ಬಾಡೂಟವೊಂದರ ಐತಿಹ್ಯ…!
– ಸುಜಿತ್ ಕುಮಾರ್
ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು ‘ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..’ ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.
ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ ಕೂಡಿದ ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ ಬಿಸಿಬಿಸಿಯಾದ ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ… ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!