ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ…!
– ಸುಜಿತ್ ಕುಮಾರ್
ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.
ಕೇದಾರನಾಥನಲ್ಲಿ ಕಳೆದ ಒಂದು ದಿನ…..
– ಶೋಭಾ.ಹೆಚ್.ಜಿ,
ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ
ಶಿವಾ.. ಶಿವಾ .. ಏನಿದು ನಿನ್ನ ತಾಂಡವ ನೃತ್ಯ, ಯಾಕಾಗಿ.? ಈ ವಿನಾಶ ಯಾವುದರ ಮುನ್ಸೂಚನೆ ..? ಮಾನವನ ಯಾವ ಪಾಪಕ್ಕಾಗಿ ಈ ಶಿಕ್ಷೆ..? ರಾತ್ರಿ ಝೀ ಟಿವಿಯಲ್ಲಿ ಈ ಪ್ರಚಂಡ ಪ್ರಳಯದ ನಂತರ ನೋಡಿದ ಮೊದಲ ದೃಶ್ಯ ನೋಡಿದ ಕ್ಷಣ ಅನಿಸಿದ್ದು. ದೇವಸ್ಥಾನದ ಮುಂದೆ ಬಿದ್ದಿರುವ ರಾಶಿ ರಾಶಿ ಶವಗಳು, ಮಂದಿರದ ಒಳಗೆ ಹಾಗೆಯೇ ಶವಗಳು ಬಿದ್ದಿದೆ ಎನ್ನುವುದು ಕೇಳಿದ ಮೇಲೆ ಕರುಳು ಕಿತ್ತು ಬಂದ ಅನುಭವ, ಹೃದಯ ಹಿಂಡಿ ತೆಗೆದಂತೆ, ಅಲ್ಲಿ ನಾನು ಕಳೆದ ಒಂದು ದಿನದ ಸವಿ ನೆನಪು ನಿಮ್ಮೊಂದಿಗೆ…
ಅಪ್ಪಾಜಿ ಸಾವಿನಿಂದ ಕುಸಿದು ಹೋದವಳಿಗೆ ನೆನಪಾದದ್ದು ಹಿಮಾಲಯದ ಕೇದಾರನಾಥ. ಮನಸ್ಸಿಗೆ ಸಮಾಧಾನ ಹುಡುಕಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ಹೊರಟವಳಿಗೆ, ಜೊತೆಯಲ್ಲಿ ಹೊರಟ ಗೆಳತಿಗೆ ಅನಾರೋಗ್ಯವಾಗಿ ಬರಲಾಗದಿದ್ದುದು, ಅದೇ ಟಿಕೇಟಿಗೆ ಹೊರಟ ಮತ್ತಿಬ್ಬರು ಬರಲಾಗದಿದ್ದುದು, ಕೊನೆಗೆ ಒಬ್ಬಳೇ ಹೊರಟವಳಿಗೆ ಮನೆಯವರೆಲ್ಲರ ವಿರೋದ, ಜೂನ್ ನ ಕೊನೆಯಲ್ಲಿ ಎಲ್ಲರೂ ಹೋಗೋಣ ಈಗ ಬೇಡವೆಂದರೂ, ಹಿಮಾಲಯದ ಸೆಳೆತ ನನ್ನನ್ನು ಕೇದಾರತನಕ ಎಳೆದುಕೊಂಡು ಹೋಯಿತು. ಅದು ಕೇದಾರನಾಥನ ಇಚ್ಚೆ ಯಾರನ್ನು ಯಾವಾಗ ತನ್ನ ಹತ್ತಿರ ಕರೆಸಿಕೊಳ್ಳಬೇಕು ಎಂದು ತೀರ್ಮಾನಿಸುವವನು ಅವನೇ ಎಂದು ಈಗ ಅನಿಸುತ್ತಿದೆ. ನಮ್ಮಿಚ್ಛೆಯಂತೆ ಏನೂ ನಡೆಯುವುದಿಲ್ಲ.
ಮೇ ೧೦ ಬೆಂಗಳೂರು ಬಿಟ್ಟವಳು, ಹೃಷಿಕೇಶದಲ್ಲಿ ಎರಡು ರಾತ್ರಿ ಉಳಿದು, ರುದ್ರಪ್ರಯಾಗದ ಮುಖಾಂತರ ರಸ್ತೆಮಾರ್ಗವಾಗಿ ಗುಪ್ತಕಾಶಿ ತಲುಪಿ ಅಲ್ಲಿ ಒಂದು ದಿನ ಉಳಿದೆ. ಅಂದು ವಿಪರೀತ ಮಳೆ – ಚಳಿ, ಅಲ್ಲಿಯೇ ಒಂದು ಮನೆಯಲ್ಲಿ ಉಳಿದೆ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಸಿಗುತ್ತಿಲ್ಲ. ಅವರ ಮನೆಯಿದ್ದುದು, ರಸ್ತೆ ಬದಿಯಲ್ಲಿ ಇಳಿದು ಕೆಳಗೆ ಕಟ್ಟಿರುವುದು, ಅದೀಗ ಇದೆಯೇ? ಎನ್ನುವ ಅತಂಕ. ಅ ದಂಪತಿಗಳ ಮುದ್ದಾದ ಮೂರು ಮಕ್ಕಳ ಜೊತೆ ಕಳೆದ ಕ್ಷಣಗಳು, ಆ ಮನೆಯ ಗೃಹಿಣಿ ಮಾಡಿಕೊಟ್ಟ ಬಿಸಿ ಬಿಸಿ ಪುಲ್ಕ-ದಾಲ್, ಚಹಾ, ಅ ಮನೆಯ ಯಜಮಾನ ರಾಣಾ ಸಿಂಗ್ ಅಲ್ಲಿಯ ಜೀವನದ ಕಷ್ಟಗಳನ್ನು ಗಂಟೆಗಟ್ಟಲೆ ಹೇಳಿದ್ದು, ಕೃಷಿಗಿಂತ ಪ್ರವಾಸೋದ್ಯಮವೇ ತಮ್ಮ ಜೀವನಕ್ಕೆ ಆಧಾರವಾಗಿರುವುದು, ಅದರೆ, ಹೊರ ರಾಜ್ಯದವರ ಉದ್ಯಮಿಗಳ ದಾಳಿಯಿಂದ ಸ್ಥಳಿಯರು ಪಡುತ್ತಿರುವ ಪಾಡಿನ ಬಗ್ಗೆ ತೋಡಿಕೊಂಡದ್ದು, ಬೆಳಿಗ್ಗೆ ಶಾಲೆಗೆ ಹೋಗುವಾಗ ಅವರ ಮಕ್ಕಳಿಗೆ ನಾನು ಬಾಯ್ ಹೇಳಿ ಕಳಿಸಿದ್ದು, ಮತ್ತೇ ಬನ್ನಿ ಎಂದು ಅವರು ಹೇಳಿದ್ದು ಎಲ್ಲ ನೆನಪಾಗುತ್ತೆ. ಅವರ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಮತ್ತಷ್ಟು ಓದು