ಮಹಾತ್ಮ ಬಸವಣ್ಣನವರು
– ಡಾ.ಸಂಗಮೇಶ ಸವದತ್ತಿಮಠ
(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)
ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್‍ನ ವೀರಶೈವ ಸಮಾಜ ಬಾಂಧವರೆ,
ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.
ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.
1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .
- ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
- ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.
ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?
ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ
– ವಿನಾಯಕ ಹಂಪಿಹೊಳಿ
“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.
ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ. ಮತ್ತಷ್ಟು ಓದು
ಸಾಧಕರ ಹೆಸರಲ್ಲಿ ಅಸ್ಮಿತೆಯ ಹುಡುಕಾಟ
– ಡಾ.ಬಿ.ವಿ.ವಸಂತ ಕುಮಾರ್
ಭಾರತ ದೇಶ ಪ್ರಪಂಚದ ಒಂದು ವಿಶಿಷ್ಟ ದೇಶ. ಭಾರತದ ಬದುಕಿನ ದಾರಿಗಳನ್ನು ಇಲ್ಲಿನ ಮಹಾತ್ಮರು ನಿರ್ಮಿಸಿದ್ದಾರೆ. ಕಾಡಿನಿಂದ ಒಡಮೂಡಿದ ಈ ದಾರಿಗಳೆಡೆಗೆ ನಗರ ಮಹಾನಗರಗಳ ಜನರು ಮುಖಮಾಡಿದ್ದನ್ನೂ, ಮಾಡುತ್ತಾ ಇರುವುದನ್ನೂ, ಮುಂದೆ ಮಾಡುವುದನ್ನೂ ನೋಡಬಹುದು. ಇವರೇ ನಿಜವಾದ ರಾಷ್ಟ್ರ ನಿರ್ಮಾಪಕರು, ಸಂಸ್ಕೃತಿ ಸೃಷ್ಟಿಕರ್ತರು, ಕಲ್ಯಾಣದ ಮಹಾಕನಸುಗಾರರು. ಇಂಥವರನ್ನು ಸಂತರು, ಮಹಂತರು, ಶರಣರು, ಋಷಿಮುನಿಗಳು, ದಾರ್ಶನಿಕರು ಎಂದೆಲ್ಲ ಕರೆಯುತ್ತಾರೆ. ಅವರನ್ನು ಸಮಾಜದ ಜನ ಸದಾ ತಮ್ಮ ಬಾಳಿಗೆ ಆದರ್ಶದ ನಂದಾದೀವಿಗೆಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಗುರುವೆಂದು ಸ್ವೀಕರಿಸಿ ತಾವು ಭಕ್ತರಾಗಿ ಗುರು-ಶಿಷ್ಯ ಪರಂಪರೆಯ ಆಧ್ಯಾತ್ಮಕ್ಕೂ ಅನುಭವಕ್ಕೂ ಕಾರಣರಾಗಿದ್ದಾರೆ. ಮತ್ತಷ್ಟು ಓದು
ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದು ‘ನಿರ್ದೇಶಿಸುವ’ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಈ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವ “ಓದುವ-ತಿಳಿಯುವ ಕ್ರಮದ ನಿರ್ದೇಶನ”ದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನು “ಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.
ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು’ ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು?
ಮಹಾತ್ಮ ಬಸವಣ್ಣನವರು ನಮಗಿಂದು ಎಷ್ಟು ಪ್ರಸ್ತುತ?
– ಡಾ. ಸಂಗಮೇಶ ಸವದತ್ತಿಮಠ
ಬಸವಣ್ಣನವರೆಂಬ ಮಹಾತ್ಮರ ಬಗ್ಗೆ ಯಾರಿಗೆ ಗೊತ್ತಿಲ್ಲ? ಬಿಜ್ಜಳನ ಆಸ್ಥಾನದಲ್ಲಿದ್ದು ರಾಜಕಾರಣಿ, ಆಡಳಿತಗಾರ; ಧರ್ಮತತ್ತ್ವಪ್ರಮೇಯಗಳನ್ನು ಹೊಸ ಆನ್ವಯಿಕತೆಯಿಂದ ಪ್ರಯೋಜನಕಾರಿಯಾಗಿಸಿದ್ದರಿಂದ ತತ್ತ್ವಜ್ಞಾನಿ; ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು, ಆಧ್ಯಾತ್ಮದ ಬೆಳಸು ತೆಗೆದ ಶ್ರೇಷ್ಠ ಆಧ್ಯಾತ್ಮಸಂತ,ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸುಗಾರ, ಧೀಮಂತ ಸಮಾಜಪುರುಷ, ಬದಲಾವಣೆಯ ಹರಿಕಾರ ಕ್ರಾಂತಿಪುರುಷ ಬಸವಣ್ಣ.
ವೇದಿಕೆ, ಸಂದರ್ಭ ಸಿಕ್ಕರೆ ಸಾಕು, “12ನೇ ಶತಮಾನದ ಶರಣರ ಜೀವನ ಮತ್ತು ಸಂದೇಶಗಳು ನಮ್ಮ ಇಂದಿನ ಕಾಲದಲ್ಲಿಯೂ ಬಹಳ ಪ್ರಸ್ತುತ, ಮಾದರಿ, ಅನುಸರಿಸಲು ಯೋಗ್ಯ” ಎಂದೆಲ್ಲ ಒತ್ತಿ ಒತ್ತಿ ಹೇಳುತ್ತೇವೆ. ವಾಸ್ತವವಾಗಿ ಅವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ವಿಪರ್ಯಾಸವಲ್ಲದೆ ಮತ್ತೇನು? ಧಾರ್ಮಿಕ, ಸಾಮಾಜಿಕ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಸವಣ್ಣನವರು ಯಾವುದನ್ನು ಹೇಳಿಲ್ಲವೋ ಅದನ್ನು ನಾವು ಮಾಡುತ್ತ ಅವರಿಗೆ ದ್ರೋಹ ಬಗೆಯುತ್ತಿದ್ದೇವೆ ಅನ್ಯಾಯಮಾಡುತ್ತಿದ್ದೇವೆ. ವಚನಗಳ ಪ್ರಸ್ತುತತೆಯ ಪ್ರಸ್ತಾಪ ಮಾಡುವವರು ಸಾಮಾನ್ಯವಾಗಿ ಬಸವಣ್ಣನವರ ಸಾಮಾಜಿಕ ರಾಜಕೀಯ ವಿಷಯಗಳು ಮತ್ತು ಆಚರಣಾತ್ಮಕ ವಿಷಯಗಳನ್ನು ಒತ್ತುಕೊಟ್ಟು ಹೇಳುತ್ತಾರೆ. ಸರಿ, ಆದರೆ ಬಸವಣ್ಣನವರು ಪರಮಾರ್ಥ,ಶಿವಯೋಗ,ಆಧ್ಯಾತ್ಮ ವಿಷಯಗಳನ್ನೂ ಕೂಡ ಅಷ್ಟೇ ಗಂಭೀರವಾಗಿಯೇ ತಗೆದುಕೊಂಡವರು.ಅಂಥ ವಿಷಯಗಳು ಈಗ ನಮಗೆ ಎಷ್ಟು ಪ್ರಸ್ತುತ? ಎಂಬುದನ್ನು ನಾವು ಬಹುತೇಕ ಬದಿಗೆ ಸರಿಸಿ ಅವರು ಲೌಕಿಕದ ಬಗ್ಗೆ ಹೇಳಿದ್ದನ್ನೇ ಪ್ರಸ್ತುತತೆಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನವರು ತೆರೆದ ಮನಸ್ಸಿನಿಂದ ಲೋಕವ್ಯವಹಾರವನ್ನು,ಪರಮಾರ್ಥವನ್ನು ಬಗಿದು ನೋಡಿದವರು. ಅವರಿಗೆ ಲೌಕಿಕ ಎನ್ನುವುದು ವರ್ಜ್ಯವಾಗಿರಲಿಲ್ಲ. ಆದರೆ ಬರೀ ಲೌಕಿಕದಲ್ಲೇ ತೊಳಲಾಡಿದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಬದುಕಿನ ಸಾರ್ಥಕತೆ ಇರುವುದು ಲೌಕಿಕವನ್ನು ಸಾತ್ವಿಕವಾಗಿ ಅನುಭವಿಸುತ್ತಲೇ ಪರಮಾರ್ಥದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಅವರು ಆಚರಿಸಿ ತೋರಿಸಿಕೊಟ್ಟರು.
ಮತ್ತಷ್ಟು ಓದು
ಇತಿಹಾಸದ ಅಚ್ಚರಿಗಳಲ್ಲಿ ಒಂದು ಇಣುಕು: ‘ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು’
– ರಾಘವೇಂದ್ರ ಅಡಿಗ ಹೆಚ್.ಎನ್
ಕಳೆದ ವಾರ ಕನ್ನಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮೌಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.