರಥ ಮುರಿದಾಗ ರಥಿ ಹೊಸದೊಂದು ರಥವೇರಿ ಪಯಣ ಮುಂದುವರಿಸುತ್ತಾನೆ’ ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಸಾರುವ ಆಧ್ಯಾತ್ಮಪ್ರಿಯ ವಾದಗಳನ್ನು ನಂಬೋಣವೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುವುದೇ ಮೂರ್ಖತನವಾದೀತೇ? ಕೆಲವು ಸಂಶಯವಾದಿಗಳು ವಾದಿಸುತ್ತಿರುವಂತೆ ‘ಪುನರ್ಜನ್ಮದ ಪರಿಕಲ್ಪನೆ ನಿಜವಾಗಿರಲು ಸಾಧ್ಯವಿಲ್ಲ, ಆದ್ದರಿಂದ ಅದು ನಿಜವಲ್ಲ’ ಎಂದು ನಾವೂ ಹೇಳೋಣವೇ?

ಅನಾದಿ ಕಾಲದಿಂದಲೂ ನಡೆಯುತ್ತಿರುವ ಈ ಚರ್ಚೆಯ ಕುರಿತು ಆಧುನಿಕ ವಿಜ್ಞಾನಿಗಳ, ವಿಚಾರವಾದಿಗಳ ನಿಲುವೇನು? ಸಮ್ಮೋಹಿತ ನಿವರ್ತನ ತಂತ್ರದಿಂದ ಪುನರ್ಜನ್ಮ ಸ್ಮರಣೆ ಯ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಅಧಿಮನಃಶಾಸ್ತ್ರಜ್ಞರು (ಪ್ಯಾರಸೈಕಾಲಜಿಸ್ಟ್ಸ್) ಪುನರ್ಜನ್ಮ ಒಂದು ತಥ್ಯ ಎಂದು ಸಮರ್ಥಿಸಲು ನೀಡುವ ಇತರ ಸಾಕ್ಞ್ಯಾಧಾರಗಳನ್ನೂ ಅವನ್ನು ಅಲ್ಲಗಳೆಯುವ ವಾದಗಳನ್ನೂ ಅವಲೋಕಿಸಿದರೆ ನೀವು ನಿಮ್ಮದೇ ಆದ ತೀರ್ಮಾನ ಕೈಗೊಳ್ಳಲು ಸಾಧ್ಯವಾದೀತು. ಎಂದೇ ಅವುಗಳ ಪಕ್ಷಿನೋಟವನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ.

Read more »

23
ನವೆಂ

‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ

– ಗೋವಿಂದ ರಾವ್ ವಿ ಅಡಮನೆ

‘ಮಾಡಿದ್ದುಣ್ಣೋ ಮಹಾರಾಯ’, ‘ಬಿತ್ತಿದಂತೆ ಬೆಳೆ’ ಈ ಜಾಣ್ನುಡಿಗಳು ಪುನರ್ಜನ್ಮದ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದ ಕರ್ಮಸಿದ್ಧಾಂತದ ತಿರುಳನ್ನು ಬಿಂಬಿಸುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಈ ಉಕ್ತಿಗಳನ್ನು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಅರ್ಥೈಸಿ ಮೂಢನಂಬಿಕೆಗಳನ್ನೂ ಕರುಡು ಸಂಪ್ರದಾಯಗಳನ್ನೂ ಹುಟ್ಟುಹಾಕಲು ಬಳಸಿಕೊಂಡಿವೆ, ಯಶಸ್ವಿಯೂ ಆಗಿವೆ.

ಪುನರ್ಜನ್ಮಪರ ವಾದಿಗಳು ಒದಗಿಸಿರುವ ಉದಾಹರಣೆಗಳನ್ನು ಆಧರಿಸಿ ಈ ಉಕ್ತಿಗಳ ಇಂಗಿತಾರ್ಥವನ್ನು ನಾನು ವಿವರಿಸುವ ಪರಿ ಇಂತಿದೆ: ಭೌತಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಲು ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇರುವಂತೆಯೇ ಮಾನವನ ಜೀವನವನ್ನು ನಿಯಂತ್ರಿಸಲೂ ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇವೆ. ಈ ನಿಯಮಗಳನ್ನೇ ನಾವು ನೈತಿಕ ನಿಯಮಗಳು ಎಂದು ಉಲ್ಲೇಖಿಸುತ್ತೇವೆ. ಇವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವತ್ರಿಕ. ಭೌತಪ್ರಪಂಚದ ನೈಸರ್ಗಿಕ ನಿಯಮಗಳು ಹೇಗೆ ಅನುಲ್ಲಂಘನೀಯವೋ ಅಂತೆಯೇ ಇವೂ ಕೂಡ. ಎಲ್ಲ ನೈಸರ್ಗಿಕ ನಿಯಮಗಳೂ ಅನಾದಿ ಹಾಗೂ ಅನಂತ್ಯ, ಯಾರೋ ಮಾಡಿದ ನಿಯಮಗಳು ಇವಲ್ಲವಾದ್ದರಿಂದ. ಭೌತಪ್ರಪಂಚದಲ್ಲಿ ಲಾಗೂ ಆಗುವ ನಿಯಮಗಳೇ ಆಧುನಿಕ ವಿಜ್ಞಾನಗಳ ಅಧ್ಯಯನ ವಸ್ತು. ನೈಸರ್ಗಿಕ ನೈತಿಕ ನಿಯಮಗಳನ್ನು ಅಧ್ಯಯಿಸಲು ಆಧುನಿಕ ವಿಜ್ಞಾನಗಳಿಗೆ ಸಾಧ್ಯವಾಗಿಲ್ಲ. ವಿವಿಧ ಮತಗಳ ಆಧಾರ ಗ್ರಂಥಗಳಲ್ಲಿ ಈ ನೈತಿಕ ನಿಯಮಗಳನ್ನು ಪಟ್ಟಿ ಮಾಡುವ ಪ್ರಯತ್ನಗಳು ಆಗಿವೆಯಾದರೂ ಸರ್ವಮಾನ್ಯವಾದ ಪಟ್ಟಿಮಾಡಲು ಸಾಧ್ಯವಾಗಿಲ್ಲದಿರುವುದು,  ಪಟ್ಟಿ ಮಾಡಿರುವ ನಿಯಮಗಳ ಅನುಸರಣೆ ಅಥವ ಉಲ್ಲಂಘನೆಯ ಪರಿಣಾಮಗಳ ಕುರಿತಾಗಿ ಇರುವ ಭಿನ್ನಾಭಿಪ್ರಾಯಗಳು ಅನೇಕ ಹಿಂಸಾಕೃತ್ಯಗಳ ಹುಟ್ಟಿಗೆ ಕಾರಣವಾಯಿತು.  ಭೌತನಿಯಮಗಳಂತೆಯೇ ಇವೂ ಅನುಲ್ಲಂಘನೀಯವಾದವುಗಳು ಆಗಿದ್ದರೂ ನಿಯಮೋಲ್ಲಂಘನೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಸಾರಿದ ‘ಪುರೋಹಿತ ವರ್ಗ’ (ಇವರು ಬೇರೆ ಬೇರೆ ಹೆಸರುಗಳಲ್ಲಿ ಎಲ್ಲ ಮತಗಳಲ್ಲಿಯೂ ಇದ್ದಾರೆ) ಅದಕ್ಕಾಗಿ ಅನೇಕ ಕಂದಾಚಾರಗಳನ್ನೂ ಮೂಢನಂಬಿಕೆಗಳನ್ನೂ ಹುಟ್ಟುಹಾಕಿತು, ಬೆಳೆಯಿಸಿತು, ಪೋಷಿಸಿತು. ಮುಖಸ್ತುತಿಗೆ ಮರುಳಾಗಿ ಅಥವ ಮಾಡಿದ ಅನೈತಿಕ ಕೃತ್ಯಕ್ಕೆ ಅನುಗುಣವಾಗಿ ಸಂಕೀರ್ಣತೆ ಮತ್ತು ವೆಚ್ಚ ಹೆಚ್ಚುವ ‘ಪೂಜೆ, ಹೋಮ, ಹರಕೆ, ನೈವೇದ್ಯ, ದಾನ’ ಇವೇ ಮೊದಲಾದ ‘ಪ್ರಾಯಶ್ಚಿತ್ತ’ಗಳನ್ನು ಮಾಡಿದರೆ  ಎಲ್ಲ ರೀತಿಯ ಅನೈತಿಕತೆಯನ್ನು ಮನ್ನಿಸುವ ‘ದೇವರ’ ಪರಿಕಲ್ಪನೆಯನ್ನು ಸ್ವಲಾಭಕ್ಕಾಗಿ ಸೃಷ್ಟಿಸಿ ಪೋಷಿಸಿದ್ದೂ ಇದೇ ವರ್ಗ. ಪುನರ್ಜನ್ಮ ಇರುವುದೇ ನಿಜವಾದರೆ, ಇಂಥ ‘ದೇವರ’ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದಕ್ಕೆ ಬದಲಾಗಿ ಕರ್ಮಸಿದ್ಧಾಂತ ಸೂಚಿಸುವ ನೈಸರ್ಗಿಕ ನೈತಿಕ ನಿಯಮಾನುಸಾರ ಬಾಳ್ವೆ ನಡೆಸುವುದು ಉತ್ತಮ.

ಪುನರ್ಜನ್ಮಪರ ವಾದಿಗಳ ಒದಗಿಸುವ ಸಾಕ್ಷ್ಯಾಧಾರ ಎಂದು ನೀಡುತ್ತಿರುವ ಉದಾಹರಣೆಗಳನ್ನು ಕರ್ಮಸಿದ್ಧಾಂತದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರೆ ಮತಾತೀತವೂ ಕುಲಾತೀತವೂ ಲಿಂಗಾತೀತವೂ ಆದ ಕೆಲವು ನಿಯಮಗಳನ್ನು ಅನುಮಾನಿಸಬಹುದು (ಇನ್ ಫರ್). ಈ ರೀತಿ ಅನುಮಾನಿಸಿದ ಪ್ರಧಾನ ನಿಯಮಗಳು ಇಂತಿವೆ:

Read more »